Monday, 16th September 2024

ಪ್ರಾಚೀನ ವೈದ್ಯಕೀಯದಲ್ಲಿ ನಾಡಿ ಪರೀಕ್ಷೆ

ಹಿಂದಿರುಗಿ ನೋಡಿದಾಗ

ರೋಗಿಯ ಬಲಗೈಯಲ್ಲಿ, ಹೆಬ್ಬೆರಳಿನ ಕೆಳಭಾಗದಲ್ಲಿ, ಮಣಿಕಟ್ಟಿನ ಅಂಚಿನಲ್ಲಿ ತ್ರಿಜ್ಯೀಯ ಧಮನಿಯು ಸಾಗುತ್ತದೆ. ವೈದ್ಯನು ತನ್ನ ತೋರು, ಮಧ್ಯ ಹಾಗೂ ಉಂಗುರಬೆರಳುಗಳ ಮೆತ್ತೆಗಳ ಮೂಲಕ ನಾಡಿಯ ಲಕ್ಷಣಗಳನ್ನು ಅನುಭವಿಸಿ ತಿಳಿಯಬೇಕು.

ವೈದ್ಯಕೀಯ ಶಾರೀರಿಕ ಪರೀಕ್ಷೆಗಳಲ್ಲಿ ನಾಡಿ ಪರೀಕ್ಷೆಯು ಮುಖ್ಯವಾದದ್ದು. ಇಂದೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಲಿಸುವ ಮೂಲಭೂತ ಶಾರೀರಿಕ ಪರೀಕ್ಷಾ ವಿಧಾನ ಗಳಲ್ಲಿ ಮೊದ ಮೊದಲು ನಾಡಿಯನ್ನು ಹೇಗೆ ಪರೀಕ್ಷಿಸುವುದೆಂದು ಹೇಳಿ ಕೊಡುವು ದುಂಟು. ನಾಡಿ ಎಂದರೆ ಏನು, ಅದು ಹೇಗೆ ರೂಪುಗೊಳ್ಳುತ್ತದೆ, ನಾಡಿಯನ್ನು ಹೇಗೆ ಪರೀಕ್ಷಿಸಬೇಕು, ಶರೀರದ ಯಾವ ಯಾವ ಭಾಗಗಳಲ್ಲಿ ನಾಡಿಯನ್ನು ಪರೀಕ್ಷಿಸಬಹುದು ಹಾಗೂ ನಾಡಿಯಲ್ಲಿ ಎಷ್ಟು ವಿಧಗಳು ಇವೆ, ಯಾವ ಯಾವ ನಾಡಿ ನಮೂನೆಯು ಯಾವ ರೋಗಸೂಚಕವಾಗಬಹುದು ಎನ್ನುವುದನ್ನು ಕಲಿಸಿಕೊಡುವ ಪದ್ಧತಿಯಿದೆ.

ಒಬ್ಬ ವೈದ್ಯನು ಆಧುನಿಕ ವೈದ್ಯಕೀಯ ಚಿಕಿತ್ಸಾ ಪದ್ಧತಿಯನ್ನು ಕರಗತ ಮಾಡಿಕೊಳ್ಳ ಬೇಕಾದರೆ, ಮುಖ್ಯವಾಗಿ ಮೂಲಭೂತ ಶಾರೀರಿಕ ಪರೀಕ್ಷಾ ವಿಧಾನಗಳ ಮಾಸ್ಟರ್ ಆಗುವುದು ತೀರಾ ಅಗತ್ಯವಾಗಿದೆ. ಆದರೆ ಇಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಯಂತ್ರ ಗಳ ನೀಡುವ ಯಾಂತ್ರಿಕ ಫಲಿತಾಂಶಗಳ ಮೇಲೆಯೇ ಹೆಚ್ಚು ಅವಲಂಬಿತರಾಗಿ, ಶಾರೀರಿಕ ಪರೀಕ್ಷಾ ವಿಜ್ಞಾನ-ಕಲೆಯನ್ನು ಕಡಗಣಿಸುತ್ತಿರುವುದು ಖೇದನೀಯ ವಿಚಾರವಾಗಿದೆ.

ಬಹಳಷ್ಟು ವೈದ್ಯರು ನಾಡಿ ಪರೀಕ್ಷೆಯನ್ನು ಮಾಡುವುದೇ ಇಲ್ಲ. ಹಾಗೆ ಮಾಡಿದರೂ, ಕೇವಲ ಕಣ್ಣೊರೆಸಲು ಮುಂಗೈಯನ್ನು ಹಿಡಿಯಬಹುದಷ್ಟೆ. ತೀವ್ರ ನಿಗಾ ಘಟಕದಲ್ಲಿರುವ ರೋಗಿಯ ಹೃದಯದ ವಿವರಗಳು ಮಾನಿಟರ್‌ನಲ್ಲಿ ಕಾಣುತ್ತಿರುತ್ತದೆ. ಅಲ್ಲಿ ನಾಡಿಗೆ ಸಂಬಂಧಿಸಿದ ಅಲೆಯ ವಿವರವನ್ನು ಪರಿಶೀಲಿಸಲು ಹೋಗುವುದು ಅಪರೂಪ. ಸಾಮಾನ್ಯವಾಗಿ ಹೃದಯ ಮಿಡಿತದ ಪ್ರಮಾಣವನ್ನು ಸೂಚಿಸುವ ಸಂಖ್ಯೆಯತ್ತ ಗಮನವನ್ನು ಹರಿಸಿ ಮುಂದುವರಿಯುವುದೆ ಹೆಚ್ಚು.

ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ನಾಡಿಪರೀಕ್ಷೆಯಿರುವಂತೆ, ಜಗತ್ತಿನ ಪ್ರಾಚೀನ ವೈದ್ಯಕೀಯ ಪದ್ಧತಿಗಳಲ್ಲೂ ನಾಡಿ ಪರೀಕ್ಷೆಯು ಅಸ್ತಿತ್ವದಲ್ಲಿತ್ತು. ಮೆಸೊಪೊಟೋಮಿಯನ್, ಈಜಿಪ್ಷಿಯನ್, ಗ್ರೀಕ್, ಚೀನೀ, ಆಯುರ್ವೇದ, ಯುನಾನಿ ಪದ್ಧತಿ ಗಳಲ್ಲಿ, ಅವರು ಅವರದ್ದೇ ಆದರೀತಿಯಲ್ಲಿ ನಾಡಿಯನ್ನು ಪರೀಕ್ಷಿಸಿ, ಅರ್ಥೈಸುತ್ತಿದ್ದರು. ಎಲ್ಲ ಪದ್ಧತಿಗಳಲ್ಲಿ ಹೃದಯ ಮತ್ತು ಹೃದಯ ಮಿಡಿತವನ್ನು ಜೀವಂತಿಕೆಯ ಕುರುಹು ಎಂದು ಭಾವಿಸುತ್ತಿದ್ದುದರಲ್ಲಿ ಆಶ್ಚರ್ಯವಿಲ್ಲ.

ನಮ್ಮ ಪೂರ್ವಜನ ಅನುಭವಕ್ಕೆ ಬಂದ ಒಳಾಂಗಗಳಲ್ಲಿ ಬಹುಶಃ ಹೃದಯವೇ ಮೊದಲು ಎಂದು ಕಾಣುತ್ತದೆ. ಏಕೆಂದರೆ ಅವನು ಗುಡುಗು, ಸಿಡಿಲಿಗೆ ಭೀತಗೊಂಡಾಗ ಇಲ್ಲವೇ ಹಿಂಸ್ರಪಶುಗಳು ಎದುರಾದಾಗ, ಅವನ ಹೃದಯವು ಜೋರಾಗಿ ಹೊಡೆದುಕೊಳ್ಳು ತ್ತಿತ್ತು. ಹಾಗಾಗಿ ತನ್ನ ಎದೆಗೂಡಿನಲ್ಲಿ ಹೃದಯವಿರುವುದನ್ನು, ಅದು ಅವನ ಭಾವನೆಗಳಿಗೆ ಅನುಗುಣವಾಗಿ ಮಿಡಿಯುತ್ತದೆ ಎನ್ನುವುದನ್ನು ಅನುಭವಜನ್ಯವಾಗಿ ಕಲಿತ. ಹೃದಯವೇ ಭಾವನೆಗಳ ತವರು ಎನ್ನುವ ತೀರ್ಮಾನಕ್ಕೆ ಬಂದ. ಕ್ರಿ.ಪೂ.15000 ವರ್ಷಗಳಷ್ಟು ಹಿಂದೆ ರಚನೆಯಾದ ಒಂದು ಗುಹಾ ಚಿತ್ರವು ಸ್ಪೇನ್ ದೇಶದ ಎಲ್ ಪಿಂಡಾಲ್ ಗುಹೆಯಲ್ಲಿದೆ. ಇದು ಉಣ್ಣೆಯ ಬೃಹದ್ಗಜಕ್ಕೆ (ವೂಲಿ ಮ್ಯಾಮತ್) ಸಂಬಂಧಿಸಿದ ಚಿತ್ರ. ಆ ಚಿತ್ರದಲ್ಲಿರುವ ಗಜದಲ್ಲಿ, ಹೃದಯವಿರಬೇಕಾದ ಸ್ಥಳದಲ್ಲಿ ಒಂದು ಎಲೆಯ ಆಕಾರದ ದಟ್ಟವರ್ಣದ ರಚನೆಯಿದೆ.

ಇದನ್ನು ನೋಡುತ್ತಿದ್ದರೆ, ಬಹುಶಃ ಇದು ನಮ್ಮ ಪೂರ್ವಜರು ಚಿತ್ರಿಸಿದ ಮೊದಲ ಹೃದಯದ ಚಿತ್ರವಿರಬಹುದು ಎನ್ನುವ ಅನುಮಾನವು ನಮ್ಮನ್ನು ಕಾಡುತ್ತದೆ. ನಮ್ಮ ಪೂರ್ವಜರಿಗೆ ಹೃದಯವು ಜೀವಂತಿಕೆಯ ಲಕ್ಷಣವೆನ್ನುವ ಸತ್ಯ ತಿಳಿದಿತ್ತು. ಬದುಕಿರುವವರಲ್ಲಿ ಮಾತ್ರ ಹೃದಯವು ಮಿಡಿಯುತ್ತದೆ, ಸತ್ತಿರುವವರಲ್ಲಿ ಹೃದಯವು ಮಿಡಿಯುವುದಿಲ್ಲ ಎನ್ನುವುದನ್ನೂ ಅವರು ತಿಳಿದಿದ್ದರು. ಹಾಗಾಗಿ ಕಾಡು ಪ್ರಾಣಿಗಳನ್ನು ಬೇಟೆಯಾಡಬೇಕಾದರೆ, ಅವುಗಳ ಹೃದಯವಿದ್ದಿರಬಹುದಾದ ಸ್ಥಳವನ್ನು ಕಲ್ಪಿಸಿಕೊಂಡು, ಅಲ್ಲಿಗೆ ತಾಗುವಂತೆ ತಮ್ಮ ಭರ್ಜಿಯನ್ನು ಎಸೆಯುತ್ತಿದ್ದಿರಬಹುದು.

ಇದು ನಿಜವೇ ಆಗಿದ್ದಲ್ಲಿ, ಇದು ಮಾನವ ಅಂಗರಚನೆಯ ಮೊದಲ ಚಿತ್ರವೆನ್ನಲು ಅಡ್ಡಿಯಿಲ್ಲ. ಮೆಸಪೊಟೋಮಿಯನ್ ಸಂಸ್ಕೃತಿಯಲ್ಲಿ ಗಿಲ್ಗಮಿಶ್ ಎಂಬ ಮಹಾ ಕಾವ್ಯವಿದೆ. ಈ ಕಾವ್ಯದ ನಾಯಕ ಗಿಲ್ಗಮಿಶ್ ತನ್ನ ಗೆಳೆಯನಾದ ಎಂಕಿಡು ಸತ್ತಾಗ, ತನ್ನ ಅಂಗೈಯನ್ನು ಗೆಳೆಯನ ಎದೆಯ ಮೇಲಿಟ್ಟು, ನಾನು ಅವನ ಎದೆಯನ್ನು ಮುಟ್ಟಿದೆ. ಆದರೆ ಅದು ಮಿಡಿಯುತ್ತಲೇ ಇರಲಿಲ್ಲ ಎಂದು ಹೇಳುವ ಮಾತು ಗಮನೀಯ. ಏಕೆಂದರೆ ನಮಗೆ ಲಭ್ಯವಿರುವ ಪ್ರಾಚೀನ ಮಾನವ ಸಾಹಿತ್ಯದಲ್ಲಿ ಹೃದಯವು
ಮಿಡಿಯುತ್ತದೆ ಎನ್ನುವ ಮೊದಲ ದಾಖಲೆಯಿದು.

ಹೃದಯದ ಮಿಡಿತವು ಜೀವಂತಿಕೆ ಲಕ್ಷಣ ಎನ್ನುವುದು ಅವರಿಗೆ ತಿಳಿದಿತ್ತು ಎನ್ನುವುದರ ಅಧಿಕೃತ ದಾಖಲೆಯಿದು ಎನ್ನ ಬಹುದು. ಈ ಕಾವ್ಯವು ಸುಮಾರು ಕ್ರಿ.ಪೂ.2600ರಷ್ಟು ಹಿಂದಿನದು. ಪ್ರಾಚೀನ ಈಜಿಪ್ಷಿಯನ್ ವೈದ್ಯರಿಗೆ ನಾಡಿಯ ಬಗ್ಗೆ,
ನಾಡಿಯು ಹೃದಯಕ್ಕೆ ಸಂಬಂಧಿಸಿರುವ ಬಗ್ಗೆ ಮಾಹಿತಿಯು ತಿಳಿದಿತ್ತು. ಬೆರಳುಗಳ ಮೂಲಕ ನಾಡಿಯನ್ನು ಸ್ಪರ್ಶಿಸಿ ತಿಳಿಯ ಬಹುದು ಎನ್ನುವ ತಿಳಿವಳಿಕೆಯ ಜೊತೆಯಲ್ಲಿ, ನಾಡಿಯ ಅನುಭವದ ಅರ್ಥವನ್ನು ತಿಳಿಯುವ ಕಲೆಯನ್ನೂ ರೂಢಿಸಿ ಕೊಂಡಿದ್ದರು.

ಹೃದಯವು ಪ್ರತಿಯೊಂದು ಅಂಗದ ಪರವಾಗಿ ಮಾತನಾಡುತ್ತದೆ ಎನ್ನುವ ವಾಕ್ಯವು ಈಬರ್ಸ್ ಪ್ಯಾಪಿರಸ್‌ನಲ್ಲಿ ಕಾಣಬಹುದು. ಇದು ಕ್ರಿ.ಪೂ.3500ರಷ್ಟು ಹಿಂದೆ ರಚನೆಯಾಗಿರಬಹುದಾದ ಪ್ರಾಚೀನ ಈಜಿಪ್ಷಿಯನ್ ವೈದ್ಯಕೀಯ ಗ್ರಂಥ. ಈಜಿಪ್ಷಿಯನ್ನರು ಒಂದು ಪಾತ್ರೆಯ ತಳದಲ್ಲಿ ರಂಧ್ರವನ್ನು ಮಾಡಿ, ಅದರಲ್ಲಿ ನೀರನ್ನು ತುಂಬಿ, ಆ ನೀರಿನ ಹನಿಗಳು ಬೀಳುವುದನ್ನು ಲೆಕ್ಕ ಹಾಕುವುದರ ಮೂಲಕ ತಮ್ಮದೇ ಆದ ಗಡಿಯಾರವನ್ನು ನಿರ್ಮಿಸಿಕೊಂಡಿದ್ದರು. ಈ ಗಡಿಯಾರದ ನೆರವಿನಿಂದ ನಾಡಿ ಮಿಡಿತವನ್ನು ಲೆಕ್ಕಹಾಕುತ್ತಿದ್ದರು.

ಪ್ರಾಚೀನ ಚೀನೀ ವೈದ್ಯಕೀಯ ಪದ್ಧತಿಯ ಅನ್ವಯ, ನಾಡಿ ಪರೀಕ್ಷೆಯು ರೋಗಿಯ ಶಾರೀರಿಕ ಪರೀಕ್ಷೆಯ ಒಂದು ಮುಖ್ಯ ಘಟಕ ವಾಗಿತ್ತು. ಚೀನೀಯರ ನಾಡಿ ನಿದಾನ (ಪಲ್ಸ್ ಡಯಾಗ್ನೋಸಿಸ್) ಬಹಳ ಮುಖ್ಯವಾದದ್ದು. ಕೇವಲ ನಾಡಿಯನ್ನು ಕೂಲಂಕಷ ವಾಗಿ ಪರೀಕ್ಷಿಸುವುದರ ಮೂಲಕ, ಶರೀರದ ಪ್ರತಿಯೊಂದು ಅಂಗದ ಆರೋಗ್ಯವನ್ನು / ಅನಾರೋಗ್ಯವನ್ನು ಅವರು ತಿಳಿಯ ಬಲ್ಲವರಾಗಿದ್ದರು. ಈ ಬಗ್ಗೆ ಸಮಗ್ರ ಮಾಹಿತಿಯು ಪ್ರಾಚೀನ ಚೀನೀ ವೈದ್ಯಕೀಯ ಗ್ರಂಥವಾದ ಹ್ವಾಂಗ್ಡಿ ನೀಜಿಂಗ್ (ಯೆಲ್ಲೋ ಎಂಪರರ್ಸ್ ಕ್ಲಾಸಿಕ್ ಆಫ್ ಮೆಡಿಸಿನ್ = ಹಳದಿ ಚಕ್ರವರ್ತಿಯ ಅಭಿಜಾತ ವೈದ್ಯಕೀಯ ಗ್ರಂಥ) ನಲ್ಲಿ ದಾಖಲಾಗಿದೆ.

ಈ ಗ್ರಂಥದಲ್ಲಿ ಶರೀರದ ಆರೋಗ್ಯ ಅನಾರೋಗ್ಯವನ್ನು ನಿಯಂತ್ರಿಸುವ ಯಿನ್-ಯಾಂಗ್ ಪ್ರಾಕೃತಿಕ ಶಕ್ತಿಗಳ ವರ್ಣನೆಯಿದೆ. ಈ ಶಕ್ತಿಗಳನ್ನು ಮಣ್ಣು, ಬೆಂಕಿ, ನೀರು, ಲೋಹ ಮತ್ತು ಮರ ಎಂಬ ಐದು ಧಾತುಗಳು ನಿಯಂತ್ರಿಸಬಲ್ಲವು. ಈ ಏರುಪೇರು ನಾಡಿ ಗಳಲ್ಲಿ ವ್ಯಕ್ತವಾಗುತ್ತದೆ. ಹಾಗಾಗಿ ನಾಡಿಯ ಸೂಕ್ಷ್ಮ ಅಧ್ಯಯನದಿಂದ ವ್ಯಕ್ತಿಯ ಅನಾರೋಗ್ಯವನ್ನು ತಿಳಿಯಲು ಸಾಧ್ಯ ಎನ್ನುವುದು ನಾಡಿ ನಿದಾನದ ಮೂಲ ಆಶಯ.

ಹ್ವಾಂಗ್ಡಿ ನೀಜಿಂಗ್ 26 ನಮೂನೆಯ ನಾಡಿ ವೈವಿಧ್ಯದ ಬಗ್ಗೆ ಹೇಳುತ್ತವೆ. ಪ್ರತಿಯೊಂದು ನಾಡಿ ಬಗೆಯು ನಿರ್ದಿಷ್ಟ ರೋಗ ಇಲ್ಲವೇ ರೋಗ ಲಕ್ಷಣಾವಳಿಯ ಸೂಚಕವಾಗಿರುತ್ತದೆಯಂತೆ. ಆಯುರ್ವೇದದ ಉಗಮವನ್ನು ಋಗ್ವೇದದಲ್ಲಿಯೇ ಕಾಣ ಬಹುದು. ಆಯುರ್ವೇದದಲ್ಲಿ ರೋಗಿಯ ನಾಡಿ ಪರೀಕ್ಷೆಗೆ ಮಹತ್ವವಿದೆ. ಚೀನೀ ವೈದ್ಯಕೀಯ ಸಿದ್ಧಾಂತದ ಅನ್ವಯ ಹೇಗೆ ಯಿನ್ ಮತ್ತು ಯಾಂಗ್‌ಗಳ ನಡುವಿನ ಅಸಮತೋಲನವು ರೋಗಗಳಿಗೆ ಕಾರಣವಾಗುತ್ತದೆಯೋ, ಹಾಗೆಯೇ ವಾತ, ಪಿತ್ತ, ಕಫ ಎನ್ನುವ ಮೂರು ದೋಷಗಳ ನಡುವಿನ ಅಸಮತೋಲನೆಯು ರೊಗಗಳ ಉಗಮಕ್ಕೆ ಕಾರಣವಾಗುತ್ತದೆ.

ಈ ದೋಷಗಳ ಅಸಮತೋಲನೆಯನ್ನು ನಾಡಿ ಪರೀಕ್ಷೆಯ ಮೂಲಕ ತಿಳಿಯಬಹುದು. ಇದುವೇ ನಾಡಿ ನಿದಾನ. ನಾಡಿ ನಿದಾನದ ಮೂಲಕ ಆಯುರ್ವೇದ ವೈದ್ಯರು, ರೋಗಿಯ ಈ ಕೆಳಗಿನ ಏಳು ವಿಷಯಗಳನ್ನು ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯಬಲ್ಲರು. ?ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿದ ಸ್ಥಿತಿಗತಿಯನ್ನು ಹಾಗೂ ದೋಷ ಸ್ವರೂಪವನ್ನು ತಿಳಿಯಬಹುದು.

?ತ್ರಿದೋಷಗಳ ಏರುಪೇರನ್ನು ಪತ್ತೆಹಚ್ಚಬಹುದು.

?ಆ ಕ್ಷಣದಲ್ಲಿ ದೋಷಗಳ ಸ್ಥಿತಿಗತಿ ಮತ್ತು ಅವಗಳ ಚಲನಶೀಲತೆಯನ್ನು ಅರಿಯಬಹುದು.

?ಉಪದೋಷಗಳ ಚಲನಶೀಲತೆಯನ್ನು ಪತ್ತೆಹಚ್ಚಬಹುದು.

?ಜಠರಾಗ್ನಿಯ ಸಾಮರ್ಥ್ಯವನ್ನು ಅರಿಯಬಹುದು.

?ವಿಷವಸ್ತುಗಳ ಅಸ್ತಿತ್ವ ಹಾಗೂ ಅವುಗಳ ಚಲನಶೀಲತೆಯ ಜತೆಯಲ್ಲಿ ಶರೀರದಲ್ಲಿ ಊತಕ ವಿನಾಶವಾಗುತ್ತಿದ್ದರೆ ಅದರ ಮಾಹಿತಿಯು ದೊರೆಯುತ್ತದೆ.

?ಅಸಹಜ ಶಾರೀರಿಕ ಹಾಗೂ ಮಾನಸಿಕ ಚಟುವಟಿಕೆಗಳು.

ಆಧುನಿಕ ವೈದ್ಯಕೀಯದಲ್ಲಿ ಯಾವುದನ್ನು ತ್ರಿಜ್ಯೀಯ ನಾಡಿ (ರೇಡಿಯಲ್ ಪಲ್ಸ್) ಎಂದು ಕರೆಯುತ್ತೇವೆಯೋ ಅದನ್ನು ಆಯುರ್ವೇದದಲ್ಲಿ ಹಸ್ತನಾಡಿ ಎಂದು ಗುರುತಿಸುವುದುಂಟು. ರೋಗಿಯ ಬಲಗೈಯಲ್ಲಿ, ಹೆಬ್ಬೆರಳಿನ ಕೆಳಭಾಗದಲ್ಲಿ, ಮಣಿ ಕಟ್ಟಿನ ಅಂಚಿನಲ್ಲಿ ತ್ರಿಜ್ಯೀಯ ಧಮನಿಯು (ರೇಡಿಯಲ್ ಆರ್ಟರಿ) ಸಾಗುತ್ತದೆ.

ವೈದ್ಯನು ತನ್ನ ತೋರು, ಮಧ್ಯ ಹಾಗೂ ಉಂಗುರ ಬೆರಳುಗಳ ಮೆತ್ತೆಗಳ ಮೂಲಕ ನಾಡಿಯ ಲಕ್ಷಣಗಳನ್ನು ಅನುಭವಿಸಿ ತಿಳಿಯಬೇಕು. ನಾಡಿಯಲ್ಲಿ ಮೂರು ವಿಧ. ವಾತನಾಡಿ, ಪಿತ್ತನಾಡಿ ಮತ್ತು ಕಫನಾಡಿ. ವಾತನಾಡಿಯನ್ನು ತೋರುಬೆರಳಿನಿಂದ ಗ್ರಹಿಸಬೇಕು. ವಾತನಾಡಿಯ ಚಲನೆಯು ಹಾವಿನ ಚಲನೆಯ ಹಾಗೆ ಸುರುಸುರುಳಿಯಾಗಿರುತ್ತದೆ. ಗತಿಯು (ಸ್ಪೀಡ್) ಮಂದ ವಾಗಿರುತ್ತದೆ ಹಾಗೂ ಗಾತ್ರವು (ವಾಲ್ಯೂಮ್) ಕಡಿಮೆಯಿರುತ್ತದೆ.

ಪಿತ್ತನಾಡಿಯನ್ನು ಮಧ್ಯದ ಬೆರಳಿನ ಸ್ಪರ್ಶಿಸಿ ತಿಳಿಯಬೇಕಾಗುತ್ತದೆ. ನಾಡಿಯ ಚಲನೆಯು ಕಪ್ಪೆಯು ಕುಪ್ಪಳಿಸಿದಂತೆ ಭಾಸ ವಾಗುತ್ತದೆ. ಗತಿಯು ವೇಗವಾಗಿರುತ್ತದೆ ಹಾಗೂ ಗಾತ್ರವು ಪೂರ್ಣಪ್ರಮಾಣದಲ್ಲಿರುತ್ತದೆ. ಕಫನಾಡಿಯನ್ನು ಉಂಗುರದ ಬೆರಳಿನ ಮೂಲಕ ಪರೀಕ್ಷಿಸಿ ಅರ್ಥೈಸಬೇಕಾಗುತ್ತದೆ. ವಾತನಾಡಿಯು ಹಂಸ ಇಲ್ಲವೇ ನವಿಲಿನ ನಡಿಗೆಯನ್ನು ಹೋಲುತ್ತದೆ.

ಗತಿಯು ನಿಧಾನವಾಗಿರುತ್ತದೆ ಮತ್ತು ಗಾತ್ರವು ಪೂರ್ಣಪ್ರಮಾಣದಲ್ಲಿರುತ್ತದೆ. ಆಯುರ್ವೇದ ವೈದ್ಯರು ಹಸ್ತನಾಡಿಯನ್ನಲ್ಲದೆ, ಶರೀರದ ಇತರ ಭಾಗಗಳಲ್ಲಿಯೂ ನಾಡಿಯನ್ನು ಪರೀಕ್ಷಿಸಿ ರೋಗನಿದಾನವನ್ನು ಮಾಡಬಹುದು. ನಾಡಿಪರೀಕ್ಷೆಯನ್ನು ಸಾಮಾನ್ಯವಾಗಿ ಬೆಳಗಿನ ಹೊತ್ತಿನಲ್ಲಿ ಮಾಡುವ ಸಂಪ್ರದಾಯವುಂಟು. ರೋಗಿಯು ಕಂಠಪೂರ್ತಿ ತಿಂದಿರಬಾರದು ಹಾಗೂ ಖಾಲಿ ಹೊಟ್ಟೆಯಲ್ಲೂ ಇರಬಾರದು. ರೋಗಿಯ ಮನಸ್ಸು ಪ್ರಸನ್ನವಾಗಿರಬೇಕಾದದ್ದು ಬಹಳ ಮುಖ್ಯ.

ಊಟದ ನಂತರ, ವ್ಯಾಯಾಮದ ನಂತರ, ಸ್ನಾನ ಮಾಡಿದ ನಂತರ, ಧೂಮಪಾನ ಅಥವ ಮದ್ಯಪಾನವನ್ನು ಮಾಡಿದ ನಂತರ, ಮೈಥುನದ ನಂತರ ನಾಡಿಪರೀಕ್ಷೆಯನ್ನು ಮಾಡಬಾರದು. ವಿಪರೀತ ಹಸಿವು, ಬಾಯಾರಿಕೆ, ಕೋಪ, ಪ್ರಕ್ಷುಬ್ದ ಮನಸ್ಥಿತಿಯಲ್ಲೂ
ನಾಡಿಯನ್ನು ಪರೀಕ್ಷಿಸುವುದಿಲ್ಲ. ಆಯುರ್ವೇದ ಪದ್ಧತಿಯ ಅನ್ವಯ ಚಿಕಿತ್ಸೆಯನ್ನು ನೀಡುವವರು, ನಾಡಿನಿದಾನವನ್ನು
ಕರಗತ ಮಾಡಿಕೊಳ್ಳಬೇಕಾದದ್ದು ತೀರಾ ಅಗತ್ಯವಾಗಿದೆ.