Friday, 13th December 2024

ಹಾಸು ಬೀಸು: ಒಂದು ಅವಲೋಕನ

ದಾಸ್ ಕ್ಯಾಪಿಟಲ್‌

ಟಿ.ದೇವಿದಾಸ್‌, ಬರಹಗಾರಮ ಶಿಕ್ಷಕ

ಡಾ.ಗಣೇಶರ ಬರಹವೆಂದರೆ ಜನಸಾಮಾನ್ಯರ ಬುದ್ಧಿಮತ್ತೆಗೆ ಅಷ್ಟು ಸುಲಭವಾಗಿ ದಕ್ಕುವುದಕ್ಕೆ ಸಾಧ್ಯವಿಲ್ಲದ ಮಾತು. ಅವರ
ಪುಸ್ತಕವನ್ನು ಓದುವವನಿಗೆ ಒಂದು ಬೌದ್ಧಿಕ ಮತ್ತು ಮಾನಸಿಕ ಶಿಸ್ತಿನ ಪೂರ್ವಸಿದ್ಧತೆ ಅತ್ಯಗತ್ಯವೂ ಅನಿವಾರ್ಯವೂ,
ಆವಶ್ಯಕವೂ ಎಂಬುದು ಅನೇಕ ಓದುಗರ ಅಂಬೋಣ.

ಸಾಮಾನ್ಯವಾಗಿ ನಾವು ಓದುವ ಪುಸ್ತಕಗಳು ಒಂದೋ ಎರಡೋ ಸಿಟ್ಟಿಂಗ್‌ಗಳಲ್ಲಿ ಓದಿಸಿಕೊಂಡು ಹೋಗುತ್ತವೆ. ಆದರೆ ಗಣೇಶರ ಪುಸ್ತಕಗಳನ್ನು ಓದುವಾಗ ನಿಘಂಟುಗಳನ್ನು ಪಕ್ಕದಲ್ಲಿ ಇಟ್ಡುಕೊಂಡೇ ಓದಲು ಶುರುಮಾಡಬೇಕಾಗ ಬೇಕಾಗುತ್ತದೆ. ಒಂದೆರಡು ಸಿಟ್ಟಿಂಗ್ ಅಲ್ಲ, ಒಂದಿಡೀ ದಿನ ಓದಿದರೂ ಅರ್ಥ ಮಾಡಿಕೊಳ್ಳಲು ಆಗದೇ ಇರುವ ಪದಗಳು, ಸಾಲುಗಳು, ಸಂಗತಿಗಳು ಮತ್ತೆ ಬಾಕಿಯಿರುತ್ತವೆ.

ಅಂಥ ಪರಿಯ ವಿದ್ವತ್ತು ಅವರದು. ವಿದ್ವತ್ ಲೋಕದ ವಿಸ್ಮಯ ಎಂದು ಡಾ.ರಾಮಸ್ವಾಮಿಯವರು, ಡಾ.ಎಸ್. ಎಲ್‌.ಭೈರಪ್ಪ ಅವರು ಇವರನ್ನು ವರ್ಣಿಸಿzರೆ. ವ್ಯಾಸರೇ ಆಶ್ಚರ್ಯ ಪಡಬಹುದಾದ ಗಣೇಶ ಎಂದು ಡಾ.ಬಿ.ಕೆ.ಎಸ್. ವರ್ಮ ಹೇಳಿzರೆ. ಇಂಥ ವಿದ್ವತ್ ಪೂರ್ಣರ ಬರಹ ಅಂದರೆ ಸಾಮಾನ್ಯವಾಗಿ ಸಾಮಾನ್ಯ ಜ್ಞಾನಕ್ಕಿಂತ ಮೇಲುಸ್ತರದಲ್ಲಿ ಇದ್ದೇ ಇರುತ್ತದೆ.

ಅಂಥ ಬರಹಗಳ ಒಂದು ಗುಚ್ಛ ಈ ಹಾಸು ಬೀಸು. ಅರಿಕೆಯಲ್ಲಿ ಅವರೇ ಹೇಳುವಂತೆ ಇದರಲ್ಲಿ ಶಿಸ್ತಾದ ಶೋಧ ಪ್ರಬಂಧಗಳಿವೆ, ಅನೌಪಚಾರಿಕ ಅವಲೋಕನ ಪುಸ್ತಕ ಪರಿಚಯ – ವಿಮರ್ಶೆಗಳಿವೆ, ಪ್ರಾಸಂಗಿಕ ಲಿಖಿತ ಭಾಷಣ – ಪ್ರಸ್ತಾವನೆ – ಮುನ್ನುಡಿಗಳೂ
ಇವೆ. ಸಂಸ್ಕೃತ – ಪ್ರಾಕೃತ – ಕನ್ನಡ – ತಮಿಳು ಭಾಷಾ – ಸಾಹಿತ್ಯ ಸಂಬಂಧಿ ಸಂಗತಿಗಳೂ, ಅಲಂಕಾರ – ವ್ಯಾಕರಣ – ಛಂದ ಸ್ಸಂಬಂಧಿ ನಿಬಂಧನೆಗಳೂ, ಕವಿತೆ – ದರ್ಶನ – ಧರ್ಮಶಾಸ್ತ್ರ – ಇತಿಹಾಸ – ಸಂಸ್ಕೃತಿ ಚಿಂತನಗಳಂಥ ಅಂಶಗಳೂ, ಶಾಸ್ತ್ರೀಯ ಸಂಗೀತ – ಸಿನಿಮಾ ಸಂಗೀತ – ಯಕ್ಷಗಾನ – ನೃತ್ಯ – ದೂರದರ್ಶನ ಧಾರಾವಾಹಿಗಳಂಥ ಕಲಾವಿಚಾರ ಗಳೂ ಹೆಣೆದುಕೊಂಡಿವೆ.

1)ಗಾಹಾಸತ್ತಸಈಯ ಅಮರಶೃಂಗಾರ 2) ಚಂಪೂ ರಾಮಾಯಣ: ಬಾಲಕಾಂಡದ ಕಾವ್ಯ ಸೌಂದರ್ಯ 3) ಡಿವಿಜಿಯವರ ಛಂದಃಪ್ರಯೋಗಗಳು 4) ಡಿವಿಜಿ ಅವರ ‘ಶೃಂಗಾರಮಂಗಳಂ’ 5) ಭಾರತೀಯಚ್ಛಂದಶ್ಶಾಸ್ತ್ರಕ್ಕೆ ಸೇಡಿಯಾಪು ಕೊಡುಗೆ 6) ಬೇಂದ್ರೆ: ಅಧ್ಯಾರೋಪ ಮತ್ತು ಅಪವಾದ 7) ನರಸಿಂಹ ಸ್ವಾಮಿಯವರ ಮಲ್ಲಿಗೆಯ ಕಾವ್ಯ ಕಂಪು 8) ‘ಬೋಳುಬಸವನ ಬೊಂತೆ’: ಒಂದು ಅವಲೋಕನ 9) ಹಳಗನ್ನಡವನ್ನು ಹೇಗೆ ನೋಡಬೇಕು? 10) ಇಂಥ ‘ಸುಧಾರಣೆ’ ಕನ್ನಡಕ್ಕೆ ಬೇಕೆ? 11) ಬುದ್ಧಿಜೀವಿ /o ಬೌದ್ಧಿಕ ಸ್ವಾತಂತ್ರ್ಯ 12) ಭಾರತೀಯ ಕಲೆಗಳ ವಿಕಾಸ ಮತ್ತು ಏಕತೆ 13) ಅಪಶ್ಚಿಮದ ಪಶ್ಚಿಮ ಪ್ರವೃತ್ತಿ 14) ಭಾರತೀಯ – ಪಾಶ್ಚಾತ್ಯ ಸಿದ್ಧಾಂತಗಳ ಪುನರ್ವಿಮರ್ಶನ 15) ಅಥಾತೋ ದೇವಜಿಜ್ಞಾಸಾ!

16) ದೇವಾಲಯ ತತ್ತ್ವ 17‘ಭಾರ್ಗವಿ’: ಲಕ್ಷ್ಮೀ ತತ್ತ್ವದ ವೈದಿಕ ಇತಿಹಾಸ ಚಿಂತನ 18) ಗೌತಮಧರ್ಮಸೂತ್ರದ ಎಂಟು ಆತ್ಮ ಗುಣಗಳು 19) ಸಂಗೀತದಲ್ಲಿ ರಸ 20) ‘ಋತು – ಗಾನ’ ವಿವೇಚನೆ 21) ರಾಗ – ತಾಳಗಳ ‘ವಾಸ್ತವಸಾಧ್ಯತೆ’ 22) ರಸಾಭಿನಯ ಕ್ಕಾಗಿ ಬೇಕಾದ ಪೂರ್ವಸಿದ್ಧತೆ 23) ‘ಶೀಲಸಂಕ್ರಾಂತಿ’ ಯಕ್ಷಗಾನ ಪ್ರಸಂಗ 24) ದೂರದರ್ಶನ ‘ಮಹಾಭಾರತ’: ಒಂದು ವಿಲೋಕನ 25) ಟಿ.ಜಿ. ಲಿಂಗಪ್ಪನವರ ರಾಗಾಧಾರಿತ ಸ್ವರಸಂಯೋಜನೆಗಳು. ಶೀರ್ಷಿಕೆಗಳನ್ನು ಅವಲೋಕಿಸಿದರೆ ಅರ್ಥ ಸ್ಪಷ್ಟವಾಗುತ್ತದೆ ಎಂಬಲ್ಲಿ ಅದರಲ್ಲಿನ ವಿಚಾರಗಳು ಆಸಕ್ತಿಪ್ರೇರಕವಾಗಿಯೇ ಇರುತ್ತದೆ ಅಂಥ ಅರ್ಥ.

ಇವೆಲ್ಲ ನಮ್ಮ ಜ್ಞಾನಸಂಪದದ ಪರಿಧಿಯನ್ನು ಮತ್ತಷ್ಟು ವಿಸ್ತರಿಸುವ ಓದೇ ಹೊರತು ಮನರಂಜನೆ ಓದು ಮಾತ್ರವಲ್ಲ. ಓದಿ,
ಮನನ ಮಾಡುತ್ತಿರಲು ಇಟ್ಟುಕೊಳ್ಳಲೇಬೇಕಾದ ಪುಸ್ತಕ ಇದು. ಸುಮ್ಮನೆ ಒಮ್ಮೆ ಓದಿ ಇಡಬಹುದಾದದಲ್ಲ. ಮತ್ತೆ ಮತ್ತೆ ತೆಗೆದು ಓದಿ ಅರಗಿಸಿಕೊಳ್ಳಬೇಕಾದ ಪುಸ್ತಕ. ಆದ್ದರಿಂದ ಇದು ನನ್ನ ಪ್ರಕಾರ ಪ್ರಬುದ್ಧ ಆಕರಗ್ರಂಥವಾಗಿದೆ.

ಬೋಧಕರಿಗೆ, ಭಾಷಣಕಾರರಿಗೆ, ಚಿಂತಕರಿಗೆ, ಬರಹಗಾರರಿಗೆ ತೀರಾ ಎಂಬಷ್ಟು ಅನುಕೂಲವಾಗುವ ವಿಷಯ ವೈವಿಧ್ಯ ಮತ್ತು ವಿಷಯಾಂಶಗಳ ಸಮೃದ್ಧಿ ಇದೆ. ಸುಮ್ಮನೆ ಯಾವುದೋ ಒಂದು ವಿಷಯವನ್ನು ಇಟ್ಟುಕೊಂಡು ಒಟ್ಟಾರೆಯಾಗಿ ಬರೆದ ಲೇಖನ ಗಳೋ ಇಲ್ಲಿ ಇಲ್ಲ. ಪ್ರತಿಯೊಂದೂ ಆಳವಾದ ಅಧ್ಯಯನ, ವಿವೇಚನೆ, ವಿಮರ್ಶೆ ಇಲ್ಲಿ ಕಾಣುತ್ತವೆ.

ಅವರು ಬಳಸುವ ಪದಗಳು, ಪದರಚನೆ, ಅವುಗಳ ನಿಷ್ಪತ್ತಿ, ವಾಕ್ಯರಚನೆ, ವಿಷಯ ಪ್ರವೇಶ, ನಿರೂಪಣೆಯಲ್ಲಿ ಕಾಣುವ ವೈಶಿಷ್ಟ್ಯ ಮತ್ತು ವೈವಿಧ್ಯ, ಓದುಗರನ್ನು ಆಕರ್ಷಿಸುವ ವಿಷಯದ ಒಟ್ಟಂದ – ಇವು ಪುಸ್ತಕದ ಸಮಗ್ರತೆ ಮತ್ತು ಮೌಲ್ಯದ ಹರಹನ್ನು ದರ್ಶಿಸುತ್ತದೆ.

ಶಾತವಾಹನ ಹಾಲ ಮಹಾರಾಜನ ಮಹಾರಾಷ್ಟ್ರೀ ಪ್ರಾಕೃತ ಭಾಷೆಯ ‘ಗಾಹಾಸತ್ತಸ ಈ’ ಎಂಬ ಕವನ ಸಂಗ್ರಹದ ಶೃಂಗಾರ ಸೌಭಾಗ್ಯ. ಭೋಜನ ಚಂಪೂ ರಾಮಾಯಣವನ್ನು ವಿಶ್ಲೇಷಣೆ ಮಾಡುತ್ತಾ, ಇದು ತನ್ನ ಪರಿಧಿಯೊಳಗೆ, ತನ್ನ ನಚ್ಚಿನ ಮೌಲ್ಯಗಳ ಬೆಳಕಿನಲ್ಲಿ ಅತಿಸುಂದರಕಾವ್ಯ ಎಂಬುದರಲ್ಲಿ ಸಂದೇಹವಿಲ್ಲ ಎನ್ನುತ್ತಾರೆ ಗಣೇಶರು. ಕನ್ನಡ ಸಾಹಿತ್ಯ ಲೋಕದ ಭೀಷ್ಮ ಎಂದು
ಅಭಿನಾಮಪಡೆದ ಡಿವಿಜಿಯವರ ಕೃತಿಗಳಲ್ಲಿ ಕಾಣುವ ಛಂದಃಪ್ರಯೋಗಗಳನ್ನು ಸಾದ್ಯಂತವಾಗಿ ನಿರ್ಣಯಿಸಿದ ಲೇಖನ ಮೂರನೆಯದು.

ಇದೊಂದು ಪಿಎಚ್.ಡಿ ಸಂಶೋಧನ ಗ್ರಂಥಕ್ಕೆ ವಸ್ತುವಾಗಬಲ್ಲ ವ್ಯಾಪ್ತಿ – ಘನತೆಗಳನ್ನು ಹೊಂದಿದೆಯೆಂದೂ ಇನ್ನೂ ಗಂಭೀರ ವಾದ ಅಧ್ಯಯನ ಮಾಡುವ ಮುಖೇನ ಕನ್ನಡ ಸಾರಸ್ವತ ಸಂಪತ್ತನ್ನು ವಧಿಸುವ ಕಾರ್ಯ ಆಗಬೇಕಿದೆ ಎಂಬ ಮಾತನ್ನು ಹೇಳು ತ್ತಾರೆ. ಡಿವಿಜಿಯವರ ಇನ್ನೊಂದು ಕೃತಿ ಪರಿಣತ ವಯಸ್ಸಿನಲ್ಲಿ ಪ್ರಬುದ್ಧಚಿಂತನೆಯಿಂದ ಗಂಭೀರವೂ ರಸಾದರವೂ ಆದ ಶೈಲಿಯಲ್ಲಿ ಬಂದ ಶೃಂಗಾರಮಂಗಳಂ ಈ ಕೃತಿಯಲ್ಲಿ ನಿವೇದನ, ಅಂತಃಪುರಗೀತೆಗಳು, ಉಮರನ ಒಸಗೆ, ಶ್ರೀಕೃಷ್ಣಪರೀಕ್ಷಣಂ, ಮಂಕುತಿಮ್ಮನ ಕಗ್ಗ, ಜೀವನ ಸೌಂದರ್ಯ ಮತ್ತು ಸಾಹಿತ್ಯ, ಗೀತಾತಾತ್ಪರ್ಯವೇ ಮೊದಲಾದ ಚಿಂತನ ಸರಣಿಯೇ ವ್ಯಾಪಕ ವಾಗಿ ವಿವೇಚಿತವಾಗಿದೆ.

ನೂರೆಂಟು ವ್ಯಾಖ್ಯಾನಗಳಿಂದಲೂ ಹೇಳಿ ಮುಗಿಯದ ಗಹನ ತತ್ತ್ವ- ಸತ್ತ್ವಗಳು ಇದರಲ್ಲಿ ಘನಿಷ್ಠವಾಗಿದೆ. ಪೂರ್ವ ಸೂರಿಗಳಿಂದ ಸ್ಫೂರ್ತಿ ಪಡೆದು ಈ ಕೃತಿ ಆಧಿಭೌತಿಕ, ಆಧಿದೈವಿಕ ಮತ್ತು ಅಧ್ಯಾತ್ಮಿಕತ್ರಯದ ಸಂಕೇತವಾಗಿದೆ. ಕನ್ನಡ ವಿದ್ವತ್ ಲೋಕದ ಅನರ್ಘ್ಯ ಮಣಿ ಸೇಡಿಯಾಪು ಕೃಷ್ಣಭಟ್ಟರು ಭಾರತೀಯ ಛಂದಶ್ಶಾಸ್ತ್ರ ಲೋಕಕ್ಕೆ ಕೊಡುಗೆಯು ಎಂದೆಂದೂ ಮಾಸದ ತವನಿಧಿ,
ಧ್ರುವತೇಜ. ಅವರದು ಉದಾರಯೋಗದಾನವೆಂದು ಕೊಂಡಾಡಿದ್ದಾರೆ.

ಶಬ್ದ ಗಾರುಡಿಗ, ವರಕವಿ ಬೇಂದ್ರೆಯವರ ಕಾವ್ಯಗಳಲ್ಲಿ ಓದುಗರಿಗೆ, ವಿಮರ್ಶಕರಿಗೆ, ಚಿಂತಕರಿಗೆ ಹೊಸ ನೋಟವನ್ನು ಕಾಣಿಸಿದ ಪ್ರಬಂಧವೇ ಬೇಂದ್ರೆ: ಅಧ್ಯಾರೋಪ ಮತ್ತು ಅಪವಾದ. ಮಲ್ಲಿಗೆಯ ಪ್ರೇಮಕವಿ ನರಸಿಂಹಸ್ವಾಮಿ ಕಾವ್ಯಗಳನ್ನು ವಿಮರ್ಶೆ ಮಾಡುತ್ತಾ ಇವರ ದಾಂಪತ್ಯ ಕವಿತೆ ಸಮಗ್ರ ಭಾರತೀಯ ಪರಂಪರೆಯ ರಸವತ್ಕವಿತೆಯ ವಿವರ್ತ, ಕನ್ನಡ ನವೋದಯ ದಲ್ಲಿಯೂ ಕುಡಿಹಾರಿಸಿದ ಅಭಿಜಾತ ಶೃಂಗಾರದ ವಿಜಯಕಾಂಡ.

ಕನ್ನಡ ಜನಮನದಲ್ಲಿ ಇವರ ಕಾವ್ಯ ಚಿರಕಾಲ ಗಟ್ಟಿಯಾಗಿ ನಿಂತು ಪ್ರೀತ್ಯಾದರಗಳನ್ನು ಗಳಿಸಿದೆ ಎಂದು ಗಣೇಶರು ಹೇಳುವಾಗ
ಸತ್ಯವೆನಿಸುತ್ತದೆ. ಪಿ. ಬಸವಣ್ಣನವರ ಬೋಳುಬಸವನ ಬೊಂತೆ ಒಂದು ಅನುಸರಣಾ ಕಾವ್ಯ. ಮಂಕುತಿಮ್ಮನ ಕಗ್ಗದಂತೆ ಇದು ಅನುಭವಪ್ರಾಮಾಣ್ಯ ಕಾವ್ಯ. ಕಗ್ಗದಂತೆ ಇದು ಕೂಡ ಪೂರ್ವಸೂರಿಗಳ ಪ್ರೇರಣೆಯಿಂದ ರಚಿತವಾದರೂ ಸ್ವಂತಿಕೆಯನ್ನು ಉಳಿಸಿಕೊಂಡಿದೆ.

ತಿಳಿಯಾದ ನಡುಗನ್ನಡದಲ್ಲಿ ರಚನೆಯಾದ ಇದು ಬಹುಮಟ್ಟಿಗೆ ವಿಶಿಷ್ಟಭಾಷೆಯ ಪರಿಧಿಯೊಳಗೇ ಸಾಗುವ ಇದು ನಾಕು
ಪಾದಗಳಿಂದ ಕೂಡಿದೆ. ದ್ವಿಪದಿಯೂ ಇದೆ. ಇದರ ಒಟ್ಟೂ ಶಾಬ್ದಿಕ ಸೌಂದರ್ಯದ ಕಡೆ ನಮ್ಮ ಗಮನವನ್ನು ಸೆಳೆಯುವಂತೆ ಗಣೇಶರು ವಿಶ್ಲೇಷಿಸಿzರೆ. ಇಂದು ವ್ಯವಹಾರದಲ್ಲಿ ಇರದ, ಒಂದು ಕಾಲದ ಆಡುನುಡಿಯಾದ ಹಳಗನ್ನಡವನ್ನು ಸೌಂದರ್ಯ – ಆನಂದಗಳ ಮೌಲ್ಯವೆಂದು ಕಾಣಬೇಕು. ಅದನ್ನು ಕೇವಲ ಸಂವಹನ ಸಾಧನವೆಂಬ ದೃಷ್ಟಿಯಿಂದ ನೋಡದೆ, ಅದಕ್ಕಿರುವ ‘ಸಾರ್ವಕಾಲೀನ ವರ್ತಮಾನಿಕತೆ’ಯನ್ನು ಗಮನಿಸಬೇಕು ಎನ್ನುತ್ತಾರೆ ಗಣೇಶರು.

ಪ್ರೊ.ಡಿ.ಎನ್. ಶಂಕರಭಟ್ಟರು ಬಯಸುವ ಕನ್ನಡ ಭಾಷೆಯ ಸರಳೀಕೃತ ರೂಪದ ಬಗ್ಗೆ ಚರ್ಚಿಸುವ ಲೇಖನ ಅದ್ಭುತವಾದ ವಾದವೆಂದೇ ಪರಿಗಣಿಸಬೇಕಾಗುತ್ತದೆ. ಕನ್ನಡವೇ ಇಂದು ಅಳಿಯುವ ದುಸ್ಥಿತಿಗೆ ಬಂದು ನಿಂತಿರುವ ಸಂದರ್ಭದಲ್ಲಿ ಅದರ ಸುಧಾರಣೆಗೆ ಭಟ್ಟರು ಸೂಚಿಸುವ ಸರಳೀಕೃತ ಮಾರ್ಗೋಪಾಯಗಳನ್ನು ಒಪ್ಪಲು ಅಸಾಧ್ಯ. ಅವರು ಹೇಳುವ ನಿರ್ದಿಷ್ಟ ಕಾರ್ಯ ಸೂಚಿಯ ಯುಕ್ತಾಯುಕ್ತತೆಯನ್ನು ಮಾತ್ರ ತತ್ತ್ವದೃಷ್ಟಿಯಿಂದ ಪರಾಮರ್ಶಿಸಿ ಬರೆದ ಲೇಖನ ಭಟ್ಟರು ಬಯಸುವ ಸುಧಾರಣೆ ಅಪ್ರಬುದ್ಧವೆಂಬ ಇಂಗಿತವನ್ನು ವ್ಯಕ್ತಪಡಿಸುತ್ತಾರೆ.

ಈ ಕುರಿತಾಗಿ ಡಾ. ಡಾ.ಅಜಕ್ಕಳ ಗಿರೀಶ ಭಟ್ಟರು ‘ಕನ್ನಡಕ್ಕೇಕೆ ಶಂಕರ ಭಟ್ಟರ ಕತ್ತರಿ’ ಎಂಬ ಕಿರು ವಿಮರ್ಶಾ ಪುಸ್ತಕದಲ್ಲಿ ಸಾದರವಾಗಿ ಸಾಧಾರವಾಗಿ ಭಟ್ಟರ ಈ ವಾದವನ್ನು ಖಂಡಿಸುತ್ತಲೇ ವಿಶ್ಲೇಷಿಸಿದ್ಧಾರೆ. ಡಾ.ಎಸ್. ಎಲ್‌. ಭೈರಪ್ಪರ ‘ಆವರಣ’ದ ಸುತ್ತ ಹುಟ್ಟಿದ ಉಭಯಪಕ್ಷೀಯ ಗಂಭೀರ – ಬಾಲಿಶ ಚರ್ಚೆಗಳನ್ನು ಬಿಡದೆ ಸಮಗ್ರವಾಗಿ ಪರಾಮರ್ಶಿಸಿ ಬರೆದ ಡಾ.ಅಜಕ್ಕಳ
ಗಿರೀಶ ಭಟ್ಟರ ಕೃತಿ ಬುದ್ಧಿಜೀವಿ /o ಬೌದ್ಧಿಕ ಸ್ವಾತಂತ್ರ್ಯ ಕೃತಿಯು ಕನ್ನಡ ವಿದ್ವತ್ ಲೋಕವು ಹೆಮ್ಮೆಪಡುವಂಥದ್ದು ಎಂಬ ಅಭಿಪ್ರಾಯಕ್ಕೆ ಬರುತ್ತಾರೆ.

ಇಂಥ ಸಂವಾದಗಳು ಎಲ್ಲಾ ಕಾಲಕ್ಕೂ ಆರೋಗ್ಯಕರ ಎಂಬುದನ್ನು ಸಮರ್ಥಿಸುತ್ತಾರೆ. ಭಾರತೀಯ ಕಲೆಗಳ ಅಂಶವೆಂದರೆ ಇರುವುದನ್ನು ತೋರಿಸುವುದಕ್ಕಿಂತ ಇರಬೇಕಾದುದನ್ನು ತೋರಿಸುವ ಪ್ರಯತ್ನ. ಕಲೆಗೆ ಬೇಕಾದುದು ಅನುಕರಣೆ ಅಲ್ಲ; ಅನು ಕೀರ್ತನೆ. Adding more value to the obvious; ವಾಸ್ತವಕ್ಕೆ ಇನ್ನೂ ಹೆಚ್ಚಿನ ಮೌಲ್ಯವನ್ನು ಸೇರಿಸುವುದು.

ಭಾರತೀಯ ಕಲೆಗಳ ವಿಕಾಸಕ್ಕೆ ಬೇಕಾದ ವಿನ್ಯಾಸಗಳ ರಚನೆಯನ್ನು ವಿಶ್ಲೇಷಿಸುವ ಲೇಖನ ಗಂಭೀರವಾದ ನೆಲೆಯಲ್ಲಿ ಇಲ್ಲಿ ಇದೆ. ಭಾರತವು ಪಾಶ್ಚಾತ್ಯ ಲೋಕದ ಪ್ರಭಾವಕ್ಕೆ ತೆರೆದುಕೊಂಡ ಸಮಯ ಸಂದರ್ಭ ಗಳನ್ನು ವಿಶ್ಲೇಷಿಸುವ ಲೇಖನದಲ್ಲಿ ಅದ್ಭುತ ವಾದ ವಿವರಗಳಿವೆ. ಸೆಮೆಟಿಕ್ ಮತದ ತೆಕ್ಕೆಗೆ ಒಳಗಾದುದರ ಪರಿಣಾಮವನ್ನು ಇಲ್ಲಿ ವಿವೇಚಿಸಲಾಗಿದೆ. ಎಲ್ಲಾ ಕ್ಷೇತ್ರ ದಲ್ಲೂ ಇವುಗಳ ಪ್ರಭಾವವನ್ನು ಕಣ್ಣಗೆ ಕೊಡುವಂತ ಕಾರ್ಯ ಬಹು ಮಾರ್ಮಿಕವಾಗಿಯೇ ಆಗಿದೆ. ನಮ್ಮೆಲ್ಲರ ಗಮನವನ್ನು ಈ
ಲೇಖನ ಕಾಂತೀಯ ಗುಣದಿಂದ ಸೆಳೆಯುತ್ತದೆ. ಭವಿಷ್ಯದ ಭಾರತದ ಉಳಿವಿಗಾಗಿ ಇದು ನಮ್ಮನ್ನು ಗಂಭೀರವಾಗಿ ಚಿಂತಿಸುವತ್ತ ಒಯ್ಯುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

ಪಾಶ್ಚಾತ್ಯ ಕಲಾಸಿದ್ಧಾಂತಗಳಾಗಲಿ, ತತ್ತ್ವಶಾಸ್ತ್ರೀಯ ಪ್ರಮೇಯ ಗಳಾಗಲಿ ಆದ್ಯಂತ ವೈಜ್ಞಾನಿಕ ಎಂಬ ಗೃಹೀತಾಭಿಪ್ರಾಯವೇ ಸರಿಯಲ್ಲ ಎಂಬ ಸತ್ಯವನ್ನು ಮನಗಾಣಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಭಾರತೀಯ ಚಿಂತನೆಗಳ ಪ್ರಭಾವವೇ ಪಾಶ್ಚಾತ್ಯ ಚಿಂತನೆಗಳ ಮೇಲೆ ಆಗಿರುವುದನ್ನು ಇಲ್ಲಿ ಸಾಧಾರವಾಗಿ ಚಿತ್ರಿಸಲಾಗಿದೆ. ದೇವರ ಬಗೆಗೆ, ದೈವಭಕ್ತಿಯ ಬಗೆಗೆ, ಆಸ್ತಿಕ್ಯ – ನಾಸ್ತಿಕ್ಯಗಳ ಬಗೆಗೆ, ವಿಜ್ಞಾನ ಮತ್ತು ತತ್ತ್ವಶಾಸ(ದರ್ಶನ)ಗಳ ಬಗೆಗೆಲ್ಲ ಬೇರೆ ಬೇರೆ ಚಿಂತಕರ ಚಿಂತನೆಗಳನ್ನು ವಿಮರ್ಶಿಸುವ
ಲೇಖನದ ಕೊನೆಯಲ್ಲಿ, ನಮ್ಮ ದೇವರ ಯೋಗ್ಯತೆಯು ಅದನ್ನು ನಂಬಿದ ನಮ್ಮ ಬಾಳಿನ ರೀತಿಯಲ್ಲಿದೆಯೆಂಬುದೇ ನನ್ನ ನಿಲವು.

ನಮ್ಮ ಬದುಕು ನಿಕೃಷ್ಟವಾಗಿದ್ದು ನಮ್ಮ ದೇವರು ಉತ್ಕೃಷ್ಟ ವಾಗಿರಲು ಹೇಗೆ ತಾನೆ ಸಾಧ್ಯ? ಎಂಬಲ್ಲಿ ಸತ್ಯವನ್ನು ಅಪ್ರಿಯ ವಾದರೂ ಪ್ರಿಯವಾಗುವಂತೆ ಹೇಳುತ್ತಾರೆ. ದೇವಾಲಯವು ಯಾವುದೇ ಮಾನವಸಂಸ್ಕೃತಿಯ ಮಹಾ ಆವಿಷ್ಕಾರಗಳಂದು.
ಇದರ ಉಗಮ – ವಿಕಾಸ – ಇತಿಹಾಸಗಳಿಗೆಲ್ಲ ಮೂಲಭೂತವಾಗಿರುವ, ಇದರ ಆಚರಣೆ – ಆರಾಧನೆಗಳಿಗೆಲ್ಲ ಅಂತಸತ್ವ ವಾಗಿರುವ ಅಂಶಗಳ ಬಗ್ಗೆ ಇಲ್ಲಿ ವಿವರಿಸಿದ ಲೇಖನವಿದೆ. ಭಾರತೀಯ ಸನಾತನ ಧರ್ಮದ ದೇವಾಲಯಗಳು ವೈದಿಕಮೂಲ ದಿಂದಲೇ ಜನಿಸಿದವು, ವಿಕಸಿಸಿದವು ಹಾಗೂ ಸರ್ವತ್ರ ವ್ಯಾಪಿಸಿದವೆಂಬ ಅಂಶವನ್ನು ಇಲ್ಲಿ ಕಾಣಿಸಲಾಗಿದೆ.

ಸಾಕಷ್ಟು ಅಡಿಟಿಪ್ಪಣಿಗಳ ಮೂಲಕ ದೇವಾಲಯ ತತ್ತ್ವ ವನ್ನು ಕಂಡರಿಸುವ ಪ್ರಯತ್ನವಾಗಿದೆ. ಭೃಗುಗಳ ಸಮಷ್ಟಿ ಪರಿಶ್ರಮದ ಅಭ್ಯುದಯವೇ ಭಾರ್ಗವೀ ಎಂಬ ಲಕ್ಷ್ಮೀ ತತ್ತ್ವ. ಋಗ್ವೇದ ಆದಿಯಾಗಿಯೂ ಆದಿಭೌತಿಕ ಸ್ತರದಲ್ಲಿಯೂ ಈ ತತ್ತ್ವದ ಚಿಂತನೆ ಇಲ್ಲಿ ನಡೆದಿದೆ. ಕನ್ನಡಿಗರೂ ಒಂದು ನೆಲೆಯಲ್ಲಿ ಭೃಗುವರ್ಗದವರೇ ಸರಿ. ವರುಣಪುತ್ರ ಅಗಸ್ತ್ಯ ದಕ್ಷಿಣ ಭಾರತಕ್ಕೇ ಮೊದಲಿಗ. ದ್ರಾವಿಡ ವ್ಮಾಯದ ಪ್ರವರ್ತಕ.

ಭೃಗುಲಲಾಮ ಪರಶುರಾಮನಂತೂ ಇಡಿಯ ಪಶ್ಚಿಮ ಕರಾವಳಿಯ ವಿಧಾತ. ಜತೆಗೆ ಯದುಗಳು ಇಲ್ಲಿಯೂ ಬಂದು ನೆಲೆಸಿದರು. ಹೀಗೆ ನಮಗೂ ಭೃಗುಗಳು ಮೂಲಪುರುಷರು ಎನ್ನುತ್ತಾರೆ ಗಣೇಶರು. ಅತ್ಯಂತ ಪ್ರಾಚೀನವಾದ ಗೌತಮಧರ್ಮಸೂತ್ರಗಳ ವಿಶ್ಲೇಷಣೆಯಲ್ಲಿ ವಿವಿಧ ಟೀಕಾಕಾರರ ವ್ಯಾಖ್ಯಾನವನ್ನು ಕೊಡಲಾಗಿದೆ. ಸಾಮಾನ್ಯ ಧರ್ಮದ ಸ್ವರೂಪದ ಬಗ್ಗೆ, ಗೌತಮರು ಗಣಿಸಿದ ಎಂಟು ಆತ್ಮಗುಣಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಭಗವಾನ್ ಗೌತಮರ ದೃಷ್ಟಿಕೋನವನ್ನು ಗೌರವಿಸುತ್ತಾ, ನಮ್ಮ ಧರ್ಮಶಾಸಭ್ಯಾಸವೂ ಅದರಲ್ಲಿ ಅನುಸಂಧಾನ ಆಗಬೇಕು ಎಂಬ ಅರಿವು ಮೂಡಿಸಲಾಗಿದೆ. ಡಾ.ರಾ.ಸತ್ಯನಾರಾಯಣ ಹಾಗೂ ಡಾ.ಪಿ.ಎಸ್ . ರಾಮಾನುಜಂ ಇಬ್ಬರೂ ಸಂಗೀತದಲ್ಲಿ ರಸದ ಬಗ್ಗೆ ನಡೆಸಿದ ಅಧ್ಯಯನದ ವಿವರಗಳ ಅಭಿಪ್ರಾಯವನ್ನು ಅಧ್ಯಯನ ಮಾಡಿ ಸಂಗ್ರಹಿಸಿದ ಮಾಹಿತಿಗಳ ವಿವರಗಳಿವೆ.

ಆನಂದವರ್ಧನ, ಮಮ್ಮಟಾದಿಗಳಂಥ ಹಿರಿಯ ಪೂರ್ವಸೂರಿಗಳ ವಿಶ್ಲೇಷಣೆಯನ್ನು ಸಾದರವಾಗಿ ಕ್ರೋಢೀಕರಿಸಿದ ಅಧ್ಯಯನ ವನ್ನು ಸಾಕಷ್ಟು ಅಡಿಟಿಪ್ಪಣೆಗಳ ಮೂಲಕ ಇಲ್ಲಿ ಕಾಣಿಸಲಾಗಿದೆ. ಋತುಗಳಿಗೆ ಹೊಂದಿಕೊಂಡು ಬಂದ ರಾಗ ಬಗೆಗೊಂದು ಟಿಪ್ಪಣಿಯಲ್ಲಿ ಋತುವಿಗೂ ರಾಗಕ್ಕೂ ಇರುವ ಸಂಬಂಧವನ್ನು ಕುರಿತ ವಿವೇಚನೆ ಇದೆ. ನಾದ ಮತ್ತು ಲಯಗಳೆಂಬ
ಸಂಗೀತದ ಎರಡು ಮುಖ್ಯ ಘಟಕಗಳಲ್ಲಿ ಲಯವು ಕಾಲಾಶ್ರಿತ. ಇದು ತುಂಬಾ ಗಣಿತೀಯ ಮತ್ತು ಬೌದ್ಧಿಕ.

ನಾದ ಭಾವನಾಧೀನ. ಅದು ಪ್ರಾತಿಭ. ಈ ನಾದವನ್ನೂ ಕಾಲದ ಪರಿಧಿಗೆ ರಸೋಚಿತವಾಗಿ ತರುವ ಯತ್ನವೇ ರಾಗವೇಲಾ ಕಲ್ಪನೆ. ಅಭಿನವಗುಪ್ತಪಾದ, ನಾನ್ಯದೇವ, ರ್ಶ್ಗಾದೇವ, ಪಂಡರೀಕವಿಠ್ಠಲ ಇವರುಗಳು ತಮ್ಮ ಗ್ರಂಥಗಳಲ್ಲಿ ಋತುಗಳು ಮತ್ತು ರಾಗಗಳ ಸಂಬಂಧವನ್ನು ಮಾಡಿದ ಉಲ್ಲೇಖಗಳ ವಿವರವಿದೆ. ಸಂಗೀತ ಮತ್ತು ರಾಗದ ಅಪಾರ ವಿಸ್ತಾರವನ್ನು ಹೇಳುವ ರಾಗ – ತಾಳಗಳ ವಾಸ್ತವ ಸಾಧ್ಯತೆ ಅಧ್ಯಾಯ ಶಾಸ – ಯುಕ್ತಿ – ಅನುಭವಗಳ ಆಧಾರವನ್ನಲ್ಲದೆ ವೈಜ್ಞಾನಿಕ ಪರಿಷ್ಕಾರವನ್ನೂ ಒದಗಿಸುವ
ಪ್ರಯತ್ನ ಮಾಡಿದೆ.

ಶಾಸ್ತ್ರೀಯ ನೃತ್ಯದಲ್ಲಿ ರಸಾಭಿನಯವನ್ನು ಕಲಿಸಲು ನೃತ್ಯದ ಜತಿಗಳಂತೆ ಕೇವಲ ಪ್ರಾಯೋಗಿಕವಾದ ಶಿಕ್ಷಣವಷ್ಟೇ ಸಾಲದು. ವ್ಯಾಪಕ ಲೋಕಾನುಭವವೂ ಬಹುಕಾವ್ಯ – ಶಾಸಗ್ರಂಥಗಳ ಪರಿಶೀಲನೆಯೂ ಆವಶ್ಯ. ಭಾವಯಿತ್ರೀ ಪ್ರತಿಭೆಯ ತೀವ್ರ
ಸಂವೇದನೆಯೂ ಇರಬೇಕು. ರಾಮಾಯಣ, ಮಹಾಭಾರತಗಳ ಗಂಭೀರ ಅಧ್ಯಯನ, ಸಾಹಿತ್ಯಾಧ್ಯಯನವೂ, ರಸಾಭಿನಯದ ವ್ಯಾಪ್ತಿಗೆ, ವಿವೇಚನೆಗೆ ಬೇಕಾದ ವ್ಯುತ್ಪತ್ತಿ – ಪ್ರತಿಭೆ – ಪರಿಶ್ರಮಗಳ ಅರಿವು ಬಹು ಮಹತ್ವವನ್ನು ಪಡೆದುದಾಗಿದೆ ಎನ್ನುತ್ತಾ ರಸಾಭಿನಯಕ್ಕಾಗಿ ಬೇಕಾದ ಪೂರ್ವಸಿದ್ಧತೆಯಲ್ಲಿ ವಿಸ್ಮೃತಿಗೆ ಹೋಗುತ್ತಿರುವ ರಸಾಭಿನಯದ ಪ್ರಾಧಾನ್ಯದ ಬಗ್ಗೆ ಹೇಳಲಾಗಿದೆ. ಶ್ರೀ ದಿವಾಕರ ಹೆಗಡೆಯವರ ಶೀಲಸಂಕ್ರಾಂತಿ ಒಂದು ಮುದ್ದಾದ ಸಾಂಕೇತಿಕ ಯಕ್ಷಗಾನ ಪ್ರಸಂಗ.

ಇತರ ಉಪಲಬ್ಧ ಸಾಂಕೇತಿಕ ಪ್ರಸಂಗಗಳಂತೆಯೆ ಅಷ್ಟೇ ಅಲ್ಲದೆ ಯಕ್ಷಗಾನ ಕಲೆಯ ಆವರಣಕ್ಕೆ ಕಳೆತುಂಬುವಂಥ, ಜನ ರಂಜನವೂ ಆಗುವಂಥ ಅಂಶಗಳನ್ನು ಒಳಗೊಂಡ ನಿರ್ಮಿತಿ. ಈ ಪ್ರಸಂಗವು ಏಡ್ಸ್ ರೋಗದ ಬಗೆಗೆ ಜನತೆಗೆ ತಿಳಿವಳಿಕೆ ನೀಡುವ ಉದ್ದೇಶದಿಂದ ಸಂಬದ್ಧವಾಗಿದೆ. ಸಾಫಲ್ಯವನ್ನೂ ಕಂಡಿದೆ. ಇದು ಕಲೆಯ ಅಂತರ್ಮೌಲ್ಯಗಳನ್ನು ಅಷ್ಟಾಗಿ ಗಮನಿಸದೇ ಜನಜಾಗರಣ, ಉತ್ಸಾಹ, ಪ್ರಚಾರ, ರಂಜನೆ ಹಾಗೂ ಆಕೃತಿ ನಿಷ್ಠೆಗಳನ್ನೇ ಮುಖ್ಯವಾಗಿಸಿಕೊಂಡಿದೆ.

ಆದರೂ ಇದು ಜನಮಾನಸದಲ್ಲಿ ಬಹುಕಾಲವಲ್ಲದಿದ್ದರೂ, ಉದ್ದೇಶಿತ ನೆಲೆ – ಬೆಲೆಗಳು ಇರುವವರೆಗೆ ಗಟ್ಟಿಯಾಗಿ ನಿಲ್ಲಬಲ್ಲ ಹಳೆಯ ಸಂಕೇತಗಳಿಂದ ಕೂಡಿದ ಹೊಸ ಕಸುವಿನಿಂದ ಹುಟ್ಟಿದ ಪ್ರಸಂಗ ಎನ್ನುಬಹುದು. ಅಸಂಖ್ಯ ಭಾರತೀಯರ ಮನಸನ್ನು ಗೆದ್ದ ದೂರದರ್ಶನದ ಮಹಾಭಾರತ, ರಾಮಾಯಣಕ್ಕಿಂತಲೂ ಹೆಚ್ಚು ಪ್ರಸಾರ ಪ್ರಿಯತೆಯನ್ನು ಪಡೆಯಿತು. ಮೂಲದ ವ್ಯಾಸ ಭಾರತವನ್ನು ಇದರೊಂದಿಗೆ ಹೋಲಿಸಿ ನಡೆಸಿದ ಗುಣ – ದೋಷಗಳ ವಿವೇಚನೆ ಮಾಡಿ, ಅದು ಆಧರಿಸಿದ ಆವೃತ್ತಿಯಿಂದ
ಕೊಂಚಮಟ್ಟಿಗೆ ಹೇಗೆ ದೂರಸರಿದಿರುವುದನ್ನು ಗಣೇಶರು ಸನ್ನಿವೇಶಗಳ ಉಖಗಳೊಂದಿಗೆ ವಿಲೋಕಿಸಿದ್ಧಾರೆ.

ಪೀಟರ್ ಬ್ರೂಕ್ಸ್ ಅವರ ಮಹಾಭಾರತ ನಾಟಕ – ಚಿತ್ರವನ್ನು ಈ ದೂರದರ್ಶನ ಮಹಾಭಾರತದೊಂದಿಗೆ ಹೋಲಿಸಿ ಬ್ರೂಕ್ಸರ ಪ್ರಯೋಗಗಳು ಹೇಗೆ ಅಭಾರತೀಯ ಹೃದಯಕ್ಕೆ ಸವಿಯಾಗುತ್ತವೆ ಎಂಬುದನ್ನು ವಿಡಂಬಿಸಿದ್ಧಾರೆ. ಕೀರ್ತಿಶೇಷರಾದ ಟಿ.ಜಿ. ಲಿಂಗಪ್ಪ ಅವರು ಕನ್ನಡ ಚಿತ್ರರಂಗವು ಕಂಡ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಮೊದಲ ಪಂಕ್ತಿಯವರೆಂಬುದು ನಿಸ್ಸಂದೇಹ.
ಬಿ.ಆರ್.ಪಂತುಲು ಅವರ ಎಲ್ಲ ಚಲನಚಿತ್ರಗಳಿಗೂ ಸಂಗೀತ ನಿರ್ದೇಶಕರಾಗಿ ಅವರು ನೀಡಿರುವ ಮಧುರವಾದ ಶ್ರುತಿ – ಲಯ ಸೌಂದರ್ಯದಿಂದ ಕೂಡಿವೆ.

ರಾಗಮಾಲಿಕೆಗಳನ್ನು ಹೆಣೆಯುವುದರಲ್ಲಿ ಲಿಂಗಪ್ಪನವರದು ಅನ್ಯಾದೃಶವಾದ ಕೌಶಲ. ಚಲನಚಿತ್ರಗೀತೆಗಳೆಂದರೆ ಮೂಗು
ಮುರಿಯುವ ಮಡಿವಂತ ಶಾಸೀಯ ಸಂಗೀತ ಪ್ರೇಮಿಗಳೂ ಮನದಣಿಯೆ ಕೇಳಿ ಆನಂದಿಸುವಷ್ಟು ರಾಗರಂಜನೆ ಲಿಂಗಪ್ಪನವರ ಸ್ವರಸೃಷ್ಟಿಗಳಲ್ಲಿವೆ. ಸುಮಾರು 50ಕ್ಕೂ ಹೆಚ್ಚು ಕನ್ನಡಚಿತ್ರಗಳಿಗೆ ಪ್ರಾಯಃ 500ರಷ್ಟು ಹಾಡುಗಳಿಗೆ ಸ್ವರಸಂಯೋಜನೆ ಮಾಡಿದ ಇವರು ಎರಡನೆಯ ಪೀಳಿಗೆಯವರಲ್ಲಿ ಮಹತ್ವದ ಸಂಗೀತ ನಿರ್ದೇಶಕರಾಗಿದ್ಧಾರೆ ಎನ್ನುತ್ತಾರೆ ಗಣೇಶರು.

ಹೀಗೆ ಈ ಪುಸ್ತಕ ಎಲ್ಲಾ ವರ್ಗದ ಓದುಗರಿಗೂ ಸಾಕಷ್ಟು ಜ್ಞಾನವನ್ನು ನೀಡುವ ಕೃತಿಯಾಗಿದೆ. ಆಕರಗ್ರಂಥವಾಗಿ ಇದನ್ನು ಬಳಸಬಹುದೆಂಬಂತೆ ಈ ಪುಸ್ತಕ ರಚಿತವಾಗಿದೆ. ಈಚಿನ ಇಪ್ಪತ್ತು ವರ್ಷಗಳಲ್ಲಿ ಅನ್ಯಾನ್ಯ ನಿಮಿತ್ತವಾಗಿ ಹುಟ್ಟಿದ ಈ ಬರಹಗಳು ಡಾ. ಗಣೇಶರ ವಿದ್ವತ್ತಿಗೆ ಹಿಡಿದ ಕೈಗನ್ನಡಿ. ನಾಡು ಕಂಡ, ಮೆಚ್ಚಿದ ಪುರುಷ ಸರಸ್ವತೀಯೆಂದರೆ ಅವರೇ ಎಂಬುದು ಈ ಮೂಲಕ
ಸಾರ್ವಕಾಲಿಕವೂ, ಸರ್ವವೇದ್ಯವೂ ಆದ ಸತ್ಯ!