Monday, 16th September 2024

ಇದೂ ಶೆಡ್‌ನಲ್ಲೇ ಆರಂಭವಾದದ್ದು…!

ವಿದೇಶವಾಸಿ

dhyapaa@gmail.com

ಕರ್ಸನ್ ಭಾಯಿ ಪಟೇಲ್ ಅಂದರೆ ಯಾರಾದರೂ ನೆನಪಾಗುತ್ತರೆಯೇ ಅಥವಾ ಏನಾದರೂ ನೆನಪಾಗುತ್ತದೆಯೇ? ಬೇಡ, ಹೇಮಾ, ರೇಖಾ, ಜಯಾ ಮತ್ತು ಸುಷ್ಮಾ… ಈಗ ನೆನಪಾಗಿರಬಹುದು ಅಲ್ಲವೇ? ಈಗಲೂ ನೆನಪಾಗ ದಿದ್ದರೆ, ‘ನಿರ್ಮಾ… ಹಾಲಿನಂಥ ಬಿಳುಪು ನಿರ್ಮಾದಿಂದ ಬಂತು…’ ಎಂದರಂತೂ ನೆನಪಾಗೇ ಇರುತ್ತದೆ. ಸರಿಯಾಗೇ ಊಹಿಸಿದ್ದೀರಿ, ನಿರ್ಮಾ ಸಂಸ್ಥೆಯನ್ನು ಆರಂಭಿಸಿದ ಅದೇ ಕರ್ಸನ್ ಭಾಯಿ ಪಟೇಲ್.

ನನ್ನ ಹೈಸ್ಕೂಲ್ ದಿನಗಳಲ್ಲಿ ಎಂದು ನೆನಪು, ಕರ್ಸನ್ ಎಂಬ ಹೆಸರಿನ ಇಬ್ಬರು ವ್ಯಕ್ತಿಗಳ ಕುರಿತಾಗಿ ಕೇಳಿದ್ದೆ. ಇಬ್ಬರೂ ಮೂಲತಃ ಗುಜರಾತ್‌ನವರು.
ಅದರಲ್ಲಿ ಒಬ್ಬರು ಭಾರತ ಕ್ರಿಕೆಟ್ ತಂಡಕ್ಕೆ ಆಡಿದ ಕರ್ಸನ್ ಘಾವ್ರಿ. ಎಡಗೈ ವೇಗದ ಬೌಲರ್ ಘಾವ್ರಿ ಸುಮಾರು ಏಳು-ಎಂಟು ವರ್ಷ ಭಾರತ ತಂಡಕ್ಕಾಗಿ
ಆಡಿದವರು. ಎಡಗೈಯಲ್ಲಿ ಬೌಲಿಂಗ್, ಬ್ಯಾಟಿಂಗ್ ಮಾಡುತ್ತಿದ್ದ ಘಾವ್ರಿ ಉತ್ತಮ ಆಲ್ರೌಂಡರ್ ಆಗಿದ್ದರು. ಕಪಿಲ್ ದೇವ್ ಬರುವುದಕ್ಕಿಂತ ಎರಡು- ಮೂರು ವರ್ಷ ಮೊದಲೇ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಘಾವ್ರಿ, ಮೊದಲ ಎರಡು ವಿಶ್ವಕಪ್ ಆಡಿದ ಭಾರತದ ತಂಡದಲ್ಲಿದ್ದರು. ಭಾರತಕ್ಕೆ ಕೆಲವು ಪಂದ್ಯಗಳನ್ನು ಘಾವ್ರಿ ಗೆದ್ದು ಕೊಟ್ಟಿದ್ದಾರೆ.

ಭಾರತ ತಂಡಕ್ಕೆ ಕಪಿಲ್ ದೇವ್ ಸೇರಿಕೊಂಡಮೇಲೆ, ಘಾವ್ರಿ- ಕಪಿಲ್ ಜೋಡಿ ಎದುರಾಳಿ ತಂಡದ ಆರಂಭಿಕ ಆಟಗಾರರ ಶತಕದ ಜೊತೆಯಾಟ ಆಗಲು
ಬಿಡಲಿಲ್ಲ ಎಂದು ನೆನಪು. ಏಕೋ ಏನೋ, ೧೯೮೧ ರ ವರೆಗೆ ಭಾರತಕ್ಕಾಗಿ ಆಡಿದ ಘಾವ್ರಿ, ೧೯೮೩ ರ ವಿಶ್ವಕಪ್ ಗೆದ್ದ ಭಾರತದ ತಂಡದಲ್ಲಿ ಇರಲಿಲ್ಲ. ಅವರ ಬದಲು ಮದನ್ ಲಾಲ್ ಭಾರತ ತಂಡ ದಲ್ಲಿದ್ದರು. ಕರ್ಸನ್ ಘಾವ್ರಿಯ ಚಿತ್ರ ಆಗಾಗ ದಿನಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಇನ್ನೊಬ್ಬ ಕರ್ಸನ್ ಇದ್ದಾರಲ್ಲ, ಅವರ -ಟೋ ಅಲ್ಲ, ಹೆಸರೂ ದಿನಪತ್ರಿಕೆಗಳಲ್ಲಿ ಬರುತ್ತಿರಲಿಲ್ಲ.

ಇರಲಿ, ಕರ್ಸನ್ ಭಾಯಿ ಪಟೇಲ್ ವಿಷಯಕ್ಕೆ ಬರೋಣ. ನನ್ನ ಕಾಲೇಜಿನ ದಿನಗಳಲ್ಲಿ ಅಪ್ಪ ಇಬ್ಬರು ಗುಜರಾತಿಗಳ ಉದಾಹರಣೆ ಕೊಡುತ್ತಿದ್ದರು.
ಒಬ್ಬರು, ರಿಲಾಯ ಸಂಸ್ಥೆಯ ರೂವಾರಿ ಧೀರೂ ಭಾಯಿ ಅಂಬಾನಿ. ‘ಅವರು ಮೊದಲು ಸೈಕಲ್ ಮೇಲೆ ಸೀರೆ ಹೊತ್ತು ಮಾರಾಟ ಮಾಡುತ್ತಿದ್ದರಂತೆ,
ಈಗ ಎಷ್ಟು ದೊಡ್ಡದಾಗಿ ಬೆಳೆದಿದ್ದಾರೆ, ಭಾರತದ ಅತಿ ಶ್ರೀಮಂತರಲ್ಲಿ ಅವರೂ ಒಬ್ಬರಾಗಿದ್ದಾರೆ, ಮಾಡಿದರೆ ರಿಲಾಯನ್ಸ್‌ನಂಥ ಸಂಸ್ಥೆಯಲ್ಲಿ ಕೆಲಸ
ಮಾಡಬೇಕು’, ವಗೈರೆ, ವಗೈರೆ. ಅದೃಷ್ಟವಶಾತ್ ನನಗೆ ರಿಲಾಯ ಸಂಸ್ಥೆಯ ಜತೆ ನಾಲ್ಕು ವರ್ಷ ಕೆಲಸ ಮಾಡುವ ಅವಕಾಶವೂ ದೊರಕಿತು.

ಇನ್ನೊಬ್ಬರು ಕರ್ಸನ್ ಭಾಯಿ ಪಟೇಲ. ‘ಕರ್ಸನ್ ಭಾಯಿ ಕೂಡ ಸೈಕಲ್ ಮೇಲೆ ವಾಶಿಂಗ್ ಪೌಡರ್ ಹೊತ್ತುಕೊಂಡು ಮನೆ ಮನೆಗೆ ಹೋಗಿ ಮಾರಾಟ
ಮಾಡುತ್ತಿದ್ದರು. ಈಗ ನಿರ್ಮಾ ಸಂಸ್ಥೆಯನ್ನೇ ಕಟ್ಟಿದ್ದಾರೆ’. ಅಂಬಾನಿಯದ್ದಾದರೂ ಅಂದು- ಇಂದು ಫೋಟೋ ನೋಡಲು ಸಿಗುತ್ತಿತ್ತು. ಆದರೆ ಕರ್ಸನ್‌ಭಾಯಿ ಫೋಟೋ ಬಹಳ ವರ್ಷ ನಾನು ನೋಡಿಯೇ ಇರಲಿಲ್ಲ.

ಆ ದಿನಗಳಲ್ಲಿ ನಿರ್ಮಾ ವಾಶಿಂಗ್ ಪೌಡರ್ ಎರಡು ವಿಷಯಕ್ಕಾಗಿ ಸುದ್ದಿ ಮಾಡಿತ್ತು. ಒಂದು, ಅದರ ಬೆಲೆ, ಬಟ್ಟೆ ತೊಳೆಯುವ ಬೇರೆ ಸೋಪಿನ
ಪುಡಿಗಿಂತ ನಿರ್ಮಾದ ಬೆಲೆ ಬಹಳ ಕಡಿಮೆ ಇತ್ತು. ಒಂದು ಸಂದರ್ಭದಲ್ಲಿ ನಿರ್ಮಾಕ್ಕೆ ಅದೇ ಮುಳುವೂ ಆಯಿತು. ಇನ್ನೊಂದು ಅದರ ಜಾಹೀರಾತು. ಆ
ಕಾಲದಲ್ಲಿ ಚಲನಚಿತ್ರ ತಾರೆಯರನ್ನು ಬಳಸಿಕೊಂಡು ಮಾಡಿದ ‘ವಾಶಿಂಗ್ ಪೌಡರ್ ನಿರ್ಮಾ’ ಜಾಹೀರಾತು ದಶಕಗಳವರೆಗೆ ಚಾಲ್ತಿಯಲ್ಲಿತ್ತು. ಆ ಒಂದು ಜಾಹೀರಾತಿನಿಂದಾಗಿ ಮುಚ್ಚಿಹೋಗಲಿದ್ದ ನಿರ್ಮಾ ಸಂಸ್ಥೆ ಪುನಃ ಮಾರುಕಟ್ಟೆ ಪ್ರವೇಶಿಸಿತು. ಒಂದು ಕಾಲದಲ್ಲಿ ಸೈಕಲ್ ಮೇಲೆ ಡಿಟರ್ಜೆಂಟ್ ಪೌಡರ್
ಹೊತ್ತು ತಿರುಗಿದ್ದ ಕರ್ಸನ್‌ಭಾಯಿ ಪಟೇಲ್ ಇಂದು ಭಾರತದ ಅತಿ ಶ್ರೀಮಂತರಲ್ಲಿ ಒಬ್ಬರು.

-ಬ್ಸ ಸಂಸ್ಥೆಯ ಅಂಕಿ-ಅಂಶದ ಪ್ರಕಾರ ಈಗ ಎರಡು ವರ್ಷದ ಹಿಂದೆ ಕರ್ಸನ್‌ಭಾಯಿಯವರ ನಿವ್ವಳ ಆದಾಯ ಸುಮಾರು ನಲವತ್ತೆರಡು ಸಾವಿರ ಕೋಟಿ ರೂಪಾಯಿ. ಕರ್ಸನ್‌ಭಾಯಿ ಒಡೆತನದ ನಿರ್ಮಾ ಸಂಸ್ಥೆ ಗ್ರಾಹಕರಬಳಕೆಯ ಉತ್ಪನ್ನಗಳಿಗಷ್ಟೇ ಸೀಮಿತವಾಗಿರದೆ, ಶಿಕ್ಷಣ ಕ್ಷೇತ್ರದಲ್ಲೂ ತಳವೂರಿದೆ. ಮೊನ್ನೆ ಗುಜರಾತ್ ಪ್ರವಾಸದಲ್ಲಿದ್ದಾಗ ಅಹ್ಮದಾಬಾದ್ ನಲ್ಲಿರುವ ನಿರ್ಮಾ ವಿಶ್ವವಿದ್ಯಾಲಯ ಕಣ್ಣಿಗೆ ಬಿದ್ದಾಗ ನಿರ್ಮಾ ಕುರಿತಾದ ಒಂದಷ್ಟು ಹಳೆಯ ಕತೆಗಳು ಪುನಃ ನೆನಪಾದವು.

ಜತೆಗೆ ಒಂದಷ್ಟು ಹೊಸ ವಿಷಯಗಳನ್ನೂ ತಿಳಿಯುವಂತಾಯಿತು. ಕರ್ಸನ್‌ಭಾಯಿ ಖೋಡಿದಾಸ್ ಪಟೇಲ್ ಹುಟ್ಟಿದ್ದು ೧೯೪೫ ರಲ್ಲಿ. ಅವರದ್ದು ಗುಜರಾತ್ ರಾಜಧಾನಿ ಗಾಂಧಿನಗರದಿಂದ ನೂರು ಕಿಲೋಮೀಟರ್ ಉತ್ತರಕ್ಕಿರುವ ಪಾಟಣ್ ಊರಿನ ರೈತ ಕುಟುಂಬ. ಇತ್ತೀಚೆಗೆ ನನಗೆ ತಿಳಿದ ವಿಷಯ
ಏನೆಂದರೆ, ಈ ಪ್ರಾಂತ್ಯದ ಬಹುತೇಕ ಜನ ಸರಕಾರಿ ನೌಕರಿಯನ್ನಾಗಲಿ, ರೈತಾಪಿಯನ್ನಾಗಲಿ ಬಹಳ ದಿನ ಮಾಡುವುದಿಲ್ಲವಂತೆ. ಆರಂಭದಲ್ಲಿ ಕೆಲವು ವರ್ಷ ನೌಕರಿ, ನಂತರದ ಕೆಲವು ವರ್ಷ ಬಿಡುವಿನ ಸಮಯದಲ್ಲಿ ಯಾವುದಾದರೂ ವ್ಯಾಪಾರ ಆರಂಭಿಸುತ್ತಾರಂತೆ.

ಕ್ರಮೇಣ ನೌಕರಿ ಬಿಟ್ಟು ಪೂರ್ಣ ಪ್ರಮಾಣದಲ್ಲಿ ಉದ್ಯಮದ ಕಡೆಗೆ ಗಮನ ಹರಿಸುತ್ತಾರಂತೆ. ಮಾಡುವ ಒಂದೇ ಉದ್ಯಮದಲ್ಲಿ, ವ್ಯಾಪಾರದಲ್ಲಿ ನಾಲ್ಕು-ಐದು ಬಾರಿ ನಷ್ಟವಾಗುವವರೆಗೆ ಅಥವಾ ಒಂದರಲ್ಲಿ ನಷ್ಟವಾದಾಗ ಇನ್ನೊಂದರಂತೆ, ಬೇರೆ ಬೇರೆ ವ್ಯಾಪಾರ ಮಾಡಿ ಸೋತಾಗ ಪುನಃ ನೌಕರಿಗೆ ಹೋಗುತ್ತಾರಂತೆ. ಇದು ಎಷ್ಟು ಸುಳ್ಳು, ಎಷ್ಟು ಖರೆ ಗೊತ್ತಿಲ್ಲ. ಆದರೆ ಗುಜರಾತಿಗಳಲ್ಲಿ ನೌಕರಿಗಿಂತ ವ್ಯಾಪಾರದ ಹುಚ್ಚು ಹೆಚ್ಚು ಇರುವುದಂತೂ ಹೌದು. ಅದರಲ್ಲೂ ಕರ್ಸನ್‌ಭಾಯಿಯಂಥವರನ್ನು ನೋಡಿದಾಗ ಅದು ನಿಜ ಅನ್ನಿಸುತ್ತದೆ.

ರೈತರ ಕುಟುಂಬದಲ್ಲಿ ಜನಿಸಿದ ಕರ್ಸನ್‌ಭಾಯಿ ಓದಿದ್ದು ರಸಾಯನಶಾಸ್ತ್ರ. ಓದಿನ ನಂತರ ಗುಜರಾತಿನ ಭೂವೈeನಿಕ ಮತ್ತು ಗಣಿಗಾರಿಕೆ ಇಲಾಖೆ
ಯಲ್ಲಿ ಕೆಲಸಕ್ಕೆ ಸೇರಿಕೊಂಡರು. ನೌಕರಿಯಿಂದ ಸಂಬಳ ಬರುತ್ತಿತ್ತು, ಹೊಟ್ಟೆ ತುಂಬುತ್ತಿತ್ತು, ಮನಸ್ಸು ತುಂಬುತ್ತಿರಲಿಲ್ಲ. ಇನ್ನೂ ಹೆಚ್ಚಿನದನ್ನು ಸಾಧಿಸಬೇಕೆಂಬ ತುಡಿತ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಅದಕ್ಕಾಗಿ ತಮ್ಮ ಮನೆಯ ಹಿತ್ತಲಿನಲ್ಲಿರುವ ಶೆಡ್ ಅನ್ನು ಬಳಸಿಕೊಂಡರು. ಪ್ರತಿನಿತ್ಯ ಸರಕಾರಿ ಕೆಲಸ ಮುಗಿದ ನಂತರ ಆ ಶೆಡ್‌ನಲ್ಲಿಯೇ ಅವರ ಪ್ರಯೋಗ ನಡೆಯುತ್ತಿತ್ತು. ಅವರು ಕಾಲೇಜಿನಲ್ಲಿ ಓದಿದ್ದ ರಸಾಯನಶಾಸ್ತ್ರವನ್ನೇ ಆಧಾರವಾಗಿಟ್ಟು ಕೊಂಡು ಬಟ್ಟೆ ತೊಳೆಯುವ ಸಾಬೂನಿನ ಪುಡಿ ತಯಾರಿಸುವ ಪ್ರಯೋಗ ಮಾಡುತ್ತಿದ್ದರು.

ಅರವತ್ತರ ದಶಕದಲ್ಲಿ ವಾಶಿಂಗ್ ಪೌಡರ್ ಭಾರತಕ್ಕೆ ಕಾಲಿಟ್ಟಾಗಿತ್ತು. ಆ ಲೆಕ್ಕದಲ್ಲಿ ಹೇಳುವುದಾದರೆ, ಮೊದಲನೆಯ ವಿಶ್ವಯುದ್ಧದ ಸಂದರ್ಭದ
ಕಂಡುಹಿಡಿಯಲಾಗಿದ್ದ ವಾಶಿಂಗ್ ಪೌಡರ್ ಭಾರತಕ್ಕೆ ಬರಲು ಸ್ವಲ್ಪ ತಡವಾಯಿತು ಎಂದೇ ಹೇಳಬಹುದು. ಭಾರತದಲ್ಲಿ ವಿದೇಶಿ ಸಂಸ್ಥೆಗಳು ಸಾಬೂನಿನ ಪುಡಿಯನ್ನು ತಯಾರಿಸಿ ಮಾರುತ್ತಿದ್ದವು. ಆದರೆ ಅವುಗಳ ಬೆಲೆ ಸ್ವಲ್ಪ ಹೆಚ್ಚೇ ಆಗಿದ್ದರಿಂದ ಜನ ಬಟ್ಟೆ ತೊಳೆಯಲು ಪುಡಿಗಿಂತ ಇಡಿ ಸಾಬೂನನ್ನೇ ಬಳಸುತ್ತಿದ್ದರು.

ಬಟ್ಟೆ ತೊಳೆಯುವ ಸಾಬೂನಿನ ಪುಡಿಯನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಿ ಜನರು ಕೊಂಡುಕೊಳ್ಳುವಂತಾಗಬೇಕು ಎಂದು ಪ್ರಯೋಗ ಆರಂಭಿಸಿದ್ದರು ಕರ್ಸನ್‌ಭಾಯಿ. ಅದರಲ್ಲಿ ಅವರು ಯಶಸ್ವಿಯೂ ಆದರು. ಆಗ ಅವರಿಗಿನ್ನೂ ಬರೀ ಇಪ್ಪತ್ತೈದು ವರ್ಷ! ಭಾರತದ ಡಿಟರ್ಜೆಂಟ್ ಪೌಡರ್ ಮಾರುಕಟ್ಟೆ ಯಲ್ಲಿ ಸಾಕಷ್ಟು ಸದ್ದು ಮಾಡಿದ ನಿರ್ಮಾ, ಮೊದಲು ಶೆಡ್‌ನ ಆರಂಭವಾದದ್ದು! ಕರ್ಸನ್‌ಭಾಯಿ ನಿತ್ಯವೂ ಕೆಲಸಕ್ಕೆ ಹೋಗುವಾಗ ತಾವು ತಯಾರಿಸಿದ
ಪುಡಿಯನ್ನು ಸೈಕಲ್ ಮೇಲೆ ಹೇರಿಕೊಂಡು ಹೋಗುತ್ತಿದ್ದರು.

ಹೋಗುವಾಗ, ಬರುವಾಗ ಮನೆ-ಮನೆಗೆ ಹೋಗಿ ಮಾರಾಟ ಮಾಡುತ್ತಿದ್ದರು. ತಾವು ತಯಾರಿಸಿದ ಪುಡಿಯನ್ನು ಬಳಸುವಂತೆ ಮನವೊಲಿಸುತ್ತಿದ್ದರು.
ಸಮಾಧಾನವಾಗದಿದ್ದರೆ, ಹಣ ಹಿಂತಿರುಗಿಸುವುದಾಗಿ ಹೇಳುತ್ತಿದ್ದರು. ಮಾರಾಟಕ್ಕೆಂದು ಅವರು ಕೆಲಸಗಾರರನ್ನು ಇಟ್ಟುಕೊಂಡಿರಲಿಲ್ಲ. ಕೆಲಸಗಾರರಿಗೆ
ಸಂಬಳ ಕೊಡುವಷ್ಟು ಅವರ ಬಳಿ ಹಣವೂ ಇರುತ್ತಿರಲಿಲ್ಲ. ಸರಿಯಾದ ಒಂದು ಸ್ಥಳಕ್ಕೆ ಬಾಡಿಗೆ ಕೊಡಲಾಗದೆ ಶೆಡ್‌ನಲ್ಲಿಯೇ ಪ್ರಯೋಗ, ತಯಾರಿಕೆ ಎಲ್ಲ ನಡೆಯುತ್ತಿರುವಾಗ ಸಂಬಳ ಎಲ್ಲಿಂದ ಕೊಡುವುದು? ಅದೂ ಅಲ್ಲದೆ, ಅಲ್ಲಿಯವರೆಗೂ ಶ್ರೀಮಂತರೆಂದು ಕರೆಸಿಕೊಂಡವರು ಮಾತ್ರ ಖರೀದಿ
ಸುತ್ತಿದ್ದ ಪುಡಿಯನ್ನು ಬಡವರೂ, ಸಾಮಾನ್ಯವರ್ಗದವರೂ ಕೊಳ್ಳುವಂತಾಗಲು, ಉಳಿದ ಪೌಡರ್ ಗಿಂತ ಕಮ್ಮಿ ಬೆಲೆಗೆ ತಮ್ಮ ಪುಡಿಯನ್ನು ಮಾರುತ್ತಿ
ದ್ದರು.

ಆ ಕಾಲದಲ್ಲಿ ಒಂದು ಕಿಲೋ ಸರ್ಫ್ ಎಕ್ಸೆಲ್ ಪುಡಿಗೆ ಹದಿನಾಲ್ಕು ರೂಪಾಯಿ ಇದ್ದರೆ, ಕರ್ಸನ್ ಭಾಯಿ ತಾವು ತಯಾರಿಸಿದ ಪುಡಿಯನ್ನು ಮೂರು
ರೂಪಾಯಿಗೆ ಮಾರುತ್ತಿದ್ದರು. ದಿನದಿಂದ ದಿನಕ್ಕೆ ನಿರ್ಮಾಕ್ಕೆ ಗ್ರಾಹಕರ ಸಂಖ್ಯೆ ಹೆಚ್ಚಾಯಿತು. ಕರ್ಸನ್ ಭಾಯಿ ಅಹ್ಮದಾಬಾದ್‌ನಲ್ಲಿ ಒಂದು ಅಂಗಡಿ ಬಾಡಿಗೆಗೆ ಪಡೆದು ಅಲ್ಲಿ ತಮ್ಮ ವ್ಯಾಪಾರ ಆರಂಭಿಸಿದ್ದರು. ತಮ್ಮ ಸರಕಾರಿ ನೌಕರಿಗೆ ತಿಲಾಂಜಲಿ ಇಟ್ಟಿದ್ದರು. ‘ನಿರ್ಮಾ’ ಕರ್ಸನ್‌ಭಾಯಿಯವರ ಮಗಳ
ಹೆಸರು ಎಂದು ನಿಮಗೆ ತಿಳಿದಿರಬಹುದು. ತಮ್ಮ ಮುದ್ದಿನ ಮಗಳು ನಿರುಪಮಾಳನ್ನು ಪ್ರೀತಿಯಿಂದ ‘ನಿರ್ಮಾ’ ಎಂದು ಕರೆಯುತ್ತಿದ್ದರು. ನಿರ್ಮಾ ಶಾಲೆಯಿಂದ ಹಿಂದಿರುಗುವಾಗ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಳು.

ಮಗಳ ನೆನಪಿಗಾಗಿ ಕರ್ಸನ್ ಭಾಯಿ ತಮ್ಮ ಸಂಸ್ಥೆಗೆ ಅಂದು ‘ನಿರ್ಮಾ’ ಎಂದು ಹೆಸರಿಟ್ಟಿದ್ದರು. ನೀವು ಗಮನಿಸಿರಬಹುದು, ನಿರ್ಮಾದ ತಯಾರಿಕೆ, ತಂತ್ರeನ, ಜಾಹೀರಾತು, ಬೆಲೆ, ಎಲ್ಲವೂ ಕಾಲಕ್ಕೆ ತಕ್ಕಂತೆ ಬದಲಾದರೂ, ನಿರ್ಮಾ ಪ್ಯಾಕೆಟ್ ಮೇಲಿರುವ, ಬಿಳಿ ಫ್ರಾಕ್ ತೊಟ್ಟ ಹೆಣ್ಣುಮಗಳ ಚಿತ್ರ ಮಾತ್ರ ಇದುವರೆಗೂ ಬದಲಾಗಲಿಲ್ಲ. ಉಳಿದವರಿಗೆ ಅದು ಒಂದು ಸಾಮಾನ್ಯ ಚಿತ್ರವಾಗಿ ಕಂಡರೂ ಕರ್ಸನ್‌ಭಾಯಿಗೆ ಅದು ಮಗಳು ನಿರ್ಮಾಳ ಆತ್ಮ.

ಕರ್ಸನ್‌ಭಾಯಿಗೆ ಅಹ್ಮದಾಬಾದ್ ಅಂಗಡಿಯಲ್ಲಿ ವ್ಯಾಪಾರ ಚೆನ್ನಾಗಿ ಆಗುತ್ತಿತ್ತು. ಅವರು ಬೇರೆ ಪ್ರದೇಶಗಳಿಗೂ ತಮ್ಮ ವ್ಯಾಪಾರವನ್ನು ವಿಸ್ತರಿಸಿದರು. ಕೆಲವೇ ತಿಂಗಳಿನಲ್ಲಿ ನಿರ್ಮಾ ರಾಷ್ಟ್ರವ್ಯಾಪಿಯಾಯಿತು, ಜನಪ್ರಿಯವೂ ಆಯಿತು. ಜತೆಗೆ, ಸಂಸ್ಥೆಗೆ ನಷ್ಟವೂ ಆಗತೊಡಗಿತು. ಕಡಿಮೆ ಬೆಲೆಯಾಗಿದ್ದ ಕಾರಣ ಜನ ಖರೀದಿಸುತ್ತಿದ್ದರು. ಆದರೆ ಅಂಗಡಿಯವರು ಸಂಸ್ಥೆಗೆ ಹಣ ಪಾವತಿಸುತ್ತಿರಲಿಲ್ಲ. ಸಂದರ್ಭ ಹೇಗೆ ಬದಲಾಯಿತು ಎಂದರೆ, ಕಂಪನಿ ದಿವಾಳಿಯ ಅಂಚಿಗೆ ತಲುಪಿತು. ಆಗ ಕರ್ಸನ್‌ಭಾಯಿ ಅಂಗಡಿಯಲ್ಲಿ ಉಳಿದ ನಿರ್ಮಾದ ಸಾಮಾನುಗಳನ್ನೆಲ್ಲ ಹಿಂದೆ ಪಡೆದು, ತಮ್ಮ ಗೋದಾಮಿ ನಲ್ಲಿರಿಸಿಕೊಂಡರು. ಆಗ ಅವರ ತಲೆಗೆ ಹೊಳೆದದ್ದು ಜಾಹೀರಾತು. ಕೂಡಲೇ ಒಂದು ಜಾಹೀರಾತು ತಯಾರಿಸಿ ಸುಮಾರು ಎರಡು ತಿಂಗಳು ಟಿವಿಯಲ್ಲಿ ಓಡಿಸಿದರು. ಅದೇ ‘ಹೇಮಾ, ರೇಖಾ, ಜಯಾ ಮತ್ತು ಸುಷ್ಮಾ…’ ಜಾಹೀರಾತು. ಆ ಜಾಹೀರಾತು ಎಷ್ಟು ಜನಪ್ರಿಯವಾಯಿತೆಂದರೆ, ಗ್ರಾಹಕರು ಅಂಗಡಿಗೆ ಬಂದು ನಿರ್ಮಾ ಪೌಡರ್ ಬೇಕು ಎಂದು ಗಂಟುಬಿದ್ದರು. ಅಂಗಡಿಯವರು ನಿರ್ಮಾ ಸಂಸ್ಥೆಯನ್ನು ಸಂಪರ್ಕಿಸಿದಾಗ, ಕರ್ಸನ್ ಭಾಯಿ ಮುಂಗಡ ಹಣ ನೀಡುವಂತೆ ಕೇಳಿದರು. ಬಾಕಿ ಇಡುತ್ತಿದ್ದ ಅಂಗಡಿಕಾರರು ಮುಂಗಡ ನೀಡಿ ನಿರ್ಮಾ ಪೌಡರ್ ಕೊಳ್ಳುವಂತಾಯಿತು.

ನಿರ್ಮಾ ಬಟ್ಟೆ ತೊಳೆಯುವ ಸಾಬೂನು, ಸ್ನಾನದ ಸಾಬೂನು, ಶಾಂಪೂ, ಟೂತ್‌ಪೇ, ಪಾತ್ರೆ ತೊಳೆಯಲು ಬಳಸುವ ಸಾಮಾನು, ಉಪ್ಪು ಇತ್ಯಾದಿ ಬೇರೆ ಉತ್ಪನ್ನಗಳನ್ನೂ ತಯಾರಿಸಲು ಆರಂಭಿಸಿತ್ತು. ತೊಂಬತ್ತರ ದಶಕದಲ್ಲಿ ನಿರ್ಮಾ ಕಾರ್ಖಾನೆಯಲ್ಲಿ ಹೆಚ್ಚು ಉತ್ಪನ್ನಗಳು ತಯಾರಾಗುತ್ತಿದ್ದವು. ನೋಡು
ತ್ತಿದ್ದಂತೆಯೇ ಸಂಸ್ಥೆಯಲ್ಲಿ ನೌಕರರ ಸಂಖ್ಯೆ ಹದಿನೈದು ಸಾವಿರ ತಲುಪಿತ್ತು. ಒಂದು ಸಮಯದಲ್ಲಿ ನಿರ್ಮಾ ವರ್ಷಕ್ಕೆ ಒಂದೂಮುಕ್ಕಾಲರಿಂದ ಎರಡು ಲಕ್ಷ ಟನ್ ವಾಶಿಂಗ್ ಪೌಡರ್ ಉತ್ಪಾದಿಸುತ್ತಿತ್ತು. ಇವುಗಳಲ್ಲಿ ‘ಸೌಂದರ್ಯ ಸಾಬೂನ್’ ಮಾರುಕಟ್ಟೆಯಲ್ಲಿ ತಕ್ಕ ಮಟ್ಟಿಗೆ ಓಡಿತು.

ಆದರೆ ಪೇ, ಶಾಂಪೂ ಬಹಳದಿನ ನಡೆಯಲಿಲ್ಲ. ಆಗ ಹಿಂದುಸ್ತಾನ್ ಯುನಿಲಿವರ್ ಸಂಸ್ಥೆಯ ವ್ಹೀಲ್ ಮತ್ತು ಆರ್‌ಎಸ್‌ಪಿಎಲ್ ಸಂಸ್ಥೆಯ ಘಡಿ
ಡಿಟರ್ಜೆಂಟ್ ಪೌಡರ್ ಮಾರುಕಟ್ಟೆಗೆ ಬಂದವು. ನಿರ್ಮಾಕ್ಕೆ ಪೈಪೋಟಿ ನೀಡಲೆಂದೇ ಮಾರುಕಟ್ಟೆಗೆ ಬಂದ ಇವುಗಳ ಬೆಲೆಯೂ ಕಡಿಮೆ ಇತ್ತು. ಇವು
ನಿರ್ಮಾದ ಮಾರುಕಟ್ಟೆಯನ್ನು ತಿಂದುಹಾಕಿದವು. ಸದ್ಯ ನಿರ್ಮಾ ಭಾರತದ ಮಾರುಕಟ್ಟೆಯ ಹತ್ತು ಪ್ರತಿಶತಕ್ಕೂ ಕಮ್ಮಿ ಇದೆ. ಹಾಗಾದರೆ ಕರ್ಸನ್‌ ಭಾಯಿ ಈಗಲೂ ಶ್ರೀಮಂತರಾಗೇ ಇರುವುದು ಹೇಗೆ? ಕರ್ಸನ್‌ಭಾಯಿ ಪಕ್ಕಾ ಗುಜರಾತಿ. ಅವರು ನಿರ್ಮಾ ಡಿಟರ್ಜೆಂಟ್ ಒಂದನ್ನೇ ನಂಬಿಕೊಂಡು ಕುಳಿತುಕೊಳ್ಳಲಿಲ್ಲ. ನಿರ್ಮಾ ಸಿಮೆಂಟ, ನಿರ್ಮಾ ಶಿಕ್ಷಣ ಸಂಸ್ಥೆ ಇತ್ಯಾದಿಗಳನ್ನು ಆರಂಭಿಸಿದರು.

ನಿರ್ಮಾ ತಾಂತ್ರಿಕ ವಿದ್ಯಾಲಯ, ಕಾನೂನು ವಿದ್ಯಾಲಯಗಳೆಲ್ಲ ಗುಜರಾತ್‌ನಲ್ಲಿ ಸಾಕಷ್ಟು ಹೆಸರು ಮಾಡಿವೆ. ಕರ್ಸನ್‌ಭಾಯಿಗೆ ಈಗ ಕೇವಲ ಎಪ್ಪತ್ತೊಂಬತ್ತು ವರ್ಷ ಅಷ್ಟೇ. ನಿರ್ಮಾ ಭಾರತದ ಮಾರುಕಟ್ಟೆಯನ್ನು ಇನ್ನೊಮ್ಮೆ ಆವರಿಸಿಕೊಳ್ಳುವುದಕ್ಕೆ ಈಗಲೂ ಅವಕಾಶವಿದೆ! ಅದಿಲ್ಲ ವಾದರೂ, ಹೇಗೆ ಶ್ರಮಪಡಬೇಕು, ವ್ಯಾಪಾರದ ಪಟ್ಟುಗಳನ್ನು ಹೇಗೆ ಬಳಸಬೇಕು ಎಂದು ಕರ್ಸನ್‌ಭಾಯಿ ತೋರಿಸಿಕೊಟ್ಟ ಉದಾಹರಣೆಯಂತೂ ಇದೆ.

Leave a Reply

Your email address will not be published. Required fields are marked *