Thursday, 12th December 2024

ಈ ಸಚಿವರಿಗೆ ಅತಂತ್ರ ಸರಕಾರ ಬೇಕಂತೆ

ಮೂರ್ತಿ ಪೂಜೆ

ಮೊನ್ನೆ ಕರ್ನಾಟಕಕ್ಕೆ ಬಂದ ಬಿಜೆಪಿ ನಾಯಕ ಆಶೀಶ್ ಶೆಲಾರ್ ಅವರಿಗೆ ಚಿಂತೆ ಶುರುವಾಯಿತಂತೆ. ಅಂದ ಹಾಗೆ ಮುಂಬೈ ಮಹಾನಗರದ ಬಿಜೆಪಿ ಅಧ್ಯಕ್ಷರಾಗಿರುವ ಶೆಲಾರ್ ಅವರಿಗೆ ಬೆಂಗಳೂರು ದಕ್ಷಿಣ ಭಾಗದ ಹತ್ತು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ನೀಡಲಾಗಿದೆ. ಮುಂಬಯಿ ಮಹಾನಗರದ ಮೂವತ್ತೊಂಬತ್ತು ವಿಧಾನಸಭಾ ಕ್ಷೇತ್ರಗಳನ್ನು ನೋಡಿಕೊಳ್ಳುತ್ತಿರುವ ಶೆಲಾರ್ ಅವರಿಗೆ, ಅಲ್ಲಿ ಕಾಣದ ಒಂದು ವಿಚಿತ್ರ ಸಂಗತಿ ಇಲ್ಲಿ ಗೋಚರವಾಯಿತಂತೆ.

ಇದೇ ಅವರ ಚಿಂತೆಗೆ ಕಾರಣ. ಅಂದರೆ? ಕರ್ನಾಟಕದಲ್ಲಿ ಸ್ವಯಂಬಲದ ಮೇಲೆ ಗೆದ್ದು ಅಧಿಕಾರ ಹಿಡಿಯಲು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಹಗಲು-ರಾತ್ರಿ ಕಷ್ಟಪಡುತ್ತಿದ್ದರೆ, ಇಲ್ಲಿ ಬಿಜೆಪಿ ಸರ್ಕಾರದ ಕೆಲ ಸಚಿವರು ಮತ್ತು ನಾಯಕರು ಕಾಂಗ್ರೆಸ್ ಪಕ್ಷದ ಕ್ಯಾಂಡಿಡೇಟುಗಳನ್ನು ಗೆಲ್ಲಿಸಲು ಕಸರತ್ತು ಮಾಡುತ್ತಿದ್ದಾರೆ ಎಂಬ ಸಂಗತಿ ಆಶೀಶ್ ಶೆಲಾರ್ ಅವರ ಗಮನಕ್ಕೆ ಬಂದಿದೆ.

ಅರೇ, ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ ತಾನೇ ಇವರಿಗೆಲ್ಲ ಅಧಿಕಾರ ಮತ್ತು ಪವರು? ಆದರೆ ಇವರೇಕೆ ಕಾಂಗ್ರೆಸ್ ಪಕ್ಷದ ಕ್ಯಾಂಡಿಡೇಟುಗಳ ಗೆಲುವನ್ನು ಬಯಸುತ್ತಿದ್ದಾರೆ ಅಂತ ಸಹಜವಾಗಿಯೇ ಅವರಿಗೆ ಅನ್ನಿಸಿದೆ. ಅಷ್ಟೇ ಅಲ್ಲ, ಬೆಂಗಳೂರು ದಕ್ಷಿಣ ಭಾಗದಲ್ಲೇ ಎರಡು, ಮೂರು ಕ್ಷೇತ್ರಗಳ ಗತಿ ಹೀಗಾದರೆ ಉಳಿದ ಕಡೆಯೂ ಇಂತಹ ಮನಃಸ್ಥಿತಿಯವರು ಇರಬಹುದಲ್ಲವೇ ಅಂತಲೂ ಅನ್ನಿಸಿದೆ.

ಹಾಗಂತಲೇ ಅವರು ಕೇಂದ್ರದಿಂದ ಪಕ್ಷದ ವೀಕ್ಷಕರಾಗಿ ಕರ್ನಾಟಕಕ್ಕೆ ಆಗಮಿಸಿರುವ ನಾಯಕರ ಗಮನಕ್ಕೆ ಈ ವಿಷಯ ತಂದಿದ್ದಾರೆ. ಆಶೀಶ್ ಶೆಲಾರ್ ಅವರು ಹೇಳಿದ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಈ ವೀಕ್ಷಕರು ಕೆದಕಿ ನೋಡಿದರೆ ಬೆಂಗಳೂರು ಮಾತ್ರವಲ್ಲ, ರಾಜ್ಯದ ಹಲವು ಕಡೆ ಇಂತಹದೇ ಮನಃಸ್ಥಿತಿಯ ಕೆಲ ನಾಯಕರ ವಿವರ ಸಿಕ್ಕಿದೆ. ಹಾಗಂತಲೇ ಏಪ್ರಿಲ್ ೨೯ರ ಶನಿವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನಕ್ಕೆ ಬಿಜೆಪಿಯ ಮೂವರು ಜಿಲ್ಲಾಧ್ಯಕ್ಷರನ್ನು ಕರೆಸಿ ಈ ವೀಕ್ಷಕರು ರಹಸ್ಯ ಸಭೆ ನಡೆಸಿದರಂತೆ. ಈ ಸಭೆಯಲ್ಲಿ ಮಾತನಾಡಿದ ಬಿಜೆಪಿಯ ಜಿಲ್ಲಾ ಅಧ್ಯಕ್ಷರು, ಸಾರ್, ಬೆಂಗಳೂರಿನ ಆರು ಕ್ಷೇತ್ರಗಳಲ್ಲಿ ಪಕ್ಷದ ಕ್ಯಾಂಡಿಡೇಟುಗಳು ಗೆಲ್ಲುವುದು ನಮ್ಮ ಪಕ್ಷದ ಕೆಲ ಸಚಿವರು, ಸಂಸದರು ಮತ್ತು ನಾಯಕರಿಗೆ ಬೇಕಾಗಿಲ್ಲ.

ಉದಾಹರಣೆಗೆ ಚಾಮರಾಜಪೇಟೆಯನ್ನೇ ತೆಗೆದುಕೊಳ್ಳಿ. ಇಲ್ಲಿ ಕಾಂಗ್ರೆಸ್ ಪಕ್ಷದ ಜಮೀರ್ ಅಹ್ಮದ್ ಅವರ ವಿರುದ್ಧ ನಮ್ಮ ಕಾರ್ಯಕರ್ತರು ಬೆವರು ಹರಿಸಿ ದುಡಿಯುತ್ತಾರೆ. ಆದರೆ ಕೆಲ ನಾಯಕರು ಕೈ ಚಳಕ ತೋರಿಸಿ ಅದೇ ಜಮೀರ್ ಅಹ್ಮದ್ ಗೆಲ್ಲಲು ದಾರಿ ಮಾಡಿಕೊಡುತ್ತಾರೆ ಎಂದರಂತೆ. ಇದೇ ರೀತಿ ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಹ್ಯಾರೀಸ್ ಅವರು ಗೆಲ್ಲಲಿ ಅಂತ ನಮ್ಮವರೇ ಬಯಸುತ್ತಾರೆ. ಬಿಜೆಪಿ ಕ್ಯಾಂಡಿಡೇಟಿಗೆ ಶಕ್ತಿ ಇಲ್ಲದಂತೆ ಮಾಡುತ್ತಾರೆ.

ಗಾಂಧಿ ನಗರದ ಕತೆ ಕೂಡ ಇದೇ. ಅಲ್ಲಿ ಕಾಂಗ್ರೆಸ್ ಪಕ್ಷದ ದಿನೇಶ್ ಗುಂಡೂರಾವ್ ಸೋಲುವುದು ನಮ್ಮ ಪಕ್ಷದ ಮಾಜಿ ಮುಖ್ಯಮಂತ್ರಿಯೊಬ್ಬರು ಸೇರಿದಂತೆ ಕೆಲ ನಾಯಕರಿಗೆ ಇಷ್ಟವಿಲ್ಲ. ಬ್ಯಾಟರಾಯನಪುರದಲ್ಲಿ ಕಾಂಗ್ರೆಸ್ ಪಕ್ಷದ ಕ್ಯಾಂಡಿಡೇಟ್ ಕೃಷ್ಣ ಭೈರೇಗೌಡರ ವಿರುದ್ಧ ಅಸಮಾಧಾನದ ಅಲೆ ಎದ್ದಿದೆ. ಸಹಜವಾಗಿಯೇ ಇದನ್ನು ನಾವು ಎನ್‌ಕ್ಯಾಶ್ ಮಾಡಿಕೊಳ್ಳ ಬೇಕಿತ್ತು. ಹೀಗೆ ಎನ್‌ಕ್ಯಾಶ್ ಮಾಡಿಕೊಳ್ಳಲು ರವಿ ಅವರಿಗೆ ಟಿಕೆಟ್ ಕೊಟ್ಟಿದ್ದರೂ ಸಾಕಿತ್ತು.

ಯಾಕೆಂದರೆ ಹಲವು ಬಾರಿ ಈ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿರುವ ರವಿ ಅವರಿಗೆ ಈ ಸಲ ಅನುಕಂಪದ ಅಲೆ ಇತ್ತು. ಹೀಗೆ
ಅವರಿಗೆ ಟಿಕೆಟ್ ನೀಡಿ, ಅನುಕಂಪದ ಅಲೆಯ ಮೇಲೆ ಬಿಜೆಪಿಯ ದೋಣಿ ಕೂರಿಸಿದ್ದರೆ ಅದು ನಿರಾಯಾಸವಾಗಿ ದಡ ಸೇರುತ್ತಿತ್ತು. ಆದರೆ ರವಿ ಅವರಿಗೆ ನಮ್ಮ ಪಕ್ಷದ ಸಚಿವರೇ ಟಿಕೆಟ್ ತಪ್ಪಿಸಿದರು. ಹೀಗೆ ನಮ್ಮ ನಾಯಕರೇ ಕಾಂಗ್ರೆಸ್ ಪಕ್ಷದ ನಾಯಕರ ಜತೆ ಷಾಮೀಲಾಗಿರುವಾಗ, ರಾಜಧಾನಿಯಲ್ಲಿ ನಾವು ಇಪ್ಪತ್ತು ಸೀಟುಗಳ ಗಡಿ ದಾಡುವುದು ಹೇಗೆ ಸಾರ್? ಅಂತ
ಬಿಜೆಪಿಯ ಜಿಲ್ಲಾಧ್ಯಕ್ಷರು ಹೇಳಿದಾಗ, ಅಲ್ಲಿದ ವೀಕ್ಷಕರು ಗಾಬರಿಯಾದರಂತೆ.

ಹೀಗಾಗಿಯೇ, ಕಾಂಗ್ರೆಸ್ ಪಕ್ಷದವರನ್ನು ಗೆಲ್ಲಿಸಲು ನಮ್ಮವರೇ ಏನು ಪ್ರಯತ್ನ ನಡೆಸಿದ್ದಾರೆ? ಇದರಿಂದ ಅವರಿಗೇನು ಲಾಭ? ಅಂತ ಕೇಳಿದ್ದಾರೆ. ಆಗ ಮಾತನಾಡಿದ ಜಿಲ್ಲಾ ಧ್ಯಕ್ಷರೊಬ್ಬರು, ಚುನಾವಣೆಯಲ್ಲಿ ನಮ್ಮವರೇ ವಿರೋಧಿಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವುದು ಹೊಸ ಸಂಪ್ರದಾಯವೇನಲ್ಲ ಸಾರ್, ಆದರೆ ಈ ಸಲ ನಮ್ಮವರು ಕಾಂಗ್ರೆಸ್ ಕ್ಯಾಂಡಿಡೇಟುಗಳನ್ನು ಗೆಲ್ಲಿಸಲು ಮಾಡುತ್ತಿರುವ ಪ್ರಯತ್ನಕ್ಕೆ ಮತ್ತೊಂದು ಆಯಾಮವೂ ಇದೆ ಎಂದು ವಿವರಿಸಿದ್ದಾರೆ.

ಅದೇನು? ಅಂತ ಕೇಳಿದರೆ, ಈ ಸಲ ಕರ್ನಾಟಕದಲ್ಲಿ ಬಿಜೆಪಿ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವುದು ಮುಖ್ಯವಾಗಿ ಬಿಜೆಪಿ ಸರ್ಕಾರದ ಕೆಲ ಸಚಿವರಿಗೆ ಬೇಕಾಗಿಲ್ಲ. ಯಾಕೆಂದರೆ ಈ ಸಲ ಪಕ್ಷ ಸ್ವಯಂಬಲದ ಮೇಲೆ ಗೆದ್ದು ಅಧಿಕಾರ ಹಿಡಿದರೆ ಇವರೆಲ್ಲ ಮರಳಿ ಮಂತ್ರಿಗಳಾಗುವುದಿರಲಿ, ಮುಖ್ಯ ವಾಹಿನಿಗೂ ಬರದೆ ಸೈಡ್ ಲೈನಿಗೆ ಸರಿದು ಬಿಡುತ್ತಾರೆ. ಹೀಗಾಗಿ ಇವರೆಲ್ಲ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಬರಲಿ ಅಂತ ಬಯಸುತ್ತಿದ್ದಾರೆ ಎಂದರಂತೆ. ಬಿಜೆಪಿ ಸ್ವಯಂಬಲದ ಮೇಲೆ ಅಽಕಾರಕ್ಕೆ ಬಂದರೆ ದಶಕಗಳ ಕಾಲದಿಂದ ಅಧಿಕಾರ ಅನುಭವಿಸುತ್ತಿರುವ ಹಳೆಯ ತಲೆಗಳನ್ನು ಕಿತ್ತು ಹಾಕಬಹುದು.

ಆದರೆ ಅತಂತ್ರ ವಿಧಾನಸಭೆ ರಚನೆಯಾದರೆ ಇವರ ಶಕ್ತಿ ಉಳಿದುಕೊಳ್ಳುತ್ತದೆ. ಯಾಕೆಂದರೆ ಮೈತ್ರಿ ಪಕ್ಷದವರು ಅನುಭ ವಿಗಳ ಪಡೆಯನ್ನು ಸಂಪುಟಕ್ಕೆ ತೆಗೆದುಕೊಂಡಾಗ, ನಾವು ಹೊಸ ಮುಖಗಳಿಗೆ ಪ್ರಾಮಿನೆನ್ಸು ಅಂತ ಕೂರಲು ಸಾಧ್ಯವಿಲ್ಲ.
ಹೀಗಾಗಿ ಪುರಾತನ ಕಾಲದಿಂದಲೂ ಸಚಿವರಾಗಿ ಕೆಲಸ  ಮಾಡಿದವರು ಮೈತ್ರಿ ಸರ್ಕಾರದಲ್ಲೂ ಅಧಿಕಾರ ಪಡೆಯುತ್ತಾರೆ. ಆದರೆ ಅವರು ಹೀಗೆ ಅಧಿಕಾರ ಪಡೆಯಬೇಕು ಎಂದರೆ ಪಕ್ಷ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರಬಾರದು ಅಂತ ಜಿಲ್ಲಾಧ್ಯಕ್ಷರ ತಂಡ ಯಾವಾಗ ವಿವರವಾಗಿ ಹೇಳಿತೋ? ಆಗ ವೀಕ್ಷಕರ ಪಡೆ ವರಿಷ್ಠರಿಗೆ ಈ ಕುರಿತು ವರದಿ ರವಾನಿಸಿದೆ ಯಂತೆ.

ಕೈ ಪಾಳೆಯದಲ್ಲೂ ಅತಂತ್ರರ ಪಡೆ ಅಂದ ಹಾಗೆ ಈ ಸಲ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಬರಲಿ ಅಂತ ಬಯಸುತ್ತಿರುವವರ ಪಡೆ ಕೇವಲ ಬಿಜೆಪಿಯಲ್ಲಿ ಮಾತ್ರವಲ್ಲ, ಕಾಂಗ್ರೆಸ್ ಪಕ್ಷದಲ್ಲೂ ಇದೆ. ಇವತ್ತು ಸ್ವಯಂಬಲದ ಮೇಲೆ ಪಕ್ಷ ಅಽಕಾರಕ್ಕೆ ಬಂದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಡುವೆ ಮುಖ್ಯಮಂತ್ರಿ ಹುದ್ದೆಗಾಗಿ ಪೈಪೋಟಿ ನಡೆಯುತ್ತದೆ. ಆ ಮೂಲಕ ಸಿಎಂ ಹುದ್ದೆ ಇವರಿಬ್ಬರ ಪೈಕಿ ಒಬ್ಬರಿಗೆ ಸೆಟ್ಲಾಗುತ್ತದೆ. ಹಾಗಾದಾಗ ಸಹಜವಾಗಿಯೇ ಮೊದಲ ಕಂತಿನಲ್ಲಿ ಅವರು, ಎರಡನೇ ಕಂತಿನಲ್ಲಿ ಇವರು ಅಂತ ಒಪ್ಪಂದವಾಗುತ್ತದೆ.

ಹಾಗೇನಾದರೂ ಆದರೆ ಐದು ವರ್ಷಗಳ ಅವಽಯಲ್ಲಿ ಈ ಇಬ್ಬರನ್ನು ಹೊರತುಪಡಿಸಿ ಬೇರೊಬ್ಬರು ಸಿಎಂ ಆಗುವುದು ಅಸಾಧ್ಯ.ಹೀಗಾಗಿ ಕಾಂಗ್ರೆಸ್ ಪಕ್ಷ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯುವ ಬದಲು ಅತಂತ್ರ ವಿಧಾನಸಭೆ ರೂಪುಗೊಳ್ಳು ವುದೇ ಒಳ್ಳೆಯದು. ಯಾಕೆಂದರೆ, ಮೈತ್ರಿ ಸರ್ಕಾರ ರಚನೆ ಅನಿವಾರ್ಯವಾದರೆ ಮೊದಲ ಹೊಡೆತದಲ್ಲೇ ಸಿದ್ದರಾಮಯ್ಯ ಮತ್ತು ಡಿಕೆಶಿ ಸಿಎಂ ಹುದ್ದೆಯ ರೇಸಿನಿಂದ ಹೊರಬೀಳುತ್ತಾರೆ. ಈ ಪೈಕಿ ಸಿದ್ದರಾಮಯ್ಯ ಅವರನ್ನು ಹೇಳಿ ಕೇಳಿ ಜೆಡಿಎಸ್ ಒಪ್ಪುವುದಿಲ್ಲ.

ಅಷ್ಟೇ ಅಲ್ಲ, ಸಿದ್ದರಾಮಯ್ಯ ಅವರು ಸಂಪೂರ್ಣವಾಗಿ ಹೊರಗಿದ್ದರೆ ಮಾತ್ರ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುತ್ತೇವೆ. ಕಳೆದ ಸಲ ನಾವು ರಚಿಸಿದ ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಅವರೇ ಕಾರಣ ಅಂತ ಜೆಡಿಎಸ್ ನಾಯಕರು ಸಹಜವಾಗಿಯೇ ಪಟ್ಟು ಹಿಡಿಯುತ್ತಾರೆ. ಇನ್ನು ಒಕ್ಕಲಿಗರ ಕೈಗೆ ಸಿಎಂ ಹುದ್ದೆ ಹೋದರೆ ಡಿಕೆಶಿ ಅನಿವಾರ್ಯವಾಗಿ ಹಿಂದೆ ಸರಿಯಲೇಬೇಕು. ಇಂತಹ ಸಂದರ್ಭದಲ್ಲಿ ತಮಗೆ ಧರ್ಮಸಿಂಗ್ ಅವರ ರೀತಿಯಲ್ಲಿ ಸಿಎಂ ಪಟ್ಟ ಒಲಿದರೂ ಒಲಿಯಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ಪಕ್ಷದ ಹಲ ನಾಯಕರಿಗಿದೆ.

ಒಂದು ವೇಳೆ ಮುಖ್ಯಮಂತ್ರಿ ಪಟ್ಟ ಒಲಿಯದಿದ್ದರೆ, ಕನಿಷ್ಠ ಪಕ್ಷ ಉಪಮುಖ್ಯಮಂತ್ರಿ ಪಟ್ಟವಾದರೂ ಒಲಿಯಬಹುದು ಎಂಬ ಲೆಕ್ಕಾಚಾರವಿದೆ. ಹೀಗೆ ಅತಂತ್ರ ಪ್ರಿಯರ ಪಡೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡರಲ್ಲೂ ಇರುವುದು ಸಹಜವಾಗಿಯೇ ಜೆಡಿಎಸ್ ನಾಯಕರ ಆತ್ಮಬಲವನ್ನು ಹೆಚ್ಚಿಸಿದೆ. ಬಿಜೆಪಿಗೆ ಈ ಪಡೆಯೇ ಶಕ್ತಿ ಈ ಮಧ್ಯೆ ಕರ್ನಾಟಕದ ನೆಲೆಯಲ್ಲಿ ಪಕ್ಷದ ನಾಯಕರು ಏನೇ ಆಟವಾಡಿದರೂ ಎರಡು -ಕ್ಟರ್‌ಗಳು ಬಿಜೆಪಿಯನ್ನು ಅಧಿಕಾರಕ್ಕೆ ತರಲಿವೆ ಅಂತ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ನಂಬಿದ್ದಾರೆ. ಈ ಪೈಕಿ ಒಂದು ಫ್ಯಾಕ್ಟರ್ ಪ್ರಧಾನಿ ಮೋದಿಯವರಿಂದ ದಕ್ಕಿರುವುದು. ಅರ್ಥಾತ್, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲ ರಾಜ್ಯದ ದೊಡ್ಡ ಸಂಖ್ಯೆಯ ಜನರಿಗೆ ಸಿಕ್ಕಿದೆ.

ಈ ಜನ ಜಾತ್ಯತೀತವಾಗಿ ಮತ್ತು ಪಕ್ಷಾತೀತವಾಗಿ ಪ್ರಧಾನಿ ನರೇಂದ್ರಮೋದಿಯವರನ್ನು ಇಷ್ಟಪಡುತ್ತಾರೆ. ಈಗ
ಕರ್ನಾಟಕದಲ್ಲಿ ಆರಂಭವಾಗಿರುವ ಮೋದಿಯವರ ರೋಡ್ ಷೋ, ಸಾರ್ವಜನಿಕ ಸಭೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದೇ ಈ ಫಲಾನುಭವಿಗಳ ಪಡೆ. ಅಂದ ಹಾಗೆ ಈ ಫಲಾನುಭವಿಗಳೆಲ್ಲ ಬಿಜೆಪಿಯವರೇ ಅಂತಲ್ಲ, ಬದಲಿಗೆ ಪ್ರಧಾನಿ ನರೇಂದ್ರಮೋದಿಯವರ ಅಭಿಮಾನಿಗಳಾಗಿ ಬದಲಾಗಿರುವವರು. ಇಂತವರು ಈ ಚುನಾವಣೆಯಲ್ಲಿ ಮೋದಿಯವರ ಮುಖ ನೋಡಿ ಬಿಜೆಪಿ ಕ್ಯಾಂಡಿಡೇಟುಗಳಿಗೆ ಮತ ಹಾಕುತ್ತಾರೆ ಎಂಬುದು ಸಂತೋಷ್ ನಂಬಿಕೆ. ಎರಡನೆಯ -ಕ್ಟರ್ ಎಂದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಇವತ್ತು ಕಟ್ಟರ್ ಹಿಂದೂವಾದಿಗಳೆಲ್ಲ ಬಿಜೆಪಿಯ ಜತೆಗಿದ್ದಾರೆ ಎಂದೇನೂ ಅಲ್ಲ, ಬದಲಿಗೆ ಯಾವ ಪಕ್ಷದ ನೆಲೆಯಲ್ಲಿ ಗುರುತಿಸಿಕೊಳ್ಳದಿದ್ದರೂ ಕಟ್ಟರ್ ಹಿಂದೂವಾದಿ ಮನಃಸ್ಥಿತಿಯ ಜನ ದೊಡ್ಡ ಮಟ್ಟದಲ್ಲಿದ್ದಾರೆ.

ಇವರಿಗೆಲ್ಲ, ಕರ್ನಾಟಕದಲ್ಲಿ ಸಾಧನೆ ಯಾಗದೇ ಇರುವುದನ್ನು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸಾಧಿಸಿದ್ದಾರೆ. ಹೀಗಾಗಿ ಅವರ ಹೆಸರಿನ ಬಲಕ್ಕಾದರೂ ಇಲ್ಲಿ ಬಿಜೆಪಿಗೆ ಮತ ಹಾಕಬೇಕು ಎಂಬ ಮನಃ ಸ್ಥಿತಿ ಬಂದಿದೆ. ಹೀಗಾಗಿ ಕರ್ನಾಟಕ ದಲ್ಲಿ ನಾವು ಬಯಸುತ್ತಿರುವ ೧೧೪ ರ ಮ್ಯಾಜಿಕ್ ನಂಬರ್ ನಮಗೆ ದಕ್ಕಲು ನೆರವಾಗಲಿದೆ ಎಂಬುದು ಸಂತೋಷ್ ಅವರ ನಂಬಿಕೆ. ಅಂದ ಹಾಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ ಮೂರು ಇಲ್ಲವೇ ನಾಲ್ಕು ಪರ್ಸೆಂಟ್ ಮತಗಳ
ಅಂತರದಿಂದ ಸೋಲು ಕಂಡವರ ಸಂಖ್ಯೆ ಸುಮಾರು ಅರವತ್ತೈದು. ಈ ಅರವತ್ತೈದರ ಪಡೆಯಲ್ಲಿ ಎಲ್ಲ ಪಕ್ಷಗಳ ಕ್ಯಾಂಡಿಡೇಟು ಗಳೂ ಇದ್ದಾರೆ.

ಈಗ ಇಂತಹ ಕ್ಷೇತ್ರಗಳಲ್ಲಿ ನಾವು ನಮ್ಮ ಶೇಕಡಾವಾರು ಮತಗಳನ್ನು ಹೆಚ್ಚಿಸಿಕೊಂಡರೆ ಸಹಜವಾಗಿಯೇ ದೊಡ್ಡ ಮಟ್ಟದ ಗೆಲುವು ದಕ್ಕಲಿದೆ. ಮೋದಿಯವರ ಫಲಾನುಭವಿಗಳ ಪಡೆ ಮತ್ತು ಯೋಗಿ ಆದಿತ್ಯನಾಥ್ ಮೂಲಕ ಸೃಷ್ಟಿಯಾಗಿರುವ ಕಟ್ಟರ್ ಹಿಂದೂವಾದಿಗಳ ಪಡೆ ಈ ದಿಸೆಯಲ್ಲಿ ನಮಗೆ ವರವಾಗಲಿದೆ ಎಂಬುದು ಸಂತೋಷ್ ಲೆಕ್ಕಾಚಾರ. ಇದು ಎಷರ ಮಟ್ಟಿಗೆ ಯಶಸ್ವಿಯಾಗುತ್ತದೋ ಗೊತ್ತಿಲ್ಲ.