ಅವಲೋಕನ
ರಮಾನಂದ ಶರ್ಮಾ
ಒಂದು ದೇಶ ಒಂದು ತೆರಿಗೆ, ಒಂದು ದೇಶ ಒಂದು ಗ್ರಿಡ್ ಮತ್ತು ಒಂದು ದೇಶ ಒಂದು ರೇಷನ್ ಕಾರ್ಡ್ ನಂತರ ಈಗ ಒಂದು ದೇಶ ಒಂದು ಚುನಾವಣೆ ಚಿಂತನೆ ಮೇಲ್ಮೆಗೆ ಬಂದಿದೆ. ದೇಶದ ಯಾವುದಾದರೂ ಭಾಗದಲ್ಲಿ ನಿರಂತರವಾಗಿ ಚುನಾವಣೆಗಳು ನಡೆಯು ತ್ತಿವೆ.
ಅಭಿವೃದ್ಧಿ ಕಾರ್ಯಗಳ ಮೇಲೆ ಇದರ ಪರಿಣಾಮ ಉಂಟಾಗುತ್ತಿರುವುದರಿಂದ ಪ್ರಗತಿಯ ವೇಗ ಕುಂಠಿತವಾಗುತ್ತದೆ. ಒಂದು ಚುನಾ ವಣೆ ಮುಗಿದು ಅದರ ಪೋಸ್ಟರ್, ಭಿತ್ತಿಪತ್ರ, ಬ್ಯಾನರ್ ಮರೆಯಾಗುವ ಮತ್ತು ಮಾಸುವ ಮೊದಲು, ಆ ಚುನಾವಣೆಯ ಬಗೆಗೆ ಜನತೆಯ ಚರ್ಚೆ ಮುಗಿಯುವ ಮೊದಲು ಈ ದೇಶದಲ್ಲಿ ಇನ್ನೊಂದು ಚುನಾವಣೆ ಬರುತ್ತದೆ. ಹಾಗೆಯೇ ಲೋಕಸಭೆ, ವಿಧಾನ ಸಭೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಿಗೆ ಒಂದೇ ಮತದಾರರ ಪಟ್ಟಿ ರೂಪುಗೊಳ್ಳ ಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಆಯೋಗಕ್ಕೆ ಸಲಹೆ ನೀಡಿದ್ದಾರೆ.
ಇತ್ತೀಚಿನ ವರ್ಷ ಗಳಲ್ಲಿ ಮೋದಿಯವರು ಈ ನಿಟ್ಟಿನಲ್ಲಿ ಎರಡನೆ ಬಾರಿ ಪ್ರಸ್ತಾಪಿಸಿದ್ದು ಮತ್ತು ಗಂಭೀರತೆಯನ್ನು ತೋರಿಸಿದ್ದು, ಇದು ದೇಶಾದ್ಯಂತ ಚರ್ಚೆಯನ್ನು ಹುಟ್ಟು ಹಾಕುವ ಸಾಧ್ಯತೆ ಇದೆ. 2014ರಲ್ಲಿ ಮೋದಿಯವರು ಮೊದಲ ಬಾರಿ ಈ ಪ್ರಸ್ತಾಪ ವನ್ನು ಮಾಡಿದ್ದರು. ಇದನ್ನು ಪ್ರಜಾಪ್ರಭುತ್ವದ ಮೇಲೆ ಹಲ್ಲೆ ಎಂದು ಅಂದಿನ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಯವರು ತಿರಸ್ಕರಿಸಿದ್ದರು.
ಹಲವು ರಾಜಕೀಯ ಪಕ್ಷಗಳು ಈ ಪ್ರಸ್ತಾವವನ್ನು ವಿರೋಧಿಸಿದ್ದಲ್ಲದೇ, 2019ರಲ್ಲಿ ಈ ನಿಟ್ಟಿನಲ್ಲಿ ಆಳವಾಗಿ ಅಭ್ಯಸಿಸಲು ಮತ್ತು ಚಿಂತನೆ ನಡೆಸಲು ಸರಕಾರವು ಕರೆದ ಸರ್ವಪಕ್ಷಗಳ ಸಭೆಯನ್ನು ಬಹಿಷ್ಕರಿಸಿದ್ದವು. ಆದರೂ ಸರಕಾರವು ಸಲಹೆ ನೀಡಲು ಮತ್ತು ಈ ಪ್ರಸ್ತಾವವನ್ನು ಅನುಷ್ಠಾನಗೊಳಿಸುವ ಮಾರ್ಗೋಪಾಯವನ್ನು ಸೂಚಿಸಲು ಒಂದು ಸಮಿತಿಯನ್ನು ನೇಮಿಸಿತ್ತು.
ಚುನಾವಣೆ ಪ್ರಜಾಪ್ರಭುತ್ವದ ಮುಖ್ಯ ಅಂಗ. ಚುನಾವಣೆಗಳು ನಿಗದಿಪಡಿಸಿದಂತೆ ನಡೆದಾಗಲೇ ಪ್ರಜಾಪ್ರಭುತ್ವದ ನಿಜವಾದ ಅರ್ಥ ಮತ್ತು ಸತ್ವ ತಿಳಿಯುವುದು.
ಶಾಲೆಗಳಲ್ಲಿ ರಾಜಕೀಯ ಶಾಸವನ್ನು ಬೋಧಿಸುವಾಗ ಚುನಾವಣೆಗಳು ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುತ್ತದೆ ಎಂದು ಮಕ್ಕಳಿಗೆ ಹೇಳಲಾಗುತ್ತದೆ. ಆದರೆ, ಇಂದು ಚುನಾವಣೆಗಳು ನಿರಂತರ ಪ್ರಕ್ರಿಯೆಯಾಗಿದ್ದು ಪಂಚಾಯಿತಿ, ನಗರಸಭೆಗಳು, ಪಟ್ಟಣ ಪಂಚಾಯಿತಿಗಳು, ಪುರಸಭೆಗಳು, ವಿಧಾನ ಸಭೆ, ಲೋಕಸಭೆ ಹೆಸರಿನಲ್ಲಿ ಬರುತ್ತಲೇ ಇರುತ್ತವೆ. ಇದಕ್ಕೆ ಹೊರತಾಗಿ ಜನಪ್ರತಿನಿಧಿ ನಿಧನರಾದಾಗ, ರಾಜೀನಾಮೆ ನೀಡಿದಾಗ ಅಥವಾ ಯಾವುದೋ ರಾಜಕೀಯ ಕುತಂತ್ರ ಅಥವಾ ಚಾಲೆಂಜಿನಿಂದಾಗಿ ಉಂಟಾಗುವ ಚುನಾವಣೆಗಳು ಎರಗಿ ಬರುತ್ತಿದ್ದು, ಮತದಾರ ಮತದಾನ ಮಾಡುವುದಿಲ್ಲ ಅಥವಾ ಕಾಟಾಚಾರಕ್ಕೆ ಮತ ಹಾಕುತ್ತಾನೆ. ಮತದಾನ ಪವಿತ್ರ ಕಾರ್ಯ ಎನ್ನುವ ಭಾವನೆಯನ್ನು ಹಿನ್ನೆಲೆಗೆ ದೂಡಿ ಅನಿವಾರ್ಯ ಕರ್ಮ ಎನ್ನುವ ಮನೋ ಸ್ಥಿತಿಗೆ ಬಲಿಯಾಗುತ್ತಾನೆ.
ಇತ್ತೀಚಿನ ದಿನಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಲು ಇದು ಕಾರಣ ಇರಬಹುದು ಎಂದು ಚುನಾವಣಾ ವಿಶ್ಲೇಷಕರು ಭಾಷ್ಯ ಬರೆಯುತ್ತಾರೆ. ಪದೇ ಪದೆ ಚುನಾವಣೆ ಏಕೆಬೇಡ? ನಮ್ಮ ದೇಶದಲ್ಲಿ ಪ್ರಚಲಿತ ಇರುವ ಚುನಾವಣಾ ನೀತಿ ಸಂಹಿತೆ ಯಿಂದಾಗಿ ಚುನಾವಣಾ ಪ್ರಕ್ರಿಯೆ ಆರಂಭವಾಗಿ, ಆಯ್ಕೆಯಾಗಿ ದಡ ಸೇರಿದವರು ಅಧಿಕಾರದ ಗದ್ದುಗೆ ಏರುವವರೆಗೆ ಆಡಳಿತ ಯಂತ್ರ ಸ್ತಬ್ಧವಾಗುತ್ತದೆ. ಈ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ತಾತ್ಕಾಲಿಕ ಬ್ರೇಕ್ ಬೀಳುತ್ತದೆ.
ಹೊಸ ಯೋಜನೆ ಮತ್ತು ಕಾರ್ಯಕ್ರಮಗಳಿಗೆ ಅನುಮತಿ ಇಲ್ಲ. ಬಳಕೆಗೆ ರೆಡಿಯಾಗಿರುವ ಯೋಜನೆಗಳಿಗೆ ಉದ್ಘಾಟನೆ ಭಾಗ್ಯ ವಿಲ್ಲ, ಅಡಿಗಲ್ಲು ಸಮಾರಂಭಗಳಿಲ್ಲ ಮತ್ತು ಜಾರಿಯಲ್ಲಿರುವ ಯೋಜನೆಗಳಿಗೆ ಹೆಚ್ಚಿನ ಹಣಕಾಸು ಹರಿಯುವುದಿಲ್ಲ. ಚುನಾ ವಣಾ ಆಯೋಗ ಎರವಲು ಪಡೆಯುವುದರಿಂದ ಸರಕಾರಿ ಕಚೇರಿಗಳಲ್ಲಿ ಕಾರ್ಯ ಸ್ತಬ್ಧವಾಗುತ್ತದೆ. ಈ ಪ್ರಕ್ರಿಯೆ ತಿಂಗಳುಗಳ ಮೊದಲೇ ಆರಂಭವಾಗುತ್ತಿದ್ದು, ತರಬೇತಿ ಹೆಸರಿನಲ್ಲಿ ಕಚೇರಿಗಳು ಭಣಗುಡುತ್ತವೆ.
ಭಾರತೀಯರು ರಾಜಕೀಯವಾಗಿ ಭಾರೀ ಜಾಗೃತಿ ಉಳ್ಳವರು. ಚುನಾವಣಾ ಪ್ರಕ್ರಿಯೆ ಆರಂಭವಾದ ತಕ್ಷಣ ಹಾದಿ ಬೀದಿಗಳಲ್ಲಿ,
ಕಚೇರಿಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳು, ಅವರ ಸೋಲು – ಗೆಲುವು, ಗೆಲುವಿನ ಮಾರ್ಜಿನ್ ಮತ್ತು ಚುನಾವಣೋತ್ತರ ಮೈತ್ರಿ ಮತ್ತು ಸರಕಾರದ ಬಗೆಗೆ ಅಂತ್ಯವಿಲ್ಲದ ಚರ್ಚೆ ನಡೆಯುತ್ತದೆ. ಕ್ರಿಕೆಟ್, ಬಾಲಿವುಡ್‌ನಂತೆ ಮತ್ತು ರಾಜಕೀಯದ ಬಗೆಗೆ ಚರ್ಚಿಸ ದಿದ್ದರೆ ಅವರ ಭಾರತೀಯ ಮೂಲದ ಬಗೆಗೆ ಸಂದೇಹ ಬರುವಷ್ಟು, ಇದು ಸರ್ವ ವ್ಯಾಪಿ.
ದೇಶದಲ್ಲಿ ವರ್ಷಪೂರ್ತಿ ಯಾವುದಾದರೂ ಭಾಗದಲ್ಲಿ ಯಾವುದಾದರೂ ಚುನಾವಣೆಗಳು ನಡೆಯುತ್ತಿದ್ದು, ದೇಶದ ಬೊಕ್ಕಸಕ್ಕೆ ಭಾರೀ ಹೊರೆ ಬೀಳುತ್ತದೆ. 2014ರ ಲೋಕಸಭೆ ಚುನಾವಣೆಗೆ ಸರಕಾರ 3426 ಕೋಟಿ ವ್ಯಯಿಸಿದರೆ, ರಾಜಕೀಯ ಪಕ್ಷಗಳು ಒಟ್ಟಾಗಿ ಸುಮಾರು 30000 ಕೋಟಿ ಖರ್ಚು ಮಾಡಿವೆಯಂತೆ. 2019ರ ಚುನಾವಣೆಯಲ್ಲಿ ಇದು 60000 ಕೋಟಿಗೆ ಏರಿದೆ ಯಂತೆ. ಪ್ರತಿ ಮತದಾರನಿಗೆ ಸರಾಸರಿ 700 ರು. ವ್ಯಯಿಸಲಾಗಿದೆಯಂತೆ. ಅಭ್ಯರ್ಥಿಗಳ ಹಿಂಬಾಲಕರು ಮತ್ತು ಹಿತೈಷಿಗಳು ಖರ್ಚುಮಾಡುವುದು ಬೇರೆ.
ಚುನಾವಣಾ ಹೆಸರಿನಲ್ಲಿ ಈ ರೀತಿ ಹಣದ ಹರಿವು ಹಣದುಬ್ಬರವನ್ನು ಪುಟಿದೇಳಿಸುವುದು ಜನ ಸಾಮಾನ್ಯನಿಗೆ ಇನ್ನೊಂದು ಆಘಾತ. ನಿರಂತರವಾಗಿ ನಡೆಯುವ ಚುನಾವಣೆಯಿಂದ ಆಡಳಿತದ ಮೇಲೆ ಆಗುವ ದುಷ್ಪರಿಣಾಮ, ಜನಸಾಮಾನ್ಯರಿಗಾಗುವ ಅನನುಕೂಲ, ದೇಶದ ಆರ್ಥಿಕತೆಯಮೇಲೆ ಆಗುವ ಹೊರೆ ಮತ್ತು ಚುನಾವಣಾ ಹೆಸರಿನಲ್ಲಿ ಸರಕಾರ ಮತ್ತು ಜನತೆ ಮಾಡುವ ಅನುತ್ಪಾದಕ ವೆಚ್ಚವನ್ನು ನೋಡಿ ಸರಕಾರ ಒಂದು ದೇಶ ಒಂದು ಚುನಾವಣೆ ಚರ್ಚೆಯನ್ನು ಹುಟ್ಟು ಹಾಕಿದೆ.
ಕೆಲವು ವಿರೋಧ ಪಕ್ಷಗಳು ಇದರಲ್ಲಿ ಸರಕಾರದ ಅಗೋಚರ ಅಜೆಂಡಾ ಎಂದು ಸಂಶಯಿಸಿ ಈ ಪ್ರಸ್ತಾವಕ್ಕೆ ಕೈ ಜೋಡಿಸುತ್ತಿಲ್ಲ.
ವಾಸ್ತವವಾಗಿ ಇದೇನು ಹೊಸ ಪರಿಕಲ್ಪನೆಯಲ್ಲ. ಇದು ಈಗಾಗಲೇ ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಇಟಲಿ, ಸ್ವೀಡನ್ ಮತ್ತು ಬೆಲ್ಜಿಯಂ ದೇಶಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಭಾರತದಲ್ಲಿ 1952ರಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಗಿದ್ದು 1957, 1962 ಮತ್ತು 1967ರಲ್ಲಿ ದೇಶದ ಎಲ್ಲಾ ಚುನಾವಣೆಗಳು ಒಟ್ಟಿಗೆ ನಡೆದಿದ್ದವು.
1967ರಲ್ಲಿ ಮಧ್ಯ ಪ್ರದೇಶದಲ್ಲಿ ಜಿ.ಎನ್.ಸಿಂಗ್ ಆಯಾರಾಂ ಗಯಾ ರಾಂ ಮೂಲಕ ಚುನಾಯಿತ ಸರಕಾರವನ್ನು ಉರುಳಿಸುವ ಮತ್ತು ತನ್ಮೂಲಕ ಗದ್ದುಗೆ ಹಿಡಿಯುವ ರಾಜಕೀಯ ವರಸೆ ಆರಂಭವಾದ ಮೇಲೆ ಈ ವ್ಯವಸ್ಥೆ ಹಳಿತಪ್ಪಿತು. ದೇಶದ ಬೌಗೋಳಿಕ ವಿಸ್ತಾರ, ಜನಸಂಖ್ಯೆ, ಮತಯಂತ್ರ ಮತ್ತು ವಿವಿ ಪ್ಯಾಟ್‌ಗಳ ಲಭ್ಯತೆ, ಮಾನವ ಸಂಪನ್ಮೂಲದ ಕೊರತೆ, ಭದ್ರತೆ, ಚುನಾವಣೆ
ಗಾಗಿ ಸರಕಾರದ ಅವಧಿಯನ್ನು ವಿಸ್ತರಿಸುವ ಅಥವಾ ಮೊಟಕುಗೊಳಿಸುವಲ್ಲಿನ ಸಾಂವಿಧಾನಿಕ ಎಡರು – ತೊಡರುಗಳು, ಅಡಚಣೆಗಳು ಒಂದು ದೇಶ ಒಂದು ಚುನಾವಣೆಗೆ ಅಡ್ಡಿಯಾಗುವ ಸಾಧ್ಯತೆಗಳು ಹೆಚ್ಚು.
ವಿವಿಧ ರಾಜಕೀಯ ಸಿದ್ಧಾಂತಗಳನ್ನು, ಚಿಂತನೆಗಳನ್ನು ಹೊಂದಿರುವ ವಿರೋಧ ಪಕ್ಷಗಳು ಈ ಪ್ರಸ್ತಾಪವನ್ನು ಬೆಂಬಲಿಸುವುದು ಸಂದೇಹಾಸ್ಪದ. ಹಾಗೆಯೇ ಇದಕ್ಕೆ ಸಂವಿಧಾನ ತಿದ್ದುಪಡಿ ಅವಶ್ಯಕವಿದ್ದು, ಅದು ನಿರೀಕ್ಷಿಸಿದಷ್ಟು ಸುಲಭವಾಗಿ ಫಲಿಸದು. ಅವಧಿಯ ಮೊದಲೇ ಸರಕಾರವು ಬಿದ್ದು ಹೋಗಿ, ಇನ್ನೊಂದು ಸರಕಾರ ರಚನೆಯಾಗುವುದು ದುಸ್ತರವಾದಾಗ, ಚುನಾವಣೆ ನಡೆಸಬೇಕೆ? ಅಥವಾ ಸುದೀರ್ಘವಾಗಿ, ಒಂದು ದೇಶ ಒಂದು ಚುನಾವಣೆಗಾಗಿ ಕಾಯಬೇಕೆ? ಇದು ತುಂಬಾ ಜಟಿಲವಾದ ಮತ್ತು ಕ್ಲಿಷ್ಟಕರವಾದ ಸಮಸ್ಯೆಯಾಗಿ, ಸಂವಿಧಾನಿಕ ತೊಡಕು ಉಂಟಾಗಬಹುದು.
ನಮ್ಮ ಚುನಾವಣೆಯ ವಿಶೇಷವೆಂದರೆ, ಇದು ಇತರ ಕೆಲವು ದೇಶಗಳಿಂದ ಭನ್ನವಾಗಿದ್ದು ಚುನಾವಣಾ ಪ್ರಕ್ರಿಯೆಯ 3-4 ತಿಂಗಳು ಗಳಲ್ಲಿ ಇದು ಲಕ್ಷಾಂತರ ತಾತ್ಕಾಲಿಕ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ರ‍್ಯಾಲಿ ಆಯೋಜನೆ, ಕ್ಯಾಟರಿಂಗ್, ಜನರ ಸಾಗಾಣಿಕೆ, ಧ್ವನಿವರ್ಧಕ, ಕರಪತ್ರ, ಹೋರ್ಡಿಂಗ್ಸ್, ಬ್ಯಾನರ್, ಬಂಟಿಂಗ್ಸ್ ತಯಾರಿಕೆ, ಜ್ಯೋತಿಷ್ಯ, ಮಾಧ್ಯಮ, ಮಠ – ಮಂದಿರಗಳಲ್ಲಿ ವಿಶೇಷ ಪೂಜೆ, ಹೋಮ – ಹವನ, ಹಿಂಬಾಲಕರನ್ನು ಮತ್ತು ಹಿತೈಷಿಗಳನ್ನು ನೋಡಿಕೊಳ್ಳುವುದು ಹೀಗೆ ಹಲವು ವಿಧಗಳಲ್ಲಿ ಗೋಚರ ಮತ್ತು ಅಗೋಚರ ಉದ್ಯೋಗಗಳ ಸೃಷ್ಟಿಯಾಗುತ್ತಿದ್ದು ಸಾವಿರಾರು ಕೋಟಿ ವ್ಯವಹಾರ ನಡೆಯುತ್ತದೆ.
ಚುನಾವಣೆಗಳು ಕಡಿಮೆಯಾದರೆ ಇವರ ಬದುಕಿನ ಬಂಡಿಯ ಚಕ್ರ ಹೂತು ಹೋಗುವುದನ್ನು ಅಲ್ಲಗಳೆಯಲಾಗದು. ಹಲವು ರಾಷ್ಟ್ರಗಳಲ್ಲಿ ರಾಜಕೀಯ ಒಂದು ಹವ್ಯಾಸ ಮತ್ತು ಅರೆಕಾಲಿಕ, ಅಲ್ಪಕಾಲೀನ ಉದ್ಯೋಗವಾದರೆ, ನಮ್ಮಲ್ಲಿ ಕೆಲವರಿಗೆ ಅದು ಪೂರ್ಣಾವಧಿ ವೃತ್ತಿ. ಅಂತೆಯೇ ಚುನಾವಣೆಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಪ್ರಯತ್ನ ಮುಗ್ಗರಿಸುವ ಸಾಧ್ಯತೆ ಹೆಚ್ಚು.
ಪ್ರಜ್ಞಾವಂತ ವರ್ಗ ಚುನಾವಣಾ ವ್ಯವಸ್ಥೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದು, ಈ ವ್ಯವಸ್ಥೆ ಆಥವಾ ಬದಲಿ ವ್ಯವಸ್ಥೆ ಬಗೆಗೆ ತಲೆ ಕೆಡಿಸಿಕೊಳ್ಳುವುದಿಲ್ಲ.
ಮೇಲುನೋಟಕ್ಕೆ ಆಕರ್ಷಕ ಮತ್ತು ಅರ್ಥಪೂರ್ಣ ಸಲಹೆ ಎನಿಸಿದರೂ, ಅನುಷ್ಠಾನದ ಹಾದಿಯಲ್ಲಿ ಕಲ್ಲು ಮುಳ್ಳುಗಳು ಎದ್ದು ಕಾಣತ್ತಿವೆ.