ಜಲಮಾನ
ಮಿರ್ಲೆ ಚಂದ್ರಶೇಖರ
ತಂಪೆರದ ಮಳೆಯ ಸಿಂಚನದಿಂದ ದಗದಗನೆ ಉರಿಯುತ್ತಿದ್ದ ಸೂರ್ಯನ ಪ್ರಕರ ಕಿರಣಗಳ ಪ್ರಶಾಂತದಿಂದ ಜನರು ನಿಟ್ಟುಸಿರು ಬಿಡುವುಂತಾಗಿದೆ,
ಕಾದು ಕೆಂಡವಾಗಿದ್ದ ನೆಲವು ತಣ್ಣಗಾಗುತ್ತಿದೆ, ರೈತರ ಮೊಗದಲ್ಲಿ ನಗೆ ಮೂಡಿ ಬಿತ್ತನೆಗೆ ಅಣಿಯಾಗುತ್ತಿದ್ದಾರೆ. ಇತ್ತೀಚೆಗೆ ರಾಜ್ಯದ ಎಲ್ಲಡೆ ಮಳೆಯ ವಾತಾವರಣ ಸೃಷ್ಟಿಯಾಗಿ ಮಳೆ ಪ್ರಾರಂಭವಾಗಿದೆ, ಮುಂದೆ ಸಮೃದ್ದ ಮಳೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.
ಕೆರೆಕಟ್ಟೆಗಳು ಜಲಾಶಯಗಳು ಮೈದುಂಬಿ ಹರಿದರಲ್ಲವೆ ವ್ಯವಸಾಯವನ್ನೇ ತನ್ನ ಜೀವವೆಂದು ನಂಬಿರುವ ಅನ್ನದಾತನು ನಿರುಮ್ಮಳವಾಗಿರುವುದು. ಕಳೆದ ವರ್ಷ ಮಳೆರಾಯ ಕೈಕೊಟ್ಟ ಪರಿಣಾಮ ಬರ ಆವರಿಸಿ ಒಕ್ಕಲುತನವೇ ಬಿಕ್ಕುವಂತಾಯಿತು. ನೀರಿಲ್ಲದೆ ಬದುಕಿಲ್ಲ, ನೀರೇ ಎಲ್ಲಾ, ಬದುಕಲು ಅನ್ನ-ನೀರು ಅವಶ್ಯಕ, ಅನ್ನ ಬೆಳೆಯುವುದಕ್ಕೂ ನೀರು ಬೇಕು. ಜೀವ ಇರುವ ಮನುಷ್ಯನ ದೇಹದಲ್ಲಿ ಶೇ. ೬೦ ರಷ್ಟು ನೀರು ತುಂಬಿರುತ್ತದೆ, ಮರಣ
ಹೊಂದಿದ ದೇಹವನ್ನು ಸುಟ್ಟಾಗ ದೊರೆಯುವ ಭಸ್ಮ ಸರಾಸರಿ ಕೇವಲ ಮೂರು ಕೆಜಿ ಮಾತ್ರ ಅಂದರೆ ಉಳಿದಿದ್ದೆಲ್ಲವೂ ದೇಹದಲ್ಲಿದ್ದ ನೀರೇ ಆಗಿರುತ್ತದೆ, ನೀರಿಲ್ಲದೆ ಏನಿಲ್ಲಾ!.
ಆಗಿಂದಾಗ್ಗೆ ಆವರಿಸುವ ಬರದಿಂದ ಕುಡಿಯುವ ನೀರಿಗೆ ಪರಿತಪಿಸುವುದು ಹಾಗೂ ಅಹಾರ ಉತ್ಪಾದನೆಯಲ್ಲಿ ಕುಂಠಿತವಾಗಿ ಮಾಡಿದ ಸಾಲವನ್ನು ತೀರಿಸಲಾಗದೆ ಅನ್ನದಾತ ಸಾವಿಗೆ ಶರಣಾಗುವುದು ಇಲ್ಲವೆ ಕಣ್ಣೀರಿನಲ್ಲಿ ಕೈತೊಳೆಯುವುದು ಮೇಲ್ವರ್ಗದ ಜನರ ದೃಷ್ಟಿಗೆ ಕಂಡೂಕಾಣದ ವಿಷಯ,
ಅದರಲ್ಲೂ ಭತ್ತರಾಗಿಯನ್ನು ಮರದಲ್ಲಿ ಬೆಳೆಯುತ್ತಾರೆಂದು, ಮಿನರಲ್ ವಾಟರೇ ನೀರೆಂದು ನಂಬಿ ನಗರಗಳಲ್ಲಿ ಹುಟ್ಟಿ ಬೆಳೆದವರಿಗೇನು ಗೊತ್ತು ನೀರಿನ ಗಮ್ಮತ್ತು!.
ಸರಕಾರವು ಒದಗಿಸಿಕೊಡುವ ಮೂಲಭೂತ ಸೌಕರ್ಯಗಳಲ್ಲಿ ಕುಡಿಯುವ ನೀರು ಪ್ರಮುಖವಾಗಿರುತ್ತದೆ, ಹಾಗೆಯೇ ಜಲಾಶಯಗಳಿಂದ ನಾಲೆಗಳ ಮೂಲಕ ಅಗತ್ಯವಿರುವಷ್ಟು ನೀರನ್ನು ಜಮೀನಿಗೆ ಹರಿಸುವುದು ಇಲಾಖೆಯ ಜವಾಬ್ದಾರಿ ಆಗಿರುತ್ತದೆ. ಸಮೃದ್ದಿಯಾಗಿ ಮಳೆಯಾಗಿ ಎರೆಡೆರಡು ಬಾರಿ
ಜಲಾಶಯಗಳು ತುಂಬಿದಾಗ ನೀರೊದಗಿಸುವುದರಲ್ಲಿ ಸಮಸ್ಯೆ ಆಗದು. ಜಲಾಶಯಗಳು ಭಾಗಶಃ ತುಂಬಿದಾಗ ನೀರಿನ ನಿರ್ವಹಣೆ ಬಹಳವೇ ಕಷ್ಟಸಾಧ್ಯ ವಾದ ಕೆಲಸ. ನೀರನ್ನು ಕೃತಕವಾಗಿ ಉತ್ಪಾದಿಸಲಾಗದು, ಆದರೆ ಇತರೆಲ್ಲಾ ಉತ್ಪಾದನೆಗೆ ನೀರು ಬೇಕೇಬೇಕು. ಭೂಮಿಯ ಜಲಗೋಳದ ಸಾಗರ, ನದಿತೊರೆಗಳು, ಅಂತರ್ಜಲ, ವಾತಾವರಣ, ದ್ರುವಗಳಲ್ಲಿನ ಮಂಜುಗಡ್ಡೆ ಹಾಗೂ ಮೋಡಗಳ ರೂಪದಲ್ಲಿ ಇರುವ ಒಟ್ಟು ಅಂದಾಜು ನೀರಿನ ಪ್ರಮಾಣ ೩೨೬ ಮಿಲಿಯನ್ ಘನ ಮೈಲಿಗಳು. ಜಲಚಕ್ರದ ಕ್ರಿಯೆಯಲ್ಲಿ ಭೂಮಿಯ ಮೇಲಿನ ನೀರು ಆವಿಯಾಗಿ ವಾತಾವರಣ ಸೇರುವುದು ಮತ್ತೇ ಮೋಡಗಳು ಮಳೆಯಾಗಿ ಭೂಮಿಗೆ ಸುರಿಯುವುದು ರೂಪಾಂತರಗೊಳ್ಳುವುದರಿಂದ ನೀರಿನ ಪರಿಮಾಣದಲ್ಲಿ ವ್ಯತ್ಯಾಸ ಆಗದು ಇದ್ದಷ್ಟೇ ಇರುವ ನೀರು ಉಪ ಯೋಗಕ್ಕೆ ಬರುವ ಪ್ರಮಾಣದಲ್ಲಿ ಏರುಪೇರಾಗುತ್ತಿರುತ್ತದೆ, ಇದು ಆಗುವ ಮಳೆಯ ಪ್ರಮಾಣದ ಮೇಲೆ ನಿರ್ಧರಿತವಾಗಿರುತ್ತದೆ.
ಜಲಗೋಳದಲ್ಲಿ ಇದ್ದಷ್ಟೇ ನೀರು ಯಾವಾಗಲೂ ಇರುವಾಗ ಬರಗಾಲದಿಂದ ನರಳುವ ಪರಿಸ್ಥಿತಿಯನ್ನು ಅನುಭವಿಸುವ ಬದಲು ಶೇಖರಣೆ ಹಾಗೂ ನಿರ್ವಹಣೆಯಲ್ಲಿ ಜಾಣ್ಮೆ ತೋರಿದರೆ ಎಂದಿಗೂ ಕೊರತೆ ಆಗಲಾರದು. ಹನಿಹನಿ ನೀರನ್ನೂ ಸದ್ಬಳಕೆ ಮಾಡಿಕೊಳ್ಳುವ ತಂತ್ರಜ್ಞಾನವನ್ನು ಅಳವಡಿಸಿ ಕೊಂಡಿರುವ ಇಸ್ರೇಲ್ ಇತರರಿಗೆ ಮಾದರಿಯಾಗುತ್ತದೆ, ತ್ಯಾಜ್ಯನೀರನ್ನೂ ಸಹ ಶುದ್ದೀಕರಿಸಿ ಮರುಬಳಕೆ ಮಾಡುವ ಇದು ಮುಖ್ಯವಾಗಿ ಶುದ್ದೀಕರಿಸಿದ ಸಮುದ್ರದ ನೀರು ಹಾಗು ಅಂತರ್ಜಲವನ್ನು ಅವಲಂಬಿಸಿದೆ ಏಕೆಂದರೆ ಇಲ್ಲಿ ಬೀಳುವ ಮಳೆಯು ಇಸ್ರೇಲಿಗರಿಗೆ ಅಗತ್ಯ ಇರುವಷ್ಟು ನೀರನ್ನು ಪೂರೈಸಲು ಸಾಕಾಗದು.
ನಮ್ಮಲ್ಲಿ ಸಮೃದ್ದಿಯಾಗಿ ಮಳೆಯಾಗಿ ಶೇಖರಿಸಿಡುವುದಕ್ಕಿಂತ ಹೆಚ್ಚು ನೀರು ಸಮುದ್ರ ಸೇರುತ್ತಿದ್ದರೂ ಯಾವಾಗಲೂ ನೀರಿಗೆ ಹಾಹಾಕಾರ ಏಕೆ ಹೀಗೆ? ಸಿಂಪಲ್ ನೀರಿನ ಸಮರ್ಪಕ ನಿರ್ವಹಣೆಯ ಕೊರತೆ ಹಾಗೂ ನಾಗರೀಕರು ಬಳಕೆಯಲ್ಲಿ ಮತ್ತು ಶೇಖರಣೆಯಲ್ಲಿ ಬದ್ದತೆಯನ್ನು ತೋರದಿರುವುದು.
ತಂತ್ರಜ್ಞಾನದಲ್ಲಿ ಮುಂದಿದ್ದರೂ ಅದನ್ನು ಅಳವಡಿಸಿಕೊಳ್ಳದಿರುವುದು ದುರ್ದೈವ, ನಮಗೆ ಅಗತ್ಯ ಇರುವಷ್ಟು ನೀರನ್ನು ಮಳೆಗಾಲದಲ್ಲಿ ನಾವೇ ಶೇಖರಿಸಿಟ್ಟುಕೊಳ್ಳಬಹುದಾದರೂ ಯಾರೂ ಆ ಕೆಲಸಕ್ಕೆ ಮನಸ್ಸು ಮಾಡುವುದಿಲ್ಲ ನಗರ ಪಾಲಿಕೆ ಇದೆಯಲ್ಲಾ ನಲ್ಲಿಗಳ ಮೂಲಕ ಕೊಡುತ್ತಾರೆ ನಾವೇಕೆ ಮಳೆಕೊಯ್ಲು ಮಾಡಿ ಶೇಖರಿಸಡಬೇಕು? ಬೆಂಗಳೂರಿನಲ್ಲಿ ಮಳೆ ಬಿದ್ದಾಗ ನೀರು ಅಂತರ್ಜಲ ಸೇರುತ್ತಿದೆಯೇ? ಇಲ್ಲವೇ ಇಲ್ಲ, ನಗರದ ಮೇಲ್ಮೈ ಪೂರ ಕಾಂಕ್ರೀಟ್‌ನಿಂದ ಮುಚ್ಚಿರುವುದರಿಂದ ನೀರು ಇಂಗುವುದಕ್ಕೆ ಅವಕಾಶ ಎಲ್ಲಿದೆ, ಹೋಗಲಿ ಮಳೆಯ ನೀರು ಚರಂಡಿ ಮೂಲಕ ಹರಿಯುವುದೇ?
ಊಹಂ.. ನಗರದ ರಸ್ತೆಗಳಲ್ಲಿ ಮೂರು ಅಡಿಯವರೆಗೂ ಹೊಳೆಯಂತೆ ವೇಗವಾಗಿ ಹರಿಯುವುದನ್ನು ಕಾಣುತ್ತೇವೆ.
ಇದರಲ್ಲಿ ಸ್ವಲ್ಪ ಪ್ರಮಾಣವನ್ನು ಶೇಖರಿಸಿಕೊಂಡರೆ ಕುಡಿಯುವ ನೀರಿಗೆ ಕೊರತೆ ಆಗದಂತೆ ತಡೆಯಬಹುದು, ಇವರ ಕುಡಿಯುವ ನೀರಿಗಾಗಿ ರೈತರ ಬೆಳೆಗಳಿಗೆ ನೀರನ್ನು ಕೊಡದೆ ನಿಲ್ಲಿಸಿ ಕೃಷ್ಣರಾಜಸಾಗರ ಹಾಗೂ ಕಬಿನಿ ಅಣೆಕಟ್ಟೆಗಳ ನೀರನ್ನು ಜೋಪಾನ ಮಾಡಿಟ್ಟುಕೊಳ್ಳುವ ಸ್ಥಿತಿ ನಮ್ಮದು, ಇದು
ನಿರ್ವಹಣೆಯ ವೈಪಲ್ಯವಲ್ಲವೇ? ನಮ್ಮ ನೀರು ನಮ್ಮದು ಎಂಬ ಕಲ್ಪನೆಯಲ್ಲಿ ನಮ್ಮದೇ ಜಾಗದಲ್ಲಿ ಬಿದ್ದ ಮಳೆಯ ನೀರಿನಲ್ಲಿ ಸ್ವಲ್ಪ ಪ್ರಮಾಣವನ್ನು ಕೂಡಿಡುವುದರಿಂದ ಕೊರತೆಯ ಸಂದರ್ಭದಲ್ಲಿ ಬಳಕೆ ಮಾಡಬಹುದಲ್ಲವೇ? ಮೊದಲ ಪ್ರಯತ್ನವಾಗಿ ಬೆಂಗಳೂರು ನಗರವನ್ನು ಸ್ವಾವಲಂಬಿ ನಗರವನ್ನಾಗಿ ಪರಿವರ್ತಿಸಬೇಕು ನಗರದಲ್ಲಿ ಎಷ್ಟೊಂದು ಅಗಾದ ಪ್ರಮಾಣದಲ್ಲಿ ಮಳೆಯ ನೀರು ಹಾಗೂ ತ್ಯಾಜ್ಯ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ, ಅಷ್ಟೂ ನೀರನ್ನು ತಡೆಯಲಾಗದಿದ್ದರೂ ಸಾಧ್ಯವಾದಷ್ಟು ಪ್ರಮಾಣದ ನೀರನ್ನು ತಡೆದು ಕಾಪಿಟ್ಟುಕೊಂಡರೆ ಒಳ್ಳೆಯದು, ಆ ನಿಟ್ಟಿನಲ್ಲಿ
ಮಹಾನಗರ ಪಾಲಿಕೆ ಯೋಚಿಸಲಿ.
ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳನ್ನು ಕಾಂಕ್ರೀಟ್ ಮಾರಿಯಿಂದ ಮುಕ್ತಿಗೊಳಿಸಿ ಮಳೆಯ ನೀರು ಇಂಗುವ ಹಾಗೆ ವಿನ್ಯಾಸಗೊಳಿಸುವುದರಿಂದ ಅಂತರ್ಜಲದ ಮಟ್ಟದಲ್ಲಿ ಸುಧಾರಣೆ ಕಾಣಬಹುದು, ಪ್ರತೀ ಮನೆಯೂ ಮಳೆಕೊಯ್ಲು ಅಳವಡಿಸಿಕೊಂಡು ಕನಿಷ್ಟ ಬಳಕೆಯ ಅರ್ಧದಷ್ಟು ನೀರನ್ನು
ಶೇಖರಿಸಿಕೊಳ್ಳುವುದು, ನಲ್ಲಿಗಳು ಮತ್ತು ಕೊಳವೆಗಳಲ್ಲಿನ ಸೋರಿಕೆ ತಡೆಯುವುದು ವಿಶೇಷವಾಗಿ ಜಲಮಂಡಳಿಯವರು ಪೂರೈಕೆಯಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಯುವುದು, ಕಂಪನಿಗಳು ಹಾಗೂ ಕಾರ್ಖಾನೆಗಳು ತ್ಯಾಜ್ಯ ನೀರನ್ನು ಶುದ್ದೀಕರಿಸಿ ಮರುಬಳಕೆ ಮಾಡುವಂತೆ ನಿರ್ಬಂಧನೆ
ಹೇರುವುದು, ನಾಗರೀಕರನ್ನು ಜಾಗೃತಗೊಳಿಸುವುದು ಹೀಗೆ ಹಲವು ಕ್ರಮಗಳನ್ನು ಕೈಗೊಳ್ಳುವುದರಿಂದ ನೀರು ವ್ಯರ್ಥ ಆಗದಂತೆ ತಡೆಯಬಹುದಲ್ಲದೆ ಅಣೆಕಟ್ಟೆಗಳ ನೀರನ್ನು ಬೆಳೆಗಳಿಗೆ ಕೊಟ್ಟು ರೈತರ ಬವಣೆಯನ್ನೂ ತಪ್ಪಿಸಬಹುದು.
ಕರ್ನಾಟಕ ರಾಜ್ಯದಲ್ಲಿ ಸರಾಸರಿ ವಾರ್ಷಿಕವಾಗಿ ೧೧೫೩ಎಂಎಂ ಮಳೆಯಾಗುವುದು, ಎಲ್ಲಾ ವರ್ಷಗಳಲ್ಲೂ ಇದೇ ಪ್ರಮಾಣದಲ್ಲಿ ಬೀಳುವುದಿಲ್ಲ ೨೦೨೩ರಲ್ಲಿ ೮೭೨ಎಂಎಂ ಮಳೆಯಾಗಿದ್ದು, ವಾಡಿಕೆಗಿಂತ ಶೇ. ೨೪ರಷ್ಟು ಕಡಿಮೆಯಾಗಿದೆ, ಬೀದರ್ ಜಿಲ್ಲೆಯನ್ನು ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲೂ
ವಾಡಿಕೆಗಿಂತ ಕಡಿಮೆ ಮಳೆಯಾಗಿದೆ, ಹೀಗೆ ಕಡಿಮೆ ಮಳೆಯಾಗುವ ವರ್ಷಗಳಲ್ಲಿ ನೀರು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕಾಗುತ್ತದೆ.
ನೈಸರ್ಗಿಕ ಸಂಪತ್ತಿನಲ್ಲಿ ಕೊರತೆ ಇಲ್ಲದಿದ್ದರೂ ಅದನ್ನು ಸದ್ಬಳಕೆ ಮಾಡಿಕೊಳ್ಳುವುದರಲ್ಲಿ ನಾವು ಹಿಂದೆ ಬಿದ್ದಿದ್ದೇವೆ.
ರಾಜ್ಯದಲ್ಲಿ ಬೀಳುವ ಮಳೆಯಿಂದ ನೀರಿನ ವಾರ್ಷಿಕ ಅಂದಾಜು ಇಳುವರಿ ೩೪೭೫ ಟಿಎಂಸಿ, ಪಶ್ಚಿಮಕ್ಕೆ ಹರಿಯುವ ನದಿಗಳ ನೀರನ್ನು ಬಳಕೆ ಮಾಡಿಕೊಳ್ಳಲು ಆಗದ ಕಾರಣ ನಾವು ಹಾಲಿ ಕೇವಲ ೧೬೯೦ ಟಿಎಂಸಿ ಮೇಲ್ಮೈ ಮಳೆಯ ನೀರನ್ನು ಹಾಗೂ ೬೦೦ ರಿಂದ ೭೦೦ ಟಿಎಂಸಿ ಅಂತರ್ಜಲ ನೀರನ್ನು ಉಪಯೋಗಿಸಿಕೊಳ್ಳುತ್ತಿದ್ದೇವೆ. ಉಳಿದ ಶೇ. ೬೦ರಷ್ಟು ಮಳೆಯ ನೀರು ಸಮುದ್ರ ಸೇರುತ್ತಿದೆ.
ಇಲ್ಲಿ ಹೆಚ್ಚು ಗಮನ ಕೊಡಬೇಕಾಗಿರುವುದು; ವ್ಯರ್ಥವಾಗಿ ಸಮುದ್ರ ಕಡೆಗೆ ಹರಿಯುವ ನೀರನ್ನು ಇನ್ನಷ್ಟು ಶೇಖರಿಸಿಕೊಳ್ಳುವ ಸಾಮರ್ಥ್ಯ ಹೊಂದು ವುದು, ಹರಿಯುವ ನೀರನ್ನು ತಡೆದು ಇಂಗಿಸಿ ಅಂತರ್ಜಲ ಹೆಚ್ಚಿಸಿಕೊಳ್ಳುವುದು, ಅತ್ಯಂತ ಕಡಿಮೆ ನೀರಿನಿಂದ ಹೆಚ್ಚು ಬೆಳೆಯನ್ನು ಬೆಳೆಯುವ
ವ್ಯವಸಾಯ ಪದ್ದತಿಯನ್ನು ಅಳವಡಿಸಿಕೊಳ್ಳುವುದು, ಮನೆಗಳಲ್ಲಿ ಕಡ್ಡಾಯ ಮಳೆಕೊಯ್ಲು, ನಗರಗಳಲ್ಲಿ ನೀರಿನ ಮೂಲವನ್ನು ತೆರವುಗೊಳಿಸಿ ಕೆರೆಕಟ್ಟೆಗಳು ಜೀವಂತವಾಗಿ ರುವಂತೆ ಕ್ರಮವಹಿಸುವುದು, ಬಳಕೆಯಲ್ಲಿ ವ್ಯರ್ಥವಾಗುತ್ತಿರುವ ನೀರನ್ನು ಮಿತಿಗೊಳಿಸುವುದು, ಉಪಯೋಗಿಸಿದ
ನೀರನ್ನು ಶುದ್ದೀಕರಿಸಿ ಮರುಬಳಕೆ ಮಾಡುವುದು, ಹೀಗೆ ಹಲವಾರು ಕ್ರಮಗಳ ಅನುಷ್ಟಾನದಿಂದ ಮಳೆಯ ಅಬಾವ ಇದ್ದಾಗಲೂ ನಿಶ್ಚಿಂತೆಯಿಂದ ಇರಬಹುದು ಮೇಲಾಗಿ ಬರದ ನೆಪ ಹೇಳಿ ಕುಡಿಯುವ ನೀರಿಗಾಗಿಯೇ ಇಡೀ ಆಡಳಿತ ಯಂತ್ರ ತಲೆಕೆಡಿಸಿಕೊಳ್ಳುವುದನ್ನು ತಪ್ಪಿಸಿ, ಯಥೇಚ್ಛವಾಗಿ
ಪೋಲಾಗುವ ಹಣವನ್ನು ಉಳಿಸಬಹುದಾಗಿದೆ.
ಹಣ ಪೋಲಾದರೆ ಅಡ್ಡಿಯಲ್ಲ ಮತ್ತೇ ಸಂಪಾದಿಸಬಹುದು ಆದರೆ ನೀರು ಒಮ್ಮೆ ಹಳ್ಳಕ್ಕೆ ಹರಿದರೆ ಮತ್ತೇ ಹಿಂದಕ್ಕೆ ಹರಿಯುವುದಿಲ್ಲ. ಹರಿಯುವ ನೀರನ್ನು ತಡೆದು ನಿಲ್ಲಿಸಿ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಜಾಗೃತರಾಗೋಣ. ಬುದ್ಧಿವಂತಿಕೆಯ ನೀರು ನಿರ್ವಹಣೆಯಲ್ಲಿಯೇ ಬರದಿಂದ
ಹೊರಬರುವ ಬಾಗಿಲು ಇದೆಯೆಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ.
(ಲೇಖಕರು: ಹವ್ಯಾಸಿ ಬರಹಗಾರರು)