ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ಪೊಗರು ಚಿತ್ರ ಬಿಡುಗಡೆ ಆದಮೇಲೆ ನಿರ್ದೇಶಕ ನಂದ ಕಿಶೋರ್ ಮಾತನಾಡಿದ್ದಾರೆ. ತಾನು ಎಷ್ಟೊಂದು ಹಿಟ್ ಚಿತ್ರಗಳನ್ನು ಕೊಟ್ಟಿದ್ದರೂ ಜನ ನನ್ನನ್ನು ಗುರುತಿಸುವುದೇ ಇಲ್ಲ. ಒಂದು ಸಿನಿಮಾ ಮಾಡಿದವರಿಗೆ ಬೆಲೆ ಕೊಡುವ ಜನ ನನಗೆ ಯಾಕೆ ಅದೇ ಬೆಲೆ ಕೊಡಲ್ಲ.
ಜತೆಗೆ ನನ್ನನ್ನು ರಿಮೇಕ್ ಚಿತ್ರಗಳ ನಿರ್ದೇಶಕ ಎಂದೇ ಹೇಳುತ್ತಾರೆ. ಈ ಚಿತ್ರದಿಂದಲಾದರೂ ಅದು ಬದಲಾಗಲಿ, ಹಾಗೆ ನೋಡಿದರೆ ನನ್ನ ಮೊದಲ ಚಿತ್ರ ವಿಕ್ಟರಿ ಸ್ವಮೇಕ್ ಚಿತ್ರ ಆಗಿತ್ತು ಎಂದು ಹೇಳಿಕೊಂಡಿದ್ದಾರೆ. ಇಲ್ಲಿ ವಿಕ್ಟರಿ ಚಿತ್ರದ ವಿಷಯಕ್ಕೆ ಬರೋದಾದ್ರೆ ಅದು ದಿ ಆಡ್ ಜಾಬ್ ಎನ್ನುವ ವಿದೇಶಿ ಚಿತ್ರದ ನಕಲು. ಮತ್ತು ಅದು ಎಷ್ಟೋ ವರ್ಷಗಳ ಮುನ್ನವೇ ಗಣೇಶನ ಗಲಾಟೆ ಎಂಬ ಹೆಸರಿನಲ್ಲಿ ಫಣಿ ರಾಮಚಂದ್ರ ಅವರ ನಿರ್ದೇಶನದಲ್ಲಿ ಮೂಡಿ ಬಂದಿತ್ತು. ಅದನ್ನು ನಂದ ಕಿಶೋರ್ ನಂದು ಅಂತ ಹೇಳಿರೋದು ಹಾಸ್ಯಾಸ್ಪದವೇ ಸರಿ. ಇನ್ನು ರಿಮೇಕ್ ನಿರ್ದೇಶಕ ಎಂಬ ಪಟ್ಟದ ಬಗ್ಗೆ ಮಾತನಾಡುವುದಾದರೆ ಅದು ಸಹಜ. ನಂದಕಿಶೋರ್ ಅವರು ಮಾಡಿರೋದು ಬಹುತೇಕ ರಿಮೇಕ್ ಚಿತ್ರಗಳನ್ನೇ.
ಹಾಗಾಗಿ ಒಬ್ಬ ರಿಮೇಕ್ ನಿರ್ದೇಶಕನಿಗೆ ಸಿಗುವಷ್ಟು ಮರ್ಯಾದೆ ಮಾತ್ರ ಅವರಿಗೆ ಸಿಗುತ್ತಿದೆ. ಅದರಲ್ಲಿ ತಪ್ಪೇನಿಲ್ಲ. ನಂದ ಕಿಶೋರ್ ಅವರಿಗೆ ನೆನಪಿದ್ದರೆ ಕೆ ಮಾದೇಶ್ ಎಂಬ ನಿರ್ದೇಶಕರು ಅನೇಕ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಆದರೆ
ಅವೆಲ್ಲವೂ ರಿಮೇಕ್ ಚಿತ್ರಗಳೇ. ಹಾಗಾಗಿ ಅವರು ಎಂದೂ ಗ್ರೇಟ್ ನಿರ್ದೇಶಕ ಎನಿಸಿಕೊಳ್ಳಲಿಲ್ಲ. ಮತ್ತು ಇವತ್ತು ಮಾದೇಶ್ ಅವರನ್ನು ಚಿತ್ರರಂಗ ಹೆಚ್ಚು ಕಮ್ಮಿ ಮರೆತೇಬಿಟ್ಟಿದೆ.
ಅಷ್ಟೇ ಯಾಕೆ ಕನ್ನಡದ ಹಿರಿಯ ನಿರ್ದೇಶಕರಾಗಿದ್ದ ಡಿ ರಾಜೇಂದ್ರ ಬಾಬು ಅವರು ಎಷ್ಟೋ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟವರು. ಸ್ವಂತ ಕಥೆಗಳನ್ನು ಮಾಡಿಯೂ ಸಕ್ಸಸ್ ನೋಡಿದವರು. ಆದರೆ ಅವರು ಹೆಚ್ಚು ರಿಮೇಕ್ ಚಿತ್ರಗಳನ್ನು ಮಾಡುತ್ತಿದ್ದರು ಎನ್ನುವ ಕಾರಣಕ್ಕೆ ಅವರಿಗೆ ಸಲ್ಲಬೇಕಾದ ಬೆಲೆ ಎಂದೂ ಸಿಗಲಿಲ್ಲ. ಇದರ ಮುಂದೆ ನಂದ ಕಿಶೋರ್ ಅವರ ಕೊರಗು ಏನೂ ಅಲ್ಲ. ನಂದ ಕಿಶೋರ್ ಸಾಧಿಸಬೇಕಾಗಿದ್ದು ಬಹಳ ಇದೆ. ಅದನ್ನು ತಮ್ಮ ಸ್ವಂತ ಕಥೆಗಳ ಮೂಲಕ ಸಾಧಿಸಿ
ಆಮೇಲೆ ಕ್ರೆಡಿಟ್ ಕೊಡ್ತಿಲ್ಲ ಅಂತ ಮಾತಾಡಿದರೆ ಅದಕ್ಕೆ ಬೆಲೆ ಇರುತ್ತೆ.
ನೆಟ್ ಪಿಕ್ಸ್
ಡಾಕ್ಟರ್ ಖೇಮು ಹತ್ರ ಒಬ್ಬ ಹುಡುಗ ಬಂದ. ಡಾಕ್ಟ್ರೇ ನಂಗೊಂದು ಪ್ರಾಬ್ಲಮ್ ಆಗಿದೆ. ಏನು ಹೇಳಿ? ನನ್ನ ಗರ್ಲ್ ಫ್ರೆಂಡ್ ಪ್ರೆಗ್ನೆಂಟ್ ಆಗಿದ್ದಾಳೆ. ಅದರನು ವಿಶೇಷ? ಇದು ಕಾಮನ್
ವಿಷ್ಯ ಅದಲ್ಲ ಡಾಕ್ಟರ್, ನಾವು ಯಾವಾಗಲೂ ಪ್ರೊಟೆಕ್ಷನ್ ಯೂಸ್ ಮಾಡ್ತಾ ಇದ್ವಿ. ಇದು ಹೇಗಾಯ್ತು ಅಂತ ಗೊತ್ತಿಲ್ಲ
ಸರಿ, ನಿಂಗೊಂದು ಕಥೆ ಹೇಳ್ತೀನಿ. ಒಬ್ಬ ಮನುಷ್ಯ ಕಾಡಿನ ಹತ್ರ ಮನೆ ಮಾಡಿಕೊಂಡಿದ್ದ. ತಾನು ಯಾವಾಗಲೂ ಕಾಡಿನ ಒಳಗೆ ಹೋಗುವಾಗ ಗನ್ ತೆಗೆದುಕೊಂಡು ಹೋಗುತ್ತಿದ್ದ. ಒಂದು ದಿನ ಅವನು ತನ್ನ ಗನ್ ಬದಲು ಛತ್ರಿ ತಗೊಂಡು ಹೋದ. ಅವನ ಮುಂದಿನಿಂದ ಒಂದು ಸಿಂಹ ಬಂದು ಅಟ್ಯಾಕ್ ಮಾಡಿತು. ಅದರಿಂದ ಪಾರಾಗಲು ಅವನು ತನ್ನ ಛತ್ರಿ ಅನ್ನು ಓಪನ್
ಮಾಡಿದ. ಒಂದು ಸೆಕೆಂಡ್ ನಂತರ ನೋಡಿದರೆ ಛತ್ರಿಯಿಂದ ಗುಂಡು ಹಾರಿ ಸಿಂಹ ಸತ್ತು ಹೋಗಿತ್ತು ಇದು ಸಾಧ್ಯ ಇಲ್ಲ. ಸಿಂಹಕ್ಕೆ ಬೇರೆ ಯಾರೋ ಶೂಟ್ ಮಾಡಿರಬೇಕು ಗುಡ್ ನಿಂಗೆ ಕಥೆ ಅರ್ಥ ಆಯ್ತಲ್ಲ. ನೆಕ್ಸ್ಟ್ ಪೇಷೆಂಟ್ ಪ್ಲೀಸ್.
ಲೈನ್ ಮ್ಯಾನ್
ರಾಮಮಂದಿರದ ದೇಣಿಗೆ ಹಣದಲ್ಲಿ ಮೋಸ ಮಾಡಿದ್ರೆ
ಅದು ಕೃಷ್ಣನ ಲೆಕ್ಕ
ಇಂದಿನ ಯುವಪೀಳಿಗೆಯ ಆಟಿಟ್ಯೂಡ್
ಜೀವನದಲ್ಲಿ ಖುಷಿ ಮೂಲ ಹುಡುಕ್ರೋ ಅಂದ್ರೆ ಋಷಿ ಮೂಲ ಹುಡುಕ್ತಾರೆ.
ಒಂದು ಇಮೇಲ್‌ಗೆ ತಕ್ಕ ಉತ್ತರ ಕೊಡೋದು ಅಂದ್ರೆ ಏನು?
YOU MAILED IT, I NAILED IT
ತುಂಬಾ ಸುಲಭದ ಕೆಲಸ ಅಂದ್ರೆ ಯಾವ್ದು?
MOMO ಬಗ್ಗೆ MEME ಮಾಡೋದು
ಪಬ್ಲಿಕ್ ಟಿವಿ ರಂಗನಾಥ್ ಅವರಿಗೂ ನರೇಂದ್ರ ಮೋದಿಗೂ ಇರೋ ವ್ಯತ್ಯಾಸ
ಏನಾದ್ರೂ ಒಳ್ಳೇದಾದ್ರೆ ರಂಗನಾಥ್ ಅವರು ಆಲ್ ರೈಟ್ ಮುಂದಕ್ಕೋಗಣ ಅಂತಾರೆ. ಕೆಟ್ಟದ್ದಕ್ಕೆಲ್ಲ ಹಿಂದಿನ ಸರಕಾರವೇ ಹೊಣೆ ಅನ್ನೋ ಮೋದಿ, ಹಿಂದಕ್ಕೋಗಣ ಅಂತಾರೆ.
ಎಲ್ಲರ ಬಗ್ಗೆನೂ ಸಂದೇಹ ಪಡುವವನು
ಅನುಮಾನ್ ಭಕ್ತ
ಜನ – ದಿಲ್ಲಿಯಲ್ಲಿ ರೈತರು ಬರೋ ದಾರಿಗೆ ಯಾಕೆ ಮೊಳೆ ಹೊಡೆದ್ರಿ?
ಸರಕಾರ – ಮತ್ತೆ? ಪ್ರತಿಭಟನೆ ಅಂತ ತಿಂಗಳುಗಟ್ಳೆ ಅ ಮೊಳೆ ಹೊಡ್ಕೊಂಡ್ ಕೂತಿದ್ರೆ ನಾವೇನ್ ಮಾಡೋದು.
ಮನೇಲಿ ಟಿವಿ ಇದ್ರೆ ಬಿಪಿಎಲ್ ಕಾರ್ಡು ರದ್ದು
ಖೇಮು – ನಮ್ಮನೇಲಿ ಬಿಪಿಎಲ್ ಟಿವಿ ಇಲ್ಲ, ತೊಂದ್ರೆ ಇಲ್ಲ ಬಿಡಿ.
ಇರುವೆಗೆ ಸಿಗದ ಸಕ್ಕರೆ
ಸೀಮೆಗಿಲ್ಲದ ಸಕ್ಕರೆ
ವಾಣಿ ಅನ್ನೋ ಹುಡುಗಿ ಸತ್ತ ಮೇಲೆ ಏನಾಗ್ತಾಳೆ
ಅಶರೀರ ವಾಣಿ
ಲೂಸ್ ಟಾಕ್
ಅರ್ಜುನ್ ತೆಂಡೂಲ್ಕರ್
ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾದಾಗ ನಿಮ್ಮ ರಿಯಾಕ್ಷನ್ ಏನಿತ್ತು?
ತಕ್ಷಣ ಅಪ್ಪನಿಗೆ ಕಾಲ್ ಮಾಡಿ ಅಪ್ಪಾ ನಾನ್ ಸೇಲಾದೇ, ಅಂಬಾನಿ ಪಾಲಾದೆ ಅಂತ ಹೇಳಿದೆ.
ಅದಕ್ಕೆ ನಿಮ್ಮ ತಂದೆಯವರ ಪ್ರತಿಕ್ರಿಯೆ ಏನಿತ್ತು?
ನನ್ನ ಟ್ವೀಕಾಕಾರರಿಗೆ ನಿನ್ನ ಬ್ಯಾಟ್, ಬಾಲ್‌ನಿಂದ ಉತ್ತರ ಕೊಡು ಅಂತ ಹೇಳಿದ್ರು.
ಆದ್ರೆ ಅವ್ರು ಕೊಡ್ತಾ ಇರೋ ೨೦ ಲಕ್ಷ ನಿಮ್ಮ ಪಾಕೆಟ್ ಮನಿಗೂ ಸಾಕಾಗಲ್ಲ ಅನ್ಸುತ್ತೆ ಅಲ್ವಾ?
ಸದ್ಯಕ್ಕೆ ನನ್ನ ಲಕ್ಷ ಲಕ್ಷದ ಕಡೆ ಇಲ್ಲ. ತಂಡದ ಹಿತಕ್ಕಾಗಿ ರೋಹಿತ ಶರ್ಮಾ ಅವರ ಜತೆ ನಿಲ್ತೀನಿ.
ಓಹೋ, ಅಪ್ಪನ ಥರಾನೇ ಚೆನ್ನಾಗಿ ಮಾತಾಡೋದ್ ಕಲ್ತಿದೀರ ಬಿಡಿ, ಸರಿ, ರೋಹಿತ್ ಶರ್ಮಾ ನಿಮ್ಮನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡಿಸ್ತಾರೆ ಅಂತ ನಂಬಿಕೆ ಇದೆಯಾ?
ಆಡಿಸ್ಲಿಲ್ಲ ಅಂದ್ರೆ ಅಪ್ಪನಿಗೆ ಒಂದು ಟ್ವೀಟ್ ಮಾಡೋಕ್ ಹೇಳ್ತೀನಿ ಬಿಡಿ.
ಸರಿ ನಿಮ್ಮ ಮುಂದಿನ ಗುರಿ?
ಮುಂಬೈ ಇಂಡಿಯನ್ಸ್ ಆಯ್ತು, ಮುಂದೆ ಇಂಡಿಯನ್ಸ್ ಟೀಮಿಗೆ ಸೆಲೆಕ್ಟ್ ಆಗಿ ಅರ್ಜುನ ಅವಾರ್ಡ್ ತಗೊಳ್ಳೋದು