Saturday, 14th December 2024

ಅಧಿಕಾರಿ, ಸಿಬ್ಬಂದಿ ಹಿಂಡಿಬೂಸ ಮೇಯದಿರಲಿ!

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಗಂಭೀರ ವಿಚಾರವೆಂದರೆ ಗೋಹತ್ಯೆ ನಿಷೇಧ ಕಾಯ್ದೆ ಯಾವ ಮಟ್ಟದಲ್ಲಿ ಕಿತ್ತು ಕೆರ ಹಿಡಿದಿದೆ ಎಂಬುದರ ಅನುಭೂತಿ ಪಡೆಯಬೇಕಾದರೆ ಬೇರೆಲ್ಲೂ ಬೇಡ ಸನ್ಮಾನ್ಯ ಸಚಿವರಾದ ಪ್ರಭುಚೌಹಾಣ್ ಅವರು ಸಾಮಾನ್ಯರಂತೆ ಬೆಂಗಳೂರಿನ ಪಾದರಾಯನಪುರ ಗೋರಿಪಾಳ್ಯದ ಗಲ್ಲಿಗಳಲ್ಲಿ ಸುತ್ತಿಬರಲಿ.

ದೈವಸಮಾನ ಕಾಮಧೇನು ಗೋಮಾತೆಯ ಸಂರಕ್ಷಣೆಯಲ್ಲಿ ವಿಶೇಷ ಕಾಳಜಿ ಹೊಂದಿ ರುವ ಮಠ ಹೊಸನಗರದ ಶ್ರೀರಾಮಚಂದ್ರ ಪುರ ಮಠ. ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಗಳ ಪರಮ ಮತ್ತು ಪ್ರಥಮ ಪೂಜೆಯಾಗಿರುವ ಗೋವುಗಳ ಅದರಲ್ಲೂ ದೇಸೀ ತಳಿಗಳ ಸಂತತಿಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ.

ಈ ಮಠದ ಕಗ್ಗಲಿಪುರದ ಧರ್ಮಚಕ್ರ ಅಮೃತಧಾರ ಗೋಶಾಲೆಯೂ ಸೇರಿದಂತೆ ಹಲವು ಸಂಸ್ಥೆಗಳಿಗೆ ಗೋ ಪಾಲನೆಗಾಗಿಯೇ ಒಟ್ಟಾರೆ 41 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದ್ದು ಕರ್ನಾಟಕದಲ್ಲಿ ರೋಗಿಗಳ ಪಾಲಿನ ಸಂಜೀವಿನಿಯಾಗಿರುವ ಬೆಂಗಳೂರಿನ ವಿಜಯನಗರದಲ್ಲಿರುವ ಮಾರುತಿ ಮೆಡಿಕಲ್ಸ್‌ನ ಮಹೇಂದ್ರ ಮುಣೋತ್ ಜೈನ್ ಕುಟುಂಬ.

ರಸ್ತೆಯಲ್ಲಿ ಬಿಡಾಡಿ ಅನಾಥ ಗೋವುಗಳು ಅಪಘಾತಗೊಂಡು ನರಳುತ್ತಿದ್ದರೆ ಅಲ್ಲಿಗೆ ವೈದ್ಯರೊಂದಿಗೆ ಧಾವಿಸುವುದು ಈ ಸಂಸ್ಥೆ. ಅಲ್ಲದೇ, ಗೋಕಳ್ಳರಿಂದ ಕಸಾಯಿಖಾನೆಗೆ ಸಾಗಿಸುವಾಗ ಸಿಕ್ಕಿ ಬಿದ್ದ ಗೋವುಗಳನ್ನು ಠಾಣೆಗಳಿಂದ ಪಡೆದು ಅವುಗಳನ್ನು ಗೋಶಾಲೆ ಗಳಿಗೆ ಕಳುಹಿಸಿ ಅವುಗಳ ಭವಿಷ್ಯ ಕಾಪಾಡುವುದು ಈ ಸಂಸ್ಥೆಯ ಆದ್ಯತೆ. ಮೊನ್ನೆಯಷ್ಟೇ 15 ಲಕ್ಷ ರು. ಮೌಲ್ಯದ ಪಶು ಆಂಬ್ಯುಲೆನ್ಸ್ ವಾಹನವನ್ನು ರಸ್ತೆಗಿಳಿಸಿ ದ್ದಾರೆ.

ಹೀಗೆ ಪದೇಪದೇ ಗೋಶಾಲೆಗೆ ಗೋವುಗಳನ್ನು ರವಾನಿಸಿದರಷ್ಟೇ ಸಾಲದು, ಅವುಗಳ ನಿರ್ವಹಣೆಗಳಿಗಾಗಿ ಗೋಶಾಲೆಗಳಿಗೆ ಆರ್ಥಿಕ ಶಕ್ತಿಯನ್ನು ತುಂಬಲೇಬೇಕು. ಅದಕ್ಕೆಂದೇ ಗೋಭಕ್ತ ಮಹೇಂದ್ರ ಜೈನ್ ಪ್ರತಿವರ್ಷ ಜೂನ್ ಹನ್ನೆರಡರಂದು ಮಾತಾ ಪಿತೃಗಳ ಸ್ಮರಣಾರ್ಥವಾಗಿ ಗೋಶಾಲೆಗಳ ಅವಶ್ಯಕತೆಗಳಿಗನುಸಾರ ದೇಣಿಗೆಯನ್ನು ನೀಡಿ ಸಾವಿರಾರು ಗೋವುಗಳ ಗೋಪಾಲಕ ರಾಗಿದ್ದಾರೆ. ಕಳೆದ ಹನ್ನೊಂದು ವರ್ಷಗಳಿಂದ ನಡೆಸಿಕೊಂಡು ಬರಲಾಗಿರುವ ಈ ಸೇವೆಗೆ ಕಳೆದ ವರ್ಷ 34 ಲಕ್ಷ ನೀಡಿದ್ದರೆ ಈ ಬಾರಿ ೪೧ ಲಕ್ಷ ನೀಡಿದ್ದಾರೆ.

ಇಷ್ಟೆಲ್ಲ ಇಲ್ಲಿ ಪ್ರಸ್ತಾಪಿಸಲು ಕಾರಣ ಒಂದು ಗೋಶಾಲೆಯನ್ನು ಸ್ಥಾಪಿಸಿ ಸಮರ್ಥವಾಗಿ ನಿರ್ವಹಿಸಬೇಕಾದರೆ ಅದಕ್ಕೆ ಸಾಕಷ್ಟು ಆರ್ಥಿಕ ನೆರವು ಬೇಕೇಬೇಕು. ಈ ನಿಟ್ಟಿನಲ್ಲಿ ಈಗಿನ ಬಿಜೆಪಿ ಸರಕಾರ ಒಂದು ಮಾನವೀಯ ಹೆಜ್ಜೆಯನ್ನಿಟ್ಟಿದ್ದು ಮೊನ್ನೆ ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿಯಲ್ಲಿ ‘ಸರಕಾರದ ಪ್ರಥಮ ಗೋಶಾಲೆ’ ಯನ್ನು ಉದ್ಘಾಟಿಸಲಾಗಿದೆ. ಅಲ್ಲದೆ ಜಿಲ್ಲೆಗೊಂದು ಗೋ ಶಾಲೆ ಸ್ಥಾಪಿಸುವ ಯೋಜನೆಗೆ ಚಾಲನೆ ನೀಡಲಾಗಿದ್ದು ಅದು ಆದಷ್ಟು ಬೇಗ ಕಾರ್ಯಸಿದ್ಧಿಗೊಂಡು ಗೋವುಗಳ ಹತ್ಯೆ ಕಡಿಮೆ ಯಾದರೆ ಸರಕಾರಗಳ ಮೇಲಿನ ಶಾಪಗಳು ಕಡಿಮೆಯಾಗಬಹುದು.

ಗೋಭಕ್ತರಾದ ಬಂಜಾರ ಸಮುದಾಯದ ಸಂತ ಸೇವಾಲಾಲ್ ಅವರ ಅನುಯಾಯಿಯಾದ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರ ಇಚ್ಛಾಶಕ್ತಿಯಿಂದಾಗಿ ಈ ಮಹತ್ವದ ಯೋಜನೆ ಆರಂಭಗೊಂಡು ಸರಕಾರವೇ ಗೋಶಾಲೆಗಳನ್ನು ನಿಭಾಯಿಸಿ ಗೋವುಗಳನ್ನು ಸಂರಕ್ಷಿಸುವ ಇಂಥ ಯೋಜನೆ ಗ್ರಾಮೀಣಾಭಿವೃದ್ಧಿಯ ಒಂದು ಭಾಗವಾಗಬೇಕಿತ್ತು. ಇದು ಇಂದಲ್ಲ, ಸ್ವಾತಂತ್ರ್ಯ ಬಂದ ದಿನದಿಂದಲೇ ಜಾರಿಯಾಗಬೇಕಿತ್ತು. ಭಾರತ ಕೃಷಿಪ್ರಧಾನ ದೇಶ.

ಗೋವು ಮತ್ತು ರೈತ ದೇಶದ ಬೆನ್ನೆಲುಬು ಎಂಬುದನ್ನು ಪ್ರತಿಪಾದಿಸಿದ್ದ ಗಾಂಧೀಜಿಯ ಸಿದ್ಧಾಂತಕ್ಕೆ ಮೊದಲ ಪ್ರಾಶಸ್ತ್ಯ ನೀಡಿದ್ದರೆ ಇಷ್ಟೊತ್ತಿಗೆ ಭಾರತ ಗೋಸ್ವರ್ಗವಾಗುತಿತ್ತು. ದುರಂತವೆಂದರೆ ಹೊಲಸು ವೋಟ್‌ಬ್ಯಾಂಕ್ ರಾಜಕೀಯಕ್ಕಾಗಿ ಗೋವನ್ನು ಒಂದು ಕೋಮಿನ ಓಲೈಕೆಗಾಗಿ ವಧೆ ಮಾಡಬೇಕೆಂಬುದು ರಾಜಕೀಯ ಅಜೆಂಡಾ ಆಗಿ ಭಾರತೀಯ ಪರಂಪರೆಯ ಧಾರ್ಮಿಕ ಮತ್ತು ವೈಜ್ಞಾನಿಕ ಸಂಪತ್ತಾದ ಗೋವಿನ ಹತ್ಯಾಕಾಂಡ ಅಬಾಧಿತವಾಗಿಯೇ ನಡೆದುಕೊಂಡು ಬಂದಿದೆ.

ಸಚಿವ ಪ್ರಭುಚೌಹಾಣ್ ಅವರು ನಮ್ಮ ರೈತರು ಗೋವುಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಮನೆಯ ದೇವರಂತೆ ಭಾವಿಸಿರುತ್ತಾರೆ. ಅಸಲಿಗೆ ಮನುಷ್ಯನನ್ನು ಸಲಹುವುದೇ ಗೋವು. ಆದರೆ ಹೊಲದಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚಾ
ದಂತೆ ಗೋವುಗಳ ಮಹತ್ವವೂ ಕಳೆಗುಂದುತ್ತ ಬಂದು ರೈತನ ವೈಯಕ್ತಿಕ ಕಷ್ಟ ಸಾಲ ಬಡತನ ಇವುಗಳ ಪರಿಣಾಮವಾಗಿ ಅನೇಕ ರೈತರು ತಮ್ಮ ಗೋವುಗಳನ್ನು ಕಟುಕರಿಗೆ ಒಲ್ಲದ ಮನಸ್ಸಿನಿಂದಲೇ ಮಾರಿಕೊಳ್ಳುವುದು ಹೆಚ್ಚಾಯಿತು.

ಅನೇಕ ಹಳ್ಳಿಗಳಲ್ಲಿ ಕಸಾಯಿಖಾನೆ ಏಜೆಂಟರುಗಳು ರೈತರಿಗೆ ಆಮಿಷ ಒತ್ತಡವೇರಿ ಗೋವುಗಳನ್ನು ಕಸಾಯಿಖಾನೆಗಳಿಗೆ ಹೊತ್ತೊ ಯ್ಯುವ ಒಂದು ವ್ಯವಸ್ಥಿತಿ ಜಾಲವೇ ಕೆಲಸಮಾಡುತ್ತಿದೆ. ಇಂಥವರು ಕಾನೂನಿನ ಕಣ್ಣುತಪ್ಪಿಸಿ ಹೇಗೆ ಗೋವುಗಳನ್ನು ಸಾಗಿಸು ತ್ತಾರೆ, ಅವು ಪೊಲೀಸರ ಕಣ್ಣಿಗೆ ಕಂಡರೂ ಅಲ್ಲಿಂದ ಮುಂದೆಸಾಗಿ ಕಸಾಯಿಖಾನೆಯಲ್ಲಿ ಬಲಿಯಾಗುತ್ತದೆಂಬುದು ಪಿಎಚ್‌ಡಿ ವಿಷಯವಲ್ಲ.

ಗೋಹತ್ಯೆ ಅತ್ಲಾಗಿರಲಿ, ಮೊದಲಿಗೆ ರೈತರು ತಮ್ಮ ಗೋವುಗಳನ್ನು ಕಟುಕರಿಗೆ ಮಾರದಂಥ ಸ್ಥಿತಿಯನ್ನು ಸರಕಾರ ಸೃಷ್ಟಿಸ ಬೇಕಿದೆ. ರೈತರು ಗೋವುಗಳನ್ನು ಮಾರುವುದು ಯಾವಾಗ ಎಂದರೆ ಅದು ಹಾಲು ನೀಡುವ ಕಾಲ ಮುಗಿದಾಗ, ಹೊಲದಲ್ಲಿ ದುಡಿಯುವ ಸಾಮರ್ಥ್ಯ ಕ್ಷೀಣಿಸಿದಾಗ ಮತ್ತು ಆಕಳು ಗಂಡು ಮರಿಯನ್ನು ಹಡೆದಾಗ. ಒಂದೊಮ್ಮೆ ಇಂಥ ಗೋವುಗಳು ಕೊನೆ ಯವರೆಗೂ ನೀಡುವ ಸಗಣಿ ಗೊಂದಿಷ್ಟು ಗಂಜಲಕ್ಕೊಂದಿಷ್ಟು ಎಂದು ದಿನಕ್ಕೆ ಹತ್ತು ರೂಪಾಯಿ ಸಿಕ್ಕರೂ ಸಾಕು ಆತ ಅವು ಗಳನ್ನು ಕೊನೆಯವರೆಗೂ ಸಾಕುತ್ತಾನೆ. ರೈತ ತನ್ನ ಗೋವುಗಳನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲವೆಂದು ನಿರ್ಧರಿಸುತ್ತಾನೋ ಅಂಥವನ ಮುಂದೆ ಮಂತ್ರಿ ಪ್ರಭುಚೌಹಾಣ್ ಪ್ರತ್ಯೇಕ್ಷವಾಗಿ ಅವುಗಳನ್ನು ಖುದ್ದು ಸರಕಾರವೇ ಇಂತಿಷ್ಟು ಬೆಲೆಗೆ ಖರೀದಿಸಿ ಸರಕಾರಿ ಗೋಶಾಲೆಗಳಿಗೆ ಬಿಟ್ಟುಕೊಳ್ಳಬೇಕು.

ಇದಕ್ಕಾಗಿ ಬಜೆಟ್‌ನಲ್ಲಿ ನಿಧಿಯೊಂದನ್ನು ಸ್ಥಾಪಿಸಲಿ ಬಿಡಿ. ಸಾರ್ವಜನಿಕರ ತೆರಿಗೆ ಹಣ ಯಾವುದ್ಯಾವುದೋ ರೂಪದಲ್ಲಿ ಕಳ್ಳಲೆಕ್ಕ ದಿಂದ ಪೋಲಾಗುತ್ತಿರುವಾಗ ಅಮೃತ ಕುಡಿದು ವಿಷಕಕ್ಕುವ ಮನುಷ್ಯರಿಗಿಂತ ಕಸ ತಿಂದು ಅಮೃತ ಸಮನಾದ ಹಾಲನ್ನು ನೀಡುವ ಗೋವಿನ ಉಳಿವಿಗಾಗಿ ಒಂದು ಪಾಲಿನ ಹಣ ವಿನಿಯೋಗಿಸಿದರೆ ಯಾವ ಪಾಪವೂ ಬರುವುದಿಲ್ಲ. ಇನ್ನೂ ಕೋಟಿ ಪುಣ್ಯ ಬರುತ್ತದೆ.

ದೇಶವೂ ಸಂವೃದ್ಧಿಯಾಗುತ್ತದೆ. ಇದಕ್ಕಾಗಿ ಇಲಾಖೆ ‘ಗೋ-ಗಣತಿ’ ಮಾಡಿ ಪ್ರತಿಯೊಂದು ಗೋವಿನ ಸದಸ್ಯತ್ವವನ್ನು ನೋಂದಾ ಯಿಸಿಕೊಳ್ಳಬೇಕು. ಇದಕ್ಕಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಕಾರ್ಯಗಾರವನ್ನು ಸ್ಥಾಪಿಸಿ ಪ್ರತಿಯೊಂದು ಗೋವುಗಳ ಲೆಕ್ಕ ಇಡಬೇಕು. ಯಾವ ರೈತ ತನ್ನ ಗೋವನ್ನು ಸಾಕಲು ನಿರಾಕರಿಸುತ್ತಾನೋ ಆತನಿಗೆ ಒಂದಿಷ್ಟು ಹಣವನ್ನು ಪಂಚಾಯಿತಿಯ ಅಧಿಕಾರಿಯೇ ನೀಡಿ ಸ್ಥಳೀಯ ಗೋಶಾಲೆಗೆ ಸಾಗಿಸುವ ಕರ್ತವ್ಯ ನಿರ್ವಹಿಸಬೇಕು. ಹೀಗೆ ಗೋಶಾಲೆಯನ್ನು ಸ್ಥಾಪಿಸಿದ ಪುಣ್ಯ ಕಾರ್ಯದಂತೆಯೇ ಅದನ್ನು ಯಶಸ್ವಿ-ಸಾರ್ಥಕವಾಗಿ ನಿರ್ವಾಹಿಸಬೇಕಾದ ಸವಾಲು ಮತ್ತು ಗುರುತರ ಹೊಣೆಗಾರಿಕೆಯೂ ಇದೆ.

ಹೀಗೆ ಕಸಾಯಿಖಾನೆಯ ಶಾಪದಿಂದ ಮುಕ್ತವಾಗುವ ಗೋವುಗಳ ಸಗಣಿ ಗಂಜಲದಿಂದ ವೈಜ್ಞಾನಿಕವಾಗಿ ಏನೇನು ಲಾಭಗಳನ್ನು ಪಡೆಯಬಹುದೆಂಬುದನ್ನು ಹೇಳಬೇಕಾದ ಅವಶ್ಯಕತೆಯಿಲ್ಲ. ಬೇಕಿದ್ದರೆ ರಾಮಚಂದ್ರಾಪುರ ಮಠವನ್ನು ಸಂಪರ್ಕಿಸಬಹುದು. ಆಯುರ್ವೇದ ಔಷಧ ವಿಜ್ಞಾನವನ್ನು ಅವಲೋಕಿಸಿ ಅನುಷ್ಠಾನಗೊಳಿಸಬಹುದು. ಸರಕಾರ ಜಿಗೆ ಒಂದಲ್ಲ, ಹತ್ತು ಗೋಶಾಲೆ ಗಳನ್ನು ಸ್ಥಾಪಿಸಿದರೂ ಚಿಂತಿಸಬೇಕಿಲ್ಲ. ಕಾರಣ ಕೊಲ್ಲುವವರು ನಾಲ್ಕು ಮಂದಿ ಇದ್ದರೆ ಕಾಯುವವರು ಸಾವಿರ ಮಂದಿ
ಇರುತ್ತಾರೆ. ಗೋವಿನ ಉಳಿವಿಗಾಗಿಯೇ ಸಮಾಜದಲ್ಲಿ ಒಂದು ದೊಡ್ಡ ಮನುಷ್ಯಕುಲವೇ ಅಸ್ತಿತ್ವದಲ್ಲಿದೆ.

ಗೋವನ್ನು ಆ ಜನ್ಮ ಭಕ್ತರಾಗಿ ಆರಾಧಿಸುವ ಜೈನರು ಪಟೇಲರು ಒಳಗೊಂಡ ಉತ್ತರ ಭಾರತದ ಸಮುದಾಯದವರು ತಮ್ಮ
ದುಡಿಮೆಯ ಒಂದುಪಾಲನ್ನು ಕಾಮಧೇನುವಿಗಾಗಿಯೇ ಮೀಸಲಿಡುತ್ತಾರೆ. ಅಂಥವರು ಆ ಹಣ ವನ್ನು ಅಮಾವಾಸ್ಯೆ-ವಿಶೇಷ ದಿನಗಳಂದು ಗೋಶಾಲೆಗಳಲ್ಲಿ ನಡೆಯುವ ಗೋ-ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ತಮ್ಮ ಹರಕೆ ರೂಪದ ಹಣವನ್ನು ದೇಣಿಗೆಯಾಗಿ ನೀಡುತ್ತಾರೆ.

ಇಂಥವರಿಂದಲೇ ಇಂದು ದೇಶಾದ್ಯಂತ ಗೋಶಾಲೆಗಳು ವ್ಯವಸ್ಥಿತವಾಗಿ ನಡೆಯುತ್ತಿದೆ. ಸರಕಾರ ಇಂಥ ಗೋಭಕ್ತರ ವಿಶ್ವಾಸ ನಂಬಿಕೆಯನ್ನು ಗಳಿಸಿಕೊಂಡರಷ್ಟೇ ಸಾಕು ಗೋಶಾಲೆಯನ್ನು ನಿರ್ವಹಿಸಲು ಸರಕಾರದ ಹಣವೇ ಬೇಕಿಲ್ಲ. ಕೇವಲ ರೈತರಿಂದ ಗೋವುಗಳನ್ನು ಖರೀದಿಸಿ ತಂದು ಗೋಶಾಲೆ ಸೇರಿಸುವ ಕಾನೂನಾತ್ಮಕ ಕರ್ತವ್ಯ ತೋರಿದರಷ್ಟೇ ಸಾಕು. ಇಂಥ ಅನುಕೂಲಕರ ಅವಕಾಶವನ್ನು ಬಿಟ್ಟು ಗೋಶಾಲೆಯ ಹೆಸರಿನಲ್ಲಿ ಸರಕಾರದಿಂದ ಕೋಟ್ಯಂತರ ಹಣವನ್ನು ಬಿಡುಗಡೆಗೊಳಿಸಿಕೊಂಡು ಗೋವುಗಳಿಗೆ ತಿನ್ನಿಸಬೇಕಾದ ಹುಲ್ಲು ಹಿಂಡಿಬೂಸವನ್ನು ಅಧಿಕಾರಿಗಳು ಸಿಬ್ಬಂದಿ ಮೇಯ್ದು ಗೋಶಾಲೆಯ ಗೋವುಗಳಿಗೆ ನರಕ ತೋರಿಸುವ ಸಾಧ್ಯತೆಯ ಬಗ್ಗೆ ಪ್ರಥಮವಾಗಿ ಎಚ್ಚರಿಕೆ ವಹಿಸಬೇಕು.

ಬೇಕಿದ್ದರೆ ಗೋಶಾಲೆಗಳಿಗೆ ದೇಣಿಗೆ ನೀಡುವ ಗೋಭಕ್ತರನ್ನೊಳಗೊಂಡ ಒಂದು ಸರಕಾರಿ ಸಮಿತಿ ರಚಿಸಿ ಖಾಸಗಿಯವರೂ ಗೋ ಶಾಲೆಯ ಪಾರದರ್ಶಕ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳುವಂಥ ವ್ಯವಸ್ಥೆಯನ್ನು ಮಾಡಲಿ. ನಿಜಕ್ಕೂ ಇಂಥ ಕೆಲಸ ಗಳನ್ನು ಸರಕಾರ ಮಾಡಿ ತೋರಿಸಿದರೆ ಆಗ ಗೋಹತ್ಯೆ ನಿಷೇಧ ಕಾಯಿದೆಯಾಗಲಿ, ಗೋಕಳ್ಳರನ್ನು ಹಿಡಿಯುವುದಾಗಲಿ, ಅವರ ಪರವಾಗಿ ನಿಲ್ಲುವ ಅಯೋಗ್ಯ ರಾಜಕಾರಣಿಗಳಾಗಲಿ, ಕಸಾಯಿಖಾನೆ ಏಜೆಂಟರುಗಳು, ಅವರಿಂದಾಗಿ ಪೊಲೀಸರು ಭ್ರಷ್ಟ ರಾಗುವುದಾಗಲಿ ಇದ್ಯಾವುದರ ಕರ್ಮ ಕಾಂಡವೂ ಸರಕಾರಕ್ಕೆ ಮತ್ತು ಸಮಾಜಕ್ಕೆ ಇರುವುದಿಲ್ಲ.

ಮಾರುವವನು ರೈತ-ಕೊಳ್ಳುವವನು ಸರಕಾರಿ ದೂತ ಎಂದಾದಮೇಲೆ ಮಧ್ಯದಲ್ಲಿ ರಾಕ್ಷಸರ ಪಾತ್ರವೇ ಇರುವುದಿಲ್ಲ. ಗಂಭೀರ ವಿಚಾರವೆಂದರೆ ಗೋಹತ್ಯೆ ನಿಷೇಧ ಕಾಯ್ದೆ ಯಾವ ಮಟ್ಟದಲ್ಲಿ ಕಿತ್ತು ಕೆರ ಹಿಡಿದಿದೆ ಎಂಬುದರ ಅನುಭೂತಿ ಪಡೆಯಬೇಕಾದರೆ
ಬೇರೆಲ್ಲೂ ಬೇಡ ಸನ್ಮಾನ್ಯ ಸಚಿವರಾದ ಪ್ರಭು ಚೌಹಾಣ್ ಅವರು ಸಾಮಾನ್ಯರಂತೆ ಬೆಂಗಳೂರಿನ ಪಾದರಾಯನಪುರ ಗೋರಿ ಪಾಳ್ಯದ ಗಲ್ಲಿಗಳಲ್ಲಿ ಸುತ್ತಿ ಬರಲಿ. ಅಲ್ಲಿನ ತಿಪ್ಪೆ ತೊಟ್ಟಿಗಳ ಮುಂದೆ ಪುಟ್ಟ ಪುಟ್ಟ ಗಂಡು ಕರುಗಳು ನಾಯಿಗಳಂತೆ ಹೊಸಲನ್ನು ಮೇಯುತ್ತಿರುತ್ತದೆ.

ಅಂಥ ಕರುಗಳಲ್ಲಿ ಹೆಚ್ಚಾಗಿ ದೇಸಿಯ ತಳಿಗಳದ್ದೇ ಆಗಿರುತ್ತದೆ. ಬೆಂಗಳೂರಿನಲ್ಲಿ ದೇಶಿಯ ತುರುಕರುಗಳನ್ನು ಕಾಣುವುದೇ  ಅಸಾದ್ಯ. ಆದರೆ ಅಲ್ಲಿ ಅಂಥ ದೇಸಿ ಗೋವುಗಳು ಹತ್ಯೆಗಾಗಿಯೇ ಬಂದು ತಲುಪಿರುತ್ತದೆ. ಅವುಗಳನ್ನು ಗ್ರಾಮೀಣ ಭಾಗ ಗಳಿಂದಲೇ ಕದ್ದು ಸಾಗಿಸಲಾಗಿರುತ್ತದೆ. ಗಮನಾರ್ಹವೆಂದರೆ ಅಷ್ಟು ದೂರದಿಂದ ಗೋರಿಪಾಳ್ಯದ ಗಲ್ಲಿಗಳಿಗೆ ತಲುಪಿದೆಯೆಂದರೆ  ಕಾನೂನು ಕಾಯ್ದೆ ಪೊಲೀಸರನ್ನು ದಾಟಿಯೇ ಬಂದಿರುತ್ತದೆ.

ಇಂಥ ಗಲ್ಲಿಗಳಲ್ಲಿ ದೇಶದ ಕಾನೂನು ಸಂವಿಧಾನ ಮಾನವೀಯತೆ ಎಲ್ಲವೂ ಗೋಹತ್ಯೆಯಂತೆ ರಕ್ತ ಕಾರಿಕೊಂಡು ಸತ್ತಿರುತ್ತದೆ. ಆದರೆ, ಬಿಜೆಪಿ ಮಾತ್ರ ನಾವುಗಳು ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದಿದ್ದೇವೆಂದು ಹೇಳಿಕೊಳ್ಳುತ್ತದಷ್ಟೆ. ನಿಜಕ್ಕೂ ಸರಕಾರಕ್ಕೆ ಧೈರ್ಯ ಗುಂಡಿಗೆಯಿದ್ದರೆ ಇಂಥ ಪ್ರದೇಶಗಳಿಗೆ ನುಗ್ಗಿ ಅಲ್ಲಿ ಅಕ್ರಮವಾಗಿ ಹತ್ಯೆಗೆಂದೇ ತರಲಾದಂಥ ಗೋವುಗಳನ್ನು ಸಾರಿಗೆ ಇಲಾಖೆಯ ಟೈಗರ್‌ನಂತೆ ಲಾರಿಯಲ್ಲಿ ತುಂಬಿಸಿಕೊಂಡು ತಮ್ಮ ಸರಕಾರಿ ಗೋಶಾಲೆಗಳಿಗೆ ಬಿಡಲಿ, ಆ ಮೂಲಕ ಗಾಂಧೀಜಿಯವರ ಆತ್ಮಕ್ಕೆ ಶಾಂತಿ ತರಲಿ. ಅಂಥ ಗಂಡಸುತನ ಸರಕಾರಕ್ಕೆ ಇದೆಯೇ? ಪ್ರಭುಚೌಹಾಣ್ ಅವರೇ ಉತ್ತರಿಸುವಿರಾ?