Saturday, 14th December 2024

ಕಾಡಿನ ಪ್ರಮಾಣ ಹೆಚ್ಚಳಗೊಂಡಿದೆಯಂತೆ ?

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ಇತ್ತೀಚೆಗೆ ಬಿಡುಗಡೆಯಾದ ವರದಿಯೊಂದರ ಪ್ರಕಾರ, ನಮ್ಮ ದೇಶದಲ್ಲಿ ಕಳೆದ ಎರಡು ವರ್ಷಗಳ ಅವಽಯಲ್ಲಿ ಕಾಡು ಮತ್ತು ಹಸಿರಿನ ಪ್ರದೇಶವು ಹೆಚ್ಚಳಗೊಂಡಿದೆ! ಈ ವರದಿಯ ಅಂಕಿಅಂಶಗಳು ನಿಜಕ್ಕೂ ಏನನ್ನು ಹೇಳುತ್ತವೆ, ಏನನ್ನು ಮರೆಮಾಚುತ್ತವೆ?

ಇದೇ ಜನವರಿ 13ರಂದು ನಮ್ಮ ದೇಶದ ಕಾಡುಗಳ ವಿಸ್ತೀರ್ಣದ ಕುರಿತಾಗಿ ಸರಕಾರವು ಒಂದು ವರದಿಯನ್ನು ಪ್ರಕಟಿಸಿತು. ಈ ದ್ವೈ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದವರು ನಮ್ಮ ದೇಶದ ಪರಿಸರ ಸಚಿವರು. ‘ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್ 2021’ ಎಂಬ ಹೆಸರಿನ ಈ ವರದಿಯ ಪ್ರಕಾರ, ನಮ್ಮ ದೇಶದಲ್ಲಿರುವ ಕಾಡಿನ ಮತ್ತು ಹಸಿರು ತುಂಬಿದ ಪ್ರದೇಶದ ವಿಸ್ತೀರ್ಣವು ಜಾಸ್ತಿ ಯಾಗಿದೆ!

2019ಕ್ಕೆ ಹೋಲಿಸಿದರೆ, 2021ರಲ್ಲಿ ನಮ್ಮ ದೇಶದ ಕಾಡಿನ ಪ್ರಮಾಣವು 2261 ಚದರ ಕಿ.ಮೀ. ಹೆಚ್ಚಳಗೊಂಡಿದೆ! ದೇಶದಲ್ಲಿ ರುವ ಹಸಿರು ತುಂಬಿದ ಪ್ರದೇಶವು (ಕಾಡು ಮತ್ತು ಮರಗಳು) ಈಗ 8,09,537 ಚದರ ಕಿಮೀ ಆಗಿದ್ದು, ದೇಶದ ಶೇ.24.6 ಭಾಗವು ಕಾಡು ಮತ್ತು ಹಸಿರಿನಿಂದ ತುಂಬಿದೆ. ಜತೆಯಲ್ಲೇ ದೇಶದ 17 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು ವಿಸ್ತೀರ್ಣದ ಶೇ.33ಕ್ಕಿಂತ ಹೆಚ್ಚು ಭಾಗ ಕಾಡಿನಿಂದ ತುಂಬಿದೆ!

ಇದರಲ್ಲೇನು ವಿಶೇಷ ಎನ್ನುವಿರಾ? ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಕಾಡನ್ನು ಕಡಿಯುತ್ತಿದ್ದರೂ, ಕಾಡಿನ ಪ್ರಮಾಣ ಹೇಗೆ ಜಾಸ್ತಿಯಾಗಿರಬಹುದು ಎಂಬ ವಿಸ್ಮಯ ಒಂದೆಡೆ. ಇನ್ನೊಂದೆಡೆ, ಈ ವರದಿಯಲ್ಲಿ ಇಂತಹ ಸಕಾರಾತ್ಮಕ ಅಂಕಿ ಅಂಶಗಳನ್ನು ನೀಡಿ, ನಮ್ಮ ದೇಶದ ಕಾಡಿನ ಪ್ರಮಾಣವು ಹೆಚ್ಚಳಗೊಂಡಿದೆ ಎಂದು ಬಿಂಬಿಸುವುದು, ಜನರಿಗೆ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಿಗೆ ಒಪ್ಪಿಸುವುದು, ಕೇವಲ ತಪ್ಪು ಮಾತ್ರವಲ್ಲ, ದು ರೀತಿಯಲ್ಲಿ ‘ಭಯಾನಕ’! ಇಲ್ಲಿ ಭಯಾನಕ ಎಂಬ ಪದ ಬಳಸಿದ್ದಕ್ಕೆ ಕ್ಷಮೆ ಇರಲಿ – ಆದರೆ, ದೇಶದ ಸುಮಾರು 24.6% ಭಾಗವು ಕಾಡಿನಿಂದ ತುಂಬಿದೆ ಎಂಬ ಅಭಿಪ್ರಾಯವನ್ನು ರೂಪಿಸುವುದು, ಅದಕ್ಕೆ ಇಂತಹ ಪ್ರಮುಖ ವರದಿಯನ್ನು ಸಿದ್ಧಪಡಿಸಿ ಪುರಾವೆ ನೀಡಲು ಪ್ರಯತ್ನಿಸುವುದು, ಇಷ್ಟೆಲ್ಲಾ ಕಾಡನ್ನು ನಾವು ನಾಶಪಡಿಸಿದ್ದರೂ, ಇಂದಿಗೂ ಕಾಡಿನ ಪ್ರಮಾಣ ಹೆಚ್ಚಳಗೊಳ್ಳುತ್ತಿದೆ ಎಂದು ಬಿಂಬಿಸುವುದು, ಇದರ ಮೂಲಕ ಜನಸಾಮಾನ್ಯರನ್ನು ತಪ್ಪುದಾರಿಗೆಳೆಯುವುದು ನಿಜಕ್ಕೂ ತಪ್ಪು.

ಅದಕ್ಕಿಂತ ಹೆಚ್ಚಾಗಿ, ಈ ರೀತಿಯ ಅಭಿಪ್ರಾಯ ರೂಪಿಸಿ, ನಮ್ಮ ದೇಶದ ಕಾಡುಗಳು ವಿಸ್ತೀರ್ಣದಲ್ಲಿ ಹೆಚ್ಚಳಗೊಳ್ಳುತ್ತಿವೆ ಮತ್ತು ಸುರಕ್ಷಿತ ವಾಗಿವೆ ಎಂದು ಹೇಳುವುದರಿಂದ ಇನ್ನೊಂದು ‘ಭಯಾನಕ’ ಕೆಲಸಕ್ಕೆ ಪರೋಕ್ಷವಾಗಿ ರಹದಾರಿಯನ್ನು ರೂಪಿಸಿದಂತಾಗುತ್ತದೆ. ಎಂತಿ ದ್ದರೂ ಕಾಡಿನ ಪ್ರಮಾಣ ಹೆಚ್ಚಳಗೊಳ್ಳುತ್ತಿದೆ, ಆದ್ದರಿಂದ ಹೊಸ ಹೊಸ ಗಣಿಗಾರಿಕೆಗೆ, ಕಾರ್ಖಾನೆಗೆ, ಯೋಜನೆಗೆ, ಅಣೆಕಟ್ಟು ನಿರ್ಮಾಣಕ್ಕೆ ಸ್ವಲ್ಪ ಕಾಡನ್ನು ನಾಶ ಮಾಡಿದರೆ ತಪ್ಪಿಲ್ಲ ಎಂಬ ಜನಾಭಿಪ್ರಾಯ ರೂಪುಗೊಳ್ಳಲು ಸಹಾಯ ಮಾಡಿದಂತಾಗುತ್ತದೆ!

ನಾನಾ ಚಟುವಟಿಕೆಗಳಿಗೆ ನಿರಂತರವಾಗಿ ನಮ್ಮ ದೇಶದ ಕಾಡನ್ನು ಕಡಿಯುತ್ತಲೇ ಬಂದಿದ್ದೇವೆ. ದೇಶದ ಅಭಿವೃದ್ಧಿಗೆ ಕಾಡಿನ ನಾಶ ದಂತಹ ‘ತ್ಯಾಗ’ ಅನಿವಾರ್ಯ ಎಂಬ ಮನಸ್ಥಿತಿಯನ್ನು ಜನಸಾಮಾನ್ಯರಲ್ಲಿ ಮೂಡಿಸುವಲ್ಲಿ ಯಶಸ್ವಿಯೂ ಆಗಿದ್ದೇವೆ. ಅಣೆಕಟ್ಟು ನಿರ್ಮಾಣಕ್ಕೆ ಭೂಮಿಯ ಶ್ವಾಸಕೋಶದಂತಿರುವ ಪಶ್ಚಿಮಘಟ್ಟಗಳ ದಟ್ಟ ಕಾಡುಗಳನ್ನೇ ಮುಳುಗಿಸಿದ್ದೇವೆ. ದಟ್ಟ ಅಭಯಾರಣ್ಯದ ಮಧ್ಯೆ ರಸ್ತೆಯ ಅಗಲೀಕರಣಕ್ಕೆ ಸಾಕಷ್ಟು ಕಾಡನ್ನು ನಾಶಪಡಿಸಿದ್ದೇವೆ. ಕುದುರೆಮುಖದಂತಹ ಪ್ರದೇಶದಲ್ಲಿ ಗಣಿಗಾರಿಕೆಗಾಗಿ ನಾಶಗೊಂಡ ಕಾಡಿನ ವ್ಯಾಪ್ತಿಗೆ ಲೆಕ್ಕವೇ ಇಲ್ಲ, ಜತೆಗೆ, ಕುದುರೆಮುಖ ಅದಿರು ಯೋಜನೆ ಸ್ಥಗಿತಗೊಂಡು ಮೂವತ್ತು ವರ್ಷಗಳಾದರೂ ಅಲ್ಲಿ ಕಾಡು ಪುನಃ ಮೊದಲಿನ ಸ್ಥಿತಿಗೆ ಬರಲು ಇಂದಿಗೂ ಸಾಧ್ಯವಾಗಿಲ್ಲ!

ರಬ್ಬರ್ ತೋಟಕ್ಕಾಗಿ ಈಚಿನ ವರ್ಷಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಸಾಕಷ್ಟು ಕಾಡಪ್ರದೇಶ ಕಣ್ಮರೆಯಾಗಿದೆ. ಕಾಫಿತೋಟ, ಚಹ ತೋಟ, ನೀಲಗಿರಿ ತೋಪು, ಅಕೇಶಿಯಾ ನೆಡುತೋಪುಗಳಿಗಾಗಿ ನಾಶಗೊಂಡ ಕಾಡಿನ ಪ್ರಮಾಣ ಅಪಾರ. ಆದರೂ, 2019ಕ್ಕೆ ಹೋಲಿಸಿದರೆ, 2021ರಲ್ಲಿ ನಮ್ಮ ದೇಶದಲ್ಲಿ ಕಾಡಿನ ಪ್ರಮಾಣ ಹೆಚ್ಚಳಗೊಂಡಿದೆ ಎಂದು ‘ಇಂಡಿಯಾ ಸ್ಟೇಟ್ ಫಾರೆಸ್ಟ್ ರಿಪೋರ್ಟ್ 2021’ ಹೇಳಿದರೆ ಜನಸಾಮಾನ್ಯರು ನಂಬಬಹುದೆ? ಈ ವರದಿಯು ಸಾಕಷ್ಟು ವಿವರವಾಗಿದ್ದು, ಅದು ಬಯಲು ಮಾಡಿರುವ ಕೆಲವು ಅಂಕಿಅಂಶಗಳು ಇನ್ನಷ್ಟು ಗಾಬರಿ ಹುಟ್ಟಿಸುತ್ತವೆ.

ನಮ್ಮ ದೇಶದ ಮಹಾನಗರಗಳಾದ ದೆಹಲಿ, ಮುಂಬಯಿ, ಹೈದರಾಬಾದ್, ಬೆಂಗಳೂರು, ಅಹಮದಾಬಾದ್, ಚೆನ್ನೈ ಮತ್ತು ಕೊಲ್ಕೊತ್ತಾ ಗಳ ಒಟ್ಟೂ ಪ್ರದೇಶವನ್ನು ಲೆಕ್ಕಹಾಕಿದರೆ, ಈ ನಗರಗಳಲ್ಲಿ ಶೇ.೧೦.೨೧ ಕಾಡು ಮತ್ತು ಹಸಿರು ಪ್ರದೇಶವಿದೆ! ಅಲ್ಲಿ ಒಟ್ಟು 509.72 ಚದರ ಕಿ.ಮೀ. ಕಾಡು ಇದೆಯಂತೆ! ಅಷ್ಟೇ ಅಲ್ಲ, ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಈ ಮಹಾನಗರಗಳಲ್ಲಿ 98 ಚದರ ಕಿ.ಮೀ. ಕಾಡು ಹೆಚ್ಚಳಗೊಂಡಿದೆ!

ಇಂತಹ ಹಲವು ವಿಚಿತ್ರ, ನಂಬಲು ಕಷ್ಟ ಎನಿಸುವ ಅಂಕಿಅಂಶಗಳು ಆ ವರದಿಯಲ್ಲಿವೆ. ಒಬ್ಬ ಜನಸಾಮಾನ್ಯನು ಈ ಅಂಕಿಅಂಶಗಳನ್ನು ನೋಡುತ್ತಾ ಹೋದರೆ, ನಮ್ಮ ದೇಶ ಕಾಡಿನಿಂದ ತುಂಬಿ ಹೋಗಿದೆಯೇನೋ ಎಂದೂ ಭ್ರಮಿಸಬಹುದು! ಜತೆಗೆ, ಇಷ್ಟು ವರ್ಷ ಕಾಡು ಕಡಿದರೂ, ನಮ್ಮ ದೇಶದಲ್ಲಿ ಕಾಡಿನ ಪ್ರಮಾಣ ಕ್ರಮೇಣ ಹೆಚ್ಚಳಗೊಳ್ಳುತ್ತಾ ಹೋಗಿದೆ ಎಂದೂ ತಿಳಿದುಕೊಳ್ಳಬಹುದು, ಕಳೆದ ಕೆಲವು ವರ್ಷಗಳಲ್ಲಿ ಕಾಡಿನ ವ್ಯಾಪ್ತಿ ಹೆಚ್ಚಳಗೊಂಡಿದೆ ಎಂದೇ ಕಲ್ಪಿಸಿಕೊಳ್ಳಬಹುದು.

ಆದರೆ, ಕಳೆದ ಒಂದೆರಡು ದಶಕಗಳಲ್ಲಿ ನಮ್ಮ ದೇಶದಲ್ಲಿ ಅತಿ ಹೆಚ್ಚಿನ ಕಾಡು ಪ್ರದೇಶ ನಷ್ಟಗೊಂಡಿದೆ ಎಂಬುದು ಕಟು ವಾಸ್ತವ. ಸಹ್ಯಾದ್ರಿಯ ಕಾಡುಗಳು, ಹಿಮಾಲಯದ ಸರಹದ್ದಿನ ಕಾಡುಗಳು, ಪೂರ್ವ ಘಟ್ಟ ಪ್ರದೇಶದ ಕಾಡುಗಳು, ಅರಾವಳಿಯ ಕಾಡು, ಮಧ್ಯಪ್ರದೇಶ, ಚತ್ತೀಸ್‌ಗಟ್‌ನ ಕಾಡು, ಅಂಡಮಾನ್ ಕಾಡು ಇವೆಲ್ಲವೂ ಕಳೆದ ಕೆಲವು ದಶಕಗಳಲ್ಲಿ ಅನುಭವಿಸಿದ ಹಾನಿ ಅಷ್ಟಿಷ್ಟಲ್ಲ.
ಹಾಗಿದ್ದರೆ, ಸರಕಾರವೇ ಪ್ರಸ್ತುತಪಡಿಸಿದ ಈ ವರದಿಗೆ, ನಮ್ಮ ದೇಶದ ಕಾಡಿನ ಪ್ರಮಾಣ ಹೆಚ್ಚಳಗೊಳ್ಳುತ್ತಿದೆ ಎಂದು ನಿರೂಪಿಸಲು ಹೇಗೆ ಸಾಧ್ಯವಾಯಿತು? ಈ ವರದಿಯ ಅಂಕಿ ಅಂಶಗಳನ್ನು ಜನಸಾಮಾನ್ಯರು ನಂಬಬಹುದೆ? ನಮ್ಮ ದೇಶದ ಕಾಡುಗಳ ವಿವರ ನೀಡುವ, ಸರಕಾರದ ಅಂಗಸಂಸ್ಥೆಗಳೇ ಸಿದ್ಧಪಡಿಸಿದ ಈ ವರದಿಯಲ್ಲಿ ಬಳಸಿದ ಪದಗಳು, ಅನುಸರಿಸಿದ ತಂತ್ರಜ್ಞಾನ ಎಲ್ಲವೂ, ತುಂಬಾ ಸೂಕ್ಷ್ಮ ಮತ್ತು ನಾಜೂಕು.

‘ದ್ವೈವಾರ್ಷಿಕ ಕಾಡಿನ ವ್ಯಾಪ್ತಿಯ ವರದಿ’ ಎಂಬ ಹೆಸರನ್ನೂ ಹೊಂದಿರುವ ಈ ವರದಿಯಲ್ಲಿ ‘ಕಾಡು’ ಎಂದರೆ ದಟ್ಟ ಕಾಡಲ್ಲ – ಬದಲಿಗೆ
‘-ರೆಸ್ಟ್ ಕವರ್ ಮತ್ತು ಟ್ರೀ ಕವರ್’! ಅಂದರೆ, ಕನ್ನಡದಲ್ಲಿ ಹೇಳುವುದಾದರೆ ಕಾಡಿನ ವ್ಯಾಪ್ತಿ ಮತ್ತು ಮರಗಳ ವ್ಯಾಪ್ತಿ. ಕಾಡಿನ ಜತೆಯಲ್ಲೇ, ಅಲ್ಲಲ್ಲಿ ಬೆಳೆದ ಮರಗಳು, ನೆಡುತೋಪು, ಪೊದೆಗಳು, ಹಸಿರನ್ನು ತೋರುವ ಸಸ್ಯಗಳನ್ನು ಸಹ ಕಾಡಿನ ವ್ಯಾಪ್ತಿಗೆ ಸೇರಿಸಲಾಗಿದೆ. ಆದ್ದರಿಂದಲೇ, ನಗರಗಳಲ್ಲಿ ಸಹ ‘ಕಾಡಿನ ವಿಸ್ತೀರ್ಣ’ ಹೆಚ್ಚಳಗೊಂಡಿದೆ ಎಂದು ಹೇಳಲು ಈ ವರದಿಗೆ ಸಾಧ್ಯವಾಗಿದೆ!

ಇಲ್ಲಿ ಅನುಸರಿಸಿದ ತಂತ್ರಜ್ಞಾನ ‘ನಾಜೂಕು’ ಎಂದೆನಲ್ಲ, ಅದು ಹೇಗೆಂದರೆ, ರಿಮೋಟ್ ಸೆನ್ಸಿಂಗ್ ಸೆಟಲೈಟ್ ಡಾಟಾವನ್ನು ಸಂಗ್ರಹಿಸಿ, ಉಪಗ್ರಹದ ರಾಡಾರ್‌ನಲ್ಲಿ ‘ಹಸಿರು’ ಎಂದು ತೋರಿಸುವ ಎಲ್ಲಾ ಪ್ರದೇಶಗಳನ್ನೂ ‘ಕಾಡು ಮತ್ತು ಮರಗಳ ವ್ಯಾಪ್ತಿ’ಗೆ ಇಲ್ಲಿ ಸೇರಿಸ ಲಾಗಿದೆ! ಈ ವರದಿ ತಯಾರಿಸಿದವರು, ಟಿಪ್ಪಣಿಯ ರೂಪದಲ್ಲಿ ಸತ್ಯವನ್ನೇ ಹೇಳಿದ್ದಾರೆ. ‘ಖಾಸಗಿ ಪ್ಲಾಂಟೇಶನ್‌ಗಳು, ರಸ್ತೆ, ರೈಲು ಮಾರ್ಗ ಮತ್ತು ಕಾಲುವೆ ಬದಿಯಲ್ಲಿರುವ ಪ್ಲಾಂಟೇಶನ್ ಗಳು, ರಬ್ಬರು, ಟೀ, ಕಾಫಿ ತೋಟಗಳ ಮರಗಳನ್ನು ‘ಟ್ರೀ ಕವರ್’ ಲೆಕ್ಕ ಹಾಕಲು ಸೇರಿಸಿಕೊಳ್ಳಲಾಗಿದೆ’ ಎಂದು ಆ ಟಿಪ್ಪಣಿ ಸ್ಪಷ್ಟಪಡಿಸಿದೆ.

ಉಪಗ್ರಹವು ಹಸಿರು ಎಂದು ಗುರುತಿಸುವ ಜಾಗಗಳನ್ನು ಲೆಕ್ಕಹಾಕಿ, ನೆಲದಲ್ಲಿ ಹಸಿರು ಕಾಣಿಸುವ ಪ್ರದೇಶಗಳೆಲ್ಲವನ್ನೂ ‘ಹಸಿರು ವ್ಯಾಪ್ತಿ’ ಎಂಬ ವರ್ಗಕ್ಕೆ ಸೇರಿಸಿ, ಅದನ್ನು ಒಟ್ಟು ಕಾಡುಪ್ರದೇಶವಾಗಿ ಗುರುತಿಸಿದೆ. ಕಾಫಿ, ಚಹ ತೋಟಗಳಲ್ಲಿ, ಅಕೇಶಿಯಾ ಕಾಡುಗಳಲ್ಲಿ ಇರುವ ಸಸ್ಯಗಳು ಹಸಿರು ನಿಜ, ಆದರೆ ಅದನ್ನು ‘ಕಾಡಿನ ವ್ಯಾಪ್ತಿ’ ಎಂದು ಗುರುತಿಸಿದರೆ, ವಾಸ್ತವವನ್ನು ಮರೆಮಾಚಿದಂತಾಗುವುದಿಲ್ಲವೆ? ಈ ಪ್ರಶ್ನೆಗೆ ಆ ವರದಿಯಲ್ಲಿ ಉತ್ತರವಿಲ್ಲ – ಅವೆಲ್ಲವನ್ನೂ ಹಸಿರಿನ ವ್ಯಾಪ್ತಿಗೆ ಸೇರಿಸಿದ್ದೇವೆ ಎಂದು ಸ್ಪಷ್ಟಪಡಿಸಿಯಾಗಿದೆಯಲ್ಲ! ಇಷ್ಟು ಮಾತ್ರವಲ್ಲ, ವಿಶಾಲ ಪ್ರದೇಶದಲ್ಲಿ ದಟ್ಟವಾಗಿ ಬೆಳೆದ ಬಳ್ಳಾರಿ ಜಾಲಿ, ಮರುಭೂಮಿಯ ಅಂಚಿನಲ್ಲೂ ದಟ್ಟವಾಗಿ ಬೆಳೆಯಬಲ್ಲ ಲಂಟಾನಾ ಪೊದೆ, ಭೂಗರ್ಭದ ನೀರನ್ನು ಬಹು ಬೇಗನೆ ಹೀರುವ ನೀಲಗಿರಿ ತೋಪು, ಕಳೆಯ ರೀತಿ ಬಹುಬೇಗನೆ ಬೆಳೆಯುವ ಮತ್ತು ಹರಡುವ ಅಕೇಶಿಯಾ – ಇಂತಹ ಎಲ್ಲಾ ಗಿಡಮರಗಳನ್ನೂ ‘ಹಸಿರು ತುಂಬಿದ ಪ್ರದೇಶ’ ಎಂದು ರಿಮೋಟ್ ಸೆನ್ಸಿಂಗ್ ಸೆಟಲೈಟ್ ಮಾಹಿತಿಯನ್ನು ವರದಿ ಗುರುತಿಸುತ್ತದೆ.

ನಗರಗಳಲ್ಲಿ ಪಾರ್ಕ್‌ನ ಮರಗಿಡಗಳು, ಬೀದಿಬದಿಯಲ್ಲಿ ಬೆಳೆಯುವ ಮರಗಳನ್ನು ಸಹ ‘ಹಸಿರು ಪ್ರದೇಶ’ ಎಂದು ಗುರುತಿಸುವ ಉಪಗ್ರಹ
ಆಧಾರಿತ ಈ ಸಮೀಕ್ಷೆಯು, ಅವೆಲ್ಲವನ್ನೂ ಒಟ್ಟು ಕಾಡು ಪ್ರದೇಶದ ವ್ಯಾಪ್ತಿಗೆ ಸೇರಿಸಿಬಿಡುತ್ತದೆ. ದಟ್ಟ ಕಾಡುಗಳು ನಮ್ಮ ಭೂಮಿಯ ಶ್ವಾಸಕೋಶಗಳು ಎಂಬುದರಲ್ಲಿ ಅನುಮಾನವಿಲ್ಲ. ಅಮೆಜಾನ್ ಕಾಡು ಜಗತ್ತಿಗೇ ಶ್ವಾಸಕೋಶವಾಗಿದ್ದರೆ, ಪಶ್ಚಿಮಘಟ್ಟಗಳು ನಮ್ಮ ದೇಶದ ಶ್ವಾಸಕೋಶಗಳು. ಪಶ್ಚಿಮ ಘಟ್ಟವು ಶುದ್ಧ ಗಾಳಿ ನೀಡುವುದರ ಜತೆಯಲ್ಲೇ, ಇಡೀ ದಕ್ಷಿಣ ಭಾರತದಲ್ಲಿ ಬೆಳೆ ಬೆಳೆಯಲು ಅಗತ್ಯವಿರುವ ನೀರನ್ನು ಕೊಡುತ್ತದೆ.

ಪಶ್ಚಿಮ ಘಟ್ಟಗಳಲ್ಲಿ ಜನಿಸುವ ನದಿಗಳೇ ಆಂಧ್ರ, ತಮಿಳುನಾಡು, ಕರ್ನಾಟಕ ಮೊದಲಾದ ಪ್ರದೇಶಗಳಲ್ಲಿ ಭತ್ತ ಬೆಳೆಯಲು ನೀರಾವರಿ ಯನ್ನು ಕಲ್ಪಿಸಿವೆ. ಪಶ್ಚಿಮಘಟ್ಟಗಳ ನಿರಂತರ ನಾಶವು ಕ್ರಮೇಣ ನಮ್ಮ ದೇಶದಲ್ಲಿ ಮರುಭೂಮಿಯನ್ನು ಸೃಷ್ಟಿಸುತ್ತಿವೆ. ದಕ್ಷಿಣ ಭಾರತ ದಲ್ಲಿ ಬಹಳ ವೇಗವಾಗಿ ಮರುಭೂಮಿಯೊಂದು ಸೃಷ್ಟಿಯಾಗುತ್ತಿದೆ ಎಂಬ ಬೇರೊಂದೇ, ಬೆಚ್ಚಿಬೀಳಿಸುವ ಸಮೀಕ್ಷೆ ಇದೆ! ಸಾಕಷ್ಟು ಅಧ್ಯಯನ, ಲೆಕ್ಕಾಚಾರಗಳ ಮೂಲಕ ತಯಾರಿಸಿದ ಈ ಸಮೀಕ್ಷೆಯು, ಗಣಿಗಾರಿಕೆ ಮತ್ತು ಕಾಡಿನ ನಾಶದಿಂದಾಗಿ, ದಕ್ಷಿಣ ಭಾರತದಲ್ಲಿ ಒಂದು ಮರುಭೂಮಿಯು ಸೃಷ್ಟಿಗೊಳ್ಳುತ್ತಲಿದ್ದು, ಇನ್ನು ಕೆಲವು ದಶಕಗಳಲ್ಲಿ ಸ್ಪಷ್ಟ ರೂಪವನ್ನು ಪಡೆಯುತ್ತದೆ ಎಂದು ಹೇಳಿದೆ.

ಅತ್ತ ಈಶಾನ್ಯ ಭಾರತದಲ್ಲಿ ಇನ್ನೊಂದೇ ರೀತಿಯ ದುರಂತ ನಿರಂತರವಾಗಿ ನಡೆಯುತ್ತಲೇ ಇದೆ. ಅಸ್ಸಾಂ, ಅರುಣಾಚಲಪ್ರದೇಶ,
ಮಣಿಪುರ, ನಾಗಾಲ್ಯಾಂಡ್, ಮೇಘಾಲಯ, ತ್ರಿಪುರ, ಸಿಕ್ಕಿಂ ಪ್ರದೇಶದ, ಜೈವಿಕವಾಗಿ ಅತಿ ಸೂಕ್ಷ್ಮ ವಲಯವೆಂದು ಗುರುತಿಸಲ್ಪಟ್ಟಿರುವ ಪ್ರದೇಶದಲ್ಲಿ ಕಳೆದ ಒಂದು ದಶಕದಲ್ಲಿ ಅಪರೂಪದ ಕಾಡು ನಾಶವಾಗಿರುವುದು ದಾಖಲಾಗಿದೆ. 2019ರಲ್ಲಿ ಸರಕಾರ ಪ್ರಸ್ತುತಪ ಡಿಸಿರುವ ಇಂತಹದೇ ದ್ವೈವಾರ್ಷಿಕ ವರದಿಯು, ಈಶಾನ್ಯ ಭಾರತದ ಈ ರಾಜ್ಯಗಳಲ್ಲಿ 3199 ಚದರ ಕಿ.ಮೀ.ಅಮೂಲ್ಯ ಕಾಡು ನಾಶಗೊಂಡಿದೆ (2009-2019 ಅವಧಿಯಲ್ಲಿ) ಎಂದು ಹೇಳಿದೆ. ಜತೆಗೆ, ಇಂತಹ ಹಲವು ಸಮೀಕ್ಷೆಗಳು (ಉದಾ: ನದಿ ಜೋಡಣೆ) ನಮ್ಮ ದೇಶದಲ್ಲಿ ಕಾಡಿನ ನಾಶವನ್ನು ಸ್ಪಷ್ಟವಾಗಿ ಗುರುತಿಸಿವೆ.

ಆದರೆ, ಈ ವರ್ಷದ ಈ ದ್ವೈವಾರ್ಷಿಕ ವರದಿಯು ಮಾತ್ರ, ‘ಕಾಡಿನ ಮತ್ತು ಹಸಿರಿನ ವ್ಯಾಪ್ತಿ’ಯು ನಮ್ಮ ದೇಶದಲ್ಲಿ ಹೆಚ್ಚಳಗೊಂಡಿದೆ
ಎಂದು ಹೇಳುತ್ತಿದೆ. ಸರಕಾರವೇ ಪ್ರಚುರಪಡಿಸುವ ಇಂತಹ ವರದಿಗಳ ದೂರಗಾಮಿ ಪರಿಣಾಮಗಳೇನು? ತಪ್ಪು ದಾರಿಗೆಳೆಯುವ ಅಂಕಿಅಂಶಗಳನ್ನು ಮತ್ತು ವಿಧಾನಗಳನ್ನು ಬಳಸಿ, ಒಟ್ಟಾರೆ ಕಾಡು ಚ್ಚಳಗೊಂಡಿದೆ ಎಂದು ಜನರನ್ನು, ಜನಪ್ರತಿನಿಧಿಗಳನ್ನು, ಕೆಲವು ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಒಪ್ಪಿಸಿದರೆ, ಮುಂದಿನ ದಿನಗಳಲ್ಲಿ ಕಾಡನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡಲು, ಪರಭಾರೆ
ಮಾಡಲು ಸುಲಭವಾಗುತ್ತದೆ.

ಕಾಡು ಹೆಚ್ಚಳಗೊಳ್ಳುತ್ತಿದೆ ಎಂಬ ಭ್ರಮೆಯಲ್ಲಿರುವ ಜನಸಾಮಾನ್ಯರು, ಭವಿಷ್ಯದಲ್ಲಿ ಕಾಡಿನ ನಾಶಕ್ಕೆ ಹೆಚ್ಚಿನ ಪ್ರತಿರೋಧ ಒಡ್ಡುವುದಿಲ್ಲ. ಈ ಸೂಕ್ಷ್ಮ ಪ್ರದೇಶಗಳಲ್ಲಿ ನಡೆಯಬಹುದಾದ ಬೃಹತ್ ಕಾಮಗಾರಿಗಳಿಗೆ ಸಂಪನ್ಮೂಲ ಒದಗಿಸುವ ಸಂಸ್ಥೆಗಳು ಸಹ ಹೆಚ್ಚಿನ ಪ್ರಶ್ನೆ ಗಳನ್ನು ಕೇಳುವುದಿಲ್ಲ. ಇದರಿಂದ ಸ್ಥಾಪಿತ ಹಿತಾಸಕ್ತಿಗಳು ಕಾಡು ಪ್ರದೇಶವನ್ನು ವಿವಿಧ ‘ಕಾಮಗಾರಿ’ಗೆ ಉಪಯೋಗಿಸುವುದು ಸುಲಭ ವಾಗುತ್ತದೆ, ಈಗ ಉಳಿದುಕೊಂಡಿರುವ ಅಮೂಲ್ಯ ಕಾಡು ನಾಶಗೊಳ್ಳುವುದು ಸಹ ಸುಲಭ ಎನಿಸುತ್ತದೆ.

ಮುಂದಿನ ಪೀಳಿಗೆಯು ನಮ್ಮ ದೇಶದಲ್ಲಿ ದಟ್ಟವಾದ ಕಾಡು ಇತ್ತು ಎಂದು ಚಿತ್ರದಲ್ಲಿ ನೋಡುವ ಪ್ರಮೇಯ ಬಂದರೆ, ಅದಕ್ಕೆ ಪಟ್ಟಿ
ಮಾಡಲಾಗುವ ಕಾರಣಗಳಲ್ಲಿ ಮೇಲೆ ಉದಹರಿಸಿದ ವರದಿಯನ್ನೂ ಸೇರಿಸಬೇಕಾಗಬಹುದು!