Thursday, 12th December 2024

ಇದು ಕೇವಲ ಚುನಾವಣಾ ಭರವಸೆಯಲ್ಲ, ಸಹಸ್ರಮಾನದ ದೃಷ್ಟಿಕೋನ

ದೂರದೃಷ್ಟಿ

ರಾಮ್ ಮಾಧವ್

ಬಡತನ ಹಾಗೂ ಭ್ರಷ್ಟಾಚಾರವನ್ನು ಕೊನೆಗೊಳಿಸುವುದು, ಪರಿಪೂರ್ಣ ಸಾಮಾಜಿಕ ನ್ಯಾಯವನ್ನು ಆಚರಣೆಗೆ ತರುವುದು ಮತ್ತು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿಸುವುದು, ಹಾಗೂ ಈ ಎಲ್ಲ ಉಪಕ್ರಮಗಳ ನೆರವಿನಿಂದ ಭಾರತವನ್ನು ಒಂದು ಸಮೃದ್ಧ ರಾಷ್ಟ್ರವನ್ನಾಗಿ ರೂಪಿಸುವುದು ಇವು ಪ್ರಧಾನಿ ಮೋದಿಯವರ ಸಮ್ಮುಖದಲ್ಲಿರುವ ಮತ್ತು ತಕ್ಷಣ ನೆರವೇರಬೇಕಿರುವ ಕೆಲವೊಂದು ಗುರಿಗಳಾಗಿವೆ. ಅವುಗಳ ಈಡೇರಿಕೆಗೆ ಸಹಕರಿಸೋಣ…

ನಿಮಗಿದು ಗೊತ್ತಾ? ಅಮೆರಿಕದ ‘ಟೈಮ್’ ನಿಯತಕಾಲಿಕವು ೨೦೨೪ರ ವರ್ಷವನ್ನು ‘ಚುನಾವಣಾ ವರ್ಷ’ ಎಂದೇ ಘೋಷಿಸಿ
ಬಿಟ್ಟಿದೆ. ಕಾರಣ, ೬೪ ದೇಶಗಳಲ್ಲಿ ನೆಲೆಯೂರಿರುವ ವಿಶ್ವದ ಜನಸಂಖ್ಯೆಯ ಬಹುತೇಕ ಅರ್ಧಕ್ಕೂ ಹೆಚ್ಚು ಮಂದಿ, ಈ ವರ್ಷ ದಲ್ಲಿ ಮತಕೇಂದ್ರಗಳಿಗೆ ದಾಂಗುಡಿ ಇಡಲಿದ್ದಾರೆ. ದೇಶಕ್ಕೆ ಒಂದೊಳ್ಳೆಯ ಸರಕಾರ ಹಾಗೂ ತಮ್ಮ ಪಾಲಿಗೊಂದು ಉಜ್ವಲ
ಭವಿಷ್ಯ ದಕ್ಕುವಂತಾಗಬೇಕು ಎಂಬ ಆಶಯ ಈ ನಡೆಯ ಹಿಂದೆ ಕೆನೆಗಟ್ಟಿರುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಯಿರುವ ಭಾರತ ಮತ್ತು ಎರಡನೇ ಅತಿದೊಡ್ಡ ಹಾಗೂ ಅತಿಹಳೆಯ ಪ್ರಜಾಪ್ರಭುತ್ವ ಎಂಬ ಹೆಮ್ಮೆಯಿರುವ ಅಮೆರಿಕ ಈ ವರ್ಷದಲ್ಲಿ ಚುನಾವಣೆಗಳನ್ನು ಹಮ್ಮಿಕೊಂಡಿವೆ, ಹಾಗೂ ಬ್ರಿಟನ್, ಮೆಕ್ಸಿಕೋ ಮತ್ತು ದಕ್ಷಿಣ ಆಫ್ರಿಕಾದಂಥ ಇತರ ದೇಶಗಳೂ ಈ ಯಾದಿಯಲ್ಲಿವೆ ಎಂಬುದು ಗಮನಾರ್ಹ. ಐರೋಪ್ಯ ಒಕ್ಕೂಟದ ಸಂಸತ್ತಿಗೂ ಈ ವರ್ಷದ ಜೂನ್‌ನಲ್ಲಿ ಚುನಾವಣೆ ನಡೆಯಲಿದೆ.

ಈ ಪೈಕಿ ಕೆಲವು ಚುನಾವಣೆಗಳು ಎದ್ದು ಕಾಣುವಂಥವು ಎನ್ನಬೇಕು. ಅಮೆರಿಕದ ಅಧ್ಯಕ್ಷರನ್ನು ಚುನಾಯಿಸುವ ಚತುರ್ವಾರ್ಷಿಕ ಚುನಾವಣೆಯು ಅವುಗಳಲ್ಲೊಂದು. ಕಳೆದ ತಿಂಗಳು ನಾನು ನ್ಯೂಯಾರ್ಕ್‌ನ ವಿಶ್ವವಿದ್ಯಾಲಯವೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ, ಭಾರತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಕುರಿತಾಗಿ ವಿದ್ಯಾರ್ಥಿನಿಯೊಬ್ಬಳು ನನ್ನನ್ನು ಪ್ರಶ್ನಿಸಿದಳು.

ಆಗ ನಾನು ಆಕೆಗೆ, ‘ನಿಜವಾದ ಉತ್ಸಾಹ- ಸಂಭ್ರಮಗಳು ಚಿಮ್ಮಿರುವುದು ಅಮೆರಿಕದಲ್ಲಿ ಶುರುವಾಗಿರುವ ಸ್ಪರ್ಧೆಯ ಕುರಿತೇ ವಿನಾ, ಭಾರತದಲ್ಲಿನ ಚುನಾವಣೆಗಳ ಬಗೆಗಲ್ಲ. ಆದರೆ ಜಾಗತಿಕ ರಾಜಕೀಯದಲ್ಲಿ ಪ್ರಮುಖ ಬದಲಾವಣೆಗಳನ್ನು ಉಂಟು ಮಾಡುವ ಸಾಮರ್ಥ್ಯವಿರುವ ನಮ್ಮ ಚುನಾವಣೆಯ ಫಲಿತಾಂಶವನ್ನು ಜಗತ್ತು ಉತ್ಸುಕತೆಯಿಂದ ವೀಕ್ಷಿಸಲಿದೆ’ ಎಂದು ಹೇಳಿದೆ.

ಇದು ವಾಸ್ತವಿಕ ಸಂಗತಿ. ಭಾರತವಿಂದು ವಿವಿಧ ನೆಲೆಗಟ್ಟುಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಶಕ್ತಿಯಾಗಿರುವುದರಿಂದ, ಭಾರತದ ಚುನಾವಣೆಗಳ ಕುರಿತಾಗಿಯೂ ವಿಶ್ವದ ವಿವಿಧೆಡೆ ಅಗಾಧ ಕುತೂಹಲ ಕೆನೆಗಟ್ಟಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಯವರ ಸರಕಾರವೇ ಮೂರನೇ ಅವಧಿಗೂ ಅಧಿಕಾರಕ್ಕೆ ಮರಳುವುದು ಬಹುತೇಕ ಖಚಿತವಾಗಿದ್ದರೂ, ಹೊಸ ಸರಕಾರಕ್ಕೆ ಸಂಬಂಧಿಸಿದಂತೆ ನಿರೀಕ್ಷಿಸಲಾಗಿರುವ ಬಹುಮತದ ಕುರಿತಾಗಿ ಬಹುಜನರಲ್ಲಿ ಉತ್ಸಾಹ ಭರಿತ ಕುತೂಹಲ ಮನೆಮಾಡಿದೆ ಎಂದರೆ ಅತಿಶಯೋಕ್ತಿಯಲ್ಲ.

ಸ್ವತಃ ಪ್ರಧಾನಿ ಮೋದಿಯವರೇ ‘ಅಬ್ ಕಿ ಬಾರ್, ಚಾರ್ ಸೌ ಪಾರ್’ (ಈ ಬಾರಿ ೪೦೦ಕ್ಕೂ ಹೆಚ್ಚು ಸ್ಥಾನಗಳು) ಎಂಬ ಘೋಷಣೆ
ಯೊಂದಿಗೆ ಬಿಜೆಪಿಯ ಪ್ರಚಾರಕಾರ್ಯವನ್ನು ಮುನ್ನಡೆಸುತ್ತಿರುವುದು ಇಲ್ಲಿ ಉಲ್ಲೇಖನೀಯ. ಇಂಥದೊಂದು ಆತ್ಮವಿಶ್ವಾಸ ಹುಟ್ಟುವುದಕ್ಕೆ ಕಾರಣವಾಗಿರುವುದು ಹಲವಾರು ಅಂಶಗಳು. ‘ಉತ್ತಮ ಆಡಳಿತ ಹಾಗೂ ಸಮಾಜದ ಎಲ್ಲ ವಲಯಗಳಲ್ಲೂ ಸೇವಾ ವಿತರಣೆಯು ಸಮರ್ಥವಾಗಿ ನಡೆದಿರುವುದರ ಟ್ರ್ಯಾಕ್ ರೆಕಾರ್ಡ್ ಹೊಂದಿರುವುದು’ ಅವುಗಳ ಪೈಕಿ ಪ್ರಮುಖವಾದದ್ದು; ಚುನಾವಣಾ ದಿನಾಂಕಗಳು ಘೋಷಿಸಲ್ಪಟ್ಟ ದಿನದಂದು ಸ್ವತಃ ಮೋದಿಯವರೇ ‘ಎಕ್ಸ್’ (ಟ್ವಿಟರ್) ಮಾಧ್ಯಮದಲ್ಲಿ ಈ ಅಂಶವನ್ನೇ ಉಲ್ಲೇಖಿಸಿದ್ದರು ಎಂಬುದು ನಿಮ್ಮ ಗಮನಕ್ಕೆ. ದೇಶದ ಉದ್ದಗಲಕ್ಕೂ ಈ ಕುರಿತಾಗಿ ಒಂದು ಸರ್ವೇಸಾಮಾನ್ಯವಾದ, ‘ಹಿತಾನುಭವ’ದ ಅಂಶವು ಕಾಣಬರುತ್ತಿದೆ ಎಂದು ಹೇಳಿದರೆ ಅತಿ ಶಯೋಕ್ತಿ ಆಗುವುದಿಲ್ಲ.

ದೆಹಲಿ ವಿಶ್ವವಿದ್ಯಾಲಯದ ಓರ್ವ ಶಿಕ್ಷಣವೇತ್ತರಾದ ಸ್ವದೇಶ್ ಸಿಂಗ್ ಅವರು ಈ ಅನುಭೂತಿಯನ್ನು ‘ಮೋದಿಯವರೆಡೆಗಿನ ಒಮ್ಮತಾಭಿಪ್ರಾಯ ಅಥವಾ ಬಹುಮತಾಭಿಪ್ರಾಯ’ ಎಂದು ವ್ಯಾಖ್ಯಾನಿಸಿರುವುದು ಸೂಕ್ತವಾಗಿದೆ ಎನ್ನಬೇಕು. ಕಾರಣ, ಜನರು ಮೋದಿ ಆಡಳಿತದ ಕುರಿತಾಗಿ ದೂರುವಂಥದ್ದೇನೂ ಹೆಚ್ಚಾಗಿ ಕಾಣಬರುತ್ತಿಲ್ಲ. ಪ್ರಸ್ತುತ, ಬಹುತೇಕ ೪ ಟ್ರಿಲಿಯನ್ ಡಾಲರ್
ನಷ್ಟಿರುವ ದೇಶದ ಆರ್ಥಿಕತೆಯು ಸಾಕಷ್ಟು ಸಮಂಜಸವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರ ಯಥೋಚಿತ ಫಲ ಶ್ರೀಸಾಮಾನ್ಯರನ್ನು ತಲುಪುತ್ತಿದೆ. ಸಾರ್ವಜನಿಕ ಸಾರಿಗೆ ಮತ್ತು ಮೂಲಭೂತ ಸೌಲಭ್ಯಗಳು ಸೇರಿದಂತೆ ಸಾರ್ವಜನಿಕ ಸೇವೆಗಳು
ಹಿಂದೆಂದಿಗಿಂತಲೂ ಉತ್ತಮ ಸ್ಥಿತಿಯಲ್ಲಿವೆ; ‘ಮಹಿಳಾ-ನೇತೃತ್ವ’ ಮತ್ತು ‘ಯುವ-ನೇತೃತ್ವ’ದ ಅಭಿವೃದ್ಧಿಯಂಥ ಉಪಕ್ರಮಗಳು ಲಕ್ಷಾಂತರ ಜನರನ್ನು ತಲುಪಿರುವುದರ ಜತೆಗೆ, ಸರಕಾರದ ಪಾಲಿಗೆ ಅವು ಸದ್ಭಾವನೆಯ ಮತ್ತು ಉತ್ಸಾಹದ ವರ್ಧಿತ ಪರಿಣಾಮವನ್ನೇ ಉಂಟುಮಾಡಿವೆ ಎನ್ನಬೇಕು.

ಅದರಲ್ಲೂ ನಿರ್ದಿಷ್ಟವಾಗಿ, ಕಳೆದ ಐದು ವರ್ಷಗಳಲ್ಲಿ ಘಟಿಸಿದ ಎರಡು ಪ್ರಮುಖ ಬೆಳವಣಿಗೆಗಳು, ರಾಜಕೀಯ ಪಕ್ಷಗಳ ಎಲ್ಲೆಗೆರೆಗಳನ್ನೂ ಮೀರಿ ಸರಕಾರದೆಡೆಗೆ ಜನಪ್ರಿಯತೆಯ ಹೊನಲನ್ನು ಹರಿಸಿವೆ, ಅವೆಂದರೆ- ಸಂವಿಧಾನದ ೩೭೦ನೇ ವಿಧಿಯ ರದ್ದತಿ ಹಾಗೂ ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ನಿರ್ಮಾಣ. ರಾಮ ಮಂದಿರದ ಉದ್ಘಾಟನೆಯ ಸಮಯದಲ್ಲಿ ಭಾರತದ ಸಮಾಜದ ಮೇಲೆ ತಮ್ಮದೇ ಆದ ಅಧಿಕಾರ ಶಕ್ತಿ ಮತ್ತು ಪ್ರಭಾವ ಹೊಂದಿರುವ ಅತಿರಥ- ಮಹಾರಥರನ್ನೆಲ್ಲ ಜಗತ್ತು ಕಾಣುವಂತಾಯಿತು; ಈ ಘಟ್ಟದಲ್ಲಿ, ಪ್ರಾಯಶಃ ಜಗತ್ತಿನ ಗಮನಕ್ಕೆ ಬಾರದಿರುವ ಸಂಗತಿಯೊಂದಿದೆ, ಅದುವೇ- ಸದರಿ ರಾಮ
ಮಂದಿರದ ಉದ್ಘಾಟನೆಯ ಭವ್ಯ-ದಿವ್ಯ ಕಾರ್ಯಕ್ರಮವು ಚಾಲ್ತಿಯಲ್ಲಿರುವಾಗ, ದೇಶದ ೬.೫ ಲಕ್ಷಕ್ಕೂ ಹೆಚ್ಚು ಹಳ್ಳಿಗಳು ಮತ್ತು ಪಟ್ಟಣಗಳಲ್ಲಿರುವ ೧೯೫ ದಶಲಕ್ಷದಷ್ಟು ಕುಟುಂಬಗಳಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ತಮ್ಮ ಪ್ರಭಾವ- ವಲಯವನ್ನು ಚಾಚಿದ್ದು.

ಇದರ ಪರಿಣಾಮವಾಗಿ, ದೇಶದ ಉದ್ದಗಲಕ್ಕೂ ಮೈಚೆಲ್ಲಿಕೊಂಡಿರುವ ಸುಮಾರು ೧೦ ಲಕ್ಷಕ್ಕೂ ಹೆಚ್ಚು ದೇವಾಲಯಗಳು ಆ
ಭವ್ಯ-ದಿವ್ಯ ದಿನದಂದು ಸಂಭ್ರಮಾಚರಣೆಗಳಿಗೆ ಒಡ್ಡಿಕೊಳ್ಳುವಂತಾಯಿತು. ಈಗ ಮುಖ್ಯ ವಿಷಯಕ್ಕೆ ಬರೋಣ. ೨೦೧೪ ಮತ್ತು ೨೦೧೯ರ ಲೋಕಸಭಾ ಚುನಾವಣೆಗಳಲ್ಲಿ ಕಂಡುಬಂದಂತೆ ಪ್ರಧಾನಿ ಮೋದಿಯವರ ವೈಯಕ್ತಿಕ ವಿಶ್ವಾಸಾರ್ಹತೆಯು ಈ ಸಲದ ಚುನಾವಣೆಯಲ್ಲೂ ಅತ್ಯಂತ ಪ್ರಮುಖ ಅಂಶವಾಗಿ ತನ್ನ ಸ್ಥಾನವನ್ನು ಕಾಪಿಟ್ಟುಕೊಂಡಿದೆ. ಬಿಜೆಪಿಯ ಪರವಾಗಿ ಗುರುತಿಸಿ
ಕೊಂಡಿರುವ ಮತ್ತೊಂದು ಘನವಾದ ಅಂಶವೆಂದರೆ, ಪಕ್ಷದ ಸಂಘಟನಾತ್ಮಕ ಬಲವು ಹೆಚ್ಚುತ್ತಲೇ ಇರುವುದು. ಈಗಿನ ಬಲಾಬಲವನ್ನು ಹೇಳುವುದಾದರೆ, ೧೮೦ ದಶಲಕ್ಷದಷ್ಟಿರುವ ಪ್ರಾಥಮಿಕ ಸದಸ್ಯತ್ವ ಹಾಗೂ ೨೦ ದಶಲಕ್ಷದಷ್ಟಿರುವ ಸಕ್ರಿಯ ಸದಸ್ಯರ ಗಟ್ಟಿ ತಳಹದಿಯೊಂದಿಗೆ ಪಕ್ಷವು ಬೀಗುತ್ತಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ೯೬೬ ದಶಲಕ್ಷ ಮತದಾರರು ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಬಹು ದಾಗಿದ್ದು, ಇವರಿಗೆಂದು ಬರೋಬ್ಬರಿ ೧೦.೪ ಲಕ್ಷಕ್ಕೂ ಹೆಚ್ಚು ಮತದಾನ ಕೇಂದ್ರಗಳು ಸಜ್ಜುಗೊಳ್ಳಲಿವೆ. ಈ ಪೈಕಿ ೮ ಲಕ್ಷಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಬಿಜೆಪಿಯು ಇಂದು ತನ್ನದೇ ಆದ ಮತಗಟ್ಟೆ/ಬೂತ್ ಸಮಿತಿಗಳನ್ನು ಹೊಂದಿದೆ. ಸಮಾಜದಲ್ಲಿರುವ ದುರ್ಬಲ ವರ್ಗಗಳು, ಮಹಿಳೆಯರು ಹಾಗೂ ಯುವಸಮೂಹವನ್ನು ಪರಿಣಾಮ ಕಾರಿಯಾಗಿ ತಲುಪಲೆಂದು ಈ ಬೂತ್ ಮಟ್ಟದ
ಕಾರ್ಯಕರ್ತರು ಕಟಿಬದ್ಧರಾಗಿದ್ದಾರೆ.

ಇದಕ್ಕಾಗಿ ಕಳೆದ ಎರಡು ವರ್ಷಗಳಿಂದ ಒಂದು ವ್ಯವಸ್ಥಿತ ಪ್ರಚಾರಾಂದೋಲನದ ಮಾದರಿಯನ್ನು ಬಳಸಿಕೊಂಡು ನಿಯೋಜಿತ ಕಾರ್ಯಭಾರದಲ್ಲಿ ಅವರೆಲ್ಲ ಸಕ್ರಿಯ ರಾಗಿದ್ದಾರೆ. ಸಂಘಟನೆಯೊಂದು ಹೊಂದಿರಬಹು ದಾದ ವಾಡಿಕೆಯ ಸ್ವರೂಪದ ಜತೆ ಜತೆಗೆ, ಬಿಜೆಪಿಯು ಮತ್ತಷ್ಟು ವೈಶಿಷ್ಟ್ಯಗಳನ್ನು ಸೇರಿಸಿದೆ. ಅಂದರೆ, ತಲಾ ನಾಲ್ಕು ಲೋಕಸಭಾ ಸ್ಥಾನಗಳನ್ನು ಒಳಗೊಂಡಿರುವ ಸುಮಾರು ೧೪೦ ಗುಚ್ಛಗಳು ಅಥವಾ ತಂಡಗಳನ್ನು ಬಿಜೆಪಿಯು ಹುಟ್ಟುಹಾಕಿದ್ದು, ಒಂದಷ್ಟು ಮಂತ್ರಿಗಳು ಸೇರಿದಂತೆ ಹಿರಿಯ ನಾಯಕರ ದೊಡ್ಡ ಸೇನೆಯನ್ನೇ ಈ ತಂಡಗಳ ಉಸ್ತುವಾರಿಗಳನ್ನಾಗಿ ಅದು ನಿಯೋಜಿಸಿದೆ.

ಪ್ರತಿಯೊಂದು ಮತಕ್ಷೇತ್ರದ ತಳಮಟ್ಟದಲ್ಲಿ ನಿಯತ ಭೇಟಿಗಳು ಹಾಗೂ ವಿಭಿನ್ನ ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ, ಚುನಾವಣಾ ಕಾರ್ಯಚಟುವಟಿಕೆಗೆ ವೇಗ ಮತ್ತು ಉತ್ಸಾಹವನ್ನು ತುಂಬಲಾಗಿದೆ. ಪಕ್ಷವು ಕೈಗೊಂಡ ‘ಗಾಂವ್ ಚಲೋ’ (ಹಳ್ಳಿಗಳ ಕಡೆಗೆ ಸಾಗೋಣ) ಎಂಬ ಅಭಿಯಾನದ ಹೆಸರಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ದೇಶದ ಸುಮಾರು
ಶೇ.೮೦ರಷ್ಟು ಹಳ್ಳಿಗಳನ್ನು ತಲುಪಲು ಸಾಧ್ಯವಾಗಿರು ವುದು ಈ ವೇಗ ಮತ್ತು ಉತ್ಸಾಹದ ಕಾರಣದಿಂದಾಗಿಯೇ. ಇಷ್ಟು ಮಾತ್ರವಲ್ಲದೆ, ಪಕ್ಷವು ನೂರಾರು ಕರೆಕೇಂದ್ರಗಳನ್ನೂ (ಕಾಲ್ ಸೆಂಟರ್) ಸ್ಥಾಪಿಸಿದೆ; ಇದರಲ್ಲಿ ನಿಯೋಜಿಸಲಾಗಿರುವ ಸಾವಿ
ರಾರು ಕರೆಯಾಳುಗಳು, ಮೋದಿ ಸರಕಾರದ ಇದು ವರೆಗಿನ ಕಾರ್ಯವೈಖರಿ ಹಾಗೂ ಸಾಧನೆಗಳ ಬಗ್ಗೆ ಉದ್ದೇಶಿತ ಮತದಾರರಿಗೆ ತಿಳಿಸುತ್ತಾರೆ. ದೇಶದಲ್ಲಿರುವ ಸುಮಾರು ೩೦೦ ದಶಲಕ್ಷ ಮತದಾರರನ್ನು ತಲುಪಬಲ್ಲ ಸಾಮರ್ಥ್ಯ ಈ ಕಾರ್ಯಜಾಲಕ್ಕಿದೆ.

ದೆಹಲಿ-ಕೇಂದ್ರಿತ ರಾಜಕಾರಣದತ್ತಲೇ ಬಹುತೇಕವಾಗಿ ತನ್ನ ಗಮನವನ್ನು ನೆಟ್ಟಿರುವ ಮಾಧ್ಯಮಗಳ ಹದ್ದಿನ ಕಣ್ಣಿಗೆ ಸಿಲುಕದೆಯೇ ಈ ಎಲ್ಲ ಕಾರ್ಯ ಚಟುವಟಿಕೆಗಳು ಸಮರ್ಥವಾಗಿಯೇ ನಡೆಯುತ್ತಿವೆ. ಈ ಕಾರಣದಿಂದಾಗಿ ವಿಪಕ್ಷಗಳು ಇಕ್ಕಟ್ಟಿಗೆ ಸಿಲುಕುವಂತಾಗಿದೆ, ಕಂಗೆಡುವಂತಾಗಿದೆ. ಇಂಥದೊಂದು ಸುವ್ಯವಸ್ಥಿತ ಕಾರ್ಯಜಾಲವನ್ನು ಬೇರಾವ ಪಕ್ಷವೂ ನಿರ್ಮಿಸಿ ನಿರ್ವಹಿಸುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಈ ಮಧ್ಯೆ, ಬಿಜೆಪಿಯೇತರ ವಿಪಕ್ಷಗಳ ‘ಇಂಡಿಯ’ ಮೈತ್ರಿಕೂಟದ ಬಗ್ಗೆ ಮಾತಾಡುವುದಾದರೆ, ಶುರುವಿನಲ್ಲಿ ಸಾಕಷ್ಟು ಅಬ್ಬರ ಮಾಡಿದ್ದ ಈ ಕೂಟವು ಹತಾಶೆಗೆ ಸಿಲುಕಿರುವಂತೆ ತೋರುತ್ತಿದೆ. ಈ
ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿದ್ದ ಹೆಚ್ಚಿನ ಪ್ರಾದೇಶಿಕ ಪಕ್ಷಗಳು ಅದಕ್ಕೆ ಶುಭವಿದಾಯ ಹೇಳುತ್ತಿದ್ದರೆ, ಮತ್ತೆ ಕೆಲವು ಎನ್‌ಡಿಎ ಒಕ್ಕೂಟವನ್ನು ಸೇರಲು ತವಕಿಸುತ್ತಿರುವುದು ಗಮನಾರ್ಹ ಸಂಗತಿ.

ಹೀಗಾಗಿ ‘ಇಂಡಿಯ’ ಮೈತ್ರಿಕೂಟ ಭ್ರಮನಿರಸನಕ್ಕೆ ಒಳಗಾಗಿದೆ ಎನ್ನಲಡ್ಡಿಯಿಲ್ಲ. ಈ ಮೈತ್ರಿಕೂಟದ ಸಹವರ್ತಿ ಪಕ್ಷಗಳಲ್ಲಿ ಅತಿದೊಡ್ಡದು ಎನಿಸಿಕೊಂಡಿದ್ದ ಕಾಂಗ್ರೆಸ್, ಸ್ಪೂರ್ತಿದಾಯಕವಲ್ಲದ ನಾಯಕತ್ವದ ಕಾರಣದಿಂದಾಗಿ ಸೊರಗಿದೆ ಮತ್ತು ಕುಟುಂಬ ರಾಜಕಾರಣದ ಕಬಂಧ ಬಾಹುಗಳಿಂದ ಬಿಡಿಸಿಕೊಳ್ಳಲು ಅದಕ್ಕಿನ್ನೂ ಸಾಧ್ಯವಾಗಿಲ್ಲ. ಈ ಪಕ್ಷದ ವಿಭಜಕ ಕಾರ್ಯ ಸೂಚಿಗಳು ಮತ್ತು ಪಕ್ಷಕ್ಕೆ ಸಮರ್ಥ ಚುಕ್ಕಾಣಿಯಿಲ್ಲದಿರುವ ಕಾರಣದಿಂದಾಗಿ ಒಂದಷ್ಟು ಒಳ್ಳೆಯ ಹಾಗೂ ಸಮರ್ಥ ನಾಯಕರ ಪಾಲಿಗೆ ಪಕ್ಷದ ವಾತಾವರಣವು ತೀರಾ ಅಸಹನೀಯವಾಗುತ್ತಿದೆ. ಹೀಗಾಗಿ ಅನೇಕ ನಾಯಕರು ಈಗಾಗಲೇ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದು, ಇನ್ನೂ ಸಾಕಷ್ಟು ನಾಯಕರು ಅವರ ಹಾದಿಯನ್ನೇ ಹಿಡಿದರೂ ಅಚ್ಚರಿಯಿಲ್ಲ.

ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳೆಂದರೆ ಹಬ್ಬಗಳಿದ್ದಂತೆ. ಕೆಲವೊಂದು ಅಹಿತಕರ ಬೆಳವಣಿಗೆ ಗಳ ಹೊರತಾಗಿಯೂ, ಈ ಚುನಾವಣೆಗಳು ಕಳೆದ ೩ ದಶಕಗಳಲ್ಲಿ ತಮ್ಮಲ್ಲಿ ಮೈಗೂಡಿರುವ ಪಾರದರ್ಶಕತೆ ಹಾಗೂ ದಕ್ಷತೆಯಿಂದಾಗಿ ಹೆಸರುವಾಸಿಯಾಗಿವೆ.
ಭಾರತದ ಮತದಾರ ಪ್ರಭುಗಳು ಪ್ರಬುದ್ಧತೆಯನ್ನು ತೋರಿಸಿಕೊಂಡು ಬರುತ್ತಿರುವುದರ ಜತೆಗೆ, ಎಲ್ಲಾ ಪಕ್ಷಗಳೆಡೆಗೂ ನಿಷ್ಠುರ ವಾಗಿ ನಡೆದುಕೊಳ್ಳುವ ಸಾಮರ್ಥ್ಯವನ್ನೂ ಪ್ರದರ್ಶಿಸುತ್ತಿದ್ದಾರೆ. ಈ ಬಾರಿಯ ಚುನಾವಣೆಯು ಇದಕ್ಕಿಂತ ಭಿನ್ನವಾಗಿರು
ತ್ತದೆ ಎಂದೇನಿಲ್ಲ.

ಪ್ರಧಾನಿ ನರೇಂದ್ರ ಮೋದಿಯವರ ಪರಿಕಲ್ಪನೆಯ ಭಾರತವು ಆತ್ಮವಿಶ್ವಾಸ ಮತ್ತು ಮಹತ್ವಾಕಾಂಕ್ಷೆಗಳಿಂದ ನಳನಳಿಸುತ್ತಿದೆ; ಸದಾ ಚಟುವಟಿಕೆಯಿಂದ ಕೂಡಿರುವುದು ಅದರ ಲಕ್ಷಣವಾಗಿಬಿಟ್ಟಿದೆ. ಬಡತನ ಹಾಗೂ ಭ್ರಷ್ಟಾಚಾರವನ್ನು ಕೊನೆ ಗೊಳಿಸುವುದು, ಪರಿಪೂರ್ಣ ಸಾಮಾಜಿಕ ನ್ಯಾಯವನ್ನು ಆಚರಣೆಗೆ ತರುವುದು ಮತ್ತು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿಸುವುದು, ಹಾಗೂ ಈ ಎಲ್ಲ ಉಪಕ್ರಮಗಳ ನೆರವಿನಿಂದ ಭಾರತವನ್ನು ಒಂದು ಸಮೃದ್ಧ ರಾಷ್ಟ್ರವನ್ನಾಗಿ ರೂಪಿಸುವುದು ಇವು ಪ್ರಧಾನಿ ಮೋದಿಯವರ ಸಮ್ಮುಖದಲ್ಲಿರುವ ಮತ್ತು ತಕ್ಷಣ ನೆರವೇರಬೇಕಿರುವ ಕೆಲವೊಂದು ಗುರಿಗಳಾಗಿವೆ.

ಆದರೆ, ಇವನ್ನೂ ಮೀರಿದ ಒಂದು ಭವ್ಯ ದೃಷ್ಟಿಕೋನ ಅವರೆದುರು ಮೈಚೆಲ್ಲಿಕೊಂಡಿದೆ. ೨೦೪೭ರ ವೇಳೆಗೆ ‘ವಿಕಸಿತ ಭಾರತ’ವನ್ನು ರೂಪಿಸುವುದು ಮೋದಿಯವರ ಮಧ್ಯಾವಧಿ ಧ್ಯೇಯವಾಗಿದ್ದರೆ, ದೀರ್ಘಕಾಲಿಕ ದೃಷ್ಟಿಕೋನವನ್ನೂ ಅವರು
ನಮ್ಮೆದುರು ಮಂಡಿಸುತ್ತಿದ್ದಾರೆ. ಅದರ ಪರಿಧಿಯು ಕೇವಲ ಒಂದು ಶತಮಾನದ್ದಲ್ಲ, ಒಂದು ಸಹಸ್ರಮಾನದ್ದು! ಅದೇನೆಂದು ತಿಳಿಯಲು ಅವರು ‘ಎಕ್ಸ್’ (ಟ್ವಿಟರ್) ಮಾಧ್ಯಮದಲ್ಲಿ ಇತ್ತೀಚೆಗೆ ಹಂಚಿಕೊಂಡ ಅಭಿಪ್ರಾಯವೊಂದರ ಕಡೆಗೆ  ಕಣ್ಣುಹಾಯಿಸಬೇಕು.

ಅದು ಹೀಗಿದೆ: ‘ಮುಂದಿನ ಐದು ವರ್ಷಗಳು ನಮ್ಮ ಪಾಲಿಗೆ ಹೇಗಿರಲಿವೆ, ಅವು ಯಾವುದರ ಕುರಿತಾಗಿ ಇರಲಿವೆ ಎಂಬುದು ನನಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ; ಮುಂದಿನ ಸಾವಿರ ವರ್ಷಗಳವರೆಗೆ ಒಂದು ರಾಷ್ಟ್ರವಾಗಿ ನಾವು ಹೆಜ್ಜೆಹಾಕುವ ಪಥಕ್ಕೆ ನಮಗೆ
ಮಾರ್ಗದರ್ಶನ ನೀಡುವ ಹಾಗೂ ಸಮೃದ್ಧಿ, ಸರ್ವಾಂಗೀಣ ಬೆಳವಣಿಗೆ ಹಾಗೂ ಜಾಗತಿಕ ನಾಯಕತ್ವದ ಒಂದು ಸಾಕಾರರೂಪ ವಾಗಿ ಭಾರತವನ್ನು ರೂಪಿಸುವ ಮಾರ್ಗಸೂಚಿಯನ್ನು ಸ್ಥಾಪಿಸುವ ನಮ್ಮೆಲ್ಲರ ಸಾಮೂಹಿಕ ಸಂಕಲ್ಪವು ನನಗಿಲ್ಲಿ ಸ್ಪಷ್ಟವಾಗಿ
ಕಾಣುತ್ತಿದೆ’. ಭಾರತ ಹೇಗಿರಬೇಕು, ಅದರ ನಾಯಕತ್ವ ಹೇಗಿರಬೇಕು ಎಂಬುದನ್ನು ಈಗಿಂದಲೇ ಪರಿಕಲ್ಪಿಸಿಕೊಳ್ಳುವುದಕ್ಕೆ ಇಷ್ಟು ಸಾಕಲ್ಲವೇ? ಅಮೆರಿಕನ್ ಕವಿ ರಾಬರ್ಟ್ ಫಸ್ಟ್ ಅವರು ತಮ್ಮ ಕವನವೊಂದರಲ್ಲಿ ಒಂದು ಕಡೆ, ‘ನಾನು ಚಿರ ನಿದ್ರೆಗೆ ಜಾರುವು ದಕ್ಕೂ ಮುನ್ನ ಅನೇಕ ಸಾಧನೆಗಳನ್ನು ಮಾಡುವುದಿದೆ ಹಾಗೂ ಗಣನೀಯ ಹೊಣೆಗಾರಿಕೆ ಗಳನ್ನು ನಿಭಾಯಿಸುವುದಿದೆ’ ಎಂದು ಹೇಳಿಕೊಂಡಿದ್ದಾರೆ.

ಇದು ಪ್ರಧಾನಿ ಮೋದಿ ಯವರಿಗೆ ಅಕ್ಷರಶಃ ಅನ್ವಯವಾಗುವ ಸಾಲು. ಏಕೆಂದರೆ, ಅವರು ಅಪ್ರತಿಮ ಸಾಧಕ ಹಾಗೂ  ದಣಿವರಿ ಯದ ದುಡಿಮೆಗಾರ. ಒಂದು ದೇಶವಾಗಿ ನಾವು ಅವರಿಗೆ ಮತ್ತೊಮ್ಮೆ ಉತ್ತೇಜನವನ್ನು ನೀಡಬೇಕಿದೆ.

(ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್)
(ಲೇಖಕರು ‘ಇಂಡಿಯಾ ಫೌಂಡೇಷನ್’ ಸಂಸ್ಥೆಯ
ಅಧ್ಯಕ್ಷರು ಮತ್ತು ಆರೆಸ್ಸೆಸ್‌ನ ಸಹವರ್ತಿ)