ಪ್ರಾಣೇಶ್ ಪ್ರಪಂಚ
ಗಂಗಾವತಿ ಪ್ರಾಣೇಶ್
ಓದೆಂಬುದು ಎಂದಿನಿಂದಲೂ ನನಗೆ ಬಹು ದೊಡ್ಡ ಬೆನ್ನೆಲುಬು, ಸಂಗಾತಿ, ಮಿತ್ರ, ಬಂಧು ಎಕ್ಸೆಟ್ರಾ.. ಎಕ್ಸೆಟ್ರಾ. ಕಾವ್ಯ, ಕಾದಂಬರಿ, ಅಧ್ಯಾತ್ಮ, ಉಪನಿಷತ್ತು, ಪುರಾಣಗಳ ಓದು ಮುಗಿಯಿತೆಂದರೆ ಅಥವಾ ಕಣ್ಣು, ಮೆದುಳಿಗೆ ಸ್ವಲ್ಪ ಚೇಂಜ್ ಬೇಕೆನಿಸಿದರೆ, ನಾನಾಗ ತೆಗೆದುಕೊಳ್ಳುವುದು ಸ್ಮರಣ ಸಂಚಿಕೆಗಳನ್ನು.
ನಾನು ಕಾರ್ಯಕ್ರಮ ಕೊಟ್ಟ ಸಂಸ್ಥೆಗಳ ರಜತ ಮಹೋತ್ಸವ, ಸುವರ್ಣ ಮಹೋತ್ಸವ, ದಶಮಾನೋತ್ಸವ ಗಳಲ್ಲಿ ಮುದ್ರಣಗೊಂಡು ಕಾರ್ಯಕ್ರಮಗಳಲ್ಲಿ ನನಗೆ ನೆನಪಿನ ಕಾಣಿಕೆಗಳ ಜತೆಗೆ ಕೊಟ್ಟ ಈ ಸ್ಮರಣ ಸಂಚಿಕೆಗಳನ್ನು ಮುಂದೆ ಹರಡಿಕೊಂಡು ಕೂರುತ್ತೇನೆ.
ಅದರಲ್ಲಿನ ಹಳೇ ಫೋಟೋ ಗಳನ್ನು, ಲೇಖನಗಳನ್ನು, ಆ ಸಂಸ್ಥೆ ನಡೆದುಬಂದ ದಾರಿಗೆ ಸಂಬಂಧಪಟ್ಟ ಲೇಖನಗಳನ್ನು ಓದುವಾಗ ಹಳೆ ನೆನಪುಗಳು, ಅಂದಿನ ಅನುಭವಗಳು ನೆನಪಾಗಿ, ಭೂಪತಿರಂಗ ಚಿತ್ರದ ಈ ದಿನ ಇಲ್ಲಿ ನಾಳೆ ಅದೆಲ್ಲೋ, ಅಂದಿನ ದಿನಗಳು ಇಂದೆಲ್ಲೋ ಹಾಡು ಎದೆಮೀಟುತ್ತದೆ. ನಾನೂ ಸವೆಸಿದ ಈ ಕಾರ್ಯಕ್ರಮಗಳ ದಾರಿಗೆ ಈಗ ಮೂವತ್ತು ವರ್ಷಗಳಾಗಿ ಹೋದವು.
ಎಷ್ಟೋ ಸ್ಮರಣ ಸಂಚಿಕೆಗಳಲ್ಲಿ ನನ್ನ ಫೋಟೋಗಳು, ಕಾರ್ಯಕ್ರಮದ ಫೋಟೋಗಳು, ಕರೆಸಿದ ಆ ಮಹನೀ ಯರು, ನನ್ನನ್ನು ಹರಸಿ ಬೆಳೆಸಿದ ಆ ಊರ ಜನರ, ಜನಸಂದಣಿಯ ಫೋಟೋಗಳು ಹಿಂದು ಹಿಂದಕ್ಕೆ ಕರೆದೊಯ್ಯುತ್ತವೆ. ಮೂವತ್ತು ವರ್ಷಗಳಷ್ಟು ದೀರ್ಘಕಾಲ ಇದು ನಡೆದೀತು, ನಾನು ಈ ಉದ್ಯೋಗದಲ್ಲಿ
ಉಳಿದೇನು, ಎಂಬ ನಂಬಿಕೆಯೇ ನನಗಿರಲಿಲ್ಲ. ದೇವರು ಹರಸಿದ. ಸಂಘಟಕರು ಕರೆಸಿದರು, ಜನರು ಪ್ರೋತ್ಸಾ ಹಿಸಿದರು, ಪತ್ರಿಕೆ ಮಾಧ್ಯಮಗಳು ಬೆಂಬಲಕ್ಕೆ ನಿಂತರು, ಎಲ್ಲರೂ ಸೇರಿ ನನ್ನ ಬದುಕಿನ ಬಂಡಿಯನ್ನು ಮುಂದೆ ಮುಂದೆ ತಳ್ಳಿದರು, ಮೂವತ್ತು ವರ್ಷ ಸೈಕಲ್‌ನಿಂದ ಹಿಡಿದು, ವಿಮಾನದವರೆಗೂ ಎಲ್ಲ ವಾಹನ ಗಳನ್ನು ಹತ್ತಿಳಿದೆ, ಹೆಸರೂ ಕೇಳದ ಊರಿಗೆಲ್ಲ ಹೋಗಿಬಂದೆ.
ಕೋಟಿ ಕೋಟಿ ಕನ್ನಡಿಗರೆಲ್ಲ ತಮ್ಮ ನಾಲಿಗೆಯ ಮೇಲೆ ನಿಲ್ಲಿಸಿಕೊಂಡರು, ತಮ್ಮ ಹೃದಯದಲ್ಲಿ ಸ್ಥಾನ ಕೊಟ್ಟರು. ಇವೆಲ್ಲ ನೆನಪಾದದ್ದು ಮೊನ್ನೆ ಸುಮಾರು ನಲವತ್ತು, ಐವತ್ತು ಸ್ಮರಣ ಸಂಚಿಕೆಗಳನ್ನು ಹರಡಿ ಕೊಂಡು ನೋಡುತ್ತಾ ಕುಳಿತಾಗ, ಅದರಲ್ಲೂ ಗೆಳೆಯ ಸುರದ್ರೂಪಿ, ಅಚ್ಚ, ಶುದ್ಧ, ನಿರರ್ಗಳ, ಮೋಹಕ ಮಾತಿನ ಸದಾ ಸರ್ವದಾ ನಗು ಮೊಗದ ಕನ್ನಡದ ಕಟ್ಟಾಳು ಆಗಿದ್ದ ದಿ|| ಸಂಜೀವ ಕುಲಕರ್ಣಿ ಯವರಿದ್ದಾಗ
ಆಚರಿಸಿದ ಅವರ ಸಂಭ್ರಮ ಸೌರಭದ ‘ನೂರರ ಹರ್ಷ, ಹತ್ತನೆಯ ವರ್ಷ’ದ ನೂರು ಮಾಸಗಳ ಕನ್ನಡ ಬುತ್ತಿ ಪ್ರಣತಿ ಎಂಬ ೨೦೧೩ರಲ್ಲಿ ತಂದ ಸ್ಮರಣ ಸಂಚಿಕೆ ಇದೆಯಲ್ಲ!
ಅಬ್ಬಾ, ನಯನ ಮನೋಹರ, ಹೃದಯಂಗಮ ಕಣ್ಮನಗಳಿಗೆ ಹಬ್ಬ, ಮುದ ನೀಡುವುದು ಎನ್ನುತ್ತಾರಲ್ಲ, ಇಂಥವುಗಳನ್ನು ನೋಡುವುದಕ್ಕೆ ಇರಬೇಕೆನಿಸಿತು. ಪ್ರಣತಿ ಸಂಚಿಕೆಯ ಪುಟ ತಿರುವುತ್ತಾ ಕೂತು ನೋಡು ತ್ತಿದ್ದರೆ, ಕಣ್ಣಾಲಿಗಳು ತುಂಬಿ ಬಂದವು. ಸಂಜೀವ ಕುಲಕರ್ಣಿಯಂಥ ಸಂಘಟಕರನ್ನು ಕನ್ನಡ ಪ್ರೇಮಿಯನ್ನು, ನಮ್ಮಿಂದ ದೂರ ಮಾಡಿದ ವಿಧಿಯನ್ನು ಶಪಿಸದೇ ಇರಲು ಸಾಧ್ಯವೇ ಇಲ್ಲ. ಏನು ಅವಸರವಿತ್ತು ಆ ವಿಧಿಗೆ, ಅದೆಷ್ಟು ಕೆಲಸ, ಬೇಡಿಕೆ ಇತ್ತು ಅವರಿಗೆ.
ಸಂಜೀವ ಕುಲಕರ್ಣಿಯಿಂದ ಸೂರ್ತಿ, ಮಾರ್ಗದರ್ಶನ ಪಡೆಯಲು ಕಾಯುತ್ತಿದ್ದ ಸಹಸ್ರ ಸಹಸ್ರ ಯುವಕ ರಿದ್ದರು. ಆ ವಿಧಿಗೆ ಒಯ್ಯಲು ಕನ್ನಡದ ಹೆಸರು ಹೇಳಿಕೊಂಡು, ಹಣ, ಹೆಸರು, ಅಧಿಕಾರ ಬಯಸುತ್ತಿರುವ ಕಳ್ಳರ ಹಿಂಡೇ ಇತ್ತು. ಆದರೆ, ಸಾವೂ ಕೂಡ ಸತ್ಯವಂತರನ್ನೇ ಬಯಸುತ್ತದೆಯೋ ಏನೋ? ಎನಿಸಿಬಿಟ್ಟಿತು.
ಪ್ರತಿ ತಿಂಗಳ ಎರಡನೇ ಭಾನುವಾರ ಸಂಜೆ ಕೌಟುಂಬಿಕ ವಾತಾವರಣದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ, ಸಂಗೀತ, ಸಾಹಿತ್ಯಿಕ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಿದ ದಿ|| ಸಂಜೀವ ಕುಲಕರ್ಣಿ ಹಾಗೂ ಶ್ರೀಮತಿ ಭಾಗ್ಯ ಸಂಜೀವ ಕುಲಕರ್ಣಿ ತಮ್ಮ ಜತೆಗೆ ಆಜೀವ ಸದಸ್ಯರ ದೊಡ್ಡ ಸಹೃದಯರ ಕನ್ನಡ ಪ್ರೇಮಿಗಳ, ತಂಡದೊಂದಿಗೆ ಅದ್ಭುತ, ಅತ್ಯದ್ಭುತ, ಅಮೋಘ, ಸ್ಮರಣೀಯ, ಶ್ರೇಷ್ಠ ಎಂಬ ಉದ್ಗಾರ ತೆಗೆಯುವಂಥ
ಕಾರ್ಯಕ್ರಮಗಳನ್ನು ಮಾಡಿದರು.
ಅದೇ ತಾನೆ ಅಲ್ಲಲ್ಲಿ ಒಂದೊಂದು ಕಾರ್ಯಕ್ರಮ ನೋಡುತ್ತಿದ್ದ ನನ್ನನ್ನು ಕೂಡಾ ಮೂರು, ನಾಲ್ಕು ಸಾರಿ ಕರೆಸಿ ಬೆಂಗಳೂರು ಜನತೆಗೆ ನನ್ನನ್ನು ಪರಿಚಯಿಸಿದರು. ಅವರ ಹೃದಯದಲ್ಲಿ ಸೀಟ್ ಕೊಡಿಸಿದರು. ಸಂಭ್ರಮ ಸೌರಭಕ್ಕೆ ಬಾರದ ಕನ್ನಡದ ಪ್ರತಿಭೆಗಳೇ ಇಲ್ಲ. ನಟರು, ನಾಯಕರು, ಪತ್ರಕರ್ತರು, ಕುಂಚ ಹಿಡಿದ ಕಲಾವಿದರು, ಕೆಲವು ಅನಿವಾರ್ಯ ಕಾರಣಗಳಿಗೆ ಸಂಚು ಮಾಡುವ ರಾಜಕಾರಣಿಗಳನ್ನೂ ಕರೆಸಬೇಕಾ ಯಿತು.
ನಿರ್ಮಾಪಕರು, ನಿರ್ದೇಶಕರು, ಮಿಮಿಕ್ರಿ ಕಲಾವಿದರು, ನಗೆ ಕಲಾವಿದರು, ಅವಧಾನಿಗಳು, ಶತಾವಧಾನಿಗಳು, ಕನ್ನಡ ಪೂಜಾರಿಗಳು, ಮೂಲೆ ಮೂಲೆ ಹುಡುಹುಡುಕಿ ಪ್ರತಿಭೆಗಳನ್ನು ಬೆಂಗಳೂರಿಗೆ ಕರೆಸಿಕೊಂಡರು. ಹಗಲು ರಾತ್ರಿ ಸೇರಿ ನೂರು ಗಂಟೆ ನಾನ್‌ಸ್ಟಾಪ್ ಕಾರ್ಯಕ್ರಮ ನೀಡಿ ದಾಖಲೆ ಮಾಡಿದ ಕನ್ನಡ ಸಂಸ್ಥೆ ಸಂಭ್ರಮ ಸೌರಭ.
ನಾನು ನಾಲ್ಕೆ ದು ಸಾರಿ ಹೋಗಿದ್ದೇನೆ. ಅದರಲ್ಲಿ ನನಗೆ ನೆನಪುಳಿದಿದ್ದು ಹಿರಿಯ ಗಾಯಕ ದಿ|| ಪಿ.ಬಿ ಶ್ರೀನಿವಾಸ ಬಂದ ಕಾರ್ಯಕ್ರಮ ೮೮ನೇ ಮಾಸದ ಸಂಭ್ರಮ. ಪಿ.ಬಿ. ಶ್ರೀನಿವಾಸರ ಕಂಠ, ರಾಜಕುಮಾರರ ಮುಖವನ್ನೇ ಕಣ್ಮುಂದೆ ತರುತ್ತದೆ. ಬಾಲ್ಯ, ಯೌವ್ವನಗಳೆರಡನ್ನೂ ನಾನು, ನನ್ನ ತಮ್ಮ ಸ್ವಾಮಿ, ರಾಜಕು ಮಾರ ಸಿನಿಮಾಗಳನ್ನು ಪಿ.ಬಿ. ಶ್ರೀನಿವಾಸರ ಹಾಡುಗಳನ್ನು ಕೇಳುವುದರಲ್ಲೇ ರೂಪಿಸಿಕೊಂಡೆವು.
ಪಿ.ಬಿ ಹಾಡಿಗೆ ರಾಜಕುಮಾರರ ತುಟಿ ಚಲನೆ ಅದೆಂಥ ಅದ್ಭುತ ಸಮ್ಮಿಳನ ಗೊತ್ತೆ? ಅದನ್ನು ಅನುಭವಿಸಿ ದವರೇ ಹೇಳಬಲ್ಲರು. ನನ್ನ ತಮ್ಮ ತೀರಿಕೊಂಡ ಮೇಲೆ ಈಗ ರಾಜ್ ಅಭಿನಯ, ಪಿ.ಬಿ ಹಾಡಿಗೆ ತಮ್ಮನೂ ನೆನಪಾಗಿ ಸುಖ, ದುಃಖಗಳ ಸಮ್ಮಿಶ್ರ ಭಾವನೆಗಳನ್ನು ಅನುಭವಿಸುತ್ತಿದ್ದೇನೆ. ಅಂಥ ಪಿ.ಬಿ.ಎಸ್‌ರನ್ನು ಅತ್ಯಂತ ಹತ್ತಿರದಲ್ಲಿ ನೋಡಿದೆ. ತೀರಾ ವಯಸ್ಸಾಗಿ ದೇಹದೊಂದಿಗೆ ಧ್ವನಿ ನಡುಗುತ್ತಿತ್ತು. ಅವರು ವೇದಿಕೆ ಏರಿ ಕೂತ
ಕೂಡಲೇ ಹಿಂಬದಿ ಪರದೆಯ ಮೇಲೆ ಶರಪಂಜರ ಸಿನಿಮಾದ ಕಾವೇರಿ ಸ್ತೋತ್ರ ‘ಕುಲಮಾತೇತು ಕಾವೇರಿ, ಸರ್ವತೀರ್ಥಾ ಶ್ರಿತ ನದಿ ಪಂಚಪಾತಕ ಸಂಹರ್ತಿ ವಾಹಿನೇತೂ ಫಲಪ್ರಧ ಭಕ್ತಾನು ಕಂಪೆ ಮುನಿ ಭಾಗ್ಯಲಕ್ಷ್ಮಿ, ನಿತ್ಯೇ ಜಗನ್ಮಂಗಳ ದಾನಶೀಲೆ, ನಿರಂಜನೇ, ದಕ್ಷಿಣ ದೇಶ ಗಂಗೆ ಕಾವೇರಿ, ಕಾವೇರಿ ಮಮ ಪ್ರಸೀದ’ ಎಂಬ ಸಿನಿಮಾದ ಕ್ಲಿಪ್ಪಿಂಗ್ ಪ್ಲೇ ಮಾಡಲಾಯಿತು.
ವಯೋಸಹಜ ದೇಹಕ್ಷೀಣತೆ ಯಿಂದ ಪಿ.ಬಿ.ಎಸ್ ಬೊಚ್ಚು ಬಾಯಿ ತೆರೆದು, ನನ್ನ ಈ ಧ್ವನಿ ಎಲ್ಲಿಂದ ಬಂತು ಎಂಬಂತೆ ಅದನ್ನು ಕೇಳಿಸಿಕೊಳ್ಳಲು ಹುಡುಕಾಡಿ, ಹಿಂಬದಿ ಪರದೆ ನೋಡುತ್ತಾ ತಮ್ಮ ವಾಕಿಂಗ್ ಸ್ಟಿಕ್ ಅನ್ನು ಗಲ್ಲಕ್ಕೆ ಊರಿಕೊಂಡು ಅದನ್ನು ನೋಡುತ್ತಾ ಕೇಳಿಸಿಕೊಂಡ ಪರಿ ಇದೆಯಲ್ಲಾ ಅಮೋಘ. ಸಾಧಕನೊಬ್ಬನು ಇಳಿವಯಸ್ಸಿನಲ್ಲಿ ತನ್ನ ಏರು ವಯಸ್ಸಿನ ಕಂಠಸಿರಿಗೆ ಮಾರುಹೋದ ಕ್ಷಣಕ್ಕೆ ಸಾಕ್ಷಿಯಾಗಿತ್ತು.
ಧನ್ಯ ಕಲಾವಿದ ಜೀವನ ಎನಿಸಿಬಿಟ್ಟಿತು. ಇಂಥವುಗಳನ್ನೆಲ್ಲ ವ್ಯವಸ್ಥೆ ಮಾಡಿದ್ದ ಗೆಳೆಯ ಸಂಜೀವ ಕುಲಕರ್ಣಿ ಎಂಥ ಭಾವುಕ ಜೀವಿಯಾಗಿದ್ದರು, ಕಲಾವಿದರ ತುಡಿತಗಳನ್ನು ಬಲ್ಲವರಾಗಿದ್ದರು ಎಂಬುದನ್ನು ನೆನೆದು ಕಣ್ಣೀರು ಸ್ಮರಣ ಸಂಚಿಕೆಯ ಮೇಲೆ ಬಿದ್ದವು. ಅಶ್ರುತರ್ಪಣ ಕ್ಕಿಂತ ಬೇರೆ ತರ್ಪಣವಿಲ್ಲ ಎನಿಸಿಬಿಟ್ಟಿತು. ಇಂಥ ಕಾರ್ಯಕ್ರಮಗಳನ್ನು ಯೋಜಿಸಿ, ಆಹ್ವಾನಿಸುತ್ತಿದ್ದ ಆ ಗೆಳೆಯ ಇನ್ನೆಲ್ಲಿ ಸಿಕ್ಕಾನು ಎನಿಸಿಬಿಟ್ಟಿತು. ಅವರ ಸಹಧರ್ಮಿಣಿ ಶ್ರೀಮತಿ ಭಾಗ್ಯ ಸಂಜೀವ ಕುಲಕರ್ಣಿ, ಮಗ ಕಿರುತೆರೆಯ ಅಪ್ಪಟ ಉತ್ತರ ಕರ್ನಾಟಕದ ಪ್ರತಿಭೆ ಸೌರಭ ಕುಲಕರ್ಣಿ ಅವರ ಗುರಿ, ಆಸೆ, ಕನಸುಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
ಅವರಿಗೆ ಕನ್ನಡಗಿರೆಲ್ಲರೂ ಬೆಂಬಲ ನೀಡುತ್ತಾರೆಂದು ಭಾವಿಸಿದ್ದೇನೆ. ಹಾಗೆಯೇ ಮತ್ತೊಂದು ಸ್ಮರಣ ಸಂಚಿಕೆ ಬನ್ನಂಜೆ ಷಡ್ದರ್ಶನ, ಇತ್ತೀಚೆಗೆ ಅಗಲಿದ ವಿದ್ವತ್ ಸಾಮ್ರಾಜ್ಯದ ದೈತ್ಯ ಪ್ರತಿಭೆ ಮಾನವ ಕಂಪ್ಯೂಟರ್ ದಿ|| ಬನ್ನಂಜೆ ಗೋವಿಂದಾಚಾರ್ಯರರಿಗೆ ಎಂಭತ್ತು ತುಂಬಿದ ಸಂದರ್ಭದಲ್ಲಿ ನಡೆದ ನಭೂತೋ ನಭವಿಷ್ಯತಿ ಕಾರ್ಯಕ್ರಮ. ಇದೂ ಕೂಡಾ ಅತಿರಥ, ಮಹಾರಥ, ದಿಗ್ಗಜ, ಅಷ್ಟದಿಗ್ಗಜರ ಸಮಾವೇಶ, ಇಂಥಲ್ಲಿ ವೇದಿಕೆ ಏರುವುದು ಮುಖ್ಯವಲ್ಲ, ಭಾಗವಹಿಸುವುದೇ ಮಹಾಭಾಗ್ಯ ಎನಿಸುವಂಥ ಕಾರ್ಯಕ್ರಮ.
ತಾವಿರುವ ಊರಲ್ಲಿ ಅಷ್ಟೋ ಇಷ್ಟೋ ಓದಿಕೊಂಡು ತೋಚಿದ್ದು ಗೀಚಿಕೊಂಡು, ಲಕ್ಷ್ಮೀಪುತ್ರರ ಮರ್ಜಿ ಹಿಡಿದು ಪುಸ್ತಕ ಪ್ರಿಂಟ್ ಮಾಡಿಕೊಂಡು ತಾವೇ ಸರಸ್ವತಿಯ ಖಾಸಾ ಪುತ್ರರೆಂಬಂತೆ ಬೀಗುವ ಕವಿ, ಸಾಹಿತಿ, ಲೇಖಕ, ಚಿಂತಕ, ಬುದ್ಧಿಜೀವಿ ಬಿರುದಾಂಕಿತರು ಜೀವನದಲ್ಲಿ ಒಮ್ಮೆಯಾದರೂ ಇಂಥ ಕಾರ್ಯಕ್ರಮ
ನೋಡಬೇಕು, ಜನರೊಟ್ಟಿಗೆ ಕೂತು ಕಾರ್ಯಕ್ರಮ ಕೇಳಬೇಕು.
ವಿದ್ಯಾವಿನಯೇನ ಶೋಭತೆ ಎಂಬುದನ್ನು ಇಲ್ಲಿ ಸೇರಿದ್ದ ವಿದ್ವಾಂಸರನ್ನು ಕಂಡು ಕಲಿಯಬೇಕಿತ್ತು. ನಿಜ ಹೇಳಬೇಕೆಂದರೆ, ಪಂಡಿತರನ್ನು, ಕಲಾವಿದರನ್ನು ಗೌರವಿಸುವ ರೀತಿಯನ್ನು ನಾವು ಬೆಂಗಳೂರು, ಮೈಸೂರು,
ಮಲೆನಾಡಿನ ಜನರಿಂದ ಕಲಿಯಬೇಕು. ಟು ದಿ ಪಾಯಿಂಟ್ ಎನ್ನುತ್ತಾರಲ್ಲ ಹಾಗೆ ಕಾರ್ಯಕ್ರಮ ಏರ್ಪಡಿಸು ತ್ತಾರೆ.
ಮೂಡುಬಿದಿರೆಯ ಮೋಹನ್ ಆಳ್ವಾರ ನುಡಿಸಿರಿ ಕಾರ್ಯಕ್ರಮವಂತೂ ದೇವಲೋಕದ ಸಭೆಗಳಂತಿರುತ್ತದೆ.
ಕಡಿಮೆ ಇಲ್ಲ, ಹೆಚ್ಚಿಲ್ಲ, ಅತಿರೇಕವಿಲ್ಲ. ರಾಜಕೀಯ ಮೊದಲೇ ಇಲ್ಲ, ರಾಜಕಾರಣಿಗಳಿಗೆ ಆಸ್ಪದವೇ ಇಲ್ಲ ಹೀಗಾಗಿ ಕಾರ್ಯಕ್ರಮಗಳು ಯಾವಜ್ಜೀವ ಸ್ಮರಣೆಯಲ್ಲಿರುತ್ತವೆ. ನಮ್ಮಲ್ಲಿ ಇತ್ತೀಚೆಗೆ ಮಾರ್ಚ್, ಏಪ್ರಿಲ್‌ನಲ್ಲಿ ಜಿಲ್ಲಾ, ತಾಲೂಕು ಸಮ್ಮೇಳನಗಳು ನಡೆಯುತ್ತಿವೆ. ಇವುಗಳನ್ನು ಯಾರು ಸಾಹಿತ್ಯ ಸಮ್ಮೇಳನಗಳೆನ್ನಬೇಕು? ಸಾಹಿತ್ಯ, ಸಂಗೀತ, ಬುದ್ಧಿವಂತಿಕೆ ಎಂಬುದೇ ಇಲ್ಲ.
ವೇದಿಕೆಯ ತುಂಬಾ ಬರೀ ಹಾರ, ಶಾಲು, ವಿಡಿಯೋ, ಫೋಟೋಗಳದೇ ದರ್ಬಾರು. ನನ್ನ ಹೆಸರು ಕೂಗಲಿಲ್ಲ, ನನಗೆ ಶಾಲು ಹೊದಿಸಲಿಲ್ಲ, ನನಗೆ ಮಾತನಾಡಲು ಮೈಕು ಕೊಡಲಿಲ್ಲ ಎಂಬ ಜಗಳ, ವಾಗ್ ಯುದ್ಧಗಳು. ಸಂಘಟಕರು ಸರ್ವರಿಗೂ ಸ್ವಾಗತ ಎನ್ನುವ ಹಾಗಿಲ್ಲ. ವೇದಿಕೆ ಮೇಲೆ ಇರುವ ಬಲವಂತವಾಗಿ ಬಂದಿರು ವವರೆಲ್ಲರ ಹೆಸರನ್ನು ಅವರ ಇನ್ಷಿಯಲ್‌ನೊಂದಿಗೆ, ಅವರ ಸ್ಥಾನಮಾನಗಳನ್ನು ಸೇರಿಸಿ ಹೇಳಬೇಕು. ಹೀಗಾಗಿ ಮೊನ್ನೆ ಒಂದು ಕಡೆ ಸಾಹಿತ್ಯ ಸಮ್ಮೇಳನದಲ್ಲಿ ಸಂಘಟಕರು ವೋಟರ್ ಲಿಸ್ಟ್ ಹಿಡಿದು ಓದುತ್ತಾ ಸ್ವಾಗತ ಕೋರಿದರು. ಅದರಲ್ಲಿ ಅನೇಕರು ಸತ್ತವರು ಇದ್ದರೂ, ಸತ್ತರೇನಾಯಿತು? ಆತ ಊರಾಗ ಇದ್ದದ್ದು ಸುಳ್ಳೇನು? ಹೇಳಿರಿ ಆತನ ಹೆಸರನ್ನು ಎಂದೂ ಕೂಗಾಡಿದರು.
ತಾಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನಗಳು ಜಾತ್ರೆ ಗಳಂತೆಯೇ ಆಗಿಬಿಟ್ಟಿವೆ. ಪುಸ್ತಕದ ಅಂಗಡಿ, ಒಂದೋ..
ಎರಡೋ ಅಷ್ಟೆ. ಬರೀ ಹೋಟಲ್ಲು, ಜ್ಯೂಸ್ ಅಂಗಡಿಗಳು, ಹುಡುಗರಿಗೆ ಬಲೂನು, ಪೀಪಿ, ಐಸ್‌ಕ್ರೀಮ್ ಬಂಡಿಗಳು, ಸ್ವಾಗತಕ್ಕೆ ಕರಡಿ, ಹುಲಿ, ಬ-ನ್ ವೇಷ ಹಾಕಿ ನಿಂತ ಗೊಂಬೆಗಳು, ಒಂದೋ.. ಎರಡೋ ದಿನದ ಸಮ್ಮೇಳನ ಅಲ್ಲ, ಊರಲ್ಲಿ ಗದ್ದಲ ಅಷ್ಟೆ, ಊರ ಜನರು ಎರಡು ಹೊತ್ತು ಉಂಡದ್ದೇ ಲಾಭವೆನ್ನುವಂತೆ ನಡೆಯುತ್ತಿವೆ ಅಷ್ಟೆ.
ಕವಿ, ಸಾಹಿತಿಗಳು ನನಗೆ ನೆನಪಿನ ಕಾಣಿಕೆ ಕೊಡಲಿಲ್ಲ, ನನ್ನನ್ನು ವೇದಿಕೆಗೆ ಕರೆಯಲಿಲ್ಲ ಎಂಬ ಕೋಪ, ಆಕ್ರೋಶಗಳಲ್ಲೇ ಹಾಕಿದ ಜಾಕೀಟನ್ನು ಬಿಚ್ಚಿ ಹೆಗಲಿಗೆ ಹಾಕಿಕೊಂಡು ಸೋತ ಎಣ್ಣೆ ಎಣ್ಣೆ ಮುಖದಲ್ಲೇ ಮನಗೆ ಹಿಂದಿರುಗುತ್ತಿರುವಾಗ, ಸಾಲ ಮಾಡಿಕೊಂಡ ಸಂಘಟಕರು ಇನ್ನು ಸ್ಮರಣ ಸಂಚಿಕೆಗಳನ್ನೇನು
ತಂದಾರು. ಕಾರ್ಯಕ್ರಮದ ಸ್ಮರಣೆ ಮಾಡಿಕೊಂಡರೇ ಸ್ಮೃತಿ ತಪ್ಪುತ್ತಿದ್ದಾರೆ.