Saturday, 14th December 2024

ರಾಷ್ಟ್ರೀಯ ಹೆದ್ದಾರಿ, ದೇಶದ ಪ್ರಗತಿಗೆ ರಹದಾರಿ

ವಿಶ್ಲೇಷಣೆ

ಪ್ರಕಾಶ್ ಶೇಷರಾಘವಾಚಾರ್‌

ದೇಶದಲ್ಲಿ ಪ್ರತಿ ವರ್ಷ ೫ ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿದೆ ಮತ್ತು ೧.೫ ಲಕ್ಷ ಜನ ಪ್ರಾಣ ಕಳೆದುಕೊಳ್ಳು ತ್ತಿದ್ದಾರೆ ಹಾಗೂ ೩ ಲಕ್ಷ ಜನ ತೀವ್ರವಾಗಿ ಗಾಯಗೊಂಡು ಅಂಗವಿಕಲರಾಗುತ್ತಿದ್ದಾರೆ. ಪ್ರಪಂಚದ ಅತಿ ಹೆಚ್ಚು ಅಪಘಾತ ಭಾರತದಲ್ಲಿ ಸಂಭವಿಸುತ್ತಿರುವುದು ಇದಲ್ಲದೆ ಶೇ. ೩ರಷ್ಟು ಜಿಡಿಪಿ ನಷ್ಟವಾಗುತ್ತಿದೆ.

‘ಅಮೆರಿಕದ ರಸ್ತೆಗಳು, ಅಮೆರಿಕ ದೇಶ ಶ್ರೀಮಂತ ಎಂದು ಚೆನ್ನಾಗಿರುವುದ; ಅಮೆರಿಕದ ರಸ್ತೆಗಳು ಚೆನ್ನಾಗಿರುವುದರಿಂದ, ಅಮೆರಿಕಾ ಶ್ರೀಮಂತವಾಗಿದೆ’ ಎಂಬ ಜಾನ್ ಎಫ್ ಕೆನಡಿ ಹೇಳಿಕೆಯನ್ನು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಆಗ್ಗಾಗ್ಗೆ ನೆನಪಿಸುತ್ತಿರುತ್ತಾರೆ. ಭಾರತದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವು ಕಳೆದ ಎಂಟು ವರ್ಷದಲ್ಲಿ ಶರವೇಗದಲ್ಲಿ ನಿರ್ಮಾಣವಾಗಿ ಅದ್ಭುತ ಪ್ರಗತಿಯನ್ನು ಸಾಧಿಸುತ್ತಿದೆ.

ಮೂಲಭೂತ ಸೌಕರ್ಯ ಕ್ಷೇತ್ರಕ್ಕೆ ಹರಿದು ಬಂದಿರುವ ಬಂಡವಾಳದಿಂದ ಹೆದ್ದಾರಿಗಳ ಚಿತ್ರಣ ಬದಲಾಗಿದೆ. ೨೦೧೪ರಲ್ಲಿ ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ಬಂದ ನಂತರ ಹೆzರಿ ನಿರ್ಮಾಣಕ್ಕೆ ಹೆಚ್ಚು ಮಹತ್ವ ನೀಡಿದೆ. ಆರ್ಥಿಕ ಪ್ರಗತಿ ಸಾಧಿಸಲು ರಸ್ತೆಗಳ ನಿರ್ಮಾಣವು ಬಹು ಮುಖ್ಯ. ರಸ್ತೆಯ ನಿರ್ಮಾಣವು ಕೈಗಾರಿಕೆ, ಕೃಷಿ ಮತ್ತು ಸ್ಥಿರಾಸ್ತಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದಲ್ಲದೆ ಉದ್ಯೋಗ ಸೃಷ್ಟಿಗೆ ದಾರಿಯಾಗುತ್ತದೆ.

ದೇಶದಲ್ಲಿ ಈಗ ಒಟ್ಟು ೧,೪೧,೧೯೦ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಇರುವುದು. ೨೦೧೪ ಏ.ನಲ್ಲಿ ೯೧,೨೮೭ ಕಿ.ಮೀ.  ನಿರ್ಮಾಣ ವಾಗಿತ್ತು. ಅಂದರೆ ಶೇ. ೫೦ರಷ್ಟು ಹೆದ್ದಾರಿಯನ್ನು ಕೇವಲ ಕಳೆದ ೮ ವರ್ಷದಲ್ಲಿ ನಿರ್ಮಿಸಲಾಗಿದೆ. ಎಂಟು ವರ್ಷಗಳ ಅವಧಿಯಲ್ಲಿ ಮೋದಿ ಮತ್ತು ನಿತಿನ್ ಗಡ್ಕರಿ ಜೋಡಿಯು ದೇಶದಲ್ಲಿ ಹೆದ್ದಾರಿ ನಿರ್ಮಾಣದ ಕ್ರಾಂತಿಯನ್ನೆ ಮಾಡಿದೆ. ೨೦೧೩ರಲ್ಲಿ ನ್ಯಾಯಾಲಯದಲ್ಲಿ ಕೇಂದ್ರ ಸರಕಾರವು ಸಲ್ಲಿಸಿದ ಪ್ರಮಾಣಪತ್ರದಲ್ಲಿ, ೧೯೮೦ರಲ್ಲಿ ದೇಶದಲ್ಲಿ ೨೯,೦೨೩ ಕಿ.ಮೀ. ರಾಷ್ಟ್ರೀಯ ಹೆದ್ದಾರಿಯಿಂದ ೨೦೧೩ಕ್ಕೆ ೭೬,೮೧೮ ಕಿ.ಮೀ. ಹೆದ್ದಾರಿ ಸೇರ್ಪಡೆಯಾಯಿತು.

ಅಂದರೆ ೩೨ ವರ್ಷದಲ್ಲಿ ೪೭,೭೯೫ ಕಿ.ಮೀ. ಹೆದ್ದಾರಿ ನಿರ್ಮಾಣವಾಗಿದೆ. ೧೯೯೮- ೨೦೦೪ ರವರೆಗೆ ಎನ್.ಡಿ.ಎ. ಸರಕಾರವು ೨೩,೮೧೪ ಕಿ.ಮೀ. ಹೆದ್ದಾರಿ ನಿರ್ಮಿಸಿತ್ತು. ಮೂರು ದಶಕದಲ್ಲಿ ನಿರ್ಮಾಣ ಮಾಡಿದ್ದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶೇಕಡಾ ೫೦ರಷ್ಟು ಎನ್.ಡಿ.ಎ ಅವಧಿಯಲ್ಲಿಯೇ ನಿರ್ಮಿಸಲಾಗಿತ್ತು. ೨೦೦೪-೨೦೧೪ರವರೆಗೆ ಯು.ಪಿ.ಎ. ಸರಕಾರವು ಕೇವಲ ೧೬,೦೦೦ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿತ್ತು.

೨೦೧೪ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಯು.ಪಿ.ಎ. ಅವಧಿಯ ನೀತಿ ನಿರೂಪಣೆ ದೋಷದಿಂದ ಸುಮಾರು ?೨ ಲಕ್ಷ ಕೋಟಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ನೆನೆಗುದಿಗೆ ಬಿದಿದ್ದವು. ಮೋದಿ ಸರಕಾರವು ಈ ಯೋಜನೆಗಳಿಗೆ ಸಂಬಂಧಿಸಿದ ಗೋಜಲನ್ನು ಬಿಡಿಸಿ ಒಂದೊಂದೇ ಕಾಮಗಾರಿಗಳನ್ನು ಮುಗಿಸಬೇಕಾಯಿತು. ಇದೀಗ ಹೊಸ ನೀತಿಯನ್ವಯ ಹೆದ್ದಾರಿ ಕಾಮಗಾರಿ ಆರಂಭಕ್ಕೆ ಮುನ್ನ ಶೇ. ೯೦ರಷ್ಟು ಭೂಸ್ವಾಧೀನ, ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ದೊರತ ತರುವಾಯವೇ ಕಾರ್ಯಾದೇಶ ಕೊಡುವುದನ್ನು ಕಡ್ಡಾಯ ಮಾಡಲಾಗಿದೆ.

ಶೇ. ೫೦ರಷ್ಟು ಕಾಮಗಾರಿ ಮುಗಿಸಿದ ಸಂಸ್ಥೆಗಳಿಗೆ ಆದಾಯದ ಮೇಲೆ ಮೊದಲ ಹಕ್ಕಿನ ಆಧಾರದ ಮೇಲೆ ಕೇಂದ್ರ ಸರಕಾರ ದುಡಿಯುವ ಬಂಡವಾಳ ನೀಡುವ ಪದ್ದತಿ ಜಾರಿಗೆ ತಂದಿದೆ. ಈ ಎ ಬದಲಾವಣೆಗಳಿಂದ ಕಾಮಗಾರಿ ವಿಳಂಬವಾಗದಿರಲು  ಸಹಾಯವಾಗಿದೆ. ಎನ್ .ಡಿ.ಎ. ಮತ್ತು ಕಾಂಗ್ರೆಸ್ ಅವಧಿಯ ಹೆದ್ದಾರಿ ನಿರ್ಮಾಣ ಪ್ರಗತಿ ತುಲನೆ ಮಾಡಿದರೆ, ವಾಜಪೇಯಿ ಮತ್ತು ಮೋದಿಯವರ ೧೪ ವರ್ಷಗಳ ಅವಧಿಯಲ್ಲಿ ಒಟ್ಟು ೧,೧೩,೦೦೦ ಕಿ.ಮೀ. ರಾಷ್ಟ್ರೀಯ ಹೆzರಿಯ ನಿರ್ಮಾಣವಾಗಿದ್ದರೆ, ಕಾಂಗ್ರೆಸ್ ೮೦ರ ನಂತರದ ತನ್ನ ೨೪ ವರ್ಷಗಳ ಆಡಳಿತದಲ್ಲಿ ೩೩,೦೦೦ ಕಿ.ಮೀ. ಹೆದ್ದಾರಿಯನ್ನು ನಿರ್ಮಿಸಿದೆ.

೨೦೧೩ರಲ್ಲಿ ದಿನಂಪ್ರತಿ ೧೨ಕಿ.ಮೀ. ರಸ್ತೆ ನಿರ್ಮಾಣ ಮಾಡಲಾಗುತ್ತಿತ್ತು ಈಗ ಅದರ ವೇಗವು ೩೩ ಕಿ.ಮೀ.ಗೆ ತಲುಪಿದೆ. ಇಂದಿನ
ನಿರ್ಮಾಣದ ವೇಗ ಹೇಗಿದೆಯೆಂದರೆ ಸೋಲಾಪುರ ಮತ್ತು ವಿಜಯಪುರ ನಡುವೆ ೨೫ಕಿ.ಮಿ ರಸ್ತೆಯನ್ನು ೨೪ ಗಂಟೆಗಳಲ್ಲಿ ನಿರ್ಮಿಸಿ ವಿಶ್ವ ದಾಖಲೆ ಮಾಡಿದ್ದಾರೆ. ರಸ್ತೆಗಳ ನಿರ್ಮಾಣದಿಂದ ಆರ್ಥಿಕ ಬೆಳವಣಿಗೆಗೆ ಅಪಾರ ಕೊಡುಗೆಯುಂಟು. ಲಕ್ಷಾಂತರ ಜನರಿಗೆ ಕೆಲಸ ದೊರೆಯುತ್ತದೆ ಮತ್ತು ಸ್ಟೀಲ್, ಸಿಮೆಂಟ್ ಇನ್ನಿತರ ಪೂರಕ ಪದಾರ್ಥಗಳಿಗೆ ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಸೃಷ್ಟಿಯಾಗುತ್ತದೆ.

ರಸ್ತೆ ನಿರ್ಮಾಣವಾಗುವ ಪ್ರದೇಶದ ಸ್ಥಿರಾಸ್ತಿಯ ಬೆಲೆಯು ಹೆಚ್ಚಾಗಿ ರೈತರ ಜಮೀನಿಗೆ ಉತ್ತಮ ಬೆಲೆ ಬರುತ್ತದೆ. ಸರಕು ಸಾಗಣೆಗೆ ವೇಗ ದೊರೆಯುತ್ತದೆ. ಲಾಜಿಸ್ಟಿಕ್ ಕ್ಷೇತ್ರಕ್ಕೆ ಅಪಾರ ಲಾಭವಾಗಿ ಉದ್ಯೋಗ ಸೃಷ್ಟಿಗೆ ದಾರಿಯಾಗುತ್ತದೆ. ೨೦೧೮ರಲ್ಲಿ ಮಹತ್ವ ಪೂರ್ಣ ಭಾರತಮಾಲಾ ಪರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು.

ಮೊದಲ ಹಂತದಲ್ಲಿ ೩೪,೮೦೦ ಕಿ.ಮೀ. ರಸ್ತೆ ನಿರ್ಮಾಣವನ್ನು ?೫,೩೫,೦೦೦ ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಈ ಯೋಜನೆಯ ಮೂಲಕ ೫೫೦ ಜಿಲ್ಲೆಗಳಿಗೆ ರಾಷ್ಟ್ರೀಯ ಹೆzರಿ ಸಂಪರ್ಕ ದೊರೆಯಲಿದೆ. ಇದರಲ್ಲಿ ಆರ್ಥಿಕ ಕಾರಿಡಾರ್, ಕೈಗಾರಿಕಾ ಕಾರಿಡಾರ್ ಮತ್ತು ಲಾಜಿಸ್ಟಿಕ್ ಸಂಪರ್ಕ ಲಭ್ಯವಿರುವುದು. ಮೊದಲ ಹಂತದ ಯೋಜನೆಯು ೨೦೨೨ಕ್ಕೆ ಮುಕ್ತಾಯ ವಾಗಬೇಕಿತ್ತು ಆದರೆ ಕೊವಿಡ್ ಮತ್ತು ಇನ್ನಿತರ ಕಾರಣಗಳಿಗೆ ೨೦೨೬ಕ್ಕೆ ಮುಗಿಯುವ ಸಂಭವವಿದೆ.

ಕೇಂದ್ರ ಸಂಪುಟದಲ್ಲಿ ಕಳೆದ ೮ ವರ್ಷದಿಂದ ಒಂದೇ ಖಾತೆಯನ್ನು ಹೊಂದಿರುವ ಏಕೈಕ ಸಚಿವ ನಿತಿನ್ ಗಡ್ಕರಿ. ಬಿಜೆಪಿ ವಿರೋಧಿಗಳು ಕೂಡಾ ಇವರ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಪ್ರಶಂಸಿಸುತ್ತಾರೆ. ಅಭಿವೃದ್ಧಿ ವಿಷಯದಲ್ಲಿ ಗಡ್ಕರಿ ಯವರು ರಾಜಕೀಯ ಮಾಡುವುದಿಲ್ಲ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡಾ ಹೊಗಳು ತ್ತಾರೆ.

ಎಕ್ಸಪ್ರೆಸ್ ಹೈವೆ ನಿರ್ಮಿಸಲು ರಾಷ್ಟ್ರೀಯ ಎಕ್ಸಪ್ರೆಸ್ ಹೈವೆ ಪ್ರಾಧಿಕಾರ ರಚಿಸಲಾಗಿದೆ. ಈವರೆಗೆ ೨೪,೦೯೫ ಕಿ. ಮೀ. ಎಕ್ಸಪ್ರೆಸ್ ಹೈವೆ ನಿರ್ಮಾಣವಾಗಿದೆ. ದೆಹಲಿ ಮತ್ತು ಮುಂಬಯಿ ನಡುವೆ ದೇಶದ ೧,೩೫೦ ಕಿ.ಮೀ. ದೇಶದಲ್ಲೇ ಅತಿ ಉದ್ದದ ಎಕ್ಸಪ್ರೆಸ್ ಹೈವೆ ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ. ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹದಲ್ಲಿ ಫಾಸ್ಟ್ ಟ್ಯಾಗ್ ಪರಿಚಯಿಸಿ ತಡೆರಹಿತ ವಾಹನ ಚಾಲನೆ ಸಾಧ್ಯವಾಗಿ ಸಮಯ ಮತ್ತು ಇಂಧನ ಉಳಿತಾಯವಾಗುತ್ತಿದೆ.

೨೦೨೨ರಲ್ಲಿ ?೩೮,೦೦೦ ಕೋಟಿ ಹಣವು ಫಾಸ್ಟ್ ಟ್ಯಾಗ್ ಮೂಲಕ ಸಂಗ್ರಹವಾಗಿದೆ. ನಿಜ, ಟೋಲ್ ಸಂಗ್ರಹ ವಾಹನ ಚಾಲಕರ ಜೇಬಿಗೆ ಹೊರೆಯಾಗಿದೆ. ಗುತ್ತಿಗೆದಾರರು ಟೋಲ್ ವಸೂಲಿ ನೆಪದಲ್ಲಿ ಸುಲಿಗೆ ಮಾಡದ ಹಾಗೆ ಪಾರದರ್ಶಕ ವ್ಯವಸ್ಥೆ ಜಾರಿಯಾಗ ಬೇಕು. ಹೆದ್ದಾರಿ ನಿರ್ಮಾಣಕ್ಕೆ ಅದೆಷ್ಟು ಸಾವಿರ ಮರಗಳು ಹನನವಾಗಿರುವುದೋ ಲೆಕಕ್ಕೆ ಸಿಗದು. ನೂರಾರು ವರ್ಷಗಳಿಂದ
ಬೆಳದು ನಿಂತ ಮರಗಳು ನೆಲಕಚ್ಚಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಮರೋಪಾದಿಯಲ್ಲಿ ಪರ್ಯಾಯವಾಗಿ ಗಿಡ ನೆಡುವ ಕಡೆ ಗಮನ ಹರಿಸಬೇಕು. ಸ್ವತಃ ಗಡ್ಕರಿಯವರೇ ಹೆದ್ದಾರಿ ಹಸಿರುಕರಣ ಯೋಜನೆಯು ಹೆಚ್ಚು ಪ್ರಗತಿ ಸಾಧಿಸಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳೆದ ೮ ವರ್ಷದಲ್ಲಿ ಕರ್ನಾಟಕ ಹೆದ್ದಾರಿ ನಿರ್ಮಾಣದಲ್ಲಿ ಗಣನೀಯ ಅಭಿವೃದ್ಧಿ ಕಂಡಿದೆ. ರಾಜ್ಯದಲ್ಲಿ ಒಟ್ಚು ೭,೫೮೯ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳಿವೆ. ಬಹು ನಿರೀಕ್ಷೀತ ಮೈಸೂರು-ಬೆಂಗಳೂರು ದಶಪಥ ರಾಷ್ಟ್ರೀಯ ಹೆದ್ದಾರಿಯು ಮುಕ್ತಾಯ ಹಂತ
ತಲುಪಿದೆ. ಚೆನ್ನೈ ಬೆಂಗಳೂರು ಎಕ್ಸಪ್ರೆಸ್ ಷಟ್ಪಥ ಕಾರಿಡಾರ್ ಕಾಮಗಾರಿಯು ಭರದಿಂದ ಸಾಗಿದೆ. ಒಮ್ಮೆ ಈ ರಸ್ತೆಯು ಮುಕ್ತಾಯವಾದರೆ ಬೆಂಗಳೂರು ಚನ್ನೈ ಪಯಣಕ್ಕೆ ಕೇವಲ ಎರಡು ಗಂಟೆಗಳು ಸಾಕಾಗುವುದು.

ಹೈದರಾಬಾದ್ ಮತ್ತು ಬೆಂಗಳೂರು ಎಕ್ಸಪ್ರೆಸ್ ರಸ್ತೆಯ ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಬೆಂಗಳೂರು ಮತ್ತು ಮುಂಬಯಿ ಹೊಸ ಮಾರ್ಗದ ರಸ್ತೆ ನಿರ್ಮಾಣವನ್ನು ಗಡ್ಕರಿಯವರು ಘೋಷಿಸಿದ್ದಾರೆ. ಬೆಂಗಳೂರು, ತುಮಕೂರು, ಚಿತ್ರದುರ್ಗ, ದಾವಣಗೆರೆ , ಬಳ್ಳಾರಿ, ಕೊಪ್ಪಳ, ಗದಗ, ಬಾಗಲಕೋಟೆ , ಬೆಳಗಾವಿ ಮುಖಾಂತರ ಸಾಗುವ ಈ ರಸ್ತೆಯು ಬೆಂಗಳೂರು ಪುಣೆ ಅಂತರವನ್ನು ೭೫ಕಿ.ಮೀ. ಕಡಿಮೆ ಮಾಡುವುದು. ಈ ಯೋಜನೆಗೆ ಕೇಂದ್ರ ಸರ್ಕಾರ ೪೦ಸಾವಿರ ಕೋಟಿ ವೆಚ್ಚ
ಮಾಡಲಿದೆ.

ರಾಜ್ಯದ ಮೊಟ್ಟಮೊದಲ ಗ್ರೀನ್ ಫೀಲ್ಡ ಷಟ್ಪಥ ಎಕ್ಸ್ ಪ್ರೆಸ್ ಹೈವೆ ಕಲಬುರಗಿ ಮತ್ತು ರಾಯಚೂರು ನಡುವೆ ೧೭೭ಕಿ.ಮೀ. ೪ ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿದೆ. ಈ ಎಕ್ಸಪ್ರೆಸ್ ಹೈವೆ ಕಲ್ಯಾಣ ಕರ್ನಾಟಕವನ್ನು ಕಿತ್ತೂರು ಕರ್ನಾಟಕಕ್ಕೆ ಜೋಡಿಸುತ್ತದೆ. ಸದ್ಯ ರಾಜ್ಯದಲ್ಲಿ ?೪೦,೦೦೦ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಈಗಾಗಲೇ ನಡೆಯುತ್ತಿದೆ.
ಲೋಕಸಭೆಯಲ್ಲಿ ತಮ್ಮ ಇಲಾಖೆಯ ಚರ್ಚೆಯಲ್ಲಿ ಭಾಗವಹಿಸಿ ಉತ್ತರಿಸುವಾಗ ಹಲವಾರು ಆಸಕ್ತಿಕರ ಸಂಗತಿಗಳನ್ನು ಬಿಚ್ಚಿಡುತ್ತಾರೆ.

ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿದ ಕಾರಣ ಜೋಜಿ ಪಾಸ್ ಸುರಂಗ ನಿರ್ಮಾಣದಲ್ಲಿ ?೫,೦೦೦ಕೋಟಿ
ಉಳಿತಾಯವಾಗಿದ್ದು, ಬ್ರಹ್ಮಪುತ್ರ ನದಿಯ ಮೇಲೆ ನಿರ್ಮಿಸಿರುವ ಮಾಜೋಲಿ ಬ್ರಿಡ್ಜ್ ನಿರ್ಮಾಣ ವೆಚ್ಚ ?೬,೦೦೦ ಕೋಟಿಯಿಂದ ?೬೫೦ ಕೋಟಿಗೆ ಇಳಿಕೆ ಮಾಡಿದ್ದು, ದೆಹಲಿ ಮೀರಠ್ ೧೪ ಪಥ ಎಕ್ಸ್‌ಪ್ರೆಸ್ ಹೈವೆ ಫಲವಾಗಿ ೪.೫ಗಂಟೆಗಳ ಪ್ರಯಾಣವು ೪೦ ನಿಮಿಷಕ್ಕೆ ಇಳಿದಿರುವ ಮಾಹಿತಿಯನ್ನು ಹಂಚಿಕೊಂಡರು.

ಈ ಬಾರಿಯ ಮುಂಗಡ ಪತ್ರದಲ್ಲಿ ಭೂಸಾರಿಗೆ ಇಲಾಖೆಗೆ ?೧,೯೯,೧೦೭ ಕೋಟಿ ಹಣವು ಮೀಸಲಿರಿಸಲಾಗಿದೆ. ಕಳೆದ ಬಾರಿಗೆ ಹೋಲಿಕೆಯಲ್ಲಿ ಶೇ. ೬೮ ಹೆಚ್ಚಳವಾಗಿದೆ. ದೇಶದಲ್ಲಿ ಹೆದ್ದಾರಿಗಳ ನಿರ್ಮಾಣವು ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ. ಯಾವುದೇ ಭ್ರಷ್ಟಾಚಾರದ ಸೋಂಕಿಲ್ಲದೆ, ಹಗರಣಗಳ ಹಾವಳಿ ಇಲ್ಲದೆ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ.

ಸದ್ಯ ೧೦ ಲಕ್ಷ ಕೋಟಿ ರುಪಾಯಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ದೇಶಾದ್ಯಂತ್ಯ ನಡೆಯುತ್ತಿದೆ. ದೇಶದಲ್ಲಿ ಪ್ರತಿ ವರ್ಷ ೫ ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿದೆ ಮತ್ತು ೧.೫ ಲಕ್ಷ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಹಾಗೂ ೩ ಲಕ್ಷ ಜನ ತೀವ್ರವಾಗಿ ಗಾಯಗೊಂಡು ಅಂಗವಿಕಲರಾಗುತ್ತಿದ್ದಾರೆ. ಪ್ರಪಂಚದ ಅತಿ ಹೆಚ್ಚು ಅಪಘಾತ ಭಾರತದಲ್ಲಿ ಸಂಭವಿಸುತ್ತಿರುವುದು ಇದಲ್ಲದೆ ಶೇ. ೩ರಷ್ಟು ಜಿಡಿಪಿ ನಷ್ಟವಾಗುತ್ತಿದೆ.

ಉತ್ತಮ ರಸ್ತೆ ಉತ್ತಮ ಅಭ್ಯಾಸಗಳನ್ನು ಕೈಗೊಂಡರೆ ಈ ಸಂಖ್ಯೆ ಗಣನೀಯವಾಗಿ ಇಳಿಸಬಹುದು ಈ ದಿಶೆಯಲ್ಲಿ ಮೋದಿ ಸರ್ಕಾರ ಅತಿ ಹೆಚ್ಚಿನ ಬದ್ಧತೆಯಿಂದ ಯೋಜನೆಗಳ ಅನುಷ್ಠಾನ ಕೈಗೊಳ್ಳುತ್ತಿದೆ. ಭಾರತದಲ್ಲಿ ಶೇ. ೭೦ರಷ್ಟು ಸರಕು ಮತ್ತು ಶೇಕಡಾ ೮೫ರಷ್ಟು ಪ್ರಯಾಣಿಕರ ಸಂಚಾರ ರಸ್ತೆ ಮಾರ್ಗವಾಗಿ ನಡೆಯುತ್ತಿದೆ. ರಸ್ತೆಯ ಪ್ರಾಮುಖ್ಯತೆ ಮತ್ತು ಅದರ ಮೇಲಿರುವ ಒತ್ತಡ ವನ್ನು ಇದರಿಂದ ಊಹಿಸಬಹುದಾಗಿದೆ. ಮೋದಿಯವರ ದೂರದೃಷ್ಟಿ ಹಾಗೂ ನಿತಿನ್ ಗಡ್ಕರಿಯವರ ದಕ್ಷತೆ ಮತ್ತು ಬದ್ಧತೆಯ ಫಲವಾಗಿ ದೇಶದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಶರವೇಗದಲ್ಲಿ ನಡೆಯುತ್ತಿದೆ ಮತ್ತು ಗುಣಮಟ್ಟದ ಕಾಮಗಾರಿ ಯು ನಡೆಯುತ್ತಿರುವುದರಿಂದ ದೇಶದ ರಸ್ತೆಗಳ ನಕ್ಷೆ ಬದಲಾಗುತ್ತಿದೆ. ನಗರಗಳ ನಡುವಿನ ಅಂತರ ಕಡಿಮೆಯಾಗಿ ಅಪಾರ ಸಮಯ ಹಾಗೂ ಇಂಧನ ಉಳಿತಾಯವಾಗುತ್ತಿದೆ.