ವರ್ತಮಾನ
maapala@gmail.com
ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಿದರೂ ಈ ಸಮುದಾಯವನ್ನು ನಿರೀಕ್ಷಿತ ಮಟ್ಟದಲ್ಲಿ ಆಕರ್ಷಿಸುವಲ್ಲಿ ಸಫಲವಾಗದ ಬಿಜೆಪಿ ಇದೀಗ ರಾಜ್ಯದಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ರಾಜಕೀಯ ವಾಗಿ ಶಕ್ತಿ ತುಂಬುವ ಮೂಲಕ ಅವರನ್ನು ಒಲಿಸಿಕೊಳ್ಳಲು ಶತ ಪ್ರಯತ್ನ ಮಾಡುತ್ತಿದೆ.
ರಾಜ್ಯ ಬಿಜೆಪಿಯಲ್ಲೀಗ ಒಬಿಸಿ ಜಪ ಜೋರಾಗುತ್ತಿದೆ. ಅರ್ಥಾತ್ ಇತರೆ ಹಿಂದುಳಿದ ವರ್ಗ (Other Backward Caste)ದವರನ್ನು ಗುರಿಯಾಗಿಸಿ ಕೊಂಡು ರಾಜಕೀಯ ಲೆಕ್ಕಾಚಾರಗಳು ತೀವ್ರಗೊಳ್ಳುತ್ತಿದೆ. ಏನೇ ಜಾತಿ ಸಮೀಕರಣದ ಚರ್ಚೆ ನಡೆದರೂ ಅಂತಿಮವಾಗಿ ಅದು ಇತರೆ ಹಿಂದುಳಿದ ವರ್ಗಗಳ ಮಧ್ಯೆ ಬಂದು ನಿಲ್ಲುವಂತಾಗಿದೆ. ಇದರ ಜತೆಗೆ ಅಲ್ಲಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಗ್ಗೆಯೂ ಚರ್ಚೆಯಾಗುತ್ತಿದೆ. ಆದರೆ, ಪ್ರಮುಖ ಗುರಿ ಮಾತ್ರ ಓಬಿಸಿ.
ಹಾಗೆಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜನ್ಮದಿನದ ಸಲುವಾಗಿ ಹಮ್ಮಿಕೊಂಡಿದ್ದ ಸಿದ್ದರಾಮೋ ತ್ಸವದ ಯಶಸ್ಸಿನ ಬಳಿಕ ಇದೇನೂ ಆರಂಭವಾಗಿರು ವುದಲ್ಲ. ಅದಕ್ಕೆ ಮೊದಲೇ ಶುರುವಾಗಿತ್ತಾದರೂ ರಾಜ್ಯ ನಾಯಕರು ಆ ಬಗ್ಗೆ ಹೆಚ್ಚಿನ ಗಮನ ಹರಿಸಿರಲಿಲ್ಲ. ಆದರೆ, ಬಿಜೆಪಿಯ ವರಿಷ್ಠರು ಮಾತ್ರ ಮೊದಲೇ ಲೆಕ್ಕಾಚಾರ ಹಾಕಿ ಅದಕ್ಕೆ ಬೇಕಾದ ವೇದಿಕೆ ಸಿದ್ಧಪಡಿಸಿ ಕೊಂಡಿದ್ದರು. ಆದರೆ, ಅದರ ಸುಳಿವು ರಾಜ್ಯ ನಾಯಕರಿಗೆ ಸಿಕ್ಕಿರಲಿಲ್ಲ.
ಹೀಗಾಗಿ ಪಕ್ಷದ ವರಿಷ್ಠರು ಎಲ್ಲರನ್ನೂ ಬದಿಗೆ ಸರಿಸಿ, ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ, ಹೇಳಿಕೊಳ್ಳುವಂತಹ ವರ್ಚಸ್ಸೂ ಇಲ್ಲದ ಹಿಂದುಳಿದ ಕೋಲಿ ಸಮುದಾಯದ ಬಾಬುರಾವ್ ಚಿಂಚನಸೂರ ಅವರನ್ನು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಆಯ್ಕೆಯಾದಾಗ ಪಕ್ಷದಲ್ಲಿ ಅಸಮಾಧಾನ ಕಾಣಿಸಿಕೊಂಡಿತ್ತು. ಆದರೆ, ಆ ವಿಚಾರದಲ್ಲಿ ವರಿಷ್ಠರ ನಿಲುವು ಸ್ಪಷ್ಟ ವಾಗಿತ್ತು.
ಏಕೆಂದರೆ, ಕೋಲಿ ಸಮುದಾಯವನ್ನೊಳಗೊಂಡ ಹಿಂದುಳಿದ ವರ್ಗಗಳು ಯಾದಗಿರಿ, ಕಲಬುರಗಿ, ಬೀದರ್ ಮತ್ತು
ವಿಜಯಪುರ ಜಿಲ್ಲೆಗಳ ವ್ಯಾಪ್ತಿಯ ಸುಮಾರು 14 ಕ್ಷೇತ್ರದಲ್ಲಿ ರಾಜಕೀಯವಾಗಿ ನಿರ್ಣಾಯಕರು. 2019ರ ಲೋಕಸಭೆ
ಚುನಾವಣೆ ವೇಳೆ ಇದು ಸಾಬೀತಾಗಿತ್ತು. ಬೀದರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಖರ್ಗೆ ಸೋಲಲು ಇದೇ ಹಿಂದುಳಿದ ವರ್ಗಕ್ಕೆ ಸೇರಿದ ಬಾಬುರಾವ್ ಚಿಂಚನಸೂರ, ಸುಭಾಷ್ ಗುತ್ತೇದಾರ್ ಒಟ್ಟಾಗಿದ್ದು ಕಾರಣವಾಗಿತ್ತು. ಅದರಲ್ಲೂ ಕೋಲಿ ಸಮುದಾಯ ಆ ಭಾಗದಲ್ಲಿ ಹೆಚ್ಚು ಒಗ್ಗಟ್ಟಾಗಿದೆ. ಇದನ್ನು ಗಮನಿಸಿಯೇ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಆ ಸಮುದಾಯಕ್ಕೆ ಸೇರಿದ್ದ ಬಾಬುರಾವ್ ಚಿಂಚನಸೂರ್‌ಗೆ ಮಣೆ ಹಾಕಿತ್ತು.
ಆದರೆ, ಯಾವಾಗ ಸಿದ್ದರಾಮೋತ್ಸವ ಯಶಸ್ವಿಯಾಯಿತೋ ಆಗ ರಾಜ್ಯ ಬಿಜೆಪಿಯಲ್ಲಿ ಇತರೆ ಹಿಂದುಳಿದ ವರ್ಗಗಳ ಸಂಘಟನೆ ಬಗ್ಗೆ ಚರ್ಚೆ ಶುರುವಾಗಿ ಚಿಂಚನಸೂರ್‌ಗೆ ಟಿಕೆಟ್ ನೀಡಿದ್ದರ ಹಿಂದಿನ ಮರ್ಮ ರಾಜ್ಯ ನಾಯಕರಿಗೆ ಅರ್ಥವಾಗಿದ್ದು.
ಇದು ಒಂದು ಉದಾಹರಣೆ ಮಾತ್ರ. ಅದನ್ನು ಹೊರತಾಗಿ ಪಕ್ಷದಲ್ಲಿ ಈ ಸಮುದಾಯದ ಬಗ್ಗೆ ಗಂಭೀರ ಚರ್ಚೆಗಳು ಆರಂಭ ವಾಗಿವೆ. ಅದು ಎಷ್ಟರ ಮಟ್ಟಿಗೆ ಜೋರಾಗಿದೆ ಎಂದರೆ ಈ ಒಂದು ಕಾರಣಕ್ಕೆ ರಾಜ್ಯದಲ್ಲಿ ಸಂಘಟನೆಯ ನಾಯಕತ್ವ ಬದಲಾವಣೆ ಕುರಿತ ನಿರೀಕ್ಷೆ ಈಡೇರದೇ ಇರುವಷ್ಟು.
ಏಕೆಂದರೆ, ನಾಯಕತ್ವ ಬದಲಾವಣೆ ಮಾಡುವುದೇ ಆದಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ನೀಡಬೇಕು ಎನ್ನುವುರು ವರಿಷ್ಠರ ಯೋಚನೆ. ಆದರೆ, ಚುನಾವಣೆ ಸಮೀಪಿಸುತ್ತಿರುವುದರಿಂದ ಪಕ್ಷದ ನಾಯಕತ್ವ ವಹಿಸಿಕೊಳ್ಳುವಂತಹ ವರ್ಚಸ್ಸು ಹೊಂದಿರು ವವರು ಯಾರು ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ವರಿಷ್ಠರ ನಿರೀಕ್ಷೆ ತಲುಪುವ ಭರವಸೆ ಹೊಂದಿರುವ ವ್ಯಕ್ತಿ ಸಿಗುವವರೆಗೆ ನಾಯಕತ್ವ ಬದಲಾವಣೆ ಕಷ್ಟ ಎಂದು ಹೇಳಲಾಗುತ್ತಿದೆ.
ಬಿಜೆಪಿಯಲ್ಲಿ ಇತರೆ ಹಿಂದುಳಿದ ವರ್ಗಗಳ ಕುರಿತಂತೆ ರಾಜಕೀಯ ಲೆಕ್ಕಾಚಾರಗಳು ತೀವ್ರಗೊಳ್ಳಲು ಕಾರಣಗಳೂ ಇವೆ. ಪ್ರಬಲ ಸಮುದಾಯಗಳ ಪೈಕಿ ಬಿಜೆಪಿಯ ಮೊದಲ ವೋಟ್‌ಬ್ಯಾಂಕ್ ವೀರಶೈವ ಲಿಂಗಾಯತರದ್ದು. ಪ್ರಸ್ತುತ ಮುಖ್ಯಮಂತ್ರಿ, ಕೇಂದ್ರ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿ ಅಧ್ಯಕ್ಷ ಸ್ಥಾನಗಳು ಈ ಸಮುದಾಯಕ್ಕೆ ನೀಡಲಾಗಿದೆ. ಬಿಜೆಪಿ ಅಽಕಾರಕ್ಕೆ ಬಂದ ಬಳಿಕ ಅತಿ ಹೆಚ್ಚು ರಾಜಕೀಯ ಅಽಕಾರ ಸಿಕ್ಕಿರುವುದು ಈ ಸಮುದಾಯಕ್ಕೆ. ಇನ್ನು ಒಕ್ಕಲಿಗ ಸಮುದಾಯ ಮೊದಲು ಪಕ್ಷದ ಜತೆ ಇಲ್ಲದೇ ಇದ್ದರೂ ಈಗ ಸ್ವಲ್ಪ ಮಟ್ಟಿಗೆ ಅವರು ಕೂಡ ಬಿಜೆಪಿ ಜತೆಗಿದ್ದಾರೆ.
ಅದಕ್ಕೆ ತಕ್ಕಂತೆ ಸಚಿವ ಸಂಪುಟದಲ್ಲಿ ಸಾಕಷ್ಟು ಅವಕಾಶ ನೀಡಲಾಗಿದೆ. ಇನ್ನು ಪರಿಶಿಷ್ಟ ಜಾತಿಯ ಒಂದು ವರ್ಗ ಬಿಜೆಪಿ ಜತೆಗಿದೆ. ಅವರಿಗೂ ತಕ್ಕಮಟ್ಟಿನ ಅವಕಾಶಗಳು ಸಿಕ್ಕಿವೆ. ಇದೆಲ್ಲಕ್ಕಿಂತ ಮುಖ್ಯವಾಗಿ 2018ರ ವಿಧಾನಸಭೆ ಚುನಾವಣೆ ಯಲ್ಲಿ ಬಿಜೆಪಿಯನ್ನು ಗಟ್ಟಿಯಾಗಿ ಕೈಹಿಡಿದದ್ದು ಪರಿಶಿಷ್ಟ ಪಂಗಡ ಅಥವಾ ವಾಲ್ಮೀಕಿ ಸಮುದಾಯ.
ಬಿಜೆಪಿ ಅಽಕಾರಕ್ಕೆ ಬಂದರೆ ಪರಿಶಿಷ್ಟ ಪಂಗಡದ ಮೀಸಲು ಪ್ರಮಾಣವನ್ನು ಶೇ. 7.5ಕ್ಕೆ ಹೆಚ್ಚಿಸುವ ಭರವಸೆ ನೀಡಲಾಗಿತ್ತು. ಜತೆಗೆ ಸಮುದಾಯದ ಒಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸ ಇತ್ತು. ಅಲ್ಲದೆ, ಬಿಜೆಪಿಯನ್ನು ಇನ್ನೂ ಪೂರ್ಣಪ್ರಮಾಣದಲ್ಲಿ ಹತ್ತಿರ ಬಿಟ್ಟುಕೊಳ್ಳದ ಚಿತ್ರದುರ್ಗ ಜಿಲ್ಲೆಯಲ್ಲಿ ಬಳ್ಳಾರಿಯವರಾದ ಶ್ರೀರಾಮುಲು ಚುನಾವಣೆಗೆ ನಿಂತರು.
ಇದೆಲ್ಲದರ ಪರಿಣಾಮ ಆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಬಿಜೆಪಿ ಅಽಕಾರದಲ್ಲಿದ್ದರೂ ಮೀಸಲು ಪ್ರಮಾಣ ಹೆಚ್ಚಿಸಲು ಈವರೆಗೆ ಸಾಧ್ಯವಾಗಿಲ್ಲ.
ಅಷ್ಟೇ ಅಲ್ಲ, ಸಮುದಾಯದ ನಾಯಕರನ್ನು ಉಪಮುಖ್ಯಮಂತ್ರಿಯಾಗಿಯೂ ಮಾಡಿಲ್ಲ. ಇದರಿಂದ ಸಮುದಾಯ ಅಸಮಾ ಧಾನಗೊಂಡಿದ್ದು, ಬಿಜೆಪಿ ಕುರಿತಾಗಿ ಮೊದಲಿನ ಒಲವು ಹೊಂದಿಲ್ಲ. ಇಂತಹ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ತನ್ನ ಶಕ್ತಿ ಹೆಚ್ಚಿಸಿಕೊಳ್ಳಬೇಕಾದರೆ ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಜಾತಿ ಮತ್ತು ಪಂಗಡದವರ ಜತೆಗೆ ಮತ್ತೊಂದು ನಿರ್ಣಾಯಕ ಸಮುದಾಯವಾದ ಇತರೆ ಹಿಂದುಳಿದ ವರ್ಗಗಳನ್ನು ಓಲೈಸುವ ಅನಿವಾರ್ಯತೆ ಇದೆ. ಇತರೆ ಹಿಂದುಳಿದ ವರ್ಗ ಎಂದರೆ ಅದರಲ್ಲಿ ಲಿಂಗಾಯತ, ಒಕ್ಕಲಿಗರೂ ಬರುತ್ತಾರೆ.
ಈ ಸಮುದಾಯಗಳಿಗೆ ಸಾಕಷ್ಟು ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ. ಆದರೆ, ಪ್ರವರ್ಗ-೧ ಮತ್ತು ಪ್ರವರ್ಗ-೨ರಲ್ಲಿ ಸುಮಾರು 200 ಜಾತಿಗಳು ಬರುತ್ತವೆ. ಇವರಲ್ಲಿ ದಲಿತರಲ್ಲಿರುವ ಆಸ್ಮಿತೆ ಇಲ್ಲದೇ ಇದ್ದರೂ ಜಾತಿ ಪ್ರಜ್ಞೆ ಸಾಕಷ್ಟಿದೆ. ಜಾತಿಗಳ ಮಧ್ಯೆಯೇ ಮೇಲು-ಕೀಳು ಎಂಬ ಶ್ರೇಣೀಕರಣ ಇದೆಯಾದರೂ ಹಿಂದುಳಿದವರು ಎಂಬ ವಿಚಾರ ಬಂದಾಗ ಎಲ್ಲರೂ
ಒಟ್ಟಾಗುತ್ತಾರೆ. ಆದರೆ, ಬಹುತೇಕವು ಸಣ್ಣ-ಪುಟ್ಟ ಜಾತಿಗಳಾಗಿರುವುದರಿಂದ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ.
ಅಷ್ಟೇ ಅಲ್ಲ, ಪ್ರಸ್ತುತ ರಾಜಕಾರಣದಲ್ಲಿ ಹಿಂದುಳಿದ ವರ್ಗದವರಿಗೆ ಸಿದ್ದರಾಮಯ್ಯ ಹೊರತಾಗಿ ಬೇರೊಬ್ಬ ಬಲಿಷ್ಠ ನಾಯಕ ಇಲ್ಲ. 2013ರಲ್ಲಿ ಕಾಂಗ್ರೆಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಏರಲು ಕಾರಣರಾದವರೇ ಸಿದ್ದರಾಮಯ್ಯ. ಕುರುಬ ಜಾತಿಗೆ ಸೇರಿದ್ದರೂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದವರೆಲ್ಲರನ್ನೂ ಒಟ್ಟಿಗೆ ಕರೆದೊಯ್ದಿದ್ದರು. 2008ರಲ್ಲಿ ಬಿಜೆಪಿಯ ಜತೆಗಿದ್ದ ಹಿಂದುಳಿದ ವರ್ಗದವರೂ ಸಿದ್ದರಾಮಯ್ಯ ಅವರ ಹಿಂದೆ ಹೋಗಿದ್ದರಿಂದ ಕಾಂಗ್ರೆಸ್ ಏಕಾಂಗಿಯಾಗಿ ಅಽಕಾರ
ಹಿಡಿಯಲು ಸಾಧ್ಯವಾಯಿತು.
2018ರ ವಿಧಾನಸಭೆ ಚುನಾವಣೆಯಲ್ಲಿ ಆ ಸಂಘಟನೆ ಸ್ವಲ್ಪ ಸಡಿಲಗೊಂಡು ಕೆಲವರು ಬಿಜೆಪಿ ಜತೆ ಬಂದರು. ಇದರ ಪರಿಣಾಮ ಸುಮಾರು 12ರಿಂದ 15 ಸ್ಥಾನಗಳನ್ನು ಬಿಜೆಪಿ ಹೆಚ್ಚುವರಿಯಾಗಿ ಪಡೆಯಲು ಸಾಧ್ಯವಾಗಿತ್ತು. ಆದರೆ,
ಇತ್ತೀಚೆಗೆ ನಡೆದ ಸಿದ್ದರಾಮೋತ್ಸವದಿಂದಾಗಿ ಮತ್ತೆ ಇತರೆ ಹಿಂದುಳಿದ ವರ್ಗದವರು ಮತ್ತೆ ಕಾಂಗ್ರೆಸ್ ಕಡೆ ಒಗ್ಗಟ್ಟಾಗುತ್ತಿದ್ದಾ ರೆಯೇ ಎಂಬ ಭಾವನೆ ಮೂಡಿದೆ. ಈ ಎಲ್ಲಾ ಲೆಕ್ಕಾಚಾರಗಳನ್ನು ಮುಂದಿಟ್ಟುಕೊಂಡೇ ಬಿಜೆಪಿ ವರಿಷ್ಠರು ಇತರೆ ಹಿಂದುಳಿದ ವರ್ಗಗಳ ಮೇಲೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಈ ಸಮುದಾಯದವರಲ್ಲಿ ಸ್ವಲ್ಪ ಮಟ್ಟಿನ ಪ್ರೀತಿ ಇದೆ.
ಅದರಲ್ಲೂ ಸಣ್ಣ-ಪುಟ್ಟ ಜಾತಿಗಳು ಅವರ ಬಗ್ಗೆ ಒಲವು ಹೊಂದಿದ್ದಾರೆ. ಹೀಗಾಗಿ ಅವರನ್ನೇ ಮುಂದಿಟ್ಟುಕೊಂಡು ಇತರೆ ಹಿಂದುಳಿದ ಜಾತಿಗಳಿಗೆ ಒಬ್ಬ ಬಲಿಷ್ಠ ನಾಯಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಅಂತಹ ನಾಯಕನನ್ನು ಗುರುತಿಸುವ ಮೊದಲು ಸಮುದಾಯವನ್ನು ಒಲಿಸಿಕೊಳ್ಳಬೇಕಾಗುತ್ತದೆ. ಅದಕ್ಕೂ ಮೊದಲು ಎಲ್ಲಾ ಜಾತಿಗಳನ್ನು ಒಟ್ಟುಗೂಡಿಸಬೇಕಾಗುತ್ತದೆ. ಅದಕ್ಕಾಗಿ ನಾನಾ ತಂತ್ರಗಾರಿಕೆಗಳನ್ನು ರೂಪಿಸುತ್ತಿದ್ದಾರೆ. ತಳಮಟ್ಟದ ಸಂಘಟನೆಯಲ್ಲಿ ಈ ಸಮುದಾಯಗಳಿಗೆ ಆದ್ಯತೆ ನೀಡುವ ಬಗ್ಗೆ ಯೋಚಿಸುತ್ತಿದ್ದಾರೆ. ಒಟ್ಟಿನಲ್ಲಿ ಬಿಜೆಪಿಯಲ್ಲೀಗ ಇತರೆಲ್ಲಾ ಜಾತಿಗಳಿಗಿಂತ ಹೆಚ್ಚು ಇತರೆ ಹಿಂದುಳಿದ ವರ್ಗದವರ ಬಗ್ಗೆ ಚರ್ಚೆಯಾಗುತ್ತಿದೆ. ಲಾಸ್ಟ್ ಸಿಪ್: ಜಾತ್ಯತೀತ ರಾಷ್ಟ್ರದಲ್ಲಿ ಜಾತಿಯ ಬಲವಿಲ್ಲದಿದ್ದರೆ ರಾಜಕಾರಣದಲ್ಲಿ ಬೆಲೆ ಇರುವುದಿಲ್ಲ.