Sunday, 15th December 2024

ಭೂಮಿಯನ್ನೇ ಡೈನಮೊ ಮಾಡಲು ಹೊರಟ ಮಹಾನ್ ವಿಜ್ಞಾನಿ ನಿಕೊಲ ಟೆಸ್ಲಾ

ಅವಲೋಕನ

ಎಲ್‌.ಪಿ.ಕುಲಕರ್ಣಿ

kulkarnilp007@gmail.com

‘ವಿವಾಹಿತ ಪುರುಷರು ಮಾಡಿದ ಅನೇಕ ಉತ್ತಮ ಆವಿಷ್ಕಾರಗಳನ್ನು ನೀವು ಹೆಸರಿಸಬಹುದೆಂದು ನಾನು ಭಾವಿಸುವುದಿಲ್ಲ.’ ‘ಏಕಾಂಗಿಯಾಗಿರಿ, ಅದು ಆವಿಷ್ಕಾ ರದ ರಹಸ್ಯ; ಏಕಾಂಗಿಯಾಗಿರಿ, ಅದು ಆಲೋಚನೆಗಳು ಹುಟ್ಟುವ ಕಾಲ.’

‘ನಿಮ್ಮ ಹಗೆತನ, ದ್ವೇಷಗಳನ್ನು ವಿದ್ಯುತ್ ಶಕ್ತಿಯನ್ನಾಗಿ ಮಾಡಲು ಸಾಧ್ಯವಾದರೆ, ಅದು ಇಡೀ ಜಗತ್ತನ್ನು ಬೆಳಗಿಸಬಲ್ಲುದು.’ ಈ ಮೇಲಿನ ಸ್ಟೇಟ್ಮೆಂಟ್‌ಗಳನ್ನು ಓದಿದರೆ, ಇದ್ಯಾವುದೋ ಒಬ್ಬ, ಜೀವನದಲ್ಲಿ ಹತಾಶೆಗೊಂಡ ವ್ಯಕ್ತಿಯೇ ಇರಬಹುದು ಎಂಬ ಸಂದೇಹಬರುತ್ತದೆ. ಬಡತನ, ಹತಾಶೆ, ಸಂಶೋಧನೆಗೆ ಸೂಕ್ತ ವೇದಿಕೆ ಸಿಗದಿರುವುದು. ವೇದಿಕೆ ಸಿಕ್ಕರೂ ಕಾಲು ಹಿಡಿದು ಎಳೆಯುವ ಜನರಿಂದ ಪ್ರಸಿದ್ಧಿ ಸಿಗದೇ ಹೋಗುವುದು.

ಇವುಗಳ ಜತೆಗೆ ಮನಸ್ಸಿನ ಆಲೋಚನೆಗಳನ್ನು ಹುರಿಗೊಳಿಸುತ್ತ ಹತ್ತು ಹಲವು ಪ್ರಯೋಗಗಳನ್ನು ಯಶಸ್ವಿಯಾಗಿ ಮಾಡಿ, ಹಲವಾರು ಆವಿಷ್ಕಾರಗಳಿಗೆ ಕಾರಣೀಭೂತನಾದ ಒಬ್ಬ ಮಹಾನ್ ವ್ಯಕ್ತಿ ನಮ್ಮ ಜತೆ ಇದ್ದು ಹೋದ. ಸದ್ಯ ನಾವು ಬಳಸುತ್ತಿರುವ ಎ.ಸಿ (ಪರ್ಯಾಯ ವಿದ್ಯುತ್)ನ್ನು ಕಂಡು ಹಿಡಿದಿದ್ದಲ್ಲದೇ, ಇಂಡಕ್ಷನ್ ಕ್ವಾಯಿಲ, ‘ನಿಯೋನ್ ಬಲ್ಬ’ ಗಳ ಅನ್ವೇಷಣೆ. ನಾವು ದಿನನಿತ್ಯ ಬಳಸುವ ಟಿ.ವಿ. ರಿಮೋಟ್ ಕಂಟ್ರೋಲರ್, ಆತ ಮಾರ್ಕೋನಿಗೂ ಮುಂಚೆಯೇ
ರೆಡಿಯೋ ಸಂಶೋಧನೆ ಮಾಡಿದ್ದ. ತಂತಿ ಇಲ್ಲದೇ ಮನೆಗಳಿಗೆ ವಿದ್ಯುತ್ ಹರಿಸುತ್ತೇನೆ.

ತಿರುಗುವ ಭೂಮಿಯನ್ನೇ ಡೈನಾಮೋ ಮಾಡಿ ವಿದ್ಯುತ್ ಪಡೆಯುವೆನೆಂದು ಚಾಲೆಂಜ್ ಹಾಕಿದ್ದ ಆ ಆಹಾನ್ ಸಂಶೋಧಕನೇ ನಿಕೋಲ ಟೆಸ್ಲಾ. ಇಲ್ಲಿ ತಿಳಿಸಿದ ಕೆಲವು ಉಪಕರಣಗಳನ್ನು ಬೇರೆ ಬೇರೆ ವಿಜ್ಞಾನಿಗಳು ಕಂಡುಹಿಡಿದಿದ್ದರೂ ಕೂಡ ಅವುಗಳ ಮೂಲ ಆಲೋಚನೆ ಮಾತ್ರ ಟೆಸ್ಲಾಗೆ ಸಲ್ಲಬೇಕು. ಏಕೆಂದರೆ ಟೆಸ್ಲಾಗೆ ಕಾಲೆಳೆಯುವ ಜನ ಬಹಳ ಇದ್ದರು. ಜುಲೈ – ೧೦ರಂದು ಟೆಸ್ಲಾನ ಹುಟ್ಟು ಹಬ್ಬ ಆಚರಿಸಲಾಗಿದೆ. ಸದ್ಯ ನಾವು ಆತನ 165ನೇ ಜನ್ಮ ದಿನವನ್ನು ಆಚರಿಸುತ್ತಿದ್ದೇವೆ!

ಆಸ್ಟ್ರೀಯಾದ ಸ್ಮಿಲ್ಜೋನ್ ಎಂಬಲ್ಲಿ ಕ್ರೈಸ್ತ ಪ್ರೀಸ್ಟ್ ಆಗಿದ್ದ ಮಿಲ್ಯುಟಿನ್ ಟೆಸ್ಲಾ ಮತ್ತು ಜ್ಯೂಕಾ ಮೆಂಡಿಕ್ ದಂಪತಿಯ ನಾಲ್ಕನೇ ಮಗುವಾಗಿ 10ನೇ ಜುಲೈ 1856ರಲ್ಲಿ ನಿಕೋಲ ಟೆಸ್ಲಾ ಜನಿಸಿದರು. ಅದು ಮೊದಲೇ ಮಳೆಗಾಲದ ಋತುಮಾನ. ಆ ದಿನ ಅಪರಾತ್ರಿ ಬೇರೆ. ಹೆರಿಗೆ ಕೋಣೆಯ ಹೊರಗಡೆ ಆಕಾಶವನ್ನು ಆ ಕಪ್ಪಗಿನ ಮೋಡಮೋಡಗಳು ಅದಾಗಲೇ ಆವರಿಸಿಬಿಟ್ಟಿದ್ದವು. ನೋಡ ನೋಡುತ್ತಿದ್ದಂತೆಯೇ ವಿಪರೀತ ಮಿಂಚು, ಗುಡುಗು ಮತ್ತು ಸಿಡಿಲಿನ ಆರ್ಭಟ ಹೆಚ್ಚಾಗಿ ಬಿಟ್ಟಿತ್ತು. ತುಂಬು ಗರ್ಭಿಣಿಯಾಗಿದ್ದ ಜ್ಯೂಕಾ ಮೆಂಡಿಕ್‌ಗೆ ಹೆರಿಗೆ ಮಾಡಿಸಲು ಬಂದಿದ್ದ ದಾದಿ ಹೊರಗಿನ ಮಿಂಚು, ಗುಡುಗು, ಸಿಡಿಲುಗಳ ಆರ್ಭಟ ನೋಡಿ, ಹುಡುಗನ ಜನನ ಕಾಲ ಸರಿಯಿಲ್ಲ ಎಂದಳಂತೆ.

ಆದರೆ, ತಾಯಿಗೆ ಮಗನ ಆ ಮುದ್ದು ಮುಖ ನೋಡಿ ಖುಷಿಯೋ ಖುಷಿ, ಹಾಗೇನು ಇಲ್ಲ, ನನ್ನ ಮಗನ ಜನನ ಶುಭಕಾಲದ ಆಗಿದೆ ಎಂದಿದ್ದಳಂತೆ ಜ್ಯೂಕಾ.
ಅಷ್ಟೇನು ವಿದ್ಯಾಭ್ಯಾಸಮಾಡಿರದ ಟೆಸ್ಲಾನ ತಾಯಿ, ಜ್ಯೂಕಾ ಮೆಂಡಿಕ್, ಆಲಸಿ ಹೆಣ್ಣುಮಗಳಲ್ಲ. ಮನೆಯಲ್ಲಿ ಸದಾ, ಲವಲವಿಕೆಯಿಂದಿರುತ್ತಿದ್ದ ಈಕೆ, ರುಚಿರುಚಿ ಯಾದ ಅಡುಗೆ ಮಾಡುವುದರ ಜತೆಗೆ ಮನೆಯಲ್ಲಿ ಸಣ್ಣ – ಪುಟ್ಟ ಉಪಕರಣಗಳನ್ನು ತಯಾರಿಸುತ್ತಿದ್ದಳು. ತಾಯಿಯ ಈ ಅನ್ವೇಷಕ ಗುಣವೇ ನಿಕೋಲ ಟೆಸ್ಲಾನಿಗೆ ಪ್ರೇರಣೆಯಾಗಿತ್ತು. ೧೮೮೨ರಲ್ಲಿ ಟೆಸ್ಲಾ, ಪ್ಯಾರಿಸ್‌ನಲ್ಲಿ ‘ ಕಾಂಟಿನೆಂಟಲ್ ಎಡಿಸನ್’ ಕಂಪನಿಯಲ್ಲಿ ಕೆಲಸ ಮಾಡುತ್ತಾ, ಕಂಪನಿಯ ಕೆಲಸದ ಅವಧಿ ಮುಗಿದ ಮೇಲೆ, ಸಂಜೆ ಹಾಗೂ ರಾತ್ರಿಯ ಸಮಯದಲ್ಲಿ’ ಇಂಡಕ್ಷನ್ ಮೋಟಾರ್’ ವಿನ್ಯಾಸಗೊಳಿಸುತ್ತಿದ್ದರು.

ಜೇಬಿನಲ್ಲಿ ನಾಲ್ಕು ಸೇಂಟ್ ಬೆಲೆಯ ಹಣ ಮತ್ತು ಸ್ವರಚಿತ ಕೆಲವು ಕವನಗಳ ಕಾಗದದ ತುಂಡುಗಳೊಂದಿಗೆ 1884ರಲ್ಲಿ, ನ್ಯೂಯಾರ್ಕ್ ಪಟ್ಟಣಕ್ಕೆ ಬಂದಿಳಿದ ನಿಕೋಲ ಟೆಸ್ಲಾ, ಅಂಥ ಬೃಹದಾಕಾರಾದ ಪಟ್ಟಣದಲ್ಲಿ ಕೆಲಸಕ್ಕಾಗಿ ಅಲೆದು, ಕೊನೆಗೆ ಕೆಲಸಗಿಟ್ಟಿಸಿಕೊಳ್ಳುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಕೃಷಿ ವಿಜ್ಞಾನಿ ಟಿ.ಚೆನ್ನೇಶ್ ಅವರು ವಿಭಿನ್ನ, ವಿಕ್ಷಿಪ್ತ ಮನಸ್ಸಿನ ವಿಜ್ಞಾನಿ ನಿಕೋಲ ಟೆಸ್ಲಾ ಬಗ್ಗೆ ಹೀಗೆ ಬರೆಯುತ್ತಾರೆ. ನೂರಾರು ಕಿ.ಮೀಗಳಿಂದ ನಿಮ್ಮ ಮನೆಗೆ ಕರೆಂಟು
ಪ್ರವಹಿಸುತ್ತಿದ್ದರೆ, ನಿಮ್ಮ ಮನೆಗಳ ಮೋಟಾರು ಪಂಪು ನೀರೆತ್ತುತ್ತಿದ್ದರೆ, ಫ್ಯಾನು ತಿರುಗುತ್ತಿದ್ದರೆ, ಎಕ್ಸ್ರೇಯನ್ನು ಚಿತ್ರವಾಗಿ ಪಡೆಯಲು ಸಾಧ್ಯವಾಗಿದ್ದರೆ ಅದಕ್ಕೆ ಕಾರಣರಾದ ವ್ಯಕ್ತಿಯ ಹೆಸರು ನಿಕೊಲ ಟೆಸ್ಲಾ. ಶಾಲಾ ಬಾಲಕನಾಗಿದ್ದಾಗ ನಯಾಗಾರ ಜಲಪಾತದೊಳಗೆ ದೊಡ್ಡದೊಂದು ಚಕ್ರ ತಿರುಗುವಂತೆ ಕಲ್ಪಿಸಿಕೊಂಡು, ಮುಂದೆ 30 ವರ್ಷಗಳ ನಂತರ ಅದನ್ನು ಸಾಧ್ಯಮಾಡಿ ಆಲ್ಟರ್ನೇಟ್ ವಿದ್ಯುತ್ತನ್ನು (ಎ.ಸಿ) ಉತ್ಪಾದಿಸಿದ ಮಾಂತ್ರಿಕ ಅನ್ವೇಷಕ ನಿಕೊಲ ಟೆಸ್ಲಾ.

ಥಾಮಸ್ ಎಡಿಸನ್ ವಿದ್ಯುತ್ ಕಂಡುಹಿಡಿದರು, ನಿಜ. ಇಂಥ ಎಡಿಸನ್‌ನಿಂದಲೇ ಎಷ್ಟೋ ಸಾರಿ ಅವಮಾನಕ್ಕೆ ಒಳಗಾದ ಟೆಸ್ಲಾ, ಯಾವಕಾಲಕ್ಕೂ ತನ್ನ ಸಂಶೋಧನೆಯಲ್ಲಿ ಎದೆಗುಂದದ ವ್ಯಕ್ತಿ. ಥಾಮಸ್ ಅಲ್ವಾ ಎಡಿಸನ್ ಕಂಡು ಹಿಡಿದದ್ದು ನೇರ ವಿದ್ಯುತ್ ( ಡೈರೆಕ್ಟ್ ಕರೆಂಟ್). ಅದನ್ನು ಹೆಚ್ಚು ದೂರ ಸಾಗಿಸ ಲಾಗದು. ಅದಕ್ಕೆ ಪರ್ಯಾಯವಾದ ವಿದ್ಯುತ್ ನೂರಾರು ಕಿ.ಮೀ ದೂರಕ್ಕೂ ಸಾಗಿಸಬಲ್ಲ ವಿದ್ಯುತ್ ಆಲ್ಟರ್ನೇಟ್ ಅಥವಾ ಪರ್ಯಾಯ ವಿದ್ಯುತ್ ಅನ್ನು ಕಂಡು ಹಿಡಿದು, ಅದನ್ನು ಜಲವಿದ್ಯುತ್ ಟರ್ಬೈನ್‌ಗಳಿಂದ ಪಡೆಯುವ ಪೇಟೆಂಟ್ ಅನ್ನೂ ಗಳಿಸಿದ ಅನ್ವೇಷಕ ನಿಕೊಲಾ ಟೆಸ್ಲಾ. ಆತ ಗಳಿಸಿದ ಪೇಟೆಂಟುಗಳ ಸಂಖ್ಯೆ ಒಂದೆರಡಲ್ಲ ಮುನ್ನೂರಕ್ಕೂ ಹೆಚ್ಚು!

ವೈರ್ಲೆಸ್ ಪರಿಕಲ್ಪನೆಯನ್ನು ಮೊಟ್ಟ ಮೊದಲು ಆಲೋಚಿಸಿದಾತ ಟೆಸ್ಲಾ. ಇಂಡಕ್ಷನ್ ಮೋಟಾರು, ಟೆಸ್ಲಾ ಕಾಯ್ಲ, ಆಧುನಿಕ ನಿಯಾನ್ ಲೈಟಿಂಗ್, ಗುರಿಹೊಂದಿದ ಮಿಸೈಲ್‌ಗಳು, ಯುದ್ಧೋಪಾಯದ ಗುರಿಯ ಸಾಧ್ಯತೆಯನ್ನೂ, ಅಷ್ಟೇ ಏಕೆ, ನೇರವಾಗಿ ಸೂರ್ಯನನ್ನೂ ಹಿಡಿದು ಜಗತ್ತಿಗೆ ಉಚಿತ ಹಾಗೂ ನಿರಂತರವಾದ ಶಕ್ತಿಯನ್ನು ಕೊಡುವ ಕನಸನ್ನು ಹೊಂದಿದಾತ ನಿಕೊಲ ಟೆಸ್ಲಾ.

ಅಮೆರಿಕದ ಖ್ಯಾತ ಜಾರ್ಜ್ ವೆಸ್ಟಿಂಗ್ ಹೌಸ್ ಎಲೆಕ್ಟ್ರಿಕಲ್ ಕಂಪನಿಯನ್ನು ಸೇರಿದಂತೆ ಅನೇಕ ಕಂಪನಿಗಳನ್ನು ಬಿಲಿಯನ್ ಡಾಲರ್ ಕಂಪನಿಗಳಾಗಿಸಿ ಅಕ್ಷರಶಃ ಅಮೆರಿಕಾದ ಅಭಿವೃದ್ಧಿಯನ್ನು ನಿರ್ವಹಿಸಿದ್ದು ಟೆಸ್ಲಾ ಅನ್ವೇಷಣೆಗಳು. ಅಮೆರಿಕಾಗೆ ಬಂದು ಕೇವಲ 5-6 ವರ್ಷಗಳಲ್ಲಿ ಇಂದು ಜಗತ್ತಿನ ಅತ್ಯಂತ ಹೆಚ್ಚು ಪ್ರಮುಖ ಅನ್ವೇಷಣೆಯಾದ ಟೆಸ್ಲಾ ಕಾಯ್ಲ್. ಇದಕ್ಕೆ ಪೆಟೆಂಟ್ ಪಡೆದಿದ್ದರು. ನ್ಯೂಯಾರ್ಕ್‌ನಲ್ಲಿರುವ ‘ಎಡಿಸನ್ ಮೆಷಿನ್ ವರ್ಕ್ಸ್’ ಸಂಸ್ಥೆಯಲ್ಲಿ ಕೆಲಸಮಾಡುತ್ತಿದ್ದ ಟೆಸ್ಲಾನಿಗೆ, ಕರೆಂಟ್ ಪ್ರವಾಹದಲ್ಲಿ ‘ಏನೋ ಸರಿಯಿಲ್ಲ’ ಎಂದನಿಸಿತು. ಅಂದರೆ ರಸ್ತೆಯ ಪಕ್ಕೆಲಗಳಲ್ಲಿ ಅಳವಡಿಸುತ್ತಿದ್ದ ಡೈರೆಕ್ಟ್ ಕರೆಂಟ್ (ಡಿ.ಸಿ) ವಿದ್ಯುತ್ ದೀಪಗಳನ್ನು ಅಳವಡಿಸುವ ವಿಧಾನ ಅವೈಜ್ಞಾನಿಕ ಮತ್ತು ವೆಚ್ಚದಾಯಕವಾಗಿದೆ ಎನ್ನುವ ವಿಚಾರ.

ಇದನ್ನು ಮನಗಂಡ ಟೆಸ್ಲಾ, ಕಂಪನಿಯ ಮಾಲೀಕ ಥಾಮಸ್ ಅಲ್ವಾ ಎಡಿಸನ್‌ಗೆ ನೇರವಾಗಿ ಹೇಳಿದ್ದರು, ‘ಸ್ವಾಮಿ, ನೀವು ಬೀದಿದೀಪಗಳಿಗೆ ಅಳವಡಿಸುತ್ತಿರುವ ಡಿ.ಸಿ ಸರಿಯಾದ ಕ್ರಮವಲ್ಲ’. ಹೀಗೆ ಸೈದ್ಧಾಂತಿಕವಾಗಿ ಟೆಸ್ಲಾ ಮತ್ತು ಎಡಿಸನ್ ನಡುವೆ ಸಣ್ಣ ಪ್ರಮಾಣದ ಶೀತಲ ಸಮರ ಶುರುವಾಗಿದ್ದಿತು. ಇದು ತಾರಕಕ್ಕೆ ಹೋಗಿ 1885ರಲ್ಲಿ ಟೆಸ್ಲಾ, ಎಡಿಸನ್ ಅವರ ಕಂಪನಿಯನ್ನು ತೊರೆಯಬೇಕಾಯಿತು. ಮುಂದೆ ಟೆಸ್ಲಾ, ‘ಟೆಸ್ಲಾ ಎಲೆಕ್ಟ್ರಿಕ್ ಆಂಡ್ ಮೆನುಫ್ಯಾಕ್ಚರಿಂಗ್’ ಎಂಬ ಹೊಸ ಕಂಪನಿಯನ್ನು ತೆರೆದು ಎ.ಸಿ (ಪರ್ಯಾಯ ವಿದ್ಯುತ್) ವಿದ್ಯುತ್ ಶಕ್ತಿ ಪೇಟೆಂಟ್‌ಗೆ ಅರ್ಜಿಯನ್ನು ಸಲ್ಲಿಸಿದರು. ಇದರಿಂದ ನ್ಯೂಯಾರ್ಕ್ ನಗರಕ್ಕೆ ವಿದ್ಯುತ್ ಶಕ್ತಿ ಯನ್ನು ಒದಗಿಸುವುದು ಮಾತ್ರವಲ್ಲ.

ಕೈಗಾರಿಕೋದ್ಯಮಕ್ಕೆ ಎ.ಸಿ ವಿದ್ಯುತ್ ಪರಿಚಯಿಸಿದರು. ಈ ವಿದ್ಯುತ್ ಕಡಿಮೆ ಬೆಲೆಗೆ ದೊರಕಲು ಶುರುವಾಯಿತು. ದೂರದೂರದ ಊರುಗಳಿಗೆ ಯಾವ ಅಡೆತಡೆ ಗಳಿಲ್ಲದೆ ವಿದ್ಯುತ್ ಪ್ರವಾಹ ತಂತುಗಳಲ್ಲಿ ಹರಿಯಲು ಪ್ರಾರಂಭವಾಯಿತು. ಇದರಿಂದ ಟೆಸ್ಲಾನ ಕಂಪನಿ ಲಾಭಗಳಿಸಿದ್ದಲ್ಲದೇ, ಎಡಿಸನ್ ಅವರ ಕಂಪನಿಗೆ ದೊಡ್ಡ ಪೆಟ್ಟುಬಿದ್ದಂತಾಯಿತು. ಒಟ್ಟಿನಲ್ಲಿ ಈ ಇಬ್ಬರು ದಿಗ್ಗಜರ ನಡುವಿನ ಬೌದ್ಧಿಕ ಹೋರಾಟವನ್ನು ಅಮೆರಿಕದ ಜನ ‘ವಾರ್ ಆಫ್ ಕರೆಂಟ್ಸ್’ ಎಂದು ಕರೆದದ್ದಂತೂ ಸುಳ್ಳಲ್ಲ.

ನಾವೀಗ ವಿದ್ಯುತ್ ಗುಂಡಿಯನ್ನು ಒತ್ತಿದಾಗ ವಾಹಕ ತಂತಿಯಲ್ಲಿ ವಿದ್ಯುತ್ ಪ್ರವಾಹ ಉಂಟಾಗುತ್ತದೆ. ಕಾರಣ ವಿದ್ಯುತ್ ಬಲ್ಬ, ಮಿಕ್ಸಿ, ಫ್ಯಾನ್ ಮುಂತಾದವು ಚಾಲನೆಗೆ ಬರುತ್ತವೆ. ಈ ವಿದ್ಯುತ್ ಗುಂಡಿ ಒತ್ತದೇ ನಾವು ಕುಳಿತ ಜಾಗದಿಂದಲೇ ರಿಮೋಟ್ ಕಂಟ್ರೋಲ್ ಮೂಲಕ ನಿಸ್ತಂತುವಿನ ನೆರವಿನಲ್ಲಿ ವಾಹಕದಲ್ಲಿ ವಿದ್ಯುತ್ ಪ್ರವಹಿಸುವಂತೆ, ಬೇಡವಾದಾಗ ನಿಲ್ಲಿಸುವಂತೆ ಮಾಡಿದರೆ ಹೇಗಿರುತ್ತದಲ್ಲವೇ? ಈ ಆಲೋಚನೆ ಮಾಡಿ ಇದನ್ನು ಸಾಧಿಸಲು ಹೊರಟ ಜಗತ್ತಿನ ಪ್ರಪ್ರಥಮ ವ್ಯಕ್ತಿ ಎಂದರೆ ಈ ನಿಕೋಲ ಟೆಸ್ಲಾ. ಇದಕ್ಕಾಗಿ 1901ರಲ್ಲಿ ಜೆ.ಪಿ.ಮಾರ್ಗನ್‌ನ ಜತೆಗೂಡಿ ಬಂಡವಾಳ ಹಾಕಿ ಕಾರ್ಯಕ್ಕೆ ಇಳಿದರೂ, ಆ ಕೆಲಸ
ಯಶಸ್ವಿಯಾಗಲಿಲ್ಲ.

‘ವಾರ್ಡೆನ್ಕ್ಲಿ- ಟವರ್’ ಎಂಬ ಬೃಹತ್ ಘಟಕವನ್ನು ನ್ಯೂಯಾರ್ಕಿನಿಂದ 160 ಕಿ.ಮೀ ದೂರದ ದ್ವೀಪದಲ್ಲಿ ರೇಡಿಯೋ ಪ್ರಸಾರಕ್ಕಾಗಿ ಟೆಸ್ಲಾ ಸಿದ್ಧರಾದರು. ಹೆಚ್ಚಿನ ಬಂಡವಾಳಕ್ಕಾಗಿ ಮೋರ್ಗನ್ ಕಂಪನಿಯನ್ನು ಕೇಳಿದಾಗ ಒಪ್ಪಂದ ಮುರಿದುಬಿತ್ತು. ಟೆಸ್ಲಾನ ಕನಸು ಛಿದ್ರವಾಯಿತು! ರಾಸಾಯನಶಾಸದ ಪ್ರಾಧ್ಯಾಪಕರಾಗಿದ್ದ ಡಾ. ಬಡಕ್ಕಿಲ್ ಶ್ರೀಧರ ಭಟ್ಟರು, ಒಂದೆಡೆ ಟೆಸ್ಲಾನ ವಿಚಿತ್ರ ಗುಣಸ್ವಭಾವಗಳನ್ನು ಈ ರೀತಿ ಉಖಿಸುತ್ತಾರೆ. ಟೆಸ್ಲಾ, ಕೆಲವು ರೀತಿಯ ರತ್ನಗಳನ್ನು ತುಂಬಾ ಇಷ್ಟಪಡುತ್ತಿದ್ದನು, ಕೆಲವನ್ನು ದ್ವೇಷಿಸುತ್ತಿದ್ದನು. ತನ್ನ ಕಚೇರಿಯಲ್ಲಿ ಸಹಾಯಕಿಯಾಗಿ ಕೆಲಸಮಾಡುತ್ತಿದ್ದ ಮಹಿಳೆಯು, ಒಂದು ವಿಶಿಷ್ಟ ರೀತಿಯ ರತ್ನವಿದ್ದ ಆಭರಣ ಧರಿಸಿದ್ದ ಕಾರಣ ಅವಳನ್ನು ಆ ದಿನ ಮನೆಗೆ ಕಳುಹಿಸಿದ್ದ ಎಂದು ಹೇಳುತ್ತಾರೆ.

6 ಅಡಿ, 2 ಇಂಚು ಎತ್ತರದ ತೆಳುವಾದ ದೇಹ ಪ್ರಕೃತಿ ಹೊಂದಿದ್ದ ನಿಕೋಲ ಟೆಸ್ಲಾ ನೋಡಲು ಬಹಳ ಆಕರ್ಷಕವಾಗಿದ್ದ. ಡ್ರೆಸ್ಸಿಂಗ್ ಸೆನ್ಸ್ ಈತನಲ್ಲಿ ಬಹಳವೇ ಇತ್ತು. ತನ್ನ ಕೊನೆಗಾಲದವರೆಗೂ ಸುಂದರ ಪೋಷಾಕುಗಳನ್ನು ಧರಿಸುವುದನ್ನು ಮಾತ್ರ ಬಿಟ್ಟಿರಲಿಲ್ಲ. ಒಂದಷ್ಟು ಸಮಯ ಒಂದು ಹೋಟೆಲಿನಲ್ಲಿ ತಂಗಿದ್ದು, ಮತ್ತೆ ಇನ್ನೊಂದು ವಸತಿ ಗೃಹಕ್ಕೆ ವಾಸ ಬದಲಿಸುತ್ತಿದ್ದರು ಟೆಸ್ಲಾ. ಚಿಕ್ಕವನಾಗಿದ್ದಾಗ ಕಾಲರಾ ರೋಗಕ್ಕೆ ತುತ್ತಾಗಿದ್ದ ಟೆಸ್ಲಾ , ಬದುಕಿ ಉಳಿಯುವುದೇ ಸಂಶಯವಿತ್ತು. ದೊಡ್ಡವನಾದ ಮೇಲೆ ಸದಾ ಕಾಲ ರೋಗಾಣುಗಳಿಂದ ಭೀತರಾಗಿ ( ಜರ್ಮ್ ಫೋಬಿಯಾ: ಸೂಕ್ಷ್ಮ ಜೀವಿಗಳಿಂದ ತನಗೆಲ್ಲಿ ರೋಗ ಅಂಟಿಕೊಳ್ಳುತ್ತದೋ ಅಂತಾ, ಪದೇ ಪದೇ ಕೈ-ಕಾಲುಗಳನ್ನು ತೊಳೆದುಕೊಳ್ಳುವುದು.  ಹೀಗೆ ವಿಚಿತ್ರವಾಗಿ ವರ್ತಿಸುವ ಸ್ವಭಾವದ ಮಾನಸಿಕ ಕಾಯಿಲೆ ) ನೈರ್ಮಲ್ಯದ ಬಗ್ಗೆ ಒಂದು ರೀತಿಯ ’ ಭ್ರಾಂತಿಗೆ ಒಳಗಾಗಿದ್ದರು.

ಟೆಸ್ಲಾ ಹೆಚ್ಚು ನಿದ್ರೆ ಮಾಡುತ್ತಿರಲಿಲ್ಲ. ನಸುಕಿನಲ್ಲಿ 3 ಗಂಟೆಗೆ ಎದ್ದರೆ ಮುಗಿಯಿತು. ಓದು, ಸಂಶೋಧನೆಯಲ್ಲಿ ಮುಳುಗಿರುತ್ತಿದ್ದರು. ಮುಂಜಾನೆ 6 ಗಂಟೆಯಿಂದ ಸಂಜೆ 6 ಗಂ.ವರೆಗೆ ಕೆಲಸದಲ್ಲಿ ತಲ್ಲೀನರಾಗಿರುತ್ತಿದ್ದರು. ಮಧ್ಯಾಹ್ನ ಒಂದು ತಾಸು ರೆಸ್ಟ್ ಮಾಡುತ್ತಿದ್ದರು. ಟೆಸ್ಲಾರನ್ನು ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ದೇವರ ಬಗ್ಗೆ ಟೆಸ್ಲಾರಿಗೆ ಅವರದ್ದೇ ಆದ ‘ಧರ್ಮರಹಿತ’ ಕಲ್ಪನೆಗಳಿದ್ದವು. ಕವನಗಳನ್ನು ಬರೆಯುವುದೆಂದರೆ ಟೆಸ್ಲಾರಿಗೆ ಬಹಳ ಇಷ್ಟ. ಹೀಗಾಗಿ ಸಾಹಿತಿ ಮಾರ್ಕ್ ಟ್ವೆ ನ್ ಇವರಿಗೆ ಉತ್ತಮ ಸ್ನೇಹಿತನಾಗಿದ್ದನು.

ಗ್ರೇಜ್ ವಿಶ್ವವಿದ್ಯಾಲಯದಿಂದ ಡ್ರಾಪ್ ಔಟ್ ಆದ ಟೆಸ್ಲಾ ಪದವಿಗಳಿಸದೇ ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿ ತೋರಿಸಿದ. 1892ರಲ್ಲಿ ಸರ್ಬಿಯಾ ಸರಕಾರದಿಂದ ‘ಆರ್ಡರ್ ಆಫ್ ಸೇಂಟ್ ಸವಾ’, 1894ರಲ್ಲಿ ಏಲಿಯಟ್ ಕ್ರೆಸನ್ ಮೆಡಲ್, 1916ರಲ್ಲಿ ಎಡಿಸನ್ ಮೆಡಲ್ ಮುಂತಾದ ಪ್ರತಿಷ್ಠಿತ ಪ್ರಶಸ್ತಿ ಹಾಗೂ ಗೌರವಗಳಿಗೆ ಕಾರಣನಾದ ಈ ವಿಚಿತ್ರ ಸ್ವಭಾವದ ಟೆಸ್ಲಾ, 7ನೇ ಜನವರಿ 1943ರಂದು ತಮ್ಮ 86ರ ಪ್ರಾಯದಲ್ಲಿ ‘ನ್ಯೂಯೋರ್ಕರರ್ ಹೋಟೇಲ್’ನ ಕೊಠಡಿ ಸಂಖ್ಯೆ 3327ರಲ್ಲಿ ಹೃದಯಾಘಾತದಿಂದ ಬಾರದ ಲೋಕಕ್ಕೆ ಹೋದರು.

ಮರುದಿನ ಬೆಳಗಿನಜಾವ ಹೋಟೆಲ್ ರಿಸೆಪ್ಶನಿಸ್ಟ್ ಬಂದು ನೋಡಿದಾಗ ಬಾಗಿಲಲ್ಲಿ ‘Do not Disturb ’ (ತೊಂದರೆ ಕೊಡಬೇಡಿ ) ಎಂಬ ಫಲಕ
ತೂಗಾಡುತ್ತಿತ್ತು. ಇಷ್ಟೆ ಸಾಧನೆ ಮಾಡಿದ ಟೆಸ್ಲಾ, ತನ್ನ ಜೀವಿತ ಕಾಲದಲ್ಲಿ ತನಗೇ ಅಂತ ಹಣವನ್ನು ಗಳಿಸದ ಬಹುದೊಡ್ಡ ಶ್ರೀಮಂತ ಎಂದರೆ ಇವನೆ. ಮದುವೆಯಾಗದ, ಕುಟುಂಬವನ್ನೂ ಕಟ್ಟಿಕೊಳ್ಳದ, ಯಾರನ್ನೂ ಮಕ್ಕಳನ್ನಾಗಿ ಒಪ್ಪಿಕೊಳ್ಳದ, ಯಾವುದೇ ಹೆಣ್ಣಿನ ಆಕರ್ಷಣೆಗೂ ಒಳಗಾಗದ ವಿಚಿತ್ರ
ಮನಸ್ಥಿತಿಯ ಅನ್ವೇಷಕ. ವಿಚಿತ್ರವೆಂದರೆ, ಟೆಸ್ಲಾ, ಹೆಂಗಸರ ಕೂದಲುಗಳನ್ನೇ ಇಷ್ಟಪಡದ ವ್ಯಕ್ತಿ.

ಆದರೆ ನಿಸರ್ಗದ ಬಲವನ್ನು ಮಾನವ ಒಲವಿಗೆ ಒಪ್ಪಿಸುವ ಛಲಗಾರ. ಹಾಗಾಗಿ ಆತ ಬಿಟ್ಟು ಹೋಗಿರುವ ಬಹಳ ಮುಖ್ಯವಾದ ಆಸ್ತಿ ಎಂದರೆ, ಉತ್ಸಾಹ ಮತ್ತು ತಲೆಕೆಡಿಸಿಕೊಂಡು – ಹುಚ್ಚು ಹಚ್ಚಿಸಿಕೊಂಡು ಕೆಲಸ ಮಾಡುವ ಮನಸ್ಥಿತಿ.