ಪ್ರಾಣೇಶ್ ಪ್ರಪಂಚ
ಗಂಗಾವತಿ ಪ್ರಾಣೇಶ್
ಎಂಥ ವಾಕ್ಯವಿದು. ಸರ್ವ ಸಮಸ್ಯೆಗಳ ದಿವ್ಯ ಔಷಧವಿದು. ಇದನ್ನು ಬರೆದು, ಹೇಳಿದ ದಾಸರು ಶ್ರೀಪಾದರಾಜರು ಅವರು ಖಂಡಿತ ವಾಗಿಯೂ ಉತ್ತಮ ಮಾನಸಿಕ ವೈದ್ಯರೇ ನಿಜ.
ಕೌನ್ಸಲಿಂಗ್ ಎಕ್ಸ್‌ಪರ್ಟ್ ಅವರು ಮಹಾನುಭಾವರು. ಹಾಗೆಯೇ ಬಂದದ್ದೆಲ್ಲ ಬರಲಿ, ಗೋವಿಂದನ ದಯೆ ಇರಲಿ, ಪುರಂದರ ದಾಸರು ಕೂಡ ಭವ ವೈದ್ಯರೇ, ಶಾಸಗಳನ್ನು, ಪುರಾಣಗಳನ್ನು, ತರ್ಕ ವ್ಯಾಕರಣ, ಮಿಮಾಂಸೆ ಯಾವುದನ್ನೂ ಓದದ ಎಷ್ಟೋ ಜನ ಪಾಮರರು ಈ ಎರಡು ವಾಕ್ಯಗಳನ್ನು ಓದಿಯೇ, ಇದನ್ನು ನಂಬಿಯೇ ಕೃತಾರ್ಥರಾಗಿ ಸುಖಜೀವನ ನಡೆಸಿ ಮಲಗಿದಲ್ಲಿಯೇ, ನಿದ್ದೆಯಲ್ಲಿಯೇ ಕನಸ್ಸಿನಲ್ಲಿ ಹೋದಂತೆಯೇ ಹೋಗಿ ಸ್ವರ್ಗ, ವೈಕುಂಠ, ಕೈಲಾಸ ಎಂಬ ನಾವು ನಾವೇ ಮಾಡಿಕೊಂಡ ಸ್ಥಳಗಳಿಗೆ ಸುಖವಾಗಿ ಸೇರಿದ್ದಾರೆ.
ಇವನ್ನು ನಂಬದ ಅಪ್ರಬುದ್ಧರು, ಪ್ರಸಿದ್ಧರು, ತರ್ಕ, ಕುತರ್ಕ, ಪರಹಿಂಸೆಗಳಲ್ಲಿ ಮುಳುಗಿ, ಆಸ್ಪತ್ರೆಯ ಮುಂದಿನ ಸರತಿ ಸಾಲಿನಲ್ಲಿ ಇಸಿಜಿ, ಸ್ಕ್ಯಾನಿಂಗ್, ಬ್ಲಡ್ ಶುಗರ್, ಸ್ಟಂಟ್ ಇತ್ಯಾದಿ ತಪಾಸಣೆಗೆ ವೈದ್ಯರು ಬರೆದುಕೊಟ್ಟ ರೋಗಗಳ ಇತಿಹಾಸದ -ಲ್ ಹಿಡಿದು ಕಾದುನಿಂತಿದ್ದಾರೆ. ಇವರಿಗೆ ಹಿಂದಿನ ಜನ್ಮದ ಇತಿಹಾಸವೂ ಇಲ್ಲ, ಬರಲಿರುವ ಭವಿಷ್ಯದ ಕಲ್ಪನೆಯೂ ಇಲ್ಲ. ಇವರ ಇತಿಹಾಸ ಎಂದರೆ ಕೈಯ್ಯಲ್ಲಿರುವ ಡಾಕ್ಟರ್‌ಗಳು ಕೊಟ್ಟ ಪೇಶೆಂಟ್ಸ್ ಹಿಸ್ಟರಿ ಫುಲ್ ಒಂದೆ. ಅದು ಬದುಕಲು ಬಿಡುವುದಿಲ್ಲ, ಸಾಯಲೂ ಆಸ್ಪದ ಕೊಡುವುದಿಲ್ಲ.
ಯಾವುದಕ್ಕೂ ಆಸ್ಪದ ಕೊಡದ ಸ್ಥಳವೆಂದೇ ಅದಕ್ಕೆ ಆಸ್ಪತ್ರೆ ಎಂದು ಕರೆಯುತ್ತಾರೋ ಏನೊ? ಜೀವನದಲ್ಲಿ ನಡೆಯುವ ಪ್ರತಿಕ್ಷಣದ ಆಕಸ್ಮಿಕ ಘಟನೆಗಳು ನಮಗೆ ಅವು ಅನಿರೀಕ್ಷಿತವಾದರೂ ಭಗವಂತನ ಇತಿಹಾಸದ ಪುಟಗಳಲ್ಲಿ ಅವು ಪೂರ್ವನಿಯೋ ಜಿತ, ನಿನ್ನನ್ನು ಆ ಘಟನೆ, ಆ ಸಂಗತಿ, ಆ ವ್ಯಕ್ತಿ, ಅಲ್ಲಿನ ಪ್ರತಿಕ್ರಿಯೆ ಸ್ಮಿತಗೊಳಿಸಿದರೂ ಅದು ನಿನಗೆ ಮಾತ್ರ ಅನಿರೀಕ್ಷಿತ. ಆದರೆ ಅದು ಎಂದೋ ಸೆಟ್ ಹಾಕಿ ಶೂಟಿಂಗ್ ಮಾಡಿದ ಚಿತ್ರಕಥೆ, ಅದಕ್ಕೆ ಬಂದದ್ದಕ್ಕೆಲ್ಲ ಬಾಗಿ, ಸ್ವೀಕರಿಸಿ, ಅನುಭವಿಸಿ ಗೆದ್ದಿದ್ದೆ ಯಾದರೆ, ಶಾಶ್ವತ ಸುಖ.
ಒಬ್ಬ ತಂದೆಗೆ ಆರು ಜನ ಮಕ್ಕಳು, ಐದು ಮಕ್ಕಳು ಹಠಮಾರಿಗಳು, ಸಿಟ್ಟು, ಹಠಗಳ ಪ್ರತೀಕ. ಆದರೆ, ಆ ಆರರಲ್ಲಿನ ಒಂದು ಮಗು ತುಂಬ ಸೌಮ್ಯ, ವಿಧೇಯ ವಾಗಿತ್ತು. ಅದು ತಂದೆತಾಯಿಗಳನ್ನು ಇವರು ತನಗೆ ಬೇಕಾದ್ದನ್ನು ತಂದುಕೊಡುವ, ಹಠ ಹಿಡಿದರೆ ತರಿಸಿಯೇ ಕೊಡುವ ಯಂತ್ರ ವೆಂದು ಭಾವಿಸದೇ, ಅವರು ಕೊಟ್ಟಿದ್ದನ್ನು, ಕೊಡಿಸಿದ್ದನ್ನು, ತಿನಿಸಿದ್ದನ್ನು ಪ್ರೀತಿಯಿಂದಲೇ ಸ್ವೀಕರಿಸುತ್ತಿತ್ತು. ಅದು ಅತ್ತಿದ್ದನ್ನು, ರೇಗಿದ್ದನ್ನು, ಸಿಟ್ಟುಗೊಂಡು ಕೂತದ್ದನ್ನು ತಂದೆ – ತಾಯಿಗಳು ನೋಡಿಯೇ ಇರಲಿಲ್ಲ. ಹೀಗಾಗಿ ತಂದೆ – ತಾಯಿಗಳು ಅವನನ್ನು ವಿಶೇಷವಾಗಿ ಪ್ರೀತಿಸುತ್ತಿದ್ದರು.
ತಮ್ಮ ಬಳಿಯೇ ಮಲಗಿಸಿಕೊಳ್ಳುತ್ತಿದ್ದರು. ಉಳಿದ ಮಕ್ಕಳೆಲ್ಲ ತಂದೆ – ತಾಯಿಗಳ ಬಳಿ ಹಣ ಪಡೆದು ತಮ್ಮ ಗೆಳೆಯರೊಂದಿಗೆ
ಎಲ್ಲೆಲ್ಲೋ, ಪ್ರವಾಸವೋ, ಪ್ರಯಾಣವೋ ಮಾಡಿದರೆ ಆಗ ಈ ಮಗು ತಂದೆ – ತಾಯಿಗಳ ಹಿಂದೆಯೇ ಅವರೆಲ್ಲಿಗೆ ಹೋದರೂ
ಹಿಂಬಾಲಿಸುತ್ತಿತ್ತು. ಅವರೂ ಆ ಮಗುವನ್ನು ತಮ್ಮ ಜತೆಗೇ ಕರೆದೊಯ್ಯುತ್ತಿದ್ದರು. ಕಾಲಾನುಕ್ರಮದಲ್ಲಿ ಮಕ್ಕಳೆಲ್ಲ ಮದುವೆಯಾಗಿ, ಸೊಸೆಯಂದಿರೂ ಬಂದರು. ವರ್ಷದೊಳಗೆ ಭಿನ್ನಾಭಿಪ್ರಾಯಗಳು ಬಂದು ಪ್ರತಿಯೊಬ್ಬ ಮಗನೂ, ಸೊಸೆಯೂ ಪಾಲುಕೇಳಿ ಬೇರೆ ಬೇರೆ ಊರು, ಬೇರೆ ಬೇರೆ ಮನೆಗಳಿಗೂ ಹೋಗಿ ಮನೆ ಬರಿದಾಯಿತು.
ಆದರೆ, ಎಂದಿನಂತೆಯೇ ಕೊನೆಯ ಮಗ ತಂದೆ – ತಾಯಿಗಳ ಜತೆಯೇ ಹೆಂಡತಿಯೊಂದಿಗೆ ಅವರ ಸೇವೆ ಮಾಡುತ್ತಲೇ ಇದ್ದ, ಹೋದ ಅಣ್ಣಂದಿರ‍್ಯಾರೂ ತಂದೆ – ತಾಯಿ ಕಾಯಿಲೆ ಬಿದ್ದರೂ ಬರಲಿಲ್ಲ, ಕಡೆಗೆ ಸತ್ತ ಸುದ್ದಿ ತಿಳಿದರೂ ಸಹ ವಿಡಿಯೋ ಕಾಲ್ ಮಾಡಿ, ಮೊಬೈಲ್ ಫೋನ್‌ನ ಸ್ಕ್ರೀನ್‌ಗಳಲ್ಲೇ ತಂದೆ – ತಾಯಿಗಳ ಶವ ನೋಡಿ ವೆರಿ ಸಾರಿ.., ರಿಪ್, ರಪ್, ಧೊಪ್ಪ ಎಂಬ ಸಂದೇಶ ಕಳಿಸಿ, ಮೊಬೈಲ್ ಬ್ಯಾಟರಿ ಡೌನ್ ಆಯಿತೆಂಬ ಕಾರಣ ಹೇಳಿ ಕೆಲವರು, ನೆಟ್‌ವರ್ಕ್ ಇಲ್ಲ ಎಂದು ಕೆಲವರು, ಮೊಬೈಲ್‌ನ ಮುಖ – ಬಾಯಿಗಳನ್ನು ಮುಚ್ಚಿಕೊಂಡರು.
ಆದರೆ, ಈ ಕೊನೆಯ ಮಗ ಮಾತ್ರ ಎಲ್ಲವನ್ನು ಪಾಂಗಿತವಾಗಿ ಮಾಡಿ ಕರ್ತವ್ಯ ಪೂರೈಸಿದ, ತಿಂಗಳು ಕಳೆದ ಮೇಲೆ ಆ ಮಗನಿಗೆ
ಸತ್ತ ತಂದೆಯಿಂದಲೇ ಒಂದು ಪತ್ರ ಬಂತು. ಆ ಪತ್ರವನ್ನು ಜೀವವಿರುವಾಗಲೇ ತಂದೆ ಬರೆದು, ದೂರ ದೇಶದ ಗೆಳೆಯನಿಗೆ
ಅದನ್ನು ಕಳಿಸಿದ್ದರು. ನಾನು ಸತ್ತ ಮೇಲೆ ಇದನ್ನು ನನ್ನ ಸತ್ತ ದಿನದ ಬರೋಬ್ಬರಿ ತಿಂಗಳಿಗೆ ನನ್ನ ಮಗನ ವಿಳಾಸಕ್ಕೆ
ಕಳಿಸ ಬೇಕೆಂದು, ವಿನಂತಿಸಿ, ಈ ಕೊನೆಯ ಮಗನ ವಿಳಾಸ ಕಳಿಸಿದ್ದರು. ಅದರಂತೆ ಆ ಪತ್ರ ಬಂದು ತಲುಪಿ ಮಗ ಪತ್ರ
ತೆರೆದು ಓದಿದ ಪತ್ರದಲ್ಲಿ ತಂದೆ ಹೀಗೆ ಬರೆದಿದ್ದರು.
ಮಗು, ಬಾಲ್ಯದಿಂದಲೂ ನೀನು ಏನೂ ಬೇಡಿ ಪಡೆದವನೇ ಅಲ್ಲ, ಇಟ್ಟಿದ್ದು ಉಂಡು, ಕೊಟ್ಟಿದ್ದು ತೆಗೆದುಕೊಂಡು ಶಿಶುವಾಗಿದ್ದ ವನು ಸಂತನಾಗಿ ಬಿಟ್ಟೆ, ನೀನು ಯಾವುದೋ ಜನ್ಮದ ಸಂತನೋ, ಶರಣನೋ ತಿಳಿಯದು, ನನ್ನ ಮಗನಾಗಿ ಹುಟ್ಟಿದ್ದು ಮಾತ್ರ ನನ್ನ ಪುಣ್ಯ, ಉಳಿದ ನನ್ನ ಮಕ್ಕಳಿಗೆಲ್ಲ ಅವರ ಅಹಂಕಾರ, ಹಠಗಳಿಗೆ ತಕ್ಕಂತೆ ಅವರವರ ಪಾಲು ಕೊಟ್ಟೆ, ಈಗ ನೀನಿರುವ ನನ್ನದಾಗಿದ್ದ ಈ ಮನೆಯನ್ನು ನಿನಗಾಗಿ ಕೊಟ್ಟಿದ್ದೇನೆ. ಈ ಮನೆಯ ಉತ್ತರ ದಿಕ್ಕಿನ ಸಾಮಾನುಗಳ ಕೊಠಡಿಯ ಪೂರ್ವ ಗೋಡೆ ಯಲ್ಲಿ ಆರು ಅಡಿ ಎತ್ತರದ ಬೀರುವಿನ ತುಂಬ ಬೆಲೆಬಾಳುವ ಬಂಗಾರ, ವಜ್ರಗಳಿವೆ ಅದೆಲ್ಲ ನಿನ್ನ ಸೊತ್ತು.
ಇಟ್ಟಾಂಗೆ ಇರುವೆನೋ ಹರಿಯೇ ಎನ್ನುವಂತಿದ್ದ ನಿನಗೆ ಆ ಶ್ರೀಹರಿಯೇ ಶ್ರೀಯನ್ನು ಈ ಸಿರಿಯನ್ನು ಕೊಟ್ಟಿದ್ದಾನೆಂದು
ಭಾವಿಸು, ನೀನು ಕಿತ್ತುಕೊಳ್ಳಲಿಲ್ಲ, ಸದ್ಗುಣ, ಸಮಾಧಾನಗಳನ್ನು ತೆತ್ತು ಇದನ್ನು ಕೊಂಡೆ, ನಿನಗೆ ಶುಭವಾಗಲಿ ಎಂಬ ಹಾರೈಕೆ
ಮಾಡುವಷ್ಟು ಶಕ್ತಿಯೂ ಇಲ್ಲ. ನಿನ್ನ ಸ್ವಭಾವವೇ ನಿನ್ನ ಶಕ್ತಿ, ಈ ಸ್ವಭಾವದಿಂದಲೇ ನೀನು ಜಗನ್ಮಾನ್ಯನಾಗುವೆ, ಶಕ್ತಿ ಕಾಲು
ಕೈಗಳಲ್ಲಿರುವುದಿಲ್ಲ, ನಮ್ಮ ಸ್ವಭಾವ, ನಡೆ, ನುಡಿಗಳ ಶಕ್ತಿಯೇ ಶಕ್ತಿ ಈ ಶಕ್ತಿಯುಳ್ಳವನೇ ಬೇರೆಯವರಿಗೆ ದೇವರಾಗುತ್ತಾನೆ
ಹೊರತು, ಕಿರೀಟ, ಕುಂಡಲ, ಚಕ್ರಗಳಿರುವವನಲ್ಲ -ತ್ ಎಂಬ ನರಕದಿಂದ ಪಾರು ಮಾಡಲು ನನಗೆ ನಿನ್ನ ತಂದೆಯಾಗುವ
ಸೌಭಾಗ್ಯ ಕೊಟ್ಟೆ. ಅದಕ್ಕೆ ನೀನು ಮಾತ್ರ ನನ್ನ ಪುತ್ರ. ಇಂತಿ ನಿನ್ನ ತಂದೆ ಎಂದಿತ್ತು.
ಗರುಡ ಪುರಾಣದ ತುಂಬ ಇಂಥ ಕಥೆಗಳೇ ತುಂಬಿವೆ. ಇದು ಇಟ್ಟಾಂಗೆ ಇರುವೆನೋ ಹರಿಯೇ ಹಾಡಿನ ತಾತ್ಪರ್ಯ. ಇದನ್ನು
ನನ್ನ ವಿಚಾರವಾದಿ ಎನಿಸಿಕೊಂಡ ಪ್ರಾಣ ಸ್ನೇಹಿತನ ಮುಂದೆ ಹೇಳಿದೆ. ಇಲ್ಲಿ ಪ್ರಾಣಮಿತ್ರ ಎಂದರೆ ಆತ್ಮೀಯ ಪ್ರಾಣ ಸ್ನೇಹಿತ.
ಪ್ರಾಣಕ್ಕೆ ಪ್ರಾಣ ಕೊಡುವ ಮಿತ್ರ ಅಲ್ಲ, ಕಂಡಾಗೊಮ್ಮೆ ಪುರಾಣ, ಶಾಸ್ತ್ರ, ಗ್ರಂಥ, ದೇವರುಗಳನ್ನು ಟೀಕಿಸುವ, ಪ್ರಾಣ ತಿನ್ನುವ
ಮಿತ್ರ ಎಂದು ಅರ್ಥೈಸಿಕೊಳ್ಳಿ.
‘ಪ್ರಾಣ ತಿನ್ನುವ ಮಿತ್ರ’, ಇಲ್ಲಿ ‘ತಿನ್ನುವ’ ಎನ್ನುವುದು ‘ಸೈಲೆಂಟ್’ ಆಗುತ್ತದೆ ಎಂದು ತಿಳಿದರೆ ಸಾಕು. ಇವನು ಜಾಣನೇ, ಹುಲಿ, ಸಿಂಹದಂಥವನು. ಆದರೆ ಭಯ ಹುಟ್ಟಿಸುವ ಗೊಗ್ಗರು ಧ್ವನಿಯ ಗರ್ಜನೆ, ಸಾಧು ಪ್ರಾಣಿಗಳಿಗೆ ಕುತ್ತಿಗೆಗೆ ಬಾಯಿ ಹಾಕಿ ಕಿತ್ತು ತಿನ್ನುವ ಹಿಂಸ್ರ ಪಶುವನಂಥವನು. ಇಂಥವನ ಬಳಿ ಹಾಲುಕೊಡುವ ಹಸು, ಕರು, ಕುರಿ ಹಾಗೂ ತತ್ತಿ ಇಡುವ ಕೋಳಿಗಳೂ ಬರುವುದಿಲ್ಲ. ಹಾಗೆಯೇ ಇವನ ಬಳಿಯೂ ಅಕಾಲ ಮರಣಕ್ಕಂಜಿ ಯಾರೂ ಬರುವುದಿಲ್ಲ.
ನನ್ನ ಕಂಡರೆ ಯಾರೂ ಬಾಯೆತ್ತುವುದಿಲ್ಲ, ತಲೆ ತಗ್ಗಿಸಿ ನಡೆಯುತ್ತಾರೆ ಎಂಬ ಹೆಮ್ಮೆಯೇ ಹೆಮ್ಮೆ. ಇವರೆಲ್ಲ ನನ್ನ ವಿದ್ವತ್ತಿಗೆ ಅಂಜಿ ಓಡುತ್ತಾರೆ ಎಂದೇ ಭಾವಿಸಿ, ಈತ ಒಂಟಿಯಾಗಿಯೇ ತಿರುಗುತ್ತಿರುತ್ತಾರೆ ಪಾಪ…. ಆಗಾಗ ನಾನು ಈತನನ್ನು ಇಂಥವುಗಳನ್ನು ಹೇಳುತ್ತಾ, ಕಿನ್ನರಿ ಬಾರಿಸುತ್ತೇನೆ., ಅಂಥ ಒಂದು ದಿನ ‘ಇಟ್ಟಾಂಗೆ ಇರುವೆನು ನಿನ್ನ ಹರಿಯೇ ಎಂಬುದು ಸುಖ – ಸಮಾಧಾನಗಳಿಗೆ ಕಾರಣ, ಸರಳ ಜೀವನದ ಸಂಕೇತ ಎಂದು ಹೇಳಿದೆ ನೋಡಿ ಜನರೇಟರ್ ಸ್ಟಾರ್ಟ್ ಮಾಡಿದ ಶಬ್ದ ಶುರುವಾಯಿತು ಈತನ ಬಾಯಿಯಿಂದ ನೀನು ಹೇಳುವ ಮಾತಿನ ಅರ್ಥ ಅಂದರೆ ನಾವು ಕೊಳಚೆಯಲ್ಲಿಯೇ ಬಿದ್ದು ಸಾಯಬೇಕೆ? ಅಧಿಕಾರ ಹಿಡಿಯಬಾರದೆ? ಸಲಾಮು ಹೊಡೆಸಿಕೊಳ್ಳಬಾರದೆ? ಯಾರನ್ನೂ ಮೆಟ್ಟದೆ, ಮೆಟ್ಟಿನಿಂದ ಹೊಡೆಸಿಕೊಳ್ಳಬೇಕೆ?
ನಮ್ಮನ್ನು ಕರೆದು ಗೌರವಿಸದವರನ್ನು ಎದೆಗೆ ಒದ್ದು, ಗೌರವ ಪಡೆಯಬಾರದೆ? ಎಂದೆಲ್ಲ ಅರಚಲು ಶುರು ಮಾಡಿಬಿಟ್ಟ, ನಾನು ಸಮeಯಿಷಿ ನೀಡಿದೆ. ಅದು ಹಾಗಲ್ಲ, ಇವೆಲ್ಲ ದೌರ್ಜನ್ಯ ದರ್ಪಗಳಾದವು. ನಾನು ಹೇಳುತ್ತಿರುವುದು ದೇವರಿಗೆ ನಿನ್ನನ್ನು ಅರ್ಪಿಸಿಕೊಳ್ಳುವ ಪರಿ. ಆತನಿಗೆ ನಿನ್ನನ್ನು ಒಪ್ಪಿಸಿಕೊಂಡರೆ ಆತನೇ ನಿನಗಿವೆಲ್ಲವನ್ನೂ ಜನರಿಂದಲೇ ಕೊಡಿಸುತ್ತಾನೆ, ಬಾಯಲ್ಲಿ ಬಿದ್ದು ಒದ್ದಾಡುವವನು, ತಾನೇ ಬಾ ತಳದಿಂದ ಉದ್ದಕ್ಕೆ ಬೆಳೆದು ಹೊರಬರಲು ಸಾಧ್ಯವಿಲ್ಲ, ಅದಕ್ಕೆ ಮೇಲಿನಿಂದ ಒಂದು
ಬಿಳಲೋ ಅಥವಾ ಯಾರಾದರೂ ಬಿಡುವ ಹಗ್ಗವೋ ಬೇಕು ಅಲ್ಲವೇ? ಆ ಹಗ್ಗವೇ ದೇವರು ಎಂದೆಲ್ಲ ನಾನು ವಿವರಿಸುತ್ತಿದ್ದರೆ,
ಅವನು ಹಗ್ಗಕ್ಕಾಗಿ ಕಾಯುವುದು ಮೂರ್ಖತನ, ಮೊದಲು ಜನರು ತಿರುಗಾಡುವ ದಾರಿಯಲ್ಲಿ ಬಾ ತೋಡಿಸಿದವನನ್ನು
ಡಿದು ಒದೆಯಬೇಕು ಎಂದೆಲ್ಲ ಒದರಾಡಿದ.
ಅದಕ್ಕೆ ನಾನು, ಎಂ.ಎಲ್.ಎ ಆಗಬೇಕು, ಮಂತ್ರಿಯಾಗಬೇಕು ಎಂದು ಚೀರಾಡಿದ, ‘ನೀನೇ ದೇವರಾಗುವ ಉಪಾಯ ಹೇಳಿದರೆ,
ಇನ್ನು ಎಂ.ಎಲ್.ಎ, ಮಂತ್ರಿ ಆಗುವ ಕನಸು ಕಾಣುತ್ತಿದ್ದಿ ಎಂದು ಬೈದರೆ, ಎಂ.ಎಲ್.ಎ., ಮಂತ್ರಿ ಎಂದರೆ ಸಾಮಾನ್ಯವೇ? ದೇವರನ್ನು ಒದ್ದು ಎಳೆದು ತರುವ ತಾಕತ್ತಿರುತ್ತದೆ. ಪೊಲೀಸು, ವಕೀಲರು ಎಲ್ಲರೂ ಮಂತ್ರಿ ಹೇಳಿದಂತೆ ಕೇಳುವುದಿಲ್ಲವೇ? ಇನ್ನು ಜನರಂತೂ ಅದ್ಯಾವ ಲೆಕ್ಕ.
ಒಂದು ಸುತ್ತು ಬಂದೂಕು ಹಾರಿಸಿ, ಲಾಠಿ ಚಾರ್ಚ್ ಮಾಡಿದರೆ ಜನರೇನು, ಆ ನಿನ್ನ ದೇವರೂ ಓಡಿ ಹೋಗಿ ಮನೆ ಸೇರುತ್ತಾನೆ
ಎಂದು ನಕ್ಕಾಗ, ನನಗೆ ಇಟ್ಟಾಂಗೆ ಇರುವೆನು ಹರಿಯೇ ಎಂಬುದು ಮರೆತು, ಇವನು ಇದ್ದಂತೆ ಇರಲಿ ಬಿಡು ಹರಿಯೇ ಎಂದು ದೇವರನ್ನೇ ಪ್ರಾರ್ಥಿಸುವ ಪರಿ ಬಂತು. ಇಂದು ಯಾರಿಗೂ ದೇವರು ಇಟ್ಟಂತೆ ಇರಲು ಸಾಧ್ಯವಾಗುತ್ತಿಲ್ಲ. ಇದೇನು ಕಾಲಧರ್ಮವೋ, ಗುಣ ಧರ್ಮವೋ, ಪರಿಸರದ ಪ್ರಭಾವವೋ, ಮೌಢ್ಯವೋ? ನಾಶದ ಸೂಚನೆಯೋ? ತಿಳಿಯುತ್ತಿಲ್ಲ. ಕಂಡೂ ಕಂಡು ನೀ ಎನ್ನ ಕೈ ಬಿಡುವುದೇ ಕೃಷ್ಣ ಎಂಬ ಹಾಡು ಈಗ ಬದಲಾಗಿ ಇಂಥವರನ್ನು ಕಂಡು ಕಂಡೇ ಆ ದೇವರು ಕೈಬಿಡುತ್ತಿರುವನೇನೋ ಕೃಷ್ಣ ಎನಿಸಿದರೆ, ನೆನಪಿಡಿ. ‘ಇಂಥವರದೇ ಕಾಲ’ ಎಂದುಕೊಳ್ಳಬೇಡಿ.
ಇಂದು ನಮ್ಮ ಮುಂದೆ ವೈಭವ, ಅಟ್ಟಹಾಸದಿಂದ ಮೆರೆಯುತ್ತಿರುವ ಈ ಎಲ್ಲ ರಂಗಗಳಲ್ಲಿರುವ ಈ ಹಿಂಸ್ರ, ಅನಾಗರೀಕ ಪಶುಗಳು ಬಹಳ ದಿನ ಬದುಕುವುದಿಲ್ಲ, ಸಾಯುತ್ತವೆ. ಇಲ್ಲವೇ ನೇಪಥ್ಯಕ್ಕೆ ಸರಿದು ನರಳಿ, ನರಳಿ ಬದುಕುತ್ತವೆ. ಸೆಟೆದು ಉದ್ದಕ್ಕೆ ನಿಂತ ಮರ ಚಂಡಮಾರುತ ಬೀಸುವ ಗಾಳಿಗೆ ಮುರಿದುಕೊಂಡು ಬೀಳುತ್ತದೆ, ತುಂಡು ತುಂಡಾಗಿ ಕತ್ತರಿಸಿಕೊಂಡು ಯಾರದೋ ಮನೆಯ ಅನ್ನ ಬೇಯಿಸಲು ಉರಿದು ಬೂದಿಯಾಗುತ್ತದೆ.
ಅದೇ ಹೊಲ, ಗದ್ದೆಗಳಲ್ಲಿರುವ ಪುಟ್ಟ ಪುಟ್ಟ ಸಸಿಗಳು ಗಾಳಿ, ಚಂಡಮಾರುತ ಬೀಸಿದಂತೆಲ್ಲ ತಮ್ಮ ಮೇಲೆ ಹಾಯ್ದು ಹೋಗಲು ದಾರಿ ಮಾಡಿಕೊಟ್ಟು ಬಾಗಿ ಬಾಗಿ ಮತ್ತೆ ಎದ್ದು ನಿಲ್ಲುತ್ತವೆ, ಹಾಗೆ ನಿಂತವುಗಳೇ ಕಾಳು ತುಂಬಿದ ತೆನೆಯಾಗಿ, ರಸತುಂಬಿದ ಕಾಳಾಗಿ ಹಸಿದ ಮನುಷ್ಯನಿಗೆ, ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡುತ್ತವೆ. ಇಟ್ಟಾಂಗೆ ಇರುವುದನ್ನು ನಾವು ನಾಡಲ್ಲಿ, ಜನರಲ್ಲಿ ನೋಡಲಾಗುತ್ತಿಲ್ಲ. ಹೊಲ, ಗದ್ದೆ, ತೋಟಗಳಲ್ಲಿ ಬೆಳೆಗಳ ರೂಪದಲ್ಲಿ ನೋಡುತ್ತೇವೆ. ಸಸಿಗಳಿಂದಲೂ ಕಲಿಯುವುದಿದೆ ಅಲ್ಲವೇ?