Sunday, 8th September 2024

ಹೊಸ ಸ್ಟಾರ್‌, ರೋಲ್ ಮಾಡೆಲ್ ಬರುತ್ತಿದ್ದಾರೆ, ದಾರಿ ಬಿಡಿ !

ನೂರೆಂಟು ವಿಶ್ವ

ಒಂದು ತಿಂಗಳು ನಾಪತ್ತೆಯಾಗಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇಂದು ಮಧ್ಯರಾತ್ರಿ (ಗುರುರಾತ್ರಿ ತಡರಾತ್ರಿ) ಮರಳಿ ಬರಲಿದ್ದಾರೆ. ಅವರೇ ಖುದ್ದಾಗಿ ತಮ್ಮ ಮೊಬೈಲಿನಲ್ಲಿ ಮಾಡಿಕೊಂಡಿದ್ದ ರಾಸಲೀಲೆಗಳ ರೆಕಾರ್ಡಿಂಗ್ ಅವರಿಗೆ ಮುಳುವಾಯಿತು. ತಾವು ಮಾಡಿದ ‘ಘನ ಕಾರ್ಯ’ ಶಾಶ್ವತ ವಾಗಿ ಇರಬೇಕು, ಆಗಾಗ ಅವನ್ನು ನೋಡಿ ಖುಷಿಪಡಬೇಕು ಮತ್ತು ಬೇರೆಯವರೂ ನೋಡಬೇಕು ಎಂದು ರೆಕಾರ್ಡ್ ಮಾಡಿಕೊಂಡಿದ್ದು ವಿಚಿತ್ರವೇ.

ದಿಲ್ಲಿಯ ನನ್ನ ಪತ್ರಕರ್ತ ಸ್ನೇಹಿತರೊಬ್ಬರಿಗೆ, ತಮ್ಮ ರಾಸಲೀಲೆಗಳ ವಿಡಿಯೋ ರೆಕಾರ್ಡಿಂಗನ್ನು ಖುzಗಿ ಪ್ರಜ್ವ ಮಾಡಿದ್ದು ಗೊತ್ತಿರಲಿಲ್ಲ. ಈ ಕುರಿತು ಅವರು ತಮ್ಮ ಆಶ್ಚರ್ಯ ಮತ್ತು ಮುಗ್ಧತೆಯನ್ನು ಪ್ರದರ್ಶಿಸಿದರೆನ್ನಿ. ಅದೇನೇ ಇರಲಿ, ಕಳೆದ ಒಂದು ತಿಂಗಳಿನಿಂದ ಕರ್ನಾಟಕದಲ್ಲಿ ದೇವೇಗೌಡರ ಸುಪುತ್ರ ರೇವಣ್ಣ ಅವರ ಮಗ ಪ್ರಜ್ವಲಿಸಿದಷ್ಟು ಬೇರೆ ಯಾರೂ ಗಮನ ಸೆಳೆಯಲಿಲ್ಲ. ಸಾಮಾನ್ಯವಾಗಿ ಪ್ರವಾಹ ಬಂದು ಕೊಚ್ಚಿ, ತೊಳೆದುಕೊಂಡು
ಹೋದ ಬಳಿಕ, ಒಂಥರ ಗಾಢ ಮೌನ ಆವರಿಸುತ್ತದೆ. ಹಲವು ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣಾ ನಂತರವೂ ಅಂಥದೇ ಮೌನ ಆವರಿಸು ವುದು ಸಹಜ. ಆದರೆ ಪ್ರಜ್ವಲ್ ರೇವಣ್ಣ ಮಾತ್ರ ‘ಪೆನ್ ಡ್ರೈವ್ ಹಗರಣ’ ಎಂದೇ ಹೆಸರಾದ ಈ ಪ್ರಕರಣದಿಂದ ಒಂದು ತಿಂಗಳು ಟಿಆರ್‌ಪಿಯಲ್ಲಿ
ಐಪಿಎಲ್ ಪಂದ್ಯಗಳ ಜತೆ ಪೈಪೋಟಿಗೆ ಬಿದ್ದಿದ್ದು ನಿಜ.

ಕರ್ನಾಟಕ ರಾಜಕಾರಣದಲ್ಲಿ ಈ ಹಗರಣ ದೇವೇಗೌಡ ಕುಟುಂಬದ ಘನತೆಗೆ ಕುಂದುಂಟಾಗುವಂತೆ ಮಾಡಿದ್ದು ವಿಷಾದದ ಸಂಗತಿ. ಈ ಇಳಿವಯಸ್ಸಿನಲ್ಲಿ ದೇವೇಗೌಡರಿಗೆ ಅದೆಷ್ಟು ಮುಜುಗರವಾಗಿರಬಹುದು ಎಂದೇ ಎಲ್ಲರೂ ಮಾತಾಡಿಕೊಂಡರು. ನಾಲ್ಕು ಜನ ಸೇರಿದಾಗ ಪ್ರಜ್ವಲ್ ರೇವಣ್ಣ ಪ್ರಕರಣ ಚರ್ಚೆಗೆ ಬರುತ್ತಿರುವುದು ಸಹಜ. ಈ ಪ್ರಕರಣ ಯಾವ ರೀತಿಯಲ್ಲಿ ಅಂತ್ಯವಾಗಬಹುದು ಎಂಬುದು ಅನೇಕರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಪ್ರಜ್ವಲ್ ರೇವಣ್ಣ ಲೋಕಸಭಾ ಚುನಾವಣೆಯಲ್ಲಿ ಸೋಲಬಹುದು ಎಂದು ಅನೇಕರು ಹೇಳುತ್ತಿದ್ದಾರೆ.

ಇನ್ನು ಕೆಲವರು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಬೆಟ್ ಕಟ್ಟುತ್ತಿದ್ದಾರೆ. ಅವರು ಗೆದ್ದರೂ ರಾಜೀನಾಮೆ ಕೊಡುವುದು ಅನಿವಾರ್ಯವಾಗಬಹುದು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಜ್ವಲ್ ಅವರನ್ನು ‘ಸಾಮೂಹಿಕ
ಅತ್ಯಾಚಾರಿ’ (Mass rapist) ಎಂದು ಜರೆದ ಮೇಲೆ, ಒಂದು ವೇಳೆ ಅವರು ಆರಿಸಿ ಬಂದರೆ, ಕಾಂಗ್ರೆಸ್ ಸುಮ್ಮನೆ ಕುಳಿತುಕೊಳ್ಳುವುದುಂಟಾ? ಎಂದು ಹಲವರು ಹೇಳುತ್ತಿದ್ದಾರೆ. ಈ ಪ್ರಕರಣದಲ್ಲಿ ಅದೇಗೋ ಪ್ರಜ್ವಲ್ ಬಚಾವ್ ಆಗ್ತಾನೆ ನೋಡ್ತಾ ಇರಿ’ ಎಂದೂ ಅನೇಕರಿಗೆ ಅನಿಸಿದೆ. ಆದರೆ ಸಾರ್ವಜನಿಕ ಜೀವನದ ಪಲ್ಲಟಗಳನ್ನು ಅರಿಯದ, ಮಧ್ಯಮ ವರ್ಗದ ಸಂಪ್ರದಾಯಸ್ಥರು, ಪ್ರಜ್ವಲ್ ರೇವಣ್ಣ ರಾಜಕೀಯ ಜೀವನ ಇಲ್ಲಿಗೆ ಮುಗಿಯಿತು. ಇನ್ನು ಆತ ಇತಿಹಾಸದ ಕಸದ ಡಬ್ಬಿಗೆ ಸೇರಿದರೆ ಆಶ್ಚರ್ಯವಿಲ್ಲ.

‘ಇನ್ನು ಸಾರ್ವಜನಿಕ ಜೀವನದಲ್ಲಿ ಮೇಲೇಳುವುದು ಸಾಧ್ಯವೇ ಇಲ್ಲ’ ಎಂದು ಹೇಳುತ್ತಿರುವವರೇ ಹೆಚ್ಚು. ನನಗೆ ಬಹಳ ತಮಾಷೆಯಾಗಿ ಕಾಣುತ್ತಿರುವುದು ಕೊನೆಯ ವಾಕ್ಯ. ‘ಪ್ರಜ್ವಲ್ ರೇವಣ್ಣ ರಾಜಕೀಯ ಜೀವನ ಇಲ್ಲಿಗೆ ಮುಗಿಯಿತು’ ಎಂದು ವಾದಿಸುವವರನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ. ನಮ್ಮದು ಮಹಾನ್ ದೇಶ. ಪೂಲನ್ ದೇವಿಯಂಥ ಡಕಾಯಿತ ರಾಣಿಯನ್ನು ಎರಡೆರಡು ಸಲ ಲೋಕಸಭೆಗೆ ಆರಿಸಿ ಕಳುಹಿಸಿದ ದೇಶ ನಮ್ಮದು. ದೇಶದ
ಸಂಸದರ ಪೈಕಿ ನೂರರಲ್ಲಿ ನಲವತ್ತೆಂಟು ಮಂದಿ ಕಳಂಕಿತರು, ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವವರು. ದರೋಡೆ, ಡಕಾಯತಿ, ಮಾನ ಭಂಗ, ಕೋಮು ಗಲಭೆ, ಕೊಲೆ-ಸುಲಿಗೆ ಆರೋಪಗಳನ್ನು ಎದುರಿಸುತ್ತಿರುವವರು, ಹೀಗೆ ಜೈಲುಪಾಲಾದವರೆಲ್ಲ ಲೋಕಸಭೆಗೆ ಆರಿಸಿ ಹೋಗಿದ್ದಾರೆ.

ಈಗಲೂ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ಎಂಬ ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿಪಟುಗಳ ಫೆಡರೇಷನ್ ಅಧ್ಯಕ್ಷ ಅತ್ಯಾಚಾರವೆಸಗಿದ್ದಾನೆ ಮತ್ತು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಕೆಲವು ಮಹಿಳಾ ಕ್ರೀಡಾಪಟುಗಳೇ ವರ್ಷಗಟ್ಟಲೆ ಮುಷ್ಕರ ಕುಳಿತು ಪ್ರತಿಭಟಿಸಿದರೂ ಏನೂ ಆಗಲಿಲ್ಲ. ಈ ಸಲ ಅವನ ಬದಲಿಗೆ ಅವನ ಮಗನಿಗೆ ಬಿಜೆಪಿ ಟಿಕೆಟ್ ನೀಡಿತು. ಆತನೇ ಆರಿಸಿ ಬಂದರೂ ಆಶ್ಚರ್ಯವಿಲ್ಲ. ರಾಜಕಾರಣದಲ್ಲಿ ಭ್ರಷ್ಟಾಚಾರ, ರಾಸಲೀಲೆ ಪ್ರಕರಣಗಳಲ್ಲಿ ಭಾಗಿಯಾದ ಅವೆಷ್ಟೋ ಮಂದಿ ನಾಯಕರು ಆರಿಸಿ ಬರುತ್ತಲೇ ಇದ್ದಾರೆ.

ಅಂಥವರು ಚುನಾವಣೆಯಲ್ಲಿ ಆರಿಸಿ ಬರುವುದಷ್ಟೇ ಅಲ್ಲ, ಮಂತ್ರಿ, ಮುಖ್ಯಮಂತ್ರಿಯಾಗಿದ್ದಾರೆ. ಅನೇಕರಿಗೆ ಜೈಲಿಗೆ ಹೋಗಿದ್ದೇ ರಾಜಕೀಯವಾಗಿ ಲಾಭದಾಯಕವಾಗಿದೆ. ಅಧಿಕಾರದಲ್ಲಿದ್ದವರು ಜೈಲು ಸೇರುವ ಸಂದರ್ಭ ಬಂದರೆ ನೈತಿಕ ಹೊಣೆ ಹೊತ್ತು, ಮರ್ಯಾದೆಗೆ ತಲೆಬಾಗಿ ರಾಜೀನಾಮೆ ನೀಡಬೇಕಿಲ್ಲ ಎಂಬ ಮೇಲ್ಪಂಕ್ತಿಯನ್ನು ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ ಹಾಕಿಕೊಟ್ಟಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಅವರು ಜೈಲಿಗೆ ಹೋಗಿದ್ದೇ
ಒಳ್ಳೆಯದಾಯಿತು ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಅದರಿಂದ ಅವರ ಬಗ್ಗೆ ಸಹಾನುಭೂತಿಯುಂಟಾಗಿ ವರದಾನವಾಯಿತಂತೆ.

ಅದ್ಯಾಕೋ ಗೊತ್ತಿಲ್ಲ. ಸಾರ್ವಜನಿಕವಾಗಿ ನಗ್ನರಾಗಿ, ಮಾನ-ಮರ್ಯಾದೆ ಕಳಕೊಂಡವರ ಬಗ್ಗೆ ನಮ್ಮ ಜನಕ್ಕೆ, ಸಮಾಜಕ್ಕೆ ವಿಶೇಷ ಮಮತೆ. ಇದೆಂಥ ಮನಸ್ಥಿತಿ ಎಂಬುದು ಮೇಲ್ನೋಟಕ್ಕೆ ತಕ್ಷಣಕ್ಕೆ ಅರ್ಥವಾಗುವುದಿಲ್ಲ. ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡವರ, ಮಾನಭಂಗ ಪ್ರಕರಣದಲ್ಲಿ ಮುಖಭಂಗಕ್ಕೊಳಗಾದವರ, ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲು ಸೇರಿದವರ ಸಾಲು ಸಾಲು ನಿದರ್ಶನಗಳೇ ನಮ್ಮ ಮುಂದೆ ಇವೆ. ಅವರೆಲ್ಲರೂ ತಮಗೇನೂ ಆಗಿಯೇ ಇಲ್ಲವೇನೋ ಎಂಬಂತೆ ಆರಾಮಾಗಿದ್ದಾರೆ.

ಇನ್ನೂ ದುರ್ದೈವದ ಸಂಗತಿ ಅಂದ್ರೆ ಹಾಗೆ ಆಗಿದ್ದೇ ಒಳ್ಳೆಯದಾಯಿತು ಎಂದು ಭಾವಿಸಿಕೊಳ್ಳುವವರಿದ್ದಾರೆ. ಬಹುಕೋಟಿ ಮೇವು ಹಗರಣದಲ್ಲಿ ಬಿಹಾರ ಮುಖ್ಯಮಂತ್ರಿ ಲಾಲೂ ಪ್ರಸಾದ ಯಾದವ್ ಜೈಲು ಪಾಲಾದರು. ಅವರು ತಮ್ಮ ಹೆಂಡತಿಯನ್ನೇ ಮುಖ್ಯಮಂತ್ರಿಯಾಗಿ ನೇಮಿಸಿದರು. ಅವರು ಜೈಲಿ ನಿಂದಲೇ ಬಿಹಾರ ಸರಕಾರವನ್ನು ನಡೆಸಿದರು. ಅದೇ ಅವರಿಗೆ ವರದಾನವಾಯಿತು. ನಂತರ ಕೇಂದ್ರದಲ್ಲೂ ಮಂತ್ರಿಯಾದರು. ಮಗನನ್ನೂ ಉಪಮುಖ್ಯ ಮಂತ್ರಿಯನ್ನಾಗಿ ಮಾಡಿದರು. ಈಗಲೂ ಅವರು ಬಿಹಾರ ರಾಜಕಾರಣದಲ್ಲಿ ಕೇಂದ್ರಬಿಂದು. ಯಾವ ಹಗರಣಗಳೂ ಅವರನ್ನು ಮಣಿಸಲಿಲ್ಲ, ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸಲಿಲ್ಲ. ಆ ಹಗರಣದ ನಂತರ ಲಾಲೂ ಯಾದವ್ ಬಿಹಾರ ರಾಜಕಾರಣದಲ್ಲಿ ಅಪ್ರಸ್ತುತರಾಗುವ ಬದಲು ಮತ್ತಷ್ಟು ಗಟ್ಟಿಯಾದರು.

ಈಗಂತೂ ಅವರ ಮಕ್ಕಳದೇ ದರಬಾರು ಬೇರೆ. ಕರ್ನಾಟಕದಲ್ಲೂ ಇಂಥ ಪ್ರಕರಣಗಳಾಗಿವೆ. ಭ್ರಷ್ಟಾಚಾರ ಹಗರಣಗಳಲ್ಲಿ ಸಿಲುಕಿದ, ಜೈಲಿಗೆ ಹೋಗಿ ಬಂದ ಯಾವ ನಾಯಕರ ಕೂದಲೂ ಕೊಂಕಿಲ್ಲ ಮತ್ತು ಮೀಸೆಯೂ ಮಣ್ಣಾಗಿಲ್ಲ. ಅವರೆಲ್ಲ ಈಗಲೂ ಅವರವರ ಪಕ್ಷಗಳಲ್ಲಿ ಬಲಿಷ್ಠರಾಗಿ, ಪ್ರಭಾವಿ ಯಾಗಿಯೇ ಇದ್ದಾರೆ. ಅವರ ಕೋಮಿನ ಪ್ರಬಲ ನಾಯಕರಾಗಿಯೂ ಮುಂದುವರಿದಿದ್ದಾರೆ.

ಭ್ರಷ್ಟಾಚಾರ, ಜೈಲಿಗೆ ಹೋಗಿ ಬಂದಿದ್ದು ಅವರ ವ್ಯಕ್ತಿತ್ವಕ್ಕೆ ಸ್ವಲ್ಪವೂ ಧಕ್ಕೆಯಾಗಿಲ್ಲ. ಮಾನಸಿಕ ಹಿಂಸೆ ಮತ್ತು ದೈಹಿಕ ಹಲ್ಲೆ ನಡೆಸಿದ್ದಕ್ಕಾಗಿ ಪತ್ನಿ ನೀಡಿದ ದೂರಿನ ಮೇರೆಗೆ ಕನ್ನಡದ ಜನಪ್ರಿಯ ನಟರೊಬ್ಬರನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಅಟ್ಟಲಾಯಿತು. ಅಲ್ಲಿಗೆ ಅವರ ಸಿನಿಮಾ ಬದುಕು
ಮುಗಿಯಿತು ಎಂದೇ ಷರಾ, ಟಿಪ್ಪಣಿ ಬರೆದರು. ಇದರಿಂದ ಆ ನಟನ ಬಗ್ಗೆ ಮಹಿಳಾ ಪ್ರೇಕ್ಷಕರು ದೂರವಾಗುತ್ತಾರೆ, ಇನ್ನೇನಿದ್ದರೂ ಅವರು ಖಳನಾ ಯಕನ ಪಾತ್ರಕ್ಕೇ ಲಾಯಕ್ಕು ಎಂಬ ರೀತಿಯಲ್ಲಿ ಜನ ಆಡಿಕೊಂಡರು. ಪತ್ರಿಕೆಗಳು, ಟಿವಿಗಳು ಸಹ ಹಾಗೆ ಬರೆದವು.

ಆ ನಟ ಜೈಲಿನಿಂದ ಹೊರ ಬಂದು ಒಂದು ತಿಂಗಳಲ್ಲಿ ಅವರ ಹೊಸ ಸಿನಿಮಾವೊಂದು ಬಿಡುಗಡೆಯಾಯಿತು. ಅದು ಅಲ್ಲಿಯವರೆಗಿನ ಎಲ್ಲ ದಾಖಲೆ ಗಳನ್ನು ಮುರಿದು ಭರ್ಜರಿ ಯಶಸ್ಸನ್ನು ಕಂಡಿತು. ಅದಾದ ಬಳಿಕ ಆ ನಟನ ದೆಸೆಯೇ ಬದಲಾಗಿಬಿಟ್ಟಿತು. ಸಾಲು ಸಾಲು ಸಿನಿಮಾಗಳು ಹಿಟ್ ಆದವು. ಹೆಂಡತಿಗೆ ಹೊಡೆದಿದ್ದನ್ನು ಆ ನಟ ಸಮರ್ಥಿಸಿಕೊಂಡರು. ಜನ ಆ ಸಮರ್ಥನೆಯನ್ನೂ ಕೇಳಿ ತಲೆದೂಗಿದರು. ಒಟ್ಟಾರೆ ಈ ಘಟನೆಯಿಂದ ಅವರ ಸಿನಿಮಾ ಬದುಕು ಯಶಸ್ಸಿನ ಮಗ್ಗುಲಿಗೆ ಹೊರಳಿತು. ಅವರ ಅಭಿಮಾನಿಗಳೂ ಆ ಘಟನೆಯನ್ನು ಮರೆತರು. ಈ ಘಟನೆಯ ನಂತರ ಅಭಿಮಾನಿ ಗಳ ಸಂಖ್ಯೆಯೂ ಹೆಚ್ಚಾಯಿತು. ಅವರಿಗೆ ಬೇರೆ ಬಿರುದು ಕೊಟ್ಟು ಅದನ್ನು ತಮ್ಮ ವಾಹನಗಳ ಮೇಲೆ ಬರೆಯಿಸಿಕೊಂಡು ಕೃತಾರ್ಥರಾದರು.

ಇಲ್ಲಿ ನಾವು ಇನ್ನೊಂದು ಇತ್ತೀಚಿನ ಮಹತ್ವದ ಘಟನೆಯನ್ನು ಗಮನಿಸಬೇಕು. ನೀವು ಇಂದ್ರಾಣಿ ಮುಖರ್ಜಿ ಎಂಬಾಕೆಯ ಬಗ್ಗೆ ಕೇಳಿರುತ್ತೀರಿ. ಆಕೆ ‘ಭಾರತೀಯ ಟೆಲಿವಿಷನ್ ಜಗತ್ತಿನ ಮಾಂತ್ರಿಕ’ ಎಂದೇ ಕರೆಯಿಸಿಕೊಂಡಿದ್ದ ಪೀಟರ್ ಮುಖರ್ಜಿಯ ಪತ್ನಿ. ಸಾಮಾನ್ಯ ಎಚ್ ಆರ್ ಕನ್ಸಲ್ಟಂಟ್ ಮತ್ತು ಮೀಡಿಯಾ ಎಕ್ಸಿಕ್ಯೂಟಿವ್ ಆಗಿದ್ದ ಇಂದ್ರಾಣಿ ಏರಿದ ಎತ್ತರ, ಇಂಡಸ್ಟ್ರಿಯಲ್ಲಿದ್ದವರ ಹುಬ್ಬು ಏರಿಸಿತ್ತು. ಸಿದ್ಧಾರ್ಥ ದಾಸ್ ಮತ್ತು ಸಂಜೀವ್ ಖನ್ನಾ
ಅವರನ್ನು ಮದುವೆಯಾಗಿ ವಿಚ್ಛೇದನ ಪಡೆದಿದ್ದ ಇಂದ್ರಾಣಿ, ಪೀಟರ್ ಮುಖರ್ಜಿ ಜತೆ ಸೇರಿ ಐಎನ್‌ಎಕ್ಸ್ ಮೀಡಿಯಾ ಸಂಸ್ಥೆಯನ್ನು ಹುಟ್ಟು ಹಾಕಿ, ‘ನ್ಯೂಸ್ ಎಕ್ಸ್’ ಎಂಬ ಚಾನೆಲ್ ನ್ನೂ ಆರಂಭಿಸಿದಳು. ತಾನೇ ಅದರ ಸಿಇಒ ಕೂಡ ಆದಳು.

ನೋಡನೋಡುತ್ತಿದ್ದಂತೆ, ದಿಲ್ಲಿಯ ಅಧಿಕಾರವಲಯದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ, ಹೈ ಸೊಸೈಟಿ ಕಣ್ಮಣಿಯಾಗಿ ಬೆಳೆದು ಬಿಟ್ಟಳು. ಇಂದ್ರಾಣಿ ಯನ್ನು ಭೇಟಿಯಾಗುವುದು ಸುಲಭವಾಗಿರಲಿಲ್ಲ. ಈ ಮಧ್ಯೆ ೨೦೧೨ ರಲ್ಲಿ ಒಂದು ಘಟನೆ ನಡೆಯಿತು. ತನ್ನ ಮಗಳಾದ ಶೀನಾ ಬೋರಾ, ತನ್ನ ಹಾಲಿ ಪತಿಯ (ಪೀಟರ್ ಮುಖರ್ಜಿ) ಮೊದಲ ಪತ್ನಿಗೆ ಹುಟ್ಟಿದ ಮಗನನ್ನು ಪ್ರೀತಿಸುತ್ತಿರುವುದು ಗೊತ್ತಾಗಿ, ಸ್ವಂತ ಮಗಳನ್ನೇ ಹತ್ಯೆ ಮಾಡುವುದಕ್ಕೆ ಮುಂದಾ ದಳು. ಈ ಘಟನೆ ಇಡೀ ದೇಶದೆಡೆ ದೊಡ್ಡ ಸುದ್ದಿ ಮಾಡಿತು. ಇಂಗ್ಲಿಷ್ ಮಾಧ್ಯಮಗಳು ಈ ಸುದ್ದಿಯನ್ನು ಆರು ತಿಂಗಳುಗಳ ಕಾಲ ಜೀವಂತವಾಗಿಟ್ಟಿದ್ದವು.

೨೦೧೫ ರಲ್ಲಿ ಮುಂಬೈ ಪೊಲೀಸರು ಇಂದ್ರಾಣಿಯನ್ನು ಬಂಧಿಸಿ ಬೈಕುಲಾ ಜೈಲಿಗೆ ಅಟ್ಟಿದರು. ಅಲ್ಲಿಗೆ ಇಂದ್ರಾಣಿ ಜೀವನ ಖತಂ ಎಂದೇ ಎಲ್ಲರೂ ಭಾವಿಸಿದರು. ಈ ಮಧ್ಯೆ ಇವಳ ಸಹವಾಸವೇ ಸಾಕು ಎಂದು ಪೀಟರ್ ಮುಖರ್ಜಿ ಆಕೆಯಿಂದ ವಿಚ್ಛೇದನ ಪಡೆದು ದೂರವಾದ. ಮಹಿಳೆಯರು ಮಾತ್ರ
ಇರುವ ಜೈಲಿನಲ್ಲಿ ಅವಳನ್ನು ಇಡಲಾಯಿತು. ನಂತರ ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು. ಜೈಲಿನಲ್ಲಿ ಮಹಿಳಾ ಕೈದಿಯ ಸಾವಿನ ಹಿನ್ನಲೆ ಯಲ್ಲಿ ನಡೆದ ಗಲಭೆ ಸಂಬಂಧ ಇಂದ್ರಾಣಿ ಸೇರಿದಂತೆ ಇನ್ನೂರು ಮಹಿಳಾ ಕೈದಿಗಳ ಮೇಲೆ ಕೇಸು ಹಾಕಲಾಗಿತ್ತು.

ಮುಂಬೈ ಹೈಕೋರ್ಟ್ ಅವಳ ಜಾಮೀನು ಅರ್ಜಿಯನ್ನು ವಜಾಗೊಳಿಸಿತು. ನಂತರ ಆಕೆ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದಳು. ಅಷ್ಟರೊಳಗೆ ಇಂದ್ರಾಣಿ ಜೈಲಿನಲ್ಲಿ ಆರು ವರ್ಷ ಕಳೆದಿದ್ದಳು. ಅವಳ ಆತ್ಮೀಯರೆಲ್ಲ ದೂರವಾಗಿದ್ದರು. ಒಮ್ಮೆ ಜೈಲಿನಲ್ಲಿರುವ ಆಕೆಯ ಫೋಟೋ ಪತ್ರಿಕೆಯಲ್ಲಿ
ಪ್ರಕಟವಾಗಿತ್ತು. ಗುರುತು ಹಿಡಿಯಲಾಗದಷ್ಟು ಅವಳು ಕುರೂಪವಾಗಿದ್ದಳು. ಅಸಲಿಗೆ ಇವಳೇ ಇಂದ್ರಾಣಿ ಅಂದರೂ ಯಾರೂ ತಕ್ಷಣ ನಂಬಲಿಲ್ಲ. ೨೦೨೨ ರಲ್ಲಿ ಕೊನೆಗೂ ಸುಪ್ರೀಂ ಕೋರ್ಟ್ ಆಕೆಗೆ ಜಾಮೀನು ನೀಡಿತು. ಆಕೆ ಜೈಲಿನಿಂದ ಹೊರಬರುತ್ತಿದ್ದಂತೆ, ಇಂಗ್ಲಿಷ್ ಮಾಧ್ಯಮ ಆಕೆ ಹಿಂದೆ
ಬಿದ್ದವು. ಒಂದು ವಾರ ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ಇಂದ್ರಾಣಿ ಅಲೆ!

ಜೈಲಿನಿಂದ ಹೊರ ಬರುತ್ತಿದ್ದಂತೆ ಇಂದ್ರಾಣಿ ಸುಮ್ಮನೆ ಕುಳಿತುಕೊಳ್ಳಲಿಲ್ಲ. ತಾನು ಈಗ ಸಂಪೂರ್ಣ ಭಿನ್ನ ವ್ಯಕ್ತಿ ಆಗಿರುವುದಾಗಿ ಘೋಷಿಸಿದಳು. ಜೈಲಿನಲ್ಲಿದ್ದಾಗ ಸಂಸ್ಕೃತ ಕಲಿತಿzಗಿಯೂ, ಭಗವದ್ಗೀತೆಯ ಏಳು ನೂರು ಶ್ಲೋಕಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದಾಗಿಯೂ ಸಂದರ್ಶನವೊಂದರಲ್ಲಿ ಹೇಳಿದಳು. ದೇಶದ ಪ್ರತಿಷ್ಠಿತ ಇಂಗ್ಲಿಷ್ ಪ್ರಕಾಶಕರು ತಮಗೆ ಹಸ್ತಪ್ರತಿ ಕೊಡಿ, ನಾವು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತೇವೆ ಎಂದು ದುಂಬಾಲು ಬಿದ್ದರು. ಜೈಲಿನಲ್ಲಿದ್ದಾಗ ತಾನು ನಾಟ್ಯಾಭ್ಯಾಸ ಆರಂಭಿಸಿದ್ದಾಗಿಯೂ, ಈಗ ಪ್ರಸಿದ್ಧ ಭರತನಾಟ್ಯ ಗುರುವೊಬ್ಬರಿಂದ ಕಲಿಯುತ್ತಿರುವುದಾಗಿಯೂ ಆಕೆ
ಹೇಳಿದಳು. ಈ ವರ್ಷದ ಆರಂಭದಲ್ಲಿ ಅವಳ ಜೀವನಗಾಥೆ ಮತ್ತು ಶೀನಾ ಬೋರಾ ಹತ್ಯೆ ಪ್ರಕರಣವನ್ನು ಆಧರಿಸಿ ‘ನೆಟ್ ಫ್ಲಿಕ್ಸ್’ The Indrani
Mukerjea Story: Buried Truth ಎಂಬ ಧಾರಾವಾಹಿಯನ್ನು ಆರಂಭಿಸಿತು. ಇಂದ್ರಾಣಿ ಹಠಾತ್ತನೆ ಮುನ್ನೆಲೆಗೆ ಬಂದುಬಿಟ್ಟಳು.

ಪ್ರತಿಷ್ಠಿತ ‘ಟೆಡ್ ಎಕ್ಸ್’ ವೇದಿಕೆ ಆಕೆಯನ್ನು ಉಪನ್ಯಾಸಕ್ಕೆ ಆಹ್ವಾನಿಸಿತು. ದೇಶದ ಪ್ರಸಿದ್ಧ Author, Entrepreneur and Philanthropist ಎಂದು ಆಕೆಯನ್ನು ಪರಿಚಯಿಸಲಾಯಿತು. ಎರಡು ತಿಂಗಳ ಹಿಂದೆ, ಅಂತಾರಾಷ್ಟ್ರೀಯ ನೃತ್ಯ ದಿನದಂದು ಖ್ಯಾತ ಕೊರಿಯೋಗ್ರಾ-ರ್ ಸಂದೀಪ್ ಸೋಪರ್ಕರ್ ಜತೆ ಒಂದು ನೃತ್ಯ ಪ್ರದರ್ಶನ ನೀಡಿ ಭಾರಿ ಸುದ್ದಿ ಮಾಡಿದಳು. ಅದಕ್ಕೂ ಎರಡು ದಿನಗಳ ಮೊದಲು, ದೇಶದ ಪ್ರಸಿದ್ಧ ಟಿವಿ ಚಾನೆಲ್‌ಗೆ ವಿಶೇಷ ಸಂದರ್ಶನ ನೀಡಿದ ಇಂದ್ರಾಣಿ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿಕೊಳ್ಳುವುದು ಹೇಗೆ? ಎಂಬ ವಿಷಯ ಕುರಿತು ಹೊಸ ‘ಗ್ಯಾನ್’ ಕೊಟ್ಟಳು.

ಈಗಂತೂ ಇಂದ್ರಾಣಿ ಹೊಸ ಸಿಲಬ್ರಿಟಿ. ಸಾಹಿತ್ಯ ಸಮ್ಮೇಳನಗಳಲ್ಲಿ, ಹೈ ಸೊಸೈಟಿ ಪಾರ್ಟಿಗಳಲ್ಲಿ, ಕಾಲೇಜು ಕಾರ್ಯಕ್ರಮಗಳಲ್ಲಿ, ಕಂಪನಿಗಳ ಉದ್ಯೋಗಿಗಳಿಗೆ ಪ್ರೇರಣಾದಾಯಕ ಉಪನ್ಯಾಸ ನೀಡುವ ಕಾರ್ಯಾಗಾರಗಳಲ್ಲಿ, ಹೊಸ ಪ್ರಾಡಕ್ಟ್ ಉದ್ಘಾಟನಾ ವೇದಿಕೆಗಳಲ್ಲಿ, ಸಾಂಸ್ಕೃತಿಕ
ಕಾರ್ಯಕ್ರಮಗಳಲ್ಲಿ ಇಂದ್ರಾಣಿ ಹೊಸ ಸ್ಟಾರ್! ಆಕೆಗೆ ಈಗ ಬಿಡುವೇ ಇಲ್ಲ. ಇನ್ಸ್ಟಾ ಗ್ರಾಮ್ ನಲ್ಲಿ ಆಕೆಗೆ ಈಗ ಹದಿನೇಳು ಲಕ್ಷ ಫಾಲೋವರುಗಳು. ಆಕೆ ಒಂದು ಪೋ ಹಾಕಿದರೆ, ಲಕ್ಷಾಂತರ ಲೈP! ‘ಇಂದ್ರಾಣಿ ನಿಜಕ್ಕೂ ಗ್ರೇಟ, ಆಕೆಯ ಜೀವನಸ್ಪೂರ್ತಿ ಮಾತುಗಳು ಅದ್ಭುತ..’ ಎಂದೆಲ್ಲ ಸಾಮಾಜಿಕ
ಜಾಲತಾಣಗಳಲ್ಲಿ ಜನ ಕಾಮೆಂಟ್ ಮಾಡುತ್ತಾರೆ. ಇಷ್ಟು ದಿನ ನಾಪತ್ತೆಯಾಗಿದ್ದ ಪ್ರಜ್ವಲ್ ರೇವಣ್ಣ ವಿದೇಶದಿಂದ ವಾಪಸ್ ಆಗಿ, ಎಸ್‌ಐಟಿ ಬಂಧನ ದಿಂದ ಮುಕ್ತರಾಗಿ ಹೊರ ಬರಲಿ. ಅವರ ತಂದೆಯ ಲಿಂಬೆಹಣ್ಣು ಪವಾಡ ಅತ್ಲಾಗಿರಲಿ, ಕನ್ನಡ ತಾಯಿ ಹೊಸ ಸ್ಟಾರ್ ಅಥವಾ ಅಪೂರ್ವ ರೋಲ್ ಮಾಡೆಲ್ ನನ್ನು ಪಡೆಯುವಂತಾದರೆ ಆಶ್ಚರ್ಯವಿಲ್ಲ. ನೋಡ್ತಾ ಇರಿ.

Leave a Reply

Your email address will not be published. Required fields are marked *

error: Content is protected !!