Saturday, 14th December 2024

ಪಾಕ್‌ನಲ್ಲಿ ಊಟವಿಲ್ಲ ರಕ್ಷಣಾ ವೆಚ್ಚ ಕಡಿಮೆಯಾಗಲ್ಲ

ವೀಕೆಂಡ್ ವಿತ್ ಮೋಹನ್

camohanbn@gmail.com

‘ಹೊಟ್ಟೆಗೆ ಊಟವಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು’ ಎಂಬ ಗಾದೆ ಮಾತಿನಂತೆ, ದೇಶದ ಅಭಿವೃದ್ಧಿಯ ಕಡೆ ಗಮನ ನೀಡದೆ ಭಾರತದ ವಿನಾಶವನ್ನೇ ಬಯಸಿದ ಪಾಕಿಸ್ತಾನದ ಇಂದಿನ ಪರಿಸ್ಥಿತಿ ಚಿಂತಾಜನಕವಾಗಿದೆ. ತನ್ನ ಪ್ರಜೆಗಳಿಗೆ ಎರಡು ಹೊತ್ತಿನ ಊಟವನ್ನು ನೀಡಲಾಗದ ಪರಿಸ್ಥಿತಿಗೆ ಪಾಕಿಸ್ತಾನ ತಲುಪಿದೆ. ಮತಾಂಧತೆಯ ಅಮಲಿನ ಉಗ್ರರನ್ನು ಪೋಷಿಸಿ ಭಾರತದ ಮೇಲೆ ದಾಳಿ ನಡೆಸುವ ಕೆಲಸ ಬಿಟ್ಟು ಪಾಕಿಸ್ತಾನದ ಸೇನೆ ಹಾಗು ರಾಜಕೀಯ ಪಕ್ಷಗಳು ಬೇರೇನನ್ನೂ ಮಾಡಲಿಲ್ಲ.

ನರಿ ಬುದ್ಧಿ ಚೀನಾದೊಂದಿಗೆ ಸ್ನೇಹ ಬೆಳೆಸಿದ್ದ ಪಾಕಿಸ್ತಾನಕ್ಕೆ ಸಿಕ್ಕಿರುವುದು ದೀವಾಳಿತನವೆಂಬ ಉಡುಗೊರೆ. ಪಾಕಿಸ್ತಾನದ ಜನರಿಗೆ ಕುಡಿಯಲು ಹಾಲು
ಸಿಗುತ್ತಿಲ್ಲ, ಗೋಧಿ ಹಿಟ್ಟಿಗೆ ಆಹಾಕಾರವೆದ್ದಿದೆ. ಒಂದು ಕೆಜಿ ಗೋದಿ ಹಿಟ್ಟಿನ ಬೆಲೆ ೧೬೦/- ರುಪಾಯಿ ತಲುಪಿದೆ, ಒಂದು ಲೀಟರ್ ಹಾಲಿನ ಬೆಲೆ ೧೭೦/- ರೂಪಾಯಿಗೆ ಏರಿದೆ. ಪಾಕಿಸ್ತಾನದ ರಸ್ತೆಗಳಲ್ಲಿ ಜನರು ಊಟವಿಲ್ಲದೆ ಸಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಊಟ ಸಿಗದ ಕಾರಣ ರಸ್ತೆಯಲ್ಲಿ
ಚಲಿಸುತ್ತಿರುವ ವಾಹನಗಳ ಮುಂದೆ ಅಲ್ಲಿನ ಜನ ಮಲಗಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಪಾಕಿಸ್ತಾನವು ಭಾರತದೊಂದಿಗಿದ್ದಿದ್ದರೆ ಈ ರೀತಿಯ ಹೀನಾಯ ಪರಿಸ್ಥಿತಿ ಬರುತ್ತಿರಲಿಲ್ಲವೆಂಬುದನ್ನು ಅಲ್ಲಿನ ಜನ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜನರು ದಂಗೆ ಎದ್ದಿದ್ದಾರೆ, ಪಾಕಿಸ್ತಾನಿ ಪೋಲೀಸರ ವಿರುದ್ಧ ತಿರುಗಿ ಬಿದ್ದಿzರೆ. ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರುವ ಕಾಲ ದೂರವಿಲ್ಲವೆಂಬ ವಿಷಯ ಖಾತ್ರಿಯಾಗುತ್ತಿದ್ದಂತೆ, ಕಾಂಗ್ರೆಸ್ಸಿನ ಮಣಿ ಶಂಕರ್ ಅಯ್ಯರ್ ಪಾಕಿಸ್ತಾನದ ಬಳಿ ಅಣು ಬಾಂಬುಗಳಿವೆ, ಅವರೇನು ಕೈಗೆ ಬಳೆ ತೊಟ್ಟು ಕೊಂಡಿಲ್ಲವೆಂಬ ಮಾತುಗಳನ್ನಾಡಿದ್ದಾರೆ.

ಹೊಟ್ಟೆಗೆ ಊಟವಿಲ್ಲದಿದ್ದರೂ ಪಾಕಿಸ್ತಾನ ಮಾತ್ರ ತನ್ನ ಹುಟ್ಟಿನಿಂದಲೂ ತನ್ನ ಮಿಲಿಟರಿ ವೆಚ್ಚವನ್ನು ಕಡಿಮೆ ಮಾಡಿಲ್ಲ, ಪಾಕಿಸ್ತಾನದಲ್ಲಿ ಮಿಲಿಟರಿ ವೆಚ್ಚವನ್ನು ಅಭಿವೃದ್ಧಿ ವೆಚ್ಚವೆಂದು ಪರಿಗಣಿಸಲಾಗಿದೆ. ತನ್ನ ದೇಶದ ಹೆಚ್ಚಿನ ರಕ್ಷಣಾ ವೆಚ್ಚದ ಹಿಂದಿನ ಕಾರಣ ಭಾರತದ ಭಯವೆಂಬುದು ಪಾಕಿಸ್ತಾನ
ಹೇಳುತ್ತದೆ. ಸದಾ ಭಾರತದ ಕಡೆ ಬೆಟ್ಟು ತೋರಿಸಿ ತಾನು ಭಾರತದಿಂದ ಉಂಟಾಗಬಹುದಾದ ದಾಳಿಯ ಭಯಕ್ಕೆ ರಕ್ಷಣಾ ವೆಚ್ಚ ಹೆಚ್ಚಿಸುತ್ತಿದ್ದೇವೆಂದು ಹೇಳುತ್ತದೆ. ಆಂತರಿಕವಾಗಿ ಪಾಕಿಸ್ತಾನದಲ್ಲಿ ಸಾಮಾಜಿಕ ಹಿಂಸಾಚಾರ ಹೆಚ್ಚಿರುವ ಕಾರಣವೂ ಅತಿಯಾದ ಮಿಲಿಟರಿ ವೆಚ್ಚಕ್ಕೆ ಕಾರಣವಾಗಿದೆ.

ಪಾಕಿಸ್ತಾನದ ಸಾಮಾಜಿಕ ವಲಯದ ಹಿಂದುಳಿದ ಬೆಳವಣಿಗೆಯಿಂದ ಇದು ಸ್ಪಷ್ಟವಾಗಿ ಗೋಚರವಾಗುತ್ತಿದೆ, ಹೆಚ್ಚುತ್ತಿರುವ ಅಭಿವೃದ್ಧಿಯೇತರ ಬಜೆಟ್ ಅಲ್ಲಿನ ಅಭಿವೃದ್ಧಿ ಪರ ಬಜೆಟ್ನಲ್ಲಿ ಭಾರಿ ಕಡಿತವನ್ನು ಉಂಟುಮಾಡಿದೆ, ಇದರ ಪರಿಣಾಮ ಪಾಕಿಸ್ತಾನದ ಆರ್ಥಿಕತೆ ಕೆಟ್ಟ ಸ್ಥಿತಿಯಲ್ಲಿದೆ. ಕ್ಷೀಣಿಸುತ್ತಿರುವ ಅಭಿವೃದ್ಧಿ ಬಜೆಟ್ ಕೊರತೆಯನ್ನು ನೀಗಿಸಲು ಸಾಧ್ಯವಾಗದೆ ಸಾಲದ ಶೂಲದಲ್ಲಿ ಸಿಲುಕಿದೆ. ಪರಿಣಾಮ ಬಡ್ಡಿ ಮತ್ತು ಸಾಲದ ಹಣ ಮರುಪಾವತಿಯಲ್ಲಿ ಹೆಚ್ಚಿನ ಹಣದ ವ್ಯಯವಾಗುತ್ತಿದೆ, ಇದರಿಂದ ಅಭಿವೃದ್ಧಿಯಲ್ಲದ ಬಜೆಟ್ ಗಾತ್ರ ಹೆಚ್ಚಾಯಿತು, ಸಮಯ ಕಳೆದಂತೆ ಸಾಲವು ಅಭಿವೃದ್ಧಿಯೇತರ ಬಜೆಟ್‌ಗೆ ಹಣಕಾಸು ಒದಗಿಸುವಂತಾಯಿತು.

ಪ್ರಸ್ತುತ, ಪಾಕಿಸ್ತಾನವು ಹಳೆಯ ಸಾಲವನ್ನು ಮರುಪಾವತಿಸಲು ಹೊಸ ಸಾಲಗಳನ್ನು ಪಡೆದುಕೊಳ್ಳುವ ಸ್ಥಿತಿಯಲ್ಲಿದೆ. ರಕ್ಷಣಾ ವೆಚ್ಚವು ಸುರುಳಿಯಾಕಾ ರದ ರೀತಿಯಲ್ಲಿ ಪಾಕಿಸ್ತಾನದ ಆರ್ಥಿಕ ಅವ್ಯವಸ್ಥೆಯನ್ನು ಹೆಚ್ಚಿಸಿದೆ, ಭಾರೀ ಸಾಲದ ಹೊರೆ, ಏರುತ್ತಿರುವ ಹಣದುಬ್ಬರ ದರ ಮತ್ತು ಹಸಿವಿನಿಂದ ಬಳಲುತ್ತಿರುವ ರಾಷ್ಟ್ರ ಪಾಕಿಸ್ತಾನದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಇಷ್ಟಾದರೂ ಬುದ್ದಿ ಕಲಿಯದ ಪಾಕಿಸ್ತಾನ ನಿರಂತರವಾಗಿ ರಕ್ಷಣಾ ವೆಚ್ಚದ ಮೇಲೆ ತನ್ನನ್ನು ತಾನು ಕೇಂದ್ರೀಕರಿಸುತ್ತಿದೆ. ಸಾಮಾಜಿಕ ಮತ್ತು ಆರ್ಥಿಕ ಭದ್ರ ತೆಗೆ ಹೋಲಿಸಿದರೆ ಪಾಕಿಸ್ತಾನವು ಯಾವಾಗಲೂ ಪ್ರಾದೇಶಿಕ ಭದ್ರತೆಗೆ ಆದ್ಯತೆಯನ್ನು ನೀಡುತ್ತದೆ, ಇದರಿಂದ ಮಿಲಿಟರಿ ಶಕ್ತಿ ದೇಶದ ಒಟ್ಟಾರೆ ಭದ್ರತೆಯನ್ನು ಖಚಿತಪಡಿಸುತ್ತದೆ ಎಂಬ ಮೊಂಡು ವಾದವನ್ನು ಮಾಡುತ್ತಾ ಬಂದಿದೆ.

ಪಾಕಿಸ್ತಾನದ ಆರ್ಥಿಕತೆ ಈ ಹೊರೆಯನ್ನು ತೂಗಿಸಲು ಸಾಧ್ಯವಾಗುತ್ತಿಲ್ಲ ಎಂಬ ವಾಸ್ತವದ ಹೊರತಾಗಿಯೂ, ರಕ್ಷಣಾ ವೆಚ್ಚದಲ್ಲಿ ಕ್ರಮೇಣ ಹೆಚ್ಚಳ ಮಾಡುತ್ತಿರುವುದು ಸ್ಪಷ್ಟವಾಗಿದೆ. ಪಾಕಿಸ್ತಾನದ ಆರ್ಥಿಕ ಬೆಳವಣಿಗೆ ಮತ್ತು ಅದರ ರಕ್ಷಣಾ ವೆಚ್ಚಗಳ ನಡುವಿನ ಅಂತರವು ಸ್ಥಿರವಾಗಿ ಹೆಚ್ಚುತ್ತಿದೆ. ೧೯೬೫ ರ ಇಂಡೋ-ಪಾಕ್ ಯುದ್ಧದ ನಂತರ ಪಾಕಿಸ್ತಾನದ ರಕ್ಷಣಾ ವೆಚ್ಚ ಹೆಚ್ಚಾಯಿತು,೧೯೬೪-೬೫ ರಲ್ಲಿ ೧,೨೬೨ ಮಿಲಿಯನ್, ೧೯೬೫-೬೬ರಲ್ಲಿ ೨,೮೫೫ ಮಿಲಿಯನ್ ಹಣವನ್ನು ವ್ಯಯಿಸಿತ್ತು, ಅಲ್ಲಿನ ಒಟ್ಟು ದೇಶೀಯ ಉತ್ಪನ್ನದ (ಎಈP) ಯ ಶೇಕಡ ೪.೮೨% ರಿಂದ ಶೇಕಡಾ ೯.೮೬% ಗೆ ಏರಿಕೆ ಯಾಗಿತ್ತು.

ಜಿಬ್ರಾಲ್ಟರ್ ಮತ್ತು ಗ್ರ್ಯಾಂಡ್ ಸ್ಲ್ಯಾಮ ಕಾರ್ಯಾಚರಣೆಗಳ ಪ್ರಾರಂಭದ ಪರಿಣಾಮ, ಅಮೆರಿಕದ ಶಸಾಸ ನಿರ್ಬಂಧ ನೀತಿ, ಚೀನಾ ಮತ್ತು ಕೆಲವು ಅರಬ್ ರಾಷ್ಟ್ರಗಳ ಮಿಲಿಟರಿ ಸಹಾಯ ಪಾಕಿಸ್ತಾನದ ರಕ್ಷಣಾ ವೆಚ್ಚದ ಕಡಿತಕ್ಕೆ ಕಾರಣವಾಯಿತು. ಆದರೆ ೧೯೭೧-೭೨ ರಲ್ಲಿ ಪೂರ್ವ ಪಾಕಿಸ್ತಾನದಲ್ಲಿ ತನ್ನ ಸೈನ್ಯವನ್ನು ಹೆಚ್ಚಿಸಿದ್ದರ ಪರಿಣಾಮ ಪಾಕಿಸ್ತಾನದ ರಕ್ಷಣಾ ವೆಚ್ಚ ಮತ್ತೆ ಹೆಚ್ಚಾಯಿತು. ಪೂರ್ವ ಪಾಕಿಸ್ತಾನ ಸ್ವತಂತ್ರ ಬಾಂಗ್ಲಾದೇಶವಾದ ನಂತರ, ರಕ್ಷಣಾ ಅಗತ್ಯವು ಮೇಲ್ನೋಟಕ್ಕೆ ಕಡಿಮೆಯಾದರೂ ಮುಂದಿನ ವರ್ಷಗಳಲ್ಲಿ ರಕ್ಷಣಾ ವೆಚ್ಚವು ಬೆಳೆಯುತ್ತಲೇ ಇತ್ತು. ೧೯೭೦ ರ ದಶಕದ ಆರಂಭ ಭುಟ್ಟೋ ಮತ್ತು ೧೯೭೦ ರ ದಶಕದ ಉತ್ತರಾರ್ಧದಲ್ಲಿ ‘ಜಿಯಾ ಉಲ್ ಹಕ್’ ಆಡಳಿತದಲ್ಲಿ, ರಕ್ಷಣಾ ವೆಚ್ಚ ಕಡಿತದ ಗುರಿಯ ಆಲೋಚನೆಗಳನ್ನು ವಿರೋಧಿಸಿದರು.

‘ಜಿಯಾ ಉಲ್ ಹಕ್’ ಅವಧಿಯಲ್ಲಿ, ಪಾಕಿಸ್ತಾನ ತನ್ನ ರಕ್ಷಣಾ ವೆಚ್ಚವನ್ನು ಕಡಿತಗೊಳಿಸುವಂತೆ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಒತ್ತಡವನ್ನು ಎದುರಿಸಿತು. ಪ್ರಧಾನ ಮಂತ್ರಿ ‘ಜುನೆಜೊ’ ಭದ್ರತಾ ಸಮಸ್ಯೆಯನ್ನು ಮುನ್ನೆಲೆಗೆ ತಂದು ವೆಚ್ಚದಲ್ಲಿ ಕಡಿತ ಮಾಡಲು ಸಾಧ್ಯವಿಲ್ಲವೆಂಬಂತೆ ಬಿಂಬಿಸಿದ್ದರು. ‘ಜಿಯಾ ಉಲ್ ಹಕ್’ ರಕ್ಷಣಾ ವೆಚ್ಚದಲ್ಲಿನ ಕಡಿತವನ್ನು ಅನುಮತಿಸಿರಲಿಲ್ಲ, ಏಕೆಂದರೆ ಆತನ ಪ್ರಕಾರ, ನೀವು ಬಿದಿರಿನ ಕೋಲಿನಿಂದ ಪರಮಾಣು ಜಲಾಂತರ್ಗಾಮಿ ಅಥವಾ ವಿಮಾನ ವಾಹಕ ನೌಕೆಯ ವಿರುದ್ಧ ಹೇಗೆ ಹೋರಾಡುವುದು? ರಾಷ್ಟ್ರಮಟ್ಟದ ಒಗ್ಗಟ್ಟಿನ ಕೊರತೆ, ಆರ್ಥಿಕ ಸಮಸ್ಯೆಗಳು ಮತ್ತು ಒಕ್ಕೂಟ ಪ್ರಾಂತ್ಯಗಳ ನಡುವಣ ಅಸಮಾನತೆಗಳು ಪಾಕಿಸ್ತಾನದಲ್ಲಿನ ಅಸ್ಥಿರ ಮತ್ತು ಅಸುರಕ್ಷಿತ ಆಡಳಿತಕ್ಕೆ ಪ್ರಮುಖ
ಕಾರಣವಾಗಿವೆ.

ಪಾಕಿಸ್ತಾನಕ್ಕೆ ತನ್ನ ಹುಟ್ಟಿನಿಂದಲೂ ಉತ್ತಮ ಗುಣಮಟ್ಟದ ನಾಯಕತ್ವದೊಂದಿಗೆ ಸ್ಥಿರವಾದ ರಾಜಕೀಯ ವ್ಯವಸ್ಥೆಯನ್ನು ವಿಕಸನಗೊಳಿಸಲು ಸಾಧ್ಯವಾಗಲಿಲ್ಲ ಮತ್ತು ವಿವಿಧ ನಾಯಕರ ಅವಧಿಗಳಲ್ಲಿನ ರಾಜಕೀಯ ಪ್ರಯೋಗಗಳು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮತ್ತು ಸಾಮಾಜಿಕವಾಗಿ
ಛಿದ್ರಗೊಂಡ ಪಾಕಿಸ್ತಾನಕ್ಕೆ ಪರಿಹಾರವನ್ನು ನೀಡುವಲ್ಲಿ ವಿಫಲವಾಗಿವೆ. ೧೯೮೫ ರಿಂದ ಪಾಕಿಸ್ತಾನವು ಪ್ರಜಾಸತ್ತಾತ್ಮಕ ಆಚರಣೆಗಳಿಗೆ ಅಂಟಿಕೊಳ್ಳಲು ಪ್ರಯತ್ನಿಸುತ್ತಿದೆಯಾದರೂ, ರಾಜಕೀಯ ಅಸ್ಥಿರತೆಯಿಂದ ಹೊರಬರಲಾಗಲಿಲ್ಲ, ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರಕಾರಗಳನ್ನು ೧೯೮೮ ರಿಂದ ವಿವಿಧ ಆಧಾರಗಳ ಮೇಲೆ ವಜಾಗೊಳಿಸಲಾಗಿದೆ.

ರಾಜಕೀಯ ಗೊಳಿಸಲ್ಪಟ್ಟ ಜನಾಂಗೀಯ ಪ್ರಜ್ಞೆ, ಜನಸಂಖ್ಯೆಯ ಅಸಮ ತೋಲನ ಮತ್ತು ಅತಿಯಾದ ನಿರುದ್ಯೋಗದೊಂದಿಗೆ ಪಾಕಿಸ್ತಾನ ಸರಕಾರವು ತೀವ್ರ ಸಂದಿಗ್ಧತೆಯನ್ನು ಎದುರಿಸುತ್ತಿದೆ. ತೀವ್ರವಾದ ರಾಜಕೀಯ ವಿಭಜನೆ, ಹೆಚ್ಚುತ್ತಿರುವ ಆರ್ಥಿಕ ಸಮಸ್ಯೆಗಳು, ಸಕ್ರಿಯ ಮಾದಕವಸ್ತು ಕಳ್ಳಸಾಗಣೆ, ಬಂದೂಕು ಸಂಸ್ಕೃತಿ, ಹೆಚ್ಚುತ್ತಿರುವ ಸಾಮಾಜಿಕ ಹಿಂಸಾಚಾರ, ಭಯೋತ್ಪಾದನೆ ಮತ್ತು ಪಂಥೀಯತೆಯನ್ನು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಅಭದ್ರತೆಯ ಭಾವನೆ ಗಾಢವಾಗಿದೆ. ಅಲ್ಲಿನ ಜನರು ವಿಧಿಯಿಲ್ಲದೆ ವಿವಿಧ ದೇಶಗಳಿಗೆ ಗುಳೆ ಹೋಗುತ್ತಿರುವ ಪರಿಸ್ಥಿತಿ ಸಾಮಾನ್ಯವಾಗಿಬಿಟ್ಟಿದೆ.

ಪಾಕಿಸ್ತಾನದ ಸಂಸದ ‘ಸಯ್ಯದ್ ಮುಸ್ತ- ಕಮಾಲ’ ಭಾರತದ ಅಭಿವೃದ್ಧಿಯನ್ನು ಅಲ್ಲಿನ ಸಂಸತ್ತಿನಲ್ಲಿ ಕೊಂಡಾಡಿದ್ದಾನೆ, ಭಾರತವು ಚಂದ್ರನ ಮೇಲಿದೆ, ಆದರೆ ಪಾಕಿಸ್ತಾನದ ಮಕ್ಕಳು ಚರಂಡಿಯಲ್ಲಿ ಬಿದ್ದಿವೆ ಎಂದು ಹೇಳಿzನೆ. ಕಳೆದ ಹತ್ತು ವರ್ಷಗಳಲ್ಲಿ ಭಾರತದದಂತಹ ಅಭಿವೃದ್ಧಿಯನ್ನು ಹೊಗಳಿದ್ದಾನೆ. ಪಾಕಿಸ್ತಾನದಲ್ಲಿ ಸುಮಾರು ಎರಡು ಕೋಟಿ ಮಕ್ಕಳು ಶಿಕ್ಷಣದಿಂದ ವಂಚಿತ ರಾಗಿದ್ದರೆಂದು ಹೇಳಿದ್ದಾನೆ. ಸಾಮಾನ್ಯವಾಗಿ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಸಂಪನ್ಮೂಲ ವ್ಯವಸ್ಥಾಪಕರು ಕಾರ್ಯಾಂಗ ಮತ್ತು ಶಾಸಕಾಂಗದ ಸಂಬಂಧ ಪಟ್ಟ ಸದಸ್ಯರಾಗಿರುತ್ತಾರೆ, ಆದರೆ ಪಾಕಿಸ್ತಾನದಂತಹ ನಿರಂಕುಶ ಆಡಳಿತ ದಡಿಯಲ್ಲಿ ಸಂಪನ್ಮೂಲ ನಿಯಂತ್ರಣವು ಕೆಲವು ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿದೆ. ಪಾಕಿಸ್ತಾನದ ವಾರ್ಷಿಕ ಆಯವ್ಯವವನ್ನು ಕೆಲವು ಆಯ್ದ ವ್ಯಕ್ತಿ ಗಳು ರೂಪಿಸುತ್ತಾರೆ, ನಂತರ ಸಂಸತ್ತಿನ ಮುಂದೆ ವಾರ್ಷಿಕವಾಗಿ ಮಂಡಿಸಲಾಗುತ್ತದೆ.

ವೈಜ್ಞಾನಿಕವಾಗಿ ದೇಶದ ಹಣಕಾಸು ವ್ಯವಸ್ಥೆಯನ್ನು ನಿರ್ವಹಿಸುವ ನೀತಿ ಪಾಕಿಸ್ತಾನದಲ್ಲಿಲ್ಲ. ಪಾಕಿಸ್ತಾನದಲ್ಲಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಮೇಲೆ ಅಲ್ಲಿನ ಮಿಲಿಟರಿ ಅಪಾರವಾದ ನಿಯಂತ್ರಣ ಹೊಂದಿದೆ. ರಕ್ಷಣಾ ನಿರ್ಧಾರ ಕೈಗೊಳ್ಳುವಲ್ಲಿ ಸೇನೆಯು ಅತ್ಯಂತ ಪ್ರಭಾವಶಾಲಿಯಾಗಿ ಹೊರ ಹೊಮ್ಮಲು ಪ್ರಮುಖ ಕಾರಣ ಅಲ್ಲಿನ ಅಧಿಕಾರ ರಾಜಕಾರಣದಲ್ಲಿ ಅದು ತನ್ನನ್ನು ತಾನು ಪ್ರಸ್ತುತನೆಂದು ಬೆಳೆಸಿಕೊಂಡು ಬಂದಿರುವ ರೀತಿ. ಪಾಕಿಸ್ತಾನ ತನ್ನ ರಕ್ಷಣಾ ನೀತಿಯನ್ನು ರೂಪಿಸುವಲ್ಲಿ ಭಾರತದ ಭಯ ಯಾವಾಗಲೂ ಗಂಭೀರವಾದ ಪರಿಣಾಮ ಬೀರುತ್ತದೆಯೆಂದು ಹೇಳುತ್ತದೆ. ಆದರೆ ಪಾಕಿಸ್ತಾನ ತನ್ನೊಳಗಿನ ಆಂತರಿಕ ಅಶಾಂತಿಯನ್ನು ಬಾಹ್ಯ ಬೆದರಿಕೆಯನ್ನಾಗಿ ನೋಡುತ್ತದೆ, ಅಲ್ಲಿನ ಮಿಲಿಟರಿ ಅಧಿಕಾರಿಗಳ ಈ ಸುಳ್ಳು ಕಲ್ಪನೆ ಭಾರೀ ಮಿಲಿಟರಿ ವೆಚ್ಚಕ್ಕಾಗಿ ವೇದಿಕೆಯನ್ನು ಸಿದ್ಧಪಡಿಸುತ್ತಲೇ ಬಂದಿದೆ. ಆದರೆ ಪಾಕಿಸ್ತಾನ ಸರಕಾರದ ಕಪೋಕಲ್ಪಿತ ಬಾಹ್ಯ ಬೆದರಿಕೆ ಅಂಶಗಳು ಅಲ್ಲಿನ ಆಂತರಿಕ ಅಶಾಂತಿಯನ್ನು ನಿಭಾಯಿಸಲಾಗದೆ, ಅದರ ನಾಯಕತ್ವದ ಅಸಮರ್ಥತೆಯನ್ನು ಎದ್ದು ತೋರಿಸುವುದರ ಜೊತೆಗೆ, ಅಂತಹ ಸಮಸ್ಯೆಗಳನ್ನು ಮತ್ತಷ್ಟು ಉಲ್ಬಣಗೊಳಿಸುತ್ತಿರುವ ಆಂತರಿಕ ಶಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ.

ಪಾಕಿಸ್ತಾನದ ಅಧ್ಯಕ್ಷರು ಯಾವಾಗಲೂ ಮಿಲಿಟರಿಯ ಹಿತಾಸಕ್ತಿಗಳನ್ನು ಪೂರೈಸುತ್ತಾರೆ,ಪಾಕಿಸ್ತಾನದಲ್ಲಿರುವ ಸಶಸ್ತ್ರ ಪಡೆಗಳು ತಮ್ಮ ಸಾಮಾನ್ಯ ಮಿಲಿಟರಿ ಯೋಜನೆ ಮತ್ತು ಆಡಳಿತಾತ್ಮಕ ನಿಯಂತ್ರಣದಲ್ಲಿ ಯಾವುದೇ ಹಸ್ತಕ್ಷೇಪವನ್ನು ಸಹಿಸುವುದಿಲ್ಲ. ಮಾಜಿ ಪ್ರಧಾನಿ ನವಾಜ್ ಷರೀಫ್ ಮಿಲಿಟ
ರಿಯ ಪ್ರಮುಖ ಹಿತಾಸಕ್ತಿಗಳಿಗೆ ಬೆದರಿಕೆ ಹಾಕಿದಾಗ, ಅವರು ಮಿಲಿಟರಿ ಸಂಸ್ಥೆಯನ್ನು ನಾಶಮಾಡಲು ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸ ಲಾಯಿತು ಮತ್ತು ನಂತರ ಇದೇ ವಿಷಯ ಅವರನ್ನು ಪ್ರಧಾನಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕಾರಣವಾಯಿತು. ಅವರಿಗಿಂತ ಮೊದಲು, ಪ್ರಧಾನ ಮಂತ್ರಿ ಜುನೆಜೊ ೧೯೮೮ ರಲ್ಲಿ ಅದೇ ಪರಿಸ್ಥಿತಿಯನ್ನು ಎದುರಿಸಿದ್ದರು, ಪಾಕಿಸ್ತಾನದ ಸಂಸತ್ ಮಿಲಿಟರಿಯ ಮೇಲೆ ತನ್ನ ಇಚ್ಚೆಯಂತೆ ನಿರ್ಧಾರಗಳನ್ನು ಹೇರುವ ಸ್ಥಿತಿಯಲ್ಲಿ ಎಂದಿಗೂ ಇರಲಿಲ್ಲ.

ರಾಷ್ಟ್ರೀಯ ಬಜೆಟ್‌ನಲ್ಲಿ, ರಕ್ಷಣಾ ವೆಚ್ಚವನ್ನು ಚಾರ್ಜ್ಡ್ ಖರ್ಚು ಎಂದು ವರ್ಗೀಕರಿಸಲಾಗಿದೆ, ಅದರ ಮೇಲೆ ಸಾರ್ವಜನಿಕ ಚರ್ಚೆ ನಡೆಯುವುದಿಲ್ಲ ಮತ್ತು ಸಾಂಪ್ರದಾಯಿಕವಾಗಿ ಚುನಾಯಿತ ಪ್ರತಿನಿಧಿಗಳಿಗೆ ರಕ್ಷಣಾ ವೆಚ್ಚದ ಬಗ್ಗೆ ಚರ್ಚೆ ಮಾಡುವ ಅಧಿಕಾರವಿಲ್ಲ. ಪಾಕಿಸ್ತಾನವನ್ನಾಳಿದ ಮಿಲಿಟರಿ ಅಧಿಕಾರಿಗಳು ಭಾರತದ ಭಯವನ್ನೇ ಬಂಡವಾಳ ಮಾಡಿಕೊಂಡು ತಮ್ಮ ಸೈನ್ಯದ ವೆಚ್ಚವನ್ನು ಏರಿಸುತ್ತಲೇ ಹೋದರು. ಪಾಕಿಸ್ತಾನದ ಸೈನ್ಯಾಧಿಕಾರಿ ಗಳಿಗೆ ದಶಕಗಳಿಂದ ಸೈನ್ಯದ ಮೇಲಿನ ಖರ್ಚು ಸುಲಭವಾಗಿ ಸಿಗಬಲ್ಲ ಭ್ರಷ್ಟಾಚಾರದ ಮೂಲವಾಗಿದೆ, ಹಾಗಾಗಿ ಯಾರೇ ಅಧಿಕಾರಕ್ಕೆ ಬಂದರೂ ಅಲ್ಲಿನ ಸೈನ್ಯದ ಸಹಾಯವಿಲ್ಲದೆ ಆಡಳಿತ ನಡೆಸಲು ಸಾಧ್ಯವಿಲ್ಲ.

ತನ್ನ ದೇಶದ ಜನರಿಗೆ ಎರಡು ಹೊತ್ತು ಊಟ ನೀಡಲು ಸಾಧ್ಯವಾಗದಿದ್ದರೂ, ತನ್ನ ರಕ್ಷಣಾ ವೆಚ್ಚವನ್ನು ಮಾತ್ರ ಪಾಕಿಸ್ತಾನ ಕಡಿಮೆ ಮಾಡಿಲ್ಲ. ಕೈಲಾಗ ದವನು ಮೈ ಪರಚಿಕೊಂಡಂತಾಗಿದೆ ಪಾಕಿಸ್ತಾನದ ಪರಿಸ್ಥಿತಿ.