Saturday, 14th December 2024

ಮಾಂಸಾಹಾರ ಹಾಗೂ ದೇಗುಲ: ಹೀಗೊಂದು ವಿವೇಚನೆ

ಸಕಾಲಿಕ

ನಿತ್ಯಾನಂದ ಹೆಗಡೆ, ಮುರೂರು

ಸಹಜ ಪ್ರಕೃತಿಯಲ್ಲಿಯೇ ಮಾಂಸಾಹಾರಿ ಪ್ರಾಣಿ ಗಳೂ ಇವೆ ಸಸ್ಯಾಹಾರಿ ಪ್ರಾಣಿಗಳೂ ಇವೆ. ಮನುಷ್ಯರಲ್ಲಿಯೂ ಅದು ಹಾಗೇ ಇವೆ. ಅದನ್ನು ತಪ್ಪು ಅಂತ ಹೇಳಲು ಸಾಧ್ಯವಿಲ್ಲ. ಬುದ್ಧಿಯುಳ್ಳ ನಮ್ಮ ವರಲ್ಲಿ ಆಸ್ತೀಕ ನಾಸ್ತಿಕರಿದ್ದಾರೆ. ಅವೆರಡೂ ವಾದಗಳು ಪ್ರಬಲ ವಾಗೇ ಇವೆ. ನಾಸ್ತಿಕರದ್ದು ಒಂದೇ ತತ್ವ ಋಣಂ ಕೃತ್ವಾ ಘೃತಂ ಪಿಬೇತ್ ಭಸ್ಮೀಭೂತಸ್ಯ ದೇಹಸ್ಯ ಪುನರಾ ಗಮನಂ ಕುತಃ ?ಸಾಲಮಾಡಿಯಾದರೂ ತುಪ್ಪತಿಂದು ಬಿಡು ಒಮ್ಮೆ ಭಸ್ಮವಾದಮೇಲೆ ಮತ್ತೆ ಇಲ್ಲಿ ಯಾರೂ ಹುಟ್ಟಲಾರರು.

ಅವರ ವಿಚಾರವನ್ನು ಬಿಟ್ಟು ಈಚೆ ಆಸ್ತೀಕ ಜನರನ್ನು ಯೋಚಿಸುವಾಗ್ವ ಇಲ್ಲಿ ಗೊಂದಲ ಆವೇಶ್ವ ದ್ವಂದ್ವ ಬಡಿದಾಟ ಎಲ್ಲವೂ ಭಕ್ತಿಯ ಪರಾಕಾಷ್ಠತೆ ಯಲ್ಲಿ ಕಂಡು ಬರುತ್ತದೆ.ಈ ಹಿನ್ನೆಲೆಯಲ್ಲಿ ಭಕ್ತನೊಬ್ಬ ಮಾಂಸಾ ಹಾರಿಯೂ ಆಗಿರಬಹುದು ಸಸ್ಯಾಹಾರಿಯೂ ಆಗಿರಬಹುದು. ಅದರಲ್ಲಿ ಜ್ಯೇಷ್ಟ ಕನಿಷ್ಟವಂತ ಯಾರನ್ನೂ ವಿಂಗಡಿಸಲಾಗದು. ಭಕ್ತಿ, ಶ್ರದ್ಧೆ, ಶುದ್ಧಿ ಇವು ಮೂರು ಎಲ್ಲ ರೀತಿಯ ಭಕ್ತರಲ್ಲೂ ಸಮಾನ. ಈಗ ಹುಟ್ಟಿಕೊಂಡ
ಒಂದು ಕಲಸುಮೇಲೋಗರವಾದ ಕೆಸರೆರಚಾಟದ ಭಾಗವಾಗಿ ಮಾಂಸದಿಂದೋ ಮೀನು ತಿಂದೋ ದೇವಸನ್ನಿಧಿಗೆ ಹೋದುದರ ಬಗೆಗೆ.

ಇಲ್ಲಿ ಒಂದು ವಿಚಾರವನ್ನು ಗಮನಿಸಲೇಬೇಕು. ನಾವು ಯಾವನೇ ಭಕ್ತನಾದರೂ ಬೆಳಗಿನ ಸಮಯದಲ್ಲಿ ಸ್ನಾನಾದಿ ಶುದ್ಧ ಕೈಂಕರ್ಯದಲ್ಲಿ ದೇವಾಲಯಗಳಿಗೆ ಹೋಗಿ ಹಣ್ಣುಕಾಯಿ, ನೈವೇದ್ಯಾದಿಗಳನ್ನು ಕೊಟ್ಟು ಇಷ್ಟಕಾಮ ಗಳನ್ನು ಬೇಡಿ ಪ್ರಸಾದ ಸ್ವೀಕರಿಸಿ ಬರುತ್ತೇವೆ. ಅದು ಅಲ್ಲಿಯದೇ ದೇವಳದ ಪ್ರಸಾದ ಭೋಜನವೂ ಇದ್ದೀತು. ಆದರೆ ಆಮೇಲೆ ಮತ್ತೆ ಪೂಜೆಮಾಡಿಸುತ್ತ ಯಾರೂ ಕುಳಿತುಕೊಳ್ಳುವುದಿಲ್ಲ. ಕಾರಣ ಭೋಜನಾನಂತರ ಅಲ್ಲಿ ಮತ್ತೆ ಯಾವದೇ ಕಾರಣಕ್ಕೂ ಪುನಃ ಸ್ನಾನಾದಿಗಳಿಂದ, ಒಮ್ಮೆ ಊಟಮಾಡುವಾಗ ಬಳಸಿದ ಬಟ್ಟೆ, ಅದು ಮಡಿಯೇ ಆಗಿದ್ದರೆ ಅದನ್ನೂ ತೊಳೆದು ಶುದ್ಧಿ ಮಾಡಿಕೊಳ್ಳದೇ ಅರ್ಚಿಸುವ ವಾಡಿಕೆಯಿಲ್ಲ. ಅದೊಂದು ತರಹದ ನಿಯಮಾ ತೀತ ಸಂಹಿತೆ.

ನಾವೇ ಆದರೂ ಊಟದ ಅನಂತರ ಪುನಃ ಶುದ್ಧರಾಗದೆ ಗರ್ಭಗುಡಿ ಪ್ರವೇಶಿಸುವುದಿಲ್ಲವೇ ಇಲ್ಲ. ಇಲ್ಲಿ ಪ್ರಶ್ನೆ ಎದ್ದಿದ್ದು ಮೀನು ತಿಂದು ಅಥವಾ ಮಾಂಸ
ತಿಂದು ದೇವಳಕ್ಕೆ ಹೋಗಬಹುದೇ? ಅಂಬುದು. ಅದು ಹಾಗಲ್ಲ ಯಾವನೇ ಸಸ್ಯಾಹಾರಿ ಇರಲಿ, ಮಾಂಸಾಹಾರಿ ಇರಲಿ ನಾವು ಹೆಚ್ಚಿನ ಸಂದರ್ಭದಲ್ಲಿ ಬೆಳಗಿನ ಅಲ್ಪೋಪಹಾರದ ಅನಂತರ ಸ್ನಾನಶುದ್ಧಿ, ಮನೋಶುದ್ಧಿ, ಅಂತರಂಗ ಬಹಿರಂಗ ಶುದ್ಧರಾಗಿ, ಯಾವ ಮನೋವಿಕಲ್ಪವಿಲ್ಲದೆ, ಯಾವ ಗರ್ವ ಅಹಂಕಾರಗಳಿಲ್ಲದೆ (ಇಲ್ಲಿ ಯಾವ ಜಾತಿ ಅಂಬ ಪ್ರಶ್ನೆಯೇ ಇಲ್ಲದೆ) ದೇವಸನ್ನಿಧಿ ಪ್ರವೇಶಿಸಿರುತ್ತೇವೆ.

ಅಲ್ಲಿ ಅಲ್ಲಿನ ವಸ್ತ್ರ ಸಂಹಿತೆಯೋ, ಅಲ್ಲಿನ ನಿಯಮಗಳೋ ಇದ್ದುದನ್ನು ಚಾಚೂ ತಪ್ಪದೆ ಅನುಸರಿಸುವುದು ವಾಡಿಕೆ. ಈಗ ವಿಷಯಕ್ಕೆ ಬರೋಣ. ಒಬ್ಬ ಮಾಂಸಾಹಾರ ಮಾಡಿ ಅದೇ ಕೈತೊಳೆದು ಒರೆಸಿಕೊಳ್ಳುತ್ತ ತೇಗುತ್ತ ದೇವಾಲಯಕ್ಕೆ ಹೋಗುವುದಾಗಲಿ, ಒಬ್ಬ ಚೆನ್ನಾಗಿ ಅನ್ನ ಪರಮಾನ್ನ ಪಾಯಸವನ್ನು ಉಂಡಾಗಲೀ ನೇರ ದೇವಳಕ್ಕೆ ಹೋಗುವುದು ನಮ್ಮಲ್ಲಿ ಸರಿಯಲ್ಲವೆಂಬ ಕಲ್ಪನೆಗಳಿವೆ. ಇನ್ನೂ ಒಂದು ವಿಷಯವೆಂದರೆ ನಿನ್ನೆ ರಾತ್ರಿ ಊಟಮಾಡಿ ಇಂದು ಬೆಳಗ್ಗೆ ಅವೆಲ್ಲ ಜೀರ್ಣಗೊಂಡು ಬಹಿರ್ದೆಸೆ ಆದಮೇಲೆ ಆಗ ದೇಹವನ್ನು ಸ್ನಾನಾದಿಗಳಿಂದ ಶುದ್ಧಿ ಪಡೆದಮೇಲೆ ಶುಚಿರ್ಭೂತರಾಗಿ
ದೇವಸನ್ನಿಧಿಗೆ ಅವ ಯಾವ ಆಹಾರಿ ಆಗಿದ್ದರೂ ಹೋದರೆ ಅನ್ನಿಸುವ ಮನೋಶುದ್ಧತೆ ಅಮೇಲೆ ಹೇಗೂ ದೊರಕಲಾರದು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನೇ ಇರಬಹುದು, ಸಿ ಟಿ ರವಿಯಿರಬಹುದು, ಇವರೀರ್ವರ ನಡೆ ಸಾರ್ವಜನಿಕವಾಗಿ ಕೆಸರೆರಚಾಟಕ್ಕೆ ವೇದಿಕೆಯಾದುದು ಹಾಸ್ಯಾಸ್ಪದ.

ದೇವರಿಗೆ ಮಡಿ ಮೈಲಿಗೆ ಯಾವುದೂ ಇಲ್ಲ. ಅವ ನಿರ್ಗುಣ ನಿರಾಕಾರ. ಅವನಲ್ಲಿಗೆ ಹೋಗುವ ನಾವು ನಮ್ಮ ಮನಸ್ಸಮಾಧಾನಕ್ಕಾಗಿ ಅನುಸರಿಸುವ ಎಲ್ಲ ವಿಷಯಗಳು ಸಂವಿಧಾನದ ನಿಯಮಗಳಂತಲ್ಲ.ಅವು ಬರೇ ವಾಡಿಕೆಯ, ರೂಢಿಗತ ನಿಯಮಗಳು. ಇವನ್ನು ಮೀರಿದರೆ ಏನಾಗುತ್ತದೆ ಅಂಬ ವಿಷಯವೇ ಅಪ್ರಸ್ತುತ. ಇಂತಹ ಸಣ್ಣ ಸಣ್ಣ ಕಲ್ಪನೆಗಳನ್ನು ಭಯಂಕರ ದೊಡ್ಡ ವಿಷಯವೆಂದು ಚರ್ಚಿಸುವುದೂ ಕೆಲಸವಿಲ್ಲದವನ ಕೆಲಸ. ಅಲ್ಲಿಗೂ ಈ ಶುದ್ಧಿಯ ಕಲ್ಪನೆ ಧರ್ಮಾತೀತವಾದುದು.

ಅವನೊಬ್ಬ ಮುಸ್ಲಿಮನಿರಲಿ, ಕ್ರಿಶ್ಚಿಯನ್ನನಾಗಿರಲಿ, ಸಿಖ್‌ನಾಗಿರಲಿ ಬೆಳಗಿನ ಸಮಯ ಸ್ನಾನಾದಿಗಳಿಂದ ಶುದ್ಧನಾಗಿಯೇ ತಮ್ಮ ತಮ್ಮ ದೇವರನ್ನು ಭಜಿಸುವ, ಕಾಣುವ, ವಂದಿಸುವ ಪರಿ ಯಾವ ನಿಯಮ, ಯಾವ ಕಾನೂನಿನಲ್ಲೂ ಹೇಳಿಲ್ಲದ ಕಠಿಣವಾದ ನಿಯಮ.

Read E-Paper click here