Friday, 21st June 2024

ಎಲ್ಲದಕು ಕಾರಣ ಪೆನ್ ಡ್ರೈವ್ ಅಲ್ಲ, ’ಡ್ರೈವರ್‌’

ಸಿನಿಗನ್ನಡ

ತುಂಟರಗಾಳಿ

ತಮ್ಮ ‘ಮುಂದುವರಿದ ಅಧ್ಯಾಯ’ ಚಿತ್ರದ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿದ್ದ ಯೂಟ್ಯೂಬರ್‌ಗಳ ಮೇಲೆ ನಟ ಆದಿತ್ಯ ರಾಂಗ್ ಆಗಿದ್ದರು. ಅದರ
ಮುಂದುವರಿದ ಅಧ್ಯಾಯ ಎನ್ನುವಂತೆ ತಮ್ಮ ಇತ್ತೀಚಿನ ಚಿತ್ರ ‘ಕಾಂಗರೂ’ ವಿಷಯದಲ್ಲೂ ವಿಮರ್ಶಕರಿಗೆ ಉಪಾಧ್ಯಾಯರ ಥರ ಕ್ಲಾಸ್ ತೆಗೆದುಕೊಂಡಿ ದ್ದರು. ಆದರೆ ಈ ಬಾರಿ ಅವರ ಅದೃಷ್ಟಕ್ಕೆ ಕಾಂಗರೂ ಚಿತ್ರ ಚೆನ್ನಾಗಿತ್ತು. ಎಲ್ಲರೂ ಚೆನ್ನಾಗಿದೆ ಅಂತ ವಿಮರ್ಶೆ ಮಾಡಿದ್ರು. ಆದರೆ ಏನ್
ಮಾಡೋದು ಸಿನಿಮಾ ಚೆನ್ನಾಗಿದ್ರೂ ಆದಿತ್ಯ ಅವರ ಅದೃಷ್ಟ ಚೆನ್ನಾಗಿಲ್ಲ. ಹಾಗಾಗಿ ಕಾಂಗರೂ ರನ್ನಿಂಗ್ ಸಕ್ಸಸ್ ಫುಲಿ, ಜಂಪಿಂಗ್ ಸಕ್ಸಸ್ ಫುಲಿ ಅನ್ನೋ ಹಂತ ತಲುಪದೇ ಕುಂಟುತ್ತಲೇ ಸಾಗಿದೆ.

ಅಂದಹಾಗೆ ಇದೇನೂ ಹೊಸ ವಿಷಯ ಅಲ್ಲ, ನಿರ್ದೇಶಕ ಎ.ಪಿ. ಅರ್ಜುನ್ ಕೂಡಾ ಕೆಟ್ಟದಾಗಿ ಸಿನಿಮಾ ವಿಮರ್ಶೆ ಮಾಡುವ ಯೂಟ್ಯೂಬರ್‌ಗಳ ಮೇಲೆ ‘ಪೊಗರು’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದಿದ್ದರು. ಆದಿತ್ಯ ಇನ್ನೂ ಸ್ವಲ್ಪ ಮುಂದುವರಿದು ವಾಣಿಜ್ಯ ಮಂಡಳಿಯ ಛೇಂಬರ್‌ವರೆಗೂ ಈ ವಿಷಯವನ್ನು ತೆಗೆದುಕೊಂಡು ಹೋಗಿದ್ದರು. ಅಲ್ಲಿ, ಯೂಟ್ಯೂಬರ್‌ಗಳ ಮೇಲೆ ಕ್ರಮ ತೆಗೆದುಕೊಳ್ಳುವ ಭರವಸೆ ಸಿಕ್ಕಿದ್ದರೂ ಛೇಂಬರ್ ಯಾವುದೇ ಕ್ರಮ ತೆಗೆದುಕೊಂಡ ಬಗ್ಗೆ ವರದಿ ಆಗಲಿಲ್ಲ. ಆದರೆ ಈ ವಿಷಯಕ್ಕೆ ನೆಟ್ಟಿಗರು ಮಾತ್ರ ‘ಇದು ಕೆಟ್ಟ ಬೆಳವಣಿಗೆ, ನಿಮ್ಮ ಸಿನಿಮಾ ನೋಡಿದವರೆಲ್ಲ, ಚೆನ್ನಾಗಿದೆ ಅಂತಲೇ ವಿಮರ್ಶೆ ಮಾಡಬೇಕಾ?’ ಅಂತ ಪ್ರಶ್ನೆ ಕೇಳಿದ್ದರು.

ಆದಿತ್ಯ ‘ನನ್ಮಕ್ಳು, ಡಬ್ಬಾ ನನ್ಮಕ್ಳು’ ಎಂದೆಲ್ಲಾ ಪದಪ್ರಯೋಗ ಮಾಡಿ, ಯೂಟ್ಯೂಬರ್‌ಗಳನ್ನ ‘ಬಂದು ನಮ್ಮ ಸಿನಿಮಾದಲ್ಲಿ ಲೈಟ್, ಕ್ಯಾಮೆರಾ ಹೊರುವ ಕೆಲಸ ಮಾಡಿ, ಇಲ್ಲಾಂದ್ರೆ ಮುಚ್ಕೊಂಡು ಮನೇಲಿರಿ’ ಎಂದಿದ್ದರು. ಈಗ ತಮ್ಮ ಚಿತ್ರ ಚೆನ್ನಾಗಿದೆ ಅಂತ ಬರೆದ, ವಿಡಿಯೋ ಮಾಡಿದವರಿಗೆಲ್ಲಾ ಆದಿತ್ಯ ಅವರು ಕರೆದು ಶೀಲ್ಡ್ ಏನಾದ್ರೂ ಕೊಡ್ತಾ ಇದ್ದಾರಾ, ಅಲ್ಲದೆ ಆದಿತ್ಯ ಅವರಿಗೆ ಇರೋ ಮಾರ್ಕೆಟ್ ಇಷ್ಟೇ. ಅಂಥದ್ರಲ್ಲಿ ಕೆಲಸ ಮಾಡೋದಕ್ಕಿಂತ ಮಾತಾಡೋದೇ ಜಾಸ್ತಿ ಆದ್ರೆ ಇನ್ನೇನಾಗುತ್ತೆ ಅಂತ ಗಾಂಧಿನಗರದ ಮಂದಿ ಕುಹಕ ಆಡುತ್ತಿದ್ದಾರೆ.

*

ಲೂಸ್ ಟಾಕ್ – ವಿರಾಟ್ ಕೊಹ್ಲಿ
ಏನು ಕೊಹ್ಲಿ ಅವ್ರೇ, ಇತ್ತೀಚೆಗೆ ನಿಮ್ದು ಆರ್‌ಸಿಬಿದು ಹವಾ ಜೋರಾಗಿದೆ..
– ಹೌದು, ನಮ್ಗೆ, ಬಾಯಿಗ್ ಬರ್ಸಿ ಗೆಲ್ಲೋಕೂ ಗೊತ್ತು, ಇಲ್ಲಾ ಒಂದೇ ಸಲಕ್ಕೆ ಬಾರ್ಸಿ ಬಿಸಾಕೋದೂ ಗೊತ್ತು ಅಂತ ಪ್ರೂವ್ ಮಾಡಿದ್ವಿ.

ಆದ್ರೂ ಕಂಟಿನ್ಯುಯಸ್ ಆಗಿ ನಾಲ್ಕು ಮ್ಯಾಚ್ ಗೆದ್ಬಿಟ್ರಿ, ಅಭಿಮಾನಿಗಳಿಗೆ ನಂಬೋಕೇ ಆಗ್ತಿಲ್ಲ
– ನಾಕ್ ಜನ ಆಡ್ಕೊಂಡ್ ನಗೋ ಥರ ಇದ್ದೋರು ಅನ್ನೋ ಅಪಖ್ಯಾತಿ ಇತ್ತಲ್ಲ ಅದಕ್ಕೇ, ನಾಕ್ ಮ್ಯಾಚ್ ಕಂಟಿನ್ಯುಯಸ್ ಆಗಿ ಹೊಡೆದ್ವಿ.

ಅದ್ಸರಿ, ಇಷ್ಟ್ ವರ್ಷ ಹಿಂದೆನೇ ಉಳಿತಿದ್ದ ನಮ್ಮ ಆರ್‌ಸಿಬಿ ಈ ಸಲ ಕಮ್‌ಬ್ಯಾಕ್ ಮಾಡಿರೋದ್ ನೋಡಿ ಹಲವರಿಗೆ ಉರಿ ಶುರುವಾಗಿದೆ ಯಲ್ಲಾ
– ಹೌದು, ಅವರೆಲ್ಲಾ ಅಜೆಂಟಾಗಿ ಬ್ಯಾಕ್ ಇನ್ಶ್ಯೂರೆನ್ಸ್ ಮಾಡಿಸಿಕೊಳ್ಳೋ ಹಾಗೆ ಮಾಡಿದ್ದೀವಿ.

ಶಿವಂ ದುಬೆ ಆರ್‌ಸಿಬಿ ಬಿಟ್ಟು ಹೋದ ಮೇಲೆ, ನಮ್ಮ ಮೇಲೆನೇ ಚೆನ್ನಾಗಿ ಆಡ್ತಾ ಇದ್ದಾನಲ್ಲಾ, ಕೊನೇ ಮ್ಯಾಚು ಕಷ್ಟ ಅಲ್ವಾ?
– ಹೌದು. ಆರ್‌ಸಿಬಿಲಿದ್ದಾಗ ನಮ್ ಬೋಲರ್ಸ್‌ಗೆ ನೆಟ್ ಅಲ್ಲಿ ಚೆನ್ನಾಗಿ ಆಡ್ತಿದ್ದ. ಆದ್ರೆ ಆಪೋಸಿಟ್ ಟೀಮ್ ಮೇಲೆ ಆಡ್ತಾ ಇರಲಿಲ್ಲ. ಅವನಿಗೇನಿದ್ರೂ ಆರ್‌ಸಿಬಿ ಬೋಲರ್ಸ್‌ಗೆ ಮಾತ್ರ ಹೊಡೆಯೋಕೆ ಬರೋದು. ಅದಕ್ಕೆ ಈಗ ಹೊಡಿತಾ ಇದ್ದಾನೆ.

ಸರಿ, ಈ ಸಲನಾದ್ರೂ ನಾವು ಕಪ್ ಗೆದ್ರೆ ಅದನ್ನ ಹೆಂಗ್ ಸೆಲೆಬ್ರೇಟ್ ಮಾಡ್ತೀರಾ?
– ಕಪ್ ಕೇಕ್ ಕಟ್ ಮಾಡಿ.
(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ಇಡೀ ನೇಷನ್ ಕೊರೋನಾಗೆ ವ್ಯಾಕ್ಸಿನೇಷನ್ ಹಾಕಿಸಿಕೊಂಡು, ಈಗ ಯಾಕಾದರೂ ಕೋವಿಶೀಲ್ಡ್ ವ್ಯಾಕ್ಸಿನ್ ಹಾಕಿಸಿಕೊಂಡೆವೋ ಅಂತ ಪಶ್ಚಾತ್ತಾಪ
ಪಡುವ ಧಾವಂತದಲ್ಲಿ ಇರುವಾಗ ಯಾವನೋ ಒಬ್ಬ ಹುಚ್ಚ ‘ನಾನು ಎಲ್ಲರಿಗೂ ಏಡ್ಸ್ ಕಾಯಿಲೆ ಹರಡಿಸಿಬಿಡ್ತೀನಿ’ ಎನ್ನುವ ಕೆಟ್ಟಬುದ್ಧಿಗೆ ಇಳಿದಿದ್ದ. ಏಡ್ಸ್ ಸೋಂಕು ಇರೋ ಬ್ಲಡ್ ಅನ್ನು ಸಿರಿಂಜ್‌ನಲ್ಲಿ ಹಾಕಿಕೊಂಡು ರಸ್ತೆಯಲ್ಲಿ ಹೋಗೋ ಬರೋವ್ರಿಗೆಲ್ಲಾ, ‘ಇದು ಎಚ್‌ಐವಿ ಪಾಸಿಟಿವ್ ಇರೋ ಬ್ಲಡ್ಡು, ಚುಚ್ಚಿಬಿಡ್ತೀನಿ, ಚುಚ್ಚಿಬಿಡ್ತೀನಿ’ ಅಂತ ಹೆದರಿಸ್ತಾ ಇದ್ದ. ಅವನನ್ನು ನೋಡಿ ಎಲ್ಲರೂ ದೂರ ಓಡಿಹೋಗುತ್ತಿದ್ದರು.

ಅಷ್ಟರಲ್ಲಿ ಸೋಮು ಬಂದು, ‘ಅಲ್ಲಿ ಯಾವನೋ ಹುಚ್ಚ ತಿರುಗಾಡ್ತಾ ಇದ್ದಾನೆ. ಏಡ್ಸ್ ಇರೋ ಬ್ಲಡ್‌ನ ಇಂಜೆಕ್ಷನ್ ಸಿರಿಂಜ್‌ಗೆ ಹಾಕ್ಕೊಂಡು, ಎಲ್ಲರಿಗೂ ಚುಚ್ಚಿಬಿಡ್ತೀನಿ, ಚುಚ್ಚಿಬಿಡ್ತೀನಿ ಅಂತ ಹೆದರಿಸ್ತಾ ಇದ್ದಾನೆ. ನೀನು ಮಾತ್ರ ಆ ಕಡೆ ಹೋಗ್ಬೇಡ’ ಅಂತ ಖೇಮುಗೆ ಹೇಳಿದ. ಅದಕ್ಕೆ ಖೇಮು, ‘ಅಯ್ಯೋ
ಅಂಥವರಿಗೆಲ್ಲಾ ನಾನು ತಲೆಕೆಡಿಸಿಕೊಳ್ಳಲ್ಲ, ನಾನ್ ನೋಡ್ಕೊತೀನಿ ಬಿಡು’ ಅಂತ ಆ ಹುಚ್ಚ ಓಡಾಡ್ತಾ ಇದ್ದ ರೋಡಿಗೇ ಹೋದ.

‘ಲೋ, ಬ್ಯಾಡ ಕಣೋ, ಅವನೇನಾದ್ರೂ ಚುಚ್ಚಿಬಿಟ್ರೆ ನಿಂಗೆ ಏಡ್ಸ್ ಬರುತ್ತೆ’ ಅಂತ ಜತೆಗಿದ್ದವರು ಹೇಳಿದರೂ ಕೇಳದೇ ಹೋದ ಖೇಮು ಹತ್ರ ಬಂದ ಹುಚ್ಚ, ಎಲ್ಲರಿಗೂ ಹೆದರಿಸಿದಂತೇ ಅವನಿಗೂ, ‘ಚುಚ್ಚಿಬಿಡ್ತೀನಿ, ಚುಚ್ಚಿಬಿಡ್ತೀನಿ’ ಅಂತ ಹೆದರಿಸಿದ. ಅದಕ್ಕೆ ಖೇಮು ಕೂಲಾಗಿ, ‘ಆಯ್ತು ಚುಚ್ಕೋ’
ಅಂದ. ಹುಚ್ಚನಿಗೆ ಕೊಂಚ ಗಾಬರಿ ಆಯ್ತು. ‘ಲೋ, ಇದು ಏಡ್ಸ್ ಇರೋ ರಕ್ತ, ಚುಚ್ಚಿದ್ರೆ ನಿಂಗೂ ಏಡ್ಸ್ ಬರುತ್ತೆ, ಸತ್ತೋಗ್ತೀಯ’ ಅಂದ. ಅದಕ್ಕೆ ಖೇಮು ಇನ್ನೂ ಕೂಲಾಗಿ ಹೇಳಿದ ‘ಅಯ್ಯೋ, ಚುಚ್ಕೊಳ್ಳೊಲೇ, ನಾನ್ ಕಾಂಡೋಮ್ ಹಾಕ್ಕೊಂಡಿದೀನಿ’.

ಲೈನ್ ಮ್ಯಾನ್

ಸಿಎಸ್‌ಕೆ ತಂಡ ಸೋತಾಗ ಅಭಿಮಾನಿಗಳ ಹಾಡು
– ಪೋಗಾದಿರೇಲೋ ರಂಗ ಬಿಲದಿಂದಾಚೆ, ಪೋಡಾದಿರೆಲೋ ವಿಶಲ್ಲ, ಬಾಯಿಯಿಂದಾಚೆ

ನೆಗೆಟಿವ್ ರನ್ ರೇಟ್ ಇದ್ದ ಆರ್ ಸಿಬಿ ತಂಡ ರನ್ ರೇಟ್ ಹೆಚ್ಚಿಸಿಕೊಂಡು ಪಾಸಿಟಿವ್ ಆದಾಗ
– ಆರ್‌ಸಿಬಿ ಪಾಸಿಟಿವ್

ಆರ್‌ಸಿಬಿ ಸೋತಾಗ ಅಭಿಮಾನಿ ಮಾತು

– ಫಸ್ಟ್ ಲವ್ ಆಗೋಕೆ ಮುಂಚೆನೇ ಬ್ರೇಕ್ ಅಪ್ ಸಾಂಗ್ಸ್ ಕೇಳ್ತಿದ್ದ ಮಗ ನಾನು. ಎದೆಯಲ್ಲಿ ಫೆವಿಕಾಲ್ ಇದ್ದೋನಿಗೆ ಇದೆಲ್ಲ ಅಂಟೋದು ಇಲ್ಲ

ಎಸ್‌ಆರ್‌ಎಚ್ ತಂಡ ಅತಿ ಹೆಚ್ಚು ರನ್ ಗಳಿಸಿದಾಗ
– ರನ್ ರೈಸರ್ಸ್ ಹೈದರಾಬಾದ್

ನಮ್ಮ ಸಮಾಜದ ಬಂಡವಾಳ

– ನಮ್ ಜನಕ್ಕೆ, ತಾವೇ ವೋಟು ಹಾಕಿ ಗೆಲ್ಲಿಸಿದ ಭ್ರಷ್ಟರನ್ನ, ಲಂಚ ತಿನ್ನೋರನ್ನ ಪ್ರಶ್ನೆ ಮಾಡೋ ಮೀಟರ್ ಇರಲ್ಲ. ಹಂಗಾಗಿ, ತಮ್ಮ ಮನೆ ಹತ್ತಿರ ಕಸ ಇರೋ ಜಾಗದಲ್ಲಿ ಕಸ ಹಾಕೋರ ಮೇಲೆ ದುರಹಂಕಾರ ತೋರಿಸಿ, ತಮ್ಮ ಇಗೋ ತಣಿಸಿಕೊಳ್ಳುತ್ತಾರೆ.

೧೦ ರುಪಾಯಿಗೊಂದ್ ಮಾತು
– ಯಾವುದೇ ಕಾನೂನು ಇಲ್ಲ ಅಂದ್ರೂ ೧೦ ರುಪಾಯಿ ಕಾಯಿನ್ ಬ್ಯಾನ್ ಆಗಿದೆ ಅಂತ ಎಲ್ರನ್ನೂ ನಂಬಿಸಿದ್ದಾರೆ ಅಂದ್ರೆ ನಮ್ ಜನನ್ನ ಯಾಮಾರಿಸೋದು ಎಷ್ಟ್ ಸುಲಭ, ಯೋಚ್ನೆ ಮಾಡಿ..

ಪ್ರಜ್ವಲ್ ರೇವಣ್ಣ ವಿಷಯ ಹೊರಗೆ ತಂದಿದ್ದು ಪೆನ್ ‘ಡ್ರೈವ್’ ಅಲ್ಲ
– ಡ್ರೈವರ್

ಪ್ರಜ್ವಲ್ ರೇವಣ್ಣನ್ನ ತಗಲಾಕಿದವರೇ ಈಗ ತಗಲಾಕಿಕೊಂಡಿದ್ದಾರೆ 

– ಕೆಲವು ಪೆನ್ ಡ್ರೈವ್‌ಗಳಿಗೆ ಎರಡೂ ಎಂಡ್ ಇರುತ್ತೆ.

ಪ್ರಜ್ವಲ್ ರೇವಣ್ಣ ನಿತ್ಯಾನಂದನ ಕೈಲಾಸಕ್ಕೆ ಹೋಗ್ತಾರಂತೆ
– ಡಿಕೆಶಿ: ಅಲ್ಲೂ ನಮ್ಮ ಸರಕಾರನೇ ಇರೋದು, ‘ಕೈ’ಲಾಸ

ದಸರಾ ಆಚರಣೆಯನ್ನು ಸರಕಾರ ಲೈಟಾಗಿ ತಗೊಂಡ್ರೆ, ಅದು

– ಸದರ

Leave a Reply

Your email address will not be published. Required fields are marked *

error: Content is protected !!