ನೂರೆಂಟು ವಿಶ್ವ
ನಿದ್ದೆ ಬೇಕಾ, ಬೇಡವಾ ಎಂಬ ವಾದದ ಕುರಿತು ಜನಮತಗಣನೆ ಏರ್ಪಡಿಸಿದರೆ ಏನಾಗಬಹುದು? ನೂರಕ್ಕೆ ತೊಂಬತ್ತೊಂಬತ್ತಕ್ಕಿಂತ ಹೆಚ್ಚು ಮಂದಿ ನಿದ್ದೆಯ ಪರವಾಗಿ ಮತ ಹಾಕುವುದರಲ್ಲಿ ಸಂದೇಹವಿಲ್ಲ. ಮನುಷ್ಯನ ದೇಹಕ್ಕೆ ನಿದ್ದೆ ಅಗತ್ಯ ಇಲ್ಲ ಅಂದರೂ ಅದನ್ನು ಯಾರೂ ನಂಬುವುದಿಲ್ಲ ಮತ್ತು ಅದಕ್ಕಿಂತ ಮುಖ್ಯವಾಗಿ ಯಾರೂ ಪರೀಕ್ಷಿಸಲು ಹೋಗುವುದಿಲ್ಲ.
ಕನ್ನಡದ ಎರಡು ಪ್ರಮುಖ ದಿನಪತ್ರಿಕೆಗಳಿಗೆ ಸಂಪಾದಕರಾಗಿದ್ದ ದಿವಂಗತ ವೈಯೆನ್ಕೆ ಅವರು ನಿದ್ದೆಯ ವಿಷಯ ಬಂದಾಗ, ‘ಮನುಷ್ಯನಿಗೆ ನಿದ್ದೆಯ ಅಗತ್ಯವಿಲ್ಲ’ ಎಂಬ ಭಯಾನಕ ಹೇಳಿಕೆ ನೀಡಿ ನಿದ್ದೆಗೆಡಿಸುತ್ತಿದ್ದರು. ಒಂದು ದಿನ ನಾನು ಅವರಿಗೆ, ‘ಸರ್, ನೀವು ಪದೇ ಪದೆ ಈ ಹೇಳಿಕೆ ನೀಡುವುದನ್ನು ಕೇಳಿದ್ದೇನೆ. ಇದೇನು ತಮಾಷೆಗೆ ಹೇಳಿದ್ದಾ? ಅಥವಾ…?’ ಎಂದು ಕೇಳಿದ್ದೆ. ಅದಕ್ಕೆ ಅವರು, “I am very serious.. ಮನುಷ್ಯನಿಗೆ ನಿದ್ದೆಯ ಅಗತ್ಯವಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿದ್ದರು.
ನಂತರ ಅವರೇ ವಿವರಿಸಿದ್ದರು- ‘ಇದು ನನ್ನ ಸಂಶೋಧನೆ ಅಲ್ಲ. ಅಮೆರಿಕದ ವಿಶ್ವವಿದ್ಯಾಲಯಗಳ ಸಂಶೋಧನೆಗಳು ಮನುಷ್ಯನಿಗೆ ನಿದ್ದೆಯ ಅಗತ್ಯವಿಲ್ಲ ಎಂಬುದನ್ನು ಸಾಬೀತು ಪಡಿಸಿವೆ. ಮನುಷ್ಯ ಹುಟ್ಟಿದಾಗ, ತಾಯಿ ವಿಪರೀತ ದಣಿದಿರುತ್ತಾಳೆ. ಒಂಬತ್ತು ತಿಂಗಳು ತಾಯಿಯ ಗರ್ಭದಲ್ಲಿದ್ದ ಮಗು, ಹೊಸ ಲೋಕಕ್ಕೆ ಬಂದಾಗ, ಹೊಂದಿಕೊಳ್ಳಲು ಕೆಲ ದಿನಗಳು ಬೇಕು. ಆಗ ಮಗು ಸಹಜವಾಗಿ ಅಳುತ್ತದೆ. ಹುಟ್ಟಿದ ಮಗುವಿನ ಏಕೈಕ ಭಾಷೆ ಅಂದ್ರೆ ಅಳುವೊಂದೇ.
ಹೀಗಾಗಿ ಮಗು ಆಗಾಗ ಅಳುತ್ತಿರುತ್ತದೆ. ಇದು ತಾಯಿಗೆ ಮತ್ತು ಸುತ್ತಲಿನವರಿಗೆ ಕಿರಿಕಿರಿಯಾಗುವುದರಿಂದ, ಮಗು ವನ್ನು ಹೇಗಾದರೂ ಮಾಡಿ ಮಲಗಿಸುತ್ತಾರೆ. ಹುಟ್ಟಿದ ಮಗು ಮಲಗಿದರೆ, ನಿಜವಾಗಿ ವಿಶ್ರಾಂತಿ ಪಡೆಯುವವಳು ತಾಯಿ. ಶತಮಾನಗಳಿಂದ ಮಕ್ಕಳಿಗೆ gripe water (ಅತಿ ಕಡಿಮೆ ಪ್ರಮಾಣದಲ್ಲಿ ಮತ್ತು ಬರಿಸುವ ಗಿಡಮೂಲಿಕೆಗಳಿಂದ ತಯಾರಿಸಿದ ದ್ರವ್ಯ) ಕುಡಿಸುವ ಉದ್ದೇಶ ಬೇಗ ಮಲಗಲಿ ಎಂಬುದಾಗಿದೆ’ ಎಂದು ಹೇಳಿದ್ದರು.
ನಾನು ಯಾವ ಪ್ರತಿಕ್ರಿಯೆಯನ್ನೂ ನೀಡದೆ ಅವರ ಮಾತುಗಳನ್ನು ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದೆ. ‘ಹುಟ್ಟಿದ ಮೊದಲ ದಿನವೇ ಮಗುವಿಗೆ (ಬಲವಂತವಾಗಿ)
ನಿದ್ದೆ ಮಾಡುವುದನ್ನು ರೂಢಿ ಮಾಡುತ್ತೇವೆ. ನಾವು ಸಹ ಮೊದಲ ದಿನದಿಂದಲೇ ನಿದ್ದೆ ಮಾಡುವುದನ್ನು ರೂಢಿಸಿ ಕೊಂಡಿರುವುದರಿಂದ, ನಮ್ಮ ನಿದ್ದೆಗೆ ಭಂಗ ಬರದಿರಲೆಂದು ಮಗುವನ್ನೂ ಮಲಗಿಸಿ ನಿದ್ದೆ ರೂಢಿ ಮಾಡಿಸುತ್ತೇವೆ. ತಾಯಿಗೆ ನಿದ್ದೆ ಮಾಡಬೇಕು ಎನಿಸಿದಾಗ ಅದಕ್ಕಿಂತ ಮೊದಲು ಮಗುವನ್ನು ಮಲಗಿಸು ತ್ತಾಳೆ.
ಒಂದು ವಾರ, ಹದಿನೈದು ದಿನ, ಒಂದು ತಿಂಗಳಾಗುತ್ತಿದ್ದಂತೆ, ಮಗು ಸಹ ನಿದ್ರಿಸುವುದನ್ನು ರೂಢಿಸಿಕೊಳ್ಳುತ್ತದೆ. ಹಾಗೆ ನೋಡಿದರೆ, ಮಗುವಿಗಾಗಲಿ, ಮನುಷ್ಯ ರಿಗಾಗಲಿ ನಿದ್ದೆಯ ಅಗತ್ಯವಿಲ್ಲ. ದಣಿದ ದೇಹಕ್ಕೆ ಬೇಕಿರುವುದು ವಿಶ್ರಾಂತಿಯೇ ಹೊರತು, ನಿದ್ದೆ ಯಲ್ಲ’ ಎಂದು ಹೇಳಿ ನನ್ನ ನಿದ್ದೆಗೂಡಿನ ಮೇಲೆ ಬಾಂಬ್ ಹಾಕಿದ್ದರು. ‘ಈ ಬಗ್ಗೆ ಅನೇಕ ಪ್ರಯೋಗಗಳಾಗಿವೆ. ಹುಟ್ಟಿದ ಮಗುವನ್ನು ತಿಂಗಳುಗಟ್ಟಲೆ ಮಲಗಿಸದೇ, ಅದನ್ನೇ ರೂಢಿ ಮಾಡಿಸಿ, ನಿದ್ದೆಯ ಅಗತ್ಯವಿಲ್ಲವೆಂದು ಸಂಶೋಧನೆ ಮಾಡಿ ದ್ದಾರೆ. ಇಂದಿಗೂ ಹಿಮಾಲಯದಲ್ಲಿ ನಿದ್ದೆ ಮಾಡದೇ ತಪಸ್ಸು ಮಾಡುವ ಯೋಗಿಗಳಿದ್ದಾರೆ. ಒಂದೆರಡು ಗಂಟೆ ವಿಶ್ರಾಂತಿ ಪಡೆಯುವ ಸಾಧಕರಿದ್ದಾರೆ. ಇದನ್ನು ಈಗಿನ ವೈದ್ಯರು ನಿದ್ರಾಹೀನತೆ ಎಂದು ಕರೆದು ಗಾಬರಿ ಹುಟ್ಟಿಸುತ್ತಾರೆ.
ನಮ್ಮ ದೇಹ ನಾವು ರೂಢಿಸಿಕೊಂಡಂತೆ ಒಗ್ಗಿಕೊಳ್ಳುತ್ತದೆ. ಅಭ್ಯಾಸಬಲದಿಂದ ಅದನ್ನು ಹೇಗೆ ಬೇಕಾದರೂ ರೂಢಿಸಿಕೊಳ್ಳಬಹುದು’ ಎಂದು ವೈಯೆನ್ಕೆ ವಿವರಿಸಿದ್ದರು. ಒಮ್ಮೆ ಇದೇ ವಿಷಯವನ್ನು ಯೋಗಿ ದುರ್ಲಭಜೀ ಸಹ ಹೇಳಿ, ನನ್ನಲ್ಲಿ ಮತ್ತಷ್ಟು ಕುತೂಹಲವನ್ನುಂಟುಮಾಡಿದ್ದರು. ‘ಮನುಷ್ಯನಿಗೆ ನಿದ್ದೆ ಅಗತ್ಯವಿಲ್ಲ. ನಿದ್ದೆಯಿಲ್ಲದೇ ಮೂರು ದಿನ ಕಳೆಯಿರಿ, ನಾಲ್ಕನೇ ದಿನ ನಿಮಗೆ ನಿದ್ದೆ ಬೇಡ ಎಂದೇ ಅನಿಸುತ್ತದೆ. ತಮಾಷೆ ಅಂದ್ರೆ, ಯಾರೂ ಈ ಪ್ರಯೋಗವನ್ನು
ಮಾಡುವುದಿಲ್ಲ. ಒಂದು ದಿನ ನಿದ್ದೆ ಮಾಡದಿದ್ದರೆ ಚಡಪಡಿಸುತ್ತಾರೆ. ಎರಡನೇ ದಿನ ಈ ಪ್ರಯೋಗ ಮಾಡುವುದೇ ಇಲ್ಲ. ದಿನದಲ್ಲಿ ಒಂದೆರಡು ಗಂಟೆ ದಣಿವು
ಆರಿಸಿಕೊಳ್ಳಲು ವಿಶ್ರಾಂತಿ ತೆಗೆದುಕೊಳ್ಳಿ, ಏನೂ ಮಾಡದೇ ಆರಾಮವಾಗಿರಿ. ನಿದ್ದೆಯನ್ನೇ ಮಾಡಬೇಕು ಎಂದಿಲ್ಲ’ ಎಂದು ಅವರೂ ತಿದಿಯೂದಿದ್ದರು.
‘ಹಾಗಾದರೆ ಕುಂಭಕರ್ಣ ನಿರಂತರ ಆರು ತಿಂಗಳು ಮಲಗುತ್ತಿದ್ದ ಅಂತಾರಲ್ಲ, ಅದು ಹೇಗೆ ಸಾಧ್ಯ?’ ಎಂದು ಕೇಳಿದಾಗ ಅವರು ತುಸು ವಿವರವಾಗಿ, ‘ನೋಡಿ ಇದು ಮೂಲತಃ ಪುರಾಣದ ಕತೆ. ನಾನು ಅದನ್ನೂ ತಿರಸ್ಕರಿಸುವುದಿಲ್ಲ. ನಿಮಗೆ ಗೊತ್ತಲ್ಲ, ರಾವಣನ ಕಿರಿಯ ಸಹೋದರನಾದ ಕುಂಭಕರ್ಣ ಮಹಾ ಪರಾಕ್ರಮಿ. ಇಂದ್ರ ಮತ್ತು ಯಮನ ಸದ್ದಡಗಿಸಿದ್ದ. ಇಂದ್ರನ ಮನವಿ ಮೇರೆಗೆ ಬ್ರಹ್ಮ, ಕುಂಭಕರ್ಣನಿಗೆ ‘ನೀವು ರಾಕ್ಷಸರೆಲ್ಲ ಆರು ತಿಂಗಳು ನಿದ್ದೆ ಮಾಡಿ’ ಎಂದು ಶಾಪ ಕೊಟ್ಟ. ಕುಂಭಕರ್ಣ ತನ್ನ ಸಹೋದರರಾದ ರಾವಣ ಮತ್ತು ವಿಭೀಷಣನ ನೆರವಿನಿಂದ ಮಹಾಯಜ್ಞವನ್ನು ಕೈಗೊಂಡು ಬ್ರಹ್ಮನನ್ನು ಸಂಪ್ರೀತಗೊಳಿಸುತ್ತಾನೆ. ಇನ್ನೇನು ಬ್ರಹ್ಮ ವರ ಕೊಡುವ ಹೊತ್ತಿಗೆ, ಸರಸ್ವತಿ ಕುಂಭಕರ್ಣನ ನಾಲಗೆಯನ್ನು ತಿರುಚುವಂತೆ ಮಾಡುತ್ತಾಳೆ.
‘ನನಗೆ ಇಂದ್ರಾಸನ (ಇಂದ್ರನ ಸಿಂಹಾಸನ) ಬೇಕು’ ಎನ್ನುವ ಹೊತ್ತಿಗೆ ಆತನ ನಾಲಗೆ ತಿರುಚಿ, ‘ನಿದ್ರಾಸನ’ ಎಂದು ಹೇಳಿಬಿಡುತ್ತಾನೆ. ಇನ್ನೊಮ್ಮೆ ಆತ ನನಗೆ
ನಿರ್ದೇವತ್ವ (ದೇವತೆಗಳ ಸಂಹಾರ) ಶಕ್ತಿ ನೀಡು ಎಂದು ಹೇಳುವ ಬದಲು ನಾಲಗೆ ತಿರುಚಿ ‘ನಿದ್ರಾವತ್ವ ನೀಡು’ ಎಂದುಬಿಡುತ್ತಾನೆ. ಆತನ ಪ್ರಾರ್ಥನೆಗೆ ಬ್ರಹ್ಮ ತಕ್ಷಣ ತಥಾಸ್ತು ಎಂದುಬಿಡುತ್ತಾನೆ. ಆಗ ರಾವಣನಿಗೆ ಕುಂಭಕರ್ಣ ಮಾಡಿದ ತಪ್ಪಿನ ಅರಿವಾಗಿ, ಬ್ರಹ್ಮನ ಮೊರೆಹೋಗುತ್ತಾನೆ. ಕುಂಭಕರ್ಣನ ನಿದ್ದೆಯ ಅವಽಯನ್ನು ಆರು ತಿಂಗಳಿಗೆ ಕಡಿತಗೊಳಿಸುತ್ತಾನೆ’ ಎಂದು ಯೋಗಿಜೀ ಬಣ್ಣಿಸಿದ್ದರು.
ಮನುಷ್ಯನಿಗೆ ನಿದ್ದೆ ಅವಶ್ಯ ಅಲ್ಲ, ಅನಿವಾರ್ಯವೂ ಅಲ್ಲ ಎಂದು ಹೇಳುವಾಗ ದುರ್ಲಭಜೀ, ಲಕ್ಷ್ಮಣನ ಕತೆಯನ್ನು ಹೇಳಿದ್ದರು. ‘ನಿಮಗೆ ಗೊತ್ತಿರಲಿ, ಶ್ರೀರಾಮನ ಸಹೋದರ ಲಕ್ಷ್ಮಣನಿಗೆ ವುಡಾಕೇಶಿ ಎಂದೂ ಕರೆಯುತ್ತಾರೆ. ವುಡಾಕೇಶಿ ಅಂದ್ರೆ ನಿದ್ದೆಯನ್ನು ಜಯಿಸಿದವನು ಎಂದರ್ಥ. ಪಿತೃವಾಕ್ಯ ಪರಿಪಾಲನೆಗಾಗಿ ರಾಮನೊಂದಿಗೆ ಲಕ್ಷ್ಮಣ ಕಾಡಿಗೆ ಹೋದಾಗ, ರಾತ್ರಿ ಹೊತ್ತು ಅಣ್ಣ ಮತ್ತು ಅತ್ತಿಗೆಯ ಕಾವಲು ಕಾಯುತ್ತಾ ನಿದ್ದೆ ಮಾಡದೇ ರಾತ್ರಿಯಿಡೀ ಎಚ್ಚರವಾಗಿ ಇರು ತ್ತಿದ್ದ. ಈ ರೀತಿ ಲಕ್ಷ್ಮಣ ಹದಿನಾಲ್ಕು ವರ್ಷಗಳ ಕಾಲ ನಿದ್ದೆ ಮಾಡದೇ ಇದ್ದ. ಮೊದಲ ಮೂರ್ನಾಲ್ಕು ದಿನ ಆತನಿಗೆ ಕಷ್ಟವಾಯಿತು. ನಂತರ ಆತನಿಗೆ ಅದೇ ರೂಢಿ ಯಾಯಿತು.
ಆತ ನಿದ್ದೆಯನ್ನು ಜಯಿಸಿದ. ನಿದ್ದೆಯನ್ನು ಜಯಿಸಿದವನಿಂದಲೇ ತನ್ನ ಮಗ ಇಂದ್ರಜಿತನಿಗೆ ಸಾವು ಬರುವುದೆಂದು ರಾವಣನಿಗೆ ಗೊತ್ತಿತ್ತು. ಕೊನೆಗೆ ಆತ
ಲಕ್ಷ್ಮಣನಿಂದ ಹತನಾದ. ಈ ರೀತಿ ನಿದ್ದೆಯನ್ನು ಜಯಿಸಿದವರಿದ್ದಾರೆ’ ಎಂದು ದುರ್ಲಭಜೀ ಹೇಳಿದ್ದರು. ಕನಕದಾಸರು ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ,
ಗೇಣು ಬಟ್ಟೆಗಾಗಿ’ ಎಂದು ಹೇಳಿದ್ದಾರೆಯೇ ಹೊರತು, ಇದರ ಜತೆಗೆ , ‘ಸ್ವಲ್ಪ ನಿದ್ದೆಗಾಗಿ’ ಎಂದು ಸೇರಿಸದಿರುವುದು ನಿದ್ದೆ ಅನಿವಾರ್ಯವಲ್ಲ ಎಂಬ ವಾದಕ್ಕೆ ಪುಷ್ಟಿ ನೀಡುತ್ತದೆ ಎಂದೂ ದುರ್ಲಭಜೀ ಹೇಳಿದ್ದರು.
ಇದು ನಿದ್ರಾಪ್ರಿಯರಿಗೆ ಆಘಾತ ತರುವ ವಿಷಯವೇ. ಒಂದು ವೇಳೆ ಈ ಮಾತುಗಳನ್ನು ನಂಬಿ, ಪ್ರಧಾನಿ ಮೋದಿಯವರೋ, ಅಮೆರಿಕ ಅಧ್ಯಕ್ಷರೋ, ಹೆಚ್ಚು ಕೆಲಸ
ಮಾಡಿ ಎನ್ನುವ ನಾರಾಯಣಮೂರ್ತಿಯವರೋ, ‘ಮನುಷ್ಯನಿಗೆ ನಿದ್ದೆಯ ಅಗತ್ಯವಿಲ್ಲ’ ಎಂಬ ಹೇಳಿಕೆ ಕೊಟ್ಟರೆ ಏನಾಗಬಹುದು? ಸ್ವಲ್ಪ ಯೋಚಿಸಿ. ಅಲ್ಲೋಲ-ಕಲ್ಲೋಲ ಆಗಿಬಿಡಬಹುದು. ಆದರೆ ನಿದ್ದೆಯ ಪರವಾಗಿ ಇಷ್ಟೇ ಬಲವಾದ ವಾದಗಳೂ ಇವೆ. ‘ನಿದ್ದೆ ಇಲ್ಲದವರು ಹದ್ದಿಗಿಂತ ಕಡೆ’ ಎಂದು ವಾದಿಸುವವರಿದ್ದಾರೆ. ಪ್ರತಿಯೊಬ್ಬರೂ ಆರೋಗ್ಯದಿಂದಿರ ಬೇಕಾದರೆ ನಿದ್ದೆ ಅತ್ಯಗತ್ಯ. ‘ನಿದ್ದೆಗೆಟ್ಟು ಬುದ್ಧಿಗೆಟ್ಟು’ ಎಂಬ ಗಾದೆಯೇ ಇದೆ.
ಆದರೆ ಕೆಲಸದ ಒತ್ತಡದಿಂದಾಗಿ ಅನೇಕರು ಸಾಕಷ್ಟು ನಿದ್ದೆ ಮಾಡುವುದಿಲ್ಲ. ಮಲಗುವುದರಿಂದ ನಾವು ಏನನ್ನೂ ಕಳೆದುಕೊಳ್ಳುವುದಿಲ್ಲ. ಸರಿಯಾಗಿ ನಿದ್ದೆ
ಮಾಡುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ರಾತ್ರಿಯಲ್ಲಿ ನಿರ್ದಿಷ್ಟ ಪ್ರಮಾಣದ ನಿದ್ದೆ ಮಾಡುವುದು ಒಳ್ಳೆಯದು. ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅನೇಕ ವಿಜ್ಞಾನಿಗಳು, ವಿದೇಶಿ ವೈದ್ಯರು ಸಹ ಈ ಮಾತನ್ನು ಪುರಸ್ಕರಿಸಿದ್ದಾರೆ. ಇಡೀ ದಿನ ಕೆಲಸ ಮಾಡಿದ ನಂತರ ನಮ್ಮ
ಮಿದುಳಿನ ಜೀವಕೋಶಗಳು ದಣಿದಿರುತ್ತವೆ. ಈ ಆಯಾಸವನ್ನು ಹೋಗಲಾಡಿಸಲು ಕನಿಷ್ಠ ಏಳು ಗಂಟೆಗಳ ನಿದ್ದೆ ಬಹಳ ಮುಖ್ಯ. ಸರಿಯಾಗಿ ನಿದ್ದೆ ಮಾಡುವುದರಿಂದ ನಮ್ಮ ನೆನಪಿನ ಶಕ್ತಿ ಸುಧಾರಿಸುತ್ತದೆ. ಮಿದುಳಿಗೆ ಏನನ್ನಾದರೂ ನೆನಪಿಟ್ಟುಕೊಳ್ಳಲು ಮೂರು ಹಂತಗಳಿವೆ. ಮೊದಲ ಹಂತದಲ್ಲಿ ಮಿದುಳು ಮಾಹಿತಿ ಪಡೆಯುತ್ತದೆ,
ಎರಡನೇ ಹಂತದಲ್ಲಿ ಸ್ವೀಕರಿಸಿದ ಮಾಹಿತಿಯನ್ನು ಕಾಪಿಟ್ಟುಕೊಳ್ಳುತ್ತದೆ ಮತ್ತು ಮೂರನೇ ಹಂತದಲ್ಲಿ ಅಗತ್ಯವಿದ್ದಾಗ ಪಡೆಯಲು ಸಹಾಯ ಮಾಡುತ್ತದೆ. ಇದಕ್ಕೆ
ಮಿದುಳಿಗೆ ನಿದ್ರೆ ಬಹಳ ಮುಖ್ಯ. ಪ್ರತಿದಿನ ಕನಿಷ್ಠ ೭ ಗಂಟೆಗಳ ನಿದ್ದೆ ಅಗತ್ಯ ಎಂದು ವೈದ್ಯರು ಹೇಳುತ್ತಾರೆ. ನಿದ್ದೆ ಬೇಕಾ, ಬೇಡವಾ ಎಂಬ ವಾದದ ಕುರಿತು
ಜನಮತಗಣನೆ ಏರ್ಪಡಿಸಿದರೆ ಏನಾಗಬಹುದು? ನೂರಕ್ಕೆ ತೊಂಬತ್ತೊಂಬತ್ತಕ್ಕಿಂತ ಹೆಚ್ಚು ಮಂದಿ ನಿದ್ದೆಯ ಪರವಾಗಿ ಮತ ಹಾಕುವುದರಲ್ಲಿ ಸಂದೇಹವಿಲ್ಲ. ಮನುಷ್ಯನ ದೇಹಕ್ಕೆ ನಿದ್ದೆ ಅಗತ್ಯ ಇಲ್ಲ ಅಂದರೂ ಅದನ್ನು ಯಾರೂ ನಂಬುವುದಿಲ್ಲ ಮತ್ತು ಅದಕ್ಕಿಂತ ಮುಖ್ಯವಾಗಿ ಯಾರೂ ಪರೀಕ್ಷಿಸಲು ಹೋಗುವುದಿಲ್ಲ. ಪರೀಕ್ಷಿಸಬೇಕೆಂದರೆ ನಿದ್ದೆ ಬಿಡಲೇಬೇಕು ತಾನೇ? ಆ ಉಸಾಬರಿ ಏಕೆ? ನಿದ್ದೆ ಮಾಡದಿರುವುದನ್ನು ರೂಢಿಸಿಕೊಂಡರೆ, ದಿನದಲ್ಲಿ ಆರು ಗಂಟೆ ಹೆಚ್ಚು ಸಿಗುತ್ತದೆ ಎಂಬುದು ಭರ್ಜರಿ ಸುದ್ದಿಯೇ. ಆದರೆ, ಹಾಗೆ ಗಳಿಸಿಕೊಂಡ ಆ ಆರು ಗಂಟೆ ಏನು ಮಾಡೋದು? ನಿದ್ದೆ!
ಈಗ ಎಲ್ಲರೂ ಮಾಡುತ್ತಿರುವುದೂ ಅದನ್ನೇ. ಅದೇನೇ ಇರಲಿ, ನಿದ್ದೆಯಂಥ ನೆಮ್ಮದಿಯ ತಾಣ ಮತ್ತೊಂದಿಲ್ಲ. ಅದು ಬಂದಿದ್ದು, ಇದ್ದಿದ್ದು ಗೊತ್ತಾಗುವುದಿಲ್ಲ. ಇನ್ನೂ ಸ್ವಲ್ಪ ಹೊತ್ತು ಇರಬಾರದಿತ್ತೇ ಎಂದು ಅದು ಪ್ರತಿಸಲ ಹೋಗುವಾಗಲೂ ಅನಿಸುವಂತೆ ಮಾಡುವುದಂತೂ ಸತ್ಯ. ನಾನಂತೂ ನನ್ನ ಕಂಪ್ಯೂಟರ್ ಸ್ಕ್ರೀನ್ ಸೇವರ್ ಮೇಲೆ ‘ನಿದ್ದೆಯೇ ವಿದ್ಯೆಗೆ ಮೂಲವಯ್ಯ’ ಎಂಬ ಘೋಷವಾಕ್ಯ ಬರೆದುಕೊಂಡಿದ್ದೇನೆ. ಎಂಟು ನಿಮಿಷ ಕಂಪ್ಯೂಟರ್ ಸ್ಕ್ರೀನ್ ತಟಸ್ಥವಾದರೆ ಆ ವಾಕ್ಯ ಎದ್ದುಬರುತ್ತದೆ. ಪ್ರತಿಸಲ ಆ ವಾಕ್ಯವನ್ನು ನೋಡಿ, ‘ನಿದ್ದೆಯಿಲ್ಲದವನು ಹದ್ದಿಗಿಂತ ಕಡೆ’ ಎಂದು ಗೊಣಗಿ ನಿದ್ದೆ ಹೋಗುತ್ತೇನೆ. ನಿದ್ದೆ ಮಾಡುವಷ್ಟು ಹೊತ್ತು ಈ ಜಗದ ಪರಿವೆಯೇ ಇಲ್ಲ, ನಾನ್ಯಾರೋ? ನೀವ್ಯಾರೋ?