ಕಿರಣ್ ಉಪಾಧ್ಯಾಯ ಬಹ್ರೈನ್
ವಿದೇಶವಾಸಿ
Be like one rupee coin ಒಂದು ರುಪಾಯಿಯ ನಾಣ್ಯದಂತೆ ಇರಲು ಪ್ರಯತ್ನಿಸಿ, ಏಕೆಂದರೆ ಇದು ಎಲ್ಲಾ ವರ್ಗದ, ಎಲ್ಲಾ ರೀತಿಯ ಜನರಿಗೂ ಉಪಯೋಗಕ್ಕೆೆ ಬರುತ್ತದೆ ಎಂಬ ಮಾತಿದೆ. ನೂರು ರುಪಾಯಿಗೆ ಹೋಲಿಸಿದರೆ ಒಂದು ರುಪಾಯಿಯ ಬೆಲೆ ತೀರಾ ಕಡಿಮೆ. ಆದರೆ ನೂರರ ಮೌಲ್ಯವನ್ನು ನೂರಾ ಒಂದಕ್ಕೆೆ ಹೆಚ್ಚಿಸುವ ಶಕ್ತಿಯಿದ್ದರೆ ಅದು ಒಂದು ರುಪಾಯಿಗೆ. ಹಾಗೆಯೇ,
ನೂರು ರುಪಾಯಿಯ ಮೌಲ್ಯ ಇಳಿಸಿ ತೊಂಬತ್ತೊೊಂಬತ್ತಕ್ಕೆೆ ತಂದು ನಿಲ್ಲಿಸುವ ತಾಕತ್ತಿರುವುದೂ ಇದೇ ಒಂದು ರುಪಾಯಿಗೆ.
ದಿನವಿಡೀ ನೀವು ಎಷ್ಟೇ ದುಡಿಯಿರಿ, ದಿನದ ಕೊನೆಗೆ ನೀವು ಖರ್ಚು ಮಾಡುವುದರಲ್ಲಿ ಒಂದು ರುಪಾಯಿ ಉಳಿಸಿದಿರಿ ಎಂದಾದರೆ ನಿಮಗೆ ಅಗತ್ಯಕ್ಕಿಿಂತ ಹೆಚ್ಚು ಕೆಲಸ ಮಾಡಿದ್ದೀರಿ ಎಂದೇ ಅರ್ಥ. ಅದಕ್ಕೆೆಂದೇ ಸಾರ್ವಕಾಲಿಕವಾಗಿ ಅನ್ವಯಿಸುವ ಮಾತೊಂದಿದೆ, “A rupee saved is a rupee gained’ ಒಂದು ರುಪಾಯಿ ಉಳಿಸಿದರೆ ಒಂದು ರುಪಾಯಿ ಗಳಿಸಿದಂತೆ ಎಂಬುದು ಈ ಮಾತಿನ ಅರ್ಥ.
ಇತ್ತೀಚೆಗೆ ದೇಶದ ಮುಖ್ಯ ನ್ಯಾಯಮೂರ್ತಿಯವರನ್ನು ಟೀಕಿಸಿ, ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ವಕೀಲ ಪ್ರಶಾಂತ್ ಭೂಷಣ್‌ಗೆ ದೇಶದ ಸರ್ವೋಚ್ಚ ನ್ಯಾಯಾಲಯ ದಂಡ ವಿಧಿಸಿತು. ತಾವು ಮಾಡಿದ ಎರಡು ಟ್ವೀಟ್
ಬಗ್ಗೆೆ ಬೇಷರತ್ ಕ್ಷಮೆ ಕೋರುವಂತೆ ಪ್ರಶಾಂತ್ ಭೂಷಣ್‌ಗೆ ಮೂರು ದಿನಗಳ ಕಾಲಾವಕಾಶ ನೀಡಿತ್ತು. ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲವೆಂದಾಗ ಅವರಿಗೆ ಒಂದು ರುಪಾಯಿಯ ದಂಡ ವಿಧಿಸಲಾಯಿತು. ಅವರಿಗೆ ವಿಧಿಸಿದ ದಂಡ ಸರಿಯೋ, ತಪ್ಪೋ ಎಂಬ ವಿಷಯಕ್ಕೆೆ ಸಂಬಂಧಿಸಿದಂತೆ ಕಾನೂನಿನ ಮೂರು ಅಕ್ಷರವನ್ನೂ ಓದದ ನಾನು ವಿಮರ್ಶೆಗೆ ಇಳಿಯುವುದಿಲ್ಲ.
ದೇಶದ ಸರ್ವೋಚ್ಚ ನ್ಯಾಯಾಲಯದ ತೀರ್ಪು ಏನೇ ಆದರೂ, ತೀರ್ಪನ್ನೂ, ನ್ಯಾಯಾಲಯವನ್ನೂ ಟೀಕಿಸುವ ಯಾವ ಅಧಿಕಾರವೂ ನಮಗಿಲ್ಲ ಎಂದು ನಂಬುವವನು ನಾನು. ನನ್ನ ಕುತೂಹಲಕ್ಕೆ ಕಾರಣವಾದದ್ದು ನ್ಯಾಯಾಲಯ ಹಿಂದೆಂದೂ ವಿಧಿಸದ ದಂಡದ ಮೊತ್ತವಾದ ‘ಒಂದು ರುಪಾಯಿ!’ ಒಂದು ರುಪಾಯಿಯ ಕಿಮ್ಮತ್ತು ಮೂರು ತಿಂಗಳು ಜೈಲು ಮತ್ತು ಮೂರು ವರ್ಷಗಳ ಪರವಾನಗಿ ರದ್ಧತಿಗೆ ಸಮ ಎಂಬ ಹೊಸ ಆಯಾಮವನ್ನು ತಿಳಿಸಿಕೊಟ್ಟಿತ್ತು.
ಇಂತಿರ್ಪ ಒಂದು ರುಪಾಯಿಯ ಒಂದಷ್ಟು ಕತೆ ಕೇಳಿದರೆ ಅದರ ಔನ್ನತ್ಯದ ಅರಿವಾಗುತ್ತದೆ. ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಬೇಹುಗಾರಿಕೆ ಮತ್ತು ಭಯೋತ್ಪಾದನೆ ಕೃತ್ಯ ಎಸಗಲು ಪಾಕಿಸ್ತಾನಕ್ಕೆೆ ಬಂದಿದ್ದಾನೆಂದು ಅಲ್ಲಿಯ ಸರಕಾರ ಮರಣದಂಡನೆ ವಿಧಿಸಿದ್ದು ತಿಳಿದಿದೆ ತಾನೆ? ಆ ತೀರ್ಪನ್ನು ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಿ ವಿಜಯಿಯಾಯಿತು. ಭಾರತದ ಪರವಾಗಿ ಸತತ ನಾಲ್ಕು ದಿನ ವಾದಿಸಿದವರು ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಕೀಲರೆಂದು ಹೆಸರು ಮಾಡಿದ ಹರೀಶ್ ಸಾಲ್ವೆೆ. ಯಾವುದೇ ಪ್ರಕರಣಕ್ಕೆೆ ಸಂಬಂಧಿಸಿದಂತೆ ಪ್ರತಿ ಬಾರಿ ನ್ಯಾಯಾಲಯದ ಕೊಠಡಿಯನ್ನು ಪ್ರವೇಶಿಸಲು ಸುಮಾರು ಇಪ್ಪತ್ತು ಲಕ್ಷ ರುಪಾಯಿ ಸಂಭಾವನೆ ಪಡೆಯುವ ಸಾಲ್ವೆೆ ಈ
ಪ್ರಕರಣದಲ್ಲಿ ಪಡೆದ ಸಂಭಾವನೆ ಒಂದು ರುಪಾಯಿ!
ದೇಶ ಕಂಡ ಅತ್ಯುತ್ತಮ ವಿದೇಶಾಂಗ ಮಂತ್ರಿಗಳಲ್ಲೊಬ್ಬರಾದ ಸುಷ್ಮಾ ಸ್ವರಾಜ್ ಈ ಪ್ರಕರಣಕ್ಕೆೆ ಸಂಬಂಧಿಸಿ ಭಾರತದ ಪರವಾಗಿ ತಾವು ವಾದಿಸಬೇಕೆಂಬುದು ನಮ್ಮ ಅಭಿಲಾಷೆ, ಆದರೆ ನೀವು ಕೇಳುವಷ್ಟು ಹಣ ನೀಡಲು ಸಾಧ್ಯವಾಗಲಿಕ್ಕಿಲ್ಲ ಎಂದಾಗ ಸಾಲ್ವೆ ಸಂಭಾವನೆಯಾಗಿ ಒಂದು ರುಪಾಯಿ ಕೊಡಿ ಎಂದಿದ್ದರು. 2019 ಜುಲೈನಲ್ಲಿ ಭಾರತದ ಪರವಾಗಿ ತೀರ್ಪು ಬಂತು. ಅಗಸ್‌ಟ್ 6ರಂದು ತೀವ್ರ ಹೃದಯಾಘಾತಕ್ಕೆೆ ಒಳಗಾಗುವ ಕೆಲವೇ ಕ್ಷಣಗಳ ಮೊದಲು ಸುಷ್ಮ ಸ್ವರಾಜ್ ತಮ್ಮ ಒಂದು ರುಪಾಯಿ
ನನ್ನಲಿದೆ, ನಾಳೆ ಮುಂಜಾನೆ 6 ಗಂಟೆಗೆ ಬಂದು ಸ್ವೀಕರಿಸಿ ಎಂದು ಸಾಲ್ವೆೆಯವರನ್ನು ಕೇಳಿಕೊಂಡಿದ್ದರು.
ದುರದೃಷ್ಟವಶಾತ್ ಅದೇ ರಾತ್ರಿ ಸುಷ್ಮಾ ಸ್ವರಾಜ್ ತೀರಿ ಹೋದರು. ಆ ಒಂದು ರುಪಾಯಿಯನ್ನು ನಂತರ ಸುಷ್ಮಾ ಸ್ವರಾಜ್ ಮಗಳಾದ ಬಾಂಸುರಿ ಸ್ವರಾಜ್ ಹರೀಶ್ ಸಾಲ್ವೆೆಯವರಿಗೆ ನೀಡಿದರು. ನನ್ನ ಜೀವಮಾನದಲ್ಲಿಯೇ ನಾನು ಸಂಪಾದಿಸಿದ
ಅತ್ಯಮೂಲ್ಯ ಸಂಪಾದನೆ ಇದು ಎನ್ನುತ್ತಾರೆ ಸಾಲ್ವೆೆ. ಬಹುಶಃ ಒಂದು ರುಪಾಯಿಗೂ ಇದಕ್ಕಿಿಂತ ಹೆಚ್ಚಿನ ಮೌಲ್ಯ ಅದರ ಇತಿಹಾಸದಲ್ಲಿಯೇ ದೊರೆತಿರಲಿಕ್ಕಿಲ್ಲ. ಸಚಿನ್ ತೆಂಡೂಲ್ಕರ್ ಯಾರಿಗೆ ಗೊತ್ತಿಲ್ಲ? ಸಚಿನ್ ಮತ್ತು ಅವರ ಗುರು ರಮಾಕಾಂತ್ ಆಚ್ರೇಕರ್ ಅವರ ಒಂದು ರುಪಾಯಿಯ ಸಂಬಂಧ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಸಚಿನ್ ಅಭ್ಯಾಸ ಮಾಡುವಾಗ ಗುರು
ಆಚ್ರೇಕರ್ ಸ್ಟಂಪ್ ಮೇಲೆ ಒಂದು ರುಪಾಯಿಯ ನಾಣ್ಯ ಇಡುತ್ತಿದ್ದರಂತೆ. ಸಚಿನನ್ನು ಯಾರಾದರೂ ಬೌಲ್ಡ್ ಮಾಡಿದರೆ ಅದು ಬೌಲರ್‌ಗೆ ಇಲ್ಲವಾದರೆ ಅದು ಸಚಿನ್‌ಗೆ ಎಂಬ ನಿಯಮ. ಹೀಗೆ ದಿನದ ಕೊನೆಯವರೆಗೂ ಔಟಾಗದೇ ಉಳಿದು ಸಂಪಾದಿಸಿದ
ಹದಿಮೂರು ಒಂದು ರುಪಾಯಿಯ ನಾಣ್ಯಗಳು ಕೋಟಿಗಿಂತ ಮಿಗಿಲು ಎಂದು ಸಚಿನ್ ಒಮ್ಮೆ ಹೇಳಿಕೊಂಡಿದ್ದಾರೆ.
ಭಾರತಕಂಡ ಇನ್ನೊೊಬ್ಬ ಅತ್ಯುತ್ತಮ ಕ್ರೀಡಾಪಟು, ಶರವೇಗದ ಸರದಾರ ಫ್ಲಾಯಿಂಗ್ ಸಿಖ್ ಖ್ಯಾತಿಯ ಮಿಲ್ಕಾ ಸಿಂಗ್ ಜೀವನ ಚರಿತ್ರೆ ಆಧರಿಸಿ ಹಿಂದಿಯಲ್ಲಿ ‘ಭಾಗ್ ಮಿಲ್ಕಾ ಭಾಗ್’ ಎಂಬ ಚಿತ್ರ ನಿರ್ಮಿಸಲಾಯಿತು. ಈ ಚಿತ್ರ ನಿರ್ಮಾಣದ ಪರವಾನಗಿಗೆ
ಎಷ್ಟು ಗೌರವ ಧನ ಕೊಡಬೇಕೆಂದು ಕೇಳಿದಾಗ ಒಂದು ರುಪಾಯಿ ಕೊಡುವಂತೆ ಹೇಳಿದ್ದರು ಮಿಲ್ಕಾ.
ಪರವಾನಗಿ ಪಡೆದ ಚಿತ್ರ ತಂಡ 1958ನೇ ಇಸವಿಯಲ್ಲಿ ಮುದ್ರಣಗೊಂಡ ಒಂದು ರುಪಾಯಿಯ ನೋಟನ್ನು ಹುಡುಕಿ ಮಿಲ್ಕಾಗೆ ನೀಡಿತ್ತು. 1958ರ ವಿಶೇಷತೆ ಯೆಂದರೆ, ಆ ವರ್ಷ ಸ್ವತಂತ್ರ ಭಾರತಕ್ಕೆೆ ಕಾಮನ್ವೆೆಲ್ತ್ ಗೇಮ್‌ಸ್‌ನಲ್ಲಿ ಮೊದಲ ಚಿನ್ನ ಗೆದ್ದಿದ್ದ ಮಿಲ್ಕಾ, ಏಷ್ಯನ್ ಗೇಮ್‌ಸ್‌ನಲ್ಲೂ ಎರಡು ಸ್ವರ್ಣ ಪದಕ ಜಯಿಸಿದ್ದರು. ಹಿಂದಿ ಚಿತ್ರರಂಗದಲ್ಲಿ ಒಂದು ರುಪಾಯಿಯ
ಕುರಿತು ಸಾಕಷ್ಟು ಕತೆಗಳಿವೆ. ಐತಿಹಾಸಿಕ ಚಿತ್ರ ಮುಘಲ್-ಎ-ಅಜಮ್ ಚಿತ್ರೀಕರಣ ಒಂದು ಹಂತದಲ್ಲಿ ದುಡ್ಡಿಲ್ಲದೇ ನಿಂತುಹೋಗಿತ್ತು. ಚಿತ್ರದ ನಿರ್ಮಾಪಕ ಶಾಪೂರ್ಜಿ ಪಾಲನ್ಜಿ ಈದ್ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಕೆ. ಆಸಿಫ್ ಮನೆಗೆ
ಹೋಗಿದ್ದರು. ಅವರು ಆಸಿಫ್‌ಗೆ ಈದಿಯ (ಹಬ್ಬದ ಉಡುಗೊರೆ) ರೂಪದಲ್ಲಿ ಒಂದು ಸಾವಿರದ ಒಂದು ರುಪಾಯಿ ನೀಡಿದರು.
ಅದನ್ನು ಕಂಡ ಆಸಿಫ್ ಅದರಲ್ಲಿ ಒಂದು ರುಪಾಯಿ ಇಟ್ಟುಕೊಂಡು ಉಳಿದ ಒಂದು ಸಾವಿರ ರುಪಾಯಿಯಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸುವುದಾಗಿ ಹೇಳಿದರು. ಅವರ ಉತ್ಸಾಹ ಕಂಡ ಶಾಪೂರ್ಜಿ ಎಲ್ಲೆಲ್ಲಿಂದಲೋ ಸಾಲ ಪಡೇದು,
ಹಣ ಹೊಂದಿಸಿ ಚಿತ್ರೀಕರಣ ಪೂರ್ಣಗೊಳಿಸಿದ್ದರು. ಹಿಂದಿ ಚಿತ್ರರಂಗದ ಶೋ ಮ್ಯಾನ್ ರಾಜ್ ಕಪೂರ್ ನಟಿಸಿದ ಚಿತ್ರ ‘ತೀಸ್ರಿ ಕಸಮ್’ನ ಕತೆ ಕೇಳಿ. ಗೀತ ರಚನೆಕಾರ ಶೈಲೇಂದ್ರ ನಿರ್ಮಿಸಿದ ಮೊದಲ ಮತ್ತು ಏಕೈಕ ಚಿತ್ರ ಅದು. ಚಿತ್ರೀಕರಣದ ಸಂದರ್ಭದಲ್ಲಿ
ಶೈಲೇಂದ್ರ ಮತ್ತು ನಿರ್ದೇಶಕ ಬಸು ಭಟ್ಟಾಚಾರ್ಯ ನಡುವೆ ವೈಮನಸ್ಸುಂಟಾಗಿ ಚಿತ್ರೀಕರಣ ನಿಂತು ಹೋಗಿತ್ತು. ಸಾಕಷ್ಟು ನೊಂದಿದ್ದ ಅಂತರ್ಮುಖಿಯಾದ ಶೈಲೇಂದ್ರ ಯಾರಿಗೂ ಕಾರಣವನ್ನೂ ಹೇಳದೇ ಮನೆ ಸೇರಿಕೊಂಡಿದ್ದರು. ಹೇಗೋ ವಿಷಯ
ಅರಿತ ಗಾಯಕ ಮುಖೇಶ್, ಚಿತ್ರದ ನಾಯಕ ರಾಜ್ ಕಪೂರ್‌ಗೆ ವಿಷಯ ತಿಳಿಸಿದರು. ಬಸು ಭಟ್ಟಾಚಾರ್ಯ ಬಿಟ್ಟು ಹೋದ ನಂತರದ ಉಳಿದ ಭಾಗವನ್ನು ಚಿತ್ರೀಕರಿಸುವುದಕ್ಕೆೆ ರಾಜ್ ಕಪೂರ್ ಸಹಕರಿಸಿದ್ದಲ್ಲದೇ, ಅಭಿನಯವೂ ಸೇರಿದಂತೆ ತಾವು ನೀಡಿದ ಎಲ್ಲಾ ಸಹಕಾರಕ್ಕೆೆ ಸಂಭಾವನೆಯ ರೂಪದಲ್ಲಿ ಒಂದು ರುಪಾಯಿ ಪಡೆದಿದ್ದರು.
ಎರಡೂವರೆ ಸಾವಿರಕ್ಕೂ ಹೆಚ್ಚು ಹಾಡು ಹಾಡಿದ, ಎಂಟು ಬಾರಿ ಫಿಲ್‌ಮ್‌ಫೇರ್ ಪ್ರಶಸ್ತಿ ಪಡೆದ ಕಿಶೋರ್ ಕುಮಾರ್ ತಮ್ಮ ಗಾಯನ ವೃತ್ತಿಜೀವನದ ಉತ್ತುಂಗದಲ್ಲಿರುವ ಕಾಲದಲ್ಲಿ ಒಂದು ಪದ್ಯಕ್ಕೆೆ ಒಂದೂ ಕಾಲು ಲಕ್ಷ ರುಪಾಯಿ ಸಂಭಾವನೆ
ಪಡೆಯುತ್ತಿದ್ದರಂತೆ. ಹುಟ್ಟಾ ಬಂಗಾಲಿಯಾದರೂ ವ್ಯವಹಾರದಲ್ಲಿ ಮಾರ್ವಾಡಿಯಂತಿದ್ದ ಕಿಶೋರ್ ಕುಮಾರ್ ಮುಂಚಿತವಾಗಿ ಹಣ ನೀಡದಿದ್ದರೆ ಹಾಡುತ್ತಿರಲಿಲ್ಲ. ಅಂತಹ ಕಿಶೋರ್ ಕುಮಾರ್ ಲತಾ ಮಂಗೇಶ್ಕರ್ ಜೊತೆ ಹಾಡುವಾಗ ಗೌರವ
ಸೂಚಕವಾಗಿ ಅವರಿಗಿಂತ ಒಂದು ರುಪಾಯಿ ಕಡಿಮೆ ಸಂಭಾವನೆ ಪಡೆಯುತ್ತಿದ್ದರು.
ಇತ್ತೀಚೆಗೆ ನಮ್ಮನ್ನು ಅಗಲಿದ ಖ್ಯಾತ ನೃತ್ಯ ನಿರ್ದೇಶಕಿ ಸರೋಜ್ ಖಾನ್ ಮೊದಲು ಸಹಾಯಕ ನೃತ್ಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆ ಕಾಲದಿಂದಲೂ ಯಾರಾದರೂ ಒಳ್ಳೆಯ ನೃತ್ಯ ಮಾಡಿದರೆ ಅವರನ್ನು ಕರೆದು ಶುಭ ಶಕುನದ
ಸಂಕೇತವಾಗಿ ಅವರ ಕೈಗೆ ಒಂದು ರುಪಾಯಿಯ ನಾಣ್ಯವನ್ನು ಕೊಡುತ್ತಿದ್ದರಂತೆ. ಪ್ರತಿಯೊಬ್ಬರೂ ಅವರಿಂದ ಶುಭ ಶಕುನ ಪಡೆಯಲು ಪ್ರಯತ್ನಿಸುತ್ತಿದ್ದರೂ ನಾಣ್ಯ ಪಡೆದವರು ತೀರಾ ಕಮ್ಮಿ. ಆದರೆ ಅವರಿಂದ ಶಕುನವಾಗಿ ಒಂದು ರುಪಾಯಿ
ಗಿಟ್ಟಿಸಿಕೊಂಡವರಲ್ಲಿ ಬಹಳವರ್ಷಗಳವರೆಗೆ ಹಿಂದಿ ಚಿತ್ರರಂಗವನ್ನಾಳಿದ ಅಮಿತಾಭ್ ಬಚ್ಚನ್ ಕೂಡ ಒಬ್ಬರು. ಸರೋಜ್ ಖಾನ್ ತೀರಿ ಹೋದ ಸಂದರ್ಭದಲ್ಲಿ ಈ ವಿಷಯವನ್ನು ಸ್ವತಃ ಅಮಿತಾಭ್ ಅವರೇ ಹಂಚಿಕೊಂಡಿದ್ದರು.
ಇತ್ತೀಚಿನ ದಿನಗಳಲ್ಲಿ ತಮ್ಮ ಅಭಿನಯದಿಂದ ಸದ್ದು ಮಾಡುತ್ತಿರುವ ನಟ ನವಾಜುದ್ದೀನ್ ಸಿದ್ದಿಕಿ ಹರಾಮ್ ಖೋರ್ ಚಿತ್ರದಲ್ಲಿ ಅಭಿನಯಿಸಲು ಪಡೆದ ಸಂಭಾವನೆ ಒಂದು ರುಪಾಯಿ. ಯಶ್ರಾಜ್ ಫಿಲ್‌ಮ್ಸ್‌ನ ಆದಿತ್ಯ ಚೋಪ್ರಾ ಒಮ್ಮೆ ಸಲ್ಮಾನ್ ಖಾನ್‌ಗೆ \ಮ್ಮ
ಚಿತ್ರದಲ್ಲಿ ಅಭಿನಯಿಸಲು ಕೇಳಿಕೊಡಿದ್ದರಂತೆ. ಶಾರುಖ್ ಖಾನ್‌ಗಿಂತ ಒಂದು ರುಪಾಯಿ ಹೆಚ್ಚು ಸಂಭಾವನೆ ನೀಡಿದರೆ ಚಿತ್ರದಲ್ಲಿ ಅಭಿನಯಿಸುವುದಾಗಿ ಹೇಳಿದ್ದರಂತೆ ಸಲ್ಮಾನ್ ಖಾನ್. ಒಂದು ಕಾಲದಲ್ಲಿ ರಾಜೇಶ್ ಖನ್ನಾ ಮತ್ತು ಅಮಿತಾಭ್ ಬಚ್ಚನ್ ನಡುವೆಯೂ ಸಂಭಾವನೆಯ ವಿಷಯದಲ್ಲಿ ಇದೇ ರೀತಿಯ ಪೈಪೋಟಿ ಇತ್ತು ಎಂಬ ವದಂತಿಯೊಂದಿತ್ತು.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಮೊದಲಬಾರಿ ಮುಖ್ಯಮಂತ್ರಿ ಆದಾಗಿ ನಿಂದಲೂ ಒಂದು ರುಪಾಯಿ ಸಂಬಳ ಪಡೆಯುತ್ತಿದ್ದರಂತೆ. ಇತ್ತೀಚೆಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಪಟ್ಟ ಏರುವ ಸಂದರ್ಭದಲ್ಲಿ ವೈ.ಎಸ್.
ಜಗನ್ಮೋಹನ್ ರೆಡ್ಡಿ ಕೂಡ ಒಂದು ರುಪಾಯಿಯ ಸಂಬಳ ಪಡೆಯುವುದಾಗಿ ಹೇಳಿದ್ದರು. ಹಾಗೆಂದು ಈ ಒಂದು ರುಪಾಯಿಯ ಕತೆ ಶ್ರೀಮಂತರ, ತಾರೆಯರ, ರಾಜಕಾರಣಿಗಳ ಅಥವಾ ಇನ್ಯಾವುದೋ ಉದ್ಯಮಿಗಳ ಸುತ್ತವೇ ತಿರುಗುತ್ತದೆ ಎಂದರೆ ತಪ್ಪಾದೀತು.
ಇತ್ತೀಚೆಗೆ ಉದ್ಯಮಿ ಆನಂದ್ ಮಹೀಂದ್ರಾ ತಮಿಳುನಾಡಿನ ಕಮಲತಲ್ ಎಂಬ ಹೆಸರಿನ ಎಂಬತ್ತೈದರ ವಯೋವೃದ್ಧೆೆಯನ್ನು ಪ್ರಶಂಸಿಸಿ ಒಂದು ಟ್ವೀಟ್ ಮಾಡಿದ್ದರು. ಈಕೆಯ ವಿಶೇಷವೆಂದರೆ ಕಳೆದ ಮೂವತ್ತು ವರ್ಷಗಳಿಂದಲೂ ಈಕೆ ಒಂದು
ರುಪಾಯಿಗೆ ಒಂದು ಇಡ್ಲಿ ಮಾರುತ್ತಿದ್ದುದು, ಅದೂ ಚಟ್ನಿ ಮತ್ತು ಸಾಂಬಾರ್ ಸೇರಿ! ಕರೋನಾ ಸಂದರ್ಭದಲ್ಲಿ ವಸ್ತು ಸಂಗ್ರಹಣೆಗೆ ಪರದಾಡ ಬೇಕಾಯಿತಾದರೂ ಬೆಲೆ ಏರಿಸದೆ, ಕಷ್ಟದಲ್ಲಿ ಸಿಲುಕಿಕೊಂಡ ಕಾರ್ಮಿಕರಿಗೆ ಉಪಕಾರವಾಗಲೆಂದು ಲಾಭ – ನಷ್ಟದ ವಿಚಾರ ಮಾಡದೆ ತನ್ನ ಕಾರ್ಯ ಮುಂದುವರಿಸಿದ್ದಳು ಕಮಲತಲ್ ಅಜ್ಜಿ.
ಏಳೆಂಟು ತಿಂಗಳ ಹಿಂದೆ ತಮಿಳುನಾಡಿನ ಮಧುರೈನ ಮನೋಹರ್ ಎಂಬ ಮೀನು ವ್ಯಾಪಾರಿಯೊಬ್ಬ ಸುಮಾರು ಐದು ಕ್ವಿಿಂಟಲಷ್ಟು ತಾಜಾ ಮೀನನ್ನು ಕಿಲೋ ಒಂದಕ್ಕೆೆ ಒಂದು ರುಪಾಯಿ ಯಂತೆ ಮಾರಾಟ ಮಾಡಿದ್ದ. ಮೀನು ಸೇವಿಸುವುದು ಆರೋಗ್ಯಕ್ಕೆೆ ಒಳ್ಳೆೆಯದು ಎಂದು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ತಾನು ಈ ಕಾರ್ಯ ಮಾಡುತ್ತಿರುವುದಾಗಿ
ಹೇಳಿಕೊಂಡಿದ್ದ ಈತ ಇನ್ನೂ ಐದು ಕ್ವಿಿಂಟಲ್ ಮೀನನ್ನು ಇದೇ ಬೆಲೆಗೆ ಮಾರುವುದಾಗಿ ಹೇಳಿದ್ದ.
ಕಳೆದ ಫೆಬ್ರವರಿಯಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್ ಭಾರತಕ್ಕೆೆ ಭೇಟಿ ನೀಡಿದ ಸಂದರ್ಭದಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಮೊಟೆರಾ ಕ್ರೀಡಾಂಗಣದಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆ ಕ್ರೀಡಾಂಗಣದ ಮಹಾದ್ವಾರದ ಇಬ್ಬದಿಯಲ್ಲಿ ಒಂದು ರುಪಾಯಿಯ ಎರಡು ನೋಟುಗಳನ್ನು ಪ್ರದರ್ಶಿಸುವಂತೆ ತೇಜಪಾಲ್ ಶಾ ಎಂಬ
ಪುರಾತನ ವಸ್ತುಗಳ ವ್ಯಾಪಾರಿ, ನಾಣ್ಯಶಾಸ್ತ್ರಜ್ಞ ವಿನಂತಿಸಿಕೊಂಡಿದ್ದ. ಈ ಎರಡು ನೋಟುಗಳ ವಿಶೇಷವೆಂದರೆ, ಒಂದರ ಮೇಲೆ ಕೊನೆಯ ಆರು ಸಂಖ್ಯೆೆ ಟ್ರಂಪ್ ಜನ್ಮ ದಿನ, ಇನ್ನೊೊಂದರ ಮೇಲೆ ಪ್ರಧಾನಿ ಮೋದಿಯವರ ಜನ್ಮ ದಿನ ಮುದ್ರಿತವಾಗಿತ್ತು. ಇದೇ ರೀತಿ ಮಹಾನ್ ವ್ಯಕ್ತಿಗಳ ಜನ್ಮದಿನ ಹೊಂದಿದ ಒಂದು ರುಪಾಯಿಯ ನೂರು ನೋಟುಗಳು ತನ್ನ ಬಳಿ ಇವೆ ಎಂದು ಶಾ ಹೇಳಿಕೊಂಡಿದ್ದ.
ಒಂದು ರುಪಾಯಿಯ ಕತೆಯಲ್ಲಿ ಕರ್ನಾಟಕದ ಕೆಲವರ ಕೊಡುಗೆಯನ್ನೂ ಮರೆಯುವಂತಿಲ್ಲ. ಅತಿ ಹೆಚ್ಚು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಕ್ಕೆೆ ಗಿನ್ನಿಸ್ ದಾಖಲೆ ಹೊಂದಿದ, ಇಂದಿರಾಗಾಂಧಿಯವರಾದಿಯಾಗಿ, ಪಿ. ವಿ. ನರಸಿಂಹ ರಾವ್, ರಾಜೀವ್ ಗಾಂಧಿ
ಯವರಂಥ ಘಟಾನುಘಟಿಗಳ ವಿರುದ್ಧ ಸ್ಪರ್ಧಿಸಿದವರು ಹೊಟ್ಟೆೆ ಪಕ್ಷ ರಂಗಸ್ವಾಮಿಯವರು. ಚುನಾವಣೆ ಸಂದರ್ಭದಲ್ಲಿ ಎತ್ತಿನ ಬಂಡಿಯ ಮೇಲೆ ಒಂದಿಷ್ಟು ಅಕ್ಕಿ ಹೇರಿಕೊಂಡು ಹೋಗಿ ಕಿಲೋ ಒಂದಕ್ಕೆೆ ಒಂದು ರುಪಾಯಿಯಂತೆ ಮಾರಿ ಪ್ರಚಾರ ಮಾಡುತ್ತಿದ್ದರು.
ಕನ್ನಡ ಚಳುವಳಿಯ ವಾಟಾಳ್ ನಾಗರಾಜ್ ಕೂಡ ಪ್ರಚಾರದ ಸಂದರ್ಭದಲ್ಲಿ ಒಂದು ರುಪಾಯಿಗೆ ಅಕ್ಕಿ, ರಾಗಿ ಮಾರುತ್ತಿದ್ದರು.
ಈ ಮಹಾ ಮಹಿಮ ಒಂದು ರುಪಾಯಿಯ ಇತಿಹಾಸದೆಡೆಗೆ ಗಮನಿಸೋಣ. ರುಪ್ಯಕಮ್ (ಬೆಳ್ಳಿಯಿಂದ ತಯಾರಿಸಲ್ಪಟ್ಟ ನಾಣ್ಯ) ಎಂಬ ಸಂಸ್ಕೃತ ಪದದಿಂದ ಸುರಿ ಸಾಮ್ರಾಜ್ಯದ ಆಡಳಿತಾವಧಿಯಲ್ಲಿ ರುಪಾಯಿ ಹುಟ್ಟಿಕೊಂಡಿತು ಎಂದು ಇತಿಹಾಸ ಹೇಳುತ್ತದೆ. 1540 ರಿಂದ 1545 ರವರೆಗೆ ಆಡಳಿತ ನಡೆಸಿದ ಶೇರ್ ಶಾ ಸೂರಿ ತನ್ನ ಆಡಳಿತಾವಧಿಯಲ್ಲಿ ಮೊದಲ ಬಾರಿಗೆ ಒಂದು ರುಪಾಯಿ ಯನ್ನು ಚಲಾವಣೆಗೆ ತಂದ. ಅದು ಮುಘಲ್ ಮತ್ತು ಬ್ರೀಟಿಷರ ಆಳ್ವಿಕೆಯಲ್ಲೂ ಮುಂದುವರಿದು ಬಂತು.
1770ರ ನಂತರ ಕಾಗದದ ನೋಟು ಚಲಾವಣೆಗೆ ಬಂತು. ಭಾರತದಲ್ಲಿ ಅತಿ ಹೆಚ್ಚು ಬಾರಿ ನೇಪಥ್ಯಕ್ಕೆೆ ಸರಿದು ಮತ್ತೆೆ ಮತ್ತೆೆ ಚಲಾವಣೆಗೆ ಬಂದ ದಾಖಲೆ ಏನಾದರೂ ಇದ್ದರೆ ಅದು ಒಂದು ರುಪಾಯಿಗೇ ಸಲ್ಲಬೇಕು. ಯಾವ ಮುಖಬೆಲೆಯ ನೋಟೂ ಒಂದು ರುಪಾಯಿಯ ನೋಟಿನಂತೆ ಆಗಾಗ ಮರು ಜೀವ ಪಡೆದು ಬಂದಿಲ್ಲ. ಎರಡು ದಶಕದ ಹಿಂದೆ ನಿಂತು ಹೋಗಿದ್ದ ಒಂದು ರುಪಾಯಿ ಈಗ ಮತ್ತೊಮ್ಮೆ ಶೇಕಡಾ ನೂರರಷ್ಟು ತ್ಯಾಜ್ಯ ವಸ್ತುವಿನಿಂದ ತಯಾರಿಸಲ್ಪಟ್ಟು, ಹೊಸ ರೂಪದೊಂದಿಗೆ
ಮುದ್ರಣಗೊಂಡು ಹೊರಬರುತ್ತಿದೆ.
ಒಂದು ರುಪಾಯಿಯ ಸೈಜೇ ಬೇರೆ, ಅದರ ಸ್ಟೆೆ ಲೇ ಬೇರೆ. ನೀವು ಗಮನಿಸಿರಬಹುದು, ಇಂದಿಗೂ ನಮ್ಮ ರಾಷ್ಟ್ರದ ಅಥವಾ ರಾಜ್ಯದ ಕೋಟಿಗಟ್ಟಲೆ ಆಯ – ವ್ಯಯವನ್ನು ವಿವರಿಸುವುದು ಒಂದು ರುಪಾಯಿಯ ಲೆಕ್ಕದಲ್ಲಿ. ಉದಾಹರಣೆಗೆ ತೆರಿಗೆಯ ಆದಾಯ ಐವತ್ತು ಪೈಸೆ, ಸಾಲ ಮೂವತ್ತು ಪೈಸೆ, ಇತರೆ ಆದಾಯ ಇಪ್ಪತ್ತು ಪೈಸೆ, ಹೀಗೆ ಒಟ್ಟೂ ಆದಾಯ ಒಂದು ರುಪಾಯಿ. ಹಾಗೆಯೇ ಕೃಷಿಗೆ, ನೀರಾವರಿಗೆ, ಶಿಕ್ಷಣಕ್ಕೆೆ, ಸಾಲ ತೀರಿಸಲು ಇಂತಿಷ್ಟು ಪೈಸೆ, ಹೀಗೆ ಬಜೆಟ್‌ನಲ್ಲಿ ವಿವರಿಸುವುದು ಒಂದು ರುಪಾಯಿಯ ಸರಳ ಲೆಕ್ಕವನ್ನು.
ಒಂದು ರುಪಾಯಿಯ ನೋಟನ್ನು ಮುದ್ರಿಸಲು ತಗಲುವ ವೆಚ್ಚ ಒಂದೂವರೆ ರುಪಾಯಿ. ಅಲ್ಲಿಗೆ ತನ್ನ ಮುಖ ಬೆಲೆಗಿಂತಲೂ ಹೆಚ್ಚು ಖರ್ಚು ಮಾಡಿಸಿ ಕೊಂಡು ಹುಟ್ಟಿ ಬರುವ ನೋಟು ಇದೊಂದೇ. ಮತ್ತೊೊಂದು ವಿಷಯ ಗೊತ್ತಾ? ಭಾರತದ ಎಲ್ಲಾ
ನೋಟುಗಳೂ ಮುದ್ರಣಗೊಂಡು ಬರುವುದು ರಿಸರ್ವ್ ಬ್ಯಾಾಂಕ್ ಆಫ್ ಇಂಡಿಯಾದಿಂದ. ಅವುಗಳ ಮೇಲೆ ಸಹಿ ಇರುವುದು ರಿಸರ್ವ್ ಬ್ಯಾಾಂಕ್ ಗವರ್ನರ್ ಅವರದ್ದು. ಒಂದು ರುಪಾಯಿಯ ನೋಟು ರಿಜರ್ವ್ ಬ್ಯಾಾಂಕ್ ಬದಲು ಭಾರತ ಸರಕಾರದ ಶಿರೋನಾಮ ಹೊತ್ತು ಹೊರಬರುತ್ತದೆ. ಕೇಂದ್ರ ಹಣಕಾಸು ಕಾರ್ಯದರ್ಶಿಯವರ ಸಹಿಯುಳ್ಳ ಈ ನೋಟು ರಿಜರ್ವ್ ಬ್ಯಾಾಂಕ್ ಬದಲಾಗಿ ಭಾರತ ಸರಕಾರದ ಮುದ್ರಣ ಕಾರ್ಖಾನೆಯಲ್ಲಿ ಮುದ್ರಣಗೊಳ್ಳುತ್ತದೆ.
ಕೆಲವೊಮ್ಮೆ ವಸ್ತು ತೀರಾ ಚಿಕ್ಕದಾಗಿ ಕಂಡರೂ ಅದರ ಬೆಲೆ ಬೇರೆಯೇ ಇರುತ್ತದೆ ಎಂಬುದಕ್ಕೆೆ ಒಂದು ರುಪಾಯಿಗಿಂತ ಒಳ್ಳೆಯ ಉದಾಹರಣೆ ಸಿಗಲಿಕ್ಕಿಲ್ಲ. ಸಣ್ಣದನ್ನು ಕೀಳಾಗಿ ಕಾಣಬಾರದೆಂಬ ತತ್ತ್ವಜ್ಞಾನದ ಪಾಠವನ್ನೂ ಒಂದು ರುಪಾಯಿ ಹೇಳಿಕೊಡುತ್ತದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುತ್ತೇವಲ್ಲ, ಹಾಗೆ. . -“The small is not just
small always!’