Sunday, 8th September 2024

ಚುನಾವಣೆ ಕಣ: ಅನುಭವದ ಕಣಜ

ವಿದೇಶವಾಸಿ

dhyapaa@gmail.com

ಪುನರಪಿ ಜನರು, ಪುನರಪಿ ಮತದಾನ, ಪುನರಪಿ ಜನನಿ, ಜಠರ, ಶಯನದ ಆಶ್ವಾಸನೆ! ಮುಗ್ಧ ಜನರನ್ನು ಇನ್ನಷ್ಟು ಯಾಮಾರಿ ಸುವ ಪ್ರಯತ್ನ, ಅಲ್ಲ ಸಾಹಸ! ಎಲ್ಲ ಸೀಯರೂ ತಾಯಂದಿರಾಗುತ್ತಿದ್ದಾರೆ ಎಂದರೆ, ಪ್ರತಿಯೊಬ್ಬ ಮತದಾರನ ಹೊಟ್ಟೆಯೂ ಹಸಿಯುತ್ತದೆ ಎಂದಾದರೆ, ಪ್ರತಿಯೊಬ್ಬರ ತಲೆಯ ಮೇಲೆ ಸೂರಿನ ಅವಶ್ಯಕತೆಯಿದೆ ಎಂದು ರಾಜಕಾರಣಿಗಳಿಗೆ ನೆನಪಾದರೆ ಅದು ಖಂಡಿತವಾಗಿಯೂ ಚುನಾವಣೆಯ ಕಾಲ.

ಭಾರತದ ಚುನಾವಣೆ ಅತ್ಯಂತ ವಿಶೇಷವಾದದ್ದು. ಇಷ್ಟು ವಿಸ್ತಾರವಾದ ಭೂಪ್ರದೇಶ, ಇಷ್ಟೊಂದು ಜನಸಂಖ್ಯೆ, ಪ್ರತಿ ನೂರು-ಇನ್ನೂರು ಕಿ.ಮೀ. ಅಂತರದಲ್ಲಿ ಬದಲಾಗುವ ಸಂಸ್ಕೃತಿ, ಭಾಷೆ, ಅಲ್ಲಿಯ ಆಹಾರ ಪದ್ಧತಿ ಅದಕ್ಕೆ ತಕ್ಕಂತೆ ಸ್ಥಳೀಯ ಬೇಡಿಕೆಗಳು,
ಇವನ್ನೆಲ್ಲ ಇಟ್ಟುಕೊಂಡು ೫ ವರ್ಷಕ್ಕೊಮ್ಮೆ ಚುನಾವಣೆ, ಸಾಮಾನ್ಯವಲ್ಲ. ಆ ಕಾರಣಕ್ಕಾಗಿಯೇ ಭಾರತದ ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬ ಎಂದರೆ ತಪ್ಪೇನೂ ಇಲ್ಲ. ಅದರಲ್ಲಿ ಎಲ್ಲರೂ ಭಾಗಿಯಾಗಲೇಬೇಕು, ಬಹುತೇಕರು ಭಾಗಿಯಾಗುತ್ತಾರೆ,
ನಾನು ಕೂಡ.

ನನಗೆ ಮತ ಚಲಾಯಿಸುವ ಹಕ್ಕು ಬಂದ ಲಾಗಾಯ್ತು ನಾನು ಮತ ಹಾಕದೇ ಇದ್ದದ್ದು ಒಂದು ಬಾರಿ ಮಾತ್ರ. ತೀರಾ ಅನಿವಾರ್ಯ ವಾಗಿ ಕಂಪನಿ ರಜೆ ಕೊಡದಿದ್ದ ಕಾರಣದಿಂದ ಭಾರತಕ್ಕೆ ಬರಲೇ ಆಗಿರಲಿಲ್ಲ. ಇಲ್ಲವಾದರೆ ಲೋಕಸಭೆಯಾಗಲಿ, ವಿಧಾನಸಭೆ ಯಾಗಲಿ, ಮತದಾನ ತಪ್ಪಿಸಿದ್ದಿಲ್ಲ. ಕೆಲವು ಬಾರಿ ರಾತ್ರಿ ಹೊರಟು, ಬೆಳಗ್ಗೆ ಬೆಂಗಳೂರು ತಲುಪಿ, ಮಧ್ಯಾಹ್ನ ಊರು ತಲುಪಿ, ಮತಹಾಕಿ ಹಿಂತಿರುಗಿ ಬೆಂಗಳೂರಿಗೆ ಬಂದು ಮರುದಿನ ನಸುಕಿನ ವಿಮಾನ ಹತ್ತಿ ಕೆಲಸಕ್ಕೆ ಹಾಜರಾದದ್ದೂ ಇದೆ.

ನಿನಗೇನು ಹುಚ್ಚಾ? ಮತ ಹಾಕಲೆಂದು ಅಷ್ಟು ದೂರದಿಂದ ಬರಬೇಕಾ? ರಜೆ ಸಿಗುತ್ತದಾ? ಅಷ್ಟು ಖರ್ಚು ಮಾಡಿಕೊಂಡು ಬರಬೇಕಾ? ಅದರಿಂದ ನಿನಗೇನು ಲಾಭ? ನಿನ್ನೊಬ್ಬನ ಮತದಿಂದ ದೇಶ ಬದಲಾಗುತ್ತದೆಯೇ? ಇತ್ಯಾದಿ ಹಲವು ಪ್ರಶ್ನೆ ಕೇಳು ವವರಿಗೆ ಏನೂ ಕೊರತೆಯಿಲ್ಲ. ಉಳಿದವರಿಗೆ ಹೇಗೋ-ಏನೋ, ನಾನು ಮತದಾನವನ್ನು ನನ್ನ ಹಕ್ಕು ಎಂದಾಗಲಿ, ಅಧಿಕಾರ ಎಂದಾಗಲಿ, ಅನಿವಾರ್ಯ ಎಂದಾಗಲಿ ಪರಿಗಣಿಸುವುದಿಲ್ಲ.

ಮತದಾನ ಮಾಡಿದರೆ ಒಂದಲ್ಲ, ಎರಡಲ್ಲ, ಐದು ವರ್ಷ ನನ್ನ ಬೆನ್ನನ್ನು ನಾನೇ ತಟ್ಟಿಕೊಂಡು ಹೆಮ್ಮೆ ಪಡುವ ಕಾಲ. ಚುನಾವಣೆ ಮತ್ತು ಮತದಾನ ನನಗೆ ಆತ್ಮತೃಪ್ತಿ ನೀಡುವ ವಿಷಯಗಳಲ್ಲಿ ಒಂದು. ನನ್ನ ಪ್ರಕಾರ ಮತದಾನ ಮಾಡದೆ ಯಾವುದೇ
ಅಭ್ಯರ್ಥಿಯನ್ನಾಗಲಿ, ಪಕ್ಷವನ್ನಾಗಲಿ, ಸರಕಾರದ ಕುರಿತಾಗಲಿ ಮಾತನಾಡುವಂತಿಲ್ಲ. ಅದರಲ್ಲೂ ದೋಷಾರೋಪಣೆಯಂತೂ ಖಂಡಿತ ಸಲ್ಲ.

ಮತದಾನ ನಮ್ಮ ಹಕ್ಕು ಹೌದು, ಆದರೆ ೫ ವರ್ಷಕ್ಕೊಮ್ಮೆ ಬರುವ ಚುನಾವಣೆಯಲ್ಲಿ ಮತ ಚಲಾಯಿಸದೇ ಇದ್ದವರಿಗೆ ಚುನಾ ವಣಾ ರಾಜಕೀಯದ ಕುರಿತು ಮಾತನಾಡುವ, ಸರಕಾರದ ಕೆಲಸ- ಕಾರ್ಯಗಳನ್ನು ಟೀಕಿಸುವ ಯಾವ ಹಕ್ಕೂ ಇರುವುದಿಲ್ಲ. ಅದು ಬ್ಯಾಂಕಿನಲ್ಲಿ ಖಾತೆಯನ್ನೇ ತೆರೆಯದೆ ಸಾಲ ಕೇಳಿದಂತೆ ಅಥವಾ ಬ್ಯಾಂಕ್ ಕೆಲಸದ ಕುರಿತು ಮಾತಾಡಿದಂತೆ. ಅದಕ್ಕಾಗಿ, ಖರ್ಚಾದರೂ ಸರಿ, ತೊಂದರೆಯಾದರೂ ಸರಿ, ನಾನು ಎಂದಲ್ಲ, ಯಾರೇ ಆದರೂ ಮತದಾನ ಮಾಡುವ ಅವಕಾಶ ತಪ್ಪಿಸಿಕೊಳ್ಳ ಬಾರದು ಎನ್ನುವ ನಿಲುವು ನನ್ನದು.

ಅಷ್ಟಕ್ಕೂ ಪ್ರಜಾಪ್ರಭುತ್ವದ ಸಿದ್ಧಾಂತ ನಿಂತಿರುವುದೇ ಬಹುಜನರ ಅಭಿಪ್ರಾಯದ ಬುನಾದಿಯ ಮೇಲೆ. ಅಲ್ಲಿ ಪ್ರಜೆಯೇ ರಾಜ, ಹೆಚ್ಚಿನ ಪ್ರಜೆಗಳ ಅಭಿಪ್ರಾಯವೇ ಸಾಮ್ರಾಜ್ಯ. ಅದಕ್ಕೆ ಮತದಾನ ಮೂಲಮಂತ್ರ. ಮತದಾನ ಹೆಚ್ಚಾದಷ್ಟೂ ಪ್ರಜಾಪ್ರಭುತ್ವದ ಹಬ್ಬಕ್ಕೆ ಮೆರುಗು ಹೆಚ್ಚುತ್ತದೆ. ನನ್ನ ಪಾಲಿಗೆ ಚುನಾವಣೆ ಕೇವಲ ಮತದಾನಕ್ಕೆ ಸೀಮಿತವಲ್ಲ. ನಮ್ಮ ಜನರೊಂದಿಗೆ ಬೆರೆಯಲು,
ನೆಲದೊಂದಿಗೆ ಬೆಸೆಯಲು ಇದು ಸೂಕ್ತ ಸಮಯ.

ಮತ ಹಾಕುವುದಕ್ಕಿಂತ ಮುಂಚೆ ಕ್ಷೇತ್ರದಲ್ಲಿ ಓಡಾಡಬೇಕು. ಅಲ್ಲಿಯ ಜನರ ಸಮಸ್ಯೆಗಳು, ಭಾವನೆಗಳನ್ನು ಅರಿಯಬೇಕು. ನನ್ನ ಅನುಭವದ ಪ್ರಕಾರ ಚುನಾವಣೆಯ ಸಂದರ್ಭದಲ್ಲಿ ಜನ ಸತ್ಯ ನುಡಿಯುತ್ತಾರೆ. ತಮ್ಮ ಸಿಟ್ಟು-ಸೆಡವುಗಳನ್ನು ಹೊರಹಾಕು
ತ್ತಾರೆ. ಆತ್ಮ ನುಡಿಸಿದ್ದನ್ನು ನುಡಿಯುತ್ತಾರೆ. ಕ್ಷೇತ್ರದ, ಕ್ಷಾತ್ರದ ವಿಮರ್ಶೆಗೆ ಸರಿಯಾದ ಸಮಯ ಎಂದರೆ ಚುನಾವಣೆಯ ಸಮಯ. ಇದು ಮತದಾರನಿಗೂ ಅನ್ವಯ, ಅಭ್ಯರ್ಥಿಗಳಿಗೂ ಅನ್ವಯ.

ಕಳೆದ ಕೆಲವು ವರ್ಷಗಳಿಂದ ಸಾಧ್ಯವಾದಾಗಲೆಲ್ಲ ನಾನು ಚುನಾವಣೆಗೆ ತಿಂಗಳು ಒಪ್ಪತ್ತು ಮುಂಚೆಯೇ ಭಾರತಕ್ಕೆ ಬರುತ್ತೇನೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಓಡಾಡುತ್ತೇನೆ. ಆ ಪಕ್ಷ-ಈ ಪಕ್ಷ ಎಂದಿಲ್ಲ, ನಿರ್ದಿಷ್ಟ ಅಭ್ಯರ್ಥಿಯ ಪರವಾಗಿ ಎಂದಲ್ಲ, ಮತದಾನ
ಮಾಡುವಂತೆ ಜನರಲ್ಲಿ ಕೇಳಿಕೊಳ್ಳುತ್ತೇನೆ. ಚುನಾವಣಾ ಕಣದಲ್ಲಿರುವ ಯಾವ ಅಭ್ಯರ್ಥಿಗೂ ಮತಹಾಕಲು ಮನಸ್ಸಿಲ್ಲದಿದ್ದಲ್ಲಿ ಕೊನೆಯ ಗುಂಡಿ ‘ನೋಟಾ’ ಆದರೂ ಸರಿಯೇ, ಯಾವುದಾದರೂ ‘ಒಂದು ಗುಂಡಿ ಒತ್ತಿ, ಒಂದೇ ಗುಂಡಿ ಒತ್ತಿ’ ಎಂದು ಹೇಳುತ್ತೇನೆ.

ಅಂಥ ಸಂದರ್ಭದಲ್ಲಿ ಮತದಾರರ ನಡೆ, ನುಡಿ, ಪ್ರಶ್ನೆಗಳೆಲ್ಲ ಮಾಮೂಲಿಗಿಂತ ಭಿನ್ನವಾಗಿರುತ್ತವೆ. ಕಳೆದ ಲೋಕಸಭೆ ಚುನಾ ವಣೆಯಲ್ಲಿ ಮಂಡ್ಯದ ಕೆಲವು ಹಳ್ಳಿಗಳಿಗೆ ಹೋದಾಗ ಆದ ಅನುಭವ ವಿಭಿನ್ನವಾದದ್ದು. ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಒಂದು ಕಡೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ನಿಂದ ನಿಖಿಲ್ ಕುಮಾರಸ್ವಾಮಿ, ಎದುರಾಳಿಯಾಗಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಸ್ಪರ್ಧಿಸಿದ್ದರು. ಇನ್ನೂ ಕೆಲವು ಸ್ವತಂತ್ರ ಅಭ್ಯರ್ಥಿಗಳಿದ್ದರೂ ಹೆಸರಿಗಷ್ಟೇ ಆಗಿತ್ತು.

ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರಲಿಲ್ಲ ಎನ್ನುವುದು ವಿಶೇಷವಾಗಿತ್ತು. ಆದಾಗ್ಯೂ ಮಾತಿನ ಜಟಾಪಟಿ, ಕೆಳಮಟ್ಟದ ರಾಜಕೀಯ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಅದಕ್ಕೆ ನಾನೂ ಹೊರತಾಗಿರಲಿಲ್ಲ. ಆ ಸಂದರ್ಭದಲ್ಲಿ ಹತ್ತು ದಿನ ಮಂಡ್ಯದಲ್ಲಿಯೇ ಉಳಿದಿದ್ದೆ. ಮಂಡ್ಯದ ಕೆಲವು ಹಳ್ಳಿಗಳಲ್ಲಿ ಓಡಾಡಿದೆ. ಅನೇಕ ಹಳ್ಳಿಗಳಿಗೆ ಭೇಟಿ ಕೊಟ್ಟೆ, ಮನೆಗಳಿಗೆ ಹೋದೆ, ಅಲ್ಲಿಯ ಜನರೊಂದಿಗೆ ಮಾತನಾಡಿದೆ. ಅಂದು ಕಟ್ಟಿಕೊಂಡು ಇದುವರೆಗೂ ಬಿಚ್ಚದ ಅನುಭವದ ಬುತ್ತಿಯನ್ನು ಈಗ ಬಿಚ್ಚುತ್ತಿದ್ದೇನೆ.

ಆ ಸಂದರ್ಭದಲ್ಲಿ ನನ್ನೊಂದಿಗೆ ಇನ್ನೂ ಕೆಲವರಿದ್ದರು. ಹಳ್ಳಿಯ ಮನೆಗಳಲ್ಲಿ ಸಾಮಾನ್ಯವಾಗ ಮನೆಯ ಬಾಗಿಲು ತೆರೆದೇ ಇರುತ್ತಿತ್ತು. ಮನೆಯ ಮುಂದೆ ನಿಂತು ಸುಮ್ಮನೆ ‘ಅಮ್ಮವ್ರೇ’, ‘ಯಜಮಾನ್ರೇ’ ಎಂದು ಕೂಗಿದರೆ ಸಾಕು, ಮನೆಯ ಒಳಗಿಂದಲೇ ‘ಯಾರಪ್ಪ? ಬನ್ರಿ ಒಳಕ್ಕೆ’ ಎಂಬ ದನಿ ಕೇಳುತ್ತಿತ್ತು. ಅದರಲ್ಲಿ ಬಹುತೇಕ ಹೆಣ್ಣು ದನಿಯಾಗಿರುತ್ತಿತ್ತು. ಒಂದು ಗಳಿಗೆ ನಾವು ಒಳಗೆ ಹೋಗದಿದ್ದರೆ ಮನೆಯವರು ಹೊರಗೆ ಬಂದು ನಮ್ಮನ್ನು ಮಾತನಾಡಿಸಿ ಒಳಗೆ ಕರೆದು, ‘ಕುಡಿಯಲು ಮಜ್ಜಿಗೆ ತರಲೇ? ಹಾಲು ಕೊಡಲೇ?’ ಎಂದು ಕೇಳುತ್ತಿದ್ದರು.

ಬೇಡ ಬೇಡ ಎಂದರೂ ಪಾನೀಯ ತಂದು ಎದುರು ಇಡುತ್ತಿದ್ದರು, ಒತ್ತಾಯ ಮಾಡಿ ಕುಡಿಸುತ್ತಿದ್ದರು. ಕೆಲವು ಮನೆಗಳಲ್ಲಿ ಬಾಳೇಹಣ್ಣು, ರಾಗಿ ಮುದ್ದೆ-ಸಾರು ತಂದು ನಮ್ಮ ಮುಂದೆ ಇಟ್ಟಿದ್ದೂ ಇದೆ. ನಂತರವೇ ಅವರು ‘ನೀವು ಯಾರು? ಯಾಕೆ
ಬಂದಿದ್ದೀರಿ?’ ಎಂದು ಕೇಳುತ್ತಿದ್ದರು. ಅಲ್ಲಿಯ ವರೆಗೂ ಅವರಿಗೆ ನಾವು ಯಾರು, ಯಾಕೆ ಬಂದಿದ್ದೇವೆ ಎನ್ನುವುದರ ಅರಿವು ಇರುತ್ತಿರಲಿಲ್ಲ. ‘ಮತ ಡಿದಾನ ಮಾಡುವಂತೆ ಕೇಳಿಕೊಳ್ಳಲು ಬಂದಿದ್ದೇವೆ’ ಎಂದಾಗ, ‘ಯಾವ ಪಕ್ಷದವರು’ ಎಂದು ಕೇಳುತ್ತಿ
ದ್ದರು.

‘ನಾವು ಪಕ್ಷದವರಲ್ಲ, ಮತದಾನದ ಜಾಗೃತಿ ಮೂಡಿಸಲು ಬಂದಿದ್ದೇವೆ’ ಎಂದು ಹೇಳಿ ನಾವು ಮುಂದೆ ನಡೆಯುತ್ತಿದ್ದೆವು. ನನಗೆ ಆಶ್ಚರ್ಯ ವಾದದ್ದು, ಮುಖ ನೋಡದೇ, ಪರಿಚಯವಿಲ್ಲದೇ ಮನೆಯ ಒಳಗೆ ಕರೆದು, ಉಪಚರಿಸುವುದು ಇದೆಯಲ್ಲ, ತೀರಾ ಅಪರೂಪ. ಅದೂ ಪಟ್ಟಣದಲ್ಲಿ ಹುಟ್ಟಿ, ನಗರಗಳಲ್ಲಿ ಬೆಳೆದು, ಯಾರಾದರೂ ಬಂದು ಕರೆಗಂಟೆ ಒತ್ತಿದಾಗ, ಯಾರು ಎಂದು ದೃಢಪಡಿಸಿ ಕೊಂಡ ನಂತರವೇ ಬಾಗಿಲು ತೆಗೆದು, ಎಷ್ಟು ಬೇಕೋ ಅಷ್ಟೇ ಮಾತನಾಡಿ ಕಳಿಸುವ ಕಾಲದಲ್ಲಿ, ಇದೊಂದು ಅದ್ಭುತವೇ ಹೌದು. ಜನರ ಮೇಲೆ ಅವರಿಗಿರುವ ನಂಬಿಕೆ, ಜನರು ಮೋಸ ಮಾಡುವುದಿಲ್ಲ, ಮುಖ ನೋಡದಿದ್ದರೂ, ಮಾತಾಡದಿ
ದ್ದರೂ, ಬಂದವರು ಕಳ್ಳರಲ್ಲ, ಮೋಸ ಮಾಡುವುದಿಲ್ಲ ಎಂಬ ಅವರ ಧೈರ್ಯ, ಅಂದು ನಿಜಕ್ಕೂ ಇಷ್ಟವಾಯಿತು.

ಅಂಥವರಿಗೊಂದು ನಮನ. ಅದರ ಜತೆಜತೆಗೆ ಬೇರೆ ಅನುಭವಗಳೂ ಆದವು ಅನ್ನಿ. ಬಹುತೇಕ ಮನೆಗಳಲ್ಲಿ ಮತ ಹಾಕಿ ಎಂದಾಗ, ‘ನೀವು ಹೀಗೆ ಮತ ಹಾಕಿ ಎಂದರೆ ಆಗದು, ಯಾರಿಗೆ ಹಾಕಬೇಕು ಎನ್ನುವುದನ್ನೂ ಹೇಳಬೇಕು’ ಎನ್ನುತ್ತಿದ್ದರು. ‘ಅದು ನಿಮ್ಮ ವಿವೇಚನೆಗೆ ಬಿಟ್ಟಿದ್ದು’ ಎನ್ನುತ್ತಿದ್ದೆವು. ಕೆಲವು ಕಡೆ ಸುಮ್ಮನಿರುತ್ತಿದ್ದರೆ, ಕೆಲವು ಕಡೆ ಇನ್ನಷ್ಟು ಪ್ರಶ್ನಿಸುತ್ತಿದ್ದರು. ಕೆಲವರಂತೂ, ‘ನೀವು ಯಾವ ಪಕ್ಷದವರು ಎಂದು ಹೇಳಬೇಕು, ಜತೆಗೆ ಕೈಯಲ್ಲಿ ಸ್ವಲ್ಪ (ದುಡ್ಡು) ಕೊಡಬೇಕು’ ಎನ್ನುತ್ತಿದ್ದರು.
ಒಬ್ಬ ಮಹಾಶಯನಂತೂ ಹಣ ಕೊಡುವಂತೆ ಹಿಂದೆಯೇ ಬಿದ್ದಿದ್ದ.

‘ನಾವು ಯಾವುದೇ ಪಕ್ಷದವರಲ್ಲ, ಪಕ್ಷಕ್ಕೂ ನಮಗೂ ಸಂಬಂಧವಿಲ್ಲ’ ಎಂದರೂ ಕೇಳುತ್ತಿರಲಿಲ್ಲ. ಎಲ್ಲಿಯವರೆಗೆ ಎಂದರೆ, ಕೊನೆಗೆ ನಾವು ಕಾರು ಹತ್ತುವವರೆಗೂ ನಮ್ಮ ಹಿಂದೆಯೇ ಬಂದು, ಕೊನೆಯಲ್ಲಿ ಎರಡು ರುಪಾಯಿಯನ್ನಾದರೂ ಕೊಡಿ ಎಂದು ಗಂಟುಬಿದ್ದಿದ್ದ. ಆಗ ನಿಜವಾಗಿಯೂ ಸಿಟ್ಟು ಬಂದಿತ್ತು. ಹಳ್ಳಿಯ ಜನರ ಮೇಲಲ್ಲ, ಚುನಾವಣೆ, ಮತದಾನ ಎಂದರೆ ದುಡ್ಡು, ದುಡ್ಡಿಲ್ಲ ದಿದ್ದರೆ ಮತವಿಲ್ಲ ಎನ್ನುವುದನ್ನು ಮುಗ್ಧ ಮಂದಿಯ ಮನಸ್ಸಿನಲ್ಲಿ ತುಂಬಿದ್ದ ರಾಜಕಾರಣಿಗಳ ಮೇಲೆ!

ನಿಜವಾಗಿ ಚುನಾವಣೆ ನಡೆಯಬೇಕಾದದ್ದು ಜಾತಿ-ಧರ್ಮದ ಆಧಾರದ ಮೇಲಲ್ಲ, ಅಭಿವೃದ್ಧಿಯ ಮೇಲೆ ತಾನೇ? ಆದರೆ ನಮ್ಮ ದೇಶದ ದುರದೃಷ್ಟ, ಚುನಾವಣೆ ನಡೆಯುವುದೇ ಜಾತಿ- ಧರ್ಮದ ಆಧಾರದ ಮೇಲೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಜಾತಿಯ ಸುನಾಮಿಯಲ್ಲಿ ಅಭಿವೃದ್ಧಿಗಳೂ, ಯೋಜನೆಗಳೂ ಕೊಚ್ಚಿಕೊಂಡು ಹೋಗುತ್ತವೆ. ಅಭಿವೃದ್ಧಿ ಜನರ ಕಣ್ಣಿಗೆ ಬೀಳುವು ದೂ ಇಲ್ಲ, ಕೆಲವೊಮ್ಮೆ ಬಿದ್ದರೂ ಅದರ ಹಿಂದಿನ ಸತ್ಯಾಸತ್ಯತೆ ಎಲ್ಲರಿಗೂ ತಿಳಿದಿರುವುದಿಲ್ಲ ಎಂದು ನನ್ನ ಅನುಭವಕ್ಕೆ ಬಂದದ್ದೂ ಮಂಡ್ಯದಲ್ಲಿಯೇ.

ಮತದಾನ ಮಾಡುವಂತೆ ಕೇಳಿಕೊಂಡಾಗ ಕೆಲವರು, ತಮ್ಮ ಮತ ಇಂಥ ಪಕ್ಷಕ್ಕೆ, ಇಂಥ ಅಭ್ಯರ್ಥಿಗೆ ಎಂದು ಹೇಳುತ್ತಿದ್ದರು. ಅವರಾಗಿಯೇ ಹೇಳಿದಾಗ ನಮ್ಮ ಕುತೂಹಲಕ್ಕೆ ನಾವು ಕಾರಣ ಕೇಳುತ್ತಿದ್ದೆವು. ಅದಕ್ಕೆ ಅವರು ಕಾರಣವನ್ನೂ ಹೇಳುತ್ತಿದ್ದರು. ಅದರಲ್ಲಿ ಕೆಲವು ಸರಿಯಾಗಿರುತ್ತಿದ್ದರೆ ಇನ್ನು ಕೆಲವು ನಂಬಲು ಅಸಾಧ್ಯವಾಗಿರುತ್ತಿದ್ದವು. ಒಂದು ಕಡೆ ಆದ ಅನುಭವ ಹೇಳಿದರೆ ಸಲೀಸಾಗಿ ಅರ್ಥವಾದೀತು. ಊರಿನ ಹೆಸರು ಬೇಡ, ಆ ಊರಿನ ಬಹುತೇಕ ಮನೆಗಳ ಮುಂದೆ ಶೌಚಾಲಯವಿತ್ತು.

ಅದು ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ನಿರ್ಮಾಣಗೊಂಡ ಶೌಚಾಲಯ ಎಂದು ತಿಳಿಯುತ್ತಿತ್ತು. ಸಾಲದು ಎಂಬಂತೆ ಅದರ ಮೇಲೆ ಈ ಶೌಚಾಲಯದ ನಿರ್ಮಾಣಕ್ಕೆ ಸ್ವಚ್ಛ ಭಾರತ್ ಅಭಿಯಾನದ ಅಡಿಯಲ್ಲಿ ಕೇಂದ್ರ ಸರಕಾರದಿಂದ ೧೫,೦೦೦ (ಮೊತ್ತ ಹೆಚ್ಚು-ಕಮ್ಮಿ ಇದೆ) ರುಪಾಯಿ ಅನುದಾನ ನೀಡಲಾಗಿದೆ ಎಂಬ ಫಲಕವೂ ಇತ್ತು. ನಂಬಿ, ಆ ಶೌಚಾಲಯವನ್ನು ಪ್ರತಿನಿತ್ಯ ಬಳಸುವ ಅನೇಕರಿಗೆ ಈ ವಿಷಯ ತಿಳಿದಿರಲಿಲ್ಲ.

ಫಲಕ ನೋಡಿ ಕೆಲವೊಮ್ಮೆ ನಾವು ಸುಮ್ಮನೇ ‘ಇದು ಯಾರು ಕಟ್ಟಿಸಿಕೊಟ್ಟದ್ದು?’ ಎಂದು ಕೇಳುತ್ತಿದ್ದೆವು. ಅದಕ್ಕೆ ಅವರ ಉತ್ತರ ಆಶ್ಚರ್ಯಕರವಾಗಿರುತ್ತಿತ್ತು. ಅನೇಕರು ‘ಇದು ನಮ್ಮ ಪುಟ್ಟ ಗೌಡ್ರು ಕಟ್ಟಿಸಿದ್ದು, ಸಣ್ಣ ಗೌಡ್ರು ಕಟ್ಟಿಸಿದ್ದು’ ಎಂದು ಹೆಸರು ಹೇಳುತ್ತಿದ್ದರೇ ವಿನಾ, ಮೋದಿಯವರ ಹೆಸರನ್ನಾಗಲಿ, ಯಾವುದೇ ರಾಜಕೀಯ ಪಕ್ಷದ ಹೆಸರನ್ನಾಗಲಿ ಹೇಳುತ್ತಿರಲಿಲ್ಲ. ಕೊನೆ ಯಲ್ಲಿ ನಾವು ‘ಈ ಪುಟ್ಟ ಗೌಡ್ರು, ಸಣ್ಣ ಗೌಡ್ರು ಯಾರು?’ ಎಂದು ಕೇಳಿದರೆ ಅದರಲ್ಲಿ ಬಹುತೇಕರು ಆಯಾ ಪ್ರದೇಶದ ಮಂಡಳ, ಗ್ರಾಮ ಪಂಚಾಯತಿಯ ಸದಸ್ಯರು. ಕೆಲವರಂತೂ ಅದೂ ಅಲ್ಲ, ಆ ಊರಿನ ಒಬ್ಬ ಅರ್ಧ ಪ್ರಮುಖ ವ್ಯಕ್ತಿಯಾಗಿರುತ್ತಿದ್ದರು.

ಮನೆಯವರು ಇಂಥವರ ಹೆಸರನ್ನು ಯಾಕೆ ಹೇಳುತ್ತಿದ್ದಾರೆ ಎಂದು ವಿಚಾರಿಸಿದಾಗ ನಮ್ಮ  ಗಮನಕ್ಕೆ ಬಂದದ್ದು ಇಷ್ಟು. ಆ ಶೌಚಾಲಯ ನಿರ್ಮಾಣವಾಗುವ ಹಂತದಲ್ಲಿ ಇವರ ಮನೆಯ ಮುಂದೆ ಬೈಕ್ ನಿಲ್ಲಿಸಿ, ಲುಂಗಿ ಎತ್ತಿ ಕಟ್ಟಿ, ಕೋಲು ಮೇಸ್ತ್ರಿಯ ಕೆಲಸ ಮಾಡುವವರು, ಸುಮ್ಮನೆ ಕೆಲಸ ನೋಡಲು ಬಂದು ನಿಲ್ಲುತ್ತಿದ್ದವರು ಈ ಶೌಚಾಲಯ ತಮ್ಮ ಮುಂದಾಳತ್ವದಲ್ಲೇ ಆಗುತ್ತಿದೆ, ಇದಕ್ಕೆ ತಾವೇ ಕಾರಣರು ಎಂಬ ಪೋಸು ಕೊಡುತ್ತಿದ್ದರು, ಈ ಜನ ಅದನ್ನೇ ನಂಬಿದ್ದರು ಎನ್ನುವುದು ತಿಳಿಯುತ್ತಿತ್ತು.
ಇದಕ್ಕೆ ಜನರನ್ನು ಹೇಳಿ ಪ್ರಯೋಜನವಿಲ್ಲ. ಪಾಪ ಅವರಿಗೆ ಇದರ ಹಿಂದಿನ ರಾಜಕೀಯವೆಲ್ಲ ಅರ್ಥವಾಗುವುದಿಲ್ಲ.

ಯಾವಾಗಲೂ ಅಷ್ಟೇ, ಮುಗ್ಧ ಮನಸ್ಸಿನವರು ಕಣ್ಣ ಮುಂದೆ ನಡೆಯುವುದೇ ಸತ್ಯ ಎಂದು ತಿಳಿಯುತ್ತಾರೆ. ಹುಳುಕು ಬುದ್ಧಿಯ ವರ ಕೊಳಕು ರಾಜಕೀಯ ಇವರಿಗೆ ಹೇಗೆ ಅರ್ಥ ವಾದೀತು ಹೇಳಿ? ಮುಗ್ಧರ ಮೇಲೆ ಕಳಕಳಿ-ಕನಿಕರ ತೋರಿಸುವುದೋ, ಅವರಿಗೆ ಸರಿಯಾದ ಮಾಹಿತಿ ನೀಡದವರ ಮೇಲೆ ಸಿಟ್ಟು ಮಾಡುವುದೋ? ಅಮಾಯಕರನ್ನು ಯಾಮಾರಿಸುವವರ ಮೇಲೆ ಕೋಪ ಗೊಳ್ಳುವುದೋ? ಕೆಲವೊಮ್ಮೆ ರಾಜಕೀಯ ಎಂದರೆ ಮುಗ್ಧರನ್ನು ಮಂಗ ಮಾಡುವ ಆಟ ಎಂದೆನಿಸುವುದು ಸುಳ್ಳಲ್ಲ.

ಚುನಾವಣೆ ಎಂದರೆ ಇಂಥ ನೂರಾರು ವಿಷಯಗಳು ಇದ್ದೇ ಇರುತ್ತವೆ. ಕೆಲವೊಮ್ಮೆ ಮತ ಹಾಕಿ ಎನ್ನುವುದರ ಜತೆಗೆ, ಸರಿಯಾದ ಅಭ್ಯರ್ಥಿಗೇ ಮತ ಹಾಕಿ ಎಂದೂ ಹೇಳುವುದು ಅನಿವಾರ್ಯವಾಗುತ್ತದೆ. ಏನೇ ಆದರೂ ಇಂಥ ಸಂದರ್ಭ ಒದಗಿ ಬರುವುದು ೫ ವರ್ಷಕ್ಕೊಮ್ಮೆ. ಆ ಅವಕಾಶವನ್ನು ತಪ್ಪಿಸಿಕೊಳ್ಳಬಾರದು. ಮತ ಹಾಕುವುದರ ಜತೆಗೆ ಅಪರಿಚಿತ ಜಾಗದಲ್ಲೂ ಓಡಾಡಿ. ನಿಮಗೂ
ಒಂದಷ್ಟು ಅನುಭವವಾಗಬಹುದು.

Leave a Reply

Your email address will not be published. Required fields are marked *

error: Content is protected !!