Thursday, 12th December 2024

ಒಡನಾಟ ಇಟ್ಟುಕೊಂಡವರೆಲ್ಲಾ ನಿಜವಾದ ಸ್ನೇಹಿತರಲ್ಲ..

ನೂರೆಂಟು ವಿಶ್ವ

ಕೆಲ ವರ್ಷದ ಹಿಂದೆ ಫೇಸ್‌ಬುಕ್‌ನಲ್ಲಿ ಒಂದು ಮೆಸೇಜ್ ಬರೆದಿದ್ದೆ- ನಿಮ್ಮ ನಿಜವಾದ ಸ್ನೇಹಿತರು ಯಾರು, ಶತ್ರುಗಳು ಯಾರು, ಹಿತಶತ್ರುಗಳ್ಯಾರು,
ಗೋಮುಖ ವ್ಯಾಘ್ರಗಳು ಯಾರು ಎಂಬುದನ್ನು ತಿಳಿಯಬೇಕೆನಿಸಿದರೆ, ನೀವು ನಿಮ್ಮ ಕೆಲಸಕ್ಕೆ ರಾಜೀನಾಮೆ ಕೊಡಬೇಕು ಅಥವಾ ನಿಮ್ಮ ಅಧಿಕಾರ ಹೋಗಬೇಕು. ನಂತರ ಗೊತ್ತಾಗುತ್ತದೆ ನಿಮಗೆ ಜನರ ನಿಜ ಬಂಡವಾಳ.

ಈ ಮೆಸೇಜ್ ಅನ್ನು ಪೋಸ್ಟ್ ಮಾಡಿ ಅರ್ಧಗಂಟೆಯೂ ಆಗಿರಲಿಲ್ಲ. ಸುಮಾರು ನೂರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದರು. ಅವರ ಪ್ರತಿಕ್ರಿಯೆಯ ತೀವ್ರತೆ ಕಂಡು ಮೆಸೇಜನ್ನು ವಾಪಸ್ ಪಡೆದೆ. ಬಹುತೇಕ ಎಲ್ಲರ ಅನಿಸಿಕೆಗಳಲ್ಲೂ ಸಾಮ್ಯವಿತ್ತು. ‘ನಾವು ನಮ್ಮ ಅಗ್ದಿ ಆಪ್ತ ಸ್ನೇಹಿತ ಅಂತ ಅಂದು ಕೊಂಡಿರ್ತೀವಿ. ನಮ್ಮ ಅಂತರಂಗದ ಗರ್ಭಗುಡಿಯೊಳಗೆ ಅವನಿಗೊಂದು ಜಾಗ ಕಲ್ಪಿಸಿರುತ್ತೇವೆ. ಆತ ನಮ್ಮಿಂದ ಅಲ್ಲಿ ಉಪಕಾರಗಳನ್ನು ಪಡೆಯುತ್ತಾ,
ತುಂಬಾ ಕ್ಲೋಸ್ ಆಗಿರುವವನಂತೆ ನಟಿಸುತ್ತಾ ಇರುತ್ತಾನೆ.

ಒಂದೊಮ್ಮೆ ನಮ್ಮ ಸ್ಥಾನಮಾನದಲ್ಲಿ ಸ್ವಲ್ಪ ಏರುಪೇರಾದರೆ, ಸ್ಥಾನಕ್ಕೆ ಚ್ಯುತಿಯಾದರೆ ಬಿಸಿ ಆಲೂಗಡ್ಡೆಯನ್ನು ಬಿಸಾಡುತ್ತಾರಲ್ಲಾ, ಹಾಗೆ ಎಸೆದು ಬಿಡುತ್ತಾನೆ. ಪ್ರತಿದಿನ ನಮಗೆ ನಾಲ್ಕು ಸಲ ಫೋನ್ ಮಾಡುತ್ತಿದ್ದವನಿಗೆ ಕಾಲ್ ಮಾಡಿದರೆ ಆತ ಫೋನ್ ಎತ್ತುವುದಿಲ್ಲ. ಮಿಸ್ಡ್ ಕಾಲ್‌ಗೂ ವಾಪಸ್ ಕರೆ
ಮಾಡುವುದಿಲ್ಲ. ದಿನಾ ಕಣ್ಣ ಮುಂದೆ ಸುಳಿದಾಡುವವ ನಾಪತ್ತೆ!’ ಎಂಬರ್ಥದಲ್ಲಿ ಸ್ನೇಹಿತರೊಬ್ಬರು ತಮ್ಮ ಅನುಭವವನ್ನು ಬಣ್ಣಿಸಿಕೊಂಡಿದ್ದರು. ಇನ್ನೊಬ್ಬರು ಬರೆದಿದ್ದರು- ‘ನನ್ನ ಅಧಿಕಾರ ಹೋದ ನಂತರವೂ, ನನಗೇ ನಿಷ್ಠರಾಗಿರಬೇಕು ಎಂದು ಬಯಸುವುದಿಲ್ಲ. ಕೆಲವರಿಗೆ ಹೊಟ್ಟೆಪಾಡಿನ ದರ್ದು ಇರುತ್ತದೆ. ಚಮಚಾಗಿರಿ, ಭಟ್ಟಂಗಿತನ ಮಾಡಿಕೊಂಡೇ ಅಂಥವರು ಬೇಳೆ ಬೇಯಿಸಿಕೊಳ್ಳುತ್ತಾರೆ. ಅಂಥವರ ನಡೆ ಯಾವಾಗ ಬೇಸರ ತರಿಸುತ್ತದೆ ಅಂದ್ರೆ, ಹೊಸ ಬಾಸ್‌ನ ಮುಂದೇ ನಮ್ಮನ್ನು ಟೀಕಿಸಲಾರಂಭಿಸಿದಾಗ. ನಿನ್ನೆ ತನಕ ಹಾಡಿ ಹೊಗಳುತ್ತಿದ್ದವರು, ತಕ್ಷಣ ಪ್ಲೇಟು ಬದಲಿಸುತ್ತಾರೆ’.

ಆನಂತರ ಇವರೆಲ್ಲರ ಅನಿಸಿಕೆಗಳನ್ನು ನೋಡಿ ನಾನು ಪ್ರತಿಕ್ರಿಯಿಸಿದ್ದೆ- ನಮ್ಮ ಸ್ನೇಹಿತರನ್ನು ಅರಿಯಲು ನಾವು ಪ್ರತಿ ಹತ್ತು ವರ್ಷಕ್ಕೊಮ್ಮೆ ಕೆಲಸ ಕಳೆದುಕೊಳ್ಳಬೇಕು. ಅದಾಗಿ ಒಂದು ತಿಂಗಳೊಳಗೆ ಹೊಸ ಕೆಲಸ ಗಿಟ್ಟಿಸಿಕೊಳ್ಳಬೇಕು. ಈ ಅವಧಿಯಲ್ಲಿ ನಿಮ್ಮ ಫ್ರೆಂಡ್ಸ್ ಲಿಸ್ಟ್ ಸಂಪೂರ್ಣ ಕ್ಲೀನ್
ಆಗಿರುತ್ತದೆ. ಇಷ್ಟಾಗಿಯೂ ಒಂದಿಬ್ಬರು ಸ್ನೇಹಿತರು ಉಳಿದುಕೊಂಡರೆ ಅವರು ನಿಜವಾದ ಸ್ನೇಹಿತರು.

ಇದು ನಿಜವಾಗಿಯೂ ಸ್ನೇಹಿತರ ತಪ್ಪಲ್ಲ, ಇದು ನಮ್ಮ ತಪ್ಪು. ಸ್ನೇಹಿತರು ಇರುವುದೇ ಹಾಗೆ. ನೀವು ಅಧಿಕಾರದಲ್ಲಿ ಇದ್ದವರೆಂಬ ಕಾರಣಕ್ಕೆ ಅವರು ಹತ್ತಿರವಾಗಿರುತ್ತಾರೆ. ಇದು ಅವರ ಸ್ವಭಾವ. ಆದರೆ ಅವರನ್ನು ಅಗ್ದಿ ಆಪ್ತ ಸ್ನೇಹಿತರು ಎಂದು ಪರಿಗಣಿಸಿ ಹತ್ತಿರಕ್ಕೆ ಇಟ್ಟುಕೊಂಡವರು ಯಾರು
ಹೇಳಿ? ನೀವೇ ತಾನೆ. ಮೊದಲೇ ಅವರನ್ನು ಲೈಫ್ ಬಾಯ್ ಸೋಪಿನ ಹಾಗೆ ಎಲ್ಲಿಡಬೇಕೋ ಅಲ್ಲಿಟ್ಟರೆ ಆರೋಗ್ಯ ಎಂಬಂತೆ ಎಲ್ಲರೂ ಅದನ್ನು ವಾಷ್ ಬೇಸಿನ್ ಮೇಲೆ ಇಡುವಂತೆ, ನೀವು ಅವರನ್ನು ಅಲ್ಲಿ ಇಟ್ಟಿದ್ದಿದ್ದರೆ ಈ ಸಮಸ್ಯೆಯು ಆಗಿರುತ್ತಿರಲಿಲ್ಲ. ಆದರೆ ಅವರನ್ನು ಹತ್ತಿರಕ್ಕೆ ಸೆಳೆದುಕೊಂಡವರು ನೀವೇ ತಾನೆ. ಕೊರಳ ಗೆಳೆಯ ಅಂತ ಸುತ್ತಿಕೊಂಡವರು ನೀವೇ ತಾನೆ? ಅವರು ಇಷ್ಟಪಟ್ಟಿದ್ದು ನಿಮ್ಮನ್ನಲ್ಲ, ನಿಮ್ಮ ಪ್ರೀತಿ, ಸ್ನೇಹವನ್ನಲ್ಲ. ಅವರು ಇಷ್ಟಪಟ್ಟಿದ್ದು ನಿಮ್ಮ ಅಧಿಕಾರವನ್ನು, ಹುದ್ದೆಯನ್ನು, ಅದರಿಂದ ಮಾಡಿಕೊಳ್ಳಬಹುದಾದ ಲಾಭವನ್ನು.

ಇಂದು ಆ ಸ್ಥಾನದಲ್ಲಿ ನೀವಿದ್ದೀರಿ. ಹೀಗಾಗಿ ನಿಮಗೆ ಬಕೆಟ್ ಹಿಡಿಯುತ್ತಾರೆ. ನಾಳೆ ಅದೇ ಜಾಗದಲ್ಲಿ ಮತ್ತೊಬ್ಬರು ಬಂದು ಕುಳಿತುಕೊಳ್ಳುತ್ತಾರೆ. ಬಕೆಟ್‌ನ ಜಾಗ ಕೂಡ ಬದಲಾಗುತ್ತದೆ. ನಾಡಿದ್ದು ಆ ಜಾಗಕ್ಕೆ ಮತ್ತ್ಯಾರೋ ಬಂದು ಕುಳಿತುಕೊಳ್ಳುತ್ತಾರೆ. ಆಗಲೂ ಇವರೇ ಅದನ್ನು ಹಿಡಿದು ನಿಂತಿರುತ್ತಾರೆ!
ಈಗ ಹೇಳಿ. ಬದಲಾದವರು ಯಾರು? ಅಧಿಕಾರದಲ್ಲಿರುವವರೇ ಹೊರತು, ಅವರ ಸನಿಹದಲ್ಲಿರುವ ಸ್ನೇಹಿತರು ಅಲ್ಲ. ಇವರಿರೋದೇ ಹಾಗೆ. ಇಂಥವ ರನ್ನೆಲ್ಲ ಸ್ನೇಹಿತರು ಎಂದು ಭಾವಿಸಿದ್ದು ನಿಮ್ಮ ತಪ್ಪು. ಈ ಕಾರಣಕ್ಕಾದರೂ ನೀವು ಪ್ರತಿ ಹತ್ತು ವರ್ಷಕ್ಕೊಮ್ಮೆ ಕೆಲಸ ಬಿಡಬೇಕು ಹಾಗೂ ಆದಷ್ಟು ಬೇಗ ಕೆಲಸ ಗಿಟ್ಟಿಸಬೇಕು.

ಆಗ ಅವರ ಮುಖವಾಡ ಕಳಚಿಬೀಳುವುದಕ್ಕಿಂತ ನಿಮಗೆ ನೀವು ಹೆಚ್ಚು ಅರ್ಥವಾಗುತ್ತೀರ. ಮುಖವಾಡವನ್ನೇ ಸದಾ ಧರಿಸುವವನಿಗೆ, ಅದು ಒಂದು
ಸಲ ಕಳಚಿದರೆ ಮತ್ತೊಂದನ್ನು ಧರಿಸುತ್ತಾನೆ. ಅವನು ಕಳೆದುಕೊಳ್ಳುವುದೇನಿಲ್ಲ. ಅಂಗಿ, ಬನಿಯನ್ ಬದಲಿಸಿದಂತೆ, ಮುಖವಾಡಗಳನ್ನು ಬದಲಿಸುತ್ತಾ ಹೋಗುತ್ತಾನೆ. ಅವನ ಮುಖವಾಡವನ್ನೇ ಮುಖ ಎಂದು ನೀವು ಭಾವಿಸಿದರೆ ತಪ್ಪು ಅವನದಾ? ನಿಮ್ಮದಾ? ಹೇಳಿ.

ಓಶೋ ರಜನೀಶ್ ಬಳಿ ಮಹಿಳೆಯೊಬ್ಬಳು ಹೇಳುತ್ತಾಳೆ- ಎಲ್ಲರೂ ಪ್ರೀತಿಸುತ್ತೇನೆ ಎಂದು ಮೋಸ ಮಾಡ್ತಾರಲ್ಲ. ಏಕೆ? ಓಶೋ ಹೇಳಿದ ಉತ್ತರ ಕೇಳಿ- ಯಾರನ್ನಾದರೂ ಮೋಸ ಮಾಡಬೇಕು ಅಂದೆನಿಸಿದರೆ ಪ್ರೀತಿಸುವಂತೆ ನಟಿಸುವುದರ ಹೊರತಾಗಿ ಬೇರ‍್ಯಾವ ಸುಲಭ ಉಪಾಯವೂ ಇಲ್ಲ. ಪ್ರೀತಿ, ಸ್ನೇಹದಿಂದ ಯಾರನ್ನಾದರೂ ಮೋಸ ಮಾಡಬಹುದು. ಮೋಸದ ಆಪ್ತ ಸಂಗಾತಿ ಪ್ರೀತಿ, ಸ್ನೇಹ. ಅದು ಅಕ್ಕಪಕ್ಕದಲ್ಲಿ ಇವೆರಡನ್ನು ಇರಿಸಿಕೊಂಡೇ ತನ್ನ
ಕೆಲಸ-ಕಾರ್ಯವನ್ನು ಸಾಧಿಸಿಕೊಳ್ಳುತ್ತದೆ. ಎಲ್ಲ ಮೋಸದಲ್ಲೂ ಪ್ರೀತಿ, ಸಲುಗೆ, ಸ್ನೇಹವಿರುತ್ತದೆ.

ಆದರೆ ಪ್ರೀತಿಯಲ್ಲಿ ಮೋಸವಿರುವುದಿಲ್ಲ. ಆದರೆ ನೀನು ಮೋಸವನ್ನೇ ಪ್ರೀತಿಯೆಂದು ಭಾವಿಸುತ್ತೀಯ. ಹೀಗಾಗಿ ಪದೇ ಪದೆ ಮೋಸ ಹೋಗುತ್ತೀಯ. ಇವೆರಡರ ನಡುವಿನ ವ್ಯತ್ಯಾಸವನ್ನು ಎಲ್ಲಿತನಕ ನೀನು ಗುರುತಿಸುವುದಿಲ್ಲವೋ, ಅಲ್ಲಿತನಕ ನೀನು ಪ್ರೀತಿಸುತ್ತಾ ಮೋಸ ಹೋಗುತ್ತೀಯ. ಸ್ನೇಹಿತನ ಹೊಂಚೂ ಇದೇ ಆಗಿರುತ್ತದೆ. ಅವನಿಗೆ ತಾನು ನಿಜವಾದ ಸ್ನೇಹಿತ. ಕೊರಳ ಗೆಳೆಯ, ಅಣ್ಣ, ಬ್ರದರ್, ಜಿಗ್ರಿದೋಸ್ತ್, ಖಾಸಾ ಖಾಸಾ ಸ್ನೇಹಿತ ಎಂಬುದನ್ನು ನಿಮಗೆ ಮನವರಿಕೆ ಮಾಡಿಕೊಡದೇ ಮೋಸ ಮಾಡಲು ಆಗುವುದಿಲ್ಲ. ಅಲ್ಲಿತನಕ ಅವನು ಮುಖವಾಡಕ್ಕೆ ತೊಡಗಿಸಿದ ಬಂಡವಾಳಕ್ಕೆ returns ಬರುವುದಿಲ್ಲ. ನೀವು ಸಂಪೂರ್ಣವಾಗಿ ಅವನನ್ನು ಸ್ನೇಹಿತನೆಂದು ಪರಿಗಣಿಸಿದ ಬಳಿಕ, ಒಳಗೆ ಬಿಟ್ಟುಕೊಂಡ ಬಳಿಕ, ನಿಮ್ಮನ್ನು ಕುಯ್ಯುವ ಅವಕಾಶಕ್ಕಾಗಿ ಕಾಯುತ್ತಿರುತ್ತಾನೆ.

ಅಷ್ಟರಲ್ಲಿ ನಿಮ್ಮಿಂದ ಪಡೆಯುವ ಸಹಾಯ ಪಡೆದಿರುತ್ತಾನೆ, ಲಾಭ ಮಾಡಿಕೊಂಡಿರುತ್ತಾನೆ. ಅದೇ ಸಂದರ್ಭದಲ್ಲಿ ನೀವು ಅಧಿಕಾರ ಕಳೆದುಕೊಂಡರೆ ಅವನಾದರೂ ಏನು ಮಾಡಬೇಕು ಹೇಳಿ? ಇಲ್ಲಿ ಸ್ನೇಹಿತ ಎಂದು ಪರಿಗಣಿಸಿದ ನಿಮ್ಮ ಸ್ನೇಹಿತನದೇನು ತಪ್ಪು? ಮಂಗ್ಯಾ ಆದವರು ನೀವು! ಅವನು ನಿಮ್ಮನ್ನು ಮಂಗ್ಯಾ ಮಾಡಿರಬಹುದು. ಅವನ ಕೆಲಸವೇ ಅದು. ನೀವೇಕೆ ಆದಿರಿ. ಹಾಗೆ ಆಗಿ ಎಂದು ಅವನೇನು ಹೇಳಿದನಾ? ಆದ್ದರಿಂದ ಸ್ನೇಹಿತ ಎಂದು ಕರೆಸಿಕೊಂಡವರು ಕುಯ್ಯುತ್ತಾರೆ. ನಿಜವಾದ ಸ್ನೇಹಿತರು ಕಾಪಾಡುತ್ತಾರೆ. ಯಾರು ಬೇಕಾದರೂ ಸ್ನೇಹಿತರಾಗಬಹುದು. ಆದರೆ ಕಾಪಾಡುವವರು, ಕಾಪಾಡಬೇಕೆಂಬ ಉತ್ಕಟ ಹಂಬಲವಿದ್ದವರು ಮಾತ್ರ ನಿಜವಾದ ಸ್ನೇಹಿತರಾಗುತ್ತಾರೆ. ಉಳಿದಂತೆ ಸ್ನೇಹದ ಸೋಗಿನಲ್ಲಿ ಒಡನಾಡುವವರು ಗೆಳೆತನ ವನ್ನು en-cash ಮಾಡಿಕೊಳ್ಳುವುದು ಹೇಗೆ ಎಂದು ಸದಾ ಯೋಚಿಸುತ್ತ ಇರುತ್ತಾರೆ.

ಇಂಥವರನ್ನು ಪ್ರಾಣ ಸ್ನೇಹಿತರು ಎಂದು ಯಾರು ಭಾವಿಸುತ್ತಾರೋ ಅವರು ಡಬ್ಬು ಬೀಳುತ್ತಾರೆ. ಅನೇಕರು ಇಂಥ ಸ್ನೇಹಿತರ ನಿಜ ಬಣ್ಣ ಬಯಲಾದಾಗ ಬೇಸರಿಸಿಕೊಳ್ಳುತ್ತಾರೆ. ಆಗಲೂ ನೀವು ಮಾಡುವ ತಪ್ಪೇನೆಂದರೆ ಇವರನ್ನು ಸ್ನೇಹಿತರು ಎಂದು ಭಾವಿಸುವುದು! ಈ ವಿಷಯವನ್ನು ನಾನ್ಯಾಕೆ ಈಗ ಹೇಳುತ್ತಿದ್ದೇನೆ ಎಂದರೆ, ಕೆಲ ವರ್ಷಗಳ ಹಿಂದೆ ಜ್ಯೋತಿ ಬಸು ಕುರಿತು ‘ದಿ ಟೆಲಿಗ್ರಾಫ್’ ಪತ್ರಿಕೆಯಲ್ಲಿ ಅಶೋಕ ಮಿತ್ರ ಬರೆದ ಲೇಖನವನ್ನು ಓದುತಿದ್ದೆ. ಬಸು ಕಾಲು ಶತಮಾನ ಮುಖ್ಯಮಂತ್ರಿಯಾಗಿ ಪಶ್ಚಿಮಬಂಗಾಳದಲ್ಲಿ ಆಡಳಿತ ನಡೆಸಿದ ಬಳಿಕ ಅಧಿಕಾರ ತ್ಯಜಿಸುವ ಕುರಿತು ಗಂಭೀರವಾಗಿ ಯೋಚಿಸಲಾ ರಂಭಿಸಿದ್ದರಂತೆ.

ತಮ್ಮ ಮನದ ಇಂಗಿತವನ್ನು ಕೆಲವು ಆಪ್ತರ ಮುಂದೆ ಹೇಳಿಕೊಂಡರಂತೆ. ಯಥಾಪ್ರಕಾರ ಬೇಕು+ಬೇಡಗಳಿಂದ ಬಸು ಅವರಿಗೆ ತಕ್ಷಣ ನಿರ್ಧಾರಕ್ಕೆ
ಬರಲು ಆಗಲಿಲ್ಲವಂತೆ. ಈ ಅವಧಿಯಲ್ಲಿ ಇವರೊಬ್ಬರೇ ಈ ಕುರಿತು ಯೋಚಿಸುತ್ತಿದ್ದರಂತೆ. ಒಂದು ದಿನ ಬಸು ತಮ್ಮ ಆಪ್ತರ ಮುಂದೆ ಹೇಳಿದರಂತೆ- ನನಗೆ ಅಧಿಕಾರದ ಮೇಲೆ ಇನ್ನ್ಯಾವ ಮೋಹವೂ ಇಲ್ಲ. ಈ ಮುಖ್ಯಮಂತ್ರಿಯ ಪದವಿ ತೊರೆದ ಬಳಿಕ ನಾನು ಒಂದಷ್ಟು ಕಾಲ ನಿಶ್ಚಿಂತೆಯಿಂದ
ಆರಾಮವಾಗಿರಬೇಕೆಂದು ಬಯಸುತ್ತೇನೆ. ಆದರೆ ಪದತ್ಯಾಗ ಮಾಡಿದ ಬಳಿಕ ನಾನು ಯಾರಿಗೂ ಬೇಡದವನಾಗಿಬಿಡಬಹುದು. ಜನ ನನ್ನನ್ನು ಸಂಪೂರ್ಣವಾಗಿ ದೂರ ಮಾಡಬಹುದು. ಇವನ್ನೆಲ್ಲಾ ಯೋಚಿಸಿದಾಗ ಬೇಸರವಾಗುತ್ತದೆ.

ಈ ಇಪ್ಪತ್ತೈದು ವರ್ಷ ಸದಾ ಜನರ ಮಧ್ಯದಲ್ಲಿಯೇ ಬೆಳೆದವ ನಾನು. ಈಗ ಅಧಿಕಾರವೂ ಹೋಗಿಬಿಟ್ಟರೆ ಜನ ನನ್ನನ್ನು ಮೂಲೆಗುಂಪು ಮಾಡಬಹುದು. ಅದನ್ನು ನೆನಪಿಸಿಕೊಂಡರೆ ತೀವ್ರ ವಿಷಾದ, ಹತಾಶೆ ಆಗುತ್ತವೆ. ಕೊನೆಗೂ ಬಸು ಅವರು ಅಂದುಕೊಂಡಂತೆಯೇ ಆಯಿತು. ಅವರು ಯಾವಾಗ ಬುದ್ಧದೇವ್ ಭಟ್ಟಾಚಾರ್ಯ ಅವರಿಗಾಗಿ ಮುಖ್ಯಮಂತ್ರಿ ಕುರ್ಚಿಯನ್ನು ಬಿಟ್ಟುಕೊಟ್ಟರೋ, ಹೆಚ್ಚು ಕಮ್ಮಿ ನೇಪಥ್ಯಕ್ಕೆ ಸರಿದುಬಿಟ್ಟರು. ಮೊದಮೊದಲು ಅವರ ಮನೆಯತ್ತ ಎಡತಾಕುತ್ತಿದ್ದವರು ಕ್ರಮೇಣ ಕೂಗಿ ಕರೆದರೂ ಕ್ಯಾರೆ ಎನ್ನುತ್ತಿರಲಿಲ್ಲ. ಬಸು ಮುಂದೆ ಕುಳಿತುಕೊಳ್ಳಲು ಗಡಗಡ ಎನ್ನುತ್ತಿದ್ದವರು ಕಾಲುಮೇಲೆ ಕಾಲು ಹಾಕಿ ಕಣ್ಮುಂದೆಯೇ ಕುಳಿತುಕೊಳ್ಳುತ್ತಿದ್ದರು. ಈ ಮನುಷ್ಯ ಮಾತ್ರ ಹಾಗೆ ನಡೆದುಕೊಳ್ಳಲಿಕ್ಕಿಲ್ಲ ಎಂದು ಬಸು ಯಾರನ್ನು ನೋಡಿ ಅಂದುಕೊಂಡಿದ್ದರೋ, ಅವರು ಸಹ ಇವರನ್ನು ಲಘುವಾಗಿ ಕಂಡರು. ಬಸುಗೆ ಕೇಳುವಂತೆ, ‘ಹಾಕಲಿಲ್ಲವಾ ಇವರಿಗೆ ಇಪ್ಪತೈದು ವರ್ಷ ಸಲಾಮು?
ಇನ್ನೂ ಹಾಕೋಕೆ ನಮಗೇನು ತಲೆಕೆಟ್ಟಿದೆಯಾ?’ ಎಂದು ಹೇಳುತ್ತಿದ್ದರು. ಆದರೆ ಅವರಿಗೆ ಮಾತ್ರ ಜಾಣ ಕಿವುಡುತನ!

ಇದೊಂದೇ ಕಾರಣಕ್ಕೆ ಅವರು ನಿವೃತ್ತಿಯನ್ನು ಮುಂದೂಡುತ್ತಾ ಬಂದಿದ್ದರು ಎಂದು ಅಶೋಕ ಮಿತ್ರ ಬರೆದಿದ್ದರು. ಇದು ಬಸು ಅವರದ್ದೊಂದೇ ಅಲ್ಲ, ಅಧಿಕಾರದಲ್ಲಿರುವ ಎಲ್ಲರ ಕಥೆಯೂ ಇದೇ. ಅಧಿಕಾರ ಇರುವಾಗ ಸುತ್ತಲಿರುವವರೆಲ್ಲ ತನ್ನ ಆಪ್ತರು ಎಂದೇ ಭಾವಿಸಿರುತ್ತಾರೆ. ಆದರೆ ಅಧಿಕಾರ ಹೋದಾಗ ಇರುವ ಬೆರಳೆಣಿಕೆಯಷ್ಟು ಜನ ಮಾತ್ರ ತನ್ನವರು ಎಂಬುವುದು ಅರ್ಥವಾದರೂ ಅದನ್ನು ಅರಗಿಸಿಕೊಳ್ಳಲು ಬಹಳ ಕಷ್ಟಪಡುತ್ತಾರೆ. ಅಧಿಕಾರವಿದ್ದಾಗ ಸುಳಿದಾಡುತ್ತಿದ್ದ ಆಪ್ತರು ತಮ್ಮ ನಿಷ್ಠೆಯನ್ನು ಬದಲಿಸುತ್ತಾರೆ.

ಅಧಿಕಾರ ಕಳೆದುಕೊಂಡವರು ಮಾತ್ರ ಆತ ತನ್ನ ಖಾಸಾ ದೋಸ್ತನಾಗಿದ್ದ. ನನ್ನ ಅಧಿಕಾರ ಹೋಗುತ್ತಿದ್ದಂತೆ ನನಗೆ ಕೈಕೊಟ್ಟ ಎಂದು ಹಲುಬಲಾ ರಂಭಿಸುತ್ತಾರೆ. ಆತ ಸ್ನೇಹ ಮಾಡಿದ್ದು ಅಧಿಕಾರವಿದ್ದ ನಿಮ್ಮನ್ನೇ ಹೊರತು. ಅಧಿಕಾರವೆಂಬ ಸ್ನೇಹಿತನನ್ನೇ ಹೊರತು, ಅಧಿಕಾರದಲ್ಲಿರದ ನಿಮ್ಮ
ನ್ನಲ್ಲ. ಇನ್ನು ಮುಂದೆ ಅವನ ಪಾಲಿಗೆ ನೀವು ಇದ್ದರೆಷ್ಟು ಬಿಟ್ಟರೆಷ್ಟು? ಪೋಲೆಂಡ್‌ನ ಖ್ಯಾತ ಪತ್ರಕರ್ತ ರಿಯಸರ್ಡ್ ಕಪುಸಿನ್‌ಸ್ಕಿ ಒಂದು ಕಾದಂಬರಿ ಬರೆದಿದ್ದಾನೆ. ಅದರ ಹೆಸರು Shah of Shahs.

ಇರಾನಿನ ಕೊನೆಯ ಶಹಾ ಮಹಮ್ಮದ್ ರೆಜಾ ಪಲ್ಹವಿಯಾ ಆಳ್ವಿಕೆಯ ಪತನವನ್ನು ಬಿಂಬಿಸುವ ಕೃತಿಯಿದು. ಈ ಕಾದಂಬರಿಯಲ್ಲಿ ಒಂದು ಪ್ರಸಂಗ ಬರುತ್ತದೆ. ಮಹಮ್ಮದ್ ರೆಜಾ ಪಲ್ಹವಿಯಾ ಆಸ್ಥಾನದಲ್ಲೊಂದು ನಾಯಿಯಿರುತ್ತದೆ. ಇದೆಂಥಾ ಚಾಲಾಕಿ ನಾಯಿ ಅಂದ್ರೆ ತನ್ನ ಧಣಿ ಯಾರ‍್ಯಾರಿಗೆ
ಎಷ್ಟು ನಿಕಟವಾಗಿದ್ದಾನೆ, ಯಾರ‍್ಯಾರನ್ನು ಹೇಗೆ ನಡೆಸಿಕೊಳ್ಳುತ್ತಾನೆ ಎಂಬುದನ್ನು ಆಧರಿಸಿ, ಇದೂ ತನ್ನ ಸಾಮೀಪ್ಯ, ಪ್ರೀತಿಯನ್ನು ಮೆರೆಯುತ್ತಿರುತ್ತದೆ. ರಾಜನಿಗೆ ಆಪ್ತರಾದವರು ಬಂದರೆ ಅವರಿಗೆ ಬಾಲ ಕುಣಿಸಿ, ಮೈ ಹೊಸೆದು ತನ್ನ ಪ್ರೀತಿ ವ್ಯಕ್ತಪಡಿಸುತ್ತದೆ. ರಾಜನಿಗೆ ಅಷ್ಟಕ್ಕಷ್ಟೇ ಎಂಬುವವರು ಬಂದರೆ
ಈ ನಾಯಿಯ ವರ್ತನೆಯೂ ಅಷ್ಟಕ್ಕಷ್ಟೇ.

ಒಮ್ಮೆ, ರಾಜನಿಗೆ ಆಪ್ತನಾದ ಮಂತ್ರಿ ಅರಮನೆಗೆ ಬರುತ್ತಾನೆ. ಮಂತ್ರಿ ಬರುತ್ತಿದ್ದಂತೆ ನಾಯಿಯದು ಡೌಲೇ ಡೌಲು. ಮೈಹೊಸೆದಿದ್ದೇ ಹೊಸೆದಿದ್ದು. ಬಾಲ ಬೀಸಣಿಗೆ ಆಗಿತ್ತು. ಒಳಗೆ ರಾಜ ಹಾಗೂ ಮಂತ್ರಿ ಗುಪ್ತವಾಗಿ ಒಂದು ಗಂಟೆ ಚರ್ಚಿಸಿ ಹೊರಬರುವ ಹೊತ್ತಿಗೆ ದಿಢೀರ್ ಬೆಳವಣಿಗೆಯಲ್ಲಿ ಮಂತ್ರಿ ರಾಜೀ ನಾಮೆ ನೀಡುತ್ತಾನೆ. ಒಳಹೋಗುವಾಗ ಇದ್ದ ಅಧಿಕಾರ ಹೊರಬರುವಾಗ ಇರುವುದಿಲ್ಲ. ಹಾಗೇ ನಾಯಿಯ ಪ್ರೀತಿಯೂ- ರಾಜನ ಕೋಣೆಯಿಂದ ತಲೆ ತಗ್ಗಿಸಿ ಮಂತ್ರಿ ನಡೆದು ಬರುತ್ತಿದ್ದರೆ ನಾಯಿ ಅವನತ್ತ ಮೂಸುವುದೂ ಇಲ್ಲ! ಅಂದರೆ ಅಽಕಾರ ಕಳೆದುಕೊಂಡ ಮಂತ್ರಿ ನಾಯಿಗೂ ಬೇಡದವನಾಗಿದ್ದ!

ಕರ್ನಾಟಕದ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಗಳಲ್ಲೊಬ್ಬರಾದ ದೇವರಾಜ ಅರಸು ಅವರು ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ಅವರೊಂದಿಗೆ ಇದ್ದವರು ಹೇಗೆ ನಡೆದುಕೊಂಡರು ಎಂಬುದು ಗೊತ್ತಿರಬಹುದು. ತಮ್ಮ ಅಧಿಕೃತ  ಸರಕಾರಿ ನಿವಾಸ ಬಾಲಬ್ರೂಯಿಯಲ್ಲಿದ್ದ ಅರಸು ಪತ್ನಿ ಆಗ ತಾನೇ ಮಾಜಿ ಮುಖ್ಯಮಂತ್ರಿಯಾಗಿದ್ದ ಪತಿರಾಯರಿಗೆ ಫೋನ್ ಮಾಡಬೇಕೆಂದು ನೋಡಿದರೆ, ಮೇಟಿ ಫೋನ್‌ಗೆ ಬೀಗ ಹಾಕಿದ್ದ! ಮೇಟಿಯನ್ನು ಕರೆದು ಫೋನ್ ಲಾಕ್ ತೆಗೆಯುವಂತೆ ಹೇಳಿದರೆ, ‘ಆಗೋಲ್ಲ ಅಮ್ಮಾವ್ರೆ! ನನಗೆ ಸೂಚನೆಯಿದೆ.

ಫೋನ್ ಅನ್ನು ಕೊಡಬಾರದೆಂದು, ಸರಕಾರಿ ವಾಹನ ನೀಡಬಾರದೆಂದು; ರಾತ್ರಿ ಹತ್ತರ ನಂತರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆಯೂ ಆದೇಶ ನೀಡಿದ್ದಾರೆ’ ಎಂದು ಖಡಾಖಡಿ ಹೇಳಿದ್ದ. ನಾನು ಹತ್ತು ವರ್ಷ ಕೆಲಸ ಮಾಡಿದ್ದ ಪತ್ರಿಕೆಗೆ ರಾಜೀನಾಮೆ ಕೊಟ್ಟಾಗ, ಗೊತ್ತು ಪರಿಚಯವಿಲ್ಲದ ಆದರೆ ನನ್ನ ಬರಹಗಳನ್ನು ಓದಿದ್ದ ಚಿಕ್ಕಮಗಳೂರಿನ ಅಭಿಮಾನಿಯೊಬ್ಬರು ಪ್ರಯಾಸಪಟ್ಟು ನನ್ನ ಮನೆಯನ್ನು ಹುಡುಕಿಕೊಂಡು ಬಂದು, ‘ಈ ಸಮಯದಲ್ಲಿ ನಿಮಗೆ ಹಣದ ಅಗತ್ಯವಿರುತ್ತದೆ’ ಎಂದು ಹೇಳಿ ಐವತ್ತು ಸಾವಿರ ರುಪಾಯಿ ಕೊಟ್ಟರು.

ಎಷ್ಟೇ ಒತ್ತಾಯ ಮಾಡಿದರೂ ತಮ್ಮ ಹೆಸರನ್ನು ಹೇಳದೆ ಹೊರಟುಹೋದರು. ಮತ್ತೊಬ್ಬ ಅಪರಿಚಿತ ಓದುಗ ಅಭಿಮಾನಿ, ‘ಸರ್, ಈಗ ನಿಮಗೆ ಆಫೀಸ್ ಕಾರು ಇಲ್ಲ. ಬೇರೆ ವ್ಯವಸ್ಥೆಯಾಗುವ ತನಕ ಈ ಕಾರು ನಿಮ್ಮ ಬಳಿ ಇರಲಿ’ ಎಂದು ಎಷ್ಟು ಬೇಡವೆಂದರೂ ಅದನ್ನು ಬಿಟ್ಟು ಹೋಗಿದ್ದರು! ಅಧಿಕಾರ, ಪದವಿ, ಸ್ನೇಹ, ಸ್ನೇಹಿತರು… ಎಲ್ಲವೂ ವಿಚಿತ್ರ ಅಥವಾ ಅವೆಲ್ಲ ಇರುವುದೇ ಹಾಗೇನೋ?