Sunday, 15th December 2024

ಅಂದು ನಿರ್ಭಯಾ, ಇಂದು ಅಭಯಾ…

ಪ್ರಕಾಶಪಥ

ಪ್ರಕಾಶ್ ಶೇಷರಾಘವಾಚಾರ್‌

ಮಹಿಳಾ ಸುರಕ್ಷತೆಯು ರಾಜಕೀಯ ಪಕ್ಷಗಳ ನಿಲುವುಗಳನ್ವಯ ನಿರ್ಧಾರವಾಗುತ್ತಿದೆ. ಕೋಲ್ಕತ್ತಾ ವೈದ್ಯೆಯ ಅತ್ಯಾಚಾರದ ಪ್ರಕರಣವೂ ಇದಕ್ಕೆ ಹೊರ ತಲ್ಲ. ‘ಇಂಡಿಯ’ ಮೈತ್ರಿಕೂಟದ ಸದಸ್ಯ ಪಕ್ಷಗಳು ಮಮತಾರ ಬೆಂಬಲಕ್ಕೆ ನಿಂತಿವೆ. ರಾಹುಲ್ ಗಾಂಧಿ, ‘ಅಭಯಾ’ ಪ್ರಕರಣದ ನಂತರ ಕೋಲ್ಕತ್ತಾದ ದಾರಿಯನ್ನೇ ಮರೆತಿದ್ದಾರೆ. ಪಶ್ಚಿಮ ಬಂಗಾಳದ ಸಂದೇಶಖಾಲಿ ಪ್ರದೇಶದ ಕುಖ್ಯಾತ ಅಪರಾಧಿ ಷಹಜಹಾನ್ ಶೇಖ್ ಮತ್ತು ಅವನ ಸಹಚರರು ತೃಣಮೂಲ ಕಾಂಗ್ರೆಸ್ ಕಚೇರಿಗೆ ಮಹಿಳೆಯರನ್ನು ಕರೆಸಿಕೊಂಡು ಲೈಂಗಿಕ ಶೋಷಣೆ ಮಾಡುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆಯರು ಪ್ರತಿಭಟಿಸಿದಾಗ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ‘ಇದು ಪಕ್ಷದ ಹೆಸರಿಗೆ ಮಸಿ ಬಳಿಯುವ ತಂತ್ರ’ ಎಂದು ಅವರ ನೋವಿಗೆ ಸ್ಪಂದಿಸಲಿಲ್ಲ. ಇವರ ಈ ಧೋರಣೆಯೇ ಮುಂದೆ ಹಲವಾರು ಅನಾಹುತಗಳಿಗೆ ದಾರಿಯಾಯಿತು.

ಪಶ್ಚಿಮ ಬಂಗಾಳದ ೨೦೨೧ರ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ವ್ಯಾಪಕ ಹಿಂಸಾಚಾರ ನಡೆಯಿತು. ಸಂತ್ರಸ್ತ ಮಹಿಳೆಯರು ನ್ಯಾಯಾಲಯದ
ಬಾಗಿಲುತಟ್ಟಿ, ತಮ್ಮ ಮೇಲೆ ನಡೆದ ಅತ್ಯಾಚಾರ ವನ್ನು ಕಣ್ಣೀರಿಡುತ್ತಾ ವಿವರಿಸಿದರು. ಸಾಮೂಹಿಕ ಅತ್ಯಾಚಾರದ ವಿರುದ್ಧ ಸ್ವತಂತ್ರ ತನಿಖೆಗಾಗಿ
ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದರು. ಪರಿಸ್ಥಿತಿಯ ಭೀಕರತೆ ಹೇಗಿತ್ತೆಂದರೆ, ತಮ್ಮ ಆರು ವರ್ಷದ ಮೊಮ್ಮಗನ ಮುಂದೆ ತಮ್ಮ ಮೇಲೆ ಅತ್ಯಾಚಾರ ನಡೆಸಿದರೆಂದು ೬೦ ವರ್ಷದ ಮಹಿಳೆಯು ತಮ್ಮ ಘೋರ ಅನುಭವವನ್ನು ವಿವರಿಸಿದರು. ಕೋಲ್ಕತ್ತಾ ಹೈಕೋರ್ಟ್ ಆದೇಶದನ್ವಯ ೨೬ ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಸಿಬಿಐ ನಡೆಸುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರ ಮತ್ತು ಲೈಂಗಿಕ ಕಿರುಕುಳದ ಬಗ್ಗೆ ಸಿಕ್ಕಿಂ ಹೈಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಾಧೀಶ ಪ್ರಮೋದ್
ಕೊಹ್ಲಿ ಅವರ ನೇತೃತ್ವದಲ್ಲಿ ರಚಿಸಲಾದ ಸತ್ಯ ಪರಿಶೀಲನಾ ಸಮಿತಿಯು ವರದಿ ನೀಡಿದ್ದು, ೭,೦೦೦ದಷ್ಟು ಸಂಖ್ಯೆಯ ಲೈಂಗಿಕ ಕಿರುಕುಳದ ಘಟನೆಗಳು
ನಡೆದಿರುವುದನ್ನು ಅದು ದೃಢಪಡಿಸಿದೆ. ಪಶ್ಚಿಮ ಬಂಗಾಳ ಸರಕಾರವು ನಡೆಸುವ ತನಿಖೆಯಲ್ಲಿ ನಂಬಿಕೆಯಿಲ್ಲದ ಕೋಲ್ಕತ್ತಾ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್, ರಾಜ್ಯದಲ್ಲಿ ನಡೆದಿರುವ ರಾಜಕೀಯ ದುರುದ್ದೇಶದ ಹಲ್ಲೆ, ಹತ್ಯೆ, ಆಸ್ತಿಪಾಸ್ತಿ ನಾಶ ಮತ್ತು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದಂಥ ಅನೇಕ ಪ್ರಕರಣಗಳನ್ನು ಸಿಬಿಐಗೆ ವಹಿಸಿವೆ.

ಹಲವಾರು ಪ್ರಕರಣಗಳ ತನಿಖೆಯು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿಯೂ ನಡೆಯುತ್ತಿದೆ. ಹೀಗೆ ನ್ಯಾಯಾಲಯಗಳು ತಮ್ಮ ಸರಕಾರ ಇಮತ್ತು ಪೊಲೀಸ್ ವ್ಯವಸ್ಥೆಯ ಮೇಲೆ ವಿಶ್ವಾಸ ಕಳೆದುಕೊಂಡು, ಪ್ರಕರಣಗಳ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ವಹಿಸುತ್ತಿದ್ದರೂ ಮಮತಾ
ಬ್ಯಾನರ್ಜಿ ಮಾತ್ರ ಎಚ್ಚೆತ್ತುಕೊಂಡಿಲ್ಲ ಹಾಗೂ ತಪ್ಪು ತಿದ್ದಿಕೊಳ್ಳುವ ಗೋಜಿಗೆ ಹೋಗಿಲ್ಲ.

ಪಶ್ಚಿಮ ಬಂಗಾಳದಲ್ಲಿರುವ ಶೇ.೩೦ರಷ್ಟು ಪ್ರಮಾಣದ ಅಲ್ಪಸಂಖ್ಯಾತರ ಮತಗಳ ಮೇಲೆಯೇ ಮಮತಾ ಅವರು ಸದಾ ಕಣ್ಣಿಟ್ಟಿರುವುದರಿಂದ, ಅವರ ವಿರೋಧವನ್ನು ಕಟ್ಟಿಕೊಳ್ಳುವ ಸಣ್ಣ ತಪ್ಪನ್ನೂ ಮಾಡುವುದಿಲ್ಲ. ಈ ಕಾರಣಕ್ಕಾಗಿಯೇ ಷಹಜಹಾನ್ ಶೇಖ್ ಮತ್ತು ಅವನ ಸಹಚರರನ್ನು ಸಮರ್ಥಿಸಿ
ಕೊಳ್ಳಲು ಮಮತಾ ಬ್ಯಾನರ್ಜಿ ಹಿಂಜರಿಯಲಿಲ್ಲ. ಮಮತಾ ಅದೆಷ್ಟು ಬದಲಾಗಿದ್ದಾರೆಂದರೆ, ೨೦೦೨ರಲ್ಲಿ ಬಾಂಗ್ಲಾದ ಅಕ್ರಮ ನುಸುಳುಕೋರರ ವಿರುದ್ಧ ಸಂಸತ್ತಿನಲ್ಲಿ ತೀವ್ರವಾಗಿ ಪ್ರತಿಭಟಿಸಿದ್ದ ಅವರು, ೨೦೧೧ರಲ್ಲಿ ರಾಜ್ಯದಲ್ಲಿ ಅಽಕಾರಕ್ಕೆ ಬಂದ ನಂತರ ಆ ನುಸುಳುಕೋರರ ಸಂರಕ್ಷಕಿಯಾಗಿ ಬದಲಾಗಿದ್ದಾರೆ.

ಬಾಂಗ್ಲಾದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ವೇಳೆ, ‘ಬಾಂಗ್ಲಾದೇಶೀಯರು ಆಶ್ರಯ ಕೋರಿ ಬಂದರೆ ಅವರಿಗೆ ರಕ್ಷಣೆ ನೀಡುತ್ತೇನೆ’ ಎಂದು
ಘೋಷಿಸಲೂ ಅವರು ಹಿಂದೇಟು ಹಾಕಲಿಲ್ಲ. ತಮ್ಮ ಈ ನಿಲುವಿನಿಂದ ದೇಶದ ಭದ್ರತೆಗೆ ಅಪಾಯವಾಗಬಹುದು ಎಂಬುದರ ಬಗ್ಗೆ ಮಮತಾ ಅವರಿಗೆ
ಸಾಸಿವೆ ಕಾಳಿನಷ್ಟೂ ಆತಂಕವಿರಲಿಲ್ಲ. ನೆರೆದೇಶದ ನಿರಾಶ್ರಿತರನ್ನು ರಾಜ್ಯಕ್ಕೆ ಆಹ್ವಾನಿಸುವುದು ತಮ್ಮ ವ್ಯಾಪ್ತಿಗೆ ಮೀರಿದ ಸಂಗತಿ ಎಂಬುದು ಅರಿವಿದ್ದರೂ, ತಮ್ಮ ಮತಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳುವ ಉದ್ದೇಶದಿಂದ ಅವರು ಈ ಹೇಳಿಕೆ ನೀಡಿದರು. ೨೦೨೪ರ ಲೋಕಸಭಾ ಚುನಾವಣಾ ಪೂರ್ವ ಸಮೀಕ್ಷೆಗಳು ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಸಿಗಲಿದೆ ಎಂದು ಮುನ್ನುಡಿದಿದ್ದವು; ಆದರೆ ಮಮತಾ ಈ ಸಮೀಕ್ಷೆಗಳನ್ನು ತಲೆಕೆಳಗು ಮಾಡಿ, ೨೦೧೯ರಲ್ಲಿ ಬಿಜೆಪಿಯು ತಾನು ದಕ್ಕಿಸಿಕೊಂಡಿದ್ದಕ್ಕಿಂತ ಕಡಿಮೆ ಸ್ಥಾನದಲ್ಲಿ ಗೆಲ್ಲುವಂತೆ ಮಾಡಿದರು.

ಸತತವಾಗಿ ಚುನಾವಣೆಯಲ್ಲಿ ಜಯಿಸುತ್ತಿರುವ ಅವರು, ನ್ಯಾಯಾಲಯವು ತಮ್ಮ ತನಿಖಾ ಸಂಸ್ಥೆಗಳ ಮೇಲಿನ ನಂಬಿಕೆ ಕಳೆದುಕೊಂಡಿದ್ದರೂ ಸಹಜ
ವಾಗಿಯೇ ತಲೆಕೆಡಿಸಿಕೊಳ್ಳುತ್ತಿಲ್ಲ. ಅಂತಿಮವಾಗಿ, ತಮ್ಮ ಸ್ಥಾನ ಭದ್ರವಾಗಿ ಅಧಿಕಾರ ಮುಂದುವರಿಯುವುದು ರಾಜಕಾರಣಿಗಳಿಗೆ ಮುಖ್ಯವಲ್ಲವಾ!
ಸರಕಾರಿ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್ ೯ರಂದು ರಾತ್ರಿ, ಕರ್ತವ್ಯನಿರತ ವೈದ್ಯೆಯ ಮೇಲೆ ಅಮಾನುಷ ಹಲ್ಲೆಯಗಿ ಅತ್ಯಾಚಾರ ನಡೆದು ಹತ್ಯೆಯಾಯಿತು. ೨೦೧೨ರ ದೆಹಲಿಯ ‘ನಿರ್ಭಯಾ’ ಪ್ರಕರಣವನ್ನು ನೆನಪಿಸುವ ಮಾದರಿಯ ಬರ್ಬರ ಕೃತ್ಯ ನಡೆಯಿತು.

ಸರಕಾರಿ ಆಸ್ಪತ್ರೆಯ ಆವರಣದಲ್ಲಿ ನಡೆದ ಈ ಭೀಭತ್ಸ ಪ್ರಕರಣವನ್ನು ಸರಕಾರ ಹಗುರವಾಗಿ ತೆಗೆದುಕೊಂಡಿತು; ಕಾಲೇಜಿನ ಆಡಳಿತ ಮಂಡಳಿಯ
ವರು ಮತ್ತು ಕೋಲ್ಕತ್ತಾ ಪೊಲೀಸರು, ‘ಈ ವೈದ್ಯೆಯದು ಹತ್ಯೆಯಲ್ಲ, ಆತ್ಮಹತ್ಯೆ’ ಎಂದು ಬಿಂಬಿಸುವ ಮೂಲಕ ಘೋರ ಅಪಚಾರವೆಸಗಿದರು. ಮರು ದಿನ ಭುಗಿಲೆದ್ದ ವೈದ್ಯರ ಪ್ರತಿಭಟನೆ ಮಮತಾ ಸರಕಾರವನ್ನು ತಲ್ಲಣಗೊಳಿಸಿತು. ವಿದ್ಯಾರ್ಥಿಗಳ ಪ್ರತಿಭಟನೆಯ ಕಾವನ್ನು ತಣಿಸಲು ಕಾಲೇಜಿನ
ಪ್ರಿನ್ಸಿಪಾಲ್ ಸಂದೀಪ್ ಘೋಷ್‌ರನ್ನು ಕರ್ತವ್ಯದಿಂದ ಮುಕ್ತಿಗೊಳಿಸಿ, ಮತ್ತೆ ೪ ಗಂಟೆಯೊಳಗಾಗಿ ಮತ್ತೊಂದು ಸರಕಾರಿ ವೈದ್ಯಕೀಯ ಕಾಲೇಜಿನ
ಪ್ರಿನ್ಸಿಪಾಲ್ ಆಗಿ ನೇಮಕ ಮಾಡಿ ಬಹುದೊಡ್ಡ ತಪ್ಪೆಸಗಿರು.

ಇದು ಸಾಲದೆಂಬಂತೆ, ಆಗಸ್ಟ್ ೧೪ರ ರಾತ್ರಿ ಸಾವಿರಾರು ಪುಂಡಜನರು ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನ ಆವರಣಕ್ಕೆ ಏಕಾಏಕಿ ನುಗ್ಗಿ, ಮುಷ್ಕರ ನಿರತ ವೈದ್ಯರ ಮೇಲೆ ಹಲ್ಲೆ ನಡೆಸಿ ಆಸ್ಪತ್ರೆಯಲ್ಲಿ ದಾಂಧಲೆ ಎಬ್ಬಿಸಿದರು. ಸ್ಥಳದಲ್ಲಿದ್ದ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು. ಕರ್ತವ್ಯನಿರತ
ವೈದ್ಯೆಯ ಮೇಲೆ ಅತ್ಯಾಚಾರ ನಡೆದು ಹತ್ಯೆಯಾಗಿ, ಪರಿಸ್ಥಿತಿಯು ಸೂಕ್ಷ್ಮವಾಗಿದ್ದ ಸ್ಥಳದಲ್ಲಿಯೇ ಯಾವ ಭಯವಿಲ್ಲದೆ ಗೂಂಡಾಗಿರಿ ನಡೆಯಿತು. ದುರ್ದೈವ ವೆಂದರೆ, ದೇಶದ ಏಕೈಕ ಮಹಿಳಾ ಮುಖ್ಯಮಂತ್ರಿಯ ರಾಜ್ಯದಲ್ಲಿಯೇ ಮಹಿಳೆಯು ರಕ್ಷಣೆ ಗಾಗಿ ನ್ಯಾಯಾಲಯದ ಮೊರೆಹೋಗಬೇಕಾಗಿ
ಬಂದಿದೆ.

ಗಂಭೀರ ಆರೋಪಗಳನ್ನು ‘ರಾಜಕೀಯ ಪ್ರೇರಿತ’ ಎಂದು ಪದೇಪದೆ ತಳ್ಳಿಹಾಕುವ ಟಿಎಂಸಿಯ ನಿಲುವಿನಿಂದಾಗಿ, ಅತ್ಯಾಚಾರಿಗಳಿಗೆ ಮತ್ತು ಗೂಂಡಾ ಗಳಿಗೆ ಕಾನೂನಿನ ಭಯವಿಲ್ಲದಾಗಿದೆ. ಕೋಲ್ಕತ್ತಾ ವೈದ್ಯೆಯ ಹತ್ಯೆಯ ಪ್ರಕರಣದಿಂದ ರೊಚ್ಚಿಗೆದ್ದ ದೇಶಾದ್ಯಂತದ ವೈದ್ಯರು, ತಮಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿ ದೇಶವ್ಯಾಪಿ ಹೋರಾಟಕ್ಕೆ ಮುಂದಾದದರು. ಬೇಜವಾಬ್ದಾರಿಯ ಆಡಳಿತದ ಕಾರಣಕ್ಕೆ ಲಕ್ಷಾಂತರ ರೋಗಿಗಳು ಅಪಾರ
ತೊಂದರೆಗೊಳಗಾಗಬೇಕಾಯಿತು. ತಾರಕಕ್ಕೇರಿದ ಪ್ರತಿಭಟನೆಯಿಂದ ವಿಚಲಿತರಾದ ಮಮತಾ, ತಾವೇ ರಾಜ್ಯದ ಗೃಹ ಮತ್ತು ಆರೋಗ್ಯ ಖಾತೆಯ
ಸಚಿವರಾಗಿದ್ದರೂ, ತಮ್ಮ ವರ್ಚಸ್ಸಿಗೆ ಆಗಿರುವ ಧಕ್ಕೆಯನ್ನು ಸರಿಪಡಿಸಿಕೊಳ್ಳಲು ಮತ್ತು ತಮ್ಮ ವೈಫಲ್ಯಕ್ಕೆ ತೆರೆ ಎಳೆಯಲು ಆಗಸ್ಟ್ ೧೬ರಂದು ಪ್ರತಿ
ಭಟನಾ ಮೆರವಣಿಗೆಯನ್ನು ಕೈಗೊಂಡಿದ್ದರ ಜತೆಗೆ, ‘ಆಸ್ಪತ್ರೆ ಆವರಣದಲ್ಲಿ ನಡೆದ ಗಲಭೆಗೆ ಬಿಜೆಪಿ ಮತ್ತು ಎಡಪಕ್ಷಗಳೇ ಕಾರಣ’ ಎಂಬ ಆಧಾರರಹಿತ
ಆರೋಪ ಮಾಡಿದರು.

ತದನಂತರ ಮಮತಾ ಬ್ಯಾನರ್ಜಿಯವರು ಪ್ರಧಾನಿಗಳಿಗೆ ಪತ್ರ ಬರೆದು, ದೇಶದಲ್ಲಿ ಎಲ್ಲೇ ಅತ್ಯಾಚಾರ ಪ್ರಕರಣಗಳು ದಾಖಲಾದರೆ ಅದನ್ನು ೧೫ ದಿನ ದೊಳಗೆ ತನಿಖೆ ಮಾಡಿ ಶಿಕ್ಷಿಸುವ ಕಾನೂನು ತರಲು ಆಗ್ರಹಿಸಿದರು. ಕಾನೂನು ಮತ್ತು ಸುವ್ಯವಸ್ಥೆಯು ರಾಜ್ಯ ಸರಕಾರದ ಜವಾಬ್ದಾರಿ. ಮಮತಾ ಅವರು ಪ್ರಧಾನಿಯವರಿಗೆ ಹೀಗೆ ಸಲಹೆ ನೀಡುವ ಮುನ್ನ ತಮ್ಮ ರಾಜ್ಯದಲ್ಲಿಯೇ ಇದನ್ನು ಜಾರಿಗೆ ತಂದು ಇತರ ರಾಜ್ಯಗಳಿಗೆ ಮೇಲ್ಪಂಕ್ತಿ ಹಾಕಬೇಕಿತ್ತು. ಆದರೆ ಇವರದ್ದು, ವಿಷಯಾಂತರ ಮಾಡಿ ಜನರ ಆಕ್ರೋಶವನ್ನು ಕೇಂದ್ರ ಸರಕಾರದ ಕಡೆಗೆ ತಿರುಗಿಸುವ ದುರುದ್ದೇಶವಷ್ಟೇ. ಇದರ ನಡುವೆ, ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಪ್ರಕರಣದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸಿದವರ ಮೇಲೆ ಕ್ರಮ ಜರುಗಿಸಲೆಂದು ಕೋಲ್ಕತ್ತಾ ಪೊಲೀಸರು ನೋಟಿಸ್ ಕಳಿಸಲು ಆರಂಭಿಸಿದರು.

ತೃಣಮೂಲ ಕಾಂಗ್ರೆಸ್ ವಕ್ತಾರನಿಗೂ ಇದರ ಬಿಸಿ ತಟ್ಟಿತು. ಪೊಲೀಸರ ಸಹಾಯದಿಂದ ವಿರೋಧದ ದನಿಯನ್ನು ಹತ್ತಿಕ್ಕುವ ಪ್ರಯತ್ನವನ್ನು ಮಮತಾ ಬ್ಯಾನರ್ಜಿಯವರು ಇಂದಿಗೂ ಮುಂದುವರಿಸಿದ್ದಾರೆ. ಪ್ರಕರಣದ ತನಿಖೆಯನ್ನು ಕೋಲ್ಕತ್ತಾ ಹೈಕೋರ್ಟ್ ಸಿಬಿಐಗೆ ವಹಿಸಿದ ತರುವಾಯ ಸರ್ವೋಚ್ಚ ನ್ಯಾಯಾಲಯವು ಮಧ್ಯ ಪ್ರವೇಶಿಸಿ ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನ ಭದ್ರತೆಯನ್ನು ‘ಕೇಂದ್ರೀಯ ಔದ್ಯಮಿಕ ಸುರಕ್ಷಾ ಪಡೆ’ಗೆ (ಸಿಐಎಸ್‌ಎಫ್) ವಹಿಸಿದೆ. ಇದಲ್ಲದೆ, ಸಂದೀಪ್ ಘೋಷ್ ಅವರು ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದ ಅವಧಿಯಲ್ಲಿ ನಡೆದಿರುವ ಅವ್ಯವಹಾರದ ತನಿಖೆಯನ್ನು ಸಿಬಿಐಗೆ ವಹಿಸಿದೆ. ಇದರಿಂದ ರಾಜ್ಯ ಸರಕಾರಕ್ಕೆ ಬಹುದೊಡ್ಡ ಮುಖಭಂಗವಾಗಿದೆ.

ದೇಶದಲ್ಲಿ ಮಹಿಳಾ ಸುರಕ್ಷತೆಯ ವಿಷಯ ಕೂಡ ರಾಜಕೀಯ ಪಕ್ಷಗಳ ನಿಲುವುಗಳನ್ವಯ ನಿರ್ಧಾರ ವಾಗುತ್ತಿದೆ. ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ
ಮತ್ತು ಹತ್ಯೆಯ ಪ್ರಕರಣವೂ ಇದಕ್ಕೆ ಹೊರತಾಗಿಲ್ಲ. ‘ಇಂಡಿಯ’ ಮೈತ್ರಿಕೂಟದ ಸದಸ್ಯ ಪಕ್ಷಗಳು ಮಮತಾರ ಬೆಂಬಲಕ್ಕೆ ನಿಂತಿವೆ. ಬಿಜೆಪಿ ಆಡಳಿತದಲ್ಲಿ
ಅತ್ಯಾಚಾರ ನಡೆದ ಸ್ಥಳಕ್ಕೆ ಮಿಂಚಿನ ವೇಗದಲ್ಲಿ ಧಾವಿಸುವ ರಾಹುಲ್ ಗಾಂಧಿಯವರಿಗೆ, ‘ಅಭಯಾ’ ಪ್ರಕರಣದ ತರುವಾಯ ಕೋಲ್ಕತ್ತಾದ ದಾರಿಯೇ ಮರೆತುಹೋಗಿದೆ.

ಕೋಲ್ಕತ್ತಾ ಪ್ರಕರಣದಲ್ಲಿ ಬಾಯಿಬಿಡದ ‘ಇಂಡಿಯ’ ಮೈತ್ರಿಕೂಟದ ನಾಯಕರು, ಮಹಾರಾಷ್ಟ್ರದ ಠಾಣಾ ಜಿಲ್ಲೆಯ ಬದ್ಲಾಪುರದಲ್ಲಿ ಶಾಲಾ ಬಾಲಕಿ ಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ, ಕೂಡಲೇ ಆಗಸ್ಟ್ ೨೪ರಂದು ರಾಜ್ಯವ್ಯಾಪಿ ಬಂದ್‌ಗೆ ಕರೆನೀಡಿದರು. ಆದರೆ ನ್ಯಾಯಾಲಯದ ಮಧ್ಯಪ್ರವೇಶ ದಿಂದ ಬಂದ್ ರದ್ದಾಯಿತು. ಮಹಾರಾಷ್ಟ್ರದಲ್ಲಿ ಚುನಾವಣೆಯು ಹತ್ತಿರದಲ್ಲೇ ಇರುವುದರಿಂದ, ‘ಮಹಿಳಾ ಸುರಕ್ಷತೆ’ಯ ವಿಷಯವು ರಾಜಕೀಯ ಲಾಭದ ವಸ್ತುವಾಗಿದೆ. ಕೋಲ್ಕತ್ತಾ ಮತ್ತು ಬದ್ಲಾಪುರ ಘಟನೆಗಳ ವಿಷಯದಲ್ಲಿ ‘ಇಂಡಿಯ’ ಮೈತ್ರಿ ಕೂಟವು ತಳೆದ ವಿಭಿನ್ನ ನಿಲುವು, ಅದರ ಅನುಕೂಲ ಸಿಂಧು ನೀತಿಗೆ ಸಾಕ್ಷಿಯಾಗಿದೆ.

ಮಹಿಳಾ ಸುರಕ್ಷತೆ ಎಂಬುದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಮೇಲಾಟದ ವಸ್ತುವಾಗಬಾರದು. ಅತ್ಯಾಚಾರವು ಬದ್ಲಾಪುರದಲ್ಲಿ ನಡೆದರೂ ತಪ್ಪೇ, ಕೋಲ್ಕತ್ತಾದಲ್ಲಿ ನಡೆದರೂ ತಪ್ಪೇ. ಆದ್ದರಿಂದ ಮಹಿಳಾ ಸುರಕ್ಷತೆಯು ರಾಜಕೀಯ ಪಕ್ಷಗಳ ಪಾಲಿಗೆ ಮೊದಲ ಆದ್ಯತೆಯ ವಿಷಯ
ವಾಗಬೇಕಿದೆ.

(ಲೇಖಕರು ಬಿಜೆಪಿ ವಕ್ತಾರರು)