Saturday, 14th December 2024

ಉತ್ತರ ಕೊರಿಯಾ ಸಮಸ್ಯೆಗಳಿಗೆ ಉತ್ತರವೇನು ?

ವಿಶ್ವರಂಗ

ರಂಗಸ್ವಾಮಿ ಮೂಕನಹಳ್ಳಿ

ಉತ್ತರ ಕೊರಿಯಾದ ಹಣದ ವಹಿವಾಟನ್ನು ನಿಯಂತ್ರಿಸುವುದು ‘ಆಫೀಸ್ ೩೯’ ವ್ಯವಸ್ಥೆ. ಹಣಕಾಸು ಖಾತೆಯಾಗಲೀ ಮಂತ್ರಿಯಾಗಲೀ ಈ ವ್ಯವಹಾರದ ಬಗ್ಗೆ ಉಸಿರೆತ್ತುವುದಿಲ್ಲ. ಹಣಕಾಸು ಮಂತ್ರಾಲಯದಲ್ಲಿ ನೇರವಾಗಿ ಬರುವ ಹಣದ ಮೇಲಷ್ಟೇ ಅದಕ್ಕೆ ಅಧಿಕಾರ. ಉಳಿದ ಹಣ ಸರ್ವಾಧಿಕಾರಿ ಕಿಮ್ ಮನೆಯನ್ನು ಸೇರುತ್ತದೆ.

ಅದು ೧೯೫೩ರ ಸಮಯ. ಅಮೆರಿಕ, ಉತ್ತರ ಕೊರಿಯಾದ ಮೇಲೆ ಅಣು ಬಾಂಬ್ ದಾಳಿ ಮಾಡುವ ಬೆದರಿಕೆ ಒಡ್ಡುತ್ತದೆ. ಹೀಗೆ ಬೆದರಿಕೆ ಹಾಕಿದಾಗ ಉತ್ತರ
ಕೊರಿಯಾ ನಡುಗಿಹೋಗುತ್ತದೆ. ಅದಕ್ಕೆ ಕಾರಣ ವನ್ನು ಬಿಡಿಸಿ ಹೇಳಬೇಕಾದ ಅವಶ್ಯಕತೆ ಇಲ್ಲ ಎಂದುಕೊಳ್ಳುವೆ. ೧೯೪೫ರಲ್ಲೇ ಜಪಾನ್ ಮೇಲೆ ಅಣು
ಬಾಂಬ್ ದಾಳಿ ಮಾಡಿದ್ದ ಅಮೆರಿಕ, ನಮ್ಮ ಮೇಲೆ ಕೂಡ ಈ ರೀತಿ ದಾಳಿ ಮಾಡಬಹುದು ಎಂಬ ಒಂದಂಶ ಉತ್ತರ ಕೊರಿಯಾದ ಅಧ್ಯಕ್ಷರಾದ ಕಿಮ್
ಸಂಗ್-೨ ಅವರ ಮನಸ್ಸಿನಲ್ಲಿ ಹಾದುಹೋಯಿತು.

ಅಂದು ಅವರು ತಮ್ಮ ‘ವರ್ಕಿಂಗ್ ಪಾರ್ಟಿ ಆಫ್ ಕೊರಿಯಾ’ (ಡಬ್ಲ್ಯುಪಿಕೆ) ಮೀಟಿಂಗ್‌ನಲ್ಲಿ ಉತ್ತರ ಕೊರಿಯಾವನ್ನು ಅಣುಶಕ್ತಿ ರಾಷ್ಟ್ರವನ್ನಾಗಿ ಮಾಡುವ ಪ್ರಸ್ತಾಪವನ್ನ ಮುಂದಿಡುತ್ತಾರೆ. ಅಮೆರಿಕ ತನ್ನ ಅಸ್ತಿತ್ವವಿರುವವರೆಗೂ ಉತ್ತರ ಕೊರಿಯಾ ಕಡೆಗೆ ಕಣ್ಣೆತ್ತಿ ನೋಡಬಾರದು ಎಂದು ಅವರು ಪಾರ್ಟಿ ಮೀಟಿಂಗ್‌ನಲ್ಲಿ ಹೇಳಿದ್ದರಂತೆ. ಅಣುಬಾಂಬ್ ಸಿಡಿತಲೆಯನ್ನು ಹೊತ್ತು ಅಮೆರಿಕದ ಪ್ರಮುಖ ನಗರಗಳ ಮೇಲೆ ಹಾರಬಲ್ಲ ಕ್ಷಿಪಣಿಗಳು ಇಂದು
ಉತ್ತರ ಕೊರಿಯಾದ ಬಳಿ ಇವೆ. ಉತ್ತರ ಕೊರಿಯಾ ಬೆಳೆದ ರೀತಿ ಇದೆಯಲ್ಲಾ ಅದು ಎಂಥವರನ್ನೂ ಅಚ್ಚರಿಯ ಕೂಪಕ್ಕೆ ದೂಡುತ್ತದೆ. ಇಡೀ ಜಗತ್ತಿನಿಂದ ಬಹಿಷ್ಕಾರ ಹಾಕಿಸಿಕೊಂಡ ಈ ಪುಟ್ಟರಾಷ್ಟ್ರ ಇಂದು ಅಣುಶಕ್ತಿಯ ರಾಷ್ಟ್ರವಾಗಿದೆ.

ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಉತ್ತರ ಕೊರಿಯಾದ ಇಕಾನಮಿ ಕಳೆದ ೧೭ ವರ್ಷಕ್ಕಿಂತ ಹೆಚ್ಚಿನ ವೇಗದಲ್ಲಿ ಬೆಳವಣಿಗೆ ಕಂಡಿದೆ, ಅಲ್ಲಿನ ಜಿಡಿಪಿ ಮತ್ತು ಜನರ ಖರೀದಿ ಸಾಮರ್ಥ್ಯ ಹೆಚ್ಚಿವೆ. ‘ಹೌದಾ?’ ಎನ್ನುವ ಪ್ರಶ್ನೆ ಈಗ ನಿಮ್ಮದು. ಅಮೆರಿಕ ಬಹಿಷ್ಕಾರ ಸಡಿಲಿಸಿತಾ? ಎಂಬ ಇನ್ನೊಂದು ಪ್ರಶ್ನೆಯೂ ನಿಮ್ಮಿಂದ ಬರಬಹುದು. ಉತ್ತರ ಕೊರಿಯಾದ ಇಕಾನಮಿ ಅಭಿವೃದ್ಧಿ ಕಾಣುತ್ತಿರುವುದು ಸತ್ಯ, ಅಮೆರಿಕವು ‘ಸ್ಯಾಂಕ್ಷನ್’ ಅನ್ನು ಸಡಿಲಿಸದೆ ಇರುವುದು ಕೂಡ ಸತ್ಯ.

ಹಾಗಾದರೆ ಅಲ್ಲಿನ ಜನರ ಬವಣೆಗಳು ಕಡಿಮೆಯಾದವೇ? ಉತ್ತರ ಕೊರಿಯಾ ಹಣವನ್ನ ಹೇಗೆ ಸಂಪಾದಿಸುತ್ತದೆ? ಜಗತ್ತಿನಿಂದ ಬಹಿಷ್ಕಾರ ಹಾಕಿಸಿಕೊಂಡ ಪುಟ್ಟದೇಶವೊಂದು ಏನು ಮಾಡಬಹುದೋ ಅದನ್ನೇ ಉತ್ತರ ಕೊರಿಯಾ ಮಾಡುತ್ತಿದೆ. ಅದನ್ನು ಆಳುತ್ತಿರುವವರಿಗೆ ಸರಿ-ತಪ್ಪುಗಳ ಗೆರೆಯನ್ನು ಹಾಕುವ ಚಿಂತೆಯಿಲ್ಲ. ಅವರದೇನಿದ್ದರೂ ದೇಶವನ್ನು ನಡೆಸಲು ದುಡ್ಡು ಸಂಪಾದಿಸುವುದು.

ಗಣಿಗಾರಿಕೆ ಮತ್ತು ಕಲ್ಲಿದ್ದಲು
ಉತ್ತರ ಕೊರಿಯಾ ದೇಶ ಕಲ್ಲಿದ್ದಲನ್ನ ಮಾರಿ ಹಣ ಸಂಪಾದಿಸುತ್ತದೆ. ಉತ್ತರ ಕೊರಿಯಾದ ಅತ್ಯಂತ ದೊಡ್ಡ ಟ್ರೇಡ್ ಪಾರ್ಟ್‌ನರ್ ಚೀನಾ. ಹಲವು ಖರೀದಿಗಳು ಪುಸ್ತಕದಲ್ಲಿ ದಾಖಲಾಗುವುದಿಲ್ಲ. ಆದರೇನು, ಉತ್ತರ ಕೊರಿಯಾ ದೇಶದ ಬಂಡಿ ಸಾಗಲು ಬೇಕಾಗುವ ಹಣವನ್ನು ಚೀನಾ ಸುರಿಯುತ್ತದೆ. ಚೀನಾ ದೇಶದಲ್ಲಿ ಕೂಡ ಹೆಚ್ಚು ಕಡಿಮೆ ಉತ್ತರ ಕೊರಿಯಾದ ರೀತಿಯಲ್ಲೇ ಆಡಳಿತ ನಡೆಯುವುದರಿಂದ, ಅಮೆರಿಕ ಎಷ್ಟೇ ಬಹಿಷ್ಕಾರ ಎಂದರೂ ಚೀನಾ ತಲೆಯಾಡಿಸಿ, ಇತ್ತ ತನ್ನಿಚ್ಛೆಗೆ ಬಂದದ್ದನ್ನು ಮಾಡುತ್ತಾ ಹೋಗುತ್ತದೆ.

ನಕಲಿ ಹಣದ ಮುದ್ರಣ 
ಉತ್ತರ ಕೊರಿಯಾ ದೇಶದಲ್ಲಿನ ಕಪ್ಪು ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವುದು ಅಮೆರಿಕದ ಡಾಲರ್! ಇದನ್ನು ನಂಬಲು ಅಸಾಧ್ಯ ಎನಿಸುತ್ತದೆ,
ಆದರೆ ಇದು ಸತ್ಯ. ಇಲ್ಲಿನ ಸಾಮಾನ್ಯ ಪ್ರಜೆ ತನ್ನ ದೈನಂದಿನ ವ್ಯವಹಾರಕ್ಕೆ ಬಳಸುವುದು ಡಾಲರ್ ಅನ್ನು. ಅಮೆರಿಕನ್ ನಕಲಿ ಡಾಲರ್ ಅನ್ನು ಮುದ್ರಿಸಿ
ಅಮೆರಿಕ ದೇಶದಲ್ಲಿ ಚಲಾವಣೆಗೆ ಬಿಡುವ ಒಂದು ಸಂಘಟಿತ ಕಚೇರಿಯನ್ನ ಉತ್ತರ ಕೊರಿಯಾ ಹೊಂದಿದೆ. ಇಷ್ಟೇಕೆ, ತನ್ನ ದೊಡ್ಡ ಟ್ರೇಡ್ ಪಾರ್ಟ್
ನರ್ ಚೀನಾ ದೇಶದ ಕರೆನ್ಸಿಯನ್ನ ಕೂಡ ನಕಲು ಮಾಡುವುದರಲ್ಲಿ ಉತ್ತರ ಕೊರಿಯಾ ಸಿದ್ಧಹಸ್ತ.

ಸೈಬರ್ ಕ್ರೈಮ್
ಬಾಂಗ್ಲಾದೇಶದ ಸೆಂಟ್ರಲ್ ಬ್ಯಾಂಕ್‌ನಿಂದ ೮೧ ಮಿಲಿಯನ್ ಅಮೆರಿಕನ್ ಡಾಲರ್ ಹಣ ನಾಪತ್ತೆಯಾಗಿದ್ದು ಇಂದಿಗೆ ಇತಿಹಾಸ. ಇದನ್ನ ಮಾಡಿದ
ವರು ಉತ್ತರ ಕೊರಿಯಾದ ಹ್ಯಾಕರ್ಸ್ ಎನ್ನುವುದು ಇಂದಿಗೆ ಎಲ್ಲರಿಗೂ ತಿಳಿದಿರುವ ಸತ್ಯ. ಹೀಗೇ ಸೋನಿ ಕಂಪನಿಯ ಮೇಲೂ ದಾಳಿ ನಡೆದಿತ್ತು. ಉತ್ತರ
ಕೊರಿಯಾದ ಹ್ಯಾಕರ್‌ಗಳು ವ್ಯವಸ್ಥೆಯಲ್ಲಿನ ಲೋಪ ದೋಷಗಳ ಮೇಲೆ ಸದಾ ಹದ್ದಿನ ಕಣ್ಣಿಟ್ಟಿರುತ್ತಾರೆ. ಮುಂದಿನ ಬೇಟೆಗೆ ಅವರು ಸದಾ ಸಿದ್ಧರು. ಇತ್ತೀಚೆಗೆ ಅತಿಹೆಚ್ಚು ಸದ್ದುಮಾಡುತ್ತಿರುವ ಬಿಟ್ ಕಾಯಿನ್ ಮೇಲೆ ಇವರ ಕಣ್ಣು ಬಿದ್ದಿದೆ ಎನ್ನುವ ಸುದ್ದಿ ಕೂಡ ವಿತ್ತ ಜಗತ್ತಿನಲ್ಲಿ ಹರಿದಾಡುತ್ತಿದೆ.

ಜನರ ವಿಲೇವಾರಿ
ನಿಮ್ಮಲ್ಲಿ ಆಶ್ಚರ್ಯ ಹುಟ್ಟಿಸುವ ಇನ್ನೂ ಅನೇಕ ವಿಷಯಗಳಿವೆ. ಆಫ್ರಿಕಾ ಖಂಡದ ಹಲವು ದೇಶಗಳ ಮಿಲಿಟರಿಗೆ ಮತ್ತು ಪ್ರೆಸಿಡೆಂಟ್‌ಗಳ ಅಂಗರಕ್ಷಕರಿಗೆ
ಮಾರ್ಷಲ್ ಆರ್ಟ್ ಕಲಿಸುವುದು ಇದೇ ಉತ್ತರ ಕೊರಿಯಾ. ಇವುಗಳಲ್ಲಿ ಅಂಗೋಲ ಪ್ರಮುಖವಾದುದು. ಅಂತೆಯೇ ಚೀನಾ ದೇಶದಲ್ಲಿ ಕೆಲಸ ಮಾಡುತ್ತಿರುವ ಉತ್ತರ ಕೊರಿಯಾದ ಕೆಲಸಗಾರರ ಸಂಖ್ಯೆಯೂ ಬಹಳವಿದೆ. ಉತ್ತರ ಕೊರಿಯಾ ಸರಕಾರ ತನ್ನ ಪ್ರಜೆಗಳಿಂದ ಗುಲಾಮರಂತೆ ಕೆಲಸ
ಮಾಡಿಸಲು ವರ್ಷಕ್ಕೆ ಇಷ್ಟು ಹಣ ಎನ್ನುವ ಆಧಾರದ ಮೇಲೆ ಅವರನ್ನು ಗುತ್ತಿಗೆಗೆ ನೀಡುತ್ತದೆ.

ಚೀನಾ ಮಾತ್ರವಲ್ಲದೆ ‘ರಿಪಬ್ಲಿಕ್ ಆಫ್ ಕಾಂಗೋ’ ಎನ್ನುವ ದೇಶದಲ್ಲೂ ಉತ್ತರ ಕೊರಿಯಾದ ಪ್ರಜೆಗಳು ಕೆಲಸಗಾರರಾಗಿ ದುಡಿಯುತ್ತಿದ್ದಾರೆ. ಕುವೈತ್
ದೇಶದ ಕಟ್ಟಡ ಕಾಮಗಾರಿ ಕೆಲಸಕ್ಕೆ ಕೆಲಸಗಾರರ ವ್ಯವಸ್ಥೆಯನ್ನ ಕೂಡ ಉತ್ತರ ಕೊರಿಯಾ ಮಾಡಿದೆ. ಓಮನ್, ಕತಾರ್ ದೇಶಗಳು ಕೂಡ ಕೆಲಸಕ್ಕೆಂದು
ಉತ್ತರ ಕೊರಿಯಾದಿಂದ ಜನರನ್ನ ಆಮದು ಮಾಡಿಕೊಂಡಿವೆ. ಇದಕ್ಕೆ ಪ್ರತಿಯಾಗಿ ಉತ್ತರ ಕೊರಿಯಾಕ್ಕೆ ದೊಡ್ಡ ಗಂಟು ಸಂದಾಯವಾಗುತ್ತದೆ.

ಗಮನಿಸಿ, ಹೆಚ್ಚಿನ ವಿದ್ಯಾಭ್ಯಾಸ ಮಾಡಿದ ತನ್ನ ಜನರನ್ನ ಉತ್ತರ ಕೊರಿಯಾ ಬೇರೆ ದೇಶಗಳಿಗೆ ಕೆಲಸಕ್ಕೆಂದು ಗುತ್ತಿಗೆ ಆಧಾರದ ಮೇಲೆ ಕಳಿಸುತ್ತದೆ.
ಅವರು ಮಾತನಾಡುವುದು, ಪ್ರವಾಸ ಹೋಗುವುದು ಎಲ್ಲವೂ ಬಹಳವಾಗಿ ನಿಯಂತ್ರಣದಲ್ಲಿರು ತ್ತದೆ. ಹೀಗೆ ಹೊರದೇಶದಲ್ಲಿ ಕೆಲಸ ಮಾಡುವವರ
ಹಣ ಸಂಗ್ರಹಣೆ ಕೆಲಸವನ್ನ ‘ವರ್ಕಿಂಗ್ ಪಾರ್ಟಿ ಆಫ್ ಕೊರಿಯಾ’ದ ‘ಆಫೀಸ್ ೩೯’ ಮಾಡುತ್ತದೆ. ಹೀಗೆ ಹೊರದೇಶಗಳಿಗೆ ಕೆಲಸಕ್ಕೆ ಕಳಿಸಿದ ತನ್ನ ಎಲ್ಲಾ
ತರಹದ ಜನರಿಂದ ಅದು ಗಳಿಸುವ ಆದಾಯ ವರ್ಷಕ್ಕೆ ಒಂದು ಬಿಲಿಯನ್ ಡಾಲರ್ ಎನ್ನುತ್ತದೆ ಒಂದು ಅಂಕಿ-ಅಂಶ.

ಶಸ್ತ್ರಾಸ್ತ್ರ ಮಾರಾಟ
ಹಲವು ಆಫ್ರಿಕನ್ ದೇಶಗಳು ಉತ್ತರ ಕೊರಿಯಾದಿಂದ ಮದ್ದು-ಗುಂಡುಗಳನ್ನು ಖರೀದಿ ಮಾಡುತ್ತಿವೆ. ಹೊರಜಗತ್ತಿಗಿಂತ ಕಡಿಮೆ ಬೆಲೆಯಲ್ಲಿ ಸಿಗುವು
ದರಿಂದ ಈ ದೇಶಗಳು ಉತ್ತರ ಕೊರಿಯಾ ಬಳಿ ಕೊಳ್ಳುತ್ತಿವೆ. ಜತೆಗೆ ಆಂತರಿಕ ಕಲಹದಲ್ಲಿ ಆಗುವ ಸಾವು-ನೋವುಗಳನ್ನ ಆರೈಕೆ ಮಾಡುವುದಕ್ಕೆಂದು
ಉತ್ತರ ಕೊರಿಯಾ ತನ್ನ ವೈದ್ಯರನ್ನ ಪ್ಯಾಕೇಜ್ ಡೀಲ್ ಮೂಲಕ ಇಷ್ಟು ವರ್ಷಕ್ಕೆ ಎಂದು ಆಫ್ರಿಕನ್ ದೇಶಗಳಿಗೆ ಗುತ್ತಿಗೆ ನೀಡುತ್ತಿದೆ.

ಮಾದಕ ವಸ್ತುಗಳ ಮಾರಾಟ

ಇಂದು ಜಗತ್ತಿನಲ್ಲಿ ಅತಿಹೆಚ್ಚು ಲಾಭ ತಂದುಕೊಡುತ್ತಿ ರುವ ಕೆಲವೇ ಕೆಲವು ಉದ್ದಿಮೆಗಳಲ್ಲಿ ಮಾದಕ ವಸ್ತುಗಳ ಮಾರಾಟ ಕೂಡ ಒಂದು. ಉತ್ತರ
ಕೊರಿಯಾ ದೇಶ ತನ್ನ ನೆಲದಲ್ಲಿ ಇಂಥ ಮಾದಕ ವಸ್ತುಗಳ ಬೆಳೆಯನ್ನ ಬೆಳೆಯುತ್ತಿದೆ. ಸರಕಾರದ ಅನುಮತಿ ಇದ್ದ ಮೇಲೆ ಯಾವುದರ ಭಯ? ವಹಿವಾಟು ನಿಯಂತ್ರಿಸುವ ಆಫೀಸ್ ೩೯ ‘ವರ್ಕಿಂಗ್ ಪಾರ್ಟಿ ಆಫ್ ಕೊರಿಯಾ’ದಲ್ಲಿ ಇಂಥ ಹಣದ ವಹಿವಾಟನ್ನು ನಿರ್ವಹಿಸಲು ಇರುವ ವ್ಯವಸ್ಥೆಗೆ ‘ಆಫೀಸ್ ೩೯’ ಅಥವಾ ‘ಬ್ಯೂರೋ ೩೯’ ಅಥವಾ ‘ಡಿವಿಷನ್ ೩೯’ ಎನ್ನುವ ಹೆಸರಿದೆ.

ಪಾರ್ಟಿ ಕಾರ್ಯಕರ್ತರು ಮತ್ತು ಉತ್ತರ ಕೊರಿಯಾದ ಜನರ ನಡುವೆ ಇದು ‘ಆಫೀಸ್ ೩೯’ ಎಂದೇ ಪ್ರಸಿದ್ಧಿ ಪಡೆದಿದೆ. ಹೀಗೆ ವಿದೇಶಗಳಲ್ಲಿ ಮಾಡುವ ಒಪ್ಪಿತ ವಲ್ಲದ ಹಣವನ್ನ ತನ್ನ ದೇಶಕ್ಕೆ ತರಿಸಿಕೊಳ್ಳುವ ಕೆಲಸ ಮತ್ತು ಅದನ್ನ ಕಿಮ್ ಮನೆತನಕ್ಕೆ ಸರಿಯಾಗಿ ವಿಲೇವಾರಿ ಮಾಡುವ ಕೆಲಸವನ್ನ ಈ ‘ಆಫೀಸ್ ೩೯’ ಮಾಡುತ್ತದೆ. ವಿದೇಶಗಳಲ್ಲಿ ತನ್ನ ಹೋಟೆಲ್ ಮತ್ತು ಇತರ ಉದ್ದಿಮೆಗಳನ್ನ ತೆರೆಯುವುದನ್ನ, ಆ ಮೂಲಕ ಹಣವನ್ನ ಉತ್ತರ ಕೊರಿಯಾ ಕ್ಕೆ ವ್ಯವಸ್ಥಿತವಾಗಿ ಕಳಿಸುವುದನ್ನ ಇದು ಮಾಡುತ್ತದೆ. ‘ಪಿಯಂಗ್ ಯೊಂಗ್’ ಎನ್ನುವ ಸರಣಿ ಹೋಟೆಲ್ ಉದ್ದಿಮೆಯನ್ನ ‘ಆಫೀಸ್ ೩೯’ ನಿಯಂತ್ರಿಸು ತ್ತಿದೆ. ಈ ಹೋಟೆಲ್ ಜಗತ್ತಿನ ಹಲವಾರು ದೇಶಗಳಲ್ಲಿ ಸ್ಥಾಪಿತವಾಗಿದೆ.

ಇವುಗಳ ಮೂಲಕ ಅಂತಾರಾಷ್ಟ್ರೀಯ ವಿಮೆಯನ್ನ ಕೊಳ್ಳುವುದರಲ್ಲಿ, ಇಂಥ ವಿಮೆಯಲ್ಲಿ ಅವ್ಯವಹಾರ ನಡೆಸುವುದರಲ್ಲಿ, ಅಲ್ಲೂ ಹಣವನ್ನು
ದೋಚುವುದರಲ್ಲಿ ಕೂಡ ಈ ‘ಆಫೀಸ್’ ಸಿದ್ಧಹಸ್ತ. ಹೀಗೆ ಉತ್ತರ ಕೊರಿಯಾ ದೇಶದ ಹಣದ ವಹಿವಾಟು ನಿಯಂತ್ರಿಸುವುದು ‘ಆಫೀಸ್ ೩೯’. ಈ ದೇಶದ ಹಣಕಾಸು ಮಂತ್ರಿಯಾಗಲೀ ಅಥವಾ ಹಣಕಾಸು ಖಾತೆಯಾಗಲೀ ಅವುಗಳ ಇಲ್ಲಿನ ಹಣದ ವ್ಯವಹಾರದ ಬಗ್ಗೆ ಉಸಿರೆತ್ತುವುದಿಲ್ಲ. ಹಣಕಾಸು
ಮಂತ್ರಾಲಯದಲ್ಲಿ ನೇರವಾಗಿ ಬರುವ ಹಣದ ಮೇಲಷ್ಟೇ ಅದಕ್ಕೆ ಅಧಿಕಾರ. ಉಳಿದ ಎಲ್ಲಾ ಹಣವು ಸರ್ವಾಧಿಕಾರಿ ಕಿಮ್ ಮನೆಯನ್ನು ಸೇರುತ್ತದೆ.
ಹೀಗೆ ತನ್ನ ಖಜಾನೆಗೆ ಸೇರಿದ ಹಣದ ೨೦ ಅಥವಾ ೩೦ ಭಾಗವನ್ನ ಮಾತ್ರ ಜನರ ಆಹಾರ ಮತ್ತಿತರ ಮೂಲಭೂತ ಬೇಡಿಕೆಗಳನ್ನ ಈಡೇರಿಸಲು ನೀಡಲಾ
ಗುತ್ತದೆ. ಅಣುಬಾಂಬ್ ಖರೀದಿ, ಅದರ ಪರೀಕ್ಷೆ ಅಥವಾ ಯುದ್ಧ ಇನ್ನಿತರ ಖರ್ಚಿಗೂ ಹಣಕಾಸು ಖಾತೆಗೂ ಯಾವುದೇ ಸಂಬಂಧವಿಲ್ಲ. ಅದೇನಿದ್ದರೂ
ಕಿಮ್ ತನ್ನ ಜೇಬಿನಿಂದ ತೆಗೆದು ಮಾಡುವ ಖರ್ಚು.

ನಿರ್ಧಾರಗಳೂ ಅವನದ್ದೇ ಅಂತಿಮ. ಪಾರ್ಟಿಯಲ್ಲೂ ಅಷ್ಟೇ, ಅವನಿಗೆ ‘ಜೀ ಹುಜೂರ್’ ಎಂದವರಿಗಷ್ಟೇ ಜಾಗ. ಇಲ್ಲದಿದ್ದರೆ ಚಿಕ್ಕಪ್ಪನಾದರೂ ಸರಿಯೇ ಅವರಿಗೆ ಮರಣದಂಡನೆ ಕಟ್ಟಿಟ್ಟಬುತ್ತಿ. ಹಣಕಾಸು ನಿಯಂತ್ರಿಸುವ ‘ಆಫೀಸ್ ೩೯’ ಬಹಳ ಪ್ರಸಿದ್ಧ. ಗೂಢಚಾರಿಕೆಗೆ ಕೂಡ ಇಷ್ಟೇ ಪ್ರಸಿದ್ಧವಾದ ‘ಆಫೀಸ್ ೩೫’ ಇಲ್ಲಿದೆ. ಹೀಗೆ ತಾವು ಮಾಡುವ ಪ್ರತಿ ಕೆಲಸಕ್ಕೂ ಆಫೀಸ್‌ಗಳನ್ನ ತೆರೆಯಲಾಗಿದೆ. ಇವುಗಳ ಬೇರೆ ಬೇರೆ ಕಾರ್ಯಾಂಗಗಳು ತಮಗೆ ಒಪ್ಪಿಸಿದ ಕೆಲಸ ವನ್ನ ನಿಷ್ಠೆಯಿಂದ ಮಾಡುತ್ತವೆ.

ಈಗಿನ ಉತ್ತರ ಕೊರಿಯಾ ಖಂಡಿತವಾಗಿ ೧೯೫೦ರ ದಶಕದ ಉತ್ತರ ಕೊರಿಯಾ ಅಲ್ಲ. ಅದು ಆರ್ಥಿಕವಾಗಿ ಮತ್ತು ಭದ್ರತೆಯ ವಿಷಯದಲ್ಲಿ ಸಾಕಷ್ಟು
ಸದೃಢವಾಗಿದೆ. ಆದರೆ ಅಲ್ಲಿನ ಜನರ ಸಾಮಾಜಿಕ ಮತ್ತು ಆಂತರಿಕ ಜೀವನದಲ್ಲಿ ಅಂಥ ಬದಲಾವಣೆ ಕಂಡುಬಂದಿಲ್ಲ. ಸಮಯದ ಜತೆಗೆ ಒಂದಷ್ಟು
ಬದಲಾವಣೆ ಆಗಿದೆ ಎನ್ನುವುದು ಬಿಟ್ಟರೆ ಜನರಿಗೆ ಹೆಚ್ಚಿನ ಸೌಲಭ್ಯ ಸಿಕ್ಕಿಲ್ಲ. ಅವರದೇನಿದ್ದರೂ ದುಡಿತ, ಸರಕಾರದ ಆಜ್ಞೆಯನ್ನ ಪಾಲಿಸುವ ರೋಬಾಟ್
ಜೀವನ. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಎನ್ನುವುದು ಇದೆಯೇ ಎನ್ನುವ ಪ್ರಶ್ನೆಗೆ ಉತ್ತರ ಹೇಳುವವರಾರು?