Monday, 16th September 2024

ನೋಟಾ ಒತ್ತುವ ಮುನ್ನ ಸ್ವಲ್ಪ ಯೋಚಿಸಿ

ಲೋಕಸಮರ

ನರೇಂದ್ರ ಎಸ್.ಗಂಗೊಳ್ಳಿ

‘ನೋಟಾ’ ಆಯ್ಕೆಯನ್ನು ಒತ್ತುವ ಅವಕಾಶವು ನಮಗಿಷ್ಟವಾಗದ ಅಭ್ಯರ್ಥಿಗಳನ್ನು ತಿರಸ್ಕರಿಸಲು ಇರುವ ಏಕೈಕ ಅಸ್ತ್ರ ಎಂದು ಮತದಾರರು ಪರಿಭಾವಿಸಿ ಆ ಗುಂಡಿಯನ್ನು ಒತ್ತುವುದು ಎಷ್ಟು ಸಮಂಜಸ? ಅದು ಎಷ್ಟರ ಮಟ್ಟಿಗೆ ಸಕಾರಾತ್ಮಕ ಪರಿಣಾಮವನ್ನು ಬೀರಬಲ್ಲದು? ಈ ಕುರಿತು ನಾವೆಲ್ಲರೂ ಆಲೋಚಿಸಬೇಕಾದ ಅಗತ್ಯವಿದೆ.

ಮತದಾನದ ದಿನಾಂಕ ಘೋಷಣೆಯಾಗಿ ಅಭ್ಯರ್ಥಿಗಳ ಪಟ್ಟಿ ಹೊರಬೀಳುತ್ತಲೆ ಆಯಾ ಪಕ್ಷಗಳ ಬೆಂಬಲಿಗರು ತಮ್ಮ ಅಭ್ಯರ್ಥಿ ಗಳನ್ನು ಗೆಲ್ಲಿಸುವುದಕ್ಕಾಗಿ ತಂತ್ರ-ಪ್ರತಿತಂತ್ರಗಳನ್ನು ಹೆಣೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕೆಲವರಂತೂ ವಿಷಯವೇ ಇಲ್ಲದೆ ಅನಗತ್ಯವಾಗಿ ಈ ದೇಶದ ಪ್ರಧಾನಿಯನ್ನು, ಅವರ ಅಭಿವೃದ್ಧಿ ಕೆಲಸಗಳನ್ನು ಟೀಕೆ ಮಾಡುವುದರಲ್ಲೇ ನಿರತರಾಗಿ ತಮ್ಮ ಖಾಲಿ ತಲೆಯನ್ನು ಮತದಾರೆದುರು ತೆರೆದಿಡುತ್ತಿರುವುದು ಹಾಸ್ಯಾಸ್ಪದ ಸಂಗತಿ.

ಕಳೆದ ಒಂದು ದಶಕದಲ್ಲಿ ದೇಶ ಕಂಡಿರುವ ಅದ್ಭುತವಾದ ಪ್ರಗತಿಯೂ ಇವರ ಕಣ್ಣಿಗೆ ಕಾಣಿಸುತ್ತಿಲ್ಲ ಎಂದೇನಲ್ಲ. ಆದರೆ ಅಧಿಕಾರ ಪಡೆಯುವ ಹಪಾಹಪಿತನ ಮತ್ತು ಅಭಿವೃದ್ಧಿ ಸಹಿಸದ ಮನಸ್ಥಿತಿ ಇಂಥವರ ಹೃದಯ-ಮನಸ್ಸು-ಕಣ್ಣುಗಳನ್ನು ಮರೆ
ಮಾಚಿಬಿಟ್ಟಿವೆ. ಸ್ವಾಭಿಮಾನವನ್ನೇ ಮರೆತು ಆತ್ಮದ್ರೋಹ ಮಾಡಿಕೊಂಡು ಬದುಕುವವರಿಗೆ ಯಾರೊಬ್ಬರೂ ತಿಳಿಹೇಳಲಾಗದು.
ಪ್ರಜಾಪ್ರಭುತ್ವದಲ್ಲಿ ಮತದಾರರೇ ಪ್ರಭುಗಳು.

ಅವರಿಗೆ ಸೂಕ್ತ ನಾಯಕನನ್ನು ಆರಿಸುವ ಹಕ್ಕನ್ನು ನೀಡುವುದೇ ಮತದಾನದ ಪರಮ ಉದ್ದೇಶ. ಚುನಾವಣೆಗೆ ನಿಂತ ಅಭ್ಯರ್ಥಿ ಗಳಲ್ಲಿ ಯಾರೊಬ್ಬರೂ ಸರಿಯಾಗಿಲ್ಲ ಅಂತನ್ನಿಸಿದರೆ ಎಲ್ಲರನ್ನೂ ತಿರಸ್ಕರಿಸಿ ‘ನೋಟಾ’ (ಮೇಲಿನ ಯಾರೂ ಅಲ್ಲ) ಗುಂಡಿ ಯನ್ನು ಒತ್ತುವ ಅವಕಾಶವನ್ನು ಕೂಡ ಚುನಾವಣಾ ಆಯೋಗ ನೀಡಿದೆ. ಅದನ್ನು ಬಳಸಿ ನಾವು ನಮ್ಮ ವಿರೋಧವನ್ನು ಖಂಡಿತ ತೋರಿಸಬಹುದು.

‘ಈ ಅವಕಾಶವು ನಮಗಿಷ್ಟವಾಗದ ಅಭ್ಯರ್ಥಿಗಳನ್ನು ತಿರಸ್ಕರಿಸಲು ಇರುವ ಏಕೈಕ ಅಸ್ತ್ರ’ ಎಂದು ಮತದಾರರು ಪರಿಭಾವಿಸಿ ‘ನೋಟಾ’ ಒತ್ತುವುದು ಎಷ್ಟು ಸಮಂಜಸ? ಅದು ಎಷ್ಟರ ಮಟ್ಟಿಗೆ ಧನಾತ್ಮಕ ಪರಿಣಾಮವನ್ನು ಬೀರಬಲ್ಲದು? ಎನ್ನುವುದನ್ನು ಆಲೋಚಿಸಬೇಕಾದ ಅಗತ್ಯವಿದೆ. ಈ ನಡುವೆ ಕೆಲವೊಂದು ಪ್ರಕರಣದ ಹೋರಾಟ ಗಾರರು, ನ್ಯಾಯ ಸಿಗುತ್ತಿಲ್ಲ ಎನ್ನುವ ಕಾರಣ ಹೇಳಿ ಕೊಂಡು ‘ನೋಟಾ ಅಭಿಯಾನ’ ಶುರುಹಚ್ಚಿ ಕೊಂಡಿರುವುದು ಕೂಡ ಪ್ರಶ್ನಾರ್ಹವೇ.

ಸರಿ. ‘ನೋಟಾ’ ನಮ್ಮ ಹಕ್ಕಿರಬಹುದು; ಆದರೆ ‘ನೋಟಾ’ವನ್ನು ಒತ್ತುವ ಮೊದಲು ಸ್ವಲ್ಪ ಯೋಚನೆ ಮಾಡುವುದೊಳ್ಳೆಯದು. ಪ್ರಸಕ್ತ ಕಾಲ ಘಟ್ಟದಲ್ಲಿ ರಾಜಕೀಯ ಎನ್ನುವುದೇ ಬಹಳಷ್ಟು ಅಪ್ರಾಮಾಣಿಕರಿಂದ ತುಂಬಿ ತುಳುಕುತ್ತಿದೆ. ಬೆರಳೆಣಿಕೆಯಷ್ಟು ಅಭ್ಯರ್ಥಿಗಳನ್ನು ಹೊರತು ಪಡಿಸಿದರೆ ರಾಜಕೀಯ ಕ್ಷೇತ್ರದಲ್ಲಿನ ಉಳಿದ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಸ್ವಲ್ಪವಾ
ದರೂ ಅಪ್ರಾಮಾಣಿಕರೇ ಆಗಿದ್ದಾರೆ. ಸಂದರ್ಭಕ್ಕನುಸಾರವಾಗಿ ಸ್ವಜನ ಪಕ್ಷಪಾತ, ಕೋಮು ಒಲೈಕೆ, ಭ್ರಷ್ಟಾಚಾರ ಇತ್ಯಾದಿಗಳಲ್ಲಿ ಹೆಸರು ಕೆಡಿಸಿಕೊಂಡವರೂ ಇದ್ದಾರೆ. ಪರಿಸ್ಥಿತಿ ಹೀಗಿರುವಾಗ ನಾವು ಇವರೆಲ್ಲರನ್ನೂ ತಿರಸ್ಕರಿಸಲೇಬೇಕಾಗುತ್ತದೆ.

ಶೇ.೧೦೦ರಷ್ಟು ಒಳ್ಳೆಯವರು ಇದ್ದಾರಾ ಅಂತ ಹುಡುಕಿದರೆ ಅದು ಈ ಜಗತ್ತಿನಲ್ಲೇ ಸಾಧ್ಯವಿರದ ಸಂಗತಿ. ಅಷ್ಟಕ್ಕೂ ಶೇ.೧೦೦ ರಷ್ಟು ಒಳ್ಳೆಯ ಜನರನ್ನು ಹುಡುಕುವ ಮೊದಲು ನಾವು ಶೇ.೧೦೦ರಷ್ಟು ಒಳ್ಳೆಯವರಾ ಎನ್ನುವುದನ್ನೂ ಪರಿಶೀಲಿಸ ಬೇಕಲ್ಲವೆ? ನಮ್ಮಲ್ಲಿಲ್ಲದ ಪರಿಪೂರ್ಣತೆಯನ್ನು ಬೇರೆಯವರಲ್ಲಿ ಹುಡುಕುವುದು ತಪ್ಪಾದೀತು. ಆ ವಿಚಾರ ಸದ್ಯಕ್ಕೆ ಒತ್ತಟ್ಟಿಗಿಡಿ.

ಹಾಗೆಂದು ‘ನೋಟಾ’ ಒತ್ತಿ ನಾವು ಬುದ್ಧಿವಂತರಾಗುತ್ತೇವಾ? ಎಂದು ಕೇಳಿದರೆ ಅದು ಖಂಡಿತಾ ಇಲ್ಲ. ಯಾಕೆಂದರೆ ಸದ್ಯದ ಪರಿಸ್ಥಿತಿಯಲ್ಲಿ ‘ನೋಟಾ’ದ ಜ್ಞಾನ ಎಲ್ಲರಿಗೂ ಇದ್ದರೂ ಅದನ್ನು ಬಳಸುವ ಛಾತಿಯನ್ನು ಸಹಸ್ರಾರು ಜನರು ಒಟ್ಟಿಗೆ ತೋರುವು ದಿಲ್ಲ ಎನ್ನುವುದು ವಾಸ್ತವ. ಇರುವವರಲ್ಲೇ ಉತ್ತಮರನ್ನು ಆರಿಸುವಂಥ ಕೆಲಸವನ್ನು ಮಾಡಬೇಕಾಗಿರುವುದು ಇಂದಿನ ಅನಿವಾರ್ಯತೆ. ಎಲ್ಲಕ್ಕಿಂತ ಹೆಚ್ಚಾಗಿ ದೇಶದ ಸಮಗ್ರತೆ, ಅಭಿವೃದ್ಧಿ ಮತ್ತು ನಾಯಕತ್ವದ ವಿಚಾರ ಬಂದಾಗ ಮತದಾರರು ಕೇಂದ್ರದ ನಾಯಕತ್ವವನ್ನು ಬೆಂಬಲಿಸುವ ದೃಷ್ಟಿಯಿಂದ ಅದೇ ಪಕ್ಷದ ಸ್ಥಳೀಯ ಅಭ್ಯರ್ಥಿಗಳ ಗುಣಾವಗುಣಗಳನ್ನು ಪರಾಮ ರ್ಶಿಸದೆ ಅವರನ್ನು ಗೆಲ್ಲಿಸಿದ ಬಹಳಷ್ಟು ಉದಾಹರಣೆಗಳು ಕಣ್ಣ ಮುಂದಿವೆ.

ದೇಶದ ವಿಚಾರ ಬಂದಾಗ ಇಂಥ ಉತ್ತಮ ಹೊಂದಾಣಿಕೆಗಳು ಮತದಾರರಿಗೂ ಅನಿವಾರ್ಯ ಎನಿಸುತ್ತದೆ. ಇತ್ತೀಚೆಗೆ ಜಾಲತಾಣ ಗಳಲ್ಲಿ ಬೇರೆ ಬೇರೆ ಕಾರಣಗಳನ್ನು ನೀಡಿ ಕೆಲವೊಂದಷ್ಟು ಜನ ‘ನೋಟಾ ಅಭಿಯಾನ’ವನ್ನು ಜಾರಿಯಲ್ಲಿಟ್ಟಿದ್ದಾರೆ. ಅದಕ್ಕೆ ತೀರಾ ಸಕಾರಾತ್ಮಕ ಪ್ರತಿಕ್ರಿಯೆಗಳು ಬರುತ್ತಿಲ್ಲ ಎನ್ನುವುದು ಬೇರೆ ಮಾತು. ‘ಚುನಾವಣೆಗೆ ನಿಂತ ಅಭ್ಯರ್ಥಿಗಳು ಯಾರೊಬ್ಬರೂ ಸರಿ ಇಲ್ಲ.

ಧರ್ಮ ರಾಜಕಾರಣ ಮಾಡುತ್ತಾರೆ, ಜಾತಿವಾದಿ, ಕೋಮುವಾದಿ, ಅವಕಾಶವಾದಿ; ಒಂದು ಪಕ್ಷವು ನಮ್ಮ ಜಾತಿಯವರಿಗೆ ಟಿಕೆಟ್ ಕೊಟ್ಟಿಲ್ಲ, ಪಕ್ಷದಲ್ಲಿ ನಿರಂತರವಾಗಿ ದುಡಿದವರಿಗೆ ಟಿಕೆಟ್ ನೀಡಿಲ್ಲ. ಹಾಗೆಂದು ಬೇರೆ ಪಕ್ಷವನ್ನು ಬೆಂಬಲಿಸುವ ಮನಸ್ಸಿಲ್ಲ. ಈ ಪಕ್ಷಕ್ಕೆ ಮತ ಹಾಕುವುದೂ ಇಲ್ಲ’ ಎನ್ನುವಂಥ ಹಲವಾರು ಕಾರಣಗಳನ್ನು ಈ ‘ನೋಟಾ’ ಬೆಂಬಲಿಗರು ನೀಡುತ್ತಾರೆ.

ಸರಿ, ಅವರು ಹೇಳುವುದನ್ನು ಒಂದೇಟಿಗೆ ತಳ್ಳಿ ಹಾಕಲು ಖಂಡಿತಾ ಸಾಧ್ಯವಿಲ್ಲ. ಆದರೆ ‘ನೋಟಾ’ ಒತ್ತುವ ಮುನ್ನ ಹಲವಾರು ವಿಚಾರಗಳ ಬಗೆಗೆ ನಾವು ಚಿಂತನೆ ನಡೆಸಲೇಬೇಕಿದೆ. ನಿಜ, ಅನರ್ಹರನ್ನು ತಿರಸ್ಕರಿಸಲೇಬೇಕು. ಆದರೆ ಅರ್ಹರೆನ್ನಿಸಿಕೊಂಡ ಜನ ಚುನಾವಣೆಗೆ ನಿಲ್ಲಲು ನಮ್ಮಲ್ಲಿ ಎಷ್ಟು ಮಂದಿ ತಯಾರಿದ್ದಾರೆ? ಆಕಸ್ಮಾತ್ ಎಲ್ಲರೂ ‘ನೋಟಾ’ ಗುಂಡಿ ಅದುಮಿ ಮತ್ತೆ ಚುನಾವಣೆ ನಡೆದರೆ ಅಭ್ಯರ್ಥಿಗಳ ಆಯ್ಕೆ ಮಾಡುವುದಾರು? ಹೊಸದಾಗಿ ನಿಲ್ಲುವ ಅಭ್ಯರ್ಥಿಗಳು ಸರಿ ಇಲ್ಲ ಎಂದಾದಲ್ಲಿ ಮತ್ತೆ ಮತ್ತೆ ‘ನೋಟಾ’ ಒತ್ತುತ್ತಾ ಕುಳಿತುಕೊಳ್ಳಲಾಗುವುದೇ? ಈ ಸಮಸ್ಯೆಗೆ ಮುಕ್ತಿ ಎಂದು? ಅಷ್ಟಕ್ಕೂ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾಮಾಣಿ
ಕರು ನಿಲ್ಲುತ್ತಾರೆ ಎನ್ನುವುದು ಸದ್ಯಕ್ಕಂತೂ ತೀರಾ ಕನಸಿನ ಮಾತು.

ವಸ್ತುಸ್ಥಿತಿ ಹೀಗಿರುವಾಗ, ‘ನಮ್ಮ ಜಾತಿಗೆ ಅವಮಾನವಾಯಿತು, ನಮ್ಮ ಸಮಸ್ಯೆಗೆ ಸ್ಪಂದಿಸಲಿಲ್ಲ, ಕಷ್ಟ ಕಾಲದಲ್ಲಿ ನೆರವಾಗ ಲಿಲ್ಲ’ ಎಂದೆಲ್ಲಾ ಕಾರಣಗಳನ್ನೊಡ್ಡಿ, ಇರುವವರಲ್ಲಿ ಪರವಾಗಿಲ್ಲ ಎನ್ನುವ ಅಭ್ಯರ್ಥಿಗೆ ಮತದಾನ ಮಾಡುವುದು ಬಿಟ್ಟು ನೂರಾರು ಜನ ‘ನೋಟಾ’ ಒತ್ತಿದರು ಅಂದಿಟ್ಟುಕೊಳ್ಳಿ. ಅದರಿಂದಾಗಿ ಇದ್ದುದರಲ್ಲೇ ಸ್ವಲ್ಪ ಉತ್ತಮವಾಗಿದ್ದ ವ್ಯಕ್ತಿ ಸೋತು, ಎದುರಾಳಿ ಯಾಗಿರುವ ಇವನಿಗಿಂತ ಕೆಳಮಟ್ಟದ ಅಭ್ಯರ್ಥಿ ಅದರ ಲಾಭವನ್ನು ಪಡೆದು ಗೆದ್ದು ಬಂದರೆ ಮುಂದಾಗುವ ಸಮಸ್ಯೆಗಳನ್ನು ಪ್ರಶ್ನಿಸುವಾಗ ಆತ್ಮಸಾಕ್ಷಿ ಕೆದಕದೆ ಇರುತ್ತದೆಯೇ? ಇದು ಕೆಟ್ಟ ಅಭ್ಯರ್ಥಿಯ ಆಯ್ಕೆಗೆ ನಾವೇ ಕಾರಣರಾದಂತೆ ಆಗುವುದಿಲ್ಲವೆ? ಒಂದಿಡೀ ಕ್ಷೇತ್ರದ ಜನ ‘ನೋಟಾ’ ಒತ್ತುವುದಾದರೆ ಒಳ್ಳೆಯದು.

ಹಾಗಾಗದು ಎಂದ ಮೇಲೆ ‘ನೋಟಾ’ ಬಿಟ್ಟು, ಇರುವವರಲ್ಲಿ ಪರವಾಗಿಲ್ಲ ಎನ್ನುವಂಥ ಅಭ್ಯರ್ಥಿಗೆ ಮತ ನೀಡುವುದೇ ವಿವೇಕ ವಂತರು ಅನುಸರಿಸುವ ಮಾರ್ಗ. ನಮ್ಮ ‘ನೋಟಾ’ ಮತದಾನವು ಯಾವುದೇ ಕಾರಣಕ್ಕೂ ಅಪಾತ್ರರ ಗೆಲುವಿಗೆ ಕಾರಣವಾಗ ದಿರಲಿ. ‘ನೋಟಾ’ ಒತ್ತಿದರೂ ಅಡ್ಡಿಯಿಲ್ಲ, ಆದರೆ ‘ನೋಟು’ ನೋಡಿ ‘ವೋಟು’ ಒತ್ತದಿರೋಣ. ಮತದಾನದ ದಿನದಂದು ತಪ್ಪದೇ ಮತದಾನ ಮಾಡೋಣ.

(ಲೇಖಕರು ವಾಣಿಜ್ಯಶಾಸ್ತ್ರದ ಉಪನ್ಯಾಸಕರು)

Leave a Reply

Your email address will not be published. Required fields are marked *