Sunday, 15th December 2024

ಮಕ್ಕಳ ದಿನ ಎಂದಾಗ ನೆನಪಾಗುವ ಕಲಾಂ ಮೇಷ್ಟ್ರು

ವಿದ್ಯೆೆ ಕಲಿಯಲು ರಾಜಮಾರ್ಗಗಳಿಲ್ಲ. ಎಲ್ಲರಂತೆ ಕಠಿಣಹಾದಿಯಲ್ಲೇ ನೀನೂ ನಡೆಯಬೇಕು!’. ಕಲಾಂ ಮೇಷ್ಟ್ರು ತನ್ನ ಜೀವಮಾನವಿಡೀ ಹೇಳುತ್ತಾಾ ಬಂದಿದ್ದ ಸಂದೇಶ ಅದೇ. ತಾನೇ ಆ ಸಂದೇಶದ ಮೂರ್ತರೂಪವೆನ್ನುವಂತೆ ಬದುಕಿದರು ಕೂಡ.

90ರ ದಶಕದಲ್ಲಿ ಮಕ್ಕಳಾಗಿದ್ದವರಿಗೆ ಒಂದು ಸಂಗತಿ ಗೊತ್ತು. ಅದೇನೆಂದರೆ, ಯಾರೇ-ಎಷ್ಟು ಚಿಕ್ಕ ಮಗುವೇ ಆಗಲಿ, ಶಿವರಾಮ ಕಾರಂತರಿಗೆ (ಅಥವಾ ತಮ್ಮ ಪ್ರೀತಿಯ ‘ಕಾರಂತಜ್ಜ’ನಿಗೆ) ಕಾಗದ ಬರೆದರೆ, ಅವಕ್ಕೆೆ ತಪ್ಪದೆ ಮಾರೋಲೆ ಬರುತ್ತಿಿತ್ತು. ಕಾರಂತರಿಂದ ಪತ್ರ ಬಂದಿದೆ ಎಂದರೆ ಅದೊಂದು ದೊಡ್ಡ ಪ್ರಶಸ್ತಿಿ ಎನ್ನುತ್ತ ಕುಣಿದಾಡುವವರಿದ್ದರು. ‘ಅಜ್ಜಾಾ ದೇವರಿದ್ದಾಾನೆಯೇ?’, ಅಜ್ಜಾಾ ನಾಯಿ ಯಾಕೆ ಬೊಗಳುತ್ತವೆ? ಎಂದು ಬರೆದ ಪತ್ರಗಳಿಗೂ ಕಾರಂತರು ಸ್ವಹಸ್ತಾಾಕ್ಷರದಲ್ಲಿ ಉತ್ತರ ಬರೆಯುತ್ತಿಿದ್ದರು. ಅವುಗಳಲ್ಲಿ ಆಯ್ದವನ್ನು ‘ತರಂಗ’ ಪ್ರತಿ ವಾರ, ‘ಬಾಲವನದಲ್ಲಿ ಕಾರಂತಜ್ಜ’ ಎಂದು ಪ್ರಕಟಿಸುತ್ತಿಿತ್ತು. ಅದೇ ರೀತಿಯಲ್ಲಿ ಬರೆವ ಶಕ್ತಿಿ ಇದ್ದ ಇನ್ನೊೊಬ್ಬ ವ್ಯಕ್ತಿಿ ಗಾಂಧೀಜಿ. ತನಗೆ ದಿನವೂ ಬಂದುಬೀಳುತ್ತಿಿದ್ದ ನೂರಾರು ಪತ್ರಗಳನ್ನು ಸ್ವತಃ ಓದಿ ಉತ್ತರ ಬರೆದು ಕಳಿಸುವ ತಾಳ್ಮೆೆ ಅವರಿಗಿತ್ತು. ಸಮಯವನ್ನು ಅದು ಹೇಗೆ ಹೊಂದಿಸಿಕೊಳ್ಳುತ್ತಿಿದ್ದರೋ ದೇವರಿಗೇ ಗೊತ್ತು! ಪತ್ರ ಬರೆಯುವುದರಲ್ಲಿ ಇವರಿಬ್ಬರ ಶಕ್ತಿಿಯನ್ನು ಸರಿಗಟ್ಟುವ ಇನ್ನೊೊಬ್ಬ ಮಹಾತ್ಮ ಇದ್ದರೆ ಅದು ಅಬ್ದುಲ್ ಕಲಾಂ ಎನ್ನಬಹುದು.

ಇದು 2005ರ ಕತೆ. ಆರನೇ ಕ್ಲಾಾಸಲ್ಲಿ ಓದುತ್ತಿಿದ್ದ ನಮನ್ ನಾರಾಯಣ್ ಎಂಬ ಹುಡುಗನಿಗೆ ಅವನಣ್ಣ ‘ವಿಂಗ್‌ಸ್‌ ಆಫ್ ಫೈರ್’ ಎಂಬ ಪುಸ್ತಕ ತಂದುಕೊಟ್ಟ. ಅದು ಆಗ ರಾಷ್ಟ್ರಪತಿಗಳಾಗಿದ್ದ ಕಲಾಂ ಅವರ ಜೀವನಚರಿತ್ರೆೆ. ಪುಟ್ಟ ಹುಡುಗ ನಮನ್‌ಗೆ ಪುಸ್ತಕದಲ್ಲಿ ಬರೆದಿದ್ದ ಕತೆಗಿಂತಲೂ ಹೆಚ್ಚು ಆಕರ್ಷಕ ಎನಿಸಿದ್ದು, ಆ ಕ್ಷಣಕ್ಕೆೆ ಅವನ ಗಮನ ಸೆಳೆದ ಮುಖಪುಟದಲ್ಲಿದ್ದ ಕಲಾಂ ಭಾವಚಿತ್ರ. ತನ್ನ ಎಂದಿನ ಶೈಲಿಯಲ್ಲಿ ನಡುಬೈತಲೆ ತೆಗೆದು, ಗಲ್ಲಕ್ಕೆೆ ಕೈಯೂರಿ, ಚಿಂತೆ-ಚಿಂತನೆ ಹೊತ್ತ ಮುಖ ಮಾಡಿ ಕೂತ ಕಲಾಂ ಚಿತ್ರ ಅವನಿಗೆ ವಿಶೇಷ ಅನ್ನಿಿಸಿತು. ಸಮಯ ವ್ಯರ್ಥ ಮಾಡದೆ ಅವನು ಆ ಫೋಟೋದ ನಕಲು ಚಿತ್ರ ಬರೆದೇ ಬಿಟ್ಟ. ಚಿತ್ರ ಬರೆದ ಮೇಲೆ ಅದನ್ನು ತನ್ನ ತಾಯಿಗೆ ತೋರಿಸಿ ಸಂತೋಷಪಟ್ಟ ಕೂಡ. ‘ಇದನ್ನು ರಾಷ್ಟ್ರಪತಿಗಳಿಗೇ ಕಳಿಸಿಬಿಡು!’ ಎಂದು ಅವನ ತಾಯಿ ಜೋಕ್ ಮಾಡಿದರು. ಆದರೆ, ಈ ಹುಡುಗ ಆ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ, ‘ರಾಷ್ಟ್ರಪತಿಗಳು, ಭಾರತ ಸರಕಾರ, ನವದೆಹಲಿ’ ಎಂದು ಅಡ್ರೆೆಸ್ ಬರೆದು ಆ ಚಿತ್ರವನ್ನು ಪೋಸ್‌ಟ್‌ ಮಾಡಿದ! ಅದಾಗಿ ಎರಡು ವಾರಗಳ ನಂತರ ನಮನ್ ಹೆಸರಿಗೆ ರಿಜಿಸ್ಟರ್‌ಡ್‌ ಪೋಸ್‌ಟ್‌‌ನಲ್ಲಿ ಒಂದು ವಿಶೇಷ ಪತ್ರ ಬಂತು. ಮೇಲೆ, ‘ರಾಷ್ಟ್ರಪತಿ ಭವನದಿಂದ’ ಎಂದು ಬರೆದಿದ್ದನ್ನು ನೋಡಿಯೇ ನಮನ್‌ಗೆ ಖುಷಿಯ ಆಘಾತದಲೆ ಮೈಯೆಲ್ಲ ಹರಿದಾಡಿತು. ಲಕೋಟೆ ತೆರೆದು ನೋಡಿದರೆ, ಅಲ್ಲಿ ಕಲಾಂ ತನ್ನ ಚಿತ್ರ ಮತ್ತು ಸಂದೇಶವಿರುವ ಪುಟ್ಟ ಕಾರ್ಡ್‌ನ್ನು ಕಳಿಸಿದ್ದರು. ಮಾತ್ರವಲ್ಲ; ‘ನನ್ನ ಪ್ರೀತಿಯ ನಮನ್, ನೀನು ಬಹಳ ಆಸ್ಥೆೆಯಿಂದ ಬರೆದು ಕಳಿಸಿರುವ ನನ್ನ ಚಿತ್ರ ತುಂಬಾ ಚೆನ್ನಾಾಗಿದೆ. ನಿನಗೆ ಅಭಿನಂದನೆಗಳು’ ಎಂದು ಬರೆದು ಸ್ವಹಸ್ತಾಾಕ್ಷರದಲ್ಲಿ ಸಹಿ ಕೂಡಾ ಮಾಡಿದ್ದರು! ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ!

ಐಐಎಂ, ಇಂದೋರ್‌ನಲ್ಲಿ ನಡೆದ ಒಂದು ಘಟನೆ. ರಾಷ್ಟ್ರಪತಿ ಕಲಾಂ ಬರುವ ಕಾರ್ಯಕ್ರಮ ನಿಗದಿಯಾಗಿತ್ತು. ಒಟ್ಟು ಹತ್ತು ಹನ್ನೆೆರಡು ತಂಡಗಳನ್ನು ಆಯ್ಕೆೆ ಮಾಡಿ, ಅವರು ರಾಷ್ಟ್ರಪತಿಗಳಿಗೆ ತಮ್ಮ ಕನಸಿನ ಭಾರತ ಹೇಗಿರಬೇಕೆಂಬುದನ್ನು ಪವರ್‌ಪಾಯಿಂಟ್ ಪ್ರೆೆಸೆಂಟೇಶನ್ ಮೂಲಕ ವಿವರಿಸುವ ಕಾರ್ಯಕ್ರಮವಿತ್ತು. ಎಲ್ಲ ಹುಡುಗರೂ ಇದಕ್ಕಾಾಗಿ ಕೆಲವು ವಾರಗಳಿಂದ ತಲೆಕೆಡಿಸಿಕೊಂಡು ಓಡಾಡುತ್ತಿಿದ್ದರು. ಅವರಲ್ಲಿ ಒಂದು ತಂಡ, ಕಲಾಂ ಕಾರ್ಯಕ್ರಮಕ್ಕೆೆ ಎರಡು ದಿನ ಇದ್ದಾಾಗಲೂ ತನ್ನ ತಯಾರಿಯನ್ನು ಪೂರ್ತಿ ಮಾಡಿಕೊಂಡಿರಲಿಲ್ಲ. ಕೊನೆಗೆ ಎಲ್ಲೆೆಲ್ಲೋೋ ಮಾಹಿತಿಯನ್ನು ಸಂಗ್ರಹಿಸಿ, ಒಂದಷ್ಟು ಸರಕನ್ನು ತಮ್ಮ ತಂಡದ ನಾಯಕನ ಮುಂದೆ ತಳ್ಳಿಿದರು. ಆತ ಅವೆಲ್ಲವನ್ನೂ ಪವರ್‌ಪಾಯಿಂಟ್‌ನಲ್ಲಿ ಕೂರಿಸಿ, ಅಗತ್ಯ ಬಣ್ಣ, ಅನಿಮೇಶನ್ ಮಾಡಿ ಅದನ್ನು ಸಭೆಯಲ್ಲಿ ತೋರಿಸಲು ತಯಾರು ಮಾಡಬೇಕಾಗಿತ್ತು. ಅರ್ಧ ದಿನದಲ್ಲಿ ಹುಡುಗರು ಮಾಡಿದ್ದ ‘ಸಂಶೋಧನೆ’ಯ ಮಾಹಿತಿಗಳನ್ನು ಆಕರ್ಷಕವಾಗಿ ಬರೆದು ಅಣಿಗೊಳಿಸಲು ಈ ಯುವಕನಿಗೆ ಒಂದೂವರೆ ದಿನಗಳು ತಗುಲಿದವು. ಊಟ, ನಿದ್ದೆೆ ಎಲ್ಲವನ್ನೂ ಬಿಟ್ಟು ಅವನು ಆ ಕೆಲಸದಲ್ಲಿ ತನ್ಮಯನಾಗಿದ್ದ. ಕಾರ್ಯಕ್ರಮದ ದಿನ, ರಾಷ್ಟ್ರಪತಿಗಳು ಒಂದೊಂದು ಪ್ರೆೆಸೆಂಟೇಶನ್ ಅನ್ನೂ ಆಸಕ್ತಿಿಯಿಂದ ವೀಕ್ಷಿಸಿ, ಪ್ರಶ್ನೆೆ ಕೇಳಿ ಒಂದಷ್ಟು ವಿವರಣೆ ಪಡೆದುಕೊಂಡರು. ಈ ಯುವಕರ ಸರತಿ ಬಂದಾಗ, ಕಲಾಂ ಅವರು ಎಂದಿನಂತೆ ಬಹಳ ಆಸಕ್ತಿಿಯಿಂದ, ಅದನ್ನು ವೀಕ್ಷಿಸಿದರು. ಪ್ರೆೆಸೆಂಟೇಶನ್ ಮುಗಿದ ಮೇಲೆ, ‘ಇದರ ಪವರ್‌ಪಾಯಿಂಟ್ ಕೆಲಸವನ್ನು ಮಾಡಿದವರು ಯಾರು?’ ಎಂದು ಕೇಳಿದರು. ಅದನ್ನು ಮಾಡಿದ್ದ ಯುವಕನ ವಿವರಗಳನ್ನು ಪಡೆದುಕೊಂಡರು. ಅದಾಗಿ ಎರಡು ತಿಂಗಳು ಕಳೆದ ಮೇಲೆ, ಆ ಯುವಕನಿಗೆ ಒಂದು ಪತ್ರ ಬಂತು. ಕಳಿಸಿದವರು ರಾಷ್ಟ್ರಪತಿ ಭವನದ ಸಿಬ್ಬಂದಿ! ‘ಕೆಲವು ದಿನಗಳ ಹಿಂದೆ ನಿಮ್ಮ ಸಂಸ್ಥೆೆಗೆ ಬಂದಿದ್ದಾಾಗ ರಾಷ್ಟ್ರಪತಿಗಳು ನಿಮ್ಮ ಪವರ್‌ಪಾಯಿಂಟ್ ಪ್ರೆೆಸೆಂಟೇಶನ್ ನೋಡಿದ್ದರು. ಅವರಿಗೆ ನಿಮ್ಮ ಕೆಲಸ ಇಷ್ಟವಾಗಿದೆ. ರಾಷ್ಟ್ರಪತಿಗಳ ಜತೆ, ಅವರಿಗೆ ಬೇಕಾದ ಪ್ರೆೆಸೆಂಟೇಶನ್‌ಗಳನ್ನು ತಯಾರಿಸುವ ಕೆಲಸವನ್ನು ಮಾಡಲು ತಾವು ಸಿದ್ಧರಿದ್ದೀರಾ?’ ಎಂಬ ಒಕ್ಕಣೆಯಿತ್ತು!

ಕಲಾಂ ಮೇಷ್ಟ್ರು, ತನ್ನ ರಾಷ್ಟ್ರಪತಿ ಹುದ್ದೆೆಯಿಂದ ಕೆಳಗಿಳಿದು ಆಗಲೇ ಏಳು ವರ್ಷಗಳು ಕಳೆದಿದ್ದವು. ಆದರೂ ಅವರು ಭಾಗವಹಿಸುವ ಕಾರ್ಯಕ್ರಮಗಳ ಸಂಖ್ಯೆೆಯೇನೂ ಇಳಿದಿರಲಿಲ್ಲ. 2014ರ ಅಕ್ಟೋೋಬರ್‌ನಲ್ಲಿ ಹೈದರಾಬಾದಿನ ಜವಹರಲಾಲ್ ನೆಹರು ಟೆಕ್ನಲಾಜಿಕಲ್ ಯೂನಿವರ್ಸಿಟಿಯಲ್ಲಿ ಹೊಸ ತಂತ್ರಜ್ಞಾಾನಗಳ ಬಗ್ಗೆೆ ರಾಷ್ಟ್ರೀಯ ಸೆಮಿನಾರ್ ಆಯೋಜನೆಯಾಗಿತ್ತು. ಬೆಳಗ್ಗೆೆ ಒಂಬತ್ತು ಗಂಟೆಗೆ ಶುರುವಾದ ಕಾರ್ಯಕ್ರಮಕ್ಕೆೆ ಅಬ್ದುಲ್ ಕಲಾಂ ಅವರೇ ಮುಖ್ಯ ಅತಿಥಿ. ಸಮಯಕ್ಕೆೆ ಸರಿಯಾಗಿ ಸ್ಥಳದಲ್ಲಿ ಹಾಜರಾದ ಕಲಾಂ ಅವರನ್ನು ಉಳಿದೆಲ್ಲ ಅತಿಥಿ-ಅಭ್ಯಾಾಗತರೊಂದಿಗೆ ವೇದಿಕೆಗೆ ಕರೆದೊಯ್ಯಲಾಯಿತು. ಅಲ್ಲಿ, ಯೂನಿವರ್ಸಿಟಿಯ ವೈಸ್ ಚಾನ್ಸಲರ್, ರಿಜಿಸ್ಟ್ರಾಾರ್, ಕಾರ್ಯಕ್ರಮ ಆಯೋಜಿಸಿದ್ದ ಮುಖ್ಯ ಶಿಕ್ಷಕರು ಮುಂತಾದವರಿಗೆಲ್ಲ ಕುರ್ಚಿಗಳನ್ನು ಹಾಕಿದ್ದರು. ನಡುಮಧ್ಯದಲ್ಲಿ ಒಂದು ಭವ್ಯವಾದ ಕುರ್ಚಿಯನ್ನು ಕಲಾಂ ಅವರಿಗಾಗಿ ಹಾಕಲಾಗಿತ್ತು. ವೇದಿಕೆ ಹತ್ತಿಿದ ಕಲಾಂ ಅರೆಕ್ಷಣ ನಿಂತರು. ‘ಕ್ಷಮಿಸಿ, ನಾನು ಆ ಕುರ್ಚಿಯಲ್ಲಿ ಕೂರುವುದಿಲ್ಲ. ಇಲ್ಲಿರುವ ನಾವ್ಯಾಾರೂ ದೊಡ್ಡವರಲ್ಲ; ಚಿಕ್ಕವರೂ ಅಲ್ಲ. ಉಳಿದವರಿಗೆ ಯಾವ ಕುರ್ಚಿ ಹಾಕಿದ್ದೀರೋ ಅದನ್ನೇ ನನಗೂ ಕೊಡಿ’. ಎಂದರು. ಯಾರೇನು ಸಮಾಧಾನ ಮಾಡಲು ಯತ್ನಿಿಸಿದರೂ ಕಲಾಂ ಕದಲಲಿಲ್ಲ. ಕೊನೆಗೆ ಅವರ ಸಿಬ್ಬಂದಿ ಬಂದು ‘ಕಲಾಂ ಅವರು ಯಾರ ಮಾತೂ ಕೇಳುವುದಿಲ್ಲ. ದೊಡ್ಡ ಕುರ್ಚಿಯನ್ನು ಬದಲಿಸಿ ಸಾಮಾನ್ಯ ಕುರ್ಚಿ ಕೊಟ್ಟರೆ ಮಾತ್ರ ಕೂರುವವರು ಅವರು. ಈ ಅನುಭವ ಈಗಾಗಲೇ ಹಲವು ಕಡೆಗಳಲ್ಲಿ ಆಗಿದೆ’ ಎಂದು ಆಯೋಜಕರ ಮನವೊಲಿಸಿ ಸರಳವಾದ ಕುರ್ಚಿಯನ್ನು ಹಾಕಿಸಬೇಕಾಯಿತು!

2009ರಲ್ಲಿ ನಡೆದ ಇನ್ನೊೊಂದು ಘಟನೆಯೂ ಇದೇ ಬಗೆಯದ್ದೇ. ಮಹಾರಾಷ್ಟ್ರದ ಎಂಜಿನಿಯರಿಂಗ್ ಕಾಲೇಜೊಂದರ ಪದವಿ ಪ್ರದಾನ ಸಮಾರಂಭಕ್ಕೆೆ ಕಲಾಂರನ್ನು ಮುಖ್ಯ ಅತಿಥಿಯಾಗಿ ಕರೆಯಲಾಗಿತ್ತು. ಆಗ ಅವರಿಗೆ 78 ವರ್ಷ. ಕಾಲೇಜಿನ ಮಂಡಳಿ, ಪ್ರತಿ ತರಗತಿಯಲ್ಲಿ ಮೊದಲ ಎರಡು ರ್ಯಾಾಂಕ್‌ಗಳನ್ನು ಪಡೆದವರಿಗಷ್ಟೇ ಕಲಾಂ ಕೈಯಿಂದ ಸರ್ಟಿಫಿಕೇಟ್ ಕೊಡಿಸೋಣ. ಮಿಕ್ಕ ವಿದ್ಯಾಾರ್ಥಿಗಳಿಗೆ ಕಾರ್ಯಕ್ರಮದ ನಂತರ ಪದವಿ ಪತ್ರಗಳನ್ನು ಹಂಚೋಣ ಎಂದು ನಿರ್ಧರಿಸಿದ್ದರು. ಸಮಾರಂಭದಲ್ಲಿ, ವೇದಿಕೆ ಮೇಲೆ, ಹಾಗೆಯೇ ಘೋಷಿಸಿದರು ಕೂಡ. ಅದನ್ನು ಕೇಳಿದ ಕಲಾಂ ತಟ್ಟನೆ ಎದ್ದುನಿಂತರು. ‘ಇಲ್ಲ, ಇಲ್ಲ! ಪದವಿ ಪಡೆದಿರುವ ಪ್ರತಿಯೊಬ್ಬ ವಿದ್ಯಾಾರ್ಥಿಗೂ ನಾನು ಕೈಯಾರೆ ಸರ್ಟಿಫಿಕೇಟ್‌ಗಳನ್ನು ಕೊಡುತ್ತೇನೆ. ನನಗೇನೂ ಆಯಾಸ ಇಲ್ಲ. ವಿದ್ಯಾಾರ್ಥಿಗಳ ಜೀವನದಲ್ಲಿ ಇದೊಂದು ಅಪೂರ್ವ ಘಟ್ಟ. ಹಾಗಿರುವಾಗ, ಅವರಿಗೆ ಇಲ್ಲಿಯವರೆಗೆ ಬಂದ ನಾನು ಕೈಯಾರೆ ಸರ್ಟಿಫಿಕೇಟ್ ಕೊಡದಿದ್ದರೆ ಹೇಗೆ?’ ಎಂದರು. ಇಡೀ ಸಭಾಂಗಣ ಐದು ನಿಮಿಷ ಎಡೆಬಿಡದೆ ಚಪ್ಪಾಾಳೆ ಹೊಡೆದು ಕಲಾಂ ಮಾತುಗಳನ್ನು ಸ್ವಾಾಗತಿಸಿತು. ಆ ಪ್ರತಿಕ್ರಿಿಯೆಗೆ ಮಣಿದ ಕಾಲೇಜು, ಅಂದು ಪದವೀಧರರಾದ ಪ್ರತಿಯೊಬ್ಬರಿಗೂ ಕಲಾಂ ಅವರೇ ಸರ್ಟಿಫಿಕೇಟ್ ಕೊಡುವುದಕ್ಕೆೆ ವ್ಯವಸ್ಥೆೆ ಮಾಡಿತು. ಕಲಾಂ ಬಳಿ ಬಂದು ನೆಲ ನೋಡುತ್ತಾಾ ಸರ್ಟಿಫಿಕೇಟ್ ಪಡೆಯುತ್ತಿಿದ್ದ ಕೆಲವರಿಗೆ, ಸ್ವತಃ ಕಲಾಂ ಅವರೇ ನೆಲ ನೋಡಬೇಡಿ. ಕ್ಯಾಾಮೆರಾ ಕಡೆ ನೋಡಿ ಒಂದು ಸ್ಮೈಲ್ ಕೊಡಿ. ಇದೊಂದು ಅಪೂರ್ವ ಕ್ಷಣ. ಈ ಫೋಟೋ ನೀವು ಸದಾ ಜೋಪಾನ ಮಾಡಬೇಕು ಎಂದೂ ಹೇಳುತ್ತಿಿದ್ದರು!

ಕಲಾಂ ಅವರನ್ನು ಒಮ್ಮೆೆ ತಮಿಳುನಾಡಿನ ಒಂದು ಕಾಲೇಜಿನಲ್ಲಿ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾಾರ್ಥಿಯೊಬ್ಬ ಕೇಳಿದ: ‘ಅದು ಹೇಗೆ ನೀವು ನಮ್ಮಂತಹ ಹದಿಹರೆಯದ ಹುಡುಗರ ಜತೆ ಇಷ್ಟು ಚೆನ್ನಾಾಗಿ ಹೊಂದಿಕೊಳ್ಳುತ್ತೀರಿ?’. ಕಲಾಂ ಆಗ ‘ಸೇಮ್ ಏಜ್ ಡಾ’ (ನಮ್ಮಿಿಬ್ಬರದ್ದೂ ಒಂದೇ ವಯಸ್ಸಪ್ಪಾಾ!) ಎಂದು ಹೇಳಿ ಭರಪೂರ ಬಾಯಿಕಳೆದು ನಕ್ಕಿಿದ್ದರು.
‘ಸಮಾಜಕ್ಕೆೆ ನಿಮ್ಮ ಸಂದೇಶ ಏನು?’ ಎಂದು ಕೇಳಿದಾಗ ಉದ್ದುದ್ದ ಭಾಷಣ ಮಾಡುವವರು ನೂರಾರು ಮಂದಿ. ಸಮಾಜವನ್ನು ತಿದ್ದುವುದಕ್ಕೆೆಂದೇ ನೂರಾರು ಪುಟಗಳ ಉದ್ಗ್ರಂಥಗಳನ್ನು ಬರೆದುಕೊಳ್ಳುವವರು ಕೂಡ ಬಹಳಷ್ಟು ಜನ ಇರುತ್ತಾಾರೆ; ಆದರೆ, ಹಾಗೆ ಬದುಕುವುದು ನಿಜಕ್ಕೂ ಸಾಧ್ಯವಾ ಎನ್ನುವ ಪ್ರಶ್ನೆೆ ಏಳುತ್ತದೆ ಅಲ್ಲವೇ? ಕಲಾಂ ಜೀವನದಲ್ಲಿ ನಡೆದ ಒಂದು ಸಣ್ಣ ಘಟನೆಯನ್ನು ಸೂಕ್ಷ್ಮ ವಾಗಿ ಗಮನಿಸಿ:

ಒಂದು ಕಾಲೇಜಿನಲ್ಲಿ ಅಂತರಕಾಲೇಜು ಸ್ಪರ್ಧೆಗಳು ಏರ್ಪಾಟಾಗಿದ್ದವು. ಅವುಗಳಲ್ಲಿ ‘ಮಾಡೆಲ್ ಮೇಕಿಂಗ್’ ಕೂಡ ಇತ್ತು. ಸರಿಯಾಗಿ ಕೆಲಸ ಮಾಡುವ ಯಾವುದೇ ವೈಜ್ಞಾಾನಿಕ ಮಾದರಿಯನ್ನು ಸ್ಪರ್ಧೆಯಲ್ಲಿ ಪ್ರದರ್ಶಿಸಬಹುದು ಎಂದು ಆಯೋಜಕರು ಹೇಳಿದ್ದರು. ಸ್ಪರ್ಧೆಯ ಕೊನೆಯ ದಿನ, ಅವನ್ನೆೆಲ್ಲ ನೋಡಲು ಅಬ್ದುಲ್ ಕಲಾಂ ಕೂಡ ಬರುತ್ತಾಾರೆ ಎಂದು ತಿಳಿಸಲಾಗಿತ್ತು. ವಿದ್ಯಾಾರ್ಥಿಗಳು ತಂತಮ್ಮ ಸಾಮರ್ಥ್ಯ, ಜಾಣ್ಮೆೆಗೆ ತಕ್ಕಂತೆ ಒಂದಷ್ಟು ಮಾದರಿಗಳನ್ನು ಸಿದ್ಧಪಡಿಸಿಕೊಂಡು ಬಂದಿದ್ದರು. ಅವರ ನಡುವಲ್ಲಿ ಇಬ್ಬರು ಹುಡುಗರು, ನಮ್ಮ ಸುತ್ತಮುತ್ತ ಸಿಗುವ ಒಂದಷ್ಟು ವಸ್ತುಗಳನ್ನೇ ಬಳಸಿ ಒಂದು ಅಚ್ಚುಕಟ್ಟಾಾದ ಮಾದರಿ ತಯಾರಿಸಿದ್ದರು. ಅದು ಸುಸೂತ್ರವಾಗಿ ಕೆಲಸ ಮಾಡುತ್ತ ಇತ್ತು. ಆದರೆ, ಕಲಾಂ ಆ ಕಾಲೇಜಿಗೆ ಭೇಟಿ ಕೊಡುವ ದಿನ ಬೆಳಗ್ಗೆೆ, ಮಾದರಿ ಕೈಕೊಟ್ಟಿಿತು. ಸ್ವಲ್ಪಮಟ್ಟಿಿಗೆ ಕೆಟ್ಟಿಿದ್ದ ಯಂತ್ರ, ಭಯದಿಂದ ತಡವರಿಸುತ್ತಿಿದ್ದ ವಿದ್ಯಾಾರ್ಥಿಗಳ ಗಡಿಬಿಡಿಯಿಂದಾಗಿ ಪೂರ್ತಿ ಹಾಳಾಯಿತು. ಅದನ್ನು ನೋಡಿದ ಆಯೋಜಕರು, ಹಾಗೆ ಕೆಲಸ ಮಾಡದ ಮಾದರಿಯನ್ನು ಪ್ರದರ್ಶಿಸುವಂತಿಲ್ಲ; ಆ ಹುಡುಗರು ಅಲ್ಲಿಂದ ತಮ್ಮ ಯಂತ್ರವನ್ನು ತೆರವುಗೊಳಿಸಬೇಕು ಎಂದು ಖಡಕ್ ಆಗಿ ಹೇಳಿದರು. ಪೆಚ್ಚಾಾದ ಹುಡುಗರು ಜಾಗ ಖಾಲಿ ಮಾಡಿದರು. ಕಲಾಂ ಮೇಷ್ಟ್ರು ಬಂದು ಅಲ್ಲಿದ್ದ ಮಾದರಿಗಳನ್ನು ಒಂದೊಂದಾಗಿ ನೋಡುತ್ತ, ವಿದ್ಯಾಾರ್ಥಿಗಳಿಂದ ವಿವರಣೆ ಕೇಳುತ್ತ ಸಾಗುತ್ತಿಿದ್ದಾಾಗ, ಈ ಖಾಲಿ ಜಾಗದತ್ತ ಬಂದರು. ‘ಇದೇಕೆ ಖಾಲಿ ಇದೆ?’ ಎಂದು ಪ್ರಶ್ನಿಿಸಿದರು. ಅಲ್ಲಿ ಇಬ್ಬರು ಹುಡುಗರು ಒಂದು ಮಾದರಿಯನ್ನಿಿಟ್ಟಿಿದ್ದರೆಂದೂ ಆದರೆ, ಅದೀಗ ಕೆಲಸ ಮಾಡುವ ಸ್ಥಿಿತಿಯಲ್ಲಿಲ್ಲವೆಂದೂ ಆಯೋಜಕರು ಉತ್ತರ ಕೊಟ್ಟರು. ಇದರಿಂದ ಕಲಾಂ ಬೇಸರಗೊಂಡರು. ಕೂಡಲೇ ಆ ಹುಡುಗರನ್ನು, ಅವರ ಕೆಟ್ಟುನಿಂತ ಮಾದರಿಯ ಸಮೇತ ಕರೆಸಿದರು. ಅದರ ವಿನ್ಯಾಾಸದ ಬಗ್ಗೆೆ ಕೇಳಿ ತಿಳಿದುಕೊಂಡರು. ಅದೇಕೆ ಕೆಟ್ಟಿಿದೆ ಎಂದು ವಿದ್ಯಾಾರ್ಥಿಗಳು ತಾವಾಗಿ ಪರೀಕ್ಷಿಸಿ ಅರ್ಥ ಮಾಡಿಕೊಳ್ಳುವಂತೆ ವಿವರಿಸಿದರು. ಮಾದರಿಯನ್ನು ಸರಿಪಡಿಸಲು ಅರ್ಧಗಂಟೆ ಸಮಯ ಕೊಟ್ಟರು. ತಾನೂ ಅವರ ಜತೆ ನಿಂತು ಆಗಾಗ ಸಲಹೆ ಕೊಡುತ್ತ ವಿದ್ಯಾಾರ್ಥಿಗಳು ಮತ್ತೆೆ ಮಾದರಿಯನ್ನು ಕಟ್ಟಲು ಪ್ರೇರೇಪಿಸಿದರು. ಕೊನೆಗೆ, ಅದು ಮತ್ತೆೆ ಮಾಮೂಲಿ ಸ್ಥಿಿತಿಗೆ ಬಂದು ಕೆಲಸ ಮಾಡತೊಡಗಿತು. ‘ವೆಲ್‌ಡನ್! ಇದು ಕಠಿಣ ಪರಿಶ್ರಮಕ್ಕೆೆ ಸಿಗುವ ಪ್ರಶಸ್ತಿಿ!’ ಎಂದು ಆ ಹುಡುಗರ ಬೆನ್ನುಚಪ್ಪರಿಸಿ, ಕಲಾಂ ಮುಂದೆ ನಡೆದರು. ಮರೆಯಲಾಗದ ಅಮೂಲ್ಯ ಪಾಠವೊಂದು ಅಲ್ಲಿದ್ದ ಎಲ್ಲರಿಗೂ ಸೂಚ್ಯವಾಗಿ ರವಾನೆಯಾಗಿತ್ತು. ಬದುಕನ್ನು ಧನಾತ್ಮಕವಾಗಿ ತೆಗೆದುಕೊಳ್ಳಬೇಕೆಂಬುದನ್ನು ಕಲಾಂ ತನ್ನ ಒಂದೊಂದು ಕೆಲಸದಲ್ಲೂ ತೋರಿಸುತ್ತಿಿದ್ದರು. ‘ಸಮಸ್ಯೆೆಗಳು ಸಾಮಾನ್ಯ. ಆದರೆ, ಅವುಗಳ ಬಗ್ಗೆೆ ನಾವು ತಳೆಯುವ ಧೊರಣೆಗಳು ಹೇಗಿರುತ್ತವೆ ಎನ್ನುವುದು ಮುಖ್ಯ’ ಎಂದು ಅವರು ಒಂದೆಡೆ ಬರೆದಿದ್ದಾಾರೆ. ‘ಯಾವತ್ತೂ ಸೋತೆ ಎಂದು ಕೈಚೆಲ್ಲಬೇಡಿ.

ಡಾ. ಅಬ್ದುಲ್ ಕಲಾಂ ಅವರನ್ನು ಜನ ಮೆಚ್ಚುತ್ತಿಿದ್ದರು, ಪ್ರೀತಿಸಿದರು, ಆರಾಧಿಸಿದರು. ಅವರು ಹೋದೆಡೆಯೆಲ್ಲ ಜನಸಾಗರವೇ ಹರಿದುಬರುತ್ತಿಿತ್ತು. ಕಲಾಂ ಸಾರ್ ಭಾಷಣ ಮಾಡುತ್ತಾಾರೆ ಎಂದರೆ ಸಾಕು, ಪ್ರೇಕ್ಷಕಾಂಗಣ ತುಂಬಿಹೋಗುತ್ತಿಿತ್ತು. ಕಲಾಂ ಹೋದಲ್ಲೆೆಲ್ಲ ದೇಶಭಕ್ತಿಿಯ ಬಗ್ಗೆೆ ಹೇಳಿದರು. ನಿಮ್ಮ ಪರಿಶ್ರಮ ನಿಮ್ಮನ್ನು ಯಶಸ್ಸಿಿನ ಉತ್ತುಂಗಕ್ಕೆೆ ಕರೆದುಕೊಂಡು ಹೋಗುತ್ತದೆ ಎನ್ನುವ ಸರಳ ಸತ್ಯವನ್ನು ಸರಳವಾದ ಭಾಷೆಯಲ್ಲಿ ವಿವರಿಸುತ್ತಿಿದ್ದರು. ನಿದ್ದೆೆಯಲ್ಲಿ ಕಾಣುವುದು ಕನಸಲ್ಲ; ನಿದ್ದೆೆ ಮಾಡಲಿಕ್ಕೂ ಬಿಡದಂತೆ ಕಾಡುವುದು ಕನಸು ಎನ್ನುತ್ತಿಿದ್ದರು. ಮಳೆ ಬಂದಾಗ ಹಕ್ಕಿಿಗಳು ಆಶ್ರಯ ಪಡೆಯಲು ಜಾಗ ಹುಡುಕುತ್ತವೆ. ಆದರೆ, ಗರುಡ, ಮೋಡಕ್ಕಿಿಂತ ಎತ್ತರದಲ್ಲಿ ಹಾರಾಡುತ್ತ ಮಳೆಯಿಂದ ತಪ್ಪಿಿಸಿಕೊಳ್ಳುತ್ತದೆ. ಎಂದು ತನ್ನೆೆದುರು ಕೂತ ಮಕ್ಕಳಿಗೆ ಏರಬೇಕಾದ ಎತ್ತರದ ಬಗ್ಗೆೆ ಆಸೆಬುಗ್ಗೆೆಗಳನ್ನು ಎಬ್ಬಿಿಸುತ್ತಿಿದ್ದರು. ಕಾಲದ ಮರಳಲ್ಲಿ ನಿಮ್ಮ ಹೆಜ್ಜೆೆ ಗುರುತುಗಳನ್ನು ದಾಖಲಿಸಬೇಕೆಂಬ ಆಸೆಯಿದ್ದರೆ ಕಾಲೆಳೆಯುತ್ತ ನಡೆಯಬೇಡಿ; ದೃಢವಾದ ಹೆಜ್ಜೆೆಗಳನ್ನಿಿಡುತ್ತ ಮುನ್ನಡೆಯಿರಿ ಎಂದು ಆತ್ಮವಿಶ್ವಾಾಸದ ಚಿಲುಮೆ ತಟ್ಟುತ್ತಿಿದ್ದರು. ಮೊದಲ ವಿಜಯದ ಬಳಿಕ ಸುಮ್ಮನಾಗಬೇಡಿ. ಎರಡನೆ ಪ್ರಯತ್ನದಲ್ಲಿ ನೀವೇನಾದರೂ ಸೋತರೆ, ನಿಮ್ಮ ಮೊದಲ ವಿಜಯ ಕೇವಲ ಅದೃಷ್ಟವಾಗಿತ್ತೆೆಂದು ಹೇಳಲು ಹಲವು ಬಾಯಿಗಳು ಕಾಯುತ್ತಿಿರುತ್ತವೆ ಎನ್ನುತ್ತ ಹೇಳಿ, ಒಡಲಿನ ಬೆಂಕಿಯನ್ನು ಸದಾ ಆರದಂತೆ ನೋಡಿಕೊಳ್ಳಬೇಕೆಂಬ ಪಾಠ ಮಾಡುತ್ತಿಿದ್ದರು ಈ ಕಲಾಂ ಮೇಷ್ಟ್ರು. ‘ನಾನು ರಾಜ, ನನಗಾದರೂ ಗಣಿತವನ್ನು ಸುಲಭಸೂತ್ರಗಳನ್ನು ಹಾಕಿ ಕಲಿಯುವಂತೆ ಮಾಡಿ’ ಎಂದು ಟಾಲೆಮಿ ಎಂಬ ರಾಜ ಕೇಳಿಕೊಂಡಾಗ, ಯೂಕ್ಲಿಿಡ್ ಹೇಳಿದ್ದನಂತೆ: ‘ವಿದ್ಯೆೆ ಕಲಿಯಲು ರಾಜಮಾರ್ಗಗಳಿಲ್ಲ. ಎಲ್ಲರಂತೆ ಕಠಿಣಹಾದಿಯಲ್ಲೇ ನೀನೂ ನಡೆಯಬೇಕು!’. ಕಲಾಂ ಮೇಷ್ಟ್ರು ತನ್ನ ಜೀವಮಾನವಿಡೀ ಹೇಳುತ್ತಾಾ ಬಂದಿದ್ದ ಸಂದೇಶ ಅದೇ. ತಾನೇ ಆ ಸಂದೇಶದ ಮೂರ್ತರೂಪವೆನ್ನುವಂತೆ ಬದುಕಿದರು ಕೂಡ.