ವೀಕೆಂಡ್ ವಿತ್ ಮೋಹನ್
ಮೋಹನ್ ವಿಶ್ವ, camohanbn@gmail.com
ಕೆಲ ದಿನಗಳ ಹಿಂದೆ ಲೆಬನಾನ್ ದೇಶದಲ್ಲಿ ಇದ್ದಕ್ಕಿದ್ದಂತೆ ಸುಮಾರು 6000 ಪೇಜರ್‌ಗಳು ದೇಶದಾದ್ಯಂತ ಸ್ಪೋಟ ಗೊಂಡವು, ಜೇಬಿನಲ್ಲಿ, ತರಕಾರಿ ಮಳಿಗೆಯಲ್ಲಿ,ಗಾಡಿ ಓಡಿಸುತ್ತಿದ್ದ ಸಂದರ್ಭದಲ್ಲಿ ಸ್ಪೋಟ, ಇಡೀ ದಿವಸ ಪೇಜರ್ ಗಳು ಸ್ಪೋಟಗೊಂಡವು. ತಂತ್ರಜ್ಞಾನ ಇಷ್ಟು ಮುಂದುವರೆದ ಮೇಲೂ, ಅಲ್ಲಿನ ಜನ ಪೇಜರ್ ಯಾಕೆ ಬಳಸುತ್ತಿದ್ದ ರೆಂಬ ಪ್ರಶ್ನೆ ಹಲವರನ್ನು ಕಾಡುತ್ತಿರಬಹುದು. ತನ್ನ ಸುತ್ತಮುತ್ತಲಿನ ಮುಸ್ಲಿಂ ದೇಶಗಳ ದಾಳಿಯನ್ನು ಎದುರಿಸಿ ಏಳು ದಶಕಗಳಿಂದ ಬದುಕುತ್ತಿರುವ ಕೆಚ್ಚೆದೆಯ ದೇಶ ಇಸ್ರೇಲ್.
ತನ್ನ ಹುಟ್ಟಿನಿಂದಲೇ ಹೋರಾ ಟವೆಂಬುದು ಇಸ್ರೇಲಿ ಪ್ರಜೆಗಳ ರಕ್ತದಲ್ಲಿ ಬಂದಿದೆ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ನಡೆದ ಯಹೂದಿಗಳ ಮಾರಣಹೋಮವನ್ನು ಇಸ್ರೇಲ್ ಮರೆತಿಲ್ಲ. ಶತ್ರುಗಳನ್ನು ನಿರಂತರವಾಗಿ ಹಿಮ್ಮೆಟಿಸಿದ ಇತಿಹಾಸ ಇಸ್ರೇಲ್ ದೇಶಕ್ಕಿದೆ, ಪ್ಯಾಲೆಸ್ತೇನಿಗಳು ಆಗಾಗ್ಗೆ ಕಾಲು ಕೆರೆದುಕೊಂಡು ಇಸ್ರೇಲ್ ಮೇಲೆ ದಾಳಿ ನಡೆಸುತ್ತಿದ್ದಾರೆ. ಕಳೆದ ವರ್ಷ ಇಸ್ರೇಲಿನ ಫುಟ್ ಬಾಲ್ ಕ್ರೀಡಾಂಗಣದ ಮೇಲೆ ರಾಕೆಟ್ ದಾಳಿ ನಡೆಸಿದ ಪ್ಯಾಲಿಸ್ತೇನಿ ಗಳು ಅಮಾಯಕರನ್ನು ಕೊಂದಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ನಿರಂತರವಾಗಿ ದಾಳಿ ನಡೆಸಿ ಉಗ್ರರನ್ನು ಪ್ರತಿನಿತ್ಯ ಹೊಡೆದುರುಳಿಸುತ್ತಿದೆ. ಈಗ ಪ್ಯಾಲೆಸ್ತೇನಿಗಳಿಗೆ ಲೆಬನಾನ್ ದೇಶದ ಹಿಜ್ಬು ಉಗ್ರರು ಕೈ ಜೋಡಿಸಿ ಇಸ್ರೇಲಿನ ಮೇಲೆ ದಾಳಿ ನಡೆಸಿದ್ದರು.
ಹಿಜ್ಬುಲ್ ಉಗ್ರರಿಗೆ ಪಕ್ಕದ ದೇಶದ ಇರಾನಿನ ಬೆಂಬಲವಿದೆ, ಇರಾನ್ ದೇಶ ಹಿಜ್ಬುಗಳಿಗೆ ಆಯುಧಗಳನ್ನು ಪೂರೈಸು ತ್ತಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಜಗಳಕ್ಕೂ ಒಂದು ಇತಿಹಾಸವಿದೆ, ಇರಾನ್ ದೇಶ ಅಣ್ವಸ್ತ್ರ ರಾಷ್ಟ್ರ ವಾಗುವುದರಲ್ಲಿ ವಿಫಲವಾದುದ್ದರ ಹಿಂದಿನ ಕೈ ಇಸ್ರೇಲ್. ಹಿಜ್ಬು ಉಗ್ರರನ್ನು ಗುರಿಯನ್ನಾಗಿಸಿಕೊಂಡು ಇಸ್ರೇಲ್ ನಡೆಸುತ್ತಿದ್ದ ದಾಳಿಯ ಪ್ರಮಾಣವನ್ನು ತಡೆಯಲು, ಲೆಬನಾನ್ ದೇಶದ ಹಿಜ್ಬು ನಾಯಕ ಹಸನ್ ನಸ್ರ ಒಂದು ಉಪಾಯ ಮಾಡಿದ್ದ.
ಲೆಬನಾನ್ ದೇಶದಲ್ಲಿರುವ ಹಿಜ್ಬು ಉಗ್ರರ ಚಲನವಲನಗಳನ್ನು ಇಸ್ರೇಲ್ ತಾವು ಬಳಸುತ್ತಿರುವ ಮೊಬೈಲ್ ಮೂಲಕ ಗಮನಿಸುತ್ತಿದೆ. ಇಸ್ರೇಲಿಗೆ ಮಾಹಿತಿ ನೀಡುತ್ತಿರುವ ಏಜೆಂಟ್ ಲೆಬನಾನ್ ದೇಶದಲ್ಲಿನ ಜನರ ಕೈಗಳಲ್ಲಿರುವ ಮೊಬೈಲ್‌ಗಳು, ಅವುಗಳನ್ನು ಬಳಸಿದಷ್ಟು ಇಸ್ರೇಲ್‌ಗೆ ಹಿಜ್ಬು ಉಗ್ರರ ಮಾಹಿತಿ ರವಾನೆಯಾಗುತ್ತದೆ. ಆದ್ದರಿಂದ ಮೊಬೈಲ್ ಬಳಸಬೇಡಿ, ತಮ್ಮ ಮಕ್ಕಳ ಕೈಗೂ ಮೊಬೈಲ್ ನೀಡಬೇಡಿ ನಿಮ್ಮ ಬಳಿ ಇರುವ ಮೊಬೈಲ್‌ಗಳನ್ನು ಇಸಿ ಪೆಟ್ಟಿಗೆಯಡಿಯಲ್ಲಿ ಇಟ್ಟು ಸುಟ್ಟಿಬಿಡು ಎಂದು ಹೇಳಿದ್ದ. ಈತನ ಮಾತನ್ನು ಆಲಿಸಿದ ಹಿಜ್ಬುಗಳು ತಮ್ಮ ಮೊಬೈಲು ಗಳನ್ನು ಸುಟ್ಟುಹಾಕಿದ್ದರು.
ಮೊಬೈಲ್ ಬದಲು ಪೇಜರ್ ಬಳಸಿಕೊಂಡು ಮಾಹಿತಿ ಹಂಚಿಕೊಳ್ಳುವ ಉಪಾಯವನ್ನು ನೀಡಿದ. ಈತನ ಸಲಹೆ ಯಿಂದ ಲೆಬನಾನ್ ದೇಶದಲ್ಲಿ ದಿನದಿಂದ ದಿನಕ್ಕೆ ಪೇಜರ್ ಬಳಸುವವರ ಸಂಖ್ಯೆ ಹೆಚ್ಚಾಯಿತು, ಪೇಜರ್ ಬಳಕೆ ದಾರರ ಸಂಖ್ಯೆ ಹೆಚ್ಚಾದಂತೆ ಅದನ್ನು ಉತ್ಪಾದಿಸುವವರಿಗೆ ಬೇಡಿಕೆ ಹೆಚ್ಚಾಯಿತು. ಹಿಜ್ಬುಗಳ ಪೇಜರ್ ಬಳಕೆ ಯಿಂದ ಇಸ್ರೇಲಿಗೆ ಹಿನ್ನಡೆಯಾಗಲಿಲ್ಲ, ಬದಲಾಗಿ ಇಸ್ರೇಲಿನ ಗುಪ್ತಚರ ಸಂಸ್ಥೆ ಮೊಸಾದ್ ಅದನ್ನೇ ಹಿಜ್ಬುಲ್ ಉಗ್ರರ ವಿರುದ್ಧ ಅಸ್ತ್ರವನ್ನಾಗಿಸುವತ್ತ ಚಿಂತಿಸಲು ಪ್ರಾರಂಭಿಸಿತ್ತೆಂದು ಪತ್ರಿಕಾ ವರದಿಗಳು ಹೇಳುತ್ತಿವೆ.
ಬಲ್ಲ ಮೂಲಗಳ ಪ್ರಕಾರ, ಮೊಸಾದ್ ಯೂರೋಪಿನ ಹಂಗೇರಿ ದೇಶದಲ್ಲಿ ಪೇಜರ್ ಉತ್ಪಾದಿಸುವ ಒಂದು ಡಮ್ಮಿ ಕಂಪನಿಯನ್ನು ಮೂರು ವರ್ಷಗಳ ಹಿಂದೆ ಸ್ಥಾಪಿಸಿತ್ತು. ಜಗತ್ತಿನ ಅನೇಕ ಗ್ರಾಹಕರು ಈ ಕಂಪನಿ ಮೂಲಕ ಪೇಜರ್ ಖರೀದಿಸುತ್ತಿದ್ದರು, ಅದೇ ಕಂಪನಿಯ ಮೂಲಕ ಸಾವಿರಾರು ಪೇಜರ್‌ಗಳನ್ನು ಹಿಜ್ಬು ಉಗ್ರರು ಖರೀದಿಸಿದ್ದರು. ಮೊಸಾದ್ ಸ್ಥಾಪಿತ ಡಮ್ಮಿ ಕಂಪನಿ, ಲೆಬನಾನ್ ಉಗ್ರರಿಗೆ ಪೂರೈಸಿದ ಪೇಜರ್‌ಗಳ ಬ್ಯಾಟರಿಗಳಲ್ಲಿ ಸ್ಪೋಟಕಗಳ ಮಿಶ್ರಣವನ್ನು ಅಳವಡಿಸಲಾಗುತ್ತೆಂದು ಹೇಳಲಾಗುತ್ತಿದೆ.
ಮೊಸಾದ್ ಮೂಲದ ಕಂಪನಿಯಿಂದ ಪೂರೈಸಿದ ಪೇಜರ್‌ಗಳು ಲೆಬನಾನ್ ದೇಶದಾದ್ಯಂತ ಬಳಕೆಗ ಬಂದವು, ಅಲ್ಲಿನ ಉಗ್ರರಿಗೆ ಇಸ್ರೇಲಿಗೆ ತಮ್ಮ ಚಲನವಲನಗಳ ಮಾಹಿತಿ ಸಿಗುತ್ತಿಲವೆಂಬ ಆತ್ಮವಿಶ್ವಾಸ ಹೆಚ್ಚಾಯಿತು. ಆದರೆ ತಮ್ಮ ಜೇಬುಗಳಲ್ಲಿ ಇಸ್ರೇಲ್ ಪೇಜರ್ ಮೂಲಕ ಸ್ಪೋಟಕಗಳನ್ನಿಟ್ಟಿರುವ ಅಂಶ ತಿಳಿಯಲಿಲ್ಲ. ಎರಡರಿಂದ ಮೂರು ವರ್ಷಗಳ ಕಾಲ ಕಾದುಕುಳಿತಿದ್ದ ಇಸ್ರೇಲ್ ಒಮ್ಮೆಲೆ ಲೆಬನಾನ್ ದೇಶದಾದ್ಯಂತ ಪೇಜರ್ ಗಳನ್ನು ಸ್ಪೋಟಿ ಸಿದೆ ಎಂದು ವರದಿಗಳು ಹೇಳುತ್ತಿವೆ.
ಸುಮಾರು 300 ರಿಂದ 500 ಮೀಟರ್ ಎತ್ತರದಲ್ಲಿ ಡ್ರೋನ್ ಹಾರಿಸಿ ಪೇಜರ್‌ನಲ್ಲಿರುವ ಸ್ಪೋಟಕ ವಸ್ತುವಿನ ಜೊತೆ
ಸಂಪರ್ಕ ಸಾಧಿಸಿ ಸೋಟಗೊಳಿಸಿರಬಹುದೆಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಸ್ರೇಲ್‌ನ ನೂತನ ಯುದ್ಧದ ಮಾದರಿ ಜಗತ್ತಿನ ಅನೇಕರನ್ನು ಬೆಚ್ಚಿ ಬೀಳಿಸಿದೆ. ಸಾಮಾನ್ಯ ಜನರ ಕೈಯಲ್ಲಿರುವ ಮೊಬೈಲ್ ಸಾಧನ ಗಳು ಎಷ್ಟು ಸುರಕ್ಷಿತವೆಂಬ ಅನುಮಾನ ಬರುತ್ತಿದೆ. ಇಸ್ರೇಲ್‌ನ ಗೂಢಚಾರ ಸಂಸ್ಥೆ ಮೊಸಾದ್ ಈ ಮಾದರಿಯ ಕಾರ್ಯಾಚರಣೆ ನಡೆಸುತ್ತಿರುವುದು ಇದು ಮೊದಲಲ್ಲ, ಈ ಹಿಂದೆಯೂ ಅನೇಕ ರಹಸ್ಯ ಕಾರ್ಯಾ ಚರಣೆಗಳ ಮೂಲಕ ತನ್ನ ಶತ್ರುಗಳಿಗೆ ತಕ್ಕ ಪಾಠ ಕಲಿಸಿದೆ.
ನವೆಂಬರ್ 12, 2011 ರಂದು ಇರಾನ್ ದೇಶದ ರಾಜಧಾನಿ ತೆಹ್ರಾನ್ ನಗರದಲ್ಲಿ ದೊಡ್ಡ ಸ್ಪೋಟ ಸಂಭವಿಸಿತ್ತು, ಈ
ಸ್ಪೋಟದಲ್ಲಿ 17 ಮಂದಿ ಮೃತಪಟ್ಟಿದ್ದರು. ಇರಾನ್‌ನ ಅಣು ಬಾಂಬಿನ ಸೂತ್ರಧಾರ ಜನರಲ್ ಹಸಾನ್ ತೆಹ್ರಾನಿ ಭೀಕರವಾಗಿ ಮೃತಪಟ್ಟಿದ್ದ, ಇರಾನ್ ರಹಸ್ಯವಾಗಿ ನಡೆಸುತ್ತಿದ್ದಂತಹ ಅಣುಬಾಂಬ್ ತಯಾರಿಕಾ ಘಟಕದ ಮೇಲೆ ನಡೆಸಿದ್ದ ದಾಳಿಯಾಗಿತ್ತು. ಅಮೆರಿಕದ ನಗರಗಳನ್ನು ಗುರಿಯನ್ನಾಗಿಸಿಕೊಂಡು ದಾಳಿ ನಡೆಸಬಲ್ಲ ರಾಕೆಟ್ ತಯಾ ರಿಕೆಯಲ್ಲಿ ತೊಡಗಿದ್ದ ತೆಹ್ರಾನಿನ ಘಟಕವು ಈ ದಾಳಿಯಿಂದ ಕ್ಷಣಾರ್ಧದಲ್ಲಿ ಭಸ್ಮವಾಯಿತು. ಅತ್ಯಂತ ರಹಸ್ಯವಾಗಿ ನಡೆಸುತ್ತಿದ್ದನಂತಹ ಘಟಕವನ್ನು ಹುಡುಕಿ ಬಂದು ದಾಳಿ ನಡೆಯುವುದರ ಹಿಂದೆ ಗುಪ್ತಚರ ಸಂಸ್ಥೆಯೊಂದು ಇರಲೇಬೇಕೆಂಬ ಇರಾನಿನ ಅನುಮಾನಕ್ಕೆ ಸಿಕ್ಕ ಸಂಸ್ಥೆ ಮೊಸಾದ್.
1980 ರ ದಶಕದಲ್ಲಿ ಇರಾನ್ ದೇಶದ ಮೇಲೆ ಸದ್ದಾಂಹುಸೇನ್ ನಡೆಸುತ್ತಿದ್ದ ದಾಳಿಗಳನ್ನು ತಡೆಯಲು ಇರಾನ್ ಅಣುಬಾಂಬನ್ನು ತಯಾರಿಸಿಕೊಳ್ಳುವ ಕೆಲಸಕ್ಕೆ ಕೈ ಹಾಕಿತ್ತು, ಅದಕ್ಕೆ ಬೇಕಿರುವ ಸಹಾಯ ನೀಡದ ಕಾರಣ ಇಸ್ರೇಲಿನೊಂದಿಗೆ ಅದರ ಸಂಬಂಧ ಹಳಸಿತ್ತು. ಸೋವಿಯತ್ ಒಕ್ಕೂಟದಿಂದ ಬೇರೆಯಾದ ನಂತರ ಇರಾನ್ ತನ್ನ ದೇಶದೊಳಗಿನ ವಿಜ್ಞಾನಿಗಳು ಮತ್ತು ರಷ್ಯಾ ದೇಶದೊಳಗಿನ ವಿeನಿಗಳನ್ನು ಬಳಸಿಕೊಂಡು ಅಣುಬಾಂಬ್ ತಯಾರಿಕೆಯಲ್ಲಿ ತೊಡಗಿತ್ತು.
ಇರಾನ್ ರಹಸ್ಯವಾಗಿ ತಯಾರಿಸುತ್ತಿದ್ದಂತಹ ಅಣುಬಾಂಬ್ ವಿಷಯ ಅಮೆರಿಕಕ್ಕೆ ತಿಳಿಯಿತು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರಾನ್ ದೇಶದ ವಿರುದ್ಧ ಹಲವು ಒತ್ತಡಗಳನ್ನು ಅಮೆರಿಕ ಹಾಕಿತು. ಆದರೆ ರಷ್ಯಾ ಮತ್ತು ಚೀನಾ ದೇಶಗಳು ಇರಾನ್ ದೇಶಕ್ಕೆ ರಹಸ್ಯವಾಗಿ ಸಹಾಯ ಮಾಡುತ್ತಿರುವ ವಿಷಯವನ್ನು ಗುಪ್ತಚರ ಸಂಸ್ಥೆ ಮೊಸಾದ್ ಅಮೆರಿಕದ ಮುಂದೆ ಹೇಳಿತ್ತು. ಚೀನಾ ದೇಶ ಅಮೆರಿಕದ ಒತ್ತಡಕ್ಕೆ ಮಣಿದು ತನ್ನ ಬೆಂಬಲವನ್ನು ನಿಲ್ಲಿಸಿತು, ಆದರೆ ರಷ್ಯಾ ತನ್ನ ಬೆಂಬಲವನ್ನು ಸಂಪೂರ್ಣವಾಗಿ ನಿಲ್ಲಿಸಲಿಲ್ಲ, ಬದಲಾಗಿ ತನ್ನ ಕೆಲಸವನ್ನು ವಿಳಂಬ ಮಾಡಿತು. ಚೀನಾ ಕೂಡ ನಂತರದ ದಿನಗಳಲ್ಲಿ ಇರಾನ್ ದೇಶಕ್ಕೆ ಸಹಾಯ ಮಾಡುತ್ತಿತ್ತು. ಈ ವಿಷಯವನ್ನು ಮೊಸಾದ್ ಅಮೆರಿಕಕ್ಕೆ ಹಲವು ಬಾರಿ ಹೇಳಿದ ನಂತರವೂ ಅವರು ತಲೆ ಕೆಡಿಸಿಕೊಂಡಿರಲಿಲ್ಲ. ಅಷ್ಟು ಹೊತ್ತಿಗಾಗಲೇ
ಇರಾನ್ ತನ್ನ ಅಣುಬಾಂಬ್ ತಯಾರಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸಿಯಾಗಿತ್ತು.
1987ರಲ್ಲಿ ದುಬೈನಲ್ಲಿ ಸೀಕ್ರೆಟ್ ಮೀಟಿಂಗ್ ನಡೆದಿತ್ತು, ಅಲ್ಲಿ ಇರಾನ್, ಪಾಕಿಸ್ತಾನ ಮತ್ತು ಯೂರೋಪಿನ ಎಂಟು ಜನರು ರಹಸ್ಯ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದರು. ಒಪ್ಪಂದದ ನಂತರ ಇರಾನ್ ಪಾಕಿಸ್ತಾನದ ಅಣುಬಾಂಬ್
ಜನಕ ಅಬ್ದುಲ್ ಖಾದರ್ ಖಾನ್ ಎಂಬುವವನ ಬ್ಯಾಂಕ್ ಖಾತೆಗೆ ಬಿಲಿಯನ್ ಗಟ್ಟಲೆ ಹಣವನ್ನು ವರ್ಗಾಯಿಸಿ ಅಣು
ಬಾಂಬ್ ತಯಾರಿಕೆಯಲ್ಲಿ ತಮಗೆ ಸಹಾಯ ಮಾಡಬೇಕೆಂದು ಹೇಳಿತ್ತು. ಈತ ಮಹಾನ್ ಕಳ್ಳ 1970 ರ ದಶಕದಲ್ಲಿ
ಯೂರೋಪಿನ ದೇಶಗಳಲ್ಲಿ ಅಣುಬಾಂಬ್ ತಯಾರಿಕಾ ಸೂತ್ರಗಳನ್ನು ಕಳ್ಳತನ ಮಾಡಿ ಪಾಕಿಸ್ತಾನಕ್ಕೆ ತಂದಿದ್ದ.
ಈತನನ್ನು ’’Merchant of Death’ ಎಂದು ಕರೆಯುತ್ತಾರೆ, ಕದ್ದ ಸೂತ್ರಗಳನ್ನು ಉತ್ತರ ಕೊರಿಯಾ, ಇರಾನ್ ಮತ್ತು ಲಿಬಿಯಾನ್‌ಗಳಿಗೆ ಕೋಟಿಗಟ್ಟಲೆ ಹಣಕ್ಕೆ ಮಾರಿಕೊಂಡಿದ್ದ.
1990 ರ ದಶಕದಲ್ಲಿ ಇರಾನ್ ಅಣುಬಾಂಬ್ ತಯಾರಿಕೆಯಲ್ಲಿ ಬಹಳ ಮುಂದೆ ಹೋಗಿತ್ತು, ಸತತವಾಗಿ 11 ವರ್ಷಗಳ ಕಾಲ ಮರುಭೂಮಿಯಲ್ಲಿನ ಬಂಕರ್‌ಗಳಲ್ಲಿ ಅಣುಬಾಂಬ್ ತಯಾರಿಸುತ್ತಿತ್ತು. ಇದರ ಸಣ್ಣ ಸುಳಿವು ಕೂಡ ಅಮೆರಿ ಕನ್ನರಿಗೆ ಅಥವಾ ಮೊಸಾದ್‌ಗೆ ಸಿಕ್ಕಿರಲಿಲ್ಲ, ಆದರೆ 1998ರ ಜೂನ್ ತಿಂಗಳಲ್ಲಿ ಇರಾನ್‌ನಿಂದ ತಪ್ಪಿಸಿಕೊಂಡು ಬಂದ ಪಾಕಿಸ್ತಾನದ ವಿeನಿಯೊಬ್ಬ ಅಮೆರಿಕದ ಗೂಢಚಾರಿ ಸಂಸ್ಥೆಯ ಮುಂದೆ ಇರಾನ್ ಅಣುಬಾಂಬಿ ನಲ್ಲಿ ಸಾಧಿಸಿರುವ ಮುನ್ನಡೆಯನ್ನು ವಿವರಿಸಿದ, ಇರಾನ್‌ನ ಅಣುಬಾಂಬ್ ತಯಾರಿಕಾ ಪ್ರಗತಿಯನ್ನು ಕೇಳಿ ಅಮೆರಿಕಕ್ಕೆ ಆಘಾತ ವಾಗಿತ್ತು.
2002ರಲ್ಲಿ ಇರಾನ್‌ನ ಉಚ್ಛಾಟಿತ ನಾಯಕನೊಬ್ಬ ಅಲ್ಲಿ ತಯಾರಾಗುತ್ತಿರುವ ಅಣುಬಾಂಬಿನ ವಿಷಯವನ್ನು ಮಾಧ್ಯಮಗಳ ಮುಂದೆ ಹೇಳಿಬಿಟ್ಟ, 2001 ರಲ್ಲಿ ತನ್ನ ಅವಳಿ ಕಟ್ಟಡಗಳ ಮೇಲೆ ಉಂಟಾದ ದಾಳಿಯಿಂದ ತೀವ್ರ ಘಾಸಿಗೊಂಡಿದ್ದ ಅಮೆರಿಕ, ಇರಾನ್ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಡೀ ವಿಶ್ವವೇ 2004 ರಲ್ಲಿ ಇರಾನ್ ವಿರುದ್ಧ ತಿರುಗಿ ಬೀಳುವಂತೆ ಮಾಡಿತ್ತು. ಆದರೆ ಇರಾನ್ 2004 ರ ಹೊತ್ತಿಗೆ ಅಣುಬಾಂಬ್ ತಯಾರಿಕೆಯಲ್ಲಿ ಬಹಳಷ್ಟು ಪ್ರಗತಿ ಸಾಧಿಸಿಯಾಗಿತ್ತು, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅಮೆರಿಕಕ್ಕೆ ನೆನಪಾದದ್ದು ಇಸ್ರೇಲಿನ ಮೊಸಾದ್.
ಇರಾನ್ ವಿರುದ್ಧ ಅಮೆರಿಕ All Out ಸಮರವನ್ನೇ ಸಾರಿತ್ತು, ಮೊಸಾದ್ ಸಂಸ್ಥೆಗೆ ಸಂಪೂರ್ಣ ಸಹಕಾರವನ್ನು ನೀಡಿತ್ತು. ಇರಾನ್ ದೇಶದ ವಿರುದ್ಧ ಮೊಸಾದ್ ತಯಾರಿಸಿದ ರಹಸ್ಯ ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡ ವನೇ ಡೈನಾಮಿಕ್ ಹೀರೋ ಡೇಜನ್, 2005ರಲ್ಲಿ ಅಣುಬಾಂಬಿನಲ್ಲಿ ದೊಡ್ಡ ಸ್ಪೋಟ ಸಂಭವಿಸುತ್ತದೆ, 2006 ರ ನವೆಂಬರ್ ನಲ್ಲಿ ಇರಾನಿನ ಮಿಲಿಟರಿ ವಿಮಾನ ಪತನಗೊಳ್ಳುತ್ತದೆ, ಡಿಸೆಂಬರ್ 2005ರಲ್ಲಿ ಯುದ್ಧ ಸಾಮಗ್ರಿ ಗಳನ್ನು ಹೊತ್ತೊಯ್ಯುತ್ತಿದ್ದ ಇರಾನಿನ ವಿಮಾನವೊಂದು ಕಟ್ಟಡಕ್ಕೆ ನುಗ್ಗಿ ಪತನಗೊಳ್ಳುತ್ತದೆ ಇದರಲ್ಲಿ ಸುಮಾರು 94 ಜನ ಅಣುಬಾಂಬ್ ಗಾರ್ಡ್‌ಗಳು ಮೃತಪಡುತ್ತಾರೆ.
ಏಪ್ರಿಲ್ 2006ರಲ್ಲಿ ಇರಾನ್ ಗುಪ್ತವಾಗಿ ತನ್ನ ದೇಶದ ಪ್ರಮುಖ ನಾಯಕರನ್ನು ಒಂದೆಡೆ ಸೇರಿಸಿ ಭೂಮಿಯೊಳಗೆ ಅಣುಬಾಂಬಿನ ಒಂದು ಭಾಗವನ್ನು ಪರಿಶೀಲಿಸಲು ಮುಂದಾಗುತ್ತದೆ. ಮೊದಲು ಪ್ರಯೋಗ ಚೆನ್ನಾಗಿ ನಡೆಯುತ್ತದೆ, ಆದರೆ ಕೊನೆಯ ಘಟ್ಟದಲ್ಲಿ ಬಟನ್ ಒತ್ತಿದಾಕ್ಷಣ ಅಣುಬಾಂಬಿನ ಭಾಗ ಬ್ಲಾ ಆಗಿ ಸಂಪೂರ್ಣವಾಗಿ ನಾಶವಾಗು ತ್ತದೆ.
ಇದರ ಹಿಂದಿನ ಸತ್ಯ ತಿಳಿಯಲು ಮುಂದಾದ ಇರಾನ್ ದೇಶಕ್ಕೆ ತಿಳಿದ ಅಂಶವೇನೆಂದರೆ, ಅಣುಬಾಂಬಿನ ಆ ಭಾಗ ದಲ್ಲಿ ಹಲವು ದೋಷ ಪೂರಿತ ಉಪಕರಣಗಳಿದ್ದವು. ಈ ಉಪಕರಣಗಳನ್ನು ಯೂರೋಪಿನ ಮಾರಾಟಗಾರ ರಿಂದ ಖರೀದಿ ಮಾಡಲಾಗಿತ್ತು, ಈ ಮಾರಾಟಗಾರರನ್ನು ಡೇಜನ್ ನೇಮಕ ಮಾಡಿದ್ದ. ಇರಾನ್ ಅಣುಬಾಂಬಿಗೆ ಬೇಕಿರುವ ಉಪಕರಣಗಳನ್ನು ಖರೀದಿಸುವ ಸ್ಥಳವನ್ನು ಗುರಿಯನ್ನಾಗಿಸಿಕೊಂಡ ಮೊಸಾದ್ ಏಜೆಂಟ್ ಡೇಜನ್ ತನ್ನ ಮಾರಾಟ ಗಾರರನ್ನು ನೇಮಿಸಿ ಕಳಪೆ ಉಪಕರಣಗಳನ್ನು ಇರಾನಿಗೆ ಮಾರಾಟ ಮಾಡಿಸಿದ್ದ. ಅದೇ ಉಪಕರಣಗಳನ್ನು ಬಳಸಿದ ಇರಾನ್ ತನ್ನ ಅಣುಬಾಂಬ್ ಪರೀಕ್ಷೆಯಲ್ಲಿ ವಿಫಲವಾಗುತ್ತಿತ್ತು, ಮೂರು ದಶಕಗಳ ಇರಾನ್ ದೇಶದ ಕನಸಿಗೆ ಅಂದು ಮೊಸಾದ್ ತಣ್ಣೀರು ಎರಚಿತ್ತು.
ಇದನ್ನೂ ಓದಿ: Gauri Lankesh: ಗೌರಿ ಲಂಕೇಶ್ ಕೊಲೆ ಪ್ರಕರಣ; ಮತ್ತೆ 4 ಆರೋಪಿಗಳಿಗೆ ಜಾಮೀನು