Friday, 20th September 2024

ಇದು ಪಶ್ಚಾತ್ತಾಪವೋ, ಪ್ರತಿಭಟನೆಯೋ ಗೊತ್ತಿಲ್ಲ

ಇದೇ ಅಂತರಂಗ ಸುದ್ದಿ

vbhat@me.com

ನಿಜಕ್ಕೂ ಕಳೆದ ಐದು ದಿನಗಳಿಂದ ಮನಸ್ಸು ಮಸಣದಂತಾಗಿದೆ. ರೇಣುಕಸ್ವಾಮಿ ಕೊಲೆ ಪ್ರಕರಣ ಉತ್ತರ ಸಿಗದ ಅಸಂಖ್ಯ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ನಟ ದರ್ಶನ್ ವರ್ತನೆ ಮತ್ತು ಅವನ ಅಂಧ ಅಭಿಮಾನಿಗಳ ನಡೆ, ಉತ್ತಮ ಸಮಾಜ ಜೀವನ ಬಯಸುವ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಇಡೀ ಪ್ರಕರಣದಲ್ಲಿ ನಮ್ಮ ಪಾತ್ರವೇನು ಎಂದು ಯೋಚಿಸಿದಾಗಲೆಲ್ಲ ಮತ್ತಷ್ಟು ಗಾಬರಿಯಾಗುತ್ತದೆ. ನನಗೂ ದಿನಕ್ಕೆ ನೂರಾರು hate message ಗಳು ಬರುತ್ತವೆ.

ಜನ ಅವರವರ ಮೂಗಿನ ನೇರಕ್ಕೆ ಪ್ರತಿಕ್ರಿಯಿಸುತ್ತಾರೆ. ಆಗಾಗ ಟ್ರೋಲ್ ಮಾಡಿ ಸಂಭ್ರಮಿಸುತ್ತಾರೆ. ಫೇಸ್ ಬುಕ್, ಟ್ವಿಟರ್ (ಎಕ್ಸ್), ಇನ್ಸ್ಟಾ ಗ್ರಾಮ್‌ನಲ್ಲಿ ಬರುವ ಯಾವ ದ್ವೇಷಪೂರಿತ ಸಂದೇಶಗಳನ್ನೂ ನಾನು ಡಿಲೀಟ್ ಮಾಡುವುದಿಲ್ಲ. ಹಾಗೆ ಕಳಿಸಿದವರನ್ನು ಬ್ಲಾಕ್ ಮಾಡುವುದಿಲ್ಲ. ನಾನು ಏನು ಬರೆಯುತ್ತೇನೋ ಅದಕ್ಕೆ ನಾನು ಹೊಣೆ, ಬದ್ಧ. ಪ್ರತಿಕ್ರಿಯೆಗಳು ಅವನ್ನು ಕಳಿಸುವವರ ಮನಸ್ಥಿತಿಯನ್ನು ತೋರಿಸುತ್ತವೆ ಎಂದು ಸುಮ್ಮನಾಗುತ್ತೇನೆ. ಅಷ್ಟಕ್ಕೂ, ಯಾರಾದರೂ ಸಹಿಸಿಕೊಳ್ಳಲು ಆಗದ ಕಾಮೆಂಟ್ ಬರೆದರೆ, ಆಯ್ಕೆ ನಮ್ಮ ಕೈಯಲ್ಲಿದೆ. ಅದನ್ನು ಡಿಲೀಟ್ ಮಾಡಬಹುದು. ಹಾಗೆ ಮೆಸೇಜ್ ಕಳಿಸಿದವರನ್ನು ಬ್ಲಾಕ್ ಮಾಡಬಹುದು.

ಅವರು ಬೇರೊಂದು ಹೆಸರಿನಿಂದ ನುಸುಳಿ ಬಂದರೂ, ಹಾಗೇ ಮಾಡಬಹುದು. ಅದು ಸಾಮಾಜಿಕ ಜಾಲತಾಣಗಳ ಸಹನಾಪಾಲನೆ ಮತ್ತು ಶಿಷ್ಟಾಚಾರ ಸಂಹಿತೆ. ರೇಣುಕಸ್ವಾಮಿ ಬೇರೆ ಹೆಸರುಗಳಲ್ಲಿ ಎಷ್ಟೇ ಸಲ ನುಸುಳಿ ಬಂದರೂ ಡಿಲೀಟ್ ಮತ್ತು ಬ್ಲಾಕ್ ಮಾಡುವುದೇನೂ ಕಷ್ಟವಲ್ಲ. ಆಗಲೂ ಕಿರಿಕಿರಿ ಯಾಗಿದ್ದರೆ, ತನ್ನ ಗೆಳತಿಯ ಬಗ್ಗೆ ದರ್ಶನ್‌ಗೆ ಅಷ್ಟೆಲ್ಲ ಕಾಳಜಿ ಇದ್ದಿದ್ದರೆ, ಪೊಲೀಸರಿಗೆ ಒಂದು ಕರೆ ಮಾಡಿ ವಿನಂತಿಸಿಕೊಂಡಿದ್ದರೆ ಸಾಕಿತ್ತು. ಅವರು ಆತನನ್ನು ವಿಚಾರಿಸಿಕೊಳ್ಳುತ್ತಿದ್ದರು. ಸೈಬರ್ ಅಪರಾಧದ ಪ್ರಕಾರ, ರೇಣುಕಸ್ವಾಮಿಗೆ ಕಾನೂನಿನ ರುಚಿ ತೋರಿಸುತ್ತಿದ್ದರು. ಅಷ್ಟಕ್ಕೇ ಯಾರಾದರೂ ಕೊಲೆ ಮಾಡುತ್ತಾರಾ? ನಟ ದರ್ಶನ್ ಕ್ರೌರ್ಯ ಮತ್ತು ಆತನ ಅಭಿಮಾನಿಗಳ ವರ್ತನೆ, ಇಡೀ ಸಮಾಜ ಪಾಲಿಸಿಕೊಂಡು ಬಂದಿರುವ ಮೌಲ್ಯಗಳನ್ನೇ ಧಿಕ್ಕರಿಸುವಂತಿದೆ.

ನಾನು ಈ ಎಲ್ಲ ವಿಷಯಗಳ ಬಗ್ಗೆ ಇಂದಿನ ಅಂಕಣದಲ್ಲಿ ಬರೆದಿದ್ದೆ. ಇನ್ನೇನು ಪುಟವನ್ನು ಮುದ್ರಣಕ್ಕೆ ಕಳಿಸಬೇಕು ಎನ್ನುವಾಗ, ಸಹೋದ್ಯೋಗಿ ಯೊಬ್ಬರು ದರ್ಶನ್ ಭಾಷಣದ ಒಂದು ಹಳೆಯ ವಿಡಿಯೋ ತುಣುಕು ತೋರಿಸಿದರು. ಕಾರ್ಯಕ್ರಮವೊಂದರಲ್ಲಿ ದರ್ಶನ್ ಮಾತಾಡುತ್ತಾ ’ನಾನು ಈಗಲೇ ಹೇಳಿಬಿಡ್ತೀನಿ ಅಣ್ಣ…ನನ್ನಂಥ ಕಛಡಾ ನನ್ಮಗನನ್ನು ಹುಡುಕಲು ಆಗೊಲ್ಲ. ಅದು ನನಗೆ ಚೆನ್ನಾಗಿ ಗೊತ್ತಿದೆ. ನನಗೆ ಎರಡು ಮುಖಗಳಿವೆ…’ ಎಂದು ಏನೇನೋ ಹೇಳುತ್ತಾನೆ. ಆ ಮಾತುಗಳನ್ನು ಕೇಳಿ, ನಾನು ಬರೆದ ಇಡೀ ಅಂಕಣವನ್ನು ತಕ್ಷಣ ಡಿಲೀಟ್ ಮಾಡಿಬಿಟ್ಟೆ. ಆತನ ಬಗ್ಗೆ ಬರೆಯಲೇ ಬಾರದಿತ್ತು ಅನಿಸಿಬಿಟ್ಟಿತು.

ಅಕ್ಷರಕ್ಕೆ ಪಾವಿತ್ರ್ಯವಿದೆ, ಅದು ಕೊಳಕಾಗಬಾರದು. ಇದು ಪಶ್ಚಾತ್ತಾಪವೋ, ಪ್ರತಿಭಟನೆಯೋ… ಗೊತ್ತಿಲ್ಲ. ಮುಂದೆ ಬರೆಯಲು ಮನಸ್ಸಾಗಲಿಲ್ಲ. ಹೀಗಾಗಿ ಖಾಲಿ.. ಖಾಲಿ!