ತಿಳಿರು ತೋರಣ
ಶ್ರೀವತ್ಸ ಜೋಶಿ
srivathsajoshi@yahoo.com
ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ ಎಂದು ಸಾರುವ ಪ್ರಯತ್ನಗಳು ಪ್ರಾಚೀನ ಕಾಲದಿಂದಲೂ ಚಾಲ್ತಿಯಲ್ಲಿವೆ. ಸುಭಾಷಿತ ಗಳಲ್ಲಿ, ದೃಷ್ಟಾಂತ ಕಥೆಗಳಲ್ಲಿ ಅವು ಧ್ವನಿಸಿವೆ. ನಮ್ಮ ತಲೆಯನ್ನು ಹೊಕ್ಕು ಅಲ್ಲೇ ಭದ್ರವಾಗಿ ಉಳಿದುಕೊಳ್ಳುವುದು ಅವುಗಳಿಂದ ಸಾಧ್ಯವಾಗಿಲ್ಲ ಅಷ್ಟೇ. ಪರಿಣಾಮವಾಗಿಯೇ ನಾವೆಲ್ಲ ಬರೀ ಶಬ್ದ ಮಾಡುವ ಖಾಲಿ ಕೊಡಗಳಾಗಿ ಬೆಳೆಯುತ್ತಿದ್ದೇವೆ.
‘ಅತಿ ಸರ್ವತ್ರ ವರ್ಜಯೇತ್’ ಅಂತೊಂದು ಚಿರಪರಿಚಿತ ಸಂಸ್ಕೃತ ನುಡಿಗಟ್ಟು.
‘ಅತಿರೂಪಾತ್ ಹೃತಾ ಸೀತಾ ಅತಿ ಮಾನಾತ್ ಸುಯೋಧನಃ|
ಅತಿ ದಾನಾತ್ ಬಲಿರ್ಬದ್ಧಃ ಅತಿ ಸರ್ವತ್ರ ವರ್ಜಯೇತ್||’
ಎಂಬುದು ಅದರ ಪೂರ್ಣ ರೂಪ. ಸೀತೆಯ ಅತಿಯಾದ ಸೌಂದರ್ಯ ಆಕೆಯ ಅಪಹರಣಕ್ಕೆ ಕಾರಣವಾಯಿತು. ಅತಿ ಯಾದ ಗರ್ವವೇ ದುರ್ಯೋಧನನಿಗೆ ಮುಳು ವಾಯಿತು.
ಅತಿಯಾದ ದಾನದಿಂದ ಬಲಿ ಚಕ್ರವರ್ತಿಯು ಪತನ ಹೊಂದಿದನು. ಯಾವುದೇ ವಿಷಯ ಅಥವಾ ವಸ್ತುವಿನಲ್ಲೂ ಅಧಿಕ ಮೋಹ ಹಾಗೂ ಆಸೆ ಒಳ್ಳೆಯದಲ್ಲ, ಅದನ್ನು ತ್ಯಜಿಸ ಬೇಕು ಎಂದು ಉಪದೇಶಿಸುವಾಗ ಈ ನುಡಿಗಟ್ಟಿನ/ಸುಭಾಷಿತದ ಬಳಕೆಯಾಗುತ್ತದೆ. ಸಂಸ್ಕೃತದಲ್ಲಷ್ಟೇ ಏಕೆ, ನಮ್ಮ ಸಿರಿಗನ್ನಡದಲ್ಲೂ ಇದೇ ಅರ್ಥ-ಆಶಯದ ‘ಅತಿ ಆಸೆ ಗತಿ ಕೇಡು’ ಮತ್ತು ‘ಅತಿಯಾದರೆ ಅಮೃತವೂ ವಿಷ’ ಮುಂತಾದ ನುಡಿಗಟ್ಟುಗಳು ಇವೆಯಲ್ಲ!
ಇಂದಿನ ಲೇಖನದಲ್ಲಿ ವಿವರಿಸಬೇಕೆಂದಿರುವ ‘ಅತಿ’ ಸ್ವಲ್ಪ ಭಿನ್ನ ರೀತಿಯದು. ಆದರೆ ಇವೆಲ್ಲ ನುಡಿಗಟ್ಟುಗಳು ಅದಕ್ಕೂ ಅನ್ವಯಿ ಸುತ್ತವೆ. ಏನಪ್ಪಾ ಆ ಭಿನ್ನ ರೀತಿಯ ಅತಿ ಅಂದರೆ ಈಗೀಗ ನಮ್ಮ ಜೀವನದಲ್ಲಿ ಗುಣಮಟ್ಟಕ್ಕಿಂತ ಪರಿಮಾಣಕ್ಕೆ ನಾವೆಲ್ಲ ಕೊಡುತ್ತಿರುವ ಮಹತ್ತ್ವ. Our obsession with quantity over quality is making our lives feel empty ಎಂಬ ತಲೆಬರಹದ ಚಿಕ್ಕ ಲೇಖನವೊಂದನ್ನು ಮೊನ್ನೆ ಒಂದು ವೆಬ್ ಜರ್ನಲ್‌ನಲ್ಲಿ ಓದಿದೆ. ಗುಣಮಟ್ಟ ಕ್ಕಿಂತ ಪರಿಮಾಣದ ಬಗೆಗಿನ ನಮ್ಮ ಗೀಳು, ವ್ಯಸನ ಹೇಗೆ ನಮ್ಮ ಜೀವನವನ್ನು ಟೊಳ್ಳಾಗಿಸುತ್ತಿದೆ ಎಂಬ ಸೋದಾಹರಣ ವ್ಯಾಖ್ಯಾನ ಆ ಲೇಖನದಲ್ಲಿತ್ತು. ಬರೆದ ವರು ಅಮೆರಿಕದ ಟೆಕ್ಸಸ್ ವಿಶ್ವವಿದ್ಯಾಲಯದಲ್ಲಿ ಹಿರಿಯ ಪ್ರೊಫೆಸರರಾಗಿರುವ ಜಾನ್ ಡಬ್ಲ್ಯು ಟ್ರಾಫ ಗಾನ್ ಎಂಬುವ ವರು. ಸಂಘಸಂಸ್ಥೆಗಳಲ್ಲಿ ಮಾನವೀಯ ಮೌಲ್ಯಗಳು- ಇದು ಆ ಪ್ರೊಫೆಸರರ ಪರಿಣತಿಯ ಕ್ಷೇತ್ರವಂತೆ.
ಹಾಗಾಗಿ ಅವರು ಹೇಳಿರುವ ಅಂಶಗಳು ನಿಜಕ್ಕೂ ಚಿಂತನಯೋಗ್ಯವಾಗಿಯೇ ಇವೆ. ಆ ಲೇಖನವನ್ನವರು ಮುಖ್ಯವಾಗಿ ಸೋಷಿ ಯಲ್ ಮೀಡಿಯಾದ ಸಂದರ್ಭದಲ್ಲಿ ಬರೆದದ್ದಾದರೂ ಅವರ ವಿಚಾರಧಾರೆ ಈಗಿನ ಪೀಳಿಗೆಯ ನಮ್ಮೆಲ್ಲರ ವ್ಯಕ್ತಿತ್ವಕ್ಕೆ, ಆಲೋಚನೆಗಳಿಗೆ ಕನ್ನಡಿ ಹಿಡಿದಂತಿದೆ. ಗಂಭೀರ ಚಿಂತನೆಗೂ ಹಚ್ಚುತ್ತದೆ. ಆದ್ದರಿಂದ ಪದಶಃ ಅನುವಾದವಲ್ಲದಿದ್ದರೂ ಆ ಲೇಖನದ ಕೆಲವು ಮುಖ್ಯಾಂಶಗಳನ್ನು ಇಲ್ಲಿ ದಾಖಲಿಸಿ ನಿಮ್ಮತ್ತ ದಾಟಿಸುತ್ತಿದ್ದೇನೆ. ನೀವೂ ಇದನ್ನೊಂಚೂರು ಜಗಿದು ರಸವನ್ನು ಹೀರಿಕೊಂಡರೆ ಸಂತೋಷ. ಜೀವನದಲ್ಲಿ ಅಳವಡಿಸಿಕೊಂಡರಂತೂ ಇನ್ನೂ ಒಳ್ಳೆಯದೇ!
ಟ್ವಿಟ್ಟರ್‌ನಲ್ಲಿ, ಸ್ನಾಪ್‌ಚಾಟ್‌ನಲ್ಲಿ, ಫೇಸ್‌ಬುಕ್‌ನಲ್ಲಿ ಮತ್ತು ಇನ್ಸ್‌ಟಾಗ್ರಾಮ್‌ಗಳಲ್ಲೂ ನೀವು ಗಮನಿಸಿರಬಹುದು: ನನ್ನ ಫಾಲೋವರ್ಸ್ ಸಂಖ್ಯೆ ಇಂತಿಷ್ಟಾಯ್ತು… ಇಂತಿಷ್ಟು ಜನ ನನ್ನ ಫ್ರೆಂಡ್‌ಲಿಸ್ಟ್‌ನಲ್ಲಿದ್ದಾರೆ… ನನ್ನ ಡಿ.ಪಿಗೆ ಇಂತಿಷ್ಟು ಲೈಕುಗಳು ಬಂದಿವೆ ಎಂದು ಬೀಗುವವರ ಹೇಳಿಕೆಗಳು, ಪೋಸ್ಟುಗಳು. ಒಂದು ವೇಳೆ ಹಾಗೆ ಮುಕ್ತವಾಗಿ ಬರೆದುಕೊಳ್ಳದಿದ್ದರೂ ಒಳಗೊಳಗೇ ಬೀಗುತ್ತಿರುವವರು ಅನೇಕರಿದ್ದಾರೆ. ಯುಟ್ಯೂಬ್ ನಲ್ಲಂತೂ ‘ಲೈಕ್ ಒತ್ತಿ, ಕಾಮೆಂಟ್ ಬರೀರಿ, ಶೇರ್ ಮತ್ತು ಸಬ್ ಸ್ಕ್ರೈಬ್ ಮಾಡಿ’ ಎಂದು ಅಕ್ಷರಶಃ ಗೋಗರೆಯುತ್ತಾರೆ, ಭಿಕ್ಷೆ ಬೇಡುತ್ತಾರೆ. ‘ನೀನು ನನ್ನನ್ನು ಫಾಲೋ ಮಾಡು, ನಾನು ನಿನ್ನನ್ನು ಫಾಲೋ ಮಾಡು ತ್ತೇನೆ’ ರೀತಿಯ ಕೊಡು-ಕೊಳ್ಳುವ ವ್ಯವಹಾರಗಳೂ ಇರುತ್ತವೆ. ಚಿಕ್ಕಪುಟ್ಟದಕ್ಕೆಲ್ಲ ಪದೇ ಪದೇ ಟ್ವೀಟ್ ಮಾಡು, ಫೇಸ್‌ಬುಕ್ ಪೋಸ್ಟ್ ಹಾಕು, ವಾಟ್ಸಪ್ ಸ್ಟೇಟಸ್ ಅಪ್ ಡೇಟ್ ಮಾಡು… ಎನ್ನುವುದು ಕೆಲವರಿಗೆ ನಿತ್ಯಮಂತ್ರ. ಆ ಎಲ್ಲ ಪ್ಲಾಟ್‌ಫಾರ್ಮ್‌ಗಳಿಗೆ ಬೇಕಾಗಿರೋದೂ ಅದೇ- ಬಳಕೆದಾರರು ಎಷ್ಟು ಸಮಯ ತಮ್ಮ ತಾಣದಲ್ಲಿ ವ್ಯಸ್ತರಾಗಿರುತ್ತಾರೆ, ವ್ಯಯಿಸುತ್ತಾರೆ ಎಂಬುದೊಂದೇ ಗುರಿ.
ಅದಕ್ಕೋಸ್ಕರ ಏನೇನೆಲ್ಲ ಸರ್ಕಸ್ಸುಗಳು, ಅಡ್ಡದಾರಿಗಳು, ಆಲ್ಗೋರಿದಮ್‌ಗಳು, ಒಳಮರ್ಮಗಳು. ಒಟ್ಟಾರೆಯಾಗಿ ಸೋಷಿಯಲ್ ಮೀಡಿಯಾದಲ್ಲಿ, ನಿಜಜೀವನದ ಪ್ರತಿಫಲನದಂತೆಯೇ, ನಮ್ಮ ಗಮನ ಯಾವಾಗಲೂ ಸಂಖ್ಯೆಗಳ ಮೇಲೆಯೇ. ಎಷ್ಟು ಲೈಕುಗಳು, ಎಷ್ಟು ಶೇರುಗಳು, ಎಷ್ಟು ಫಾಲೋವರ್ಸ್… ಅದೇ ಆಯ್ತು. ಪರಂತು ನಮ್ಮ ಟ್ವೀಟುಗಳಲ್ಲಿ ಪೋಸ್ಟುಗಳಲ್ಲಿ ಸತ್ತ್ವ ಇದೆಯೇ, ನಮಗೆ ಲೈಕ್ ಒತ್ತುವವರ, ಕಾಮೆಂಟ್ ಬರೆಯುವವರ ವ್ಯಕ್ತಿತ್ವ ಸತ್ತ್ವಯುತ ವಾದದ್ದೇ ಅಂತೆಲ್ಲ ಯೋಚಿಸುವುದಕ್ಕೇ ಹೋಗುವು ದಿಲ್ಲ. ಅದನ್ನು ಮಾಡಲಿಕ್ಕೆ ನಮಗೆ ಪುರುಸೊತ್ತೂ ಇಲ್ಲ.
ಪರಿಣಾಮವೆಂದರೆ ಕ್ರಮೇಣ ನಮ್ಮ ‘ಉತ್ಪಾದನೆ’ಯೂ (ನಮ್ಮ ಟ್ವೀಟುಗಳೂ ಪೋಸ್ಟುಗಳೂ ಯುಟ್ಯೂಬ್ ವಿಡಿಯೊಗಳೂ) ಟೊಳ್ಳಾಗುತ್ತ ಹೋಗುತ್ತದೆ. ಸ್ನೇಹ-ಪರಿಚಯ-ವಿಚಾರವಿನಿಮಯ ಎಲ್ಲ ಬರೀ ತೋರ್ಪಡಿಕೆಯಷ್ಟೇ ಆಗುತ್ತದೆ. ಎಲ್ಲವೂ ಬರೀ ಸಂಖ್ಯೆಗಳಿಂದಷ್ಟೇ ಅಳೆಯಲ್ಪಡುತ್ತದೆಯೇ ಹೊರತು ಆತ್ಮೀಯತೆಯಾಗಲೀ ಆರ್ದೃತೆಯಾಗಲೀ ಇಲ್ಲ. ಅಲ್ಲಿ ಪರಿಚಿತರಾದವರು ಆಪತ್ಕಾಲಕ್ಕೆ ಒದಗಿಬರುತ್ತಾರೆಂಬ ಭರವಸೆಯನ್ನಂತೂ ಇಟ್ಟುಕೊಳ್ಳುವುದೇ ಬೇಡ.
ಹಾಗೆ ನೋಡಿದರೆ ಸಂಖ್ಯೆಗಳತ್ತ ಗಮನ ಕೊಡುವ ಅಭ್ಯಾಸ ಒಂದು ಮಟ್ಟದಲ್ಲಿ ನಮಗೆ ಬಾಲ್ಯದಿಂದಲೇ ಬಂದಿರುತ್ತದೆ. ಅಮೆರಿಕ ದಲ್ಲಿ ಹ್ಯಾಲೋವಿನ್ ಹಬ್ಬದಂದು ಮಕ್ಕಳು ಎಷ್ಟು ಕ್ಯಾಂಡಿ ಸಂಗ್ರಹಿಸಿದರು ಎನ್ನುವುದು ಅವರ ಬಳಗದಲ್ಲಿ ಪ್ರತಿಷ್ಠೆಯ ವಿಷಯವೇ ಆಗುತ್ತದೆ! ಕ್ರಿಸ್ಮಸ್ ಟ್ರೀಯ ಕೆಳಗಿಟ್ಟ ಎಷ್ಟು ಉಡುಗೊರೆಗಳು ಸಿಕ್ಕಿದವು ಎಂಬುದೂ ಹೆಚ್ಚುಗಾರಿಕೆಯ ಬಾಬತ್ತೇ ಆಗುತ್ತದೆ. ಆ ಉಡುಗೊರೆ ಉಪಯುಕ್ತವೇ ಅಲ್ಲವೇ ಎನ್ನುವುದರತ್ತ ಗಮನವಿಲ್ಲ. ಬೇರೆ ದೇಶಗಳಲ್ಲಿ ಬೇರೆ ಹಬ್ಬಗಳ ಸಂದರ್ಭವೂ ಹೀಗೆಯೇ ಇರಬಹುದು. ದೀಪಾವಳಿಯಲ್ಲಿ ಎಷ್ಟು ರೂಪಾಯಿಗಳ ಪಟಾಕಿ ಕೊಂಡುತಂದು ಸುಡಲಾಯಿತು ಸಹ ಇದೇ ಪಟ್ಟಿಗೆ ಸೇರಬಹುದೇನೋ.
ದೊಡ್ಡವರಾದ ಮೇಲೆ, ನಮ್ಮತ್ರ ಎಷ್ಟು ಜೊತೆ ಉಡುಪುಗಳಿವೆ ಶೂಗಳಿವೆ ಉಂಗುರಗಳಿವೆ ಇಂದ ಹಿಡಿದು ಎಷ್ಟು ಕಾರುಗಳಿವೆ, ಎಷ್ಟು ಸೈಟುಗಳಿವೆ, ಕಂಪನಿಗಳ ಶೇರುಗಳಿವೆ ಇತ್ಯಾದೀತ್ಯಾದಿ. ನಮ್ಮ ನಿಚ್ಚಳ ಮೌಲ್ಯ ಅಥವಾ ‘ನೆಟ್ ವರ್ತ್’ ಎಷ್ಟಿದೆಯೆಂದು ಅದರಿಂದ ನಿರ್ಧರಿತವಾಗುತ್ತದೆ. ಅತ್ಯಂತ ರುಚಿಕರವಾದ ಮೂರೇಮೂರು ಅಥವಾ ಹೆಚ್ಚೆಂದರೆ ನಾಲ್ಕು ಐಟಮ್‌ಗಳಷ್ಟೇ ಇರುವ ಔತಣ ಎಷ್ಟೆಂದರೂ ಫಡಪೋಶಿಯೇ. ಅದೇ, ಊಟದಲ್ಲಿ ಚಪ್ಪರಿಸಲಿಕ್ಕೆ ಛಪ್ಪನ್ನೈವತ್ತಾರು ಐಟಮ್‌ಗಳಿದ್ದರೆ ಅತಿ ವಿಜ್ರಂಭಣೆಯ ಮೇಜವಾನಿ ಅದು! ಅಧಿಕಸ್ಯ ಅಧಿಕಂ ಫಲಮ್ ಎಂದು ಒಣ ಜಂಭ, ಪೊಳ್ಳುಪ್ರತಿಷ್ಠೆ. ಒಮ್ಮೆ ಉಟ್ಟ ಸೀರೆಯನ್ನು ಇನ್ನೊಮ್ಮೆ ಉಡಲಾರೆ ಎಂದು ಪ್ರತಿಜ್ಞೆ ಮಾಡುವಷ್ಟು ಸೀರೆಗಳನ್ನು ವಾರ್ಡ್ರೋಬ್‌ನಲ್ಲಿ ಪೇರಿಸಿಡುವ ನಾರೀಮಣಿಯರನ್ನೂ ಇದೇ ಸಾಲಿಗೆ ಸೇರಿಸಿದರೆ ಅವರ ಕೆಂಗಣ್ಣುಗಳಿಗೆ ಗುರಿಯಾಗುವೆನೋ ಏನೋ.
ಶೈಕ್ಷಣಿಕ ಸಂಸ್ಥೆಗಳ ಜಾಹಿರಾತುಗಳನ್ನು ನೋಡಿದರಂತೂ ಅವುಗಳ ಆಕರ್ಷಣೆಯೆಲ್ಲ ಅಂಕಿಸಂಖ್ಯೆಗಳಿಂದಲೇ. ಅವುಗಳಿಗೆ ಅನುದಾನ ಸಿಗುವುದು ಕೂಡ ಸಂಖ್ಯೆಗಳ ಆಧಾರದಲ್ಲೇ. ಆದರೆ ಒಟ್ಟಾರೆಯಾಗಿ ಇದು ಒಳ್ಳೆಯದಲ್ಲ ಏಕೆ ಗೊತ್ತೇ? ಪರಿಮಾಣ ಕ್ಕಷ್ಟೇ ಗಮನ ಕೊಡುತ್ತ ಹೋದರೆ ನಾವು ಗುಣಮಟ್ಟದತ್ತ ಗಮನ ಹರಿಸುವುದು ಕಡಿಮೆಯಾಗುತ್ತ ಹೋಗುತ್ತದೆ, ಕೊನೆಗೆ ಇಲ್ಲವೇಇಲ್ಲ ಎಂದಾಗುತ್ತದೆ. ಕಾಲೇಜಿನಿಂದ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆಯೇ ಮುಖ್ಯ ಅಂತಾದರೆ ಆ ವಿದ್ಯಾರ್ಥಿಗಳಿಗೆ ಒದಗಿಸಲಾಗುವ ಕಲಿಕೆ, ಅದರಲ್ಲಿ ಅವರ ಸಾಮರ್ಥ್ಯ ಮುಂತಾದುವನ್ನು ಕೇಳುವವರಾರು? ಇದರ ಇನ್ನೊಂದು ಅಡ್ಡ ಪರಿಣಾ ಮವೆಂದರೆ ಯಾವ ಶಿಕ್ಷಣಶಾಖೆಗಳ ಸಂಖ್ಯೆಗಳು ಆಕರ್ಷಕವಾಗಿ ಹೊಳೆಯುತ್ತವೆಯೋ ಅವುಗಳಿಗೆ ಬೇಡಿಕೆ ಮತ್ತೂ ಹೆಚ್ಚುತ್ತದೆ.
ಎಂಜಿನಿಯರಿಂಗ್ ಕಾಲೇಜುಗಳು, ಮ್ಯಾನೇಜ್‌ಮೆಂಟ್ ಕಾಲೇಜುಗಳು ಅಣಬೆಗಳಂತೆ ಏಳುವಷ್ಟು ಭಾಷಾವಿಜ್ಞಾನದ, ತತ್ತ್ವ ಶಾಶ್ತ್ರದ, ವೈಜ್ಞಾನಿಕ ಸಂಶೋಧನೆ ಗಳಿಗೆ ಅನುವಾಗುವ ಸಂಸ್ಥೆಗಳು ಹುಟ್ಟಿಕೊಳ್ಳುತ್ತವೆಯೇ? ಸಾಧ್ಯವೇ ಇಲ್ಲ. ಟ್ವಿಟ್ಟರ್‌ನಲ್ಲಿ ಫಾಲೋವರ್ಸ್ ಸಂಖ್ಯೆ, ಫೇಸ್‌ಬುಕ್ ಪೋಸ್ಟಿಗೆ ಲೈಕುಗಳ ಸಂಖ್ಯೆ ಯಂತೆಯೇ ಇದೂ. ಪರಿಮಾಣಕ್ಕಷ್ಟೇ ಒತ್ತು, ಗುಣಮಟ್ಟಕ್ಕಲ್ಲ.
ಪ್ರೊಫೆಸರ್ ಟ್ರಾಫಗಾನ್ ಈ ಬೆಳವಣಿಗೆಯನ್ನು quantocracy ಎಂದು ಗುರುತಿಸುತ್ತಾರೆ. ಇಂದು ನಾವೆಲ್ಲ ಅಂಥದೊಂದು ಕ್ವಾಂಟೊಕ್ರಸಿ ಸಮಾಜದಲ್ಲಿ ಬದುಕುತ್ತಿದ್ದೇವೆ. ಪ್ರತಿಯೊಂದರಲ್ಲೂ ಕ್ವಾಂಟಿಟಿಗೇ ಪ್ರಾಧಾನ್ಯ ಹೊರತು ಕ್ವಾಲಿಟಿಗೆ ಅಲ್ಲ. ಏನಿದ್ದರೂ ನಮ್ಮ ಬಳಿ ಅದು ಎಷ್ಟು ಸಂಖ್ಯೆಯಲ್ಲಿ ಜಮೆಯಾಗಿದೆ, ನಮ್ಮ ಖಾತೆಗೆ ಎಷ್ಟು ಬಂದಿದೆ ಎಂಬುದರಿಂದಲೇ ಮೌಲ್ಯದ ನಿರ್ಧಾರ. ಹೆಚ್ಚಿದ್ದಷ್ಟೂ ಘನತೆ ಗತ್ತು ಗೌರವ. ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಈ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುತ್ತವೆ. ಎಷ್ಟು ಜನರೊಡನೆ ನಮ್ಮ ಸಂಪರ್ಕವಿದೆ ಎಂಬ ಸಂಖ್ಯೆಗೇ ಹೆಚ್ಚು ಇಂಪಾರ್ಟೆನ್ಸ್. ಅವರೆಲ್ಲ ಎಂತಹ ಜನರು ಎಂಬುದರ ಅರಿವಿಲ್ಲ, ಬೇಕಾಗೂ ಇಲ್ಲ. ಆ ತೆರನಾದ ಬದುಕು ಕ್ರಮೇಣ ಜಾಳುಜಾಳೆನಿಸದೆ ಇರುವುದುಂಟೇ? ಸೋಷಿಯಲ್ ಮೀಡಿಯಾದಲ್ಲಿ ನಮ್ಮ ಫಾಲೊವರ್‌ಗಳ, ಕನೆಕ್ಷನ್‌ಗಳ ಸಂಖ್ಯೆ ಹೆಚ್ಚುತ್ತ ಹೋದಂತೆಲ್ಲ, ನಮ್ಮ ಯೂಟ್ಯೂಬ್ ವಿಡಿಯೊಗಳ ವ್ಯೂಗಳು ಹೆಚ್ಚಿದಾಗೆಲ್ಲ, ನಮಗೊಂಥರದ ಹಿತಾನುಭವ ಅನಿಸುವುದು ಸಹಜವೇ. ಆದರೆ ಆ ಸಂಖ್ಯೆಗಳೆಲ್ಲ ಟೊಳ್ಳು. ಗಾಳಿಯು ಬ್ಬಿಸಿದ ಬಲೂನಿನಂತೆಯೇ ಖಾಲಿಖಾಲಿ.
ಒಂದು ಸೂಜಿಮೊನೆ ಸಾಕು ಬಲೂನು ಒಡೆದುಹೋಗಲಿಕ್ಕೆ. ಕ್ವಾಂಟೊಕ್ರಸಿ ಸಮಾಜದ್ದು ಗುಣಮಟ್ಟದ ಬಗ್ಗೆ ಮಲತಾಯಿ ಧೋರಣೆ. ಪ್ರತಿಯೊಂದರದೂ ಸಂಖ್ಯೆಗಳಾಗಿ ಗಣನೆ ಮುಖ್ಯವಾಗುತ್ತದೆ. ಅದೇ ಗುರಿಯಾಗುತ್ತದೆಯೇ ವಿನಾ ಯಾವುದರ ಎಣಿಕೆ ಯಾಗುತ್ತಿದೆಯೋ ಅದರ ಸತ್ತ್ವವೇನು ಮೌಲ್ಯವೇನು ಎನ್ನುವುದು ಗೌಣವಾಗುತ್ತದೆ. ‘ಹೌ ಮೆನಿ?’ ಪ್ರಶ್ನೆಗಿರುವ ಪ್ರಾಮುಖ್ಯ ‘ಹೌ ಗುಡ್?’ಗೆ ಇಲ್ಲ. ವಸ್ತುವಿರಲಿ, ವಿಷಯವಿರಲಿ, ವ್ಯಕ್ತಿಗಳೇ ಇರಲಿ ಈಗಿನ ನಮ್ಮ ಸಮಾಜವು ‘ಎಷ್ಟು?’ ಎಂದು ಸಂಖ್ಯೆಗೆ ಬೆಲೆ ಕೊಡುತ್ತದೆಯೇ ಹೊರತು ಆ ವಸ್ತು/ವಿಷಯ/ವ್ಯಕ್ತಿಯ ವಿಶೇಷತೆ ಏನು, ಅನನ್ಯತೆ ಏನು, ಅನುಭವಗಳೇನು, ನಮ್ಮ ಜೀವನದಲ್ಲಿ ನಿಜವಾದ ಸಂತೋಷ ತರುವುದಕ್ಕೆ ಅವುಗಳಲ್ಲಿರುವ ಸಾಮರ್ಥ್ಯಗಳೇನು ಎಂಬುದರ ಬಗ್ಗೆ ಮಾತಿಲ್ಲ ಕಥೆಯಿಲ್ಲ.
ದೀವಾರ್ ಹಿಂದೀ ಚಿತ್ರದಲ್ಲಿ ಅಮಿತಾಭ್ -ಶಶಿಕಪೂರ್ ನಡುವಿನ ಅತಿಪ್ರಖ್ಯಾತ ಡೈಲಾಗು ಬಹುಶಃ ಇಲ್ಲಿ ಪರ್ಫೆಕ್ಟಾಗಿ ಮ್ಯಾಚ್ ಆಗುತ್ತದೆ. ಕ್ವಾಂಟೊಕ್ರಸಿ ಸಮಾಜದಲ್ಲಿ ‘ಆಜ್ ಮೇರೇ ಪಾಸ್ ಬಿಲ್ಡಿಂಗೇಂ ಹೈಂ, ಪ್ರಾಪರ್ಟೀ ಹೈ, ಬ್ಯಾಂಕ್ ಬ್ಯಾಲೆನ್ಸ್ ಹೈ, ಬಂಗ್ಲಾ ಹೈ, ಗಾಡೀ ಹೈ…’ ಎನ್ನುವ ವಿಜಯ್‌ಗಳಿಗೆ ಮಣೆ ಹಾಕಲಾಗುತ್ತದೆಯೇ ಹೊರತು ‘ಮೇರೆ ಪಾಸ್ ಮಾ ಹೈ’ ಎನ್ನುವ ರವಿಗಳಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ. ಆದರೆ ನಮಗೆ ಎಂಥ ಸಮಾಜ ಬೇಕು? ಪ್ರತಿಯೊಂದನ್ನೂ ‘ಎಷ್ಟು?’ ಎಂದು ಅಳೆಯುವಂಥದ್ದೇ ಅಥವಾ ‘ಯಾವ ಗುಣಮಟ್ಟದ್ದು?’ ಎಂದು ಅಳೆಯುವಂಥದ್ದು? ದಿನವಿಡೀ ವಿಕಾರವಾಗಿ ಕಿರುಚಾಡುತ್ತಲೇ ಇರುವ, ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಎಂದು ಹೇಳುತ್ತಲೇ ಸಮಾಜವನ್ನು ಒಡೆಯುವ ದರಿದ್ರ ಸುದ್ದಿವಾಹಿನಿಗಳು ಹತ್ತಾರು ಬೇಕೇ ಅಥವಾ ಜ್ಞಾನ-
ವಿeನ ಮನೋರಂಜನೆಯನ್ನೆಲ್ಲ ಶಿಸ್ತಾಗಿ ಶಾಂತಿಯುತವಾಗಿ ಶ್ರೀಮದ್ಗಾಂಭೀರ್ಯದಿಂದ ಪ್ರಸ್ತುತಪಡಿಸುವ ಒಂದೇ ಒಂದು ಚಂದನ ವಾಹಿನಿ ಸಾಕೇ? ನಿಜವಾಗಿ ನಮ್ಮ ಬದುಕು ಹೆಚ್ಚು ಅರ್ಥಪೂರ್ಣ ಮತ್ತು ಮೌಲ್ಯಯುತ ಅಂತಾಗಬೇಕಿದ್ದರೆ ವ್ಯಷ್ಟಿ ಯಾಗಿ ನಾವೂ ಸಮಷ್ಟಿಯಾಗಿ ಸಮಾಜವೂ ಪ್ರತಿಯೊಂದರ ಮೌಲ್ಯವನ್ನು ಎಣಿಕೆಯಿಂದಲೇ ಮಾಡುವುದನ್ನು ನಿಲ್ಲಿಸಬೇಕು.
ಟ್ವಿಟ್ಟರ್‌ನಲ್ಲಿ, ಲಿಂಕ್ಡಿನ್‌ನಲ್ಲಿ ನಮ್ಮ ಫಾಲೊವರ್ಸ್ ಅಥವಾ ಕನೆಕ್ಷನ್ ಗಳ ಸಂಖ್ಯೆಗಿಂತ, ಯಾವ ಪ್ರಬುದ್ಧ ವ್ಯಕ್ತಿಗಳನ್ನು ನಾವು ಫಾಲೊ ಮಾಡುತ್ತಿದ್ದೇವೆ ಅಥವಾ ಅವರು ನಮ್ಮನ್ನು ಫಾಲೊ ಮಾಡುತ್ತಿದ್ದಾರೆ ಅನ್ನುವುದು ಮುಖ್ಯವಾಗಬೇಕು. ಅಂತೆಯೇ ಎಂಜಿನಿಯರಿಂಗ್ ಇರಲಿ ಮೆಡಿಕಲ್ ಇರಲಿ ಜರ್ನಲಿಸಮ್ಮೇ ಇರಲಿ ಆ ‘ಕಾರ್ಖಾನೆ’ಗಳಿಂದ ಎಷ್ಟು ಸಂಖ್ಯೆಯಲ್ಲಿ ಪದವೀಧರರು ‘ಉತ್ಪನ್ನ’ಗಳಂತೆ ಹೊರಬಂದರು ಎನ್ನುವುದಕ್ಕಿಂತ, ಅವರ ಪ್ರತಿಭೆ ಸಾಮರ್ಥ್ಯಗಳೇನಿವೆ, ಆರೋಗ್ಯವಂತ ಸಮಾಜದ ನಿರ್ಮಾಣ ದಲ್ಲಿ ಜವಾಬ್ದಾರಿಯುತ ಸ್ಥಾನ ನಿರ್ವಹಿಸುವ ಅರ್ಹತೆ ಅವರಲ್ಲೇನಿದೆ ಎಂಬುದು ಮುಖ್ಯವಾಗಬೇಕು.
ಸೋಷಿಯಲ್ ಮೀಡಿಯಾದಲ್ಲಿ ನಮಗೆ ಉಪಯೋಗವಿಲ್ಲದ ಐದುಸಾವಿರ ‘ಕನೆಕ್ಷನ್’ ಅಥವಾ ‘ಫ್ರೆಂಡ್‌ಶಿಪ್’ಗಳಿಗಿಂತ ಉಪಯುಕ್ತವೆನಿಸುವ ಐದೇ ಐದು ಸಂಪರ್ಕಗಳಿದ್ದರೂ ಸಾಕು, ನಮ್ಮ ಮತ್ತು ಅವರ ಬಾಳು ಬಂಗಾರವಾಗುವುದರಲ್ಲಿ ಆ ಐದರ ಕೊಡುಗೆಯಿರುತ್ತದೆ. ಉತ್ತಮ ಉಪನ್ಯಾಸವೊಂದನ್ನು ಅಥವಾ ಕಲಾಪ್ರಸ್ತುತಿ ಯೊಂದನ್ನು ಹತ್ತೇ ಜನ ಸಭಾಸದರು ಸವಿದರೂ ಸಾಕು ಆ ಉಪನ್ಯಾಸಕಾರರಿಗೆ/ ಕಲಾವಿದರಿಗೆ ಸಿಗುವ ತೃಪ್ತಿ, ಸಾವಿರ ಜನರಿಂದ ಇಡೀ ಸಭಾಂಗಣವು ಗದ್ದಲದ ಗೂಡಾಗಿರುವಾಗ ಸಿಗುವುದಿಲ್ಲ. ಸಂಸ್ಕೃತ ನುಡಿಗಟ್ಟಿನಿಂದ ಆರಂಭಿಸಿದ ಈ ಲೇಖನದ ಕೊನೆಯಲ್ಲೂ ಒಂದೆರಡು ಸಂಸ್ಕೃತ ಸುಭಾಷಿತಗಳನ್ನೇ ನೆನಪಿಸಿಕೊಳ್ಳೋಣ:
‘ವರಮೇಕೋ ಗುಣೀ ಪುತ್ರಃ ನ ಚ ಮೂರ್ಖಶತೈರಪಿ|
ಏಕಶ್ಚಂದ್ರಸ್ತಮೋ ಹನ್ತಿ ನ ಚ ತಾರಾಗಣಾನ್ಯಪಿ||’
ಅಂದರೆ ನೂರು ಮಂದಿ ಮೂರ್ಖ ಮಕ್ಕಳಿಗಿಂತ ಸದ್ಗುಣವಂತ ಪುತ್ರ ಒಬ್ಬನಿದ್ದರೂ ಸಾಕು ವರಪ್ರದನೆನಿಸುತ್ತಾನೆ. ತಾರೆಗಳು ಸಹಸ್ರ ಸಂಖ್ಯೆಯಲ್ಲಿದ್ದರೇನು ಇರುಳಿನ ಕತ್ತಲನ್ನು ಅಳಿಸಲಿಕ್ಕೆ ಒಬ್ಬ ಚಂದ್ರನಿಂದಷ್ಟೇ ಸಾಧ್ಯ.
ಮತ್ತೊಂದಿದೆ, ಪಂಚತಂತ್ರದಲ್ಲಿ ಬರುವಂಥದ್ದು:
‘ಏಕೇನಾಪಿ ಸುಪುತ್ರೇಣ ಸಿಂಹೀ ಸ್ವಪಿತಿ ನಿರ್ಭಯಮ್|
ಪುತ್ರೈರ್ದಶಭಿರಾಕೀರ್ಣಾ ಭಾರಂ ವಹತಿ ಗರ್ದಭೀ||’
ಗರ್ಭ ಧರಿಸಿದ ಸಿಂಹಿಣಿಯ ಹೊಟ್ಟೆಯಲ್ಲಿ ಒಂದೇ ಮರಿಯಿದ್ದರೂ ಅದರ ಭವಿಷ್ಯ ನಿರ್ಭಯದಿಂದ ಓಡಾಡುವುದೇ ಆಗುತ್ತದೆ. ಗರ್ಭಿಣಿ ಕತ್ತೆಯ ಹೊಟ್ಟೆಯಲ್ಲಿ ಹತ್ತು ಮರಿಗಳಿದ್ದರೇನಂತೆ ಅವುಗಳ ಹಣೆಯಲ್ಲಿ ಬರೆದಿರುವುದು ಭಾರ ಹೊರುವ ಕೆಲಸವೇ. ಇನ್ನೂ ಒಂದು ಶ್ಲೋಕ ರಘುವಂಶದಲ್ಲಿ ಇಂದುಮತಿ ಸ್ವಯಂವರ ಸಂದರ್ಭದ್ದು. ಮಗಧದ ರಾಜ ಪರಂತಪನ ಬಗ್ಗೆ ಇಂದು ಮತಿಯ ಬಳಿ ಆಕೆಯ ಸಖಿ ಹೇಳುವ ಮಾತು:
‘ಕಾಮಂ ನೃಪಾಃ ಸಂತು ಸಹಸ್ರಶೋಧಿನ್ಯೇ|
ರಾಜನ್ವತೀಮಾಹುರನೇನ ಭೂಮಿಂ|
ನಕ್ಷತ್ರತಾರಾ ಗ್ರಹಸಂಕುಲಾಧಿಪಿ|
ಜ್ಯೋತಿಷ್ಮತೀ ಚಂದ್ರಮಸೈವ ರಾತ್ರಿಃ||’
ಅಂದರೆ, ಕಾಂಜಿಪೀಂಜಿ ರಾಜರು ಬೇಕಿದ್ದರೆ ಸಹಸ್ರ ಸಂಖ್ಯೆಯಲ್ಲಿ ಸಿಕ್ಕಾರು. ಇಡೀ ಭೂಮಿಗೇ ರಾಜನೆನಿಸಬಲ್ಲವನು ಇವನೊಬ್ಬನೇ. ಗ್ರಹಗಳು ನಕ್ಷತ್ರಗಳು ಅಸಂಖ್ಯವಾಗಿದ್ದರೂ ರಾತ್ರಿಯನ್ನು ಬೆಳಗಿಸುವುದು ಚಂದ್ರನೊಬ್ಬನಿಂದಲೇ ಸಾಧ್ಯ
ಎಂಬಂತೆ. ಒಟ್ಟಿನಲ್ಲಿ ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ ಎಂದು ಸಾರುವ ಪ್ರಯತ್ನಗಳು ಪ್ರಾಚೀನ ಕಾಲದಿಂದಲೂ ಚಾಲ್ತಿ ಯಲ್ಲಿವೆ. ಸುಭಾಷಿತಗಳಲ್ಲಿ, ದೃಷ್ಟಾಂತ ಕಥೆಗಳಲ್ಲಿ ಅವು ಧ್ವನಿಸಿವೆ. ನಮ್ಮ ತಲೆಯನ್ನು ಹೊಕ್ಕು ಅಲ್ಲೇ ಭದ್ರವಾಗಿ ಉಳಿದು ಕೊಳ್ಳುವುದು ಅವುಗಳಿಂದ ಸಾಧ್ಯವಾಗಿಲ್ಲ ಅಷ್ಟೇ.
ಪರಿಣಾಮವಾಗಿಯೇ ನಾವೆಲ್ಲ ಬರೀ ಶಬ್ದ ಮಾಡುವ ಖಾಲಿ ಕೊಡಗಳಾಗಿ ಬೆಳೆಯುತ್ತಿದ್ದೇವೆ. ಅಂದಹಾಗೆ ಈವತ್ತಿನ ತಲೆಬರಹ ಯಾವ ಚಿತ್ರಗೀತೆಯ ಸಾಲು ಎಂದು ನಿಮಗೆ ಗೊತ್ತಾಗಿರಬಹುದು. ಅದೇ ಚಿತ್ರಗೀತೆಯ ಇನ್ನೆರಡು ಸಾಲುಗಳನ್ನೂ ನೆನಪಿಸುವು ದಾದರೆ- ‘ಉರಿಯೋ ಸೂರ್ಯ ಒಬ್ಬ ಸಾಕು ಭೂಮಿನ್ ಬೆಳಗೋಕೆ, ರಾಜೀವಪ್ಪ ಒಬ್ಬ ಸಾಕು ಹಳ್ಳೀನ್ ಬೆಳಗೋಕೆ…’ ನಾವೂ ಬಂಗಾರದ ಮನುಷ್ಯರಾಗಬೇಕಿದ್ದರೆ ನಮಗೆ ಫೇಸ್‌ಬುಕ್ ಲೈಕುಗಳ ಯುಟ್ಯೂಬ್ ವ್ಯೂಗಳ ಸಂಖ್ಯೆಗಿಂತ ರಾಜೀವಪ್ಪನಂಥವರ
ಆದರ್ಶಗಳೇ ಮೇಲ್ಪಂಕ್ತಿಯಾಗಲಿ, ಬಾಳಿನ ಗುರಿಯಾಗಲಿ.