Saturday, 14th December 2024

ಪ್ರಾಚೀನ ಭಾರತದಲ್ಲಿ ಆರೋಗ್ಯ ವಿಜ್ಞಾನ

ಹಿಂದಿರುಗಿ ನೋಡಿದಾಗ

ಇಂದಿಗೆ ೫೦ ದಶಲಕ್ಷ ವರ್ಷಗಳ ಹಿಂದೆ ಭಾರತ ಉಪಖಂಡದ ಭೂ-ಲಕವು ಏಷ್ಯಾ ಭೂ ಫಲಕದೊಡನೆ ಘಟ್ಟಿಸಿತು. ಆಗ ಸುಮಾರು ೩,೫೦೦ ಕಿ.ಮೀ. ಉದ್ದದ ಹಿಂದುಕುಶ್-ಹಿಮಾಲಯನ್ ಪರ್ವತ ಶ್ರೇಣಿಯು ಹುಟ್ಟಿತು. ಇದು ಇಂದಿನ ಆಫ್ಘಾನಿಸ್ತಾನದಿಂದ ಹಿಡಿದು ಬರ್ಮಾದವರೆಗೆ ವ್ಯಾಪಿಸಿದೆ. ಏಷ್ಯಾ
ಖಂಡದ ೧೦ ಮಹಾನ್ ನದಿಗಳು ಅಮು ದರ್ಯಾ, ಸಿಂಧು, ಗಂಗಾ, ಬ್ರಹ್ಮಪುತ್ರ, ಇರಾವತಿ, ಸಾಲ್ವಿನ್, ಮೆಕಾಂಗ್, ಯಾಂಗ್‌ಸ್ಟೆ, ಹುವಾಂಗೆ ಮತ್ತು ತರೀಮ್. ಈ ಹಿಂದುಕುಶ್ -ಹಿಮಾಲಯನ್ ಪರ್ವತಶ್ರೇಣಿಯು ನೈಋತ್ಯ ಮಾರುತ ಗಳನ್ನು ತಡೆಯುತ್ತಿದ್ದ ಕಾರಣ ಈ ಹತ್ತು ನದಿಗಳಲ್ಲಿ ಸದಾ
ನೀರನ್ನು ಹರಿಸುತ್ತಿತ್ತು.

ಇಂದಿನ ವಾಯವ್ಯ ಭಾರತ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಪ್ರದೇಶದಲ್ಲಿ ಸರಸ್ವತಿ ನದಿ, ಸಿಂಧು ನದಿ ಹಾಗೂ ಏಳು ಉಪನದಿಗಳು ಹರಿಯುತ್ತಿದ್ದು,
‘ಸಪ್ತ ಸಿಂಧು’ ಪ್ರದೇಶವೆಂದು ಹೆಸರಾಗಿತ್ತು. ಸಪ್ತಸಿಂಧು ಪ್ರದೇಶದಲ್ಲಿ ಇಂದಿಗೆ ಕ್ರಿ.ಪೂ.೭೦೦೦- ಕ್ರಿ.ಪೂ.೫೫೦೦ ವರ್ಷಗಳ ಹಿಂದೆ ಮೊದಲ ಬಾರಿಗೆ ಮಾನವ ಜನಾಂಗವು ನೆಲೆಸಿತು, ತನ್ನದೇ ನಾಗರಿಕತೆಯನ್ನು ಬೆಳೆಸಿತು. ಅದುವೇ ಮೆಹರ್ಘಡ-೧ ನಾಗರಿಕತೆ. ಇದು ಕ್ರಿ.ಪೂ. ೩೩೦೦ರ ವೇಳೆಗೆ ಉಚ್ಛ್ರಾಯ ಸ್ಥಿತಿಯನ್ನು ತಲುಪಿತು.

ಕ್ರಿ.ಪೂ.೩೦೦ರವರೆಗೂ ಮೆರೆದ ಈ ನಾಗರಿಕತೆಯು ಕ್ರಮೇಣ ವೈದಿಕ ನಾಗರಿಕತೆಯ ಜತೆಯಲ್ಲಿ ಸೇರಿಹೋಯಿತು. ಈ ನಾಗರಿಕತೆಯು ಪ್ರಧಾನವಾಗಿ ಸರಸ್ವತಿ ನದಿ (ಗಗ್ರಾ-ಹಕ್ಕರ್) ಮತ್ತು ಸಿಂಧು ನದಿಯ ಇಕ್ಕೆಲಗಳಲ್ಲಿ ವ್ಯಾಪಿಸಿದ್ದ ಕಾರಣ, ಇದನ್ನು ಸಿಂಧು-ಸರಸ್ವತಿ ನಾಗರಿಕತೆ ಎಂದು ಕರೆದರು. ೧೦
ಲಕ್ಷ ಚ.ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ ೨,೬೦೦ ನಗರಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಕೇವಲ ಶೇ.೨ರಷ್ಟು ನಗರಗಳ ಉತ್ಖನನ ಮತ್ತು ಸಂಶೋಧನೆಯು ನಡೆದಿದೆ. ಹಾಗಾಗಿ ನಮಗೆ ಸಿಂಧು-ಸರಸ್ವತಿ ನಾಗರಿಕತೆಯ ಬಗ್ಗೆ ಎಷ್ಟು ತಿಳಿದಿದೆಯೋ, ಅದಕ್ಕಿಂತಲೂ ಹೆಚ್ಚಿನದನ್ನು ತಿಳಿಯಬೇಕಾಗಿದೆ.

ಸಾರ್ವಜನಿಕ ನೈರ್ಮಲ್ಯ: ಸಿಂಧು-ಸರಸ್ವತಿ ನಾಗರಿಕತೆಯ ಜನರ ಆರೋಗ್ಯಪ್ರeಯು ಅದ್ಭುತವಾಗಿತ್ತು. ಜಗತ್ತಿನ ಯಾವುದೇ ನಾಗರಿಕತೆಯಲ್ಲಿ ಕಂಡು ಬರದಂಥ ವ್ಯವಸ್ಥಿತ ನಗರ ಯೋಜನೆಯನ್ನು ಇಲ್ಲಿ ಕಾಣಬಹುದು. ನಗರಗಳಲ್ಲಿ ಪ್ರಧಾನ ರಸ್ತೆಯು ಉತ್ತರದಿಂದ ದಕ್ಷಿಣಕ್ಕೆ ಸಾಗುತ್ತಿತ್ತು. ಈ ಪ್ರಧಾನ ರಸ್ತೆಯನ್ನು ಅಲ್ಲಲ್ಲಿ ಛೇದಿಸುವ ಅಡ್ಡರಸ್ತೆಗಳಿದ್ದವು. ಹಾಗಾಗಿ ಮನೆಗಳನ್ನು ಕಟ್ಟಲು ನಿರ್ದಿಷ್ಟ ಚೌಕಗಳು ರೂಪುಗೊಳ್ಳುತ್ತಿದ್ದವು. ಅಲ್ಲಿ ಸುಟ್ಟ ಇಟ್ಟಿಗೆ ಗಳಿಂದ ಕಟ್ಟಿದ ಮನೆಗಳಿದ್ದವು. ಪ್ರತಿಯೊಂದು ಮನೆಯಲ್ಲಿ ಶೌಚ ಮತ್ತು ಸ್ನಾನದ ಗೃಹಗಳಿದ್ದವು. ಪ್ರತಿಯೊಂದು ಮನೆಯ ಮುಂಭಾಗದಲ್ಲಿ ಮುಚ್ಚಳ ವಿರುವ ಕಸದ ತೊಟ್ಟಿಗಳು ಇರುತ್ತಿದ್ದವು. ಪ್ರತಿದಿನ ನಸುಕಿನಲ್ಲಿಯೇ ಅವುಗಳ ಸ್ವಚ್ಛತಾಕಾರ್ಯ ಪೂರ್ಣಗೊಳ್ಳುತ್ತಿತ್ತು.

ಪ್ರತಿಯೊಂದು ಮನೆಯ ಹಿಂಭಾಗದಲ್ಲಿ ಕುಡಿಯುವ ನೀರಿನ ಬಾವಿಗಳಿರುತ್ತಿದ್ದವು. ಸಾರ್ವಜನಿಕ ಸ್ನಾನದ ಕೊಳಗಳು ಹಾಗೂ ಅವುಗಳಿಗೆ ಹೊಂದಿ ಕೊಂಡಂತಿರುವ ಕಟ್ಟಡಗಳು ಬಹುಶಃ ಪೂಜಾಸ್ಥಳ ಆಗಿದ್ದಿರಬಹುದು. ಕೆಲವು ನಗರಗಳಲ್ಲಿ ಮಳೆನೀರಿನ ಕೊಯ್ಲು ವ್ಯವಸ್ಥಿತವಾಗಿ ನಡೆಯುತ್ತಿತ್ತು. ಕುಡಿಯುವ ನೀರಿಗೆ ಯಾವ ತೊಂದರೆಯೂ ಇರಲಿಲ್ಲ. ನೀರಾವರಿ ಮತ್ತು ಕೃಷಿ ಚಟುವಟಿಕೆಗಳು ಅತ್ಯುತ್ತಮ ಸ್ತರವನ್ನು ತಲುಪಿದ್ದವು. ಹಸು, ಎಮ್ಮೆ, ಮೇಕೆ, ಕುರಿ, ಹಂದಿಗಳನ್ನು ಸಾಕಿಕೊಂಡಿದ್ದರು.

ಧಾನ್ಯಗಳನ್ನು ಒಕ್ಕುವ ಒರಳುಗಳು, ಬೀಸುವ ಕಲ್ಲುಗಳು ಹಾಗೂ ಕುಟ್ಟುವ ಉಪಕರಣಗಳು ದೊರೆತಿವೆ. ಕುಂಭ ಕಲೆಯು ಅವರಿಗೆ ಚೆನ್ನಾಗಿ ತಿಳಿದಿತ್ತು. ಮನೆಗಳಲ್ಲಿ ದೊಡ್ಡ ಒಲೆಗಳು ಇರುತ್ತಿದ್ದವು. ಇಂದಿನ ತಂದೂರಿ ಒಲೆಗಳಂಥವೂ ದೊರೆತಿವೆ. ಬಹುಶಃ ಅವರು ರೊಟ್ಟಿ ಮತ್ತು ಗಂಜಿಯನ್ನು ನಿತ್ಯ
ಸೇವಿಸುತ್ತಿದ್ದಿರಬೇಕು. ಅನ್ನವನ್ನು ಮಾಡುವುದೂ ಅವರಿಗೆ ಗೊತ್ತಿರಬೇಕು. ಹಾಗಾಗಿ ಸಿಂಧು-ಸರಸ್ವತಿ ಸಂಸ್ಕೃತಿಯ ಜನರು ಸಮತೋಲಿತ ಆಹಾರವನ್ನು ಸೇವಿಸುತ್ತಿದ್ದು, ಆರೋಗ್ಯವಂತರಾಗಿ ಇದ್ದಿರಬೇಕು ಎಂದು ಭಾವಿಸಬಹುದು.

ಭಾರತದ ಪಶ್ಚಿಮದಲ್ಲಿ ಲೋಥಾಲ್ ನಗರವು ಬಂದರು ಕಟ್ಟೆಯಾಗಿತ್ತು. ಇಲ್ಲಿಂದ ಹೊರಟ ಹಡಗುಗಳು ಪರ್ಷಿಯಾ, ಮೆಸೊಪೊಟೋಮಿಯ ಮತ್ತು ಈಜಿಪ್ಷಿಯನ್ ನಾಗರಿಕತೆಯ ಜನರೊಡನೆ ವ್ಯಾಪಾರ-ವಾಣಿಜ್ಯ-ವಹಿವಾಟುಗಳನ್ನು ನಡೆಸುತ್ತಿದ್ದವು. ಚೀನಾ ದೇಶದೊಡನೆಯೂ ವಹಿವಾಟು ಇದ್ದಿರ ಬೇಕು. ಹಾಗಾಗಿ ಈ ಎಲ್ಲ ಸಂಸ್ಕೃತಿಯಲ್ಲಿ ಇದ್ದಂಥ ವೈದ್ಯಕೀಯ ಜ್ಞಾನವು, ಸಿಂಧು-ಸರಸ್ವತಿ ಜನರಲ್ಲೂ ಇದ್ದಿರಬೇಕು ಎಂದು ನಾವು ಸರಳವಾಗಿ ತರ್ಕಿಸಬಹುದು.

ಅವುಗಳನ್ನು ಈ ಕೆಳಕಂಡಂತೆ ಸಂಗ್ರಹಿಸಬಹುದು:

? ಸಿಂಧು-ಸರಸ್ವತಿಯ ಯಾವ ನಗರದಲ್ಲಿಯೂ ವ್ಯವಸ್ಥಿತ ಆಸ್ಪತ್ರೆಗಳು ಇದ್ದ ಬಗ್ಗೆ ಪುರಾವೆಗಳು ದೊರೆತಿಲ್ಲ. ಸಾರ್ವಜನಿಕ ನೈರ್ಮಲ್ಯದ ಬಗ್ಗೆ ಇಷ್ಟೆಲ್ಲ ಕಾಳಜಿ ತೆಗೆದು ಕೊಂಡಿರುವವರು, ವ್ಯವಸ್ಥಿತ ಆಸ್ಪತ್ರೆಗಳನ್ನು ಕಟ್ಟಿರಲಿಲ್ಲ ಎಂದರೆ ನಂಬಲು ಕಷ್ಟ. ಆ ಕಟ್ಟಡಗಳು ನಮಗೆ ದೊರೆತಿಲ್ಲ, ಅಷ್ಟೆ. ಬಹುಶಃ ಮುಂದಿನ ದಿನಗಳಲ್ಲಿ ದೊರೆಯಬಹುದು.

? ಇವರು ಕಪಾಲರಂಧ್ರನವನ್ನು (ಟ್ರೆಫೈನೇಶನ್) ಮಾಡುತ್ತಿದ್ದರು. ಕೋಲ್ಕತ್ತದಲ್ಲಿರುವ ಭಾರತೀಯ ಮಾನವಶಾಸ್ತ್ರದ ಸರ್ವೇಕ್ಷಣ ವಿಭಾಗದ ಉಗ್ರಾಣ ದಲ್ಲಿ ಕ್ರಿ.ಪೂ.೪೩೦೦ ವರ್ಷಗಳಷ್ಟು ಹಿಂದಿನ ಕಪಾಲವಿದೆ. ಈ ಕಪಾಲದ ಕಪಾಲರಂಧ್ರನವು ಕ್ರಮೇಣ ಗುಣಮುಖವಾಗುತ್ತಿದ್ದ, ಅಂದರೆ ಹೊಸ ಮೂಳೆ ಬೆಳೆಯುತ್ತಿದ್ದ ಲಕ್ಷಣಗಳು ಇವೆ. ಕಪಾಲರಂಧ್ರನವನ್ನು ನಡೆಸಲು ಆಸ್ಪತ್ರೆಯಂಥ ಒಂದು ಕಟ್ಟಡ ಇದ್ದಿರಲೇಬೇಕು.

? ಕ್ರಿ.ಪೂ.೭೦೦೦ ವರ್ಷಗಳಷ್ಟು ಹಿಂದೆಯೇ ಆರಂಭವಾದ ಮೆಹರ್ಘಡ ನಾಗರಿಕತೆಯ ಕಪಾಲಗಳನ್ನು ಅಧ್ಯಯನ ಮಾಡಿದಾಗ, ಹಲ್ಲುಗಳನ್ನು ಕೊರೆದು ಅದರಲ್ಲಿ ಜಡವಸ್ತುವನ್ನು ತುಂಬಿರುವ ಉದಾಹರಣೆಗಳು ದೊರೆತಿವೆ. ಹಲ್ಲಿನಲ್ಲಿ ರಂಧ್ರವನ್ನು ಮಾಡಲು ಅವರು ‘ಬೋ-ಡ್ರಿಲ್’ ಎಂಬ ಸರಳ ಸಾಧನವನ್ನು ಬಳಸುತ್ತಿದ್ದರು. ಇಲ್ಲಿ ದೊರೆತ ಪೂರ್ಣ ಅಸ್ಥಿಪಂಜರಗಳ ಬಾಯಿಯನ್ನು ಗಮನಿಸಿದಾಗ, ಅವು ಬಹುಪಾಲು ಆರೋಗ್ಯವಾಗಿದ್ದವು.

? ಇವರು ಸಸ್ಯಜನ್ಯ-ಪ್ರಾಣಿಜನ್ಯ-ಖನಿಜಜನ್ಯವಸ್ತುಗಳನ್ನು ಬಳಸಿ ನಾನಾ ಔಷಽಗಳನ್ನು ತಯಾರಿಸುತ್ತಿದ್ದಿರಬೇಕು. ಜಿಂಕೆಯ ಕೊಂಬು ಹಾಗೂ ಬೆಣಸ ಅಥವಾ ಕಟ್ಲ್ ಮೀನಿನ ಮೂಳೆಗಳು ದೊರೆತಿವೆ.

? ಆಯುರ್ವೇದ, ಸಿದ್ಧ (ಸಿದ್ಧರ ಮುದ್ರೆ) ಹಾಗೂ ಯೋಗವಿಜ್ಞಾನಗಳು (ಪಶುಪತಿನಾಥ ಮುದ್ರೆ) ಸಿಂಧು-ಸರಸ್ವತಿ ಸಂಸ್ಕೃತಿಯಲ್ಲಿಯೇ ಜನಿಸಿದವು.

? ತಕ್ಷಶಿಲಾ ವಿವಿ: ಸಿಂಧು-ಸರಸ್ವತಿ ಒಡಲಿನಲ್ಲಿ ಸರಿ ಸುಮಾರು ಕ್ರಿ.ಪೂ.೧೫೦೦ರ ಆಸುಪಾಸಿನಲ್ಲಿ ಜನ್ಮತಳೆದ ಋಗ್ವೇದದಲ್ಲಿ ಆರೋಗ್ಯಕ್ಕೆ ಸಂಬಂಽಸಿದ ಮೂಲಭೂತ ಮಾಹಿತಿ ದೊರೆಯುತ್ತದೆ. ಋಗ್ವೇದದ ಉಪವೇದವಾಗಿ ಆಯುರ್ವೇದವು ಉದಯಿಸಿತು. ಅಥರ್ವಣ ವೇದವು ಆರೋಗ್ಯದ ವಿಸ್ತೃತ ವಿವರಣೆಯನ್ನು ಒಳಗೊಂಡಿದೆ. ವೈದಿಕ ಯುಗದ ವೈದ್ಯಕೀಯ ಸೌಲಭ್ಯಗಳನ್ನು ಅರಿಯಲು ಬಹುಶಃ ತಕ್ಷಶಿಲಾ ವಿಶ್ವವಿದ್ಯಾಲಯದ ಕಾಲಕ್ಕೆ ಬರಬೇಕು. ಇದು ಸುಮಾರು ಕ್ರಿ.ಪೂ.೫ನೆಯ ಶತಮಾನದಲ್ಲಿ ಆರಂಭವಾಗಿ ಕ್ರಿ.ಶ. ೫ನೆಯ ಶತಮಾನದವರೆಗೆ, ಸುಮಾರು ೧೦೦೦ ವರ್ಷಗಳ ಕಾಲ ಮೆರೆಯಿತು.

ಭಾರತ, ಚೀನಾ, ಗ್ರೀಸ್, ಪರ್ಷಿಯಾ, ಬ್ಯಾಬಿಲೋನಿಯ, ಈಜಿಪ್ಟ್, ಫೋನೀಶಿಯ, ಸಿರಿಯ, ಅರೇಬಿಯಾ, ಶ್ರೀಲಂಕಾ ದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ವೈದ್ಯವಿದ್ಯಾರ್ಥಿಗಳು ಅಂಗರಚನ ವಿಜ್ಞಾನ, ಶಸ್ತ್ರ ವೈದ್ಯಕೀಯ, ರೋಗ ವಿಜ್ಞಾನ, ಸಸ್ಯವಿಜ್ಞಾನ, ಔಷಧ ವಿಜ್ಞಾನಗಳನ್ನು ಕಲಿಯು ತ್ತಿದ್ದರು. ಹತ್ತು ವಿದ್ಯಾರ್ಥಿಗಳಿಗೆ ಒಬ್ಬ ಗುರುವಿರುತ್ತಿದ್ದರು. ಗುರುಗಳು ವೈದ್ಯಕೀಯ ಸಿದ್ಧಾಂತಕ್ಕೆ ಎಷ್ಟು ಆದ್ಯತೆಯನ್ನು ಕೊಡುತ್ತಿದ್ದರೋ ಅಷ್ಟೇ ಆದ್ಯತೆಯನ್ನು ಪ್ರಾಯೋಗಿಕ ಚಟುವಟಿಕೆಗಳಿಗೆ ನೀಡುತ್ತಿದ್ದರು.

ತಕ್ಷಶಿಲಾ ವಿಶ್ವವಿದ್ಯಾಲಯದಲ್ಲಿ ಚರಕ ಮಹರ್ಷಿಗಳು ಅಧ್ಯಯನ ಮಾಡಿದರು. ಬಹುಶಃ ಚರಕ ಸಂಹಿತೆಯನ್ನೂ ಅವರು ಇಲ್ಲಿಯೇ ರಚಿಸಿರಬೇಕು. ಗೌತಮ ಬುದ್ಧನಿಗೆ ಚಿಕಿತ್ಸೆಯನ್ನು ನೀಡಿದ ಜೀವಕ ಮಹರ್ಷಿಯು ಇಲ್ಲಿಯೇ ಅಧ್ಯಯನವನ್ನು ಮಾಡಿದ್ದರು. ಸುಶ್ರುತ ಮಹರ್ಷಿಗಳೂ ಇಲ್ಲಿಯೇ ಅಧ್ಯಯನ ಮಾಡಿರಬೇಕು ಎನ್ನುವ ಅಭಿಪ್ರಾಯವಿದೆ. ಆಯುರ್ವೇದದಲ್ಲಿ ಬರುವ ಅಷ್ಟಾಂಗ ಹೃದಯದ ಐದನೆಯ ಅಂಗವೇ ಶಲ್ಯತಂತ್ರ ಅಥವಾ ಶಸ್ತ್ರ ವೈದ್ಯಕೀಯ. ಶಲ್ಯತಂತ್ರವು ಚುಚ್ಚಿಕೊಂಡ ದರ್ಭೆಯನ್ನು ತೆಗೆಯುವುದರಿಂದ ಹಿಡಿದು ಉದರದಲ್ಲಿರುವ ಮೃತಶಿಶುವನ್ನು ಛೇದಿಸಿ ಹೊರತೆಗೆಯು ವವರೆಗೂ ಹಲವು ತಂತ್ರಗಳನ್ನು ವಿವರಿಸುತ್ತದೆ. ಮೂಗು, ಕಿವಿಗಳ ವಿರೂಪವನ್ನು ಸರಿಪಡಿಸುತ್ತಿದ್ದ ಸುರೂಪಿಕಾ ಶಸ್ತ್ರಚಿಕಿತ್ಸೆ, ಕಣ್ಣುಪೊರೆಯನ್ನು ನಿವಾರಿಸುವ ಶಸ್ತ್ರಚಿಕಿತ್ಸೆ, ಮೂತ್ರಾಶಯದಲ್ಲಿ ಬೆಳೆದ ಕಲ್ಲುಗಳನ್ನು ನಿವಾರಿಸುವ ಶಸಚಿಕಿತ್ಸೆ ಇತ್ಯಾದಿಗಳನ್ನು ನಡೆಸುತ್ತಿದ್ದರು. ಇದಕ್ಕಾಗಿ ಸುಮಾರು ೧೨೦ ಯಂತ್ರಗಳನ್ನು ಅಂದರೆ ಉಪಕರಣಗಳನ್ನು ಹಾಗೂ ೩೦೦ಕ್ಕೂ ಹೆಚ್ಚು ಶಸ್ತ್ರಗಳನ್ನು ರೂಪಿಸಿದ್ದರು. ಇವುಗಳಲ್ಲಿ ನಳಿಕೆಯಂಥವೂ ಇದ್ದವು.

ವಿಶೇಷವಾದ ಕ್ಷಾರದ್ರಾವಣದಿಂದ ಶಸ್ತ್ರಗಳನ್ನು ಶುದ್ಧೀಕರಿಸುತ್ತಿದ್ದರು. ಕ್ಷಾರ ಕರ್ಮ ಮತ್ತು ಅಗ್ನಿಕರ್ಮ ಎಂಬ ವಿಶೇಷ ಶಸ್ತ್ರಚಿಕಿತ್ಸಾ ತಂತ್ರಗಳನ್ನೂ ಬಳಸುತ್ತಿದ್ದರು. ೧೦,೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ತಕ್ಷಶಿಲಾದಂಥ ದೊಡ್ಡ ವಿಶ್ವವಿದ್ಯಾಲಯದಲ್ಲಿ ಆಸ್ಪತ್ರೆಗಳು ಇರಲಿಲ್ಲ ಎಂದರೆ ನಂಬಲು ಕಷ್ಟ. ಆದರೆ ಆಸ್ಪತ್ರೆಗಳ ಕುರುಹುಗಳು ನಮಗೆ ದೊರೆತಿಲ್ಲ. ಬಹುಶಃ ಸಿಂಧು ಸರಸ್ವತಿ ಸಂಸ್ಕೃತಿಯ ಶೇ.೯೮ರಷ್ಟು ನಗರಗಳ ಉತ್ಖನನವನ್ನು ನಡೆಸಿದಾಗ, ಈ ಬಗ್ಗೆ ಹೆಚ್ಚಿನ ಮಾಹಿತಿಯು ದೊರೆಯಬಹುದು.