Thursday, 12th December 2024

ಕರಾವಳಿಗೆ ಬೇಕಿದೆ ಶಾಶ್ವತ ಎನ್‌ಐಎ ಕಚೇರಿ

ಅಭಿಮತ

ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ

ಕರಾವಳಿ ಭಾಗ ಪ್ರಮುಖವಾಗಿ ಐತಿಹಾಸಿಕ ಧಾರ್ಮಿಕ ಕೇಂದ್ರ, ಶಿಕ್ಷಣ ಸಂಸ್ಥೆ, ಮೀನುಗಾರಿಕೆ, ಬಂದರುಗಳನ್ನು ಹೊಂದಿರುವ ಪ್ರದೇಶ. ಈ ಭಾಗಕ್ಕೆ ಅಂಟಿ ಕೊಂಡು ನೆರೆಯ ಕೇರಳ ರಾಜ್ಯವಿದ್ದು, ಸಮುದ್ರ ಮಾರ್ಗಗಳ ಮೂಲಕ ದೇಶ-ವಿದೇಶಗಳಿಗೆ ವ್ಯಾಪಾರ ವಹಿವಾಟು ಮತ್ತು ರಫ್ತು ಕಾರ್ಯಗಳು ದಿನನಿತ್ಯ ಬಿರುಸಿ ನಿಂದ ನಡೆಯುತ್ತಿದೆ. ಈ ಸಮುದ್ರದ ಮಧ್ಯೆ ಜೀವದ ಹಂಗು ತೊರೆದು ಹಗಲು-ರಾತ್ರಿಯೆನ್ನದೆ ಶ್ರಮಪಟ್ಟು ಮೀನುಗಾರಿಕೆಯ ಕುಲಕಸುಬು ನಡೆಸುವ ಮೊಗವೀರ ಸಮಾಜವಿದೆ.

ಜತೆಗೆ ಈ ಸಮಾಜವನ್ನು ಸಮುದ್ರ ಮಾರ್ಗದ ರಕ್ಷಕರು ಅರ್ಥಾತ್ ಸೈನಿಕರೆಂದರೂ ತಪ್ಪಾಗಲಾರದು. ಕರಾವಳಿಯ ಭಾಗಕ್ಕೆ ಭಯೋತ್ಪಾದಕರ ಕರಿನೆರಳು ಚಾಚಿರುವುದು ಇಂದು ನಿನ್ನೆಯಲ್ಲ. ಎಲ್ಲಾ ಪಾಕಿಸ್ತಾನದ ಭಯೋತ್ಪಾದಕರನ್ನು ಈ ಹಿಂದೆ ಉಳ್ಳಾಲದ ಮನೆಯೊಂದರಿಂದ, ಮಂಗಳೂರಿನ ಫ್ಲ್ಯಾಟ್ ಒಂದರಿಂದ, ನೆರೆಯ ಕಾಸರಗೋಡಿನಿಂದ, ಭಟ್ಕಳದಿಂದ ಹೊತ್ತೊಯ್ದಾಗ ಇಲ್ಲಿನ ಜನತೆ ಬೆಚ್ಚಿಬಿದ್ದಿದ್ದರು.

ಸಂಭಾವ್ಯ ದುರಂತ ತಪ್ಪಿಸಿದ್ದ ಅಂದಿನ ಪೊಲೀಸ್ ಅಧಿಕಾರಿಗಳ ಸಮಯಪ್ರಜ್ಞೆಗೆ ಜನರು ನಿಟ್ಟುಸಿರು ಬಿಟ್ಟಿದ್ದರು. ಅಂದು ಬುಧವಾರ ರಾಜ್ಯರಾಜಕಾರಣದ ಮಂತ್ರಿಮಂಡಲದ ಕುರಿತಾಗಿ ಮಾಧ್ಯಮಗಳು ದಿನವಿಡೀ ಭಿತ್ತರಿಸುತ್ತಿದ್ದರೆ, ಜನಸಾಮಾನ್ಯರ ಕುತೂಹಲದ ದೃಷ್ಟಿ ಅತ್ತ ನೆಟ್ಟಿತ್ತು. ಆದರೆ ಮಂಗಳೂರಿನ ಉಳ್ಳಾಲದ ಮಾಜಿ ಶಾಸಕ ಬಿಎಂ ಇದಿನಬ್ಬರ ಮನೆಗೆ ರಾಷ್ಟ್ರೀಯ ತನಿಖಾ ದಳ ಬೆಳ್ಳಂಬೆಳಗ್ಗೆ ನುಗ್ಗಿತ್ತು. ಜತೆಗೆ ಭಯೋತ್ಪಾದಕ ನಂಟಿನ ಹಿನ್ನೆಲೆಯಲ್ಲಿ ಕೇರಳ ಬೆಂಗಳೂರು ಸೇರಿದಂತೆ ಹಲವೆಡೆ ದಾಳಿ ನಡೆಸಲಾಗಿತ್ತು.

ಸಿರಿಯಾ ಮೂಲದ ಐಸಿಸ್ ಉಗ್ರರೊಂದಿಗಿನ ನಂಟಿನ ಹಿನ್ನೆಲೆಯಲ್ಲಿ ಮಾಜಿ ಶಾಸಕರ ಪುತ್ರನನ್ನು ವಶಪಡಿಸಿ ಕೊಂಡ ತನಿಖಾ ತಂಡ ಜತೆಗೆ ಮಾಜಿ ಶಾಸಕರ ಮೊಮ್ಮಗನಿಗಾಗಿ ಶೋಧ ನಡೆಸಿದೆ. ಹಲವು ಮಹತ್ವದ ದಾಖಲೆ ಸಂಗ್ರಹಿಸಿದ ತಂಡಕ್ಕೆ ಕೇರಳ ಮೂಲದ ಅಬು ಯಾಹ್ಯಾ ನೇತೃತ್ವದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿರುವ ಖಚಿತ ಮಾಹಿತಿ ಮತ್ತು ಐಸಿಸ್ ಪರ ಯುವಕರನ್ನು ಸೆಳೆಯುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಾದ ಟೆಲಿಗ್ರಾಂ, ಇನ್ಸ್ಟಾಗ್ರಾಂ ನಲ್ಲಿ ಪ್ರಚಾರ ನಡೆಸುವ ಕೃತ್ಯವನ್ನುಈ ತಂಡ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಲ್ಯಾಪ್ ಟಾಪ್, ಹಾರ್ಡ್ ಡಿ, ಸಿಮ್ ಕಾರ್ಡ್‌ಗಳು ಕೂಡ ದೊರೆತಿದ್ದು ಕೇರಳ, ಕರ್ನಾಟಕದಲ್ಲಿ ಬಹುದೊಡ್ಡ ವಿಧ್ವಂಸಕ ಕೃತ್ಯಕ್ಕೆ ಈ ತಂಡ ನೀಲ ನಕಾಶೆ ತಯಾರಿ ಸಿತ್ತೆಂಬ ಸ್ಪೋಟಕ ಅಂಶಗಳು ತನಿಖೆ ವೇಳೆ ಬೆಳಕಿಗೆ ಬಂದಿದೆ. ಜತೆಗೆ ಮಡಿಕೇರಿ ಮೂಲದ ಹಿಂದೂ ಯುವತಿ ಅನ್ಯ ಧರ್ಮಕ್ಕೆ ಮತಾಂತರಗೊಂಡ ಮಾಜಿ ಶಾಸಕನ ಮೊಮ್ಮಗನ ಪತ್ನಿಯು ಕೂಡ ಈ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದು, ಸಿರಿಯಾ ಐಸಿಸ್‌ನ ಬೇರು ರಾಜ್ಯದಲ್ಲಿ ಬಲವಾಗಿ ತಳವೂರಿರುವ ಶಂಕೆಯಿದೆ.
ಉಗ್ರರ ಅಕ್ರಮ ನುಸುಳುವಿಕೆಗೆ ರಾಜಮಾರ್ಗ ವೆನಿಸುವ ಸಮುದ್ರ ಮಾರ್ಗದ ಮೂಲಕ ಸಾಕಷ್ಟು ಕಳ್ಳಸಾಗಾಣಿಕೆಗಳು ನಡೆಯುತ್ತಿದ್ದು, ಕೇಂದ್ರದ ಶಾಶ್ವತ ಎನ್‌ಐಎ ತನಿಖಾ ದಳದ ಕಚೇರಿಯನ್ನು ಮತ್ತು ಸೇನಾ ನೆಲೆಯನ್ನು ಮಂಗಳೂರು, ಕಾಸರಗೋಡು ಮತ್ತು ಭಟ್ಕಳದಲ್ಲಿ ಕರಾವಳಿಯ ರಕ್ಷಣೆಯ ದೃಷ್ಟಿಯಿಂದ ತೆರೆಯುವ ಅವಶ್ಯಕತೆಯಿದೆ.

ಈ ಹಿಂದೆ ಮುಂಬೈನ ನಾರಿಮನ್ ಕಟ್ಟಡ, ತಾಜ್ ಹೋಟೆಲ್‌ನಲ್ಲಿ ನಡೆದ ಉಗ್ರರ ವಿದ್ವಂಸಕ ಕೃತ್ಯದಲ್ಲಿ ಉಗ್ರರು ಹಡಗನ್ನು ಅಪಹರಿಸಿ ಸಮುದ್ರ ಮಾರ್ಗದ ಮೂಲಕವೇ ನುಸುಳಿದ್ದು, ಈ ಎ ಘಟನೆಗಳನ್ನು ಅವಲೋಕಿಸಿದಾಗ ಕರಾವಳಿಯ ಕಡಲ ತೀರವು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ನಾಗರಿಕ ವಲಯದಲ್ಲಿ ಎದ್ದಿದೆ.