Thursday, 12th December 2024

ನ್ಯುಮೋನಿಯಾ ಜಾಗೃತಿಗಾಗಿ ಒಂದು ದಿನ

ತನ್ನಿಮಿತ್ತ

ರಾಜು ಭೂಶೆಟ್ಟಿ

ನ್ಯುಮೋನಿಯಾ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 2009ರಿಂದ ಪ್ರತಿ ವರ್ಷ ನವೆಂಬರ್-12ರಂದು ವಿಶ್ವ ನ್ಯುಮೋನಿಯಾ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.

ಏಡ್ಸ್‌, ಮಲೇರಿಯಾ, ವಿಸಿಯಲ್ಸ್ ಕಾಯಿಲೆಗಳು ಒಟ್ಟು ಸೇರಿ ತೆಗೆದುಕೊಳ್ಳುವ ಸಾವುಗಳಿಗಿಂತಲೂ ಹೆಚ್ಚು ಸಾವುಗಳು ಬರೀ ಕೇವಲ ನ್ಯುಮೋನಿಯಾದಿಂದ ಉಂಟಾಗುವುದು ತುಂಬಾ ಆತಂಕಕಾರಿ ವಿಚಾರ. ಕಾಯಿಲೆಯಿಂದ ರಕ್ಷಣೆ, ಬರದಂತೆ ತಡೆ ಯುವುದು, ನ್ಯುಮೋನಿಯಾ ಚಿಕಿತ್ಸೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.

ನ್ಯುಮೋನಿಯಾ ಎಂದರೇನು? ರೋಗಿಯ ಪುಪ್ಪಸಗಳು ರೋಗಾಣುಗಳಿಂದ ಕಫಗಟ್ಟಿ ಉಸಿರಾಡುವುದು ಕಷ್ಟವಾಗುತ್ತದೆ. ಇಂಥ ಕಾಯಿಲೆಯೇ ನ್ಯುಮೋನಿಯಾ ಎನ್ನುವರು. ವಿಶೇಷವಾಗಿ ಐದು ವರ್ಷದ ಒಳಗಿನ ಮಕ್ಕಳಲ್ಲಿ ಈ ಕಾಯಿಲೆಯ ತೀವ್ರತೆ ಹೆಚ್ಚಾ ಗಿರುತ್ತದೆ. ಈ ಕಾಯಿಲೆ ಕೆಲವೊಮ್ಮೆ ಮಾರಣಾಂತಿಕವಾಗಿಯೂ ಪರಿಣಮಿಸಬಹುದು. ನ್ಯುಮೋನಿಯಾವು ವಿವಿಧ ರೀತಿಯ ಸೋಂಕು ಹರಡುವ ವೈರಸ್‌ಗಳು, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರದಿಂದ ಬರಬಹುದಾಗಿದೆ. ಸ್ಟ್ರೆೆಪ್ರೋಕೊಕಸ್ ನ್ಯುಮೋನಿಯಾ (ಮಕ್ಕಳಲ್ಲಿ ಹರಡುವ ಬ್ಯಾಕ್ಟೀರಿಯಾ ನ್ಯುಮೋನಿಯಾಗೆ ಪ್ರಮುಖ ಕಾರಣ), ಹೀಮೊಫಿಲಾಸ್  ನ್ಫೂಯೆಂಜಾ ಟೈಪ್-ಬಿ (ಎಚ್‌ಐಬಿ) ಇದು ಮಕ್ಕಳಲ್ಲಿ ಹರಡುವ ನ್ಯುಮೋನಿಯಾಗೆ ಎರಡನೇ ಕಾರಣ.

ರೆಸ್ಪಿರೇಟರಿ ಸಿನ್ಸಿಟಿಯಲ್ ವೈರಸ್ ನ್ಯುಮೋನಿಯಾ ಹರಡುವ ಸಾಮಾನ್ಯ ವೈರಸ್ ಆಗಿದೆ. ನ್ಯುಮೋನಿಯಾದ ಕೆಲವು ಸಾಮಾನ್ಯ
ಲಕ್ಷಣಗಳೆಂದರೆ – ಜ್ವರ, ತಲೆನೋವು, ನಿಶ್ಶಕ್ತಿ, ಉಸಿರಾಟದ ತೊಂದರೆ, ಎದೆನೋವು, ತೀವ್ರ ಕೆಮ್ಮು, ಹಸಿಲ್ಲದಿರುವುದು. ಟ್ಯಾಕ್ಸೋ ಪ್ಲಾಸ್ಮೋಸಿಸ್‌ನಂಥ ಕೆಲವೊಂದು ಪರಾವಲಂಬಿ ಜೀವಿಗಳು ಕೂಡ ರೋಗ ನಿರೋಧಕ ಶಕ್ತಿ ಕುಂದಿದ ವ್ಯಕ್ತಿಗಳಲ್ಲಿ ನ್ಯುಮೋ ನಿಯಾ ರೋಗವನ್ನು ತರಬಲ್ಲವು.

ಅಡಿನೋವೈರಸ್, ರೈನೋವೈರಸ್, ಇನ್ಫ್ಲೂಯೆಂಜಾ ವೈರಸ್ ಇಂತಹ ವೈರಾಣುಗಳು ನ್ಯುಮೋನಿಯಾ ರೋಗವನ್ನು ತರಬಲ್ಲವು ಗಳಾಗಿವೆ. ವೈರಾಣುಗಳು ಬಾಯಿ ಮತ್ತು ಮೂಗಿನ ಮುಖಾಂತರ ಉಸಿರಾಟದ ಮೂಲಕ ದೇಹದೊಳಗೆ ಸೇರಿಕೊಂಡು ಕ್ರಮೇಣ ಶ್ವಾಸಕೋಶದಲ್ಲಿರುವ ಜೀವಕೋಶಗಳನ್ನು ನಿಷ್ಕ್ರೀಯಗೊಳಿಸುತ್ತವೆ. ಈ ವೈರಾಣು ನ್ಯುಮೋನಿಯಾವು ಕರೋನಾ ವೈರಸ್‌ನಿಂದ ಬರುತ್ತದೆ. ಇದರ ಹರಡುವಿಕೆಯು ಬಹಳ ವೇಗವಾಗಿರುತ್ತದೆ. ಈಗಾಗಲೇ ಇದರ ಪರಿಣಾಮ ಎಂತಹ ಗಂಭೀರವಾದದ್ದು ಎಂಬು ದನ್ನು ಜಗತ್ತು ನೋಡಿದೆ. ಈ ರೋಗವನ್ನು ಸಾರ್ಸ್ ಎನ್ನುವರು.

ಅಂದರೆ (SARS- Severe Acute Respiratory Syndrome)ಎಂಬರ್ಥವನ್ನು ಕೊಡುತ್ತದೆ. ನ್ಯುಮೋನಿಯಾ ಹೇಗೆ ಹರಡುತ್ತದೆ? ನ್ಯುಮೋನಿಯಾ ಹೊಂದಿದ ರೋಗಿ ಬಳಸಿದ ತಟ್ಟೆ, ಲೋಟ, ಟವೆಲ್, ಉಡುಪು, ಚಮಚ ಇವುಗಳಿಂದಲೂ ಹರಡುವ ಸಾಧ್ಯತೆ ಗಳಿರುತ್ತದೆ. ರೋಗಿಯು ಕೆಮ್ಮಿದಾಗ, ಸೀನಿದಾಗ, ಸಿಂಬಳದಿಂದಲೂ ಬರುತ್ತದೆ. ಪತ್ತೆ ಹಚ್ಚುವುದು ಹೇಗೆ? ಸಾಮಾನ್ಯವಾಗಿ ನ್ಯುಮೋನಿಯಾ ಆದ ವ್ಯಕ್ತಿಯ ಎದೆಯ ಭಾಗದಲ್ಲಿ ಉಸಿರಾಟದ ಕ್ಷೀಣಿಸುವಿಕೆ ಕಂಡುಬರುತ್ತದೆ. ಎದೆಗೂಡಿನ ಕ್ಷ-ಕಿರಣ ಪರೀಕ್ಷೆ ಗಳು, ರಕ್ತ ಮತ್ತು ಕಫ ಪರೀಕ್ಷೆ ಮಾಡಿ ರೋಗವನ್ನು ನಿರ್ಧರಿಸಲಾಗುತ್ತದೆ. ತಡೆಗಟ್ಟುವುದು ಹೇಗೆ? ಈಗಾಗಲೇ ತಿಳಿಸಿದಂತೆ ಇದೊಂದು ಸಾಂಕ್ರಾಮಿಕ ರೋಗವಾಗಿರುವುದರಿಂದ ರೋಗಿಗಳು ಬಳಸಿದ ಲೋಟ, ತಟ್ಟೆ, ಚಮಚ, ಇಂತಹ ವಸ್ತುಗಳನ್ನು
ಬಳಸದೇ ಇರುವುದು ಹಾಗೂ ಇವುಗಳನ್ನು ಬಿಸಿ ನೀರಿನಲ್ಲಿಯೇ ಕಡ್ಡಾಯವಾಗಿ ತೊಳೆಯುವುದು.

ಅದೇ ರೀತಿ ರೋಗಿಯ ಟಾವೆಲ್, ಕರವಸ್ತ್ರ, ಉಡುಪುಗಳನ್ನು ಸಹ ಬಳಸದೇ ಇರುವುದು. ಒಂದು ವೇಳೆ ವೈರಸ್ ನ್ಯುಮೋನಿಯಾ
ಎಂದು ಕಂಡು ಬಂದರೆ ಇದೊಂದು ಅತೀ ಗಂಭೀರ ಸಾಂಕ್ರಾಮಿಕ ರೋಗವಾಗಿದ್ದು ಇಂತಹ ಸಂದರ್ಭದಲ್ಲಿ ರೋಗಿಯನ್ನು ಪ್ರತ್ಯೇಕವಾದ ಕೋಣೆಯಲ್ಲಿರಿಸಿ ಇತರರಿಗೆ ರೋಗ ಹರಡದಂತೆ ಮುಂಜಾಗ್ರತೆ ವಹಿಸುವುದು ಅತೀ ಅಗತ್ಯ. ರೋಗ ಬಂದ ಮೇಲೆ ಪರಿತಪಿಸುವುದಕ್ಕಿಂತ, ರೋಗ ಬರದಂತೆ ಮುನ್ನಚ್ಚರಿಕೆ ವಹಿಸುವುದು ಅತೀ ಅಗತ್ಯ.