Friday, 22nd November 2024

ಬಿಜೆಪಿ ಮಾತ್ರವಲ್ಲ, ಮೂರು ಪಕ್ಷಗಳಿಗೂ ಪಾಠ

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hosakere@gmail.com

ಮೋದಿ ಹೆಸರಲ್ಲೇ ಗೆಲ್ಲಬಹುದು ಎನ್ನುವ ಬಿಜೆಪಿ ಲೆಕ್ಕಾಚಾರ, ಸರಕಾರವನ್ನು ಟೀಕಿಸುತ್ತಲ್ಲೇ ಅಽಕಾರದ ಗದ್ದುಗೆ ಹಿಡಿಯಬಹುದು ಎನ್ನುವ ಕಾಂಗ್ರೆಸ್ ಯೋಜನೆ ಹಾಗೂ ಭಾವನಾತ್ಮಕ ಹೇಳಿಕೆಗಳನ್ನು ಟ್ರಂಪ್ ಮಾಡಿಕೊಂಡಿದ್ದ ಜೆಡಿಎಸ್ ಲೆಕ್ಕಾಚಾರವಂತೂ ತಲೆಕೆಳ ಗಾಗಿದೆ.

ರಾಜ್ಯ ರಾಜಕೀಯದಲ್ಲಿ ಬಹುನಿರೀಕ್ಷಿತ ಉಪಚುನಾವಣಾ ಫಲಿತಾಂಶ ಬಂದು ವಾರ ಕಳೆದರೂ, ಚುನಾವಣಾ ಫಲಿತಾಂಶದ ವಿಶ್ಲೇಷಣೆ ಗಳು ಕೊನೆಯಾಗಿಲ್ಲ. ಸಿಂದಗಿ ಹಾಗೂ ಹಾನಗಲ್ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ, ಬಿಜೆಪಿ-ಕಾಂಗ್ರೆಸ್ ಸೋತು ಗೆದ್ದಿದ್ದರೆ, ಜೆಡಿಎಸ್ ಸಂಪೂರ್ಣ ನೆಲಕಚ್ಚಿದೆ ಎನ್ನುವುದು ನಗ್ನ ಸತ್ಯ. ಆದರೆ ಮೂರು ಪಕ್ಷಗಳು ತಮ್ಮ ಮೂಗಿನ ನೇರಕ್ಕೆ ಅಥವಾ ತಮಗೆ ಬೇಕಾದ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿವೆ.

ಆಡಳಿತರೂಢ ಬಿಜೆಪಿ ಭದ್ರಕೋಟೆ ಎನಿಸಿಕೊಂಡಿದ್ದ ಹಾನಗಲ್‌ನಲ್ಲಿ ಬಿದ್ದು ಸಿಂದಗಿ ಯಲ್ಲಿ ಗೆಲುವು ಸಾಧಿಸಿದೆ. ಆದರೆ ಸಿಂದಗಿಯಲ್ಲಿ ಅನುಕಂಪದ ಲೆಕ್ಕಾಚಾರದಲ್ಲಿ ಮನುಗೂಳಿ ಅವರ ಪುತ್ರ ಅಶೋಕ್ ಮನಗೂಳಿ ಅವರನ್ನು ನಿಲ್ಲಿಸಿದ್ದ ಕಾಂಗ್ರೆಸ್, ಅಲ್ಲಿ ಸೋತರೂ ಹಾನಗಲ್ ಅನ್ನು ಗೆಲ್ಲುವ ಮೂಲಕ ಖಾತೆ ತೆರೆದಿದೆ. ಈ ಎರಡೂ ಪಕ್ಷಗಳ ನಡುವೆ ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟೂ, ಎರಡೂ ಕ್ಷೇತ್ರದಲ್ಲಿಯೂ ಮುಸ್ಲಿಂ ಅಭ್ಯರ್ಥಿಯನ್ನು ನಿಲ್ಲಿಸಿದ್ದ ಜೆಡಿಎಸ್ ಠೇವಣಿ ಕಳೆದುಕೊಂಡು ಹೀನಾಯ ಸ್ಥಿತಿಗೆ ತಲುಪಿದೆ.

ಆದರೆ ಕಾಂಗ್ರೆಸ್, ಜೆಡಿಎಸ್ ಮಾತ್ರ ಈ ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಜನರು ಪಾಠ ಕಲಿಸಿದ್ದಾರೆ ಎನ್ನುವ ಮಾತನ್ನು ಹೇಳುತ್ತಿವೆ. ಒಂದರ್ಥದಲ್ಲಿ ಇದು ನಿಜವೂ ಹೌದು. ಬೆಲೆ ಏರಿಕೆ, ನಾಯಕತ್ವ ಬದಲಾವಣೆ ಸೇರಿದಂತೆ ಹಲವು ವಿಷಯಗಳ
ಮಿಶ್ರಣದಿಂದ ಸುಲಭದ ಜಯವಾಗಿದ್ದ ಹಾನಗಲ್ ಅನ್ನು ಬಿಜೆಪಿ ಬಿಟ್ಟುಕೊಟ್ಟಿದೆ. ಅಂದ ಮಾತ್ರಕ್ಕೆ ಈ ಉಪಚುನಾವಣೆಯಿಂದ ಪಾಠ ಕಲಿಯಬೇಕಾಗಿರುವುದು ಕೇವಲ ಬಿಜೆಪಿ ಮಾತ್ರವಲ್ಲ.

ಎರಡೂ ಕ್ಷೇತ್ರದ ಜನ ಮೂರು ಪಕ್ಷಗಳಿಗೂ ಒಂದೊಂದು ಪಾಠವನ್ನು ಹೇಳಿದ್ದು, ಈಗಲೇ ತಿದ್ದುಕೊಳ್ಳದಿದ್ದರೆ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮೂರು ಪಕ್ಷಗಳಿಗೂ ತಮ್ಮದೇಯಾದ ನಷ್ಟಅನುಭವಿಸುವುದು ಸ್ಪಷ್ಟ. ಕಾಂಗ್ರೆಸ್, ಜೆಡಿಎಸ್ ಬಗ್ಗೆ ಮಾತನಾಡುವ ಮೊದಲು, ಆಡಳಿತರೂಢ ಬಿಜೆಪಿಯ ಬಗ್ಗೆ ನೋಡಬೇಕಿದೆ. ಯಾವುದೇ ಉಪಚುನಾವಣೆ ನಡೆದರೂ ಆಡಳಿತರೂಢ ಪಕ್ಷಕ್ಕೆ ಹೆಚ್ಚು ವರಿ ಹಿಡಿತವಿರುತ್ತದೆ. ಅದರಲ್ಲಿಯೂ ಬಿಜೆಪಿ ಸೋತಿರುವ ಹಾನಗಲ್ ಕ್ಷೇತ್ರ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ. ಅದಕ್ಕೂ ಮಿಗಿಲಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಈ ಕ್ಷೇತ್ರದ ಮೇಲೆ ಸಂಪೂರ್ಣ ಹಿಡಿತವಿದೆ.

ಬಿಜೆಪಿಯ ಭದ್ರಕೋಟೆಯಾಗಿಯೂ ಹಾನಗಲ್ ಇತ್ತು. ಈ ಎಲ್ಲದರ ಜತೆ ಈ ಕ್ಷೇತ್ರದಲ್ಲಿ ಬಿಜೆಪಿಗೆ ಅನುಕಂಪದ ಮತಗಳು ಸಿಗುವ ಸಾಧ್ಯತೆ ದಟ್ಟವಾಗಿತ್ತು. ಆದರೆ ಈ ಲಾಭದ ನಡುವೆಯೂ ಸೋಲುವುದಕ್ಕೆ ಕಾರಣ ಮಾತ್ರ, ಬಿಜೆಪಿ ವರಿಷ್ಠರ ಕೆಲ ತಪ್ಪು ನಿರ್ಧಾರ ಗಳು.

ಹೌದು, ಬಿಜೆಪಿ ನಾಯಕರು ಉಪಚುನಾವಣೆ ಘೋಷಣೆಯಾದ ದಿನದಿಂದ ಪ್ರತಿಹೆಜ್ಜೆ ಯಲ್ಲಿಯೂ ತಪ್ಪು ನಿರ್ಧಾರ ಕೈಗೊಳ್ಳುತ್ತಲೇ ಬಂದರು. ಪ್ರಮುಖವಾಗಿ ಹಾನಗಲ್‌ನಲ್ಲಿ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಅವರ ಹಿಡಿತ ಗಟ್ಟಿಯಾಗಿದೆ ಎನ್ನುವುದು ಇಡೀ ಲೋಕಕ್ಕೆ ಗೊತ್ತಿದ್ದರೂ, ಬಿಜೆಪಿ ವರಿಷ್ಠರು ಮಾತ್ರ ಈ ಇಬ್ಬರನ್ನು ‘ಸರಿಯಾಗಿ’ ಬಳಸಿಕೊಳ್ಳಲಿಲ್ಲ.

ಉಸ್ತುವಾರಿಗಳ ನೇಮಕದಲ್ಲಿಯೂ ವಿಜಯೇಂದ್ರ ಹೆಸರು ಆರಂಭದಲ್ಲಿ ಕೈಬಿಟ್ಟು, ಬಳಿಕ ‘ಮರೆತು ಹೋಗಿತ್ತು’ ಎನ್ನುವ ಸಬೂಬು ನೀಡಿ ಸೇರಿಸಿದರು. ಯಡಿಯೂರಪ್ಪ ಅವರು ಪ್ರಚಾರಕ್ಕೆ ಹೋಗುವುದಕ್ಕೆ ಉತ್ಸುಕರಾಗಿದ್ದರೂ, ಅವರ ಸುತ್ತ ಇತರ ನಾಯಕರ ಕೋಟೆ ಕಟ್ಟುವ ಮೂಲಕ ‘ಕಟ್ಟಿ’ ಹಾಕುವ ಪ್ರಯತ್ನವನ್ನು ಮಾಡಿದರು. ಇನ್ನು ಅಭ್ಯರ್ಥಿ ಆಯ್ಕೆ ವಿಷಯದಲ್ಲಿಯೂ ‘ಅಚ್ಚರಿಯ’ ಆಯ್ಕೆಯನ್ನು ಮಾಡಲು
ಹೋಗಿ ಕೈಸುಟ್ಟುಕೊಂಡರು ಎಂದರೆ ತಪ್ಪಿಲ್ಲ.

ಯಡಿಯೂರಪ್ಪ ಅವರ ಆತ್ಯಾಪ್ತ ವಲಯದಲ್ಲಿದ್ದ ಸಿ.ಎಂ ಉದಾಸಿ ಅವರ ನಿಧನದಿಂದ ತೆರವಾದ ಕ್ಷೇತ್ರಕ್ಕೆ, ಬಿಎಸ್‌ವೈ ಉದಾಸಿ ಸೊಸೆ ಯನ್ನೇ ನಿಲ್ಲಿಸಬೇಕು ಎನ್ನುವ ಒತ್ತಡವನ್ನು ಹೇರಿದ್ದರು. ಆದರೆ ಯಡಿಯೂರಪ್ಪ ಮಾತನ್ನು ಕೇಳಿಸಿಕೊಳ್ಳದೇ, ಸಜ್ಜನರ್ ಅವರನ್ನು ಅಂತಿಮಗೊಳಿಸಿತ್ತು. ಕರೋನಾ ಸಮಯದಲ್ಲಿ ಉದಾಸಿ ಅವರು ವಯೋಸಹಜ ಸಮಸ್ಯೆ ಹಾಗೂ ಅನಾರೋಗ್ಯ ಕಾರಣಕ್ಕೆ ಓಡಾಡ ರುವುದನ್ನೇ ಬಳಸಿಕೊಂಡು ಆ ಸಮಯದಲ್ಲಿ ಶ್ರೀನಿವಾಸ್ ಮಾನೆ ಅವರು, ಕ್ಷೇತ್ರದ ಜನರನ್ನು ವಿಶ್ವಾಸಕ್ಕೆ ತಗೆದುಕೊಳ್ಳುವ ಹಾಗೂ ಸಿದ್ದರಾಮಯ್ಯ ಅವರ ಪ್ರಭಾವ ಬಳಸಿಕೊಂಡು ಅಹಿಂದ ಮತಗಳನ್ನು ಗಟ್ಟಿಗೊಳಿಸಿಕೊಂಡಿದ್ದರು.

ಆದರೆ ಬಿಜೆಪಿ ನಾಯಕರು ‘ಕುಟುಂಬ ರಾಜಕಾರಣಕ್ಕೆ’ ಬ್ರೇಕ್ ಹಾಕಬೇಕು ಎನ್ನುವ ಏಕೈಕ ಕಾರಣಕ್ಕೆ ‘ಗೆಲ್ಲುವ ಕುದುರೆ’ಯ ಬದಲಿಗೆ ಬೇರೆಯ ವರಿಗೆ ಟಿಕೆಟ್ ಕೊಟ್ಟು ಕೈಸುಟ್ಟಿಕೊಂಡಿದೆ. ಇದರೊಂದಿಗೆ ಇನ್ನೊಂದು ಕಾರಣವೆಂದರೆ, ಯಡಿಯೂರಪ್ಪ ಅವರನ್ನು ಹಾನಗಲ್ ಕ್ಷೇತ್ರದ ಚುನಾವಣಾ ವಿಷಯದಲ್ಲಿ ವಿಶ್ವಾಸಕ್ಕೆ ತಗೆದುಕೊಳ್ಳದೇ, ಕೇವಲ ಪ್ರಚಾರಕ್ಕೆ ಮಾತ್ರ ಹೋಗಿ ಎನ್ನುವ ರೀತಿಯಲ್ಲಿ ವರಿಷ್ಠರು ನಡೆಸಿಕೊಂಡದ್ದು ಸೋಲಿಗೆ ಕಾರಣ. ಬಿಜೆಪಿಯದ್ದು ಈ ಕಥೆಯಾದರೆ, ಕಾಂಗ್ರೆಸ್ ಈ ಉಪಚುನಾವಣೆಯಲ್ಲಿ ಒಂದು ಸ್ಥಾನವನ್ನು ಹೆಚ್ಚಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಗೆಲ್ಲುವುದೇ ಕಷ್ಟ ಎನ್ನುವ ಕ್ಷೇತ್ರದಲ್ಲಿ ಜಯಭೇರಿ ಭಾರಿಸಿದೆ. ಸಿದ್ದರಾಮಯ್ಯ ಅವರ ಆಪ್ತರಾಗಿರುವ ಶ್ರೀನಿವಾಸ್ ಮಾನೆ ಅವರನ್ನು ಗೆಲ್ಲಿಸಿಕೊಂಡು ಬರಲೇಬೇಕು ಎಂದು ಪಟ್ಟು ಹಿಡಿದು ಸಿದ್ದರಾಮಯ್ಯ ಕೂತಿದ್ದೇ ಈ ಗೆಲವಿಗೆ ಕಾರಣ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಇದರೊಂದಿಗೆ ಮಾನೆ ಅವರು ಸ್ಥಳೀಯವಾಗಿ ಕ್ಷೇತ್ರದ ಮೇಲೆ ಹೊಂದಿರುವ ಹಿಡಿತವೂ ಸೇರಿಕೊಂಡಿದೆ. ಆದರೆ ‘ಅನುಕಂಪದ’ದ ಅಲೆ ಯಲ್ಲಿ ಗೆಲ್ಲಬೇಕು ಎನ್ನುವ ಲೆಕ್ಕಾಚಾರದೊಂದಿಗೆ ಸಿಂದಗಿಯಲ್ಲಿ ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿ ಅವರನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಬಂದಿದ್ದರು. ಜತೆಗೆ ಅವರನ್ನು ಗೆಲ್ಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ಸಿಂದಗಿಯಲ್ಲಿಯೇ ಬೀಡುಬಿಟ್ಟಿದ್ದರು.

ಅಂತಿಮವಾಗಿ ಗೆಲುವು ಲಭಿಸಲಿಲ್ಲ. ಆದ್ದರಿಂದ ಒಂದು ಕ್ಷೇತ್ರದಲ್ಲಿ ಗೆದ್ದ ಖುಷಿಗಿಂತ, ಸುಲಭದ ತುತ್ತು ಎಂದು ಭಾವಿಸಿದ್ದ ಸಿಂದಗಿಯಲ್ಲಿ ಸೋಲುವ ಮೂಲಕ, ಉಪಚುನಾವಣೆಯಲ್ಲಿ ಪೂರ್ಣ ಯಶಸ್ವಿ ಸಾಧಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಕಾಂಗ್ರೆಸ್ ನಾಯಕರು ಹೇಳಿ ಕೊಳ್ಳುತ್ತಿರುವಂತೆ ‘ಈ ಫಲಿತಾಂಶ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಎನ್ನುವುದರಲ್ಲಿ ಅರ್ಥವಿಲ್ಲ’. ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿರುವಂತೆ, ‘ಹಾನಗಲ್ ಚುನಾವಣಾ ಗೆಲವು ಕಾಂಗ್ರೆಸ್ ಆರಂಭ ಎನ್ನುವುದಾದರೆ, ಸಿಂದಗಿ ಚುನಾವಣಾ ಸೋಲು ಅಂತ್ಯ’ ಎನ್ನುವು ದನ್ನು ಒಪ್ಪಲು ನಾಯಕರು ಸಿದ್ದರೇ? ಆದರೆ ಉಪಚುನಾವಣೆಯಿಂದ ಒಂದು ಸ್ಥಾನವನ್ನು ಹೆಚ್ಚಿಸಿಕೊಳ್ಳಲಾಗಿದೆ ಎನ್ನುವಷ್ಟರ ಮಟ್ಟಿಗೆ ಹಾಗೂ ಬಿಜೆಪಿಯ ಭದ್ರಕೋಟೆಯಲ್ಲಿ ಕಿಂಡಿಕೊರೆದು ಗೆಲವು ಸಾಧಿಸಿದೆ ಎನ್ನುವ ಮಟ್ಟಿಗೆ ಸಂತಸಪಡಬಹುದಷ್ಟೇ.

ಕಾಂಗ್ರೆಸ್-ಬಿಜೆಪಿ ತಲಾ ಒಂದೊಂದು ಸ್ಥಾನವನ್ನು ಗೆದ್ದುಕೊಂಡು ಸಮಾಧಾನಗೊಂಡಿವೆ. ಆದರೆ ಪ್ರಾದೇಶಿಕ ಪಕ್ಷ ವಾಗಿರುವ ಜೆಡಿಎಸ್ ಮುಸ್ಲಿಂ ಮತಗಳ ಟ್ರಂಪ್ ಕಾರ್ಡ್ ಮೂಲಕ ಗೆಲ್ಲುವುದಕ್ಕೆ ಪ್ರಯತ್ನಿಸಿತ್ತು. ಚುನಾವಣೆ ವೇಳೆ ಇದೇ ಕಾರಣಕ್ಕೆ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿಯನ್ನು ನಡೆಸಲಾಗಿತ್ತು. ಆದರೆ ಅಂತಿಮವಾಗಿ ಇತ್ತ ಅಲ್ಪಸಂಖ್ಯಾತರೂ ಕೈಹಿಡಿಯದೇ. ಅತ್ತ ಸಿಂದಗಿಯಲ್ಲಿನ ಜೆಡಿಎಸ್ ಮತದಾರರು ಜೆಡಿಎಸ್ ಕೈಹಿಡಿಯದ ಸ್ಥಿತಿ ನಿರ್ಮಿಸಿಕೊಂಡಿದೆ.

ಮುಂದಿನ ಚುನಾವಣೆಯಲ್ಲಿ ‘ಕಿಂಗ್ ಮೇಕರ್’ ಆಗುವ ಉತ್ಸಾಹದಲ್ಲಿದ್ದ ಜೆಡಿಎಸ್ ನಾಯಕರ ಓಲೈಕೆ ರಾಜಕಾರಣದ ತಂತ್ರವನ್ನು ಮತ
ದಾರರು ಒಪ್ಪಿಲ್ಲ. ಆದ್ದರಿಂದಲೇ ಕನಿಷ್ಠ ಠೇವಣಿಯೂ ಸಿಗದ ಸ್ಥಿತಿಯನ್ನು ನಿರ್ಮಿಸಿಕೊಂಡಿದೆ. ಈ ಹಂತದಲ್ಲಿ ಉಪಚುನಾವಣೆ ಬಗ್ಗೆ ನಮಗೆ ಆಸಕ್ತಿ ಇರಲಿಲ್ಲ ಎನ್ನುವ ಮಾತನ್ನು ಕುಮಾರಸ್ವಾಮಿ ಅವರು ಹೇಳಬಹುದು. ಆದರೆ ಮಾಡಿದ ತಂತ್ರಗಾರಿಕೆ ಕೈಕೊಟ್ಟಿದೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು.

ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಇನ್ನೊಂದುವರೆ ವರ್ಷ ಬಾಕಿಯಿರುವಾಗ ನಡೆದಿರುವ ಈ ಉಪಚುನಾವಣಾ ಫಲಿತಾಂಶವನ್ನೇ 2023ರ ಮೂಡ್ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಜನರ ಭಾವನೆ ಅರಿತು, ಅದಕ್ಕೆ ತಕ್ಕಂತೆ ರಾಜಕೀಯ ತಂತ್ರಗಾರಿಕೆಯನ್ನು ಬದಲಿಸಿಕೊಳ್ಳುವುದಕ್ಕೆ ಅವಕಾಶ ದೊರೆಕಿದೆ. ಮೋದಿ ಹೆಸರಲ್ಲಿಯೇ ಚುನಾವಣೆ ಗೆಲ್ಲಬಹುದು ಎನ್ನುವ ಬಿಜೆಪಿ ಲೆಕ್ಕಾಚಾರ, ಬಿಜೆಪಿಯನ್ನು
ಟೀಕಿಸುತ್ತಲ್ಲೇ ಅಧಿಕಾರದ ಗದ್ದುಗೆ ಹಿಡಿಯಬಹುದು ಎನ್ನುವ ಕಾಂಗ್ರೆಸ್ ಯೋಜನೆ ಹಾಗೂ ಪ್ರಾದೇಶಿಕ ಪಕ್ಷ, ಜಾತ್ಯತೀತ ಹಾಗೂ ಭಾವನಾತ್ಮಕ ಹೇಳಿಕೆಗಳಿಂದಲೇ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರಬಹುದು ಎನ್ನುವ ಲೆಕ್ಕಾಚಾರವಂತೂ ತಲೆಕೆಳ ಗಾಗಿದೆ. ಇನ್ನಾದರೂ ಜನರ  ಯೋಚನೆಗೆ ತಕ್ಕಂತೆ ಪಕ್ಷಗಳು ಯೋಚಿಸುತ್ತವೆಯೇ ಎನ್ನುವುದನ್ನು ಕಾದು ನೋಡಬೇಕಿದೆ.