Thursday, 12th December 2024

ಅಪ್ರಾಪ್ತರಿಗೆ ಸಿಕ್ಕ ನಿರೋಧ್: ವಿರೋಧವಷ್ಟೇ ಅಲ್ಲ, ಅಪಾಯ !

ಪ್ರಸ್ತುತ

ಡಾ.ಗಾಯತ್ರಿ ಜೈಪ್ರಕಾಶ

‘ನಿರೋಧ್’(ಕಾಂಡೋಮ್) ಇತ್ತೀಚೆಗೆ ಯಾರ ಕೈಯಲ್ಲಿ ಇರಬಾರದೋ ಅವರ ಕೈಯಲ್ಲಿ ತಗಲ್ಹಾಕ್ಕೊಂಡಿದೆ. ನಿರ್ದಿಷ್ಟ ಸಂದರ್ಭದಲ್ಲಿ, ಪ್ರತಿಯೊಬ್ಬರೂ ತಪ್ಪದೇ ಬಳಸಬೇಕು ಎಂಬುದನ್ನು ಯಾವ್ಯಾವ ರೀತಿ ಸಾರಬೇಕೋ ಅದೆಲ್ಲ ಪ್ರಯತ್ನ ಮಾಡಿ,
ಶೌಚಾಲಯದಿಂದ ಹಿಡಿದು ಆಸ್ಪತ್ರೆಯವರೆಗೆ ಬೇಕಾದಲ್ಲೆಲ್ಲ ಉಚಿತವಾಗಿ ಲಭ್ಯವಿರುವಂತೆ ಮಾಡಿದ್ದ ಈ ನಿರೋಧ್, ಇಂದು ಇರಬಾರದ ಜಾಗದಲ್ಲಿ, ಇರಬಾರದ ವರ ಕೈಯ್ಯಲ್ಲಿ ಕಂಡು ಹೆತ್ತವರು ಹೆದರಿದ್ದಂತೂ ನಿಜ.

ಇತ್ತೀಚೆಗೆ ವಿದ್ಯಾರ್ಥಿಗಳ ಕೈಗೆ ನಿರೋಧ್ ಬಂದದ್ದು ಸಮುದಾಯದ ‘ದುರ್ನಡತೆ’ ಯ ಪ್ರತಿಬಿಂಬ ವಾಗಿದೆ. ಇಡೀ ಸಮಾಜಕ್ಕೇ ಮಾರಕವಾಗಬಲ್ಲ ಸಂಗತಿಯಿದು. ಅನಾರೋಗ್ಯ ಕರ ಲೈಂಗಿಕ ಚಟಕ್ಕೆ ಒಂದು ಸಲ ವ್ಯಕ್ತಿ ಅಂಟಿಕೊಂಡನೆಂದರೆ ಇತರ ಕೆಟ್ಟ ಚಟಗಳು ಸಹಜವಾಗಿ ಆತನನ್ನು ಆವರಿಸಿಕೊಂಡು ಬಿಡುತ್ತವೆ. ಇದರಿಂದ ಯವಜನರ ವಿದ್ಯೆ, ಕೆರಿಯರ್, ಆರೋಗ್ಯ ಕೆಡುವುದರಇತರರಿಗೂ ಚಾಳಿ ಅಂಟಿ ಒಟ್ಟಾರೆ ವ್ಯವಸ್ಥೆಯೇ ಬಾಧಿತವಾಗುತ್ತದೆ.

ಈ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳ ಕೈಯಲ್ಲಿ ಕಾಂಡೋಮ್ ಕಂಡಿರುವ ಬೆಳವಣಿಗೆ ಯ ಬಗ್ಗೆ ಗಮನ ಹರಿಸುವುದು ಪ್ರಸ್ತುತದ ಅನಿವಾರ್ಯವಾಗಿದೆ. ಅಪ್ರಾಪ್ತ ಶಾಲಾ ಮಕ್ಕಳ ಬ್ಯಾಗ್‌ಗಳಲ್ಲಿ, ಅದರಲ್ಲೂ ಶಾಲಾ ಮಕ್ಕಳ ವರ್ತನೆ ಇಂದಿನ ಇಂಟರ್‌ ನೆಟ್, ಸಾಮಾಜಿಕ ಮಾಧ್ಯಮಗಳ ಉಚ್ಛ್ರಾಯದ ಯುಗದಲ್ಲಿ ಅಚ್ಚರಿಯೆನಿಸುತ್ತಿಲ್ಲ. ಆದರೆ, ಅವರ ಕೈಗೆಟುಕಿದ ಸಾಧ್ಯಾ- ಸಾಧ್ಯತೆ ಗಳನ್ನು ಕೂಲಂಕಷವಾಗಿ ಹಾಗೂ ಗಂಭೀರವಾಗಿ ಅಧ್ಯಯನ ಮಾಡುವ ಅವಶ್ಯಕತೆಯಿದೆ.

ಕೇವಲ ಕಾಂಡೋಮ್ ದೊರೆತಿದ್ದರೆ ‘ಅರಿಯದ ಮಕ್ಕಳು ಬಲೂನ್ ನನ್ನಂತೆ ಆಡಲು ಬಳಸುತ್ತಿರಬಹುದು’ ಎಂಬ ಸಬೂಬು
ಹೇಳಬಹುದಿತ್ತು. ಆದರೆ ಈ ಗರ್ಭನಿರೋಧಕ ಮಾತ್ರೆಗಳು, ಸಿಗರೇಟ್, ಮತ್ತೇರಿಸುವ ವಸ್ತುಗಳು ಮುಂತಾದ ಅಸುರಕ್ಷಿತ ಹಾಗೂ ಅಪಾಯಕಾರಿ ವಸ್ತುಗಳೂ ಜತೆಗಿರುವ ಕಾರಣ ಇದು ಒಂದು ಅಪಾಯಕಾರಿ ನಡವಳಿಕೆಯ ಕುರುಹು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಆದರೆ ಅದನ್ನು ಆ ಮಕಳ ಕೈಗೆಟುಕಿಸಿದ್ದು ಯಾರು? ಅವರ ಪರಿಚಯದ ಉನ್ನತ ತರಗತಿಯ ವಿದ್ಯಾರ್ಥಿಗಳು, ಶಾಲೆಯಿಂದ ಹೊರಗಿರುವ ಪರಿಚಿತರು, ಶಾಲೆಯ ಯಾವುದಾದರೂ ಸಿಬ್ಬಂದಿ ವರ್ಗದವರ ಮುಖಾಂತರ ದಕ್ಕಿತೇ? ಅಂದರೆ ಅವರೂ ಈ ವ್ಯೂಹದಲ್ಲಿದ್ದಾರೆಯೇ? ಅಥವಾ ತಮ್ಮ ಅನೈತಿಕ ಚಟುವಟಿಕೆಗಳಿಗೆ ಕಾವಲುಗಾರರಾಗಿ ಅಥವಾ ಫೋಟೋ, ವೀಡಿಯೋ ಮುಂತಾದ ಕಾರ್ಯಮಾಡಿ ಕೊಡಲು ಈ ವಿದ್ಯಾರ್ಥಿಗಳು ಬಳಕೆಯಾಗುತ್ತಿದ್ದಾರೆಯೇ? ಹೀಗೆ ಇದರ ಜಾಡನ್ನು ಹಿಡಿದು
ಬಹು ದೂರ ಹೋಗಬೇಕಾಗುತ್ತದೆ.

ಇನ್ನು ಇಷ್ಟು ಸಣ್ಣ ಮಕ್ಕಳಿಗೂ ದೈಹಿಕ ಸಂಪರ್ಕದ ಮಾಹಿತಿ, ಆಸಕ್ತಿ ಇಂದಿನ ತಂತ್ರಜ್ಞಾನ ಯುಗದಲ್ಲಿ ದೊಡ್ಡದಲ್ಲ. ಮೊಬೈಲ್ ಅನ್ನು ಒಮ್ಮೆ ಸ್ಕ್ರೋಲ್ ಮಾಡಿದರೆ ಸಾಕು ಈ ಸಂಬಂಧಿತವಾಗಿ ಲೆಕ್ಕವಿಲ್ಲದ್ದಷ್ಟು ಮಾಹಿತಿಗಳು, ಪ್ರಚೋದಾನ್ಮತಕ ವಿಡಿಯೋ ಗಳು ತೆರೆದುಕೊಳ್ಳತ್ತವೆ. ಇದರಲ್ಲಿ ಹೆಚ್ಚಿನವು ದುಡ್ಡಿಗಾಗಿ ಅದೇ ಉದ್ಯೋಗ ಮಾಡಿಕೊಂಡು ಹರಿಬಿಟ್ಟ ವೀಡಿಯೋ ಗಳು. ಜೀವನದಲ್ಲಿ ಯಾವುದೇ ನಿಶ್ಚಿತ ಗುರಿಯಿಲ್ಲದೇ, ಮೌಲ್ಯಗಳೇ ಇಲ್ಲದೇ, ಪ್ರಾಣಿಗಳಿಗಿಂತಲೂ ಕೆಟ್ಟದಾಗಿ ತಮ್ಮ ಅನೈತಿಕತೆ ಯನ್ನು ಪ್ರಸಾರ ಮಾಡಿಕೊಂಡು ಐಷಾರಾಮಿ ಬದುಕನ್ನು ಬದುಕುತ್ತಿರುವ ಮಂದಿ.

ಇನ್ನು ಅದೆಷ್ಟೋ ವಿಡಿಯೋಗಳು ಹೆಣ್ಣು ಮಕ್ಕಳನ್ನು ಬಲಾತ್ಕಾರ ಮಾಡಿ, ಚಿತ್ರೀಕರಿಸಿ ಹರಿಬಿಟ್ಟವು, ಲಾಡ್ಜ್ ಮುಂತಾದ ಕಡೆ ಕದ್ದುಮುಚ್ಚಿ ಸೆರೆಹಿಡಿದವು.. ಹೀಗೆ ಇಂಥವುಗಳನ್ನು ನಿರ್ಬಂಧವಿಲ್ಲದೇ ಪ್ರಸಾರ ಮಾಡುತ್ತಿರುವ ವ್ಯಾಪಾರಿ ಮನೋಭಾವ ಗಳನ್ನು ಹೊಣೆಯಾಗಿಸುವವರಾರು? ಅಂಥವುಗಳಿಂದ ಪ್ರೇರೇತರಾಗಿ ಅದರ ಪ್ರಾಯೋಗಿಕ ಅನುಭವ ಪಡೆಯಲು ಎಳೆ ಮನಸ್ಸು
ಹಪಹಪಿಸುವುದು ಸಹಜ. ಮೊದಲಾದರೆ ಮನೆಯ ಹಿರಿಯರ, ಪೋಷಕರ ಕಣ್ಗಾವಲಿತ್ತು, ಬೋಧನೆಯಿತ್ತು.

ಈಗವಕ್ಕೆಲ್ಲ ದೊಡ್ಡವರಿಗೆಲ್ಲಿ, ತಾಳ್ಮೆ, ಸಮಯ. ಮೊಬೈಲ್ ಮಕ್ಕಳ ಕೈಗೆ ಅನಾಸಾಯವಾಗಿ ಎಟಕುವಂತೆ ಮಾಡಿದ್ದು ಕರೋನಾ ಕಾಲದ ಆನ್‌ಲೈನ್ ಕ್ಲಾಸ್‌ಗಳು. ನಿರ್ಬಂಽತ ವಿಭಾಗಗಳಲ್ಲಿ ಇರಬೇಕಾದ ವಿಡಿಯೋ ತುಣುಕುಗಳು, ಅದಕ್ಕೆ ಸಂಬಂಧಿಸಿದ ಜಾಹೀರಾತುಗಳು ವಿವೇಚನೆಯಿಲ್ಲದೇ ಯಾವುದೇ ಕಾರಣಕ್ಕೆ ಗೂಗಲ ಸರ್ಚ್, ಫೇಸ್‌ಬುಕ್‌ನಂಥ ಜಾಲತಾಣಗಳನ್ನು ತೆರೆದಾಗ
ಧುತ್ತೆಂದು ಬಂದು ಮಕ್ಕಳ ಕುತೂಹಲ ಕೆರಳಿಸುತ್ತವೆ.

ಇನ್ನು ಅಂಥವನ್ನು ಕ್ಲಿಕ್ ಮಾಡಿದರೆ ಸಾಕು, ಅವು ಲಿಂಕ್ ಆಗಿರುವ ಯೂಟ್ಯೂಬ್‌ಗಳಲ್ಲಿ ಸೆಕ್ಸ್ ವಿಷಯದ ಕಟ್ಟು ಕಥೆಯನ್ನು
ಅವರೇ ಅನುಭವಿಸಿದರು ಎನ್ನುವಂತೆ ಕಟ್ಟಿ ಪ್ರಸ್ತುತಪಡಿಸಲಾಗಿರುತ್ತದೆ. ಸುಖಾಸುಮ್ಮನೆ ಮಕ್ಕಳನ್ನು, ಯುವಜನರನ್ನು ದಾರಿ ತಪ್ಪಿಸುವ ಇವು ವೇಶ್ಯಾವಾಟಿಕೆ ದಂಧೆಗಿಂತಲೂ ಕೀಳುಮಟ್ಟಕ್ಕಿಳಿದಿದೆ. ಇನ್ನು ‘ಟಿವಿ ರಿಯಾಲಿಟಿ ಷೋ’ಗಳ ಬಗ್ಗೆ ಹೇಳಲೇ
ಬೇಕಾಗಿಲ್ಲ. ದ್ವಂದ್ವಾರ್ಥವೇ ಹಾಸ್ಯವೆನ್ನುವ ರೀತಿಯಲ್ಲಿ ಕೋಟ್ಯಂತರ ವೀಕ್ಷಕರನ್ನು ತಲುಪುವ ಟಿ.ವಿ. ಪರದೆ ಮೇಲೆ ಎಗ್ಗಿಲ್ಲದೇ ರಾರಾಜಿಸುತ್ತವೆ. ಇಂಥ ಕೀಳುಮಟ್ಟದ ಅಭಿರುಚಿಗೆ ಏನನ್ನಬೇಕೋ? ಯುವಕರೇ ತುಂಬಿರುವ ಈ ಷೋಗಳು ಸಹಜವಾಗಿ ಯುವ ಮನಸ್ಸುಗಳನ್ನು ಪೋಷಿಸುತ್ತಿವೆ ಎಂಬುದನ್ನು ಹೆಚ್ಚು ಹೇಳಬೇಕಾಗಿಲ್ಲ.

ಸೆಲೆಬ್ರಿಟಿಗಳ, ರಾಜಕಾರಣಿಗಳ ಅನೈತಿಕತೆಯನ್ನು ಸುದ್ದಿ ಮಾಧ್ಯಮಗಳೂ ಎಗ್ಗಿಲ್ಲದೇ ಪ್ರಸಾರ ಮಾಡುವುದು ಕೂಡ ವ್ಯವಸ್ಥೆಯ ಗಮನವನ್ನು ಅದೇ ಕೂಪದಲ್ಲಿ ಇಡುವಂತಾಗಿದೆ. ಎಲ್ಲಿ ನೋಡಿದರಲ್ಲಿ ಪ್ರಚಾರದ ವಿಷಯಗಳು ಲೈಂಗಿಕತೆಯ ಸುತ್ತವೇ
ಸುತ್ತಿರುತ್ತವೆ. ಇವನ್ನು ಸುಲಭವಾಗಿ ನೋಡಿದ ವಿದ್ಯಾರ್ಥಿಗಳು ಅದರ ಕೆಡುಕಿನ ಅರಿವಿಲ್ಲದೆಯೇ ದಾರಿತಪ್ಪುತ್ತಿವೆ. ಮಕ್ಕಳು ಕಾಂಡೋಮ್ ತಂದಿವೆ ಎಂದರೆ ಅವರು ಯಾರ ಜತೆಗೆ ಯಾವಾಗ ಲೈಂಗಿಕ ಸಂಪರ್ಕ ಹೊಂದುತ್ತಿದ್ದಾರೆ ಎಂಬುದು ಗೊತ್ತಾಗಲೇ ಬೇಕಾದ ಸಂಗತಿ.

ಹೈಸ್ಕೂಲ್ ಹಂತದ ವಿದ್ಯಾರ್ಥಿಗಳಿಗೆ ಮನೆಯಗಲೀ, ವಸತಿ ನಿಲಯಗಳಗಲೀ ಸ್ವಾತಂತ್ರ್ಯವಿರುವುದಿಲ್ಲ. ಅವರು ಎಲ್ಲದಕ್ಕೂ ಕಾರಣಕೊಟ್ಟು ಹೋಗಿ, ಸಮಯಕ್ಕೆ ಸರಿಯಾಗಿ ಬರಬೇಕಲ್ಲವೇ? ಹಾಗಿzಗ್ಯೂ ಈ ಮಕ್ಕಳು ತಪ್ಪುದಾರಿ ಹಿಡಿದವೆಯೆಂದರೆ ಅದು ಪೋಷಕರ ಪಾಲನೆಯ ವೈಫಲ್ಯವೇ. ತಮ್ಮ ಮಕ್ಕಳ ನಡೆನುಡಿಯನ್ನು ಜವಾಬ್ದಾರಿಯುತವಾಗಿ ಗಮನಿಸುವುದಿಲ್ಲವೆಂದೇ ಅರ್ಥ. ಮನೆಯಲ್ಲಿದ್ದವರು ಮಕ್ಕಳ ಕಾಟ ತಪ್ಪಿದರೆ ಸಾಕು ಎಂದುಕೊಂಡು ಅವರಿಗೆ ಮೊಬೈಲು ಕೊಟ್ಟು ತಾವು ಧಾರಾವಾಹಿ ನೋಡುವುದು ಮಾಡಿದರೆ ಈ ಮಕ್ಕಳ ಚಲನವಲನಗಳ ಮೇಲೆ ನಿಗಾ ಇಡುವವರು ಯಾರು? ಸರಕಾರಿ ಶಾಲಾ ಮಕ್ಕಳಾಗಿದ್ದರೆ, ಬಡವರ ಮಕ್ಕಳು, ಅವಿದ್ಯಾವಂತರ ಮಕ್ಕಳು, ಓದದ ಮಕ್ಕಳು, ಕುಟುಂಬದ ಸಾಮಾಜಿಕತೆಯ ಪರಿಣಾಮ, ಸಹವಾಸ
ದೋಷ, ಬೇಕಾ ಬಿಟ್ಟಿ ಜೀವನ ಹೀಗೆ ಸಾಕಷ್ಟು ಸಬೂಬು ಹೇಳಬಹುದಿತ್ತೇನೋ.

ಆದರೆ ಇಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಖಾಸಗಿ ಶಾಲಾ ಮಕ್ಕಳಲ್ಲವೇ? ಶಾಲಾ ಬಸ್ಸುಗಳಲ್ಲಿ, ಮಕ್ಕಳ ಆಟೋ ಗಳಲ್ಲಿ ಶಾಲೆಗೆ ಬಂದುಹೋಗುವುದು, ಪೋಷಕರು ಬಿಡು ವುದು ಹೆಚ್ಚೆಂದರೆ ಕೆಲವು ಮಕ್ಕಳು ಸೈಕಲ್‌ನಲ್ಲಿ ಬರಬಹುದು. ಈ ಹಂತದಲ್ಲಿ ಏನುಬೇಕಾದರೂ ಅಗುತ್ತಿರಬಹುದು. ಶಾಲೆ ಬಿಟ್ಟ ಮೇಲೆ ಟ್ಯೂಷನ್ ಬಾಧಿತ ಮಕ್ಕಳೇನಾದರೂ ಇಂತಹ ಚಟಕ್ಕೆ ಬಿದ್ದರೇ?
ಅದೇನೇ ಇದ್ದರೂ ಇದು ವರ್ತನಾ ಸಮಸ್ಯೆಗೆ ಸಂಬಂಧಿಸಿದ್ದು. ಸಂಬಂಧಪಟ್ಟವರು ಈ ಸಮಸ್ಯೆಯನ್ನು ಹಾಗೆ ಬಿಡದೇ ಇದನ್ನು ತೀವ್ರತರವಾದ ಅಧ್ಯಯನಕ್ಕೆ ಒಳ ಪಡಿಸಬೇಕಾಗಿದೆ.

ಆ ಮಕ್ಕಳ ಮನೋ-ಸಾಮಾಜಿಕ ಹಿನ್ನೆಲೆ ಯನ್ನು ಅಧ್ಯಯನ ಮಾಡಬೇಕಾಗಿದೆ. ನಿಜವಾಗಿಯೂ ಅವರಿಗಾಗಿಯೇ ತಂದಿದ್ದಾರಾ? ಬೇರೆಯವರ ಪ್ರಚೋ ದನೆಯಿಂದ ಬೇರೆಯವರಿಗೋಸ್ಕರ ತಂದಿದ್ದರಾ? ಹುಡುಗರು ಬಳಸುತ್ತಿದ್ದರಾದರೆ ಆ ಸಂಗಾತಿ ಹೆಣ್ಣು ಮಕ್ಕಳು ಯಾರು? ಅವರ ಈ ಕ್ರಿಯೆಗಳಿಗೆ ಯಾರು ಬಲಿಯಾಗುತ್ತಿದ್ದಾರೆ? ಅವರ ಕೌಟುಂಬಿಕ ಹಿನ್ನೆಲೆ ಏನು? ಇಂತಹ ಮಾಹಿತಿ ಅವರಿಗೆ ಎಲ್ಲಿಂದ ಸಿಕ್ಕಿತು? ಇವನ್ನೆಲ್ಲ ಎಲ್ಲಿ ಬಳಸುತ್ತಾರೆ? ಇವರ ಹಿಂದೆ ಯಾವುದಾದರೂ ದೊಡ್ಡವರ ಗುಂಪು ಇದೆಯಾ? ಯಾವುದಾದರೂ ಮೋಸದ ಜಾಲವಿದೆಯೇ? ಈ ರೀತಿಯಾಗಿ ಇದರ ಹಿನ್ನೆಲೆ ಹಾಗೂ ಇದಕ್ಕೆ ಸಂಬಂಧಿಸಿದಂತಹ ಸಂಪೂರ್ಣ ಮಾಹಿತಿಯನ್ನು ಆಳವಾಗಿ ಕಲೆಹಾಕುವುದು ಒಳ್ಳೆಯದು.

ಅಧ್ಯಯನ ಮಾಡಿ ಸಮಾಜಕ್ಕೆ ಅದರ ಸತ್ಯಾಸತ್ಯತೆಯನ್ನು ಜರೂರಾಗಿ ಬಹಿರಂಗಗೊಳಿಸಬೇಕಾಗಿದೆ. ಸಾಮಾಜಿಕ ಜಾಲತಾಣ
ಗಳಗಲೀ, ರಿಯಾಲಿಟಿ ಷೋಗಳಗಲೀ, ಚಲನಚಿತ್ರಗಳಗಲೀ ಈ ಮಟ್ಟದ ಅಶ್ಲೀಲ ಅಂಶಗಳು ಪ್ರಸಾರ ಆಗದಂತೆ ಕಠಿಣ ಕ್ರಮ ಜರುಗಿಸುವುದು ಈ ಹೊತ್ತಿನ ಅತೀ ಸವಾಲಿನ ಹಾಗೂ ಜರೂರತ್ತಾದ ಸಂಗತಿಯಾಗಿದೆ. ಮಕ್ಕಳಿಗೆ ಶಾಲೆಗಳಲ್ಲಿ ಅತೀ ಸಣ್ಣ ವಯಸ್ಸಿನಿಂದಲೇ ಲೈಂಗಿಕ ಅರಿವು ಮತ್ತು ಜಾಗೃತಿ ಮೂಡಿಸುವ ಜತೆಗೆ ಅದರ ಇನ್ನೊಂದು ಅಪಾಯದ ಮುಖವನ್ನೂ ಬೋಧಿ ಸಲೇಕಾಗಿದೆ.

ಮಕ್ಕಳು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಎಚ್ಚರಿಕೆಯ ಅರಿವನ್ನು ಮೂಡಿಸಬೇಕಾಗಿದೆ. ಮಗನೊಬ್ಬನು ಅಪ್ರಾಪ್ತ ವಯಸ್ಸಿನಿಂದಲೇ ಇಂತಹ ಅನೈತಿಕ ಚಟುವಟಿಕೆಗೆ ಇಳಿದನೆಂದರೆ ನಾಳೆ ಅವನು ಕುಡಿತ, ಡ್ರಗ್ಸ್, ಅತ್ಯಾಚಾರ, ಕೊಲೆ, ದರೋಡೆ, ಇನ್ನು ಮುಂತಾದ ಅನೈತಿಕ ಚಟುವಟಿಕೆಗಳ ದಾಸನಾಗಬಹುದು. ಲೈಂಗಿಕ ಸೋಂಕುಗಳು, ಎಚ್‌ಐವಿಯಂಥದ್ದರಿಂದ ಬಾಧಿತನಾಗಿ ಸಮಾಜಕ್ಕೆ ಕಂಟಕನಾಗಬಹುದು. ಅಂತೆಯೇ ಹೆಣ್ಣು ಮಗಳೊಬ್ಬಳು ಇಂತಹ ದಾರಿ ಹಿಡಿದಳೆಂದರೆ ಅವಳು
ಪದೇ ಪದೇ ಗರ್ಭಿಣಿಯಾಗಿ, ಗರ್ಭಪಾತಕ್ಕೆ ಒಳಗಾಗಿ ಮುಂದೆ ಮಕ್ಕಳು ಪಡೆಯುವ ಅವಕಾಶದಿಂದ ವಂಚಿತಳಾಗಬಹುದು.

ಇದರಿಂದ ಒಂದು ತಲೆಮಾರು ಕ್ಷೀಣಿಸಬಹುದು. ಜತೆಗೆ ಅತ್ಯಾಚಾರಕ್ಕೆ ಒಳಗಾಗುವುದು, ಮಾರಾಟವಾಗುವುದು, ವೇಶ್ಯಾಗೃಹಕ್ಕೆ ತಳ್ಳಲ್ಪಡುವುದು, ಮಾನಸಿಕ ಅಸ್ವಸ್ಥಳಾಗುವುದು, ಕೊಲೆಯಾಗುವುದು ಇನ್ನು ಮುಂತಾದ ದಾರಿದ್ರ್ಯಕ್ಕೆ ತುತ್ತಾಗಬಹುದು.
ಮಕ್ಕಳ ಕೈಗೆ ಅಗತ್ಯಕ್ಕಿಂತ ಹೆಚ್ಚು ಸಮಯ ಫೋನ್ ಲಭ್ಯವಿರದಂತೆ ಮಾಡುವುದು, ಶಾಲೆಗಳಲ್ಲಿ ಫೋನ್ ಸಂಬಂಧಿತ
ಚಟುವಟಿಕೆಗಳನ್ನು ನೀಡದೇ ಇರುವುದು, ಅಗತ್ಯಕ್ಕಿಂತ ಹೆಚ್ಚು ಸ್ವಾತಂತ್ರ್ಯವನ್ನು ಮಕ್ಕಳಿಗೆ ನೀಡದೇ ಇರುವುದು, ತಮ್ಮ ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವುದು, ಅವರ ಕಷ್ಟ ಸುಖಗಳನ್ನು, ಅಗತ್ಯಗಳನ್ನು ಆಲಿಸುವುದು, ಅವರ ಸಂಶಯ ಗಳನ್ನು ಹಾಗೂ ಸಮಸ್ಯೆಗಳನ್ನು ಬಗೆಹರಿಸುವುದು ಮಾಡಬೇಕಾಗಿದೆ.

ಕಾಂಡೋಮ್ ಲಭ್ಯತೆ ಹಾಗೂ ಬಳಕೆಯನ್ನು ನಿಯಂತ್ರಿಸುವ ಅಂಶ ಹಾಗಿರಲಿ ಇದು ಲೈಂಗಿಕ ಕ್ರಿಯೆ ನಡೆಸುವ ವಯಸ್ಸು ಅಲ್ಲವೇ ಅಲ್ಲ. ಆದ್ದರಿಂದ ಮಕ್ಕಳು ಈ ವಯಸ್ಸಿನಲ್ಲಿ ಲೈಂಗಿಕ ಬಾಧೆಗಳಿಗೆ ತುತ್ತಾಗದಂತೆ ಜೋಪಾನ ಮಾಡಬೇಕು. ಸಣ್ಣ ವಯಸ್ಸಿನ ಹೆಣ್ಣುಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುವ ಗಂಡಸರಿಗೆ ಹಾಗೂ ಸಣ್ಣ ವಯಸ್ಸಿನ ಗಂಡು ಮಕ್ಕಳನ್ನು ಈ ರೀತಿಯ ತಪ್ಪು ದಾರಿಗೆ ಎಳೆಯುವ ಹೆಂಗಸರಿಗೆ ಕಠಿಣ ಶಿಕ್ಷೆಯಾಗಬೇಕಾಗಿದೆ. ಅಪ್ರಾಪ್ತ, ಅಸುರಕ್ಷಿತ ಹಾಗೂ ಅನೈತಿಕ ಲೈಂಗಿಕ
ಚಟದಿಂದ ಸಮಾಜ ಮುಕ್ತವಾಗಬೇಕಾಗಿದೆ.