Sunday, 15th December 2024

ಪ್ಲಾಸ್ಟಿಕ್ ಮೋಹ ಬಿಟ್ಟು ಹೊಸ ಕಲ್ಪನೆಗೆ ಮಾರುಹೋದರು

ನಾಡಿಮಿಡಿತ

ವಸಂತ ನಾಡಿಗೇರ

vasanth.nadiger@gmail.com

ಮಾರುಕಟ್ಟೆಗೆ ಹೋದಾಗ ಹೂವು ಹಣ್ಣು ತೆಗೆದುಕೊಳ್ಳುತ್ತೇವೆ. ಅವರು ಟಕ್ ಅಂತ ಒಂದು ಕ್ಯಾರಿ ಬ್ಯಾಗ್ ಎಳೆದು ಅದರಲ್ಲಿ ನಾವು ಖರೀದಿಸಿದ ವಸ್ತುಗಳನ್ನು ಹಾಕಿ ಕೊಡುತ್ತಾರೆ. ನಮಗೂ ಅನುಕೂಲ, ಅವರಿಗೂ ಅನುಕೂಲ. ಪ್ಲಾಸ್ಟಿಕ್ ಬ್ಯಾನ್ ಆಗಿದೆ ಎಂದು ಸ್ವಲ್ಪದಿನ ಹೇಳುತ್ತಿದ್ದರು. ಈಗ ಮತ್ತೆ ಯಥಾಪ್ರಕಾರ ಕ್ಯಾರಿ
ಬ್ಯಾಗುಗಳ ದರ್ಬಾರ್ ಶುರುವಾಗಿದೆ.

ಕೊಡಲ್ಲ ಎಂದು ಹೇಳಿದರೆ ಅವರನ್ನು ದುರುಗುಟ್ಟಿ ನೋಡುವ ಜನರ ಸಂಖ್ಯೆ ಹೆಚ್ಚು. ಇದೇ ಕಾರಣಕ್ಕೆ ಅಲ್ಲಿಂದ ಮುಂದೆ ಹೋಗುವವರೂ ಉಂಟು. ಗಿರಾಕಿಗಳನ್ನು ಕಳೆದುಕೊಳ್ಳಬಾರದು ಎಂಬ ಕಾರಣಕ್ಕೆ ಅವರೂ ಅನಿವಾ ರ್ಯವಾಗಿ ಕೊಡುತ್ತಾರೆ. ಪ್ಲಾಸ್ಟಿಕ್ ಬ್ಯಾಗ್ ಉತ್ಪಾದನೆ ಘಟಕಗಳ ಮೇಲೆ ದಾಳಿ, ಪ್ಲಾಸ್ಟಿಕ್ ಬಳಸುತ್ತಿದ್ದ ಅಂಗಡಿಗಳಿಗೆ ದಂಡ ಎಂಬ ವರದಿಗಳನ್ನು ಆಗಾಗ ಕೇಳುತ್ತೇವಷ್ಟೆ. ಆದರೆ ಕದ್ದುಮುಚ್ಚಿ ಪ್ಲಾಸ್ಟಿಕ್ ಬ್ಯಾಗ್‌ಗಳ ಬಳಕೆ ನಡೆದೇ ಇದೆ.

ಇನ್ನು ದೊಡ್ಡ ದೊಡ್ಡ ಅಂಗಡಿಗಳಿಗೆ ಹೋಗಿ ಸಾವಿರಾರು ರೂಪಾಯಿಗಳ ಬಟ್ಟೆ ಬರೆ ಮತ್ತಿತರ ವಸ್ತುಗಳನ್ನು ಖರೀದಿಸಿದರೂ ಕ್ಯಾರಿ ಬ್ಯಾಗ್ ಬೇಕಾ ಎಂದು ಕೇಳು ತ್ತಾರೆ. ಹೌದು ಎಂದರೆ ಅದಕ್ಕೆ ಮತ್ತೆ ಐವತ್ತು ರುಪಾಯಿ ಜಡಿಯುತ್ತಾರೆ. ಅದರ ಜತೆಗೆ ಆ ಬ್ಯಾಗ್‌ಗಳ ಮೇಲೆ ಅವರ ಅಂಗಡಿ, ಬ್ರ್ಯಾಂಡ್ ಹೆಸರು ಬೇರೆ. ಅಂದರೆ ನಾವು ದುಡ್ಡು ಕೊಟ್ಟು ಅವರ ಬ್ರ್ಯಾಂಡ್ ಪ್ರಚಾರ ಮಾಡಬೇಕು. ಪ್ಲಾಸ್ಟಿಕ್ ಚೀಲಗಳನ್ನು ಬಳಸಬಾರದು ಎಂಬ ಮೂಲ ಉದ್ದೇಶವೇ ಮರೆಯಾಗಿ ಈ ರೀತಿಯ ಅಪಸವ್ಯಗಳು ಶುರುವಾಗಿವೆ.

25-30 ವರ್ಷಗಳ ಹಿಂದೆಯಷ್ಟೇ, ಕಿರಾಣಿ ಅಂಗಡಿಗೆ ಹೋದರೆ ಅಲ್ಲಿ ದಿನಸಿಗಳನ್ನು ಕಾಗದದ ಪೊಟ್ಟಣ ಮಾಡಿ ಅದರಲ್ಲಿ ಹಾಕಿಕೊಡುತ್ತಿದ್ದರು. ಅಲ್ಲದೆ ಮಾರ್ಕೆಟ್‌ಗೆ ತರಕಾರಿ ಮತ್ತಿತರ ವಸ್ತುಗಳನ್ನು ತರಲು ಹೋದರೆ ಮನೆಯಿಂದ ಹೊರಬೀಳುವಾಗ ಕೈಚೀಲ ತೆಗೆದುಕೊಂಡು ಹೋಗುವ ಪದ್ಧತಿ ಇತ್ತು. ಆದರೆ ಪ್ಲಾಸ್ಟಿಕ್ ಎಂಬ ಅದ್ಭುತ ಆವಿಷ್ಕಾರದೊಂದಿಗೆ ಜನರ ಜೀವನ ಶೈಲಿಯೇ ಬದಲಾಗಿ ಹೋಯಿತು. ಎಲ್ಲೇ ಹೋದರೂ ಕೈಬೀಸಿಕೊಂಡು ಹೋಗುವುದು, ಬರುವಾಗ ಎಲ್ಲ ವಸ್ತುಗಳನ್ನು ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ತುಂಬಿಕೊಂಡು ಬರುವುದು. ಅಂಗಡಿಗ ಳಲ್ಲೂ ಎಲ್ಲ ವಸ್ತುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲೇ ಪ್ಯಾಕ್ ಮಾಡುವುದು ಪ್ರಾರಂಭವಾಯಿತು.

ಎಣ್ಣೆ, ಜೂಸ್ ಮೊದಲಾದ ದ್ರವ ಪದಾರ್ಥಗಳಿಗೂ ಬಾಟಲ್, ಕ್ಯಾನ್ ಗಳು ಬಂದವು. ನೀರಿನ ಬಾಟಲಿಗಳು, ಡಬ್ಬಿಗಳು..ಎಲ್ಲ ಎಂದರೆ ಎಲ್ಲವೂ ಪ್ಲಾಸ್ಟಿಕ್‌ ಮಯವಾದವು. ಮೊದಲೆಲ್ಲ ಗಾಜಿನ ಬಾಟಲಿಗಳಲ್ಲಿ ಹಾಲನ್ನು ಪೂರೈಸಲಾಗುತ್ತಿತ್ತು. ಆದರೆ ಈಗ ಅದಕ್ಕೂ ಪ್ಲಾಸ್ಟಿಕ್ ಪ್ಯಾಕೆಟ್. ಜೀವನ ಎಷ್ಟು ಸುಲಭವಲ್ಲವೆ ಎನಿಸತೊಡಗಿತು. ನಾವು ಕ್ರಮೇಣ ಈ ಪ್ಲಾಸ್ಟಿಕ್‌ನ ದಾಸರಾಗಿಬಿಟ್ಟೆವು. ಅದರಲ್ಲೂ, ಬಳಸಿ ಬಿಸಾಡುವ ಅಂದರೆ ಒಂದು ಬಾರಿ ಮಾತ್ರ ಬಳಸಬಹುದಾದ – ಹಾಲಿನ ಪ್ಯಾಕೆಟ್, ಟೆಟ್ರಾಪ್ಯಾಕ್, ಜೂಸ್ ಮತ್ತು ನೀರಿನ ಬಾಟಲ್, ತೆಳುವಾದ ಕ್ಯಾರಿಬ್ಯಾಗ್- ಇತ್ಯಾದಿಗಳ ಬಳಕೆ ಎಗ್ಗಿಲ್ಲದೆ ಸಾಗಿತು. ಹೀಗೆ ಪ್ಲಾಸ್ಟಿಕ್ ಎಂಬುದು ಜನರ ಜೀವನವನ್ನು ಹಗುರ ಮಾಡಿದ್ದು ಹೌದಾದರೂ ಆದು ಪೆಡಂಭೂತವಾಗಿ ಬೆಳೆಯತೊಡಗಿದ್ದು ನಮಗೆ ಅರ್ಥವಾಗಲೇ ಇಲ್ಲ. ಅಥವಾ ಈಗಲೂ ಅರ್ಥವಾಗು ತ್ತಿಲ್ಲ.

1950 ರಿಂದ 70 ರ ವರೆಗೆ ಪ್ಲಾಸ್ಟಿಕ್ ಹಾವಳಿ ಅಷ್ಟಾಗಿ ಗೊತ್ತಾಗಲಿಲ್ಲ. ಅದರ ನಿರ್ವಹಣೆಯೂ ಅಂಥ ಸಮಸ್ಯೆಯಾಗಿಯೂ ಕಾಣಲಿಲ್ಲ. ಆದರೆ 1990ರ ವೇಳೆಗೆ ಪ್ಲಾಸ್ಟಿಕ್‌ನ ಉತ್ಪಾದನೆ ಹೆಚ್ಚಳದೊಂದಿಗೆ ಅದರ ಬಳಕೆಯೂ ತ್ರಿಗುಣಗೊಂಡಿತು. 2000ದ ಹೊತ್ತಿಗೆ ಕಳೆದ ನಾಲ್ಕು ದಶಕಗಳಲ್ಲಿ ಉತ್ಪಾದನೆಯಾದ ಪ್ಲಾಸ್ಟಿಕ್ ಕಸ ಒಂದು ದಶಕದಲ್ಲೇ ಉತ್ಪಾದನೆಯಾಯಿತು.

ಈಗ ಏನಾಗಿದೆ ನೋಡಿ. ಜಗತ್ತಿನಾದ್ಯಂತ ಪ್ರತಿ ನಿಮಿಷ 10 ಲಕ್ಷ ಕುಡಿಯುವ ನೀರಿನ ಬಾಟಲಿಗಳನ್ನು ಖರೀದಿಸಲಾಗುತ್ತಿದೆ. ಬಾರತವು 5 ಟ್ರಿಲಿಯನ್ ಅರ್ಥವ್ಯವಸ್ಥೆಯಾಗಬೇಕೆಂಬ ಕನಸು ಕಾಣುತ್ತಿದ್ದೇವೆ. ಆದರೆ ಪ್ರತಿವರ್ಷ ವಿಶ್ವದಾದ್ಯಂತ ೫ ಟ್ರಿಲಿಯನ್‌ನಷ್ಟು, ಒಂದು ಬಾರಿ ಮಾತ್ರ ಬಳಸಬಹುದಾದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ಉಪಯೋಗಿಸಲಾಗುತ್ತಿದೆ. ಇದೀಗ ನಾವು ವಾರ್ಷಿಕವಾಗಿ 30 ಕೋಟಿ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸುತ್ತಿದ್ದೇವೆ. 1950 ರಿಂದ ಲೆಕ್ಕ ಹಾಕಿದರೆ ಇದು 830 ಕೋಟಿ ಟನ್ ಆಗುತ್ತದೆ. ಹಾಗಾದರೆ ಇದೆಲ್ಲ ಎಲ್ಲಿ ಹೋಗುತ್ತದೆ ಎಂದರೆ, ಎಲ್ಲೂ ಇಲ್ಲ, ಭೂಮಿಯನ್ನು, ಸಾಗರವನ್ನು ಸೇರುತ್ತದೆ.
ಇಲ್ಲವೆ ಗುಡ್ಡವಾಗಿ ಎದ್ದು ನಿಲ್ಲುತ್ತದೆ. ಏಕೆಂದರೆ ಪ್ಲಾಸ್ಟಿಕ್ ಕರಗುವುದಿಲ್ಲ. ಅದು ಬೊಜ್ಜಿನಂತೆ ಹೆಜ್ಜಾಗುತ್ತಲೇ ಇದೆ.

ಪೆಟ್(ಪಾಲಿಎಥಿಲೀನ್‌ಟೆರಿಥ್ಯಾಲೇಟ್) ಬಾಟಲುಗಳು ಅಂದರೆ ನೀರಿನ ಬಾಟಲುಗಳು; ಶಾಂಪೂ, ಮಿಲ್ಕ್ ಬಾಟಲ್ ಮೊದಲಾದ ಎಚ್‌ಡಿಪಿಇ; ಬ್ಯಾಗ್‌ಗಳು, ಫುಡ್
ಪ್ಯಾಕೇಜಿಂಗ್ ವಸ್ತುಗಳೇ ಮೊದಲಾದ ಎಲ್‌ಡಿಪಿಇ (ಕ್ಯಾರಿಬ್ಯಾಗ್ ಎನ್ನುತ್ತೇವಲ್ಲ ಆ ಥರದ್ದು); ಚಿಪ್ಸ್ ಬ್ಯಾಗುಗಳು, ಐಸ್‌ಕ್ರೀಂ ಟಬ್ಸ್, ಏಕ ಬಳಕೆಯ ಫೇಸ್
ಮಾಸ್ಕ್ ಮುಂತಾದ ಪಿಪಿ; ಪ್ಲೇಟ್, ಕಪ್ ಮೊದಲಾದ ಪಾಲಿಸ್ಟಿರೀನ್- ಹೀಗೆ ವಿಧ ವಿಧವಾದ ಬಗೆಯ ಪ್ಲಾಸ್ಟಿಕ್ ಗಳಿದ್ದು ಅವೆಲ್ಲವೂ ಬಳಸಿ ಬಿಸಾಡುವಂಥವೇ.
ಇದು ವಿಪರೀತ ಪರಿಸರ ಹಾನಿಗೆ ಕಾರಣವಾಗಿದೆ. ಕ್ಯಾರಿ ಬ್ಯಾಗ್‌ಗಳು ಹಸುಗಳ ಹೊಟ್ಟೆ ಸೇರುತ್ತಿವೆ. ಬಾಟಲು ಮತ್ತಿತರ ಪ್ಲಾಸ್ಟಿಕ್ ವಸ್ತುಗಳು ಕೆರೆ, ನದಿ, ಸಮುದ್ರ ಮೊದಲಾವುಗಳ ಒಡಲು ಸೇರುತ್ತಿವೆ.

ತಿಮಿಂಗಲು ಮುಂತಾದ ಜಲಚರಗಳ ಉದರ ಹೊಕ್ಕು ಅವುಗಳ ಸಾವಿಗೆ ಕಾರಣವಾಗುತ್ತಿವೆ. ಪ್ಲಾಸ್ಟಿಕ್ ತ್ಯಾಜ್ಯ ಅತಿಹೆಚ್ಚು ನೀರಿನ ಒಡಲು ಸೇರುತ್ತಿರುವ ಹತ್ತು ಪ್ರಮುಖ ನದಿಗಳಲ್ಲಿ ಗಂಗಾ, ಮೇಘನಾ, ಬ್ರಹ್ಮಪುತ್ರಾ ನದಿಗೆ 9 ನೇ ಸ್ಥಾನವಿದ್ದು 72, 845 ಟನ್‌ನಷ್ಟು ಪ್ಲಾಸ್ಟಿಕ್ ತ್ಯಾಜ್ ಇವುಗಳ ಒಡಲು ಸೇರಿದೆ. ಹಾಗೆಂದು ಇದರ ಅರಿವು ನಮಗೆ ಇಲ್ಲವೇ ಇಲ್ಲ ಎಂದಲ್ಲ. ಒಮ್ಮೆ ಬಳಸಬಹುದಾದ ಪ್ಲಾಸ್ಟಿಕ್ ಅನ್ನು. ಸರಕಾರ ನಿಷೇಧಿಸಿದೆ. ಆದರೆ ಈಗಾಗಲೇ ತಿಳಿಸಿದಂತೆ ಅದರ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲ. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ಕೈಬಿಡುವುದು ಅಸಾಧ್ಯ. ಆದರೆ ಎಲ್ಲಿ, ಎಷ್ಟು ಸಾಧ್ಯವೋ ಅಷ್ಟು ಮಾಡಬಹುದಾಗಿದೆ.

ಅಂಗಡಿಯವರು ಕ್ಯಾರಿ ಬ್ಯಾಗ್‌ಗಳನ್ನು ಕೊಡುವುದನ್ನು ನಿಲ್ಲಿಸಬೇಕು. (ದುಡ್ಡು ಕೊಟ್ಟರೆ ಕೊಡುವುದೂ ಸೇರಿದಂತೆ). ಜನರೂ ಕೂಡ ಅವುಗಳನ್ನು ನಿರಾಕರಿಸ ಬೇಕು. ಮನೆಯಿಂದ ಚೀಲ ಒಯ್ಯುವುದನ್ನು ರೂಢಿಸಿಕೊಳ್ಳಬೇಕು. ಹಾಗೆಂದು ಈಚೆಗೆ ಈ ನಿಟ್ಟಿನಲ್ಲಿ ಸಾಕಷ್ಟು ಜಾಗೃತಿ ಉಂಟಾಗಿರುವುದು ಒಳ್ಳೆಯ ಬೆಳವಣಿಗೆ. ಈ ನಿಟ್ಟಿನಲ್ಲಿ ಕೇರಳದಲ್ಲಿ ನಡೆದಿರುವ ಪ್ರಯೋಗವೊಂದರ ಬಗ್ಗೆ ಹೇಳುವುದು ಉಚಿತ ಎನಿಸುತ್ತದೆ. ಇಲ್ಲಿ ಆ ಅಂಗಡಿ ಮುಖ್ಯವಲ್ಲ. ಅದಕ್ಕೆ ಪ್ರಾಮುಖ್ಯತೆ ಕೊಡುವುದೂ ಅಲ್ಲ. ಆದರೆ ಅದರ ಉದ್ದೇಶದ ಬಗ್ಗೆ ಗಮನ ಸೆಳೆಯುವುದಷ್ಟೇ.

ಅದರ ಹೆಸರು 7-9 ಗ್ರೀನ್ ಸ್ಟೋರ್. ಜೀರೋ ವೆಸ್ಟ್ ಸ್ಟೋರ್ ಎಂದೂ ಕರೆಯುತ್ತಾರೆ. ಕೇರಳದ ಕೊಚ್ಚಿಯಿಂದ ಸ್ವಲ್ಪ ದೂರದಲ್ಲಿರುವ ಕೊಲೆಂಚೇರಿ ಎಂಬಲ್ಲಿ ಈ ಅಂಗಡಿ ಇದೆ. ಏನಿದರ ವಿಶೇಷ ಎಂದಿರಾ? ಹೆಸರೇ ಸೂಚಿಸುವಂತೆ ಇದು ಪರಿಸರ ಸ್ನೇಹಿ ಅಂಗಡಿ. ಅಂದರೆ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಇಲ್ಲದಂಥ ಸರಕುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ಇದರ ಕಥೆಯೂ ರೋಚಕವಾಗಿದೆ.

ಇದು ಒಬ್ಬ ಪರಿಸರ ಪ್ರೇಮಿಯ ಅಥವಾ ಪರಿಸರದ ಬಗ್ಗೆ ಕಾಳಜಿ ಇರುವ ವ್ಯಕ್ತಿಯ ಕಲ್ಪನೆಯ ಕೂಸು. ಅವರ ಹೆಸರು ಬಿಟ್ಟು ಜಾನ್ ಕುಲುಂಗಲ್ ಎಂದು.
ಪ್ಲಾಸ್ಟಿಕ್ ‘ಬಿಟ್ಟು’ ಮರುಬಳಕೆಯ ವಸ್ತುಗಳ ಬಳಕೆ ಕುರಿತು ಗ್ರಾಹಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕನಸುಗಾರ. ಹಾಗೆ ನೋಡಿದರೆ ಬಿಟ್ಟು ಜಾನ್ ಓದಿದ್ದು
ಏರೊನಾಟಿಕಲ್ ಎಂಜಿನಿಯರಿಂಗ್‌ನಲ್ಲಿ ಎಂಟೆಕ್. 2016 ರಲ್ಲಿ ಲಂಡನ್‌ಗೆ ಪ್ರವಾಸ ಹೋಗಿದ್ದಾಗ ಅಲ್ಲೊಂದು ಜೀರೊ ವೇಸ್ಟ್ ಸ್ಟೋರ್ (ಅಂದರೆ ವ್ಯರ್ಥವಾಗ ದಿರುವಂಥ ಸರಕುಗಳ ಬಳಕೆ) ನೋಡಿ ಆಕರ್ಷಿತರಾದರು. ಅದರಿಂದ ಪ್ರೇರಣೆ ಮತ್ತು ಉತ್ತೇಜನ ಪಡೆದ ಅವರ ತಲೆಯಲ್ಲಿ ಕನಸೊಂದು ಮೊಳಕೆಯೊಡೆಯಿತು. ಊರಿಗೆ ಮರಳುತ್ತಲೇ ಆ ಕನಸಿಗೆ ನೀರೆರೆಯತೊಡಗಿದರು.

ಹೇಗೂ ಮೂರು ತಲೆಮಾರುಗಳಿಂದ ಅವರ ಕುಟುಂಬದವರು ನಡೆಸಿಕೊಂಡು ಬರುತ್ತಿದ್ದ ದಿನಸಿ ಅಂಗಡಿ ಇತ್ತಲ್ಲ. ಅಲ್ಲೇ ತಮ್ಮ ಪ್ರಯೋಗ ಮಾಡಲು ನಿರ್ಧರಿಸಿ ದರು. ತಮ್ಮ ಕೆಲಸಕ್ಕೆ ಗುಡ್ ಬೈ ಹೇಳಿದರು. ಅಂಗಡಿಯನ್ನೇ ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡರು. ಆದರೆ ಇದು ಅಂದುಕೊಂಡಷ್ಟು ಸುಲಭ ವಾಗಿರಲಿಲ್ಲ. ಏಕೆಂದರೆ ಜನರು ಪ್ಲಾಸ್ಟಿಕ್ ಬಳಕೆಗೆ ಒಗ್ಗಿಕೊಂಡಿದ್ದರಲ್ಲ. ಅವರ ಮನಸ್ಥಿತಿಯನ್ನು ಬದಲಾಯಿಸುವುದು ದೊಡ್ಡ ಕೆಲಸ ಮತ್ತು ಸವಾಲಿನದಾಗಿತ್ತು. ಆದರೆ ಛಲಬಿಡದೆ ಕಾರ್ಯ ಪ್ರವೃತ್ತರಾದರು. ‘ಸಾಂಪ್ರದಾಯಿಕ ಶೈಲಿಯ, ನಮ್ಮ ತಂದೆಯ ದಿನಸಿ ಅಂಗಡಿಯನ್ನು ಜೀರೋ ವೇಸ್ಟ್ ಸ್ಟೋರ್ ಆಗಿ ಪರಿವರ್ತಿ ಸಲು ಸುಮಾರು ಒಂದೂವರೆ ವರ್ಷ ಬೇಕಾಯಿತು’ ಎನ್ನುತ್ತಾರೆ ಬಿಟ್ಟು.

ಹೊಸದಾಗಿ ಇಂಥ ಅಂಗಡಿ ತೆರೆಯುವುದು ತುಸು ಕಷ್ಟದ ಕೆಲಸವೇ. ಆದರೆ ನಮ್ಮ ಅಂಗಡಿಗೆ ಸಾಮಾನುಗಳನ್ನು ಪೂರೈಸುವವರು ಇದ್ದೇ ಇದ್ದರು. ಅದರದ್ದೇನೂ ಸಮಸ್ಯೆ ಆಗಲಿಲ್ಲ. ಆದರೆ ಕೈಬೀಸಿಕೊಂಡು ಬಂದು ಪ್ಯಾಕ್ ಮಾಡಿದ ವಸ್ತುಗಳನ್ನು ಆಯ್ದುಕೊಂಡು ಕ್ಯಾರಿಬ್ಯಾಗ್‌ಗಳಲ್ಲಿ ಕೊಂಡೊಯ್ಯು ವುದನ್ನು ರೂಢಿ ಮಾಡಿಕೊಂಡಿದ್ದ ಗ್ರಾಹಕರ ಅಭ್ಯಾಸವನ್ನು ಬದಲಾಯಿಸುವುದು ಸುಲಭವಾಗಿರಲಿಲ್ಲ. ಅದೂ ಅಲ್ಲದೆ ಬ್ರ್ಯಾಂಡೆಡ್ ವಸ್ತುಗಳಿಗೆ ಒಗ್ಗಿಕೊಂಡಿರುವ ಗ್ರಾಹಕ ರನ್ನು ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವಂತೆ ಮನವೊಲಿಸುವುದೂ ಸವಾಲಾಗಿತ್ತು.

ಆದರೆ ನಾವು ಪ್ರಯತ್ನ ಬಿಡಲಿಲ್ಲ ‘ಮೊದಮೊದಲು ಸ್ಯಾಂಪಲ್‌ಗಳನ್ನು ಕೊಟ್ಟು, ಪ್ರಯತ್ನಿಸಿ ಎಂದು ಹೇಳುತ್ತಿದ್ದೆವು. ಜನರಿಗೂ ನಿಧಾನವಾಗಿ ಅವು ಮೆಚ್ಚುಗೆ ಯಾಗತೊಡಗಿದವು. ತಾಜಾ, ನೈಸರ್ಗಿಕ, ಪರಿಸರಸ್ನೇಹಿ ಹಾಗೂ ಮನೆಯಲ್ಲಿ ತಯಾರಿಸಲಾದ ಉತ್ಪನ್ನಗಳೇ ಆಗಿದ್ದವು. ಅದರಲ್ಲಿ ಕೃತಕ ಬಣ್ಣಗಳಾಗಲೀ.
ಪ್ರಿಸರ್ವೇಟಿವ್‌ಗಳಾಗಲೀ ಇರಲಿಲ್ಲ. ಹೀಗಾಗಿ ಜನರು ಒಪ್ಪಿಕೊಂಡರು’ ಎನ್ನುತ್ತಾರೆ ಬಿಟ್ಟು. 500 ಚದರಡಿಯ ಈ ಪುಟ್ಟ ಅಂಗಡಿಯಲ್ಲಿ ನಿಧಾನವಾಗಿ ಈ ರೀತಿಯ ಉತ್ಪನ್ನಗಳೇ ಲಭ್ಯವಾಗ ತೊಡಗಿದವು. ಈಗ ಎಲ್ಲೆಲ್ಲೂ ಸೋಪು, ಸ್ಯಾನಿಟೈಸರ್‌ಗಳ ಕಾಲ. ಆದರೆ ಅವುಗಳನ್ನು ಉಪಯೋಗಿಸಿದರೆ ಅಡ್ಡಪರಿಣಾಮದ ಭಯ. ಈ ಅಂಗಡಿಯಲ್ಲಿ ಮಾತ್ರ ಇವೆಲ್ಲ ರಾಸಾಯನಿಕ ಮುಕ್ತವಾದಂಥವು.

ಪಾತ್ರೆ ತೊಳೆಯುವ ದ್ರವ ಪದಾರ್ಥಗಳೂ ಹಾಗೆಯೇ. ನಾವೆಲ್ಲ ಬಣ್ಣ ಬಣ್ಣದ, ಬಗೆ ಬಗೆಯ ಪ್ಲಾಸ್ಟಿಕ್ ಟೂತ್ ಬ್ರಷ್ ಬಳಸುತ್ತೇವೆ. ಆದರೆ ಇಲ್ಲಿ ಬಿದಿರಿನ ಟೂತ್‌ ಬ್ರಷ್ ಲಭ್ಯ. ಟೂತ್‌ಪೇಸ್ಟ್ ಕೂಡ ಅಷ್ಟೇ. ಮೊದಲೇ ರಾಸಾಯನಿಕ ವಸ್ತುಗಳಿಂದ ಮಾಡಲಾಗಿರುತ್ತದೆ. ಅದಕ್ಕೆ ಪ್ಲಾಸ್ಟಿಕ್ ಟ್ಯೂಬ್. ಮೇಲೆ ರಟ್ಟಿನ ಪೆಟ್ಟಿಗೆ. ಆದರೆ ಈ ಅಂಗಡಿಯಲ್ಲಿ ಮಾತ್ರೆಯ ರೂಪದಲ್ಲಿ ಟೂತ್‌ಪೇಸ್ಟ್ ಸಿಗುತ್ತದೆ.

ಇಲ್ಲಿನ ಮತ್ತೊಂದು ಆಕರ್ಷಣೆ ಮತ್ತು ವೈಶಿಷ್ಟ್ಯ ಎಂದರೆ ಆರ್ಗ್ಯಾನಿಕ್ ಕಾರ್ನರ್. ಅಂದರೆ ಮಾರುಕಟ್ಟೆಯಂತೆ ತರಕಾರಿಗಳು ಬಿಡಿಬಿಡಿಯಾಗಿ ಸಿಗುತ್ತವೆ. ಯಾವುದು ಎಷ್ಟು ಬೇಕೊ ಅಷ್ಟನ್ನು ತೆಗೆದುಕೊಳ್ಳಬಹುದು. ಹೀಗೆ ಈ ಅಂಗಡಿ ನಿಧಾನಕ್ಕೆ ಜನಪ್ರಿಯಗೊಳ್ಳುತ್ತಿದೆ. ದೂರದೂರದಿಂದ ಗ್ರಾಹಕರು ಬರತೊಡಗಿ ದ್ದಾರೆ. ಆದರೆ ಇದರ ನಿರ್ವಹಣೆ ಸುಲಭವಲ್ಲ. ಏಕೆಂದರೆ ಪ್ಯಾಕೇಜ್ ಮಾಡಲಾದ ವಸ್ತುಗಳು ಬಹು ಕಾಲ ಕೆಡುವುದಿಲ್ಲ. ಆದರೆ ಇಲ್ಲಿರುವ ಬಿಡಿ ವಸ್ತುಗಳನ್ನು ಕೆಡದಂತೆ ಕಾಪಾಡುವುದು ಕಷ್ಟ. ಅಂದರೆ ಪ್ಯಾಕ್ ಮಾಡಲಾದ ವಸ್ತುಗಳ ಶೆಲ್ ಲೈಫ್ 9 ತಿಂಗಳವರೆಗೆ ಇರುತ್ತದೆ. ಅಥವಾ ಹಾಗೆ ನಮೂದಿಸಿರುತ್ತಾರೆ.

ಆದರೆ, ಉದಾಹರಣೆಗೆ ಹೇಳುವುದಾದರೆ, ಸ್ಥಳೀಯವಾಗಿ ಬೀಸಿ ತರಲಾದ ಗೋಧಿಹಿಟ್ಟು ಹೆಚ್ಚೆಂದರೆ ಒಂದು ವಾರ ಕಾಲ ಇರುತ್ತದೆ. ಅಷ್ಟರೊಳಗೆ ಅದನ್ನು ಮಾರಾಟಮಾಡಬೇಕು. ಪ್ಯಾಕ್ ಮಾಡಲಾದ ವಸ್ತುಗಳಿಗಿಂತ ಇವು ಹೇಗೆ ಒಳ್ಳೆಯವು ಎಂಬುದನ್ನು ಜನರಿಗೆ ತಿಳಿ ಹೇಳಬೇಕು. ಅದಕ್ಕಿಂತ ಹೆಚ್ಚಾಗಿ ಎಷ್ಟೊಂದು ಪ್ಲಾಸ್ಟಿಕ್ ಉಳಿತಾಯ ವಾಗುತ್ತದೆ ಎಂಬುದರತ್ತ ಗಮನ ಸೆಳೆಯಬೇಕು. ಆದರೆ ಇದೀಗ ಜನರು ಬದಲಾವಣೆಗೆ ತೆರೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಒಂದಷ್ಟು ರಿಯಾಯಿತಿಗಳು ಲಭ್ಯ. ತಮ್ಮದೇ ಚೀಲ ಅಥವಾ ಬಾಟಲುಗಳನ್ನು ತರುವ ಗ್ರಾಹಕರಿಗೆ ಶೇ. 2ರ ರಿಯಾಯಿತಿ ಸಿಗುತ್ತದೆ. ಖಾಲಿ ಕೈಯಲ್ಲಿ ಬಂದವರೂ ಕೂಡ ಒಮ್ಮೆ ಹಣ ಕೊಟ್ಟು ಆರ್ಗ್ಯಾನಿಕ್ ಚೀಲವನ್ನು ತೆಗೆದುಕೊಂಡು ಹೋಗಿ ಅದನ್ನು ಮರುಬಳಕೆ ಮಾಡಬಹುದು.

ಆದರೆ ಪ್ಲಾಸ್ಟಿಕ್ ಬ್ಯಾಗು ಮಾತ್ರ ಸುತರಾಂ ಸಿಗುವುದಿಲ್ಲ. ಹಣ ಠೇವಣಿ ಇಟ್ಟರೆ ಗಾಜಿನ ಬಾಟಲಿಗಳೂ ಲಭ್ಯ. ರಿಯಾಯಿತಿ ಮಾತ್ರವಲ್ಲದೆ, ಎಷ್ಟು ಪ್ರಮಾಣದ
ಪಾಸ್ಟಿಕ್ ಉಳಿಸಿದಿರಿ ಎಂಬುದನ್ನೂ ಬಿಲ್‌ನಲ್ಲಿ ನಮೂದಿಸಲಾಗುವುದು. ಹೀಗೆ ಒಬ್ಬೊಬ್ಬರಾಗಿ ಈ ಅಂಗಡಿಯ ಜೀರೋ ವೇಸ್ಟ್ ಸಂಸ್ಕೃತಿಗೆ ಒಗ್ಗಿಕೊಳ್ಳುತ್ತಿದ್ದಾರೆ. ಇಂಥ ಶೇ. 20 ರಷ್ಟು ಜನರು ಇತರ ಶೇ. 20 ರಷ್ಟು ಜನರ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಇಷ್ಟು ಮಾತ್ರವಲ್ಲದ ಆಸುಪಾಸಿನ ಅಂಗಡಿಗಳವರೂ ಈ
ಕಲ್ಪನೆ ಯನ್ನು ಅಳವಡಿಸಿಕೊಳ್ಳತೊಡಗಿದ್ದಾರೆ. ಇದಲ್ಲದೆ ಪತ್ರಿಕೆಗಳು, ಟಿವಿ, ಯೂ ಟ್ಯೂಬ್ ಸಾಮಾಜಿಕ ಜಾಲತಾಣಗಳಲ್ಲಿ ಈ ಅಂಗಡಿಯ ಬಗ್ಗೆ ವರದಿಗಳು ಬಂದಿವೆ.

ಹೀಗಾಗಿಯೂ ಒಂದಷ್ಟು ಪ್ರಚಾರ ಸಿಕ್ಕಿದೆ. ಗ್ರಾಹಕರು ಮಾತ್ರವಲ್ಲದೆ ತಾವೂ ಈ ರೀತಿಯ ಅಂಗಡಿಗಳನ್ನು ತೆರೆಯುವ ಬಯಕೆ ವ್ಯಕ್ತಪಡಿಸಿ ಬಿಟ್ಟು ಅವರನ್ನು ಸಂಪರ್ಕಿಸತೊಡಗಿದ್ದಾರೆ. ಒಟ್ಟಾರೆಯಾಗಿ ಜನರ ಕೊಳ್ಳುವ ಅಭ್ಯಾಸವನ್ನು ಬದಲಾಯಿಸಿರುವ ತೃಪ್ತಿ ಬಿಟ್ಟುಗಿದೆ. ಎಂಜಿನಿಯರಿಂಗ್ ವೃತ್ತಿಯಲ್ಲಿ ಈ ತೃಪ್ತಿ ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಜತೆಗೆ ಎರಡು ವರ್ಷಗಳಲ್ಲಿ 10 ಲಕ್ಷ ಸಂಖ್ಯೆಯ ಪ್ಲಾಸ್ಟಿಕ್ ಬಳಕೆಯನ್ನು ಉಳಿಸಿರುವ ಹೆಮ್ಮೆಯೂ ಇದೆ ಎನ್ನುತ್ತಾರೆ.
ಆಸುಪಾಸಿನಲ್ಲಿ 40 ದಿನಸಿ ಅಂಗಡಿಗಳು ಹಾಗೂ ಐದು ಸೂಪರ್ ಮಾರ್ಕೆಟ್‌ಗಳಿವೆ. ಅವೆಲ್ಲವೂ ಜೀರೊ ವೇಸ್ಟ್ ಕಲ್ಪನೆಯನ್ನು ಜಾರಿಗೆ ತಂದಿದ್ದರೆ ಇಷ್ಟೊತ್ತಿಗೆ ಎಷ್ಟೊಂದು ಪಾಸ್ಟಿಕ್ ಉಳಿಯುತ್ತಿತ್ತು ಎಂಬುದು ಅವರ ಪ್ರಶ್ನೆ.

ಪರಿಸರ ಸಂರಕ್ಷಣೆಯಲ್ಲಿ ಬಿಟ್ಟು ಅವರಂಥವರ ಕೊಡುಗೆ ಅಪಾರ. ನಮಗೆ ಇವರು ಆದರ್ಶ ಮತ್ತು ಪ್ರೇರಣೆ ಆಗಬಲ್ಲರು. ಆಗಬೇಕು.

ನಾಡಿಶಾಸ್ತ್ರ
ಕೈಚೀಲವನ್ನು ತನ್ನಿ ಪ್ಲಾಸ್ಟಿಕ್ ಬಿಟ್ಟು
ಎಂಬ ಬಿಟ್ಟು ಅಭಿಯಾನದ ಪಟ್ಟು
ನೋಡಿ ಜನರು ಇದೀಗ ಬಿಟ್ಟು
ಬಿಡುತ್ತಿದ್ದಾರೆ ಪ್ಲಾಸ್ಟಿಕ್‌ನ ಪಟ್ಟು