Wednesday, 11th December 2024

ಯಾವುದೇ ಭಾರತೀಯ ಭಾಷೆಗೆ ಪೂರ್ಣವಾಗಿ ಭಾಷಾಂತರವಾಗಿರದ ನಮ್ಮ ಭಾರತೀಯ ಸಂವಿಧಾನ

ಅವಲೋಕನ

ಮಂಜುನಾಥ ಅಜ್ಜಂಪುರ

ಸಮರ್ಥವಾದ – ವಿದ್ವತ್ಪೂರ್ಣವಾದ – ಸಮರ್ಪಕವಾದ ಭಾಷಾಂತರ ಬಹಳ ಬಹಳ ಕಷ್ಟ. ಇತಿಹಾಸ, ಸನಾತನ ಧರ್ಮ ಮತ್ತು ಭಾರತೀಯ ಪರಂಪರೆಗಳನ್ನು ಮೂಲರೂಪದಲ್ಲಿ ಅನುಸಂಧಾನ ಮಾಡುವ ಪರಿಕಲ್ಪನೆಯ ಕೃತಿಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ತರುವುದು ಬರಿಯ ಅನುವಾದದ ಚೌಕಟ್ಟಿಗೆ ನಿಲುಕುವಂತಹುದಲ್ಲ.

ಅದು ತಪಸ್ಸು, ಅದು ಪ್ರತಿಸೃಷ್ಟಿ. ತುಂಬ ಪ್ರಸಿದ್ಧರಾದ, ಹತ್ತಾರು ಕೃತಿಗಳನ್ನು ಈಗಾಗಲೇ ಪ್ರಕಟಿಸಿರುವ ಲೇಖಕರಿಗೂ, ಇಂಥ ಕೃತಿಗಳ ಪ್ರವೇಶಿಕೆಯೇ ಕಷ್ಟತಮವಾಗುತ್ತದೆ. ಏಕೆಂದರೆ, ಇತಿಹಾಸ, ಭೂಗೋಳ, ಸಮಾಜಶಾಸ, ರಾಜಕೀಯ ವಿಜ್ಞಾನಗಳಲ್ಲಿ ಆಳವಾದ ಪರಿಶ್ರಮವಿರಬೇಕು ಹಾಗೂ ಕನ್ನಡ, ಇಂಗ್ಲಿಷ್, ಸಂಸ್ಕೃತ, ಉರ್ದು, ಹಿಂದಿ ಮತ್ತಿತರ ಭಾಷೆಗಳಲ್ಲಿ ಪರಿಣತಿ ಇರಬೇಕು. ಉಳಿದಂತೆಯೂ ತುಂಬ ಓದಿಕೊಂಡಿರಬೇಕು. ಧರ್ಮ – ರಿಲಿಜನ್, ಗಾಡ್ – ದೇವರು, ಕಾಫಿರ್, ಜಿಹಾದ್, ಕ್ರುಸೇಡ್, ಸೆಕ್ಯುಲರ್ ಇತ್ಯಾದಿಗಳ ಬಳಕೆಯು ಪೂರ್ಣವಾಗಿ ಮಾರ್ಪಾಡಾಗಿದೆ, ಹೊಸ ಆಯಾಮದಿಂದ ಪರಿಗಣಿಸಬೇಕಾದ ಪದಸಮೂಹಗಳಾಗಿವೆ.

ಇನ್ನು ಕಾನೂನು, ಕಾಯಿದೆ, ಸಂವಿಧಾನಗಳಿಗೆ ಸಂಬಂಧಿಸಿದ ಒಂದೊಂದು ವಾಕ್ಯದ ಸಮರ್ಪಕ ಅನುವಾದವೂ ಕ್ಲಿಷ್ಟ. ಅದರಲ್ಲೂ ಕೆಲವು ಕಾನೂನಾತ್ಮಕ ವಾಕ್ಯಗಳು ಅರ್ಧಪುಟ, ಒಂದು ಪುಟವನ್ನು ಮೀರುವುದಿದೆ. ಅವುಗಳನ್ನು ಕತ್ತರಿಸು ವಂತೆಯೇ ಇಲ್ಲ. ಭಾವಾನುವಾದವೂ ಸಾಧುವಲ್ಲ. ಒಂದು ವಾಕ್ಯವು ಅದೆಷ್ಟೇ ದೊಡ್ಡದಿದ್ದರೂ, ಕನ್ನಡದಲ್ಲಿಯೂ ಒಂದೇ ವಾಕ್ಯವಾಗಬೇಕು.

ನಮ್ಮ ವಿಶ್ವವಿದ್ಯಾಲಯಗಳು ತಮ್ಮ ಕಣ್ಮುಂದೆ ತಂದುಕೊಳ್ಳುವ ಜಗತ್ತಿನಲ್ಲಿ ಬರೀ ಷೇಕ್ಸ್ ಪಿಯರ್, ಷೆಲ್ಲಿ, ಕೀಟ್ಸ್, ಜಾಕ್ ಅಂಡ್ ಜಿಲ್ ತುಂಬಿಕೊಂಡಿರುವುದೇ ಜಾಸ್ತಿ. ಕಟುವಾಸ್ತವದ ಪ್ರಪಂಚದಲ್ಲಿ ಕಾಯಿದೆ, ಕಾನೂನುಗಳದ್ದೇ ರಾಜ್ಯಭಾರ. ಪೊಲೀಸ್,
ನ್ಯಾಯಾಲಯಗಳು, ನ್ಯಾಯವಾದಿಗಳ ಮರೋ ಪ್ರಪಂಚಂನಲ್ಲಿ ಸಿಲುಕುವವರೆಗೆ, ನಮಗೆ ಜಗತ್ತು ಒಂದು ಅವಾಸ್ತವ ಭ್ರಮಾಲೋಕದ ಎಲ್ಲಾ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಆಗಿ ಕಾಣುತ್ತದೆ.

ನಮ್ಮದು ಇಪ್ಪತ್ತು ಸಹಸ್ರ ವರ್ಷಗಳನ್ನು ಮೀರುವ ಅದ್ಭುತವಾದ ಪರಂಪರೆ. 140 ಕೋಟಿ ಜನರ ನಮ್ಮ ಭಾಷಾ ವೈವಿಧ್ಯ, ಸಾಹಿತ್ಯ ಸಮೃದ್ಧಿ ಅಮೋಘ. ಆದರೆ, ಬ್ರಿಟಿಷ್ ವಸಾಹತುಶಾಹಿಯ – ಇಂಗ್ಲಿಷ್ ಭಾಷೆಯ ಹೊಡೆತ, ದುರಾಕ್ರಮಣ ಹೇಗಿದೆ ಯೆಂದರೆ, ಇಂದಿಗೂ ನಮ್ಮ ರಾಜ್ಯಾಂಗ – ನಮ್ಮ ಸಂವಿಧಾನಗಳು ಇಂಗ್ಲಿಷ್ ಭಾಷೆಯಲ್ಲಿ ಮಾತ್ರವೇ ಪೂರ್ಣವಾಗಿ ಲಭ್ಯ . ಅಷ್ಟೇ ಅಲ್ಲ, ಪೂರ್ಣವಾಗಿ ಯಾವುದೇ ಭಾರತೀಯ ಭಾಷೆಯಲ್ಲಿ ಈ ನಮ್ಮ ಭಾರತೀಯ ಸಂವಿಧಾನವು ಅಲಭ್ಯ, ಏಕೆಂದರೆ ವಾಸ್ತವ ವಾಗಿ ಪೂರ್ಣವಾಗಿ ಭಾಷಾಂತರವಾಗಿಯೇ ಇಲ್ಲ. ಇದು ವಿಚಿತ್ರ ಆದರೂ ನಿಜ, ಎಂಬಂಥ ಕಟುಸತ್ಯ.

ನಮ್ಮ ಸಂವಿಧಾನ ಎಂದರೆ, ಕೇವಲ ಒಂದು ಪುಸ್ತಕವೇ? ಅಲ್ಲವಲ್ಲ. ನೂರಿನ್ನೂರು ವರ್ಷಗಳ ನೂರಾರು ಅಧಿನಿಯಮಗಳು,
ಕಾಯಿದೆಗಳು, ಸಂಹಿತೆಗಳು, ಅನುಚ್ಛೇದಗಳು ಮತ್ತು ಅವುಗಳ ಎಲ್ಲ ಪರಿಶಿಷ್ಟಗಳು (schedules) ಹಾಗೆ ಹಾಗೇ ಇವೆ. ಮೂಲ ಸ್ವರೂಪದಲ್ಲಿಯೇ ಇವೆ. ಸಂವಿಧಾನದ ತಿದ್ದುಪಡಿಗಳನ್ನು ಬಿಡಿ, ಅಧಿನಿಯಮಗಳ ತಿದ್ದುಪಡಿಗಳೇ ದೊಡ್ಡ ಸಂಖ್ಯೆಯಲ್ಲಿವೆ.
ಇನ್ನು ನಿಯಮಗಳು, ನಿಬಂಧನೆಗಳು, ಷರತ್ತುಗಳು, ಲೆಕ್ಕವಿಡಲಾಗದಷ್ಟು. ನಮ್ಮ ಅಕಾಡೆಮಿಯನ್ನರಿಗೆ, ಬುದ್ಧಿಜೀವಿಗಳಿಗೆ
ಈವರೆಗೆ ಸಂಪೂರ್ಣ ಸಂವಿಧಾನವು ಭಾರತೀಯ ಭಾಷೆಗಳಲ್ಲಿ ಬಂದಿಲ್ಲ ಎಂಬುದು ಕೊರತೆಯಾಗಿಯೂ ಕಂಡಿಲ್ಲ, ಆಗ ಬೇಕೆಂಬುದು ಅನಿವಾರ್ಯ – ಅತ್ಯಾವಶ್ಯಕ ಎಂದೂ ಅನ್ನಿಸಿಲ್ಲ.

ಸಂವಿಧಾನದ ಕೆಲವಾರು ವಿಽಗಳ ಬಗ್ಗೆ, ಅನುಚ್ಛೇದಗಳ ಬಗ್ಗೆ ಈಗೇನೂ ಮಾತನಾಡುವುದು ಬೇಡ. ಆದರೆ ಅಂಥ ಸಂವಿಧಾನವು
ಯಾವ ಸಂದರ್ಭದಲ್ಲಿ ಬಂದಿತು, ಹೇಗೆ ಬಂದಿತು, ಏನೇನಾಯಿತು ಎಂಬುದರ ಕಿರುಪರಿಚಯವನ್ನಾದರೂ ಮಾಡಿಕೊಳ್ಳೋಣ.
ಎರಡನೇ ಮಹಾಯುದ್ಧದ ವೇಳೆಯಲ್ಲಿ, ಬ್ರಿಟಿಷರನ್ನು ಇಕ್ಕಟ್ಟಿಗೆ – ಬಿಕ್ಕಟ್ಟಿಗೆ ಸಿಲುಕಿಸುವುದರಲ್ಲಿ ನಾವು ವಿಫಲರಾದೆವು. ಹಾಗೆ
ನೋಡಿದರೆ ಇಂಗ್ಲೆಂಡ್ ತುಂಬ ಪುಟ್ಟ ದೇಶ. ಜರ್ಮನಿ – ಇಟಲಿ – ಜಪಾನುಗಳ ದಾಳಿಯನ್ನು ಎದುರಿಸಲು ಅದು ತುಂಬ ಪಾಡು
ಪಡಬೇಕಾಯಿತು. ಜತೆಯಲ್ಲಿ ಅಂದಿನ ಅವಿಭಜಿತ ಭಾರತದ ಮತ್ತು ಇತರ ವಸಾಹತುಗಳ ನಿರ್ವಹಣೆಯೂ ಆಗಬೇಕಿತ್ತು.

ಆದರೆ, ಹೇಡಿತನ – ಅಹಿಂಸೆಗಳನ್ನು ಆವಾಹಿಸಿಕೊಂಡ ನಮ್ಮ ಮೂರ್ಖತನದ ಸಂಪೂರ್ಣ ಬೆಂಬಲವಿದ್ದುದರಿಂದ, ಪಾಪ, ಬ್ರಿಟಿಷರಿಗೆ ತುಂಬ ತೊಂದರೆಯೇನೂ ಆಗಲಿಲ್ಲ. ಮಹಾಯುದ್ಧ ಮುಗಿದ ಮೇಲೆ ಡಿಸೆಂಬರ್ 1945ರ ಸುಮಾರಿಗೆ ಇಡೀ ಭಾರತ ದೇಶದಲ್ಲಿ ಪ್ರಾಂತೀಯ ಚುನಾವಣೆಗಳು ನಡೆದವು. ಗಮನಿಸಿ. ಅಂದಿನ ಪ್ರಜಾಸಂಖ್ಯೆಯ ಎಂಟೂವರೆ ಶತಾಂಶ ಜನರು ಮಾತ್ರ ಮತದಾನ ಮಾಡುವ ಅರ್ಹತೆ ಪಡೆದಿದ್ದರು. ಆದರೆ, ಅದರಲ್ಲಿ ಆಗ ಮತದಾನ ಮಾಡಿದವರು ಬರಿಯ ಶೇ.10-15 ಜನ ಮಾತ್ರ. ಪ್ರತಿಯೊಬ್ಬ ವಯಸ್ಕ ಭಾರತೀಯನೂ ಮತದಾನದ ಅಽಕಾರ ಪಡೆದದ್ದು, ಗಣರಾಜ್ಯೋದಯದ ನಂತರವೆ.

ಹೀಗೆ ಚುನಾಯಿತರಾದ ಶಾಸಕರು ಸಂವಿಧಾನ ರಚನಾ ಸಭೆಯ (Constituent Assembly) ಸದಸ್ಯರನ್ನು ಆರಿಸಿದರು. ಮುಸ್ಲಿಂ ಲೀಗ್ ಟಿಕೆಟ್ಟಿನ ಮೇಲೆ ಆರಿಸಿಬಂದ 73 ಜನ ಸದಸ್ಯರು, ತಮ್ಮ ನಾಯಕ ಮೊಹಮ್ಮದ್ ಅಲಿ ಜಿನ್ನಾ ಅವರ ಅಪ್ಪಣೆಯ ಮೇರೆಗೆ ಸಂವಿಧಾನ ರಚನಾ ಸಭೆಗೆ ಹಾಜರಾಗಲಿಲ್ಲ. ತಮಗೆ ಪಾಕಿಸ್ಥಾನ ಬೇಕೆಂದೂ, ತಮಗೆ ಬೇರೆಯೇ ಸಂವಿಧಾನ
ಇರಬೇಕೆಂದೂ ಜಿನ್ನಾ ಪ್ರತಿಪಾದಿಸುತ್ತಿದ್ದರು. ಒಟ್ಟು 389 ಜನ ಸಂವಿಧಾನ ಸಭೆಯ ಸದಸ್ಯರಲ್ಲಿ, ಮುಸ್ಲಿಂ ಲೀಗ್ ಸದಸ್ಯರನ್ನು
ಹೊರತುಪಡಿಸಿದರೆ, ಕಾಂಗ್ರೆಸ್ ಪಕ್ಷದವರು 205 ಜನರು ಮಾತ್ರ.

ಉಳಿದವರು ರಾಜರ – ಸುಲ್ತಾನರ ಪ್ರಾಂತಗಳ ನಾಮಕರಣಗೊಂಡ ಪ್ರತಿನಿಧಿಗಳು. ಅಲ್ಲಿಯೂ ಕೆಲವು ನವಾಬರು ತಮ್ಮ ಪ್ರತಿನಿಧಿಗಳಿಗೆ ಸಂವಿಧಾನ ಸಭೆಯನ್ನು ಬಹಿಷ್ಕರಿಸಿ, ಎಂದು ತಾಕೀತು ಮಾಡಿದ್ದರು. ಕೊನೆಗೆ ಈ ಸಂವಿಧಾನ ರಚನಾ ಸಭೆಗೆ ನಿಜವಾಗಿಯೂ ಹಾಜರಾಗಿ ಪಾಲ್ಗೊಂಡವರು 161 ಜನ ಮಾತ್ರ. ಅದರಲ್ಲಿ 89 ಜನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಆರಿಸಿ ಬಂದವರು. ಉಳಿದವರು ಸಹ ಬಹುಪಾಲು ಕಾಂಗ್ರೆಸ್ ಪಕ್ಷದ ಬೆಂಬಲ ಪಡೆದವರೇ ಆಗಿದ್ದರು.

ಆಗ ಪಕ್ಷದ ಹಿಡಿತವು ಜವಾಹರಲಾಲ್ ನೆಹರೂ ಮತ್ತು ಸರ್ಧಾರ್ ವಲ್ಲಭಭಾಯಿ ಪಟೇಲರ ಕೈಲಿತ್ತು. ಎಲ್ಲ ನಿರ್ಧಾರಗಳನ್ನೂ ಅವರೇ ತೆಗೆದುಕೊಳ್ಳುತ್ತಿದ್ದರು. 1946ರ ಡಿಸೆಂಬರ್ 6ರಿಂದ ಸಂವಿಧಾನ ರಚನಾ ಸಭೆಯ ಕಲಾಪಗಳು ಆರಂಭವಾಗಿ, 1949ರ ನವೆಂಬರ್ 26ರ ವರೆಗೆ ನಡೆದವು. ಅಂದರೆ ಸುಮಾರು ಮೂರು ವರ್ಷ. ಈ ಅವಧಿಯ 1080 ದಿನಗಳಲ್ಲಿ ಕಲಾಪ ನಡೆದದ್ದು ಬರಿಯ 145 ದಿನಗಳು ಮಾತ್ರ.

ಸಂವಿಧಾನ ಸಭೆಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ತುಂಬ ಮುಂಚೆಯೇ,
ಅಂದರೆ ಏಪ್ರಿಲ್ 1946ರಲ್ಲಿಯೇ, ನಮಗೆ ಹೊಸ ಸಂವಿಧಾನ ಬೇಡ. ಹಾಗೆ ರಚಿತವಾಗುವ ಸಂವಿಧಾನವು ಮೇಲುಜಾತಿಯವ ರಿಂದ ಮತ್ತು ಪ್ರಬಲ ವರ್ಗಗಳಿಂದ ಪ್ರಭಾವಿತವಾಗಿರುತ್ತದೆ. 1935ರ ಸಂವಿಧಾನವೇ ಆಧಾರವಾಗಿರಲಿ ಎಂದು ಒತ್ತಾಯಿಸಿದ್ದರು.

ಇದಾವುದು 1935ರ ಸಂವಿಧಾನ ಎಂದರೆ, ಬ್ರಿಟಿಷ್ ಪಾರ್ಲಿಮೆಂಟಿನ ಜಂಟಿ ಸಂಸದೀಯ ಸಮಿತಿಯು, ಬ್ರಿಟಿಷ್ ಮಾದರಿ ಯಲ್ಲಿಯೇ ಸಿದ್ಧಪಡಿಸಿದ್ದು (ತಮಾಷೆಯೆಂದರೆ, ಆ ಇಂಗ್ಲೆಂಡಿಗೇ ಒಂದು ಸಂವಿಧಾನ ಇಲ್ಲ.Magna Carta ದಿಂದಲೇ ಅವರ ಕಥೆ ಪ್ರಾರಂಭವಾಗುತ್ತದೆ). ಆಗ ಇನ್ನೂ ಹಲವಾರು ಸಮಸ್ಯೆಗಳಿದ್ದವು. ಸ್ವಾತಂತ್ರ್ಯೋದಯಕ್ಕಿಂತ ಮೊದಲೇ ಅಧಿಕಾರದ ರುಚಿ, ಗದ್ದುಗೆಯ ಸುಖ ಅನುಭವಿಸಿದ್ದ ನೆಹರೂ ಮತ್ತು ಅವರ ಅನುಯಾಯಿಗಳು ತಮ್ಮ ಸೌಲಭ್ಯಗಳಿಂದ ವಂಚಿತರಾಗಲು ಸಿದ್ಧರಿರ ಲಿಲ್ಲ.

ಆಗ ಗಾಂಧೀಜಿಯವರು ತಮ್ಮ ವಿಲಕ್ಷಣ ಪ್ರಯೋಗಗಳಲ್ಲಿ, ಮುಸ್ಲಿಮರನ್ನು ಸಂಪ್ರೀತಗೊಳಿಸುವುದರಲ್ಲಿ ಮುಳುಗಿಹೋಗಿದ್ದರು. 1946ರಲ್ಲಿ ಜಿನ್ನಾ ನೀಡಿದ ಕರೆಯ ಮೇಲೆ ಆರಂಭವಾದ ಮುಸ್ಲಿಮರ ಬೀದಿಕಾಳಗ ತುಂಬ ಭಯಾನಕವಾಗಿತ್ತು. 1947ರ ಸ್ವಾತಂತ್ರ್ಯ ಮತ್ತು ದೇಶ ವಿಭಜನೆಗಳ ಪ್ರಕ್ರಿಯೆಗಳು ತುಂಬ ಅಸಂಬದ್ಧವಾಗಿದ್ದವು, ಅವ್ಯವಸ್ಥಿತ ವಾಗಿದ್ದವು. ಯೋಜನೆ – ರೀತಿ – ನೀತಿ ಏನೊಂದೂ ಇರಲಿಲ್ಲ. ಎರಡು ಕೋಟಿಗೂ ಹೆಚ್ಚು ಜನರು ಮನೆ ಮಠ ಬಿಟ್ಟು ನಿರ್ಗತಿಕರಾಗಿ ವಲಸೆ ಹೋಗ ಬೇಕಾಯಿತು. ಲಕ್ಷಾಂತರ ಜನರ ಹತ್ಯೆಯಾಯಿತು, ಹೆಣ್ಣು ಮಕ್ಕಳ ಮಾನಭಂಗವಾಯಿತು.

ಎಡೆ ಅರಾಜಕತೆ ತಾಂಡವ ವಾಡುತ್ತಿತ್ತು. ರಾಜಧಾನಿ ದೆಹಲಿಯಲ್ಲಿಯೇ ನಿರಾಶ್ರಿತರ ಆಕ್ರಂದನವು ದಾರುಣವಾಗಿ ಪ್ರತಿಧ್ವನಿ ಗೊಳ್ಳುತ್ತಿತ್ತು. ದೆಹಲಿಯ ವಿಠ್ಠಲಭಾಯಿ ಪಟೇಲರ ಮನೆಯಲ್ಲಿ ಕಲಾಪ ನಡೆಸುತ್ತಿದ್ದ ಸಂವಿಧಾನ ಸಮಿತಿಯ ಸದಸ್ಯರಿಗೆ ಬಚಾವ್, ಬಚಾವ್ (ಕಾಪಾಡಿ, ಕಾಪಾಡಿ) ಎಂಬ ಮೊರೆ ಕೇಳಿಸುತ್ತಿತ್ತು. ಹಾಗೆಂದು ಅವರು ಅಧಿಕೃತವಾಗಿಯೇ ದಾಖಲಿಸಿದ್ದಾರೆ.

1947ರ ಅಕ್ಟೋಬರ್ ತಿಂಗಳಿನಲ್ಲಿಯೇ ಪಾಕಿಸ್ಥಾನದಿಂದ ಕಾಶ್ಮೀರದ ಮೇಲೆ ಆಕ್ರಮಣ ನಡೆಯಿತು. ಶ್ರೀನಗರಕ್ಕೆ ಪಾಕ್ ಸೈನಿಕರು ನುಗ್ಗಿದ್ದರು. ಹೈದರಾಬಾದಿನ ನಿಜಾಮನು ಅದಾಗಲೇ ವಿಶ್ವಸಂಸ್ಥೆಗೆ (ಸ್ವತಂತ್ರ ದೇಶ ತನ್ನದು ಎಂದು) ಸದಸ್ಯತ್ವಕ್ಕಾಗಿ ಅರ್ಜಿ ಹಾಕಿದ್ದ. ಪರಮನೀಚರಾದ ಬ್ರಿಟಿಷರು ಎಲ್ಲ ರಾಜರಿಗೆ, ನವಾಬರಿಗೆ ಸ್ವಾತಂತ್ರ್ಯ ನೀಡಿ, ದೇಶ ಬಿಟ್ಟುಹೋಗಿದ್ದರು.

ಇದು ತುಂಬ ಭಯಾನಕವಾದ, ವಿಚಿತ್ರವಾದ ಅವಧಿ. 1946ರಿಂದ ಮೂರು ವರ್ಷಗಳ ಅವಧಿಯ ಈ ಕಾಲಘಟ್ಟ ದಲ್ಲಿ
ಯಾರೂ ನಮಗೆ ಹೊಸ ಸಂವಿಧಾನ ಬೇಕು ಎನ್ನುವ ಸ್ಥಿತಿಯಲ್ಲಿರಲಿಲ್ಲ. ಪ್ರಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲರು
ಅಕ್ಟೋಬರು 1949ರಲ್ಲಿ ಅಮೆರಿಕೆಗೆ, ವಿಶ್ವಸಂಸ್ಥೆಗೆ ಭೇಟಿ ನೀಡಿದ್ದರು. ಅಲ್ಲಿ ಅಮೆರಿಕೆಯ ಸಂವಿಧಾನವೇ ಭಾರತದ ಸಂವಿ ಧಾನಕ್ಕೆ ಮಾದರಿ, ಎಂದು ಬುರುಡೆ ಬಿಟ್ಟರು. ಅಮೆರಿಕೆಯ ಸಂಯುಕ್ತ ತತ್ತ್ವವೇ (Federal Structure) ನಮಗೂ ಮಾದರಿ ಎಂದರು.

ತಮಾಷೆಯೆಂದರೆ, ನಮ್ಮ ಸಂವಿಧಾನದ ಸ್ವರೂಪವು ಅಷ್ಟರಲ್ಲಿ ನಿರ್ಧರಿತವಾಗಿಬಿಟ್ಟಿತ್ತು. ಸರ್ವಾಧಿಕಾರಿ ಮನೋಭಾವದ
ಜವಾಹರಲಾಲರಿಗೆ ಬರಿಯ ಹೌದಪ್ಪಗಳು ಮಾತ್ರ ಬೇಕಿತ್ತು. ಚಪ್ಪಾಳೆಯ ಸದ್ದು, ಜಯಘೋಷ ಗಳನ್ನು ಮಾತ್ರ ಅವರು
ಸಹಿಸಿಕೊಳ್ಳುತ್ತಿದ್ದರು. ಭಿನ್ನಮತ, ವಿರೋಧ, ಮುಕ್ತ ಚರ್ಚೆಗಳಿಗೆ ಅವರು ಅವಕಾಶ ಕೊಡುತ್ತಿರಲಿಲ್ಲ. ಇಷ್ಟಿದ್ದೂ ಸಂವಿಧಾನ ಸಭೆಯು ಸಮಾಜವಾದವನ್ನೇನೂ ಬೆಂಬಲಿಸಲಿಲ್ಲ ಎನ್ನುವುದನ್ನು ನಾವು ಮರೆಯಬಾರದು.

ನಮ್ಮದು ಪರಮಾಧಿಕಾರದ ಪ್ರಜಾಪ್ರಭುತ್ವವಾದಿ  ಗಣತಂತ್ರ ಎಂದು ಘೋಷಿಸಲಾಯಿತು. ಅಲ್ಲಿ ಸಂಸದೀಯ ಪ್ರಜಾಪ್ರಭುತ್ವ (Parliamentary Democracy) ಎನ್ನುವ ಪದಗಳು ಮಾಯವಾದವು. ನಮ್ಮ ಸಂವಿಧಾನದ ಇತಿಹಾಸವು ತುಂಬ ರೋಚಕವಾಗಿದೆ, ತುಂಬ ವಿಚಿತ್ರವಾಗಿಯೂ ಇದೆ. ಮಹಾತ್ಮಾ ಗಾಂಧೀಜಿಯವರು ಸ್ವಾತಂತ್ರ್ಯಾನಂತರ ವಿಭಜನೆಯ, ಕೋಮುಸಂಘರ್ಷದ ಪ್ರದೇಶ ಗಳಲ್ಲಿಯೇ ಪ್ರವಾಸ ಮಾಡುತ್ತಿದ್ದರು.

ನಾಲ್ಕೆ ದು ತಿಂಗಳ ಅವಧಿಯಲ್ಲಿ ಅವರ ಪ್ರಾಮುಖ್ಯ, ಬೇಡಿಕೆಗಳು ತುಂಬ ಇಳಿಮುಖವಾಗಿದ್ದವು. ಅವರು ದೆಹಲಿಗೆ ಬಂದಾಗ ತಮ್ಮನ್ನು ಭೇಟಿಯಾದ ಸಂವಿಧಾನ ಸಭೆಯ ಸದಸ್ಯರಲ್ಲಿ, ತಮ್ಮ ಕಳಕಳಿಯ ಸಿದ್ಧಾಂತಗಳಾದ ಖಾದಿ, ಪಂಚಾಯತ್ ರಾಜ್, ಮದ್ಯಪಾನ ನಿಷೇಧ, ಗೋಹತ್ಯೆಯ ನಿಷೇಧಗಳನ್ನೇ ಪ್ರಸ್ತಾಪಿಸಿದರು. ಭೇಟಿಯಾದವರು ಸಹಜವಾಗಿಯೇ ಬೆಪ್ಪಾದರು. ಅವು ಸಂವಿಧಾನದಲ್ಲಿ ಮಹತ್ತ್ವದ ಸ್ಥಾನವನ್ನೇ ಪಡೆದಿರಲಿಲ್ಲ. ಭಾರತೀಯ ಪರಂಪರೆ, ಧರ್ಮಗಳ ವಿರೋಧಿಯಾಗಿದ್ದ ಜವಾಹರ ಲಾಲರು ಈ ಎಲ್ಲ ಸಿದ್ಧಾಂತಗಳನ್ನು ಸಂವಿಧಾನದ ನ್ಯಾಯಿಕವಲ್ಲದ (Directive Principles) ಭಾಗದಲ್ಲಿ, ಸೇರಿಸಿ, ತಿಪ್ಪೆ ಸಾರಿಸಿಬಿಟ್ಟರು. ಏನೋ ಹೋಗಿ ಏನೋ ಆಗಿಬಿಟ್ಟಿತು (ಭಾಷಾಂತರ ಪ್ರಕ್ರಿಯೆ ಅದೆ ಕ್ಲಿಷ್ಟ ಎಂದರೆ, ಈ Directive
Principles ಎಂಬುದನ್ನು ಅಧಿಕೃತ ಕಾನೂನು ಪದಕೋಶದಲ್ಲಿಯೂ ತಪ್ಪಾಗಿ ನಿರ್ದೇಶಕ ತತ್ತ್ವಗಳು ಎಂದು ಅನುವಾದಿಸಿ ಬಿಟ್ಟಿದ್ದಾರೆ.

ಇದು ಸರಿಯಾದ ಅರ್ಥವನ್ನು ಸ್ಪುರಿಸುವುದಿಲ್ಲ. ಕಾನೂನು ರೂಪಿಸುವಾಗ ಅನುಸರಿಸಬೇಕಾದ ಮಾರ್ಗದರ್ಶಕ ಸೂತ್ರಗಳು.
ಆದರೆ, ಕಾನೂನು ರೂಪಿಸದೆ, ಇವುಗಳನ್ನು ಜಾರಿ ಮಾಡಲು ಬರುವುದಿಲ್ಲ ಎಂಬುದಾಗಿಯೇ ಅನುವಾದಿಸಬೇಕಾಗಿತ್ತು).
ಮೂಲತಃ ಸಂವಿಧಾನವು ಸಿದ್ಧವಾದುದು ಇಂಗ್ಲಿಷ್ ಭಾಷೆಯಲ್ಲಿ. ಇಂಗ್ಲೆಂಡಿನಲ್ಲಿ ಓದಿದವರ, ಇಂಗ್ಲಿಷ್ ಭಾಷಾ ಪ್ರೇಮಿಗಳ
ನಾಯಕತ್ವದಲ್ಲಿ ಪರಿಪಾಕಗೊಂಡ ಸಂವಿಧಾನವು ಭಾರತೀಯ ಭಾಷೆಗಳಲ್ಲಿಯೂ ಅನುವಾದವಾಗಬೇಕು, ಲಭ್ಯವಾಗಬೇಕು ಎಂದು ಹಕ್ಕೊತ್ತಾಯ ಬಂದಿತು. ಅದು ಸಹಜವೇ. ಗಾಂಧೀಜಿಯವರಂತೂ, ತಮ್ಮ ಮುಸ್ಲಿಂ ಪ್ರೇಮದ ಅತಿರೇಕದಲ್ಲಿ ಹಿಂದೂ ಸ್ತಾನಿ ಎಂಬ ಭಾಷೆಯನ್ನು ಸಮರ್ಥಿಸಿದರು, ಮುಂತಳ್ಳಿದರು. ಅದು ಉರ್ದು ಭಾಷೆಯನ್ನೇ ಬೇರೆ ಲಿಪಿಯಲ್ಲಿ ತರುವ ಹುನ್ನಾರ ವಾಗಿತ್ತು. ಸ್ವತಃ ಗಾಂಧೀಜಿಯವರ ಶಿಷ್ಯಕೋಟಿ ಸಹ ಅದನ್ನು ಮೆಚ್ಚಲಿಲ್ಲ.

ಪರೋಕ್ಷವಾಗಿ ಹಿಂದೀ ಭಾಷೆಯನ್ನು ಅಮುಕುವ – ದಮನ ಮಾಡುವ, ಅದನ್ನು ಹಿಂದೂಗಳ ಭಾಷೆಯೆಂದು ಬ್ರ್ಯಾಂಡ್
ಮಾಡುವ ಕಾರ್ಯವೂ ನಡೆಯಿತು. ಆದರೂ, ಐವತ್ತರ ದಶಕದಲ್ಲಿ ಸಂವಿಧಾನದ ಭಾಗಶಃ ಹಿಂದೀ ಅನುವಾದ ಹೊರಬಂದಿತು. ಭಿನ್ನಾಭಿಪ್ರಾಯ – ವಿವಾದಗಳ ಸಂದರ್ಭದಲ್ಲಿ ಇಂಗ್ಲಿಷ್ನ ಮೂಲ ಆವೃತ್ತಿಯನ್ನೇ ಅಧಿಕೃತವೆಂದೂ, ಆಧಾರವೆಂದೂ ಪರಿಗಣಿಸ ಬೇಕೆಂದು ಸಹ ಘೋಷಿಸಲಾಯಿತು.

ಎಂಥ ಅನಾಹುತವಾಗಿಬಿಟ್ಟಿದೆಯೆಂದರೆ, ಉದಾಹರಣೆಗೆ ಇಂಗ್ಲಿಷಿನ ರಿಲಿಜನ್’ ಎಂಬ ಪದವು ಹಿಂದಿ ಭಾಷೆಯಲ್ಲಿ ಧರ್ಮ’ ಎಂದು ಅನುವಾದವಾಗಿಬಿಟ್ಟಿದೆ. ಎರಡೂ ಪದಗಳು ವಿಭಿನ್ನ ಹಿನ್ನೆಲೆಯಿಂದ, ವಿಭಿನ್ನ ಅರ್ಥದಲ್ಲಿ ಸೃಷ್ಟಿಯಾದ ಪದಗಳು ಎನ್ನುವುದನ್ನು ಅನುವಾದ ಮಾಡಿದ ವಿದ್ವಾಂಸರು ಗಮನಿಸಲೇ ಇಲ್ಲ. ರಿಲಿಜನ್ ಪದಕ್ಕೆ ಮತ’ ಎಂಬ ಪದವು ಸ್ವಲ್ಪ ಹತ್ತಿರವಾಗುತ್ತದೆ. ಆದರೆ ಧರ್ಮ’ ಪದದ ಅರ್ಥ ಮತ್ತು ಪರಿಕಲ್ಪನೆಗಳೇ ಬೇರೆ. ಭಾರತದ 22 ಭಾಷೆಗಳನ್ನು ಸಂವಿಧಾನದಲ್ಲಿ ಅಧಿಕೃತ ಭಾಷೆಗಳೆಂದು ಘೋಷಿಸಲಾಗಿದೆ.

ಸಂವಿಧಾನವು, ತನ್ನ ಎಲ್ಲ ತಿದ್ದುಪಡಿಗಳ ಸಹಿತ, ಈ ಎಲ್ಲ 22 ಅಧಿಕೃತ ಭಾಷೆಗಳಲ್ಲಿ ಪೂರ್ಣವಾಗಿ ಲಭ್ಯವಾಗಲೇಬೇಕು. ಏಳು ದಶಕಗಳು ಕಳೆದುಹೋದವು. ಈ ಅನುವಾದದ ಅನಿವಾರ್ಯ ಕಾರ್ಯವು ಭಾಗಶಃ ಕೂಡ ಆಗಿಲ್ಲ, ಎನ್ನುವುದು ವಾಸ್ತವ ಮತ್ತು ದುರಂತ. ಎಂಥ ದುರಂತ, ಅಲ್ಲವೇ!?