Sunday, 15th December 2024

ಹೆಗಡೆ ನಂತರ ರಾಜ್ಯದ ಯಾವ ಸಿಎಂ ಕೂಡ ಲಂಡನ್‌ಗೆ ಹೋಗಿಲ್ಲ !

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ, ಲಂಡನ್‌ಗೆ ಭೇಟಿ ನೀಡಿದ್ದೇ ಕೊನೆಯಂತೆ. ಆನಂತರ ರಾಜ್ಯದ ಯಾವ ಮುಖ್ಯ ಮಂತ್ರಿಯೂ ಅಧಿಕಾರದಲ್ಲಿದ್ದಾಗ, ಲಂಡನ್‌ಗೆ ಭೇಟಿ ನೀಡಿಲ್ಲವಂತೆ. ಹೆಗಡೆಯವರ ನಂತರ, ಮೂವತ್ತೈದು ವರ್ಷಗಳ ನಂತರ ಕರ್ನಾಟಕದ ಮುಖ್ಯಮಂತ್ರಿಯೊಬ್ಬರು ಲಂಡನ್‌ಗೆ ಹೋಗುತ್ತಿದ್ದಾರಂತೆ!

ಮುಖ್ಯಮಂತ್ರಿಗಳಾದವರು ಕನಿಷ್ಠ ಆರು ತಿಂಗಳುಗಳಿಗೊಮ್ಮೆ ವಿದೇಶ ಪ್ರಯಾಣ ಮಾಡಬೇಕು ಎಂದು ನಾನು ಆಗಾಗ ಹೇಳುತ್ತಲೇ ಬಂದಿದ್ದೇನೆ. ಮುಖ್ಯಮಂತ್ರಿ ಗಳಾದವರು ವಿದೇಶ ಪ್ರವಾಸ ಮಾಡಿದರೆ, ಅವರು ಮಜಾ ಮಾಡಲು ಹೋಗುವುದಿಲ್ಲ. ಅಷ್ಟು ಪ್ರಬುದ್ಧತೆ ಅವರಲ್ಲಿರುತ್ತದೆ. ಅವರ ವಿದೇಶ ಪ್ರವಾಸದಿಂದ ಖಂಡಿತವಾಗಿಯೂ ಅದರ ಪ್ರಯೋಜನ ರಾಜ್ಯಕ್ಕೆ ಆಗಿಯೇ ಆಗುತ್ತದೆ.

ವಿದೇಶಗಳಿಗೆ ಹೋಗಿ, ಸುಮ್ಮನೆ ಅಲ್ಲಿ ಒಂದು ಚಕ್ಕರ್ ಹೊಡೆದು ಬಂದರೂ ಸಾಕು, ಅದನ್ನು ಇಲ್ಲಿ ಜಾರಿಗೆ ತರುವ ಸಣ್ಣ ಪ್ರಯತ್ನ ಮಾಡಿದರೂ ಅದು ಫಲಶ್ರುತಿಯೇ. ಇನ್ನು ಅಲ್ಲಿಗೆ ಹೋದಾಗ, ಸಹಜವಾಗಿ ಬೇರೆ ಬೇರೆ ಕ್ಷೇತ್ರಗಳ ದಿಗ್ಗಜರನ್ನು ಭೇಟಿ ಮಾಡುವ, ಸಮಾಲೋಚಿಸುವ ಅವಕಾಶಗಳು ಸಿಗುತ್ತವೆ. ಇಂಥವರ ಜತೆ ಮುಖಾಮುಖಿ ಯಾಗುವುದರಿಂದ ಹೊಸ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ಅವರನ್ನು ರಾಜ್ಯದ ಅಭಿವೃದ್ಧಿಗೆ ಭಾಗೀದಾರರನ್ನಾಗಿ ಮಾಡುವ ಸಂದರ್ಭವೂ ಒದಗಿ ಬರಬ ಹುದು. ಹೀಗಾಗಿ ಮುಖ್ಯಮಂತ್ರಿಯ ಯಾವ ವಿದೇಶ ಪ್ರವಾಸವೂ ನಿಷ್ಪ್ರಯೋಜಕವಲ್ಲ, ನಿರರ್ಥಕವಲ್ಲ.

ದುರ್ದೈವದ ಸಂಗತಿಯೆಂದರೆ, ನಮ್ಮ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಮುಖ್ಯಮಂತ್ರಿಗಳಲ್ಲೂ ವಿದೇಶ ಪ್ರವಾಸದ ಬಗ್ಗೆ ವಿಚಿತ್ರ ನಿರಾಸಕ್ತಿಯಿದ್ದಂತಿದೆ. ವಿದೇಶಪ್ರವಾಸಕ್ಕೆ ಹೋದರೆ ತಮ್ಮ ವ್ಯಕ್ತಿಗತ ಇಮೇಜಿಗೆ ಧಕ್ಕೆ ಬರಬಹುದು ಎಂದು ಕೆಲವರು ಭಾವಿಸಿದ್ದುಂಟು. ಇನ್ನು ಕೆಲವರಿಗೆ ಭಾಷೆಯೇ ತೊಡಕಾಗಿ ಪರಿಣಮಿಸಿದ್ದಿರಬಹುದಾ, ಗೊತ್ತಿಲ್ಲ. ಸಾಮಾನ್ಯವಾಗಿ ಎಲ್ಲಾ ಮುಖ್ಯಮಂತ್ರಿಗಳೂ ಅಽಕೃತ ವಿದೇಶ ಪ್ರವಾಸ ಅಂದ್ರೆ ಉತ್ಸಾಹ ತೋರುವುದಿಲ್ಲ.

ವಿದೇಶಗಳಿಗೆ ಹೋಗಿ ರಾಜ್ಯವನ್ನು ಪರಿಣಾಮಕಾರಿಯಾಗಿ show case  ಮಾಡುವ ಅದ್ಭುತ ಅವಕಾಶವನ್ನು ಯಾವ ಮುಖ್ಯಮಂತ್ರಿ ಯೂ ಸಮರ್ಥವಾಗಿ ಬಳಸಿಕೊಳ್ಳದಿರುವುದು ವಿಷಾದವೇ. ವಿದೇಶಗಳಿಗೆ ಹೋದಾಗ ಸರಕಾರ ಬಿದ್ದುಹೋಗಬಹುದು ಎಂಬ ಭಯ, ಅನಿಶ್ಚಿತತೆಯಂತೂ ಇದ್ದಿರಲಿಕ್ಕಿಲ್ಲ. ಅದೇನೇ ಇರಲಿ, ವಿದೇಶಗಳಿಗೆ ಹೋಗದೇ ಮುಖ್ಯಮಂತ್ರಿಗಳಾಗಿದ್ದವರು ಸಾಧಿಸಿದ್ದಕ್ಕಿಂತ, ಕಳೆದು ಕೊಂಡಿರುವುದೇ ಹೆಚ್ಚು. ನಮ್ಮ ರಾಜ್ಯ ಅಷ್ಟರಮಟ್ಟಿಗೆ ಹಿನ್ನಡೆ ಅನುಭವಿಸಿದೆ. ನರೇಂದ್ರ ಮೋದಿ ಯವರು ಗುಜರಾತಿನ ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ಅರವತ್ತೈದಕ್ಕೂ ಹೆಚ್ಚು ದೇಶಗಳಿಗೆ ಭೇಟಿ ಕೊಟ್ಟಿದ್ದರು. ಅದರಿಂದ ಬಿಜೆಪಿಯ ಮುಖ್ಯಮಂತ್ರಿಗಳು ಪ್ರೇರಣೆ ಪಡೆದಂತಿಲ್ಲ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಭಾಗವಹಿಸಲು ದಾವೋಸ್‌ಗೆ ಈ ತಿಂಗಳ ಮೂರನೇ ವಾರ ತೆರಳಲಿzರಂತೆ. ಆದರೆ ಆ ಸಮಯದಲ್ಲಿ ಯಾವುದೇ ರಾಜಕೀಯ ವಿದ್ಯಮಾನ ಸಂಭವಿಸಬಾರದಷ್ಟೇ. ಅಂಥ ಸೂಚನೆ ಸಿಕ್ಕರೆ ಬೊಮ್ಮಾಯಿಯವರು ಆ ಪ್ರವಾಸವನ್ನೂ ರದ್ದುಪಡಿಸಬಹುದು. ದಾವೋಸ್‌ಗೆ ಹೋಗುವ ಮಾರ್ಗದಲ್ಲಿ ಮುಖ್ಯಮಂತ್ರಿಯವರು ಲಂಡನ್‌ಗೆ ಭೇಟಿ ನೀಡಲಿದ್ದಾರಂತೆ.

ಅಚ್ಚರಿಯ ಸಂಗತಿ ಏನು ಗೊತ್ತಾ?

ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ, ಲಂಡನ್‌ಗೆ ಭೇಟಿ ನೀಡಿದ್ದೇ ಕೊನೆಯಂತೆ. ಆನಂತರ ರಾಜ್ಯದ ಯಾವ ಮುಖ್ಯ ಮಂತ್ರಿಯೂ ಅಧಿಕಾರದಲ್ಲಿದ್ದಾಗ, ಲಂಡನ್‌ಗೆ ಭೇಟಿ ನೀಡಿಲ್ಲವಂತೆ. ಹೆಗಡೆಯವರ ನಂತರ, ಮೂವತ್ತೈದು ವರ್ಷಗಳ ನಂತರ ಕರ್ನಾಟಕದ ಮುಖ್ಯಮಂತ್ರಿಯೊಬ್ಬರು ಲಂಡನ್‌ಗೆ ಹೋಗುತ್ತಿದ್ದಾರಂತೆ! ಅಧಿಕಾರದಲ್ಲಿದ್ದಾಗ ಹತ್ತಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದ ಜೆ.ಎಚ್.ಪಟೇಲರು ಸಹ ಲಂಡನ್‌ಗೆ ಹೋಗಿರಲಿಲ್ಲ. ಕೃಷ್ಣ ಅವರೂ ಆ ಕಡೆ ಮುಖ ಮಾಡಲಿಲ್ಲ. ಬ್ರಿಟನ್ ನಂಥ ಪ್ರಮುಖ ದೇಶ, ಕರ್ನಾಟಕಕ್ಕೆ ಇನ್ನೂ ದೂರವಾಗಿಯೇ ಉಳಿದಿದೆ.

ಪುಸ್ತಕ ಬಿಡುಗಡೆ ಕೆಲ ಘಟನೆಗಳು

ಕಾಲೇಜೊಂದರಲ್ಲಿ ಪ್ರಾಂಶುಪಾಲರಾಗಿರುವ ಶ್ರೀನಿವಾಸಮೂರ್ತಿ ಸುಂಡ್ರಹಳ್ಳಿ ತಮ್ಮ ಗೃಹಪ್ರವೇಶಕ್ಕೆ ಶಿಡ್ಲಘಟ್ಟ ತಾಲೂಕಿನ ಸುಂಡ್ರ ಹಳ್ಳಿಗೆ ಬರಬೇಕೆಂದು ಆತ್ಮೀಯವಾಗಿ ಆಮಂತ್ರಿಸಿದ್ದರು. ಗೃಹಪ್ರವೇಶವೊಂದೇ ಆಗಿದ್ದಿದ್ದರೆ ನಾನು ಹೋಗುತ್ತಿರಲಿಲ್ಲವೇನೋ? ಆದರೆ ಅದೇ ಸಂದರ್ಭದಲ್ಲಿ, ತಾವು ಬರೆದಿರುವ ‘ಬದುಕು ಧನ್ಯೋಸ್ಮಿ’ ಎಂಬ ಪುಸ್ತಕದ ಬಿಡುಗಡೆ ಕಾರ್ಯಕ್ರಮವನ್ನೂ ಏರ್ಪಡಿಸಿರುವು ದಾಗಿ ಹೇಳಿದರು. ಆಗ ಇಲ್ಲವೆನ್ನಲಾಗಲಿಲ್ಲ. ಆ ಪ್ರಯುಕ್ತ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ.

ಗೃಹಪ್ರವೇಶ, ಮದುವೆ ಸಮಾರಂಭಗಳಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಏರ್ಪಡಿಸುವು ಹೊಸತೇನಲ್ಲದಿದ್ದರೂ, ಅದು ಅಪರೂಪವೇ. ಅದು ಅವರ ಆಸಕ್ತಿ ಮತ್ತು ಆದ್ಯತೆಯನ್ನು ತೋರಿಸುತ್ತದೆ. ಸುಂಡ್ರಹಳ್ಳಿ ತಾಲೂಕಿನ ಜಂಗಮಕೋಟೆ ಹೋಬಳಿಯ ಒಂದು ಸಣ್ಣ ಹಳ್ಳಿ. ಅಲ್ಲಿ ನಲವತ್ತು ಮನೆಗಳಿವೆ. ಆ ಊರಿನಲ್ಲಿ ಶ್ರೀನಿವಾಸಮೂರ್ತಿ ಅವರೇ ಮೊದಲ ಪದವೀಧರರು. ಎರಡನೆಯವರು ಅವರ ಪತ್ನಿ. ಆ ಹಳ್ಳಿಯಿಂದ ಅರಳಿದ ಪ್ರತಿಭೆ ಶ್ರೀನಿವಾಸಮೂರ್ತಿ ಇಂದು ತಮ್ಮ ಲೇಖನಗಳಿಂದ ಪರಿಚಿತರಾಗಿದ್ದಾರೆ.

ಅಂದ ಹಾಗೆ ಅವರ ಲೇಖನಗಳನ್ನು ಆಗಾಗ ‘ವಿಶ್ವವಾಣಿ’ಯಲ್ಲಿ ಓದಿರಬಹುದು. ಯಾರಾದರೂ ಪುಸ್ತಕ ಬಿಡುಗಡೆಗೆ ಬನ್ನಿ ಅಂದರೆ ತಕ್ಷಣ ಇಲ್ಲ ಎನ್ನಲು ಆಗುವುದಿಲ್ಲ. ಕೋವಿಡ್‌ಗಿಂತ ಮುನ್ನ, ಪುಸ್ತಕ ಬಿಡುಗಡೆ ನೆಪದಲ್ಲಿ ನಾನು ರಾಜ್ಯಾದ್ಯಂತ ಸಂಚರಿಸಿದವನು. ಇಪ್ಪತ್ತು ವರ್ಷ ಎಡಬಿಡದೇ ಪುಸ್ತಕ ಬಿಡುಗಡೆಯನ್ನೇ ನೆಪ ಮಾಡಿಕೊಂಡು ರಾಜ್ಯ ಸುತ್ತಿದವನು. ಚಾಮರಾಜನಗರದಿಂದ ಬೀದರ್ ತನಕ ಒಂದಿಂದು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡವನು. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಒಂದು ಲಾಭವೆಂದರೆ, ಆ ನೆಪದಲ್ಲಿ ಆ ಪುಸ್ತಕವನ್ನಾದರೂ ಓದಬಹುದು.

ಪುಸ್ತಕ ಹಬ್ಬಕ್ಕಾಗಿ ಬ್ರಿಟನ್‌ನ ವೇಲ್ಸ್, ಜರ್ಮನಿಯ ಫ್ರಾಂಕ್ ಫರ್ಟ್‌ಗಳನ್ನೆಲ್ಲ ಸುತ್ತಿದವನಿಗೆ, ನಮ್ಮ ರಾಜ್ಯದ ಊರುಗಳು ಯಾವ ಮಹಾ? ಸುಮಾರು ಆರೇಳು ವರ್ಷಗಳ ಹಿಂದೆ, ಆಗುಂಬೆಯ ಸನಿಹದ ಹಳ್ಳಿಯ ಮನೆಯಲ್ಲಿ ಮಿತ್ರರೊಬ್ಬರು ಪುಸ್ತಕ ಬಿಡುಗಡೆ ಸಮಾ ರಂಭ ಏರ್ಪಡಿಸಿದ್ದರು. ನಾನು ಬೆಂಗಳೂರಿನಿಂದ ‘ಉಧೋ’ ಎಂದು ಅಲ್ಲಿಗೆ ಹೊರಟಿದ್ದೆ. ಕಾರ್ಯಕ್ರಮಕ್ಕೆ ಒಂದು ಗಂಟೆಯ ಮುನ್ನ, ಅವರ ತಾಯಿ ನಿಧನರಾದರು.

ಆದರೆ ಅವರು ಕಾರ್ಯಕ್ರಮವನ್ನು ನಿಲ್ಲಿಸಲಿಲ್ಲ. ತಮ್ಮ ತಾಯಿಯ ಪಾರ್ಥಿವ ಶರೀರದ ಮುಂದೆಯೇ, ಅವರ ಪುಸ್ತಕ ಬಿಡುಗಡೆ ಮಾಡು ವಂತೆ ನನ್ನನ್ನು ಕೋರಿದರು. ಆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಅವರ ತಾಯಿಯ ಅಂತ್ಯಕ್ರಿಯೆಯಲ್ಲಿ ಪರ್ಯವಸಾನಗೊಂಡಿತು. ಇನ್ನೊಂದು ಪುಸ್ತಕ ಬಿಡುಗಡೆ ನಿಮಿತ್ತ ನಾನು ಕೋಣಂದೂರಿನ ಸನಿಹದ ಹಳ್ಳಿಗೆ ಹೋಗಿದ್ದೆ. ಹಿಂದಿನ ದಿನ ಸುರಿದ ಭಾರಿ ಮಳೆಯಿಂದಾಗಿ ಸಂಕ (ಸೇತುವೆ) ಕೊಚ್ಚಿಹೋಗಿತ್ತು.

ಹೀಗಾಗಿ ಬೆಳಗ್ಗೆ ಒಂಬತ್ತೂವರೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಸಾಯಂಕಾಲ ಐದಾದರೂ ಆರಂಭವಾಗಿರಲಿಲ್ಲ. ಕಾರ್ಯಕ್ರಮ ವನ್ನು ಮರುದಿನ ಮುಂದೂಡುತ್ತೇವೆಂದು ಹೇಳಿದರು. ನಾನು ಒಲ್ಲದ ಮನಸ್ಸಿನಿಂದ ಸಮ್ಮತಿಸಿದೆ. ಆ ರಾತ್ರಿಯೂ ಜೋರು ಮಳೆ. ಅದೆಂಥ ಧಾರಾಕಾರ ಮಳೆಯೆಂದರೆ, ಬಿಡುಗಡೆಯಾಗಬೇಕಿದ್ದ ಪುಸ್ತಕದ ನೂರಾರು ಪ್ರತಿಗಳು ನೆನೆದು ಹೋಗಿದ್ದವು. ಗಾಳಿ-ಮಳೆಗೆ ಮನೆಯ ಹಂಚುಗಳು ಹಾರಿಹೋಗಿ ಪುಸ್ತಕಗಳನ್ನು ಜೋಡಿಸಿಟ್ಟ ಜಾಗದಲ್ಲಿ ನೀರು ಸುರಿದು ತೊಪ್ಪೆಯಾಗಿದ್ದವು!

ಬಿಡುಗಡೆಯಾಗಲಿರುವ ಪುಸ್ತಕದ ಕುರಿತು ಮಾತಾಡಲು ಅನುವಾಗಲೆಂದು ಭಾಷಣ ಕಾರರಿಗೆ ಮುಂಚಿತವಾಗಿ ಕಳಿಸಿಕೊಡುತ್ತಾರಲ್ಲ, ಆ ಒಂದು ಪ್ರತಿ ನನ್ನಲ್ಲಿತ್ತು. ಅದನ್ನೇ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು. ಪುಸ್ತಕವೇನೋ ಬಿಡುಗಡೆ ಯಾಯಿತು. ಆದರೆ ನನಗೆ ಬಿಡುಗಡೆ ಆಗಲಿಲ್ಲ. ಕಾರಣ ಎರಡನೇ ಬಾರಿಗೆ ಹಾಕಿದ ಸಂಕ ಮತ್ತೊಮ್ಮೆ ಕೊಚ್ಚಿ ಹೋಗಿ, ನಾನು ವಾಪಸ್ ಬರಲಾಗದೇ, ಅವರ ಮನೆಯಲ್ಲಿಯೇ ಉಳಿಯುವಂತಾಗಿತ್ತು.

ಇನ್ನೊಮ್ಮೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾನು ಮೂಡಿಗೆರೆಗೆ ಹೋಗಿದ್ದೆ. ಸಂಘಟಕರು ತಮ್ಮ ಕಾಫಿ ತೋಟದಲ್ಲಿ ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದರು. ನಾನು ಹಿಂದಿನ ರಾತ್ರಿಯೇ ಅವರ ಕಾಫಿ ಎಸ್ಟೇಟ್‌ನಲ್ಲಿ ಉಳಿದಿದ್ದೆ. ಅದೊಂದು ಸುಂದರ ಪ್ರದೇಶ. ಮರುದಿನ ಕಾರ್ಯಕ್ರಮ. ಆದರೆ ಆ ದಿನ ಬೆಳಗ್ಗೆ ಧರೆ ಕುಸಿದು ರಸ್ತೆ ಮೇಲೆ ಮಲಗಿದ್ದರಿಂದ ಹೊರ ಪ್ರಪಂಚದೊಂದಿನ ಸಂಪರ್ಕ ಕಡಿದು ಹೋಗಿತ್ತು. ಜೆಸಿಬಿ ತರಿಸಿ ರಸ್ತೆಯನ್ನು ತೆರವುಗೊಳಿಸುವ ಹೊತ್ತಿಗೆ, ಕಾರ್ಯಕ್ರಮದ ಅವಧಿ ಮುಗಿದುಹೋಗಿತ್ತು.

‘ನೀವು ಇನ್ನೊಂದು ಡೇಟ್ ಕೊಟ್ಟ ದಿನ ಕಾರ್ಯಕ್ರಮ ಮಾಡುತ್ತೇನೆ. ನೀವು ಡೇಟ್ ಕೊಟ್ಟರೆ ಕಾರ್ಯಕ್ರಮ ಮುಂದೂಡುವೆ, ಇಲ್ಲದಿದ್ದರೆ ಇಲ್ಲಿರುವ ಆರೇಳು ಜನರ ಮುಂದೆಯೇ ಇ, ಹೀಗೆ ಬಿಡುಗಡೆ ಮಾಡಿ’ ಎಂದು ಹೇಳಿದರು. ಅವರ ಉತ್ಸಾಹ ನೋಡಿ, ಒಂದು ತಿಂಗಳ ನಂತರ ಬರುವುದಾಗಿ ಹೇಳಿದೆ. ಅದಾಗಿ ನಲವತ್ತೇಳನೇ ದಿನ ಪುನಃ ಅಲ್ಲಿಗೆ ಹೋಗಿ ಅವರ ಪುಸ್ತಕವನ್ನು ಬಿಡುಗಡೆ ಮಾಡಿ ಬಂದೆ.

ಯಾರಾದರೂ ಪುಸ್ತಕ ಬಿಡುಗಡೆ ಮಾಡಿ ಅಂದ್ರೆ ಈ ಎಲ್ಲಾ ಚಿತ್ರಣಗಳು ಸಿನಿಮಾ ಟ್ರೇಲರ್ ಥರ ಹಾದುಹೋಗುತ್ತವೆ. ಕೆಲವು ಸಲ ಸಮಯ ಹೊಂದಿಸಲು ಆಗುವುದಿಲ್ಲ. ಅಂತ ಸಂದರ್ಭದಲ್ಲಿ ಬರಲಾಗುವುದಿಲ್ಲ ಎಂದು ತಿಳಿಸಿದರೆ, ಸಂಘಟಕರಿಗಿಂತ ನನಗೇ ಹೆಚ್ಚು ಬೇಸರವಾಗುತ್ತದೆ. ಹೀಗಾಗಿ ಮೊನ್ನೆ ಸುಂಡ್ರಹಳ್ಳಿಗೆ ಹೋಗಿ ಬಂದೆ. ಒಂದು ವೇಳೆ, ಯಾವುದಾದರೂ ನೆಪ ಹೇಳಿ, ಹೋಗದೇ ಇದ್ದಿದ್ದರೆ ನಾನು ಕೆಲವು ಆತ್ಮೀಯ ಸಮಯವನ್ನು ಕಳೆದುಕೊಳ್ಳುತ್ತಿದ್ದೆ.

ಸುಟ್ಟ ಮರ ಮತ್ತು ಬದುಕು

ಒಬ್ಬಾತ ಕಟ್ಟಿಗೆ ಡಿಪೋ ಇಟ್ಟಿದ್ದನಂತೆ. ಬೆಂಕಿ ಆಕಸ್ಮಿಕದಲ್ಲಿ ಆತನ ಕಟ್ಟಿಗೆ ಡಿಪೋ ಸುಟ್ಟು ಹೋಯಿತಂತೆ. ಡಿಪೋ ಮಾಲೀಕ ಬಹಳ ತಲೆ ಕೆಡಿಸಿಕೊಳ್ಳಲಿಲ್ಲ. ಅದೇ ಜಾಗದಲ್ಲಿ ‘ಇಲ್ಲಿ ಉತ್ತಮ ಗುಣಮಟ್ಟದ ಇದ್ದಿಲು ಸಿಗುತ್ತದೆ’ ಎಂದು ಬೋರ್ಡ್ ಹಾಕಿದನಂತೆ.

ಬೇರೆಯವರಾಗಿದ್ದರೆ ತಲೆ ಮೇಲೆ ಕೈಹೊತ್ತು ಜೀವನವೇ ಮುಗಿದುಹೋಯಿತು ಎಂದು ಚಿಂತಿಸುತ್ತಾ ಕುಳಿತಿರುತ್ತಿದ್ದರು. ಇದರಿಂದ ಆತನಿಗೆ ನಷ್ಟವಾಗಿರಬಹುದು. ಆದರೆ ಆತ ಬದುಕುವ ಹೊಸ ಮಾರ್ಗವನ್ನು ಮತ್ತು ನವ ಉತ್ಸಾಹವನ್ನು ಕಂಡುಕೊಂಡಿದ್ದ. ಭರವಸೆ ಯನ್ನು ಕಳೆದುಕೊಂಡಿರಲಿಲ್ಲ. ನಾವು ಎಲ್ಲಿ ಕಳೆದುಕೊಂಡಿದ್ದೇವೋ, ಅಲ್ಲಿಯೇ ಹುಡುಕಬೇಕು. ಪ್ರತಿ ಸಮಸ್ಯೆಗೂ ಉತ್ತರವಿರುತ್ತದೆ. ಗೋಳು ಹೇಳಿಕೊಳ್ಳುವುದರಿಂದ, ಚಿಂತಿಸುವುದರಿಂದ, ಕೊರಗುವುದರಿಂದ ಏನೂ ಪ್ರಯೋಜನ ಇಲ್ಲ.

ಅದರ ಬದಲು, ಹೊಸ ವಿಶ್ವಾಸವನ್ನು ನಮ್ಮೊಳಗೆ ಬಿಟ್ಟಿಕೊಳ್ಳಬೇಕು. ಕೆಲವು ವರ್ಷಗಳ ಹಿಂದೆ, ಬ್ರಿಟನ್‌ನ ವೇಲ್ಸ್‌ನಲ್ಲಿ, ಎತ್ತರದ ಮರವೊಂದು ಸಿಡಿಲು ಬಡಿದು ಸುಟ್ಟು ಹೋಯಿತು. ಅದನ್ನು ಕಡಿದು ಹಾಕಬಹುದಿತ್ತು. ಆದರೆ ಸೈಮನ್ ಓ ರೌರ್ಕೆ ಎಂಬ ಕಾಷ್ಠ ಕಲಾವಿದ ಅದನ್ನು ನೋಡಿದ. ಆತ ಯಾರೂ ಬಳಸದ ಕಟ್ಟಿಗೆ, ಮರದ ತುಂಡುಗಳಿಂದ ಅಪೂರ್ವ ಕಲಾಕೃತಿ ಕೆತ್ತುವುದರಲ್ಲಿ ನಿಷ್ಣಾತ. ನಿರುಪಯುಕ್ತ ವೆಂದು ಬಿಸಾಡಿದ ಕಟ್ಟಿಗೆ ಕೂಡ ಆತನ ಕೈಯಲ್ಲಿ ಕಲೆಯಾಗಿ ಅರಳುತ್ತಿತ್ತು. ಒಳ್ಳೆಯ ಮರವನ್ನು ಕೊಟ್ಟರೆ ಆತನಿಗೆ ಉತ್ಸಾಹ ಬರುತ್ತಿರ ಲಿಲ್ಲ.

ಪ್ರಯೋಜನಕ್ಕೆ ಬಾರದ್ದು ಎಂದು ಮೂಲೆಗೆಸೆದ ಹಲಗೆ, ಮರಗಳೇ ಆತನಲ್ಲಿ ಉತ್ಸಾಹವನ್ನು ಚಿಗುರೊಡೆಯುವಂತೆ ಮಾಡುತ್ತಿತ್ತು.  ಸೈಮನ್ ಓ ರೌರ್ಕೆ ಸಿಡಿಲು ಬಡಿದು ಸುಟ್ಟು ಹೋದ ಆ ಎತ್ತರದ ಮರವನ್ನು ನೋಡಿದ. ಅದನ್ನು ಕಡಿದು ಕತ್ತರಿಸುವ ಬದಲು ತನಗೆ ನೀಡುವಂತೆಯೂ, ಅದರಲ್ಲಿ ತಾನೊಂದು ಕಲಾಕೃತಿ ರಚಿಸುವುದಾಗಿಯೂ ತಿಳಿಸಿದ. ಆತ ಆ ಮರದಲ್ಲಿ ಅಷ್ಟೇ ಎತ್ತರದ ಒಂದು ಕೈಯನ್ನು ಕೆತ್ತಿದ. ಅದನ್ನು ನೋಡಿ ದವರಿಗೆ ಅದು ಸುಟ್ಟು ಹೋದ ಮರ ಎಂಬ ಸಣ್ಣ ಕಲ್ಪನೆ ಸಹ ಬರದ ರೀತಿಯಲ್ಲಿ ಆತ ತನ್ನ ಕಲಾ ನೈಪುಣ್ಯ ಮೆರೆದಿದ್ದ. ಇಂದು ಆ ಮರ ಒಂದು ಸುಂದರ ಕಲಾ ಸ್ಮಾರಕ ಮತ್ತು ಪ್ರೇಕ್ಷಣೀಯ ಸ್ಥಳವಾಗಿದೆ!

ನಮ್ಮ ಬದುಕೂ ಸಹ ಅಷ್ಟೇ. ಪ್ರತಿ ಸೋಲು, ಹಿನ್ನಡೆಯನ್ನೂ ನಮ್ಮ ಪರವಾಗಿ ಪರಿವರ್ತಿಸಿಕೊಳ್ಳಲು ಸಾಧ್ಯ. ಅದಕ್ಕೆ ಸೈಮನ್ ಓ ರೌರ್ಕೆ ಕಲಾಕೃತಿಯೇ ಸಾಕ್ಷಿ.

ವಿಚ್ಛೇದಿತನ ಉಪಯುಕ್ತ ಸಲಹೆ

ವೈವಾಹಿಕ ಜೀವನದಲ್ಲಿ ಸುಮಧುರ ಸಾಮರಸ್ಯವನ್ನು ಹೊಂದುವ ದಂಪತಿಗಳಿಗೆ ಸಲಹೆಗಳು ಬೇಕಿದ್ದಲ್ಲಿ ನೀವು ಅವರನ್ನು ಎಲ್ಲಿಗೆ ಕಳುಹಿಸುತ್ತೀರಿ? ಮೂವತ್ತೈದು ವರ್ಷಗಳಿಂದ ಸುಖೀ ದಾಂಪತ್ಯ ನಡೆಸಿ ಅನುಭವವಿರುವ ಯಾರಾದರೂ ಅನುಭವಿ ಗುರುಗಳ ಬಳಿಗೆ ಕಳುಹಿಸುತ್ತೀರೋ ಇಲ್ಲವೇ ಮದುವೆಯಾಗಿ ಒಂಭತ್ತು ವರ್ಷಗಳ ನಂತರ ವಿಚ್ಚೇದನವನ್ನು ಪಡೆದು, ವಿಚ್ಛೇದಿತನಾಗಿ ಒಂಬತ್ತು ವರುಷ ಗಳೇ ಕಳೆದಿರುವ ವ್ಯಕ್ತಿಯ ಬಳಿ ಕಳುಹಿಸುತ್ತೀರೋ? ನೀವು ಯಾರಲ್ಲಿಗೆ ಬೇಕಾದರೂ ಕಳುಹಿಸಬಹುದು, ಆದರೆ ಅದರ ಹಿಂದೆ ಒಂದು ಬಲವಾದ ಕಾರಣವಿರಬೇಕು.

ಯಾವ ವ್ಯಕ್ತಿ ತನ್ನ ವ್ಯಕ್ತಿಗತ ವೈವಾಹಿಕ ಬದುಕನ್ನೇ ಉಳಿಸಿಕೊಳ್ಳಲಾರದೇ ಹೋದನೋ ಅವನು ಇನ್ನೊಬ್ಬನಿಗೆ ಏನು ತಾನೆ ಉಪಕಾರ ಮಾಡಬಲ್ಲ, ಉಪದೇಶ ನೀಡಬಲ್ಲ? ಆದರೆ ನಾನು ನಿಮ್ಮ ಮಾತು ಒಪ್ಪುವುದಿಲ್ಲ. ಬದುಕಿನಲ್ಲಿ ಗೆದ್ದ ವ್ಯಕ್ತಿ ನಿಮ್ಮ ಸಮಸ್ಯೆಗೆ ಪರಿಹಾರ ವಾಗಬಲ್ಲ ಎಂಬ ಅಭಿಪ್ರಾಯ ನಿಮ್ಮದಾಗಿದ್ದರೆ ನನ್ನ ಅಂಬೋಣ ಕೊಂಚ ಭಿನ್ನವಾಗಿದೆ.

ನೀವು ನನ್ನ ಮಾತನ್ನು ನಂಬುತ್ತಿಲ್ಲವೆಂದಾದರೆ ನೀವು 43 ವರುಷದ ಮ್ಯಾಥ್ಯೂ ಅವರನ್ನು ಭೇಟಿಯಾಗಬೇಕು. ಅವರೊಂದು ಪುಸ್ತಕ ಬರೆದಿzರೆ. ಅದರ ಹೆಸರು ‘ದಿಸ್ ಈಸ್ ಹೌ ಯುವರ್ ಮ್ಯಾರೇಜ್ ಎಂಡ್ಸ್’. ನೀವದನ್ನು ಓದಬೇಕು. ಮ್ಯಾಥ್ಯೂ ತನ್ನ ಮದುವೆ ಹೇಗೆ ಮುರಿದು ಬಿತ್ತು ಎಂಬುದನ್ನು ಬರೆದಿದ್ದಾನೆ. ಆತನಿಗೂ ಒಬ್ಬ ರಿಲೇಶನ್‌ಶಿಪ್ ಗುರು ಇದ್ದ. ವಿಚ್ಛೇದನದ ನಂತರ ಆತ ಒಂದು ಬ್ಲಾಗ್ ಬರೆದಿದ್ದ. ಅದನ್ನು ೪೦ ಕೋಟಿ ಜನರು ಓದಿದ್ದಾರೆ.

ನಂತರದ ವರ್ಷಗಳಲ್ಲಿ ಆತನೂ ಒಬ್ಬ ರಿಲೇಶನ್‌ಶಿಪ್ ತಜ್ಞರಾಗಿ ಗಮನ ಸೆಳೆದಿದ್ದಾರೆ. ಮ್ಯಾಥ್ಯೂ ಹೇಳುವ ಪ್ರಕಾರ, ಅವರ ವಿಚ್ಛೇದನ ನಡೆದಿರುವುದು ಅವರ ಸ್ವಯಂ ತಪ್ಪಿನಿಂದಾಗಿ. ತಾನು ಅಂತಹ ಕೆಟ್ಟ ವ್ಯಕ್ತಿಯಾಗಿರಲಿಲ್ಲ, ಇಂದಿಗೂ ಅಲ್ಲ ಎಂಬುದನ್ನು ಅವರು ಖಚಿತ ವಾಗಿ ಹೇಳುತ್ತಾರೆ. ಅವರೆಂದೂ ಸಿಟ್ಟಾಗಿರಲಿಲ್ಲ, ಪತ್ನಿ ಯೊಂದಿಗೆ ಕೆಟ್ಟದಾಗಿ ನಡೆದುಕೊಂಡಿರಲಿಲ್ಲ. ಬಹುತೇಕ ಸಂದರ್ಭಗಳಲ್ಲಿ ಮದುವೆಗಳು ವಿಚ್ಛೇದನದಲ್ಲಿ ಪರ್ಯವಸಾನಗೊಳ್ಳುವುದು ವ್ಯಕ್ತಿಗಳ ನಡುವಣ ಪರಸ್ಪರ ಭಿನ್ನಾಭಿಪ್ರಾಗಳಿಂದ. ಇದರ ಹಿಂದೆ ಇನ್ನಾ ವುದೋ ಗಂಭೀರ ಸಮಸ್ಯೆಗಳು ಇರುವುದಿಲ್ಲ.

ಅಮೆರಿಕದಂಥ ದೇಶದಲ್ಲಿ ಅನೇಕ ಜನರ ಸಮಸ್ಯೆಗೆ ಮುಖ್ಯ ಕಾರಣ ಮದುವೆ. ಜೀವನದಲ್ಲಿ ಯಶಸ್ವಿ ವ್ಯಕ್ತಿಗಳೆ ಮದುವೆಯಲ್ಲಿ ಫೈಲಾದ ವರೇ. ಮ್ಯಾಥ್ಯೂ ಪ್ರಕಾರ, Statistically, 95 percent of Americans ages eighteen and older fall into one of three categories- married, formerly married, or intending to marry in the future.. ಒಟ್ಟಾರೆ ವಿವಾಹವೇ ಅವರ ಜೀವನವನ್ನು ನಿರ್ಧರಿಸುವ ಪ್ರಮುಖ ಅಂಶ.