Thursday, 12th December 2024

ಅನುಕೂಲ ಹೆಚ್ಚಿದ್ದರೂ ವಿವಾದಗಳಿಗೆ ಕೊನೆಯಿಲ್ಲವಲ್ಲ !

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ಕೆಲವು ದಶಕಗಳ ಹಿಂದಿನ ತನಕ, ಅದೆಷ್ಟೋ ಮಕ್ಕಳಿಗೆ ವಿದ್ಯೆ ಎಂಬುದು ಮರೀಚಿಕೆಯಾಗಿತ್ತು. ಹೇಗೋ ಕಷ್ಟಪಟ್ಟು ಶಾಲೆಗೆ ಸೇರಿದ ಮಕ್ಕಳಿಗೂ ಅವೆಷ್ಟು ತೊಡಕುಗಳು! ಸಮವಸವಿರಲಿಲ್ಲ, ಬಿಸಿಯೂಟವಿರಲಿಲ್ಲ. ಆದರೆ ಈಗ ಅವೆಲ್ಲಾ ಇದ್ದರೂ, ವಿದ್ಯಾರ್ಥಿಗಳಲ್ಲೇ ವಿವಾದ ತಂದಿಡುವ ಕಾಲ ಇಂದು ಬಂದಿದೆ! ಎಂತಹ ವಿಪರ್ಯಾಸ!

ಈ ವಾರ ನಮ್ಮ ರಾಜ್ಯದ ವಿದ್ಯಾರ್ಥಿ ವಲಯದಲ್ಲಿ ಒಮ್ಮಿಂದೊಮ್ಮೆಗೇ ವಿಶಿಷ್ಟ ವಿನ್ಯಾಸದ ಬಟ್ಟೆ ಧರಿಸುವ ಕುರಿತು ವಿವಾದ ಎದ್ದಿದೆ. ಮಕ್ಕಳ ನಡುವೆ ಇಂತಹ
ವಿವಾದ, ತಾಕಲಾಟ, ಹೋರಾಟ ನಡೆಯಲೇ ಬಾರದಿತ್ತು. ಈ ವಿವಾದವನ್ನು ಕಂಡು ಒಂದು ವಾಟ್ಸಾಪ್ ಸಂದೇಶ ಹರಿದಾಡುತ್ತಿದೆ – ‘ನಮ್ಮ ಕಾಲದಲ್ಲಿ ಸರಿ ಯಾದ ಶಾಲೆಗಳೇ ಇರಲಿಲ್ಲ, ಶಾಲೆಗೆ ಹೋಗಲು ಸಮವಸವೂ ಇರಲಿಲ್ಲ, ಒಳ್ಳೆಯ ಬಟ್ಟೆ ಇರಲಿಲ್ಲ, ಈಗ ಅವೆಲ್ಲಾ ಇದೆ, ಆದರೆ ಯಾವ ಶೈಲಿಯ, ಯಾವ ವಿನ್ಯಾಸದ, ಯಾವ ಬಣ್ಣದ ಬಟ್ಟೆ ಧರಿಸಬಾರದು ಎಂಬ ವಿವಾದ ಎದ್ದಿದೆ!’ ಈ ಸಂದೇಶವು, ಈಗ ಭುಗಿಲೆದ್ದಿ ರುವ ವಿವಾದಕ್ಕೆ ಒಂದು ಬಾಲಿಶವೆನಿಸುವ ಪ್ರತಿಕ್ರಿಯೆ ಎಂದು ಕೆಲವರಿಗೆ ಅನಿಸಿದರೂ, ಅದರಲ್ಲಿ ಒಂದು ಕಟು ಸತ್ಯ ಅಡಗಿದೆ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು ಎರಡು ದಶಕಗಳ ನಂತರ, ನಮ್ಮ ಹಳ್ಳಿ ಶಾಲೆಯ ಮರದ ಬೆಂಚಿನ ಮೇಲೆ ಕುಳಿತು ಪಾಠ ಕಲಿತವನು ನಾನು. ಆಗ ನಿಜವಾಗಿಯೂ ನಮ್ಮ ಮನೆಯ ಹತ್ತಿರ ಶಾಲೆ ಇರಲಿಲ್ಲ, ಶಾಲೆಗೆ ಹೋಗಲು ರಸ್ತೆ ಇರಲಿಲ್ಲ, ವಾಹನ ಇರಲಿಲ್ಲ, ನಮಗೆ ಸಮವಸ್ತ್ರವಿರಲಿಲ್ಲ, ಬಟ್ಟೆಯ ಆಯ್ಕೆಯೂ ಇರಲಿಲ್ಲ, ಬಿಸಿಯೂಟವಿರಲಿಲ್ಲ! ಅದೆಲ್ಲಾ ಹೋಗಲಿ, ನಾನು ಹೋಗಿದ್ದ ಆ ಶಾಲೆಗೆ ಆಗ ಸ್ವಂತ ಕಟ್ಟಡವೂ ಇರಲಿಲ್ಲ! ಈಗ ಹೆಚ್ಚಿನ ಮಕ್ಕಳ ಮನೆಯ ಹತ್ತಿರ ಶಾಲೆಗಳಿವೆ, ಶಾಲೆಗೆ ಹೋಗಲು ವಾಹನಗಳಿವೆ, ಓದಲು ಪುಸ್ತಕಗಳಿವೆ, ಸರಕಾರಿ ಶಾಲೆಗಳಲ್ಲಿ ಸಮವಸ್ತ್ರವೂ ಸಿಗುತ್ತವೆ, ಉಚಿತ ಬಿಸಿಯೂಟದ ವ್ಯವಸ್ಥೆಯಿದೆ.
ಇಷ್ಟಿದ್ದರೂ ಇವೇ ಸೌಕರ್ಯಗಳನ್ನು ಬಳಸಿಕೊಂಡು ವಿವಾದ ಸೃಷ್ಟಿಯಾಗುವುದು (ಮೊಟ್ಟೆ ಬೇಕೋ ಬೇಡವೋ, ಕುತ್ತಿಗೆ ಮುಚ್ಚುವ ಬಟ್ಟೆ ಧರಿಸಬೇಕೋ ಬೇಡವೋ) ಇಪ್ಪತ್ತೊಂದನೆಯ ಶತಮಾನದ ಚೋದ್ಯಗಳಲ್ಲಿ ಒಂದು.

ಎಲ್ಲರಿಗೂ ಅವರವರ ಬಾಲ್ಯದ ಶಾಲೆ, ಅಧ್ಯಾಪಕರು, ಅಂದು ಆಡಿದ ಆಟೋಟಗಳನ್ನು ನೆನಪಿಸಿಕೊಳ್ಳುವುದೆಂದರೆ ಇಷ್ಟ. ನಾನು ಓದಿದ ಶಾಲೆಗಳ ಅಂದಿನ ಸ್ಥಿತಿಯನ್ನು ನೆನಪಿಸಿಕೊಂಡರೆ, ಸಂತಸವೂ ಆಗುತ್ತದೆ, ನಾಸ್ಟಾಲ್ಜಿಯಾವೂ ಕಾಡುತ್ತದೆ. ಒಮ್ಮೊಮ್ಮೆ ಅಚ್ಚರಿಯೂ ಆಗುತ್ತದೆ. ಆ ದಿನಗಳಲ್ಲಿ ಶಾಲೆಗೆ ಹೋಗಲು ಮಕ್ಕಳು ಪಡುತ್ತಿದ್ದ ಪಡಿಪಾಟಲುಗಳಿಗೆ ಲೆಕ್ಕವುಂಟೇ! ಇಂತಹ ಪಡಿಪಾಟಲುಗಳಿಂದಾಗಿ, ನನ್ನ ಅದೆಷ್ಟು ಗೆಳೆಯರು ಅರ್ಧಕ್ಕೇ ಶಾಲೆ ಬಿಟ್ಟಿದ್ದರು! ನನ್ನ ಅದೃಷ್ಟ ಚೆನ್ನಾಗಿತ್ತು, ಅಂತಹ ತೊಡಕಿನ ನಡುವೆಯೂ ನನ್ನ ಪೋಷಕರು ನನ್ನನ್ನು ಶಾಲೆಗೆ ಕಳಿಸಿದರಲ್ಲಾ ಎಂದು!

ಮೂರನೆಯ ಮತ್ತು ನಾಲ್ಕನೆಯ ತರಗತಿಯ ಸಮಯದಲ್ಲಿ ನಾನು ಹೋಗುತ್ತಿದ್ದ ಶಾಲೆಯ ಹೆಸರು ಗೋರಾಜಿ ಶಾಲೆ. (ಅದಕ್ಕೂ ಮುಂಚಿನ ಎರಡನೆಯ ತರಗತಿಯ ತನಕ ಓದಿದ ಸರಕಾರಿ ಶಾಲೆಯ ಕಥೆ ಇನ್ನೂ ಕುತೂಹಲಕಾರಿ. ಅದನ್ನು ಮುಂದೊಮ್ಮೆ ಹೇಳುತ್ತೇನೆ.) ಈ ಗೋರಾಜಿ ಶಾಲೆ ಎಂಬುದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ. ನಾಲ್ಕು ತರಗತಿಗಳ ತನಕ ಮಾತ್ರ ಅದರಲ್ಲಿ ಓದುವ ಅವಕಾಶ. ಒಬ್ಬರೇ ಅಧ್ಯಾಪಕರು. ಈ ಶಾಲೆಯ ಹೆಸರಿನ ಹಿನ್ನೆಲೆಯೇ ರೋಚಕ! ಇದರ ಮೂಲ ಹೆಸರು ಹುಯ್ಯಾರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ. ಆದರೆ ಅದು ಹುಯ್ಯಾರು ಗ್ರಾಮದ ಅಂಚಿನಲ್ಲಿದ್ದ ಗೋರಾಜಿ ಎಂಬ
ಕುಗ್ರಾಮದ ಒಂದು ಗುಡಿಸಲಿನಲ್ಲಿ ನಡೆಯುತ್ತಿತ್ತು.

ಅದಕ್ಕೂ ನಾಲ್ಕಾರು ವರ್ಷಗಳ ಮುಂಚೆ ಅದು ಮುದೂರಿ ಎಂಬ ಸ್ಥಳದ ದೇವಾಲಯದ ಹೆಬ್ಬಾಗಿಲಿನಲ್ಲಿ ನಡೆಯುತ್ತಿತ್ತು. ಆ ಹೆಬ್ಬಾಗಿಲಿನ ಪುರಾತನ ಓಡು ಹಂಚಿನ
ಮಾಡಿನಿಂದ ಹಂಚುಗಳು ಮಕ್ಕಳ ತಲೆಯ ಮೇಲೆ ಬಿದ್ದು, ಒಬ್ಬ ಹುಡುಗಿಯ ತಲೆಗೆ ಗಾಯವಾದ ನಂತರ, ಅಲ್ಲಿ ಶಾಲೆಯಿದ್ದರೆ ಅಪಾಯ ಎಂದರಿವಾಗಿ, ಗೋರಾ ಜಿಯ ಕಾಡಿನ ನಡುವಿನ ಒಂದು ಗುಡಿಸಲಿಗೆ ಸ್ಥಳಾಂತರವಾಯಿತು. ಅದನ್ನು ಮಯ್ಯ ಎಂಬುವವರು ಬಾಡಿಗೆ ಇಲ್ಲದೇ, ಶಾಲೆ ನಡೆಸಲು ಕೊಟ್ಟಿದ್ದರು. ಆ
ಗುಡಿಸಲು ಸಹ ಗಾಳಿ ಮಳೆಗೆ ಹಾರಿಹೋಗುವಂತಾದಾಗ, ಪುನಃ ಮುದೂರಿಯಲ್ಲಿದ್ದ ದೇವಾಲಯಕ್ಕೆ ಶಾಲೆ ಸ್ಥಳಾಂತರಗೊಂಡಿತು. ಅಷ್ಟು ಹೊತ್ತಿಗೆ ಕುಂದಾ ಪುರದ ನಕ್ಕತ್ತಾಯ ಎಂಬ ಮಹನೀಯರು ಆ ಹೆಬ್ಬಾಗಲಿನ ಕಟ್ಟೋಣವನ್ನು ಮಂಗಳೂರು ಹಂಚು ಹಾಕಿಸಿ ಭದ್ರವಾಗಿ ಕಟ್ಟಿಸಿದ್ದರು.

ಈ ರೀತಿ ಸ್ವಂತ ಕಟ್ಟಡವೇ ಇಲ್ಲದ ಕಿರಿಯ ಪ್ರಾಥಮಿಕ ಶಾಲೆಗೆ ನಾನು ಹೋಗುತ್ತಿದ್ದಾಗ, ಸುಬ್ರಾಯ ಭಟ್ ಎಂಬುವವರು ಅಲ್ಲಿ ಮುಖ್ಯೋಪಾಧ್ಯಾಯರು ಮತ್ತು ಎಲ್ಲಾ ಸಿಬ್ಬಂದಿಯೂ ಅವರೇ ! ಏಕೆಂದರೆ ಅದು ಏಕೋಪಧ್ಯಾಯ ಶಾಲೆ! ನಾಲ್ಕೂ ತರಗತಿಗಳಿಗೆ ಒಂದೇ ಕೋಣೆ ಅಥವಾ ಹಾಲ್. ನೆಲಕ್ಕೆ ಮಣ್ಣು, ಗೋಡೆಯೂ ಮಣ್ಣಿನದು, ಛಾವಣಿ ಹುಲ್ಲಿನದು! ಆ ಶಾಲೆಗೆ ನಾನು ಹೋಗುತ್ತಿದ್ದ ಪರಿಯನ್ನು ಈಗಿನ ಮಾತುಗಳಲ್ಲಿ ವರ್ಣಿಸುವುದಾದರೆ, ಅದು ಪ್ರತಿದಿನ ನಾನು ನಡೆಸುತ್ತಿದ್ದ ‘ಚಾರಣ’! ನಮ್ಮ ಮನೆ ಎದುರಿನ ಗದ್ದೆ ಬೈಲಿನಲ್ಲಿ ಕಾಲು ಕಿ.ಮೀ. ನಡೆದು, ಒಂದು ತೋಡು ದಾಟಿ, ಮುಡಾರಿಯಲ್ಲಿ ಹಕ್ಕಲಿನ ದಾರಿಯಲ್ಲಿ ಅರ್ಧ ಕಿ.ಮೀ.
ನಡೆದು, ಮತ್ತೊಂದು ತೋಡು ದಾಟಿ, ಅಲ್ಲಿದ್ದ ಮತ್ತೊಂದು ಬೈಲಿನಲ್ಲಿ ಕಾಲು ಕಿ.ಮೀ. ನಡೆದು, ಒಂದು ಗುಡ್ಡೆಯನ್ನು ತಟಹಾಯ್ದು, ಮತ್ತೊಂದು ಹಕ್ಕಿಲಿನ ಅಂಚಿ ನಲ್ಲಿದ್ದ ಬೆಳಾರ ಜಾಗ ತಲುಪಿದರೆ, ಗೋರಾಜಿ ಶಾಲೆ ಸಿಗುತ್ತಿತ್ತು!

ಎರಡು ತೋಡುಗಳನ್ನು ದಾಟಲು ಒಂದೇ ಎಳದ ಮರದ ಸಂಕ! ಎರಡನೆಯ ಬೈಲಿನ ಬಳಿ, ದಾರಿಯ ಅಂಚಿನಲ್ಲೇ ಹತ್ತು ಅಡಿ ವ್ಯಾಸದ ಒಂದು ನೀರಿನ ಕೊಳ. ಆ ಕೊಳದ ಬಳಿ ಕಾಲು ಜಾರಿದರೆ, ನೀರಿನೊಳಗೆ ಡುಬಕ್ ಎಂದು ಬೀಳಬೇಕಿತ್ತು! ಆದರೂ, ನಾನು ಮತ್ತು ನನ್ನ ಜತೆ ಬರುತ್ತಿದ್ದ ನಾಲ್ಕಾರು ಮಕ್ಕಳು ಆ ನೀರಿನ ಕೊಳಕ್ಕೆ ಎಂದೂ ಬೀಳಲಿಲ್ಲ, ಸಂಕದಲ್ಲಿ ಕಾಲು ಜಾರಿ ತೋಡಿಗೂ ಬೀಳಲಿಲ್ಲ. ಕಾಡು, ಗುಡ್ಡದ ಈ ಹಾದಿಯನ್ನು ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾವು
ಮಕ್ಕಳು ಪ್ರತಿದಿನ ಸವೆಸಿ, ಶಾಲೆ ತಲುಪುತ್ತಿದ್ದೆವು. ಜತೆಗೆ ಮಧ್ಯಾಹ್ನ ಊಟಕ್ಕೆ ಮನೆಗೂ ಬಂದು ಹೋಗುತ್ತಿದ್ದೆವು!

ನಮ್ಮೂರಲ್ಲಿ ಮಳೆಗಾಲವೆಂದರೆ ಮಳೆ ಸುರಿಯುವ ಕಾಲ! ಜೂನ್ ಮೊದಲ ವಾರ ಆರಂಭಗೊಂಡ ಮಳೆಯು, ಸೆಪ್ಟೆಂಬರ್ ತನಕ ಸುರಿಯುತ್ತಿತ್ತು. ಒಮ್ಮೊಮ್ಮೆ ಹಗಲಿಡೀ ಮಳೆ. ಅಂತಹ ದಿನಗಳಲ್ಲೂ ನಮ್ಮ ಶಾಲೆಯ ಚಾರಣ ತಪ್ಪುತ್ತಿರಲಿಲ್ಲ! ಆಷಾಢದ ಜಡಿಮಳೆಯನ್ನು ಎದುರಿಸಲು ‘ಅರಿವೆ ಕೊಡೆ’ಯಿಂದ ಆಗುವುದಿಲ್ಲ ವೆಂದು, ನಮಗೆ ‘ಓಲಿ ಕೊಡೆ’ಯನ್ನು (ತಾಲೆಗರಿ ಮತ್ತು ಬಿದಿರು ಜೋಡಿಸಿ ಮಾಡಿದ ಕೊಡೆ) ಕೊಡಿಸಿದ್ದರು ನಮ್ಮ ಅಮ್ಮಮ್ಮ! ಅದನ್ನು ಮಡಚುವಂತಿರಲಿಲ್ಲ. ಗೋರಾಜಿ ಶಾಲೆಯ ಪುಟ್ಟ ಕೊಠಡಿಯ ಒಂದು ಮೂಲೆಯಲ್ಲಿ ಹತ್ತಿಪ್ಪತ್ತು ಮಕ್ಕಳು ಓಲಿಕೊಡೆಯನ್ನು ಸಾಲಾಗಿ ಜೋಡಿಸಿಟ್ಟಾಗ, ಉಳಿದ ಜಾಗದಲ್ಲಿ ನಾಲ್ಕು ತರಗತಿಗಳ ಪಾಠಗಳನ್ನು ಮಾಡಬೇಕಿತ್ತು ನಮ್ಮ ಸುಬ್ರಾಯ ಭಟ್ ಮೇಸ್ಟ್ರು!

ಶಾಲೆಗೆ ಸಮವಸ, ಯುನಿಫಾರಂ, ಇಂಥದ್ದೇ ಬಣ್ಣದ ಉಡುಗೆ ಎಂಬ ವಿಚಾರಗಳು ನಮ್ಮ ಹಳ್ಳಿಗೆ ಆಗ ಇನ್ನೂ ಬಂದಿರಲಿಲ್ಲ. ನಮಗೆಲ್ಲಾ ಸಾಮಾನ್ಯವಾಗಿ ಒಂದು ಅಥವಾ ಎರಡು ಜೊತೆ ಅಂಗಿ ಚಡ್ಡಿ ಕೊಡಿಸುತ್ತಿದ್ದರು. ಸೋಮವಾರದಿಂದ ಶನಿವಾರದ ತನಕ ಅದೇ ಅಂಗಿ,ಅದೇ ಚಡ್ಡಿ! ಹೆಚ್ಚಿನ ಮಕ್ಕಳು ಭಾನುವಾರ ಅದನ್ನು ಒಗೆದು ಹಾಕಿ, ಸೋಮವಾರ ಪುನಃ ಅದನ್ನೇ ಧರಿಸುವ ಪರಿಪಾಠ. ನನಗೆ ಒಂದೆರಡು ಜೊತೆ ಬಟ್ಟೆ ಇದ್ದುದರಿಂದ, ವಾರ ವಾರ ಬದಲಿಸುತ್ತಿದ್ದೆ. ಸ್ಲೇಟು ಬಳಪ ನಮ್ಮ ಪ್ರಧಾನ ಪರಿಕರ. ಪ್ರತಿದಿನ ಸ್ಲೇಟಿನಲ್ಲಿ ಗೆರೆ ಹಾಕಿ, ‘ಕೋಪಿ’ ಬರೆಯುವ ಅಭ್ಯಾಸ. ವಿವಿಧ ಪುಸ್ತಕಗಳು, ಪೆನ್ನುಗಳನ್ನು ನಾವು ನಾಲ್ಕನೆಯ ತರಗತಿಯ ತನಕ ನೋಡಿದವರಲ್ಲ. ಸ್ಲೇಟಿನಲ್ಲೇ ಹಲವು ಬಾರಿ ಕೋಪಿ ಬರೆದು, ಅಳಿಸಿ, ಬರೆದು ಮಾಡಿದ್ದರಿಂದಲೋ ಏನೊ, ನಮ್ಮೆಲ್ಲರ ಹಸ್ತಾಕ್ಷರ ಇಂದಿಗೂ ಸುಂದರ!

ಗೋರಾಜಿ ಶಾಲೆಯ ಸುತ್ತ ಮುತ್ತ ಒಂದೆರಡು ಕಿಮೀ ತನಕ ರಸ್ತೆಯ ಸುಳಿವಿಲ್ಲ; ಆದ್ದರಿಂದ ಸೈಕಲ್ಲಿನಲ್ಲೂ ಯಾರನ್ನೂ ಬಿಡುವಂತಿರಲಿಲ್ಲ. ಅದೆಲ್ಲಾ ಹೋಗಲಿ, ಆ ಹಕ್ಕಲು, ಹಾಡಿ, ಗದ್ದೆ ಬೈಲಿನಲ್ಲಿ ನಮ್ಮನ್ನು ಶಾಲೆಯ ತನಕ ಕಳಿಸಿ ಕೊಡಲು ಮನೆಯವರ‍್ಯಾರೂ ಬರುತ್ತಿರಲಿಲ್ಲ. ಅದು ಆಗಿನ ಪರಿಪಾಠ. ನಾವು ನಾವೇ ಆ
ದಾರಿಯಲ್ಲಿ ಪ್ರತಿದಿನ ನಡೆದಿದ್ದರಿಂದಲೋ ಏನೋ, ಎಲ್ಲಿಗೆ ಹೋಗುವುದಾದರೂ ಸೈ ಎನ್ನುವ ಧೈರ್ಯ ನಮ್ಮಲ್ಲಿ ಬೆಳೆಯಿತು! ಆ ಪುಟಾಣಿ ಸರಕಾರಿ ಶಾಲೆಯು ಮೂರು ಬಾರಿ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಉಚಿತ ಕಟ್ಟಡಗಳಿಗೆ (ಬಾಡಿಗೆ ಕೊಡಬೇಕಿಲ್ಲ!) ಸ್ಥಳಾಂತರಗೊಂಡ ನಂತರ, ನಾರಾಯಣ ಪೈ ಎಂಬ ಮಹನೀಯ ರೊಬ್ಬರು ಮುಖ್ಯೋಪಾಧ್ಯಾರಾಗಿ ಬಂದರು. ಹಠ ಹಿಡಿದು, ಕಷ್ಟಪಟ್ಟು ಆ ಶಾಲೆಗೆ ಒಂದು ಸ್ವಂತ ಕಟ್ಟಡವನ್ನು ಕಟ್ಟಿಸಿದರು.

ಸರಕಾರದ ಜಾಗವೊಂದನ್ನು ಗುರುತಿಸಿ, ಶಾಲೆ ಕಟ್ಟಡ ಕಟ್ಟಲು ಅನುಮತಿ ಪಡೆದು, ಶೇ.೫೦ರಷ್ಟು ಹಣವನ್ನು ಹಳ್ಳಿಯವರಿಂದ ವಂತಿಗೆ ಸಂಗ್ರಹಿಸಿ, ಅದರ ಪುರಾವೆ ನೀಡಿದಾಗ, ಉಳಿದರ್ಧ ಭಾಗವನ್ನು ಸರಕಾರ ಮಂಜೂರು ಮಾಡಿತು. ಊರಿನವರೇ ಅರ್ಧ ಭಾಗ ವೆಚ್ಚವನ್ನು ಭರಿಸಿದರೆ ಮಾತ್ರ, ಸರಕಾರವು ತನ್ನ ಭಾಗವನ್ನು ಕೊಡುವಂತಹ ವಿಚಿತ್ರ ನಿಯಮವದು! (ಇದು ನಡೆದದ್ದು ಸುಮಾರು 1980ರ ದಶಕ. ಸರಕಾರಿ ಶಾಲೆಯ ಕಟ್ಟಡ ನಿರ್ಮಿಸಲು ಈಗಲೂ ಆ
ನಿಯಮವಿದೆಯೆ?) ಮರಗಿಡಗಳ ನಡುವೆ ಇದ್ದ, ಮಯ್ಯ ಎಂಬ ಪುಣ್ಯಾತ್ಮರು ಉಚಿತವಾಗಿ ಬಳಸಲು ಅವಕಾಶ ಕೊಟ್ಟಿದ್ದ ಗೋರಾಜಿಯ ಗುಡಿಸಲಿನಲ್ಲಿ ನಾಲ್ಕನೆಯ ತರಗತಿ ಪಾಸಾದ ನಂತರ, ನನಗೆ ಬೇರೆ ಶಾಲೆಗೆ ಹೋಗುವ ಅನಿವಾರ್ಯತೆ.

ಏಕೆಂದರೆ, ಆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೆಯ ತರಗತಿ ಇರಲಿಲ್ಲ. ಪೋಷಕರು ನನ್ನನ್ನು ಹಾಲಾಡಿ ಶಾಲೆಗೆ ಸೇರಿಸಿದರು. ಇತ್ತೀಚೆಗೆ ನೂರು ವರ್ಷದ ಸಂಭ್ರಮವನ್ನು ಆಚರಿಸಿಕೊಂಡ ಆ ಶಾಲೆಯು ಮುಖ್ಯ ರಸ್ತೆಯ ಹತ್ತಿರದಲ್ಲೇ ಇತ್ತು, ಪಡು ಹಾಲಾಡಿ ‘ಪೇಟೆ’ಯಲ್ಲಿತ್ತು, ಸುತ್ತಲೂ ಜನವಸತಿ ಇದ್ದ ಪ್ರದೇಶದಲ್ಲಿತ್ತು. ಇದೆಲ್ಲಾ ಓಕೆ, ಆದರೆ ಹಳ್ಳಿಯ ಮೂಲೆಯಲ್ಲಿದ್ದ ಆ ಶಾಲೆಯು ನಮ್ಮ ಮನೆಯಿಂದ ಸುಮಾರು ಮೂರು ಕಿ.ಮೀ.ದೂರದಲ್ಲಿತ್ತು! ರಸ್ತೆ ಸೌಕರ್ಯವಿಲ್ಲದ ನಮ್ಮ ಮನೆಯಿಂದ ಅಲ್ಲಿಗೆ ನಡೆಯುವುದೇ ಏಕೈಕ ಮಾರ್ಗ. ಬೆಳಿಗ್ಗೆ ಮನೆಯಲ್ಲೇ ಗಂಜಿ ಊಟ ಮಾಡಿ, ಒಂದು ಉಗ್ಗದ ಪಾತ್ರೆಯಲ್ಲಿ (ಟಿಫಿನ್ ಬಾಕ್ಸ್) ಗಂಜಿ, ಮಜ್ಜಿಗೆ ಉಪ್ಪಿನ ಕಾಯಿಯನ್ನು ಹಾಕಿಕೊಂಡು ಮೂರು ಕಿ.ಮೀ. ಕ್ರಮಿಸಿ, ಮಧ್ಯಾಹ್ನ ಅಲ್ಲೇ ಬುತ್ತಿ ಉಂಡು, ಸಂಜೆ ಮತ್ತೆ ಮೂರು ಕಿ.ಮೀ. ನಡೆದು ಮನೆಗೆ
ತಲುಪುವ ಕ್ರಮ. ಆಗ ಉಚಿತ ಬಿಸಿಯೂಟ ಇರಲಿಲ್ಲ.

ಹಾಲಾಡಿ ಶಾಲೆಗೆ ಸ್ವಂತ ಕಟ್ಟಡ ಇತ್ತು. ಆದರೆ ಅದರಲ್ಲಿ ಐದು ತರಗತಿಗಳನ್ನು ಮಾತ್ರ ನಡೆಸುವ ಸ್ಥಳಾವಕಾಶವಿತ್ತು. ಇನ್ನೆರಡು ತರಗತಿಗಳಿಗೆ ಒಂದು ಪುರಾತನ ಬಾಡಿಗೆ ಕಟ್ಟಡವೇ ಗತಿ! ಆಗಲೂ ನಮಗೆ ಉಚಿತ ಸಮವಸ ಕೊಡುವ ಪರಿಪಾಠ ಇರಲಿಲ್ಲ, ಸಮವಸ್ತ್ರ ಕಡ್ಡಾಯವೂ ಆಗಿರಲಿಲ್ಲ. ವಾರವಿಡೀ ಧರಿಸುವ, ಮನೆಯವರು ಕೊಡಿಸಿದ ಅಂಗಿ, ಚಡ್ಡಿಗಳು ನಮ್ಮ ದಿನನಿತ್ಯದ ಬಟ್ಟೆ. ಕೆಲವು ಮಕ್ಕಳು ದೊಗಳೆ ಬಟ್ಟೆ ಧರಿಸಿ ಬರುತ್ತಿದ್ದರು. ಬೇರಾರೋ (ಅಣ್ಣ, ಸಂಬಂಧಿಗಳು, ಹಿತೈಷಿಗಳು) ಬಳಸಿ, ಕೊಡುಗೆಯಾಗಿ ನೀಡಿದ ಬಟ್ಟೆಗಳು ಅವು.

ಈ ಶಾಲೆಗೆ ಹೋಗುವ ದಾರಿ ಸಹ ನಮಗೆಲ್ಲಾ ಒಂದು ಚಾರಣವೇ ಸರಿ. ಮೊದಲು ಒಂದು  ಕಿ.ಮೀ. ಬೈಲು ದಾರಿ, ಮತ್ತೊಂದು ಕಿ.ಮೀ. ಗುಡ್ಡೆ ಮತ್ತು ಹಾಡಿ ದಾರಿ, ನಂತರ ಮೂಡು ಹಾಲಾಡಿಯಿಂದ ಶಾಲೆ ಇರುವ ಪಡು ಹಾಲಾಡಿಗೆ ರಸ್ತೆ ದಾರಿ. ಶಾಲೆಯಿಂದ ಬರುವಾಗ ಮಾವಿನ ಮಿಡಿ ಕೊಯ್ದು ತಿನ್ನುವುದು, ಚೀಂಪಿ
ಹಣ್ಣು ತಿನ್ನುವುದು, ಗರ್ಚನ ಕಾಯಿ ತಿನ್ನುವುದು, ಹಕ್ಕಿ ಪಕ್ಷಿಗಳನ್ನು ನೋಡುವುದು, ಮರಗಿಡಗಳ ವಿಸ್ಮಯಗಳನ್ನು ಗಮನಸುವುದು ಇಂತಹವೇ ಮೊದಲಾದ ಚಟುವಟಿಕೆಗಳು. ವಿಚಿತ್ರ ಜೀವಿ ಹಾರುವ ಓತಿಯನ್ನು ಆ ದಾರಿಯಲ್ಲೇ ಮೊದಲ ಬಾರಿ ನಾನು ನೋಡಿದ್ದು!

ಮಳೆ ಬಂದಾಗಲಂತೂ, ಆ ಮೂರು ಕಿ.ಮೀ. ನಡೆಯುವುದೇ ಒಂದು ಸಾಹಸ. ಒಮ್ಮೊಮ್ಮೆ ನೆರೆ ಬಂದು, ಹಾಲಾಡಿ ಸಣ್ಣ ಸೇತುವೆ ಮುಳುಗಿ ಹೋಗುತ್ತಿದ್ದುದೂ ಉಂಟು! ಆಗ ಮೊಳಕಾಲುದ್ದದ ಕೆಂಪುಬಣ್ಣದ ನೀರಿನಲ್ಲಿ ಕಾಲಾಡಿಸುತ್ತಾ, ಕೈ ಕೈ ಹಿಡಿದು ರಸ್ತೆ ದಾಟಿ ಬರುವ ಅನುಭವವೂ ಸಾಹಸದ ಪಾಠಗಳನ್ನೂ
ಒದಗಿಸುತ್ತಿತ್ತು. ಇಂತಹ ಹಲವು ತೊಡಕುಗಳೇ, ಅವನ್ನು ನಿವಾರಿಸಿ ಮುಂದುವರಿದ ಹಲವು ಅನುಭವಗಳೇ ನಮಗೆ ಬದುಕಿನ ಪಾಠಗಳನ್ನು ಕಲಿಸುತ್ತಿದ್ದವು
ಎಂಬುದು ಸುಳ್ಳಲ್ಲ! ಆದರೆ ಇಂದು ಅನುಕೂಲ ಹೆಚ್ಚಿದಷ್ಟೂ, ಅನಗತ್ಯ ವಿವಾದಗಳಲ್ಲಿ ವಿದ್ಯಾರ್ಥಿ ಸಮುದಾಯವನ್ನು ಸಿಕ್ಕಿಸಿ ಹಾಕುವ ಕೆಲಸ ನಡೆಯುತ್ತಿದೆ ಯಲ್ಲಾ, ಇದು ಮಾತ್ರ ಈ ಕಾಲಮಾನದ ದೊಡ್ಡ ದುರಂತ.