Sunday, 15th December 2024

ಹಳ್ಳಿ ಶಾಲೆಯ ವಿದ್ಯಾರ್ಥಿಯ ಬಿಕ್ಕಟ್ಟುಗಳು !

ಶಶಾಂಕಣ

shashidhara.halady@gmail.com

ನಾವೆಲ್ಲಾ ಹೈಸ್ಕೂಲಿಗೆ ಹೋಗುವಾಗ, ಪ್ರತಿದಿನ ಬುತ್ತಿಪಾತ್ರೆ ತೆಗೆದುಕೊಂಡು ಹೋಗುವುದು ತೀರಾ ಸಾಮಾನ್ಯ ವಿಚಾರ. ನಮ್ಮ ಹೈಸ್ಕೂಲಿನ ಸುಮಾರು
ಶೇ.೭೦ರಷ್ಟು ವಿದ್ಯಾರ್ಥಿಗಳು, ಕೈಯಲ್ಲೊಂದು ಉಗ್ಗ (ಬುತ್ತಿ) ಹಿಡಿದು ಬರುತ್ತಿದ್ದರು. ಅಂದಿನ ಉಗ್ಗದ ಪಾತ್ರೆಗಳಲ್ಲಿ ಅಷ್ಟೊಂದು ವೈವಿಧ್ಯ ಇರುತ್ತಿರಲಿಲ್ಲ- ಸುಮಾರು ಒಂದು ಲೀಟರ್ ಹಿಡಿಯುವ ಅಲ್ಯುಮಿನಿಯಂ ಅಥವಾ ಸ್ಟೀಲಿನ ಪಾತ್ರೆ, ಅದಕ್ಕೊಂದು ಮುಚ್ಚಳ, ಅದನ್ನು ಕೈಯಲ್ಲಿ ಹಿಡಿಯಲು ಅನುಕೂಲವಾಗುವಂತೆ ಲೋಹದ ಅರ್ಧವೃತ್ತಾಕಾರದ ಕಡ್ಡಿ. ಕೆಲವರು ಹಿತ್ತಾಳೆಯ ಉಗ್ಗವನ್ನೂ ತರುತ್ತಿದ್ದುದುಂಟು.

ಆ ದಿನಗಳಲ್ಲಿ ಪ್ಲಾಸ್ಟಿಕ್‌ನ ಟಿಫನ್ ಬಾಕ್ಸ್ ಲಭ್ಯವಿರಲಿಲ್ಲ. ಬೆಳಗ್ಗೆ ೮ ಗಂಟೆಯು ಶಾಲೆಗೆ ಹೊರಡುವ ಸಮಯ; ಮನೆಯಲ್ಲಿ ಗಂಜಿ (ಕೊಚ್ಚಿಗೆ ಅಕ್ಕಿ ಗಂಜಿ) ಊಟ ಮಾಡಿದ ನಂತರ, ಹೆಚ್ಚಿನವರು ಅದೇ ಗಂಜಿ ಮತ್ತು ಉಪ್ಪಿನ ಕಾಯಿ ಯನ್ನು ಉಗ್ಗದ ಪಾತ್ರೆಗೆ ತುಂಬಿಸಿಕೊಂಡು ತರುತ್ತಿದ್ದರು. ಕೆಲವು ವಿದ್ಯಾರ್ಥಿ ಗಳು ಗಂಜಿ-ಮೊಸರು- ಉಪ್ಪಿನ ಕಾಯಿಯನ್ನು ತಂದರೆ, ಇನ್ನು ಕೆಲವರು ಹಿಂದಿನ ದಿನ ಉಳಿದ ಅನ್ನವನ್ನು ನೀರಿನಲ್ಲಿ ನೆನೆಸಿಕೊಂಡು ತರುತ್ತಿದ್ದುದೂ ಉಂಟು. ಅವರವರ ಶಕ್ತ್ಯಾನುಸಾರ ಇಷ್ಟರ ಮಟ್ಟಿಗಿವೆ ವೈವಿಧ್ಯ. ಆದರೆ ಮೊಸರು ತರುತ್ತಿದ್ದವರು ತೀರಾ ಕಡಿಮೆ. ಆಗಿನ ದಿನಗಳಲ್ಲಿ ಮಜ್ಜಿಗೆ, ಮೊಸರನ್ನು ತಯಾರಿಸುತ್ತಿದ್ದವರ ಸಂಖ್ಯೆಯೂ ಕಡಿಮೆ; ಇಂದಿನ ರೀತಿ ಹಳ್ಳಿ ಹಳ್ಳಿಗಳಲ್ಲಿ ಹಾಲಿನ ಡೈರಿ ಇಲ್ಲದೇ ಇದ್ದುದರಿಂದ, ಹಾಲು ಮೊಸರುಗಳು ಸಹ ಕಡಿಮೆ.

ಕರಾವು ಇಲ್ಲದೇ ಇದ್ದ ಅದೆಷ್ಟೋ ಮನೆಗಳಿದ್ದವು. ಕೆಲವರ ಮಯಲ್ಲಿ ಕರಾವು ಇದ್ದರೂ, ಒಂದು ಸೊಲಿಗೆ ಅಥವಾ ಅರ್ಧ ಸಿದ್ದೆ ಮಾತ್ರ ಹಾಲು ಕೊಡುತ್ತಿದ್ದ ಮಲೆನಾಡು ಗಿಡ್ಡ ಹಸುಗಳ ಹಾಲು; ಅದರಿಂದ ಬಳಾಲಗೆ ಮೊಸರು ಮಾಡಿಕೊಳ್ಳಲು ಹೇಗೆ ತಾನೆ ಸಾಧ್ಯವಿತ್ತು? ನಮ್ಮ ನಮ್ಮ ಕ್ಲಾಸ್‌ ರೂಂಗಳಲ್ಲೇ, ಮಧ್ಯಾಹ್ನದ ಊಟದ ಬಿಡುವಿನಲ್ಲಿ ಬುತ್ತಿಊಟ ತಿಂದು, ಶಾಲೆಯ ಹಿಂದೆ ಹರಿಯುತ್ತಿದ್ದ ತೋಡಿನಲ್ಲಿ ಬುತ್ತಿ ಪಾತ್ರೆ ತೊಳೆಯುವ ಪರಿಪಾಠ.

ಹಾಗೆಯೇ, ಶಾಲೆಯ ಎದುರಿದ್ದ ಬಾವಿಯ ನೀರನ್ನು ಕೊಡಪಾನದಿಂದ ಎತ್ತಿ, ಕೈ ತೊಳೆಯಲು, ಬುತ್ತಿಪಾತ್ರೆ ತೊಳೆಯಲು ಉಪಯೋಗಿಸುತ್ತಿದ್ದುದೂ ಉಂಟು. ಹೆಚ್ಚಿನ ವಿದ್ಯಾರ್ಥಿಗಳ ಮನೆ ನಾಲ್ಕಾರು ಕಿ.ಮೀ. ದೂರದಲ್ಲಿತ್ತು. ಬುತ್ತಿ ಊಟ ಮುಗಿಸಿ, ಮಧ್ಯಾಹ್ನದ ಪಾಠ ಕೇಳಿ ಸಂಜೆ ಮನೆಗೆ ಹೋದ ನಂತರ ಮನೆಯೂಟ. ಒಂದು ದಿನ ಹತ್ತನೆಯ ತರಗತಿಯ ಒಬ್ಬ ವಿದ್ಯಾರ್ಥಿನಿಯು ಬುತ್ತಿಪಾತ್ರೆಯ ಮುಚ್ಚಳ ತೆಗೆದಾಗ, ಆಘಾತಕಾರಿ ದೃಶ್ಯ! ಅವಳಿಗೆ ಮಾತ್ರವಲ್ಲ, ತರಗತಿಯ ಎಲ್ಲರಿಗೂ! ಬುತ್ತಿಪಾತ್ರೆಯಲ್ಲಿದ್ದ ಗಂಜಿಯ ನಡುವೆ, ಒಂದು ಭಯಾನಕ ವರ್ಣವಿನ್ಯಾಸದ ‘ಪಡ್ಚೇಳು’ (ಲಕ್ಷ್ಮಿ ಚೇಳು) ಮಲಗಿತ್ತು- ಅಂದರೆ, ನಿದ್ದೆ ಮಾಡಿದ್ದಲ್ಲ, ಅದು ಗಂಜಿಯ ನಡುವೆ ಸತ್ತು ಮಲಗಿತ್ತು. ‘ಅಯ್ಯಮ್ಮಾ, ಇದೆ ಎಂತ ಕಾಣಿ!’ ಎಂದು ಆ ವಿದ್ಯಾರ್ಥಿನಿ ಕೂಗಿದ ರಭಸಕ್ಕೆ, ಎಲ್ಲರೂ ಬೆಚ್ಚಿಬಿದ್ದು ಬುತ್ತಿಪಾತ್ರೆಯ ಬಳಿ ಬಂದರು.

ಕಪ್ಪು ಮತ್ತು ಕಿತ್ತಳೆ ಪಟ್ಟಿಗಳ ವಿನ್ಯಾಸದ ಒಂದು ಸಹಸ್ರಪದಿ ಅದರೊಳಗಿತ್ತು. ಶಾಲೆಯಲ್ಲೇ ಇದ್ದ ಒಬ್ಬರು ಅಧ್ಯಾಪಕರಿಗೂ ಸುದ್ದಿ ಮುಟ್ಟಿತು. ತಿನ್ನುವ ಗಂಜಿಯ ನಡುವೆ, ಅಂಥ ಭಯ ಹುಟ್ಟಿಸುವ ಲಕ್ಷ್ಮಿ ಚೇಳು ಸೇರಿಕೊಂಡಿದ್ದಾದರೂ ಹೇಗೆ! ಬೆಳಗ್ಗೆ ಮನೆಯಲ್ಲಿ ಮಾಡಿದ ಗಂಜಿಯನ್ನು ಬುತ್ತಿಗೆ ಹಾಕಿ ಕೊಂಡ ನಂತರ, ಮನೆಯವರೆಲ್ಲರೂ ಅದೇ ಗಂಜಿಯನ್ನು ಸೇವಿಸುವುದು ಹಳ್ಳಿಜನರ ಪದ್ಧತಿ. ಅಂದರೆ, ಅದೇ ಗಂಜಿಯನ್ನು ಮನೆಯವರು ಮಧ್ಯಾಹ್ನ ಸೇವಿಸುತ್ತಾರೆಯೆ? ಬುತ್ತಿಪಾತ್ರೆ ಒಳಗೆ ಆ ಜೀವಿ ಬಂದದ್ದಾರೂ ಹೇಗೆ- ಈ ರೀತಿಯ ಚರ್ಚೆಗಳು. ಗಲಾಟೆ ಕಂಡು, ಇದೇನೆಂದು ವಿಚಾರಿಸಲು ಬಂದಿದ್ದ ಅಧ್ಯಾಪಕರು, ಆ ವಿದ್ಯಾರ್ಥಿನಿಯನ್ನು ತಕ್ಷಣ ಮನೆಗೆ ಕಳಿಸಿದರು- ಮನೆಯಲ್ಲಿದ್ದ ಗಂಜಿಯ ಕಥೆ ಏನಾಯಿತು ಎಂಬ ಕಾಳಜಿಯಿಂದ.

ಪಾಪ, ಮನೆಯವರು ಅದಾಗಲೇ ಗಂಜಿಯನ್ನು ಸೇವಿಸಿದ್ದರೋ ಏನೋ? ಅಂದು ಆ ವಿದ್ಯಾರ್ಥಿನಿಯ ಬುತ್ತಿಪಾತ್ರೆಯಲ್ಲಿ ಕಂಡುಬಂದದ್ದು ಸಣ್ಣ ಗಾತ್ರದ ಸಾಮಾನ್ಯ ಎನಿಸಿದ್ದ ಲಕ್ಷ್ಮಿ ಚೇಳು ಅಲ್ಲ; ಬದಲಿಗೆ, ದೊಡ್ಡ ಗಾತ್ರದ, ಪಟ್ಟೆ ಪಟ್ಟೆ ಬಣ್ಣ ಹೊಂದಿದ ಲಕ್ಷ್ಮಿ ಚೇಳು. ನಮ್ಮ ಹಳ್ಳಿಯಲ್ಲಿ ಅದನ್ನು ಪಟ್‌ ಚೇಳು ಎಂದು ಕರೆಯುತ್ತಾರೆ- ಪಟ್ಟೆ ಪಟ್ಟೆ ಇರುವ ಚೇಳು, ಪಟ್‌ಚೇಳು! ಆರರಿಂದ ಹನ್ನೆರಡು ಇಂಚು ಉದ್ದ ಇರುವ ಆ ಪಟ್‌ಚೇಳು, ತನ್ನ ಬಣ್ಣದಿಂದಲೇ ಭಯ ಹುಟ್ಟಿಸಬಲ್ಲದು. ಕಪ್ಪು ಮತ್ತು ಕಿತ್ತಳೆ ಬಣ್ಣದ ಪಟ್ಟಿಗಳು ಅದರ ಮೈತುಂಬಾ ಇರುತ್ತವೆ. ಹುಲಿಯ ಮೈಮೇಲಿನ ವರ್ಣ ವಿನ್ಯಾಸವನ್ನು ಹೋಲುವ ಆ ಪಟ್‌ಚೇಳನ್ನು ಹುಲಿ ಪಟ್‌ಚೇಳು ಅಥವಾ ಹುಲಿ ಲಕ್ಷ್ಮಿ ಚೇಳು ಎಂದೂ ಕರೆಯಬಹುದು!

ನಾವೆಲ್ಲಾ ಶಾಲೆಗೆ ನಡೆದು ಸಾಗುವಾಗ, ದಾರಿ ಪಕ್ಕದಲ್ಲಿ ನೆಲದ ಮೇಲೆ, ಹುಲ್ಲಿನ ಮೇಲೆ ಆಗಾಗ ಅವು ಕಾಣಿಸುವುದುಂಟು. ಮನೆ ಸುತ್ತಲೂ ಹರಡಿರಬ ಹುದಾದ ಅಡಕೆಪಟ್ಟೆ, ತೆಂಗಿನಗರಿ, ಕಸ-ಕಡ್ಡಿಗಳ ನಡುವೆಯೂ ಅದನ್ನು ಕಂಡದ್ದುಂಟು. ದಟ್ಟವಾದ ಕಿತ್ತಳೆ ಬಣ್ಣ, ನಡು ನಡುವೆ ಕಪ್ಪನೆಯ ಹೊಳೆಯುವ ಪಟ್ಟಿ ಹೊಂದಿರುವ, ಅಂಗೈಯಷ್ಟು ಉದ್ದವಿರುವ ಈ ಪಟ್‌ಚೇಳುಗಳು, ನಿಧಾನವಾಗಿ ಚಲಿಸುವಂಥವು. ಕೈಬೆರಳಿನಷ್ಟು ದಪ್ಪ ಇರುವ, ಹೊಳೆಯುವ ಬಣ್ಣ ಬಣ್ಣದ ದೇಹದ ಪಟ್‌ಚೇಳು, ನೋಡಲು ಭಯ ಹುಟ್ಟಿಸುವುದಾದರೂ, ಅದು ಮನುಷ್ಯರಿಗೆ ಕಚ್ಚಿದ ಸಂದರ್ಭಗಳು ತೀರಾ ಕಡಿಮೆ. ನಿಧಾನವಾಗಿ ಚಲಿಸುವ ಈ ಬಣ್ಣದ ಪಟ್‌ಚೇಳುಗಳನ್ನು ಕಂಡರೆ, ಪೊರಕೆ ಸಹಾಯದಿಂದ ದೂರ ಬಿಡುತ್ತಿದ್ದರೇ ಹೊರತು, ಸಾಯಿಸುವುದಿಲ್ಲ.

ಅದೇ, ಕೊಂಡಿಚೇಳನ್ನು ಕಂಡರೆ ನಮ್ಮ ಹಳ್ಳಿಯವರು ತಕ್ಷಣ ಬಡಿದುಹಾಕುತ್ತಾರೆ; ಅದರ ವಿಷ ಎಂದರೆ ಎಲ್ಲರಿಗೂ ಭಯ. ಆದರೆ ಬಣ್ಣದ ಪಟ್‌ಚೇಳು ಸೇರಿದಂತೆ, ವಿವಿಧ ರೀತಿಯ ಪಟ್‌ಚೇಳು, ಲಕ್ಷ್ಮಿ ಚೇಳು, ಸರಸ್ವತಿ ಚೇಳುಗಳನ್ನು ಸಾಯಿಸಬಾರದು ಎಂಬ ನಂಬಿಕೆ ಇದೆ. ಇದೇ ರೀತಿ, ಜೇಡ, ಹಲ್ಲಿಗಳ
ನ್ನೂ ನಮ್ಮೂರಿನವರು ಸಾಯಿಸುವುದಿಲ್ಲ. ಲಕ್ಷ್ಮಿ- ಸರಸ್ವತಿ ಚೇಳುಗಳು ಮನೆಯೊಳಗೆ ಬಂದರೂ, ಅವಕ್ಕೆ ಲಘು ಪೊರಕೆಸೇವೆಯ ಜತೆಯಲ್ಲೇ,
ಮರ್ಯಾದೆ ಸಹಿತ ಪೊರಕೆಯಲ್ಲೇ ಹಿಡಿದು ದೂರಕ್ಕೆ ಬಿಡುವ ಪದ್ಧತಿ!

ಬಣ್ಣ ಬಣ್ಣದ ಪಟ್ಟಿ ಇರುವ, ಹುಲಿಯ ಮೈಬಣ್ಣವನ್ನು ಹೋಲುವ ಬಣ್ಣದ ಪಟ್‌ಚೇಳು, ಒಂದು ನಿರುಪದ್ರವಿ ಸಹಸ್ರಪದಿ; ಆದರೆ, ತನ್ನ ದೊಡ್ಡ ಗಾತ್ರದಿಂದಲೇ ಎಲ್ಲರಲ್ಲೂ ದಿಗಿಲು ಹುಟ್ಟಿಸುತ್ತದೆ. ಇದನ್ನು ಇಂಗ್ಲಿಷಿನಲ್ಲಿ ‘ಇಂಡಿಯನ್ ಜಯಂಟ್ ಟೈಗರ್ ಸೆಂಟಿಪೀಡ್’ ಎಂದು ಕರೆದಿದ್ದಾರೆ. ಲಭ್ಯ ಮಾಹಿತಿ ಪ್ರಕಾರ, ಇದು ಮನುಷ್ಯನಿಗೆ ಕಚ್ಚಿದರೆ ಹೆಚ್ಚಿನ ಅಪಾಯವಿಲ್ಲ. ಸ್ವಲ್ಪ ನಂಜು ಮತ್ತು ತುಸು ಉರಿ ಉಂಟಾಗಬಹುದು, ಅಷ್ಟೆ. ದೊಡ್ಡ ಗಾತ್ರದ ಬಣ್ಣದ ಪಟ್‌ಚೇಳು, ಸಾದಾ ಪಟ್ ಚೇಳು, ಲಕ್ಷ್ಮಿ ಚೇಳು- ಇವೆಲ್ಲವೂ ಹೆಚ್ಚಿನ ವಿಷಕಾರಿ ಅಲ್ಲ.

ಆದರೆ, ಇಲ್ಲೊಂದು ಕೊರತೆ ಇದೆ: ಇಂಡಿಯನ್ ಜಯಂಟ್ ಟೈಗರ್ ಸೆಂಟಿಪೀಡ್ ಕುರಿತು ಹೆಚ್ಚಿನ ಸಂಶೋಧನೆ ನಡೆದಿಲ್ಲ; ದಕ್ಷಿಣ ಭಾರತ, ಶ್ರೀಲಂಕಾ, ಇಂಡೋನೇಷ್ಯಾ ಮೊದಲಾದ ದಕ್ಷಿಣ ಏಷ್ಯಾಪ್ರದೇಶದಲ್ಲಿ ಕಂಡು ಬರುವ ಇವು, ಒಂದು ಅಡಿಗಿಂತಲೂ ಹೆಚ್ಚು ಉದ್ದ ಬೆಳೆಯಬಲ್ಲವು! ಇವುಗಳ ಮೈಮೇಲಿನ ಬಣ್ಣದ ವಿನ್ಯಾಸ, ಕಿತ್ತಳೆ ಮತ್ತು ಕಪ್ಪು ಬಣ್ಣದ ಹೊಳೆಯುವ ಪಟ್ಟಿಗಳು, ವರ್ಣ ಸಂಯೋಜನೆ, ಅವು ತಮ್ಮ ನುಣುಪಾದ ‘ಸಹಸ್ರಪಾದ’ ಗಳನ್ನು ಬಳಸಿ ನಡೆಯುವ ಶೈಲಿ- ಇವೆಲ್ಲವೂ ಬೆರಗು ಮತ್ತು ದಿಗಿಲು ಹುಟ್ಟಿಸುವಂಥದ್ದೇ. ಆದರೆ, ನಮ್ಮ ರಾಜ್ಯದ ಮಲೆನಾಡಿನಲ್ಲಿ ಮತ್ತು ಕರಾವಳಿಯ ಕೆಲವು ಭಾಗಗಳಲ್ಲಿ ಕಾಣಸಿಗುವ ಇವುಗಳ ಜೀವನಕ್ರಮವನ್ನು ವ್ಯಾಪಕ ಅಧ್ಯಯನಕ್ಕೆ ಒಳಪಡಿಸಲಾಗಿಲ್ಲ ಎಂಬುದು ನಿಜಕ್ಕೂ ಅಚ್ಚರಿಯ ವಿಚಾರ.

ಮರಗಿಡಗಳಿಂದ, ಬೆಟ್ಟಗುಡ್ಡಗಳಿಂದ, ಗದ್ದೆ ತೋಡುಗಳಿಂದ ಕೂಡಿರುವ ನಮ್ಮ ಹಳ್ಳಿಯು ಇಂಥ ಹಲವು ಜೀವಿಗಳು ವಾಸವಿರುವ ತಾಣ. ಇವುಗಳ
ಕುರಿತು ಹಲವು ಜನಪದೀಯ ನಂಬಿಕೆಗಳಿವೆ ಹೊರತು, ಹೆಚ್ಚಿನ ವೈಜ್ಞಾನಿಕ ಅರಿವು ಜನರಲ್ಲಿ ಇಲ್ಲ ಎಂಬುದೂ ನಿಜ. ವಿಷಕಾರಿ ಚೇಳುಗಳು (ಸ್ಕಾರ್ಪಿ
ಯನ್) ಸಹ ನಮ್ಮೂರಿನ ಗುಡ್ಡಗಳಲ್ಲಿ, ಬಯಲುಗಳಲ್ಲಿವೆ. ಆದರೆ, ಸಹಸ್ರಪದಿ ಪ್ರಭೇದದ ಲಕ್ಷ್ಮಿ ಚೇಳು (ಬಣ್ಣದ ಪಟ್‌ಚೇಳು) ಮತ್ತು ವಿಷಕಾರಿ
ಚೇಳು ಪರಸ್ಪರ ಸಂಬಂಧ ಹೊಂದಿದ ಜೀವಿಗಳಲ್ಲ. ದನಕರುಗಳು ಗುಡ್ಡಕ್ಕೆ ಮೇಯಲು ಹೋದಾಗ, ಚೇಳುಗಳು ಅವುಗಳ ಮೂತಿಗೆ ಕಚ್ಚಿದರೆ, ನಿಜಕ್ಕೂ
ಅಪಾಯ. ತಮ್ಮ ಮೂತಿಗೆ, ಮೂಗಿನ ಹೊಳ್ಳೆಗೆ ಚೇಳಿನಿಂದ ಕುಟುಕಿಸಿಕೊಂಡ ದೊಡ್ಡ ಗಾತ್ರದ ಹೋರಿಗಳು ಸತ್ತುಹೋಗುವ ಸಾಧ್ಯತೆಯಿದೆ.

ಮೂಗಿನ ಹತ್ತಿರ ಚೇಳು ಕುಟುಕಿದರೆ, ಬಹುಬೇಗನೆ ವಿಷವೇರುತ್ತದೆ ಎಂಬ ನಂಬಿಕೆ. ಆದರೆ, ಸಹಸ್ರಪದಿ ಪ್ರಭೇದದ ಪಟ್‌ಚೇಳು, ಲಕ್ಷ್ಮಿಚೇಳು ಕಚ್ಚಿದರೆ,
ಅಂಥ ಅಪಾಯವಿಲ್ಲ; ಸ್ವಲ್ಪ ಸಮಯ ನಂಜು, ಉರಿ ಕಾಡೀತು ಅಷ್ಟೆ. ನಮ್ಮೂರಿನಂಥ ಸಣ್ಣ ಹಳ್ಳಿಯಲ್ಲಿದ್ದುಕೊಂಡು, ಪ್ರತಿದಿನ ಕಾಡಿನ ನಡುವೆ ಸಾಗುವ ಕಾಲ್ದಾರಿಯಲ್ಲಿ ನಡೆದು ಶಾಲೆಗೆ ಹೋಗುವುದು ಮತ್ತು ದಾರಿಯುದ್ದಕ್ಕೂ ಸುತ್ತಲಿನ ಪರಿಸರದ ವಿದ್ಯಮಾನಗಳನ್ನು, ವಿಸ್ಮಯಗಳನ್ನು ಗುರುತಿಸುತ್ತಾ ಸಾಗುವುದು ಒಂದು ಆಪ್ತವಾದ ಅನುಭವ ಎಂದು ಓದುಗರಲ್ಲಿ ಕೆಲವರಿಗಾದರೂ ಅನಿಸಬಹುದು. ನಿಜ, ಅಂದಿನ ನೆನಪುಗಳಲ್ಲಿ ಕೆಲವಂತೂ ಬಹಳ ಆಪ್ತವಾಗಿ, ಅಮೂಲ್ಯವಾಗಿ ಮನದ ಮೂಲೆಯಲ್ಲಿ ಕುಳಿತಿವೆ ಮತ್ತು ಆ ದಾರಿಯಲ್ಲಿ ಪ್ರತಿದಿನ ಸಾಗುವುದು ಪರಿಸರದ ಪಾಠ
ಕಲಿಯಲೂ ಸಹಕಾರಿ.

ಆದರೆ, ಕಾಡುಗುಡ್ಡಗಳ ನಡುವೆ ಹುದುಗಿರುವ ಹಳ್ಳಿಯೊಂದರಲ್ಲಿ ಜೀವಿಸುವುದೆಂದರೆ, ಅದರಲ್ಲಿ ನಾನಾ ರೀತಿಯ ಅಪಾಯ ಸಂಭಾವ್ಯತೆಗಳಿವೆ (ರಿಸ್ಕ್), ಬಿಕ್ಕಟ್ಟುಗಳಿವೆ. ಹಳ್ಳಿಯಲ್ಲಿದ್ದುಕೊಂಡು ಪ್ರತಿದಿನ ನಾಲ್ಕಾರು ಕಿ.ಮೀ. ನಡೆದು ಶಾಲೆಗೆ ಹೋಗಿಬರುವ ವಿದ್ಯಾರ್ಥಿಗಳಿಗೆ, ಪರಿಸರದಲ್ಲಾಗುವ ಬದಲಾವಣೆಗಳನ್ನು ನೋಡಲು, ಪರಿಸರದ ಶಿಶುಗಳ (ಕೀಟಗಳು, ಹಕ್ಕಿಗಳು, ಸಹಸ್ರಪದಿಗಳು) ರೂಪಾಂತರವನ್ನು ಗಮನಿಸುವ ಅವಕಾಶ ದೊರಕುವುದು ನಿಜ. ಆದರೆ, ಗ್ರಾಮೀಣ ದಿನಚರಿಯಲ್ಲಿ, ವಿದ್ಯಾರ್ಥಿಗಳು ಪ್ರತಿದಿನ ನಡೆಯುವ ಕಾಡುದಾರಿಯಲ್ಲಿ ಹಲವು ರಿಸ್ಕ್‌ಗಳಿವೆ.

ಒಂದು ಉದಾಹರಣೆ ನೋಡಿ. ಶಾಲೆಗೆ ಸಾಗುವ ನಮ್ಮ ದಾರಿಯು, ಹಲವು ಕಡೆ ದಟ್ಟವಾದ ಪೊದೆ ಬೆಳೆದ ತೋಡುಗಳ ಅಂಚಿನಲ್ಲಿ ಸಾಗುತ್ತಿತ್ತು ಅಥವಾ
ಕಾಡಿನ ಕಿಬ್ಬದಿಯ ಮುಳ್ಳುಗಿಡಗಳ ಅಂಚು ಸಹ ನಮ್ಮ ದಾರಿಯೇ. ಒಮ್ಮೊಮ್ಮೆ ಅಂಥ ಸ್ಥಳಗಳಲ್ಲಿ ಎಣ್ಣೆ ತಿಂಡಿ ಕರಿದ ವಾಸನೆ ಬರುತ್ತದೆ! ‘ಹಾಂ, ಕಡಂಬಳ್ಕ ಹಾವು ಇಲ್ಲೇ ಎಲ್ಲೋ ಇತ್ತು, ಕಾಲಡಿ ಕಂಡ್ಕಂಡ್ ನಡಿನಿ’ ಎಂದು ಆಗ ಸಹಪಾಠಿಗಳು ಎಚ್ಚರಿಸುತ್ತಿದ್ದರು. ಕಾಡು ಪ್ರದೇಶದಲ್ಲೋ, ಗದ್ದೆ
ಯಂಚಿನಲ್ಲೋ (ಅಂದರೆ ಮನೆಯಿಂದ ದೂರದ ಪ್ರದೇಶ) ಎಣ್ಣೆ ತಿಂಡಿ ಕರಿದ ವಾಸನೆ ಬಂತು ಎಂದರೆ, ಕಡಂಬಳ್ಕ ಎಂಬ ವಿಷಕಾರಿ ಹಾವು ಅಲ್ಲೇ
ಉಸಿರುಬಿಡುತ್ತಾ ಕೂತಿದೆ ಎಂದೇ ನಂಬಿಕೆ. ಅಂಥ ವಾಸನೆ ಬಂದ ಕೂಡಲೆ, ನಿಧಾನವಾಗಿ, ಎಚ್ಚರಿಕೆಯಿಂದ, ದಾರಿಯಿಂದ ತುಸು ದೂರಸಾಗಿ ಮುಂದು ವರಿಯಬೇಕು.

ಕೊಂಬು ಚೇಳು (ಸ್ಕಾರ್ಪಿಯನ್), ಲಕ್ಷ್ಮಿ ಚೇಳು, ಪಟ್‌ಚೇಳು, ಬಸುರಿ ಜೇಡ, ತೌಡಪ್ಪಳಕ ಹಾವು- ಇವೆಲ್ಲವೂ ಸಣ್ಣಗೆ ವಿಷಕಾರಿ, ದೇಹದಲ್ಲಿ ನಂಜು ಏರಿಸಬಲ್ಲವು; ಶಾಲೆಗೆ ಹೋಗಿಬರುವ ಮಕ್ಕಳನ್ನು ಇವು ಆಗಾಗ ಕುಟುಕುವುದುಂಟು. ಬಸುರಿ ಜೇಡ ಕಡಿದರೆ, ಹತ್ತಾರು ದಿನಗಳ ತನಕ ಹುಣ್ಣು ಮಾಯ ವಾಗುವುದಿಲ್ಲ!

ಇವುಗಳ ಜತೆಯಲ್ಲೇ, ಇನ್ನೊಂದು ಅಪಾಯಕಾರಿ ಜೀವಿ ಇದೆ. ಸುಮಾರು ಒಂದು ಅಕ್ಕಿ ಮುಡಿ ಗಾತ್ರದ ಗೂಡನ್ನು ಮರಗಳಲ್ಲಿ ಕಟ್ಟಿ, ಮರಿ ಮಾಡುವ ‘ಹುಲಿ ಕಡ್ಜುಳ’ದ ಹೆಸರನ್ನು ಕೇಳಿದರೇನೆ ಕೆಲವರಿಗೆ ಸಣ್ಣಗೆ ಭಯವಾದೀತು. ಹುಲಿಯ ಮೈಮೇಲಿನ ವರ್ಣವಿನ್ಯಾಸವನ್ನು ಹೊಂದಿರುವ ಇದು ಒಂದು ಹಾರುವ ಕೀಟ, ವ್ಯಾಸ್ಪ್. ಅಕಸ್ಮಾತ್ ರೊಚ್ಚಿಗೆದ್ದರೆ, ಒಂದೇ ಗೂಡಿನಿಂದ ಹಾರುತ್ತಾ ಹೊರಬರುವ ನೂರಾರು ಹುಲಿಕಡ್ಜುಳಗಳು, ಸಿಕ್ಕ ಸಿಕ್ಕವರಿಗೆ ಕಚ್ಚುತ್ತವೆ; ಅದು ಕಚ್ಚಿದ ಜಾಗದಲ್ಲಿ ಭಾರಿ ಉರಿ, ಊತ, ನಂಜು, ವಿಷಕಾರಿ. ಹಾವಿನ ವಿಷವನ್ನು ಹೋಲುವ ವಿಷ ಅವುಗಳ ಕೊಂಡಿಯಲ್ಲಿದೆಯಂತೆ.

ನಮ್ಮ ಶಾಲೆಯ ವಿದ್ಯಾರ್ಥಿಯೊಬ್ಬ, ಆಕಸ್ಮಿಕವಾಗಿ ಹುಲಿ ಕಡ್ಜುಳಗಳ ಕಡಿತಕ್ಕೆ ಒಳಗಾದ. ನೂರಾರು ಹುಲಿಕಡ್ಜುಳಗಳು ಆತನಿಗೆ ಕುಟುಕಿದ್ದವು. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೂ ಉಪಯೋಗವಾಗಲಿಲ್ಲ, ಆತ ಇಹಲೋಕ ತ್ಯಜಿಸಿದ. ಇಂಥ ಅವೆಷ್ಟೋ ಸಂಭಾವ್ಯತೆಗಳು (ರಿಸ್ಕ್‌ಗಳು) ಗ್ರಾಮೀಣ ವಿದ್ಯಾರ್ಥಿಯೊಬ್ಬ ಎದುರಿಸಬೇಕಾದ ಬಿಕ್ಕಟ್ಟುಗಳ ಪಟ್ಟಿಯಲ್ಲಿ ಸೇರಿವೆ (ಕರಾವು = ಕರೆಯುವ ಹಸು. ಸೊಲಿಗೆ = ಕಾಲು ಪಾವು. ಬಳಾಲ = ಧಾರಾಳ).