ಸಕಾಲಿಕ
ಡಾ.ನಾ.ಸೋಮೇಶ್ವರ
(ನಿನ್ನೆಯ ಸಂಚಿಕೆಯಲ್ಲಿ ಪ್ರಕಟವಾದ ಲೇಖನದ ಮುಂದುವರಿದ ಭಾಗ)
ಕಾರ್ತಿಕ ಮಾಸದ ಮೊದಲ ದಿನ ಪಾಡ್ಯ ಅಥವಾ ಪ್ರತಿಪದ. ಸಾಮಾನ್ಯವಾಗಿ ಈ ದಿನವನ್ನು ‘ಬಲಿಪಾಡ್ಯಮಿ ಅಥವ ಬಲಿಪ್ರತಿ ಪದ’ ಎನ್ನುವ ಹೆಸರಿನಲ್ಲಿ ಆಚರಿಸುವುದುಂಟು. ಇದು ದೀಪಾವಳಿ ಹಬ್ಬದ ನಾಲ್ಕನೆಯ ದಿನ. ಭಾರತದಲ್ಲಿ ಇದು ಬಹಳ
ಪ್ರಾಚೀನವಾದ ಹಬ್ಬ ಎಂದು ಕಾಣುತ್ತದೆ. ಕ್ರಿ.ಪೂ.೨ನೆಯ ಶತಮಾನದಲ್ಲಿ ರಚನೆಯಾಗಿರಬಹುದಾದ ಪಾಣಿನಿಯ ಅಷ್ಠಾ ಧಾಯ್ಯಿಯಲ್ಲಿ ಈ ಹಬ್ಬದ ಪ್ರಸ್ತಾಪವು ಬರುತ್ತದೆ.
ರಾಮಾಯಣ, ಮಹಾಭಾರತ ಹಾಗೂ ಬಹಳಷ್ಟು ಪುರಾಣಗಳಲ್ಲಿ ಬಲಿ ಚಕ್ರವರ್ತಿಯ ಕಥೆಯನ್ನು ಕಾಣಬಹುದು. ಬಲಿಯು ಪ್ರಹ್ಲಾದನ ಮೊಮ್ಮೊಗ. ಪ್ರಹ್ಲಾದನ ಹಾಗೆ ವಿಷ್ಣುಭಕ್ತ. ತನ್ನ ಶಕ್ತಿ ಸಾಮರ್ಥ್ಯದಿಂದ ಮೂರೂ ಲೋಕಗಳನ್ನು ಗೆಲ್ಲುತ್ತಾನೆ. ಆದರೆ ಧರ್ಮದಿಂದ ರಾಜ್ಯವನ್ನಾಳುತ್ತಾ ಪ್ರಜಾವತ್ಸಲ ನಾಗಿರುತ್ತಾನೆ. ರಾಜ್ಯ ಮತ್ತು ಅಧಿಕಾರವನ್ನು ಕಳೆದುಕೊಂಡ ಇಂದ್ರಾದಿಗಳು ವಿಷ್ಣುವನ್ನು ಮೊರೆ ಹೋಗುತ್ತಾರೆ. ವಿಷ್ಣುವು ಬಲಿಯು ತನ್ನ ಭಕ್ತನಾದುದರಿಂದ ಆತನನ್ನು ತಾನು ಕೊಲ್ಲಲಾರೆ ಎನ್ನುತ್ತಾನೆ. ಆದರೆ ಇಂದ್ರಾದಿಗಳು ರಾಜ್ಯವಿಲ್ಲದೆ ಭ್ರಷ್ಟರಾಗಿ ತಿರುಗುವುದನ್ನು ನೋಡಿ ವಿಷ್ಣುವಿನ ಮನಸ್ಸು ಮರಗುತ್ತದೆ.
ಹಾಗಾಗಿ ವಿಷ್ಣು ಒಂದು ಉಪಾಯವನ್ನು ಮಾಡುತ್ತಾನೆ. ತಾನು ತನ್ನ ಐದನೆಯ ಅವತಾರವನ್ನೆತ್ತಿ ಇಂದ್ರಾದಿಗಳ ಕೋರಿಕೆ ಯನ್ನು ಪೂರೈಸುವುದಾಗ ಭರವಸೆ ಯನ್ನು ನೀಡುತ್ತಾನೆ. ಇದೇ ವೇಳೆಗೆ ಬಲಿಚಕ್ರವರ್ತಿಯು ಒಂದು ಯಾಗವನ್ನು ಆರಂಭಿಸು ತ್ತಾನೆ. ಬ್ರಾಹ್ಮಣಾದಿಗಳು ಅಲ್ಲಿಗೆ ಬಂದು ತಮಗೆ ಅಗತ್ಯವಾದ ದಾನಗಳನ್ನು ಪಡೆಯು ತ್ತಿರುತ್ತಾರೆ. ವಿಷ್ಣುವು ಕುಬ್ಜ ವಟುವಿನ ರೂಪವನ್ನು ಧರಿಸುತ್ತಾನೆ. ಇದು ವಿಷ್ಣುವಿನ ಐದನೆಯ ಅವತಾರ. ಕುಬ್ಜ ಬಾಲಕನ ಹೆಸರು ವಾಮನ. ಹಾಗಾಗಿ ಇದು ವಾಮನಾ ವತಾರ ಎಂದು ಪ್ರಸಿದ್ಧಿ.
ವಾಮನನು ಬಲಿಯ ಬಳಿ ಬಂದು ಮೂರು ಹೆಜ್ಜೆ ಭೂಮಿಯನ್ನು ಮಾತ್ರ ಕೇಳುತ್ತಾನೆ. ಬಲಿಯು ಮೂರು ಹೆಜ್ಜೆಯ ಭೂಮಿ ಯನ್ನು ಕೊಡಲು ಒಪ್ಪಿದಾಗ, ವಾಮನನ್ನು ತ್ರಿವಿಕ್ರಮನಾಗಿ ತನ್ನ ಒಂದು ಹೆಜ್ಜೆಯಿಂದ ಇಡೀ ಭೂಮಿಯನ್ನು, ಮತ್ತೊಂದು ಹೆಜ್ಜೆಯಿಂದ ಇಡೀ ಆಕಾಶವನ್ನು ಕ್ರಮಿಸಿ, ಮೂರನೆಯ ಹೆಜ್ಜೆಯನ್ನು ಎಲ್ಲಿಡಲಿ ಎಂದು ಕೇಳುತ್ತಾನೆ. ಇದೇ ವೇಳೆಗೆ ಪ್ರಹ್ಲಾದನು ಅಲ್ಲಿಗೆ ಬಂದು ತನ್ನ ಮೊಮ್ಮೊಗನಿಗೆ ಪಾತಾಳದಲ್ಲಿ ಸ್ಥಾನವನ್ನು ಕಲ್ಪಿಸುವಂತೆ ಪ್ರಾರ್ಥಿಸುತ್ತಾನೆ. ವಿಷ್ಣುವು ತನ್ನ ಪಾದವನ್ನು ಬಲಿಯ ತಲೆಯ ಮೇಲಿಟ್ಟು, ಬಲಿಯನ್ನು ಪಾತಾಳಕ್ಕೆ ತುಳಿಯುತ್ತಾನೆ.
ಅಂದಿನಿಂದ ಬಲಿಯು ಪಾತಾಳದಲ್ಲಿ ತನ್ನ ರಾಜ್ಯಭಾರವನ್ನು ನಡೆಸಲು ಆರಂಭಿಸುತ್ತಾನೆ. ವಿಷ್ಣುವು ದೀಪಾವಳಿ ಹಬ್ಬದ
ಪಾಡ್ಯದಂದು ಬಲಿಯು ಭೂಮಿಗೆ ಬರಲು ಅನುಮತಿಯನ್ನು ನೀಡುತ್ತಾನೆ. ಬಲಿಯ ಪ್ರಜೆಗಳೆಲ್ಲ ತಮ್ಮ ಅರಸನ ಆಗಮನ
ವನ್ನು ದೀಪಗಳನ್ನು ಹೊತ್ತಿಸಿ, ಪಟಾಕಿಯನ್ನು ಸಿಡಿಸಿ ಸಂಭ್ರಮಿಸುತ್ತಾರೆ ಎನ್ನುವ ನಂಬಿಕೆಯಿದೆ. ಭಾರತದಲ್ಲಿ ವಾಮನಿನಾಗಿ ಕೆಲವೇ ಕೆಲವು ಆಲಯಗಳಿವೆ. ಅವುಗಳಲ್ಲಿ ಕೇರಳದ ಕೋಚಿಯ ಬಳಿ ಇರುವ ‘ತ್ರಿಕ್ಕಾಕರ ವಾಮನಮೂರ್ತಿ ಆಲಯ’ವು ಮುಖ್ಯ ವಾದದ್ದು. ತ್ರಿಕ್ಕಾಕಾರ ಎಂಬ ಶಬ್ದವನ್ನು ತಿರು-ಕಾಲ-ಕರ ಎಂದು ಬಿಡಿಸುವುದುಂಟು.
ಇದು ‘ಶ್ರೀಪಾದದ ಸ್ಥಳ’ ಎಂಬ ಅರ್ಥವನ್ನು ನೀಡುತ್ತದೆ. ಕೇರಳಿಗರ ನಂಬಿಕೆಯ ಅನ್ವಯ ಓಣಂ ಹಬ್ಬದಂದು ಬಲಿ ಚಕ್ರವರ್ತಿ ಯು ಭೂಲೋಕಕ್ಕೆ ಬರುತ್ತಾನಂತೆ. ಆದರೂ ಬಲಿಪಾಡ್ಯಮಿ ಯಂದೂ ಸಹ ಬಲಿಚಕ್ರವರ್ತಿಯ ಆಗಮನವನ್ನು ನಿರೀಕ್ಷಿಸಿ ಹಬ್ಬವನ್ನು ಆಚರಿಸುವುದುಂಟು. ಬಲಿಪಾಡ್ಯಮಿಯನ್ನು ‘ದ್ಯೂತ ಪ್ರತಿಪದ’ ಎನ್ನುವ ಹೆಸರಿನಲ್ಲಿ ಆಚರಿಸುವ ಪದ್ಧತಿಯು ಕೆಲವು ಕಡೆ ಇದೆ. ಶಿವ ಮತ್ತು ಪಾರ್ವತಿಯರು ಪಗಡೆಯನ್ನು ಆಡುತ್ತಾರೆ. ಪಾರ್ವತಿ ಯು ಶಿವನನ್ನು ಸೋಲಿಸು ತ್ತಾಳೆ. ಆಗ ಕಾರ್ತಿಕೇಯನು ಪಾರ್ವತಿಯೊಡನೆ ಪಗಡೆಯಾಗಿ ತನ್ನ ತಾಯಿಯನ್ನು ಸೋಲಿಸುತ್ತಾನೆ. ಆಗ ಗಣೇಶನು ತನ್ನ ತಮ್ಮ ಕಾರ್ತಿಕೇಯನೊಡನೆ ಪಗಡೆಯನ್ನಾಡಿ ಅವನನ್ನು ಸೋಲಿಸುತ್ತಾನೆ. ಹೀಗೆ ಮನೆಮಂದಿಯೆಲ್ಲ ಸೇರಿ ಪಗಡೆಯನ್ನಾಡುತ್ತಾ ಇಡೀ ದಿನವನ್ನು ಸಂತಸದಿಂದ ಕಳೆಯುವುದುಂಟು.
ಇಂದಿನ ದಿನಗಳಲ್ಲಿ ಪಗಡೆಯಾಟವು ಅಪರೂಪವಾಗಿ ಅದರ ಸ್ಥಾನವನ್ನು ಇಸ್ಪೀಟ್ ಆಕ್ರಮಿಸಿಕೊಂಡಿದೆ. ಗೋವರ್ಧನ ಪೂಜ ಅಥವ ಅನ್ನಕೂಟ ಎನ್ನುವ ದಾಸೋಹವು ಉತ್ತರ ಭಾರತದಲ್ಲಿ ಬಹು ದೊಡ್ಡ ಉತ್ಸವವಾಗಿ ಪ್ರಚಲಿತದಲ್ಲಿದೆ. ವಲ್ಲಭಾ ಚಾರ್ಯರ ಸಂಪ್ರದಾಯವನ್ನು, ಚೈತನ್ಯ ಮಹಾಪ್ರಭುರವರ ಗೌಡೀಯ ಸಂಪ್ರದಾಯವನ್ನು, ಸ್ವಾಮಿನಾರಾಯಣ ಅನುಯಾ ಯಿಗಳು ಹಾಗೂ ಇಸ್ಕಾನ್ ಭಕ್ತರು ಹಾಗೂ ಇತರ ವೈಷ್ಣವರು ಈ ಹಬ್ಬವನ್ನು ಬಹು ವಿಜೃಂಭಣೆಯಿಂದ ಆಚರಿಸುವುದುಂಟು. ಗೋವರ್ಧನ ಪೂಜೆಯು ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದಲ್ಲಿಯೇ ಹೆಚ್ಚು ಜನಪ್ರಿಯ. ಈ ಬಗ್ಗೆ ಮೊದಲ ಉಲ್ಲೇಖವು ಭಾಗವತ ಪುರಾಣದಲ್ಲಿ ದೊರೆಯುತ್ತದೆ.
ಬ್ರಜ, ಬ್ರಿಜ, ಬ್ರಜಭೂಮಿ ಎನ್ನುವುದು ಕೃಷ್ಣನ ಎಲ್ಲ ಬಾಲಲೀಲೆಗಳು ನಡೆದ ಪ್ರದೇಶ ಎಂದು ನಂಬಿಕೆ. ‘ಬ್ರಜ’ ಎನ್ನುವುದು ಸಂಸ್ಕ ತದ ‘ವ್ರಜ’ ಎನ್ನುವ ಶಬ್ದದ ತದ್ಭವ. ವ್ರಜದ ಪ್ರಸ್ತಾಪವು ಮೊದಲು ಋಗ್ವೇದದಲ್ಲಿ ಬರುತ್ತದೆ. ಇದು ‘ದನಕರುಗಳ ಹುಲ್ಲು ಗಾವಲು ಅಥವ ಗೋಮಾಳ’ ಎನ್ನುವ ಅರ್ಥವನ್ನು ಹೊರಡಿಸುತ್ತದೆ. ಇದು ಉತ್ತರ ಪ್ರದೇಶದ ಮಥುರಾ – ವೃಂದಾವನ, ಹರಿಯಾಣದ ಹೋದಲ್ ಹಾಗೂ ರಾಜಸ್ಥಾನದ ಭರತಪುರ ಜಿಲ್ಲೆಯನ್ನು ಒಳಗೊಂಡ ಪ್ರದೇಶ. ಇಂದಿನ ಮಥುರ ಜಿಲ್ಲೆಯಲ್ಲಿ
ಗೋವರ್ಧನ ಗಿರಿ ಎನ್ನುವ ಬೆಟ್ಟದೆ. ಗಿರಿರಾಜ ಪರ್ವತ ಎನ್ನುವುದು ಮತ್ತೊಂದು ಹೆಸರು. ಇದು ಸುಮಾರು ೧೦೦ ಅಡಿ ಎತ್ತರ ವಿರುವ ಪುಟ್ಟ ಬೆಟ್ಟ. ವೃಂದಾವನದಿಂದ ೧೧ಕಿ.ಮೀ ದೂರದಲ್ಲಿದೆ.
‘ಗೋವರ್ಧನ’ ಎನ್ನುವ ಹೆಸರು ಗೋವುಗಳಿಗೆ ಯಥೇಚ್ಚವಾಗಿ ‘ಆಹಾರ, ಅಶ್ರಯ ಮತ್ತು ರಕ್ಷಣೆಯನ್ನು ನೀಡುವ ಬೆಟ್ಟ’ ಎನ್ನುವ ಅರ್ಥ ಬರುತ್ತದೆ. ನಂದ ಮತ್ತು ಇತರ ಗೋವಳರು ಪ್ರತಿವರ್ಷ ಮೇಘಾಧಿಪತಿಯಾದ ಇಂದ್ರನಿಗೆ ಪೂಜೆ ಸಲ್ಲಿಸಿ, ಮಳೆ ಬೆಳೆಗೆ ಕಾರಣನಾಗಿದ್ದ ಆತನಿಗೆ ಕೃತಜ್ಞತೆಯನ್ನು ಅರ್ಪಿಸುತ್ತಿದ್ದರು. ಆದರೆ ಕೃಷ್ಣನು ಗೋವುಗಳನ್ನು ಸಲಹುತ್ತಿರುವುದು ಗೋವರ್ಧನ ಗಿರಿಯೇ ಹೊರತು ಇಂದ್ರನ್ನಲ್ಲ ಎಂದು ವಿವರಿಸಿ, ಇಂದ್ರ ಪೂಜೆಯ ಬದಲು ತಮ್ಮ ಗೋವುಗಳನ್ನು ಸಲಹುತ್ತಿರುವ ಗೋವರ್ಧನ
ಗಿರಿಯ ಪೂಜೆಯನ್ನು ಮಾಡಲು ಸೂಚಿಸಿದಾಗ, ಎಲ್ಲರೂ ಕೃಷ್ಣನ ಸಲಹೆಯನ್ನು ಒಪ್ಪಿ ಗೋವರ್ಧನ ಪೂಜೆಗೆ ಸಿದ್ಧತೆಗಳನ್ನು ನಡೆಸುತ್ತಾರೆ. ಇದರಿಂದ ಕುಪಿತನಾದ ಇಂದ್ರನು ೭ ದಿನಗಳ ಕಾಲ ಕುಂಭದ್ರೋಣ ಮಳೆಯನ್ನು ಸುರಿಸಿ, ಗೋಪಾಲಕರ ವಾಸ ಪ್ರದೇಶವೆಲ್ಲ ಮಳೆಯಲ್ಲಿ ಕೊಚ್ಚಿ ಹೋಗುವಂತೆ ಮಾಡುತ್ತಾನೆ. ಆಗ ಕೃಷ್ಣನು ತನ್ನ ಕಿರುಬೆರಳಿನಿಂದ ಗೋವರ್ಧನ ಪರ್ವತ ವನ್ನೇ ಮೇಲೆತ್ತಿ, ಅದರ ಕೆಳಗೆ ಎಲ್ಲ ಗೋವುಗಳಿಗೆ ಹಾಗೂ ಗೋಪಾಲಕರಿಗೆ ಆಶ್ರಯವನ್ನು ನೀಡಿ, ಮಳೆಯಿಂದ ಅವರಿಗೆ ಏನು ತೊಂದರೆಯಾಗದಂತೆ ರಕ್ಷಿಸುತ್ತಾನೆ.
ಕೊನೆಗೆ ಇಂದ್ರನು ಕೃಷ್ಣನ ಅವತಾರದ ಹಿನ್ನೆಲೆಯನ್ನು ಅರಿತು ಕೃಷ್ಣನಿಗೆ ಶರಣು ಬರುತ್ತಾನೆ ಎನ್ನುತ್ತದೆ ಪುರಾಣ. ಈ ಪೌರಾಣಿಕ ಘಟನೆಯು ಕಾರ್ತಿಕ ಹುಣ್ಣಿಮೆ ಪಾಡ್ಯದಂದು ನಡೆಯಿತೆಂದು ನಂಬಿಕೆ. ಹಾಗಾಗಿ ಇದೇ ದಿನದಂದು ಗೋವರ್ಧನ ಪೂಜೆಯನ್ನು
ನಡೆಸುವ ಪದ್ಧತಿಯಿದೆ. ಭಕ್ತರು ಇಡೀ ಗೋವರ್ಧನ ಪರ್ವತದ ಸುತ್ತಲೂ ಪ್ರದಕ್ಷಿಣೆಯನ್ನು ನಡೆಸುವುದುಂಟು. ಪರ್ವತದ ಸುತ್ತಳತೆಯು ಸುಮಾರು ೧೮ ಕಿ.ಮೀ ಇಷ್ಟೂ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸುವರು. ಹಾದಿಯಲ್ಲಿ ಅನೇಕ ಪೂಜಾಸ್ಥಳ ಗಳನ್ನು ದರ್ಶಿಸುತ್ತಾ ಪ್ರದಕ್ಷಿಣೆಯನ್ನು ಪೂರೈಸುವುದುಂಟು.
ಗೋವರ್ಧನ ಪೂಜೆಯನ್ನು ‘ಅನ್ನಕೂಟ್’ ಎನ್ನುವ ಹೆಸರಿನಲ್ಲಿಯೂ ಆಚರಿಸುವುದುಂಟು. ಈ ದಿನದಂದು ವಿಶೇಷ ಅನ್ನ ದಾಸೋಹವು ನಡೆಯುತ್ತದೆ. ಭಕ್ತರು ಕೃಷ್ಣನಿಗೆ ನಾನಾ ಭಕ್ಷ್ಯಗಳನ್ನು ನೈವೇದ್ಯ ರೂಪದಲ್ಲಿ ಅರ್ಪಿಸಿ, ನಂತರ ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚುವುದುಂಟು. ಸ್ವಾಮಿನಾರಾಯಣ ಹಾಗೂ ಇಸ್ಕಾನ್ ಅನುಯಾಯಿಗಳು ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಪದ್ಧತಿಯಿದೆ.
ವಿಶ್ವದಾದ್ಯಂತ ಸುಮಾರು ೩೮೦೦ ಸ್ವಾಮಿ ನಾರಾಯಣ ಆಲಯಗಳುಂಟಂತೆ. ಎಲ್ಲ ಕಡೆಯೂ ಅನ್ನಕೂಟ ಉತ್ಸವ ಹಾಗೂ ಅನ್ನದಾನ ನಡೆಯುತ್ತದೆ. ಕಳೆದ ವರ್ಷ ಗುಜರಾತಿನ ಸ್ವಾಮಿ ನಾರಾಯಣ ಆಲಯದಲ್ಲಿ ೩೫೦೦ ಶಾಖಾಹಾರಿ ಭಕ್ಷ್ಯಗಳನ್ನು ತಯಾರಿಸಿ ನೈವೇದ್ಯಕ್ಕೆ ಇಟ್ಟಿದ್ದರು. ಮೈಸೂರಿನ ಇಸ್ಕಾನಿನವರು ೨೫೦ ಕೆಜಿ ಅನ್ನವನ್ನು ನೈವೇದ್ಯ ಮಾಡಿದರು. ಹೀಗೆ ಇಡೀ ದಿನ ಕೃಷ್ಣನ ಸಂಕೀರ್ತನೆ ಹಾಗೂ ಅನ್ನದಾನದ ಮೂಲಕ ಅನ್ನಕೂಟ್ ಹಬ್ಬವನ್ನು ಆಚರಿಸುತ್ತಾರೆ. ಬಿದಿಗೆ ಅಥವಾ ದ್ವಿತೀಯ: ಇದು ದೀಪಾವಳಿಯ ಐದನೆಯ ದಿನದ ಹಬ್ಬ. ಉತ್ತರಭಾರತದಲ್ಲಿ ಹಾಗೂ ನೇಪಾಳದಲ್ಲಿ ಇದು ಭಾಯಿ ದೂಜ್, ಭಾವುಬೀಜ್, ಭಾಯಿ
ಟೀಕಾ, ಭಾಯಿ ಫೋಂಟ, ಭಗಿನಿ ಹಸ್ತ ಭೋಜನ್ ಎಂಬ ಹೆಸರಿನಲ್ಲಿ ಪ್ರಚಲಿತದಲ್ಲಿದೆ. ಈ ಹಬ್ಬವೂ ಹೆಚ್ಚೂ ಕಡಿಮೆ
ರಕ್ಷಾಬಂಧನ ಹಬ್ಬವನ್ನು ಹೋಲುತ್ತದೆ.
ವ್ಯತ್ಯಾಸಷ್ಟೇ. ರಕ್ಷ ಬಂಧನದಲ್ಲಿ ರಕ್ಷಬಂಧನವನ್ನು ಕಟ್ಟಿದುದಕ್ಕೆ ಸೋದರರು ಸೋದರಿಯರಿಗೆ ಉಡುಗೊರೆಯನ್ನು ಕೊಡುವ
ಪದ್ಧತಿಯಿದೆ. ಇಲ್ಲಿ ಸೋದರಿಯರು ತಮ್ಮ ಸೋದರರ ಹಣೆಗೆ ತಿಲಕವನ್ನು ಹಚ್ಚಿ, ಆರತಿ ಬೆಳಗಿ, ಶುಭವನ್ನು ಹಾರೈಸಿ ಉಡು ಗೊರೆಗಳನ್ನು ಕೊಡುವುದುಂಟು. ಭಾಯಿ ದೂಜ್ ದಿನವನ್ನು ‘ಯಮದ್ವಿತೀಯ’ ಎನ್ನುವ ಹೆಸರಿನಲ್ಲಿ ಆಚರಿಸುವು ದುಂಟು. ಈ ದಿನದಂದು ಯಮನು ತನ್ನ ಸೋದರಿಯಾದ ಯಮುನಾಳ (ಯಮುನಾನದಿ) ಮನೆಗೆ ಬರುತ್ತಾನೆ ಎಂದು ನಂಬಿಕೆ. ನರಕಾಸು ರನನ್ನು ಕೊಂದ ಕೃಷ್ಣನು ತನ್ನ ಸೋದರಿ ಸುಭದ್ರಳ ಮನೆಗೆ ಬಂದು ಆಕೆಯ ಆತಿಥ್ಯವನ್ನು ಸ್ವೀಕರಿಸಿ, ಶ್ರಾಂತಿಯನ್ನು ತೆಗೆದು ಕೊಂಡ ಎಂಬ ಕಥೆಯೂ ಇದೆ.
ಕೆಲವು ಸೋದರಿಯರ ಅಣ್ಣಂದಿರು ದೂರದ ಊರಿನಲ್ಲಿ ಅಥವಾ ದೇಶದಲ್ಲಿ ವಾಸಿಸುತ್ತಿರುವಾಗ ಅವರಿಗೆ ಈ ಹಬ್ಬಕ್ಕೆ ಬರಲು ಆಗದಿರಬಹುದು. ಅಂತಹವು ಚಂದ್ರನಿಗೆ ಪೂಜೆಯನ್ನು ಮಾಡುವುದುಂಟು. ಚಂದ್ರನೂ ತಮ್ಮ ಸೋದರ ಎಂದು ಅವರ ನಂಬಿಕೆ. ಹಾಗಾಗಿ ಮಕ್ಕಳಿಗೆ ಚಂದ್ರನು ‘ಚಂದಾಮಾಮ’ ನಾಗುತ್ತಾನೆ.