Sunday, 15th December 2024

ದಾರಿ ತಪ್ಪಿದ್ದು ಮಗನಲ್ಲ , ಅವನ ಅಪ್ಪ !

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

1332hampiexpress1509@gmail.com

೨೦೦೯ ರಲ್ಲಿ ಹಾಲಿವುಡ್‌ನ ಪ್ರಖ್ಯಾತ ನಟ, ಸಾಹಸಿಗ ಜಾಕಿ ಚಾನ್ ಅವರನ್ನು ಚೀನಾ ಸರಕಾರ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ಸದ್ಭಾವನಾ
ರಾಯಭಾರಿ ವ್ಯಕ್ತಿಯನ್ನಾಗಿ ನೇಮಿಸುತ್ತದೆ. ಜೀವದ ಹಂಗನ್ನುತೊರೆದು ನೈಜ ಸಾಹಸವನ್ನೇ ಮಾಡುವ ಗಟ್ಟಿಗುಂಡಿಗೆಯ ಜಾಕಿ ಚಾನ್ ಚಿತ್ರಗಳು ನೋಡುಗರ
ಮೈನವಿರೇಳಿಸುತ್ತದೆ. ವಿಶ್ವಾದ್ಯಂತ ಅವರ ಚಲನಚಿತ್ರಗಳನ್ನು ಜನ ನೋಡಿ ಆನಂದಿಸುತ್ತಾರೆ.

೨೦೦೪ ರಲ್ಲಿ ‘ದ ಮಿಥ್’ಎಂಬ ಚಲನಚಿತ್ರದ ಬಹುತೇಕ ಚಿತ್ರೀಕರಣ ನಮ್ಮ ಹಂಪಿ ಆನೆಗುಂದಿ ಪ್ರದೇಶದಲ್ಲೇ ನಡೆದಿತ್ತು. ವಿಜಯನಗರದ ಪೌರಾಣಿಕತೆ, ಇತಿಹಾಸ, ವೈಭವ ಮತ್ತು ಈಗಿನ ಸ್ಮಾರಕಗಳ ಮಹತ್ವವನ್ನುಅರಿತ ಜಾಕಿಚಾನ್ ಅದರ ಹಿನ್ನಲೆಯ ಕಥೆಯನ್ನೇ ಆಧರಿಸಿ ಅದರ ಚಿತ್ರೀಕರಣವನ್ನು ಹಂಪಿಯಲ್ಲಿ ನಡೆಸಿದ್ದರು. ಬಡತನ ಕಷ್ಟದ ಹಾದಿಯಲ್ಲಿ ಚಿತ್ರರಂಗಕ್ಕೆ ಬಂದು ಹಾಲಿವುಡ್‌ಅನ್ನೇ ಆಳಿದ ಜಾಕಿಚಾನ್ ಎಷ್ಟೇ ಶ್ರೀಮಂತ ನಾದರೂ ಸರಳತೆ ಬಿಡಲಿಲ್ಲ. ಆದರೆ ತನ್ನ ಮಗ ತಾನು ಪಟ್ಟ ಕಷ್ಟಗಳನ್ನುಕಾಣದಂತೆ ಮುದ್ದಿನಿಂದ ಬೆಳೆಸಿದ. ಆತನೂ ಚಿತ್ರರಂಗದಲ್ಲಿ ತನ್ನದೇ ಪ್ರತಿಭೆಯಿಂದ ಗುರುತಿಸಿಕೊಂಡು ಬದುಕು ಕಟ್ಟಿಕೊಳ್ಳಲಾರಂಭಿಸಿದ.

ಆದರೆ ಜಾಕಿಚಾನ್ ಬದುಕಿನಲ್ಲಿ ಒಂದು ದುರಂತದ ದಿನ ಎದುರಾಯಿತು. ೨೦೧೪ ರಲ್ಲಿ ೩೨ವಯಸ್ಸಿನ ಮಗ ಜೆಸ್ಸಿ ಚಾನ್ ಡ್ರಗ್ಸ್ ಸಮೇತ ಸಿಕ್ಕಬಿದ್ದ ಪರಿಣಾಮ ಜೈಲು ಪಾಲಾದ. ಆಗ ಜಾಕಿ ಚಾನ್ ತೋರಿದ ನೈತಿಕತೆ ಮತ್ತು ನಡೆದುಕೊಂಡ ರೀತಿ ಇದೆಯಲ್ಲಾ, ಅದು ಜಾಕಿ ಚಾನ್‌ನ ಸಾಮಾಜಿಕ ಬದ್ಧತೆಯನ್ನು ತೋರಿತು. ‘ನನ್ನಮಗ ಡ್ರಗ್ಸ್ ಕೇಸಿನಲ್ಲಿ ಅರೆಸ್ಟ್ ಆಗಿರುವುದಕ್ಕೆ ನಾನು ಜಗತ್ತಿನ ಪ್ರತಿಯೊಬ್ಬರ ಬಳಿಯೂ ಕ್ಷಮೆ ಕೇಳುತ್ತೇನೆ. ಒಬ್ಬನೇ ಮಗನಿದ್ದರೂ ಆತನ ಹೆಸರಿಗೆ ನಾನು ಯಾವ ಆಸ್ತಿಯನ್ನೂ ಬರೆಯುವುದಿಲ್ಲ.

ನಾನು ಗಳಿಸಿದ ಆಸ್ತಿಯನ್ನು ಚಾರಿಟಿಗಳಿಗೆ ಬರೆಯುತ್ತೇನೆ. ಆತನಲ್ಲಿ ನಿಜಕ್ಕೂ ಸ್ವಂತ ಪ್ರತಿಭೆ ಇದ್ದದೇ ಆದರೆ ತನ್ನಜೀವನವನ್ನು ತಾನೇ ರೂಪಿಸಿಕೊಳ್ಳುತ್ತಾನೆ ಇಲ್ಲವಾದರೆ ತಂದೆ ಆಸ್ತಿಯನ್ನು ಖರ್ಚು ಮಾಡುವ ಬೇಜವಾಬ್ದಾರಿ ಮಗ ಎನಿಸಿಕೊಳ್ಳುತ್ತಾನೆ’ ಎಂದಿದ್ದಲ್ಲದೇ, ತನ್ನ ಮಗನ ವಿರುದ್ಧ ನಡೆದ ತನಿಖೆಯಲ್ಲಿ ತನಗೆ ತನ್ನ ಮಗನಿಗೆ ಸಂಬಂಧವಿಲ್ಲದಂತೆ ಸಹಕರಿಸಿದರು. ನಿಜ, ಮಕ್ಕಳು ಮಾಡಿದ ತಪ್ಪಿಗೆ ಹೆತ್ತವರ ಹೊಣೆಗೇಡಿತನ, ಅತಿಯಾದ ಮುದ್ದು, ಅಗತ್ಯಕ್ಕಿಂತ ಹೆಚ್ಚಾದ ಭಯಾನಕ ಸ್ವಾತಂತ್ರ್ಯ, ಅಗತ್ಯಕ್ಕಿಂತ ಹೆಚ್ಚಾದ ಹಣ, ಆಡಂಬರ, ಐಷರಾಮಿ ಸುಖಗಳನ್ನು ಮಕ್ಕಳಿಗೆ ಒದಗಿಸುವುದು ಕೂಡಾ ಸಮಾಜ ಗೇಡಿತನ ಮತ್ತು ವ್ಯಕ್ತಿ ದೋಷಗಳಾಗುತ್ತದೆ.

ಮಕ್ಕಳ ಮೇಲೆ ಗಮನ ಕಡಿಮೆಯಾದಾಗ ಚಾಕಿಚಾನ್‌ರಂಥವರ ಮಗ ಹೀಗೆ ದಾರಿ ತಪ್ಪಿ ಸಿಕ್ಕಿಬೀಳುವುದು ಸಹಜ. ಮತ್ತು ಅದಕ್ಕಿಂತ ವೇಗವಾಗಿ ತಾನು ಎಡವಿದ್ದೆಲ್ಲಿ, ಮಾಡಿದ ತಪ್ಪು ಎಲ್ಲಿ ಎಂದು ಕಂಡು ಕೊಂಡುತಿದ್ದಿಕೊಳ್ಳುವುದಿದೆಯಲ್ಲ ಆತ ನಿಜಕ್ಕೂ ಸಮರ್ಥ ತಂದೆ ಎನಿಸಿಕೊಳ್ಳುತ್ತಾನೆ. ಆದರೆ ಮೊನ್ನೆ ಬಾಲಿವುಡ್‌ನ ಶಾರುಕ್ ಖಾನ್‌ನ ಮಗ ಆರ್ಯನ್ ಖಾನ್ ಎಂಬ ೨೩ ವರ್ಷದ ಮಗ ಡ್ರಗ್ಸ್ ಸಮೇತ ಸಿಕ್ಕಿ ಬಿದ್ದನಲ್ಲ ಆತ ನಿಜಕ್ಕೂ ದಾರಿ ತಪ್ಪಿದ ಮಗನಲ್ಲ. ಅವನಿಗಿಂತ ಮೊದಲು ದಾರಿತಪ್ಪಿದ್ದು ಖುದ್ದು ಅವನ ಅಪ್ಪ ಶಾರುಖ್ ಖಾನ್. ಮಕ್ಕಳು ಮಾಡುವ ಯಾವುದೇ ತಪ್ಪುಗಳಲ್ಲಿ ಪೋಷಕರ ಹೊಣೆಗೇಡಿತನ ಇರಬಹುದು. ಮಕ್ಕಳು ಪೋಷಕರ ಕಣ್ತಪ್ಪಿಸಿ ಕೆಲತಪ್ಪುಗಳನ್ನು ಮಾಡುವುದು ಸಹಜ. ಆ ತಪ್ಪು ಗಮಕ್ಕೆ ಬಂದಾಗ ಪೋಷಕರಿಗೆ ಆಘಾತವಾಗುತ್ತದೆ. ಅದರಿಂದ ಗಾಬರಿ ಗೊಳ್ಳುತ್ತಾರೆ ತಂದೆ ಯಾದವನು ಪಶ್ಚಾತಾಪ ಪಡಬೇಕಾಗುತ್ತದೆ.

ಕೂಡಲೇ ಎಚ್ಚೆತ್ತುಕೊಂಡು ಅಯ್ಯೋ ನನ್ನ ಮಗ ಇಂಥ ಕೆಲಸ ಮಾಡಿ ಬಿಟ್ಟಿದ್ದಾನೆ, ನನಗೆತಿಳಿದೇ ಇರಲಿಲ್ಲ ಎಂದು ಮರುಗುತ್ತಾರೆ. ಇದು ಸಮಾಜದಲ್ಲಿನ ಸಹಜ
ಪ್ರಕ್ರಿಯೆ. ಆದರೆ ಮಗ ಆರ್ಯನ್ ಖಾನ್ ವಿಚಾರ ದಲ್ಲಿ ಅವನಪ್ಪ ಶಾರುಕ್ ಖಾನ್‌ಗೆ ಪಶ್ಚಾತ್ತಾಪ ಪಡುವ ಗಾಬರಿ ಪಡುವ ಅವಕಾಶವೇ ಇಲ್ಲ. ಏಕೆಂದರೆ ಒಂದು
ಸಂದರ್ಶನದಲ್ಲಿ ಆತ ಎಂಥ ತಂದೆಗೇಡಿ ಹೇಳಿಕೆ ಕೊಡುತ್ತಾನೆಂದರೆ ‘ನನ್ನಮಗ ಹುಡುಗಿಯರ ಹಿಂದೆ ಹೋಗಬಹುದು, ಡ್ರಗ್ಸ್ ಸೇವಿಸಬಹುದು, ಸೆಕ್ಸ್
ಮಾಡಬಹುದು ಅಂತ ನಾನು ಅವನಿಗೆ ಹೇಳಿದ್ದೆ. ಲೈಫ್ ಬೇಗ ಸ್ಟಾರ್ಟ್ ಆಗಬೇಕು. ನಾವು ಎಲ್ಲವನ್ನೂ ಎಂಜಾಯ್ ಮಾಡಬೇಕು’. ಎಂದು ಬಹಿರಂಗವಾಗಿ
ಹೇಳಿ ಬಿಡುತ್ತಾನೆ.

ಎಂಥ ನೀಚ ತಂದೆಯೂ ತನ್ನ ಮಗನಿಗೆ ಈ ಮಟ್ಟದ ಅವಕಾಶ ನೀಡುವುದಿಲ್ಲ. ಎಂಥ ಪರಮ ಪಾಪಿ ದುಷ್ಟ ತಂದೆಯೂ ತನ್ನಮಗನ ವಿಚಾರದಲ್ಲಿ ಇಂಥ ಮಾತನ್ನು ಹೇಳಲಾರ. ಬೇಕಾದರೆ ನಾಳೆ ನೇಣುಗಂಬ ಏರಲಿರುವ ಪಾತಕಿ ಉಮೇಶ್ ರೆಡ್ಡಿಯನ್ನು ಕೇಳಿ ನೋಡಿ, ’ನಿನಗೇನಾದರು ಮಗನಿದ್ದಿದ್ದರೆ ಅವನಿಗೆ ಇಂಥ ಮಾತನ್ನು ಹೇಳುತ್ತೀಯಾ?’ಎಂದು. ಮಗ ಕೇಳದಿದ್ದರೂ ಡ್ರಗ್ಸ್ ಸೇವಿಸಲಿ, ಸಿಕ್ಕ ಸಿಕ್ಕ ಹೆಣ್ಣಿನೊಂದಿಗೆ ಸೆಕ್ಸ್ ಮಾಡಲಿ ಎಂದು ಬಹಿರಂಗವಾಗಿ ಮಗನ ವಿಚಾರದಲ್ಲಿ ಹೇಳುವ ತಂದೆ, ಇನ್ನು ಮನೆಯೊಳಗೆ ಅಪ್ಪನ ಬಳಿ ಇನ್ನೆಂತೆಂಥ ಕುಲಗೆಟ್ಟ ಕೆಲಸಗಳನ್ನುಮಾಡಲು ಅವಕಾಶ ಕೇಳಬಹುದು ಊಹಿಸಿ !. ಇಂಥ ಅಸಹಜ, ಸಮಾಜ ವಿರೋಧಿ ಮನಸ್ಥಿತಿ ಹೇಳಿಕೆಗಳೆಲ್ಲಾ ತಾಲಿಬಾನ್ ತತ್ವಗಳಂತೆ ಕಾಣುತ್ತದಲ್ಲವೇ?.

ಒಬ್ಬ ತಂದೆ ಮಗನಿಗೆ ಈ ಮಟ್ಟದ ಮನೆ ಹಾಳು ಕೆಲಸ ಮಾಡು ಎಂದು ಹೇಳುವ ದೇಶ ಇದಲ್ಲ. ಅದಕ್ಕೇ ಇರಬಹುದು ಶಾರುಕ್‌ಖಾನ್‌ಗೆ ಭಾರತವೆಂದರೆ ಅಸಹಿಷ್ಣು ದೇಶವಾಗಿ ಕಾಣುತ್ತಿದೆ. ಮಗನ ಬಂಧನವೇನೋ ಆಯ್ತು, ಆದರೆ ಇಂಥ ದಾರಿ ತಪ್ಪಿದ ಅಪ್ಪ ಮಗನ ಪರ ಇಡೀ ಬಾಲಿವುಡ್ಡೇ ಬೆಂಬಲಕ್ಕೆ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿದೆಯಲ್ಲಾ, ಇದು ಈ ಅಪ್ಪ ಮಗನಿಗಿಂತ ಅಸಹ್ಯವಾಗಿ ಕಾಣುತ್ತಿದೆ. ಮೊದಲನೆಯದಾಗಿ ಸುನಿಲ್ ಶೆಟ್ಟಿ ಎಂಬ ಮಹಾಶಯ ೨೩ ವಯಸ್ಸಿನ ಶಾರುಕ್ ಖಾನ್ ಮಗನನ್ನು ಮಗು ಎಂದು ಕರೆದು ಆತನನ್ನು ಬಂಧಿಸದೆ ಉಸಿರಾಡಲು ಬಿಡಿ ಎಂದು ಹೇಳಿಕೆ ನೀಡುತ್ತಾನೆ.

ಸಲ್ಮಾನ್ ಖಾನ್ ಕೂಡಲೇ ಶಾರುಕ್ ಖಾನ್ ಮನೆಗೆ ತೆರಳಿ ಸಾಂತ್ವನ ಹೇಳುತ್ತಾನೆ, ಪೂಜಾ ಭಟ್, ಹನ್ಸಲ್ ಮೆಹ್ತಾ ರಂಥವರು ಡ್ರಗ್ಸ್ ಗಿರಾಕಿಯನ್ನು ಮಹಾ ಮುಗ್ಧ ಅಮಾಯಕ ಎಂಬಂತೆ ಮಾತನಾಡಿ ಶಾರುಕ್ ಖಾನ್ ಬೆಂಬಲಕ್ಕೆ ನಿಲ್ಲುತ್ತಾರೆ. ಸುಚಿತ್ರ ಕೃಷ್ಣ ಮೂರ್ತಿ ಎಂಬಾಕೆ ‘ಎನ್‌ಸಿಬಿ ಬಾಲಿವುಡ್ ಗುರಿಯಾಗಿಸಿಯೇ ದಾಳಿ ನಡೆಸುತ್ತಿದೆ, ಮಕ್ಕಳು ಕಷ್ಟದಲ್ಲಿದರುವುದನ್ನುನೋಡುವುದಕ್ಕಿಂತ ದೊಡ್ಡ ಕಷ್ಟ ಪೋಷಕರಿಗೆ ಬೇರಾವುದೂ ಇಲ್ಲ’ಎಂದು ಟ್ವೀಟ್ ಮಾಡುತ್ತಾಳೆ. ಇವರೆಲ್ಲರೂ ಅಂದು ಶಾರುಕ್ ಖಾನ್ ತನ್ನಮಗ ಡ್ರಗ್ಸ್ ಸೆಕ್ಸ್ ಮಾಡಬಹುದು ಎಂದು ಹೇಳಿಕೆ ನೀಡಿದಾಗ ‘ಅಯ್ಯೋ ಪಾಪಿ, ಮಗನ ವಿಚಾರದಲ್ಲಿ ಹೀಗೆಲ್ಲಾ ಹೇಳಬಾರದು’ ಎಂದು ಹೇಳಬಹುದಿತ್ತಲ್ಲವೇ?.

ಆಗೆಲ್ಲಾ ಬಾಯಿ ಮುಚ್ಚಿಕೊಂಡು ಸುಮ್ಮನಿದ್ದು ಈಗ ಇಂಥವನ ಪರಿಸ್ಥಿತಿಗೆ ಮರುಕ ಪಟ್ಟು ಬೆಂಬಲಕ್ಕೆ ನಿಲ್ಲುವುದಿದೆಯಲ್ಲಾ, ಅದೇ ನೋಡಿ ಬಾಲಿವುಡ್‌ನ ಇತ್ತೀಚಿನ
ಅಪಾಯಕಾರಿ ಹೆಜ್ಜೆಗಳು. ಭಾರತೀಯ ಪರಂಪರೆ ಸಂಸ್ಕೃತಿಯನ್ನು ಅವಹೇಳನ ಮಾಡುವುದು, ಪಾಕಿಸ್ತಾನ ಸೇರಿದಂತೆ ದೇಶದ ಶತ್ರು ದೇಶಗಳೊಂದಿಗೆ
ವಿಶ್ವಾಸಗಳಿಸುವುದು ಮತ್ತು ಇಂಥ ಡ್ರಗ್ಸ್ ಮಾಫಿಯವನ್ನು ಪೋಷಿಸುವುದೇ ಬಾಲಿವುಡ್‌ನ ಮೊದಲ ಅಜೆಂಡಾ ಇದ್ದಂತಿದೆ.

ಒಂದು ಕಾಲದಲ್ಲಿ ರಾಜ್ ಕಪೂರ್, ಬಚ್ಚನ್, ರಾಜೇಶ್ ಖನ್ನ, ವಿನೋದ್ ಖನ್ನ, ಶತೃಘ್ನ ಸಿನ್ಹ, ಮಿಥುನ್ ಚಕ್ರವರ್ತಿ, ಗೋವಿಂದ ಅವರಿದ್ದ ಬಾಲಿವುಡ್‌ನಲ್ಲಿ ದೇಶ ಮತ್ತ ಸಾಮಾಜಿಕ ಬದ್ಧತೆ ಹೊಂದಿತ್ತು. ಇವರ ನಂತರ ಬಂದ ಈ ಖಾನ್‌ಗಳು ಈ ದೇಶದಲ್ಲೇ ಎಲ್ಲಾ ಅವಕಾಶ ಆಸ್ತಿಗಳನ್ನು ಗಳಿಸಿಕೊಂಡು, ದೇಶದಾದ್ಯಂತ ಅಭಿಮಾನಿಗಳನ್ನು ಪಡೆದು, ತಮ್ಮ ಚಿತ್ರಗಳನ್ನು ವರ್ಷಾನು ಗಟ್ಟಲೆ ಓಡಿಸಿಕೊಂಡು, ಎರಡೆರಡು ಹಿಂದೂ ನಟಿಯರನ್ನು ಮದುವೆಯಾಗಿ, ಎಲ್ಲವನ್ನೂ ಗಳಿಸಿಕೊಂಡ ಮೇಲೆ ಭಾರತವನ್ನು ಅಸಹಿಷ್ಣು ದೇಶ, ಇಲ್ಲಿ ಉಸಿರು ಗಟ್ಟಿಸುವ ವಾತಾವರಣವಿದೆ ಎನ್ನುವ ಮೂಲಕ ತಮ್ಮ ಮಾನಸಿಕ ಮೂಲವ್ಯಾದಿಯನ್ನು ಪ್ರದರ್ಶಿಸುತ್ತಾರೆ. ಆಗಲೇ ನೋಡಿ ಈ ಮಾನಗೇಡಿಗಳನ್ನು ಜನ ಧಿಕ್ಕರಿಸಲು ಆರಂಭಿಸಿದರು.

ಇಬ್ಬರು ಹಿಂದೂ ಹೆಣ್ಣನ್ನುಮದುವೆಯಾಗಿ ಮಕ್ಕಳು ಮಾಡಿ ವಿಚ್ಛೇದನ ನೀಡಿರುವ ಅಮೀರ್ ಖಾನ್ ಎಂಬ ಅಧಮ ತನ್ನ ಪಿಕೆ ಎಂಬ ಚಲನಚಿತ್ರದಲ್ಲಿ ಹಿಂದೂ ದೈವಗಳನ್ನು ಅವಮಾನಿಸುತ್ತಾನೆ, ಟಿವಿ ಷೋನಲ್ಲಿ ಹಿಂದೂಗಳ ಆಸ್ತಿಕತೆ ಆಚರಣೆಯನ್ನು ಗೇಲಿ ಮಾಡುತ್ತಾನೆ. ಇತ್ತೀಚೆಗೆ ಟೈಯರ್‌ವೊಂದರ ಜಾಹಿರಾತಿನಲ್ಲಿ
ರಸ್ತೆಗಳಿರುವುದು ಪಟಾಕಿ ಹೊಡೆಯುವುದಕ್ಕಲ್ಲ, ಗಾಡಿ ಓಡಿಸಲು ಎಂದು ಸಂದೇಶ ನೀಡುತ್ತಾನೆ. ಹಾಗೆಯೇ ರಸ್ತೆಗಳಿರುವುದು ನಮಾಜ್ ಮಾಡುವುದಕ್ಕೂ ಅಲ್ಲಾ
ಎಂದು ಈತ ಹೇಳುವುದಿಲ್ಲ. ಸೈಫ್ ಆಲಿ ಖಾನ್ ಕೂಡಾ ಇಬ್ಬರು ಹಿಂದೂ ಹೆಣ್ಣನ್ನು ಮದುವೆಯಾಗುತ್ತಾನೆ.

ಕರಿನಾ ಹೆತ್ತ ಮಗುವಿಗೆ ಆಕ್ರಮಣ ಕಾರ ತೈಮೂರ್‌ನ ಹೆಸರಿಡುತ್ತಾನೆ. ಇದನ್ನುಕಂಡ ನೆಟ್ಟಿಗರು ಕರಿನಾಳ ಮುಂದಿನ ಮಕ್ಕಳಿಗೆ ಖಿಲ್ಜಿ, ಘಜ್ನಿ, ತುಘಲಕ್,
ಟಿಪ್ಪುಸುಲ್ತಾನ್ ಹೆಸರುಗಳನ್ನು ಸೂಚಿಸಿ ಟ್ರೋಲ್ ಮಾಡುತ್ತಾರೆ. ಇಂಥ ಮನಸ್ಥಿತಿಯಲ್ಲಿರುವ ಬಾಲಿವುಡ್ ನ ದೇಶದ ಜನ ತಿರಸ್ಕರಿಸುತ್ತಿದ್ದಾರೆ. ಈಗ ಶಾರುಕ್ ಖಾನ್ ಮಗನೊಬ್ಬನ ರಾದ್ಧಾಂತಗಳು ಬೆಳಕಿಗೆ ಬಂದಿದೆ. ಆದರೆ ನಮ್ಮ ದೇಶದಲ್ಲಿ ಇಂಥ ಅನೇಕ ನಟ ನಟಿಯರ, ಸೆಲೆಬ್ರಟಿಗಳ, ರಾಜಕಾರಣಿಗಳ, ಉದ್ಯಮಿ ಗಳ ಮಕ್ಕಳು ಇಂಥದೇ ವ್ಯಸನ ಲೋಕದಲ್ಲಿರುವುದು ಸುಳ್ಳಲ್ಲ. ಇಂಥವರ ಮಕ್ಕಳಿಗಾಗಿಯೇ ದೇಶ ವಿದೇಶಗಳಲ್ಲಿ ಐಷರಾಮಿ ಪಾರ್ಟಿ ಬಾರು ಕ್ಲಬ್ ಪಬ್ ಗೇಮು ಜೂಜು ರಾಸಲೀಲೆಗಳನ್ನು ಅನುಭವಿಸುವ ಅಡ್ಡಗಳು ತಲೆಯೆತ್ತಿವೆ.

ನಾಗರ ಪಂಚಮಿಯಂದು ಹುತ್ತಕ್ಕೆ ಎರೆಯುವ ಹಾಲನ್ನು, ದೇವರ ಮೂರ್ತಿಯ ಅಭಿಷೇಕಕ್ಕೆ ಬಳಸುವ ಹಾಲನ್ನುಉಳಿಸಿ ಎಂದು ಬಿಟ್ಟಿ ಸಲಹೆ ನೀಡುವ ಅಯೋಗ್ಯರು ಇಂಥ ಲಜ್ಜೆಗೆಟ್ಟ ಮಕ್ಕಳಿಗೆ ಮತ್ತು ಪೋಷಕರಿಗೆ ಸರಳ ಜೀವನ ನಡೆಸಿ ಎಂದು ಹೇಳುವುದಿಲ್ಲ. ಬೈಜುಸ್‌ಎಂಬ ಮಕ್ಕಳ ಕಲಿಕೆಯ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವ ಶಾರುಕ್ ಖಾನ್ ಸ್ವತಃ ತನ್ನ ಹೆತ್ತ ಮಗ ದಾರಿ ತಪ್ಪಲು ಬೇಕಾದ ಎಲ್ಲಾ ವ್ಯವಸ್ಥೆ ಸ್ವಾತಂತ್ರ್ಯ ಸ್ವೇಚ್ಛಾಚಾರಕ್ಕೆ ಕಾರಣನಾಗಿದ್ದಾನೆ. ಆದರೆ ಯಾವ ಬುದ್ಧಿಜೀವಿಗಳು, ಪ್ರಗತಿಪರರು, ವಿಚಾರ ವ್ಯಾದಿಗಳು, ಎಡಬಿಡಂಗಿ ರಾಜಕಾರಣಿಗಳು ಇಂಥ ಅಪ್ಪ ಮಕ್ಕಳನ್ನು ಖಂಡಿಸುವುದಿಲ್ಲ.

ಡ್ರಗ್ಸ್ ವಿಚಾರ ತನಿಖಾ ಮತ್ತು ನ್ಯಾಯಾಲಯದ ವ್ಯಾಪ್ತಿಯಲ್ಲಿದ್ದರೂ ಜನ ಇಂಥ ಸೆಲ ಬ್ರೇಟಿಗಳ ಯೋಗ್ಯತೆಗಳನ್ನು ಬಹುಬೇಗ ನಿರ್ಧರಿಸಿ ಬಿಡುತ್ತಾರೆ.
ಅಂದಹಾಗೆ ಮೊನ್ನೆ ದೇಶದಲ್ಲಿ ನಾಲ್ಕು ಸಾವಿರ ಮಂದಿ ಸಂಘಪರಿವಾರದ ಕಾರ್ಯಕರ್ತರು ಅಧಿಕಾರಿಗಳಾಗಿದ್ದಾರೆ ಎಂದು ಯಾವುದೋ ಭಯೋತ್ಪಾದಕರನ್ನು ಭ್ರಷ್ಟರನ್ನು ಗುರುತಿಸಿದಂತೆ ಹೇಳಿಕೆ ನೀಡಿದರಲ್ಲಾ, ಅವರೆಲ್ಲರೂ ಸಂವಿಧಾನದ ಪ್ರಕಾರ ಅವಕಾಶ ಗಳಿಸಿ ಕಾರ್ಯಾಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಹೊರತು ಹೀಗೆ ದಾರಿತಪ್ಪಿದ ಮಕ್ಕಳಾಗಿ, ಡಾಕ್ಟರ್, ಇಂಜಿನೀಯರುಗಳಾಗಿ ಭಯೋತ್ಪಾದ ಸಂಘಟನೆಗಳೊಂದಿಗೆ ಗುರುತಿಸಿಕೊಂಡು ಸಿಕ್ಕಬಿದ್ದರಲ್ಲಾ ಅವರನ್ನುಎಂದಾದರು ಇವರುಗಳು ಖಂಡಿಸಿದ್ದಾರಾ?.ಆರ್‌ಎಸ್‌ಎಸ್ ಎಂಬ ದೇಶ ಸೇವೆಯ ಮಂದಿಯನ್ನು ಬಿಟ್ಟು, ರಾಜ್ಯದಲ್ಲಿ ಯಾರ್ಯಾರ ಮಕ್ಕಳು ಹಾದಿ ತಪ್ಪುತ್ತಿದ್ದಾರೆ, ಯಾರ್ಯಾರು ಎಷ್ಟೆಷ್ಟು ಅಕ್ರಮ ಆಸ್ತಿ ಗಳಿಸಿದ್ದಾರೆ, ಅಕ್ರಮ ಸಂಬಂಧವಿರಿಸಿ ಕೊಂಡಿದ್ದಾರೆ, ಸರಕಾರಿ ಕಚೇರಿಗಳಲ್ಲಿ ಎಷ್ಟು ಮಂದಿ ಲಂಚಾವತಾರಿಗಳು ಭ್ರಷ್ಟರು ಇದ್ದಾರೆ ಎಂಬುದನ್ನಾದರೂ ಅಧ್ಯಯನ ಮಾಡಿ ಲೆಕ್ಕ ಹೇಳಿದರೆ ಅದರಿಂದ ದೇಶಕ್ಕೆ ಒಳ್ಳೆಯದಾಗುತ್ತದೆ ಮತ್ತು ಯೋಗ್ಯ
ನಾಯಕ ಎನಿಸಿಕೊಳ್ಳಬಹುದು. ಕನಿಷ್ಠ ತಮ್ಮ ಪಕ್ಷದಲ್ಲೇ ಎಷ್ಟು ಮಂದಿ ಕಿತ್ತುಕೊಂಡು ಹೋಗುತ್ತಿದ್ದಾರೆ ಎಂಬುದನ್ನಾದರೂ ಲೆಕ್ಕ ಹಾಕಿಕೊಂಡರೆ ಅವರಿಗೇ
ಅನುಕೂಲ.

ಪ್ರಸ್ತುತ ನೈತಿಕತೆ, ಜ್ಞಾನ, ವಿವೇಕ, ಲೋಕ ಜ್ಞಾನ ಇದ್ದವರು ಖಂಡಿಸ ಬೇಕಾದ್ದು ಆರ್‌ಸ್‌ಎಸ್‌ನಲ್ಲ. ಮೇಲೆ ಹೇಳಲಾದ ಸಮಾಜಗೇಡಿಗಳನ್ನ, ಸಾಮಾಜಿಕ
ಬದ್ಧತೆ ಇಲ್ಲದವರನ್ನ. ಹೆತ್ತವರು ಎಷ್ಟೇ ಆಗರ್ಭ ಶ್ರೀಮಂತರಾದರೂ ಮಕ್ಕಳನ್ನು ಸಾಮಾನ್ಯರಂತೆ, ಬಡತನದಲ್ಲಿದ್ದಂತೆ, ಸಣ್ಣ ಪುಟ್ಟ ಕಷ್ಟ, ಸವಾಲಿನ ಹಾದಿಯಲ್ಲಿ ಬೆಳೆಸಿದರೆ ಅವರ ಬದುಕು ಪಕ್ವವಾಗುತ್ತದೆ. ಇದೇ ಪಾಠವನ್ನೇ ನಮ್ಮ ಪುರಾಣಗಳೂ ಹೇಳಿದ್ದು. ಸತ್ಯಹರಿಶ್ಚಂದ್ರ, ಶ್ರೀರಾಮ ಲಕ್ಷ್ಮಣ ಹನುಮ, ಪಾಂಡವರು ವನವಾಸ ಅನುಭವಿಸಿ ಮಹಾ ಪುರುಷರಾಗಿದ್ದು ಮತ್ತು ವಿಲಾಸಿತನ ಐಷರಾಮಿ ಸುಖ ಬದುಕು ಕಂಡ ರಾವಣ ಕೌರವರು ಸೋತಿದ್ದು. ಆಯ್ಕೆ ಪೋಷಕರದ್ದು. ಹಾಗಂತ ವನವಾಸವಲ್ಲದಿದ್ದರೂ ಮಕ್ಕಳು ಎಂತೆಂಥವರ ಸಹವಾಸ ಮಾಡುತ್ತಿದ್ದರೆಂಬುದರ ಬಗ್ಗೆ ಸದಾ ಜಾಗೃತರಾಗಿದ್ದರಷ್ಟೇ ಸಾಕು. ಮನೆ ಮತ್ತು ಸಮಾಜ ಆರೋಗ್ಯಕರವಾಗಿರುತ್ತದೆ