Thursday, 19th September 2024

ಒಂದು ಚದರ ಇಂಚು ಮೌನ

ಸಂಡೆ ಸಮಯ

ಸೌರಭ ರಾವ್, ಕವಯಿತ್ರಿ ಬರಹಗಾರ್ತಿ

ಸದಾ ಹಿನ್ನೆಲೆ ಸಂಗೀತದಂತೆ ಓಡುವ ಮನೆಯ ರೆಫ್ರಿಜರೇಟರ್, ಅಥವಾ ಏರ್ ಕಂಡಿಷನರ್ ಸದ್ದು, ಅಥವಾ ಆಗಾಗ ಮೇಲೆ ಹಾರಾಡುವ ವಿಮಾನಗಳ ಸದ್ದು ಕೇಳದೇ ಇದ್ದ ಸಮಯ ನಿಮಗೆ ನೆನಪಿದೆಯೇ? ಅದರಲ್ಲೂ ನೀವು ಶಹರಗಳಲ್ಲಿ ವಾಸಿಸುತ್ತಿದ್ದರೆ ಎಡಬಿಡದೇ ಕೇಳುವ ಎ ರೀತಿಯ ಸದ್ದುಗಳಲ್ಲಿ, ವಿಚಲಿತರಾಗದೇ ಒಂದರ ಮೇಲೆ ಮಾತ್ರ ನಿಮ್ಮ ಧ್ಯಾನ ಕೇಂದ್ರೀಕರಿಸುವ ಶಕ್ತಿ ನಿಮಗಿದೆಯೇ? ಮಾನವಕೃತ ಸದ್ದುಗಳೇ ಇಲ್ಲದ ಒಂದು ಕಾಡಿನಲ್ಲಿ ನೀರು ತೊಟ್ಟಿಕ್ಕುವ, ಹರಿಯುವ ಸದ್ದಿನ ಆಹ್ಲಾದವನ್ನು, ಅದೇ ಕಾಡಿನ ಮೌನದಲ್ಲಿ ನಮ್ಮದೇ ಹೃದಯಬಡಿತದ ಸದ್ದು ನಿಗೂಢವಾಗಿ ಕಾಡುವ ಅನುಭವವನ್ನು ಜನರಿಗೆ ನಿಜವಾಗಿಯೂ ಅರ್ಥ ಮಾಡಿಸುವುದು ಹೇಗೆ?

ಅದಿರಲಿ, ಈ ವಾಕ್ಯಗಳನ್ನು ಓದಿ ಮುಗಿಸುವುದರೊಳಗೆ ನಿಮಗೆ ಎಷ್ಟು ವಾಹನಗಳ ಸದ್ದು ಕೇಳಿಸಿತು, ನಿಮ್ಮ ಫೊನಿಗೆ ಮೆಸೇಜ್ ಅಥವಾ ನೋಟಿಫಿಕೇಶನ್ ಬಂದಿತು? ಈ ಎ ಪ್ರಶ್ನೆಗಳನ್ನು ಉಪಯೋಗವಿಲ್ಲದ ಗೊಡ್ಡು ಚಿಂತನೆ ಎಂದು ಕಡೆಗಣಿಸದೇ ಕೇಳುತ್ತಾ, ಜಾಗತಿಕ ಹವಾಮಾನ ವೈಪರೀತ್ಯ, ಪರಮಾಣು ತ್ಯಾಜ್ಯ, ಅವನತಿಯ ಅಂಚಿನಲ್ಲಿರುವ ವನ್ಯಜೀವಿಗಳು, ಪರಿಸರ ಸಂರಕ್ಷಣೆ ಯಂಥಾ ವಿಷಯಗಳ ಮುಂದೆ ನಮ್ಮ ಪ್ರಪಂಚದಲ್ಲಿ ಮೌನದ ಮಹತ್ವದ ಚರ್ಚೆ ನಿಕೃಷ್ಟ ಎಂದು ಪರಿಗಣಿಸುವ ಅಪಾಯ ವಿರುವ ಸಾಧ್ಯತೆಯನ್ನು ‘ಮೌನದ ದೇವರು’ ಎಂದು ಉತ್ಪ್ರೇಕ್ಷೆಯಿಲ್ಲದೇ ಪ್ರೀತಿ – ಆದರಗಳಿಂದ ಕರೆಯಿಸಿಕೊಳ್ಳುವ ಗಾರ್ಡನ್
ಹೆಂಪ್ಟನ್ ಗುರುತಿಸುತ್ತಾರೆ.

ಕಳೆದ ಸುಮಾರು 37 ವರ್ಷಗಳಲ್ಲಿ ಮನುಷ್ಯರ ಚಟುವಟಿಕೆಗಳ ಛಾಯೆಯೂ ಇಲ್ಲದ ಪ್ರಕೃತಿಯ ಅತ್ಯಂತ ವಿರಳ ನಾದಗಳ ಹುಡುಕಾಟದಲ್ಲಿ ಮೂರು ಬಾರಿ ಭೂಪ್ರದಕ್ಷಿಣೆ ಮಾಡಿ ಅವುಗಳನ್ನು ತಮ್ಮ ವಿಶಿಷ್ಟ ಧ್ವನಿಮುದ್ರಣ ಉಪಕರಣಗಳಿಂದ ಎಲ್ಲರಿಗೂ ತಮ್ಮ ವೆಬ್ಸೆ ಟ್ ಮತ್ತು ಸೌಂಡ್ ಕ್ಲೌಡ್ ಮಾಧ್ಯಮದ ಮೂಲಕ ಕೇಳಸಿಗುವಂತೆ ಮಾಡುತ್ತಾ, ನಾವು ಮೌನವನ್ನು ರಕ್ಷಿಸಿದರೆ ಮಿಕ್ಕೆಲ್ಲವನ್ನೂ ರಕ್ಷಿಸಿದಂತೆ, ಎನ್ನುತ್ತಾರೆ ಹೆಂಪ್ಟನ್.

ಅಬ್ಬರ, ಗದ್ದಲಗಳ ಅಹಿತಕರ ಪರಿಣಾಮಗಳ ಬಗೆಗಿನ ಜ್ಞಾನ ಪ್ರಾಚೀನ ಗ್ರೀಕರ ಸಮಯಕ್ಕೆ ಹೋಗುತ್ತದೆ. ಸಿಬಾರಿಸ್ ನಗರದಲ್ಲಿ ಮೊಟ್ಟಮೊದಲು ಸದ್ದು – ಗದ್ದಲದ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿತ್ತು ಎನ್ನಲಾಗಿದೆ – ಆಗಿನ ಬಡಗಿಗಳು, ಕಮ್ಮಾರರು ಮತ್ತು ಜೋರಾಗಿ ಸದ್ದು ಮಾಡುವ ಇತರರ ಕೆಲಸಗಳನ್ನು ನಗರದ ಹೊರವಲಯಗಳಲ್ಲಿ ಮಾಡಬೇಕಿತ್ತು. ಇವತ್ತಿನ ಜಗತ್ತಿನಲ್ಲಿ ಮನುಷ್ಯರಿಂದ ಉಂಟಾಗುತ್ತಿರುವ ಗದ್ದಲದಲ್ಲಿ ವಾಹನಗಳದ್ದೇ ಅತೀ ಹೆಚ್ಚು ಕೊಡುಗೆಯಿದೆ, ಮತ್ತು ಇಷ್ಟರ ಪ್ರಪಂಚ ದಾದ್ಯಂತ ಕಾರುಗಳ ಸಂಖ್ಯೆ ಎರಡು ಬಿಲಿಯನ್ ದಾಟಲಿದೆ!

ಹಾಗಾದರೆ ಮೌನ ಹೇಗೆ ಕೇಳಿಸುತ್ತದೆ ಎಂಬುದು ನಿಜವಾಗಿಯೂ ನಮಗೆ ತಿಳಿದಿದೆಯಾ? ಪ್ರಾಕೃತಿಕವಾಗೇ ನಮ್ಮ ಸುತ್ತಮುತ್ತ ಜೋರಾದ ಸದ್ದುಗಳೂ ಇವೆ. ಎಳೆಗಳ ಮರ್ಮರದಂತಹ ಇಂಪಾದ ಸದ್ದಿನಿಂದ ಹಿಡಿದು ಸಿಡಿಲಿನಂತಹ ಅಬ್ಬರದವರೆಗೂ ನಿಸರ್ಗದಲ್ಲಿ ಸದ್ದುಗಳ ದೊಡ್ಡ ಹರಹು ಇದೆ. ಆದರೆ ಅಧ್ಯಯನಗಳ ಪ್ರಕಾರ ನಮ್ಮಲ್ಲಿ ಹೈಪರ್‌ಟೆನ್ಷನ್ (ಏರೊತ್ತಡ), ಮಾನಸಿಕ ಒತ್ತಡ ಮತ್ತು ಒಮ್ಮೊಮ್ಮೆ ಹೃದಯ ಸಂಬಂಧಿ ಕಾಯಿಲೆಗಳಿಗೂ ಇರುವ ಕಾರಣಗಳಲ್ಲಿ ಮಾನವಕೃತ ಗದ್ದಲಗಳು ದೊಡ್ಡ ಕೊಡುಗೆ ನೀಡುತ್ತಿವೆ.

ಸ್ವಲ್ಪ ಯೋಚಿಸಿ, ಹೆಂಪ್ಟನ್ ಅವರ ಮೂರು ದಶಕಗಳ ಅನುಭವದ ಪ್ರಕಾರ ಅಮೆರಿಕಾದಂಥ ದೊಡ್ಡ ದೇಶದ ಇಂದು 15 ನಿಮಿಷಗಳವರೆಗೆ ಶಬ್ದ ಮಾಲಿನ್ಯವಿಲ್ಲದೇ ಮೌನವಿರುವ ಜಾಗಗಳ ಸಂಖ್ಯೆ 10ಕ್ಕಿಂತಲೂ ಕಡಿಮೆ! ಇನ್ನು ನಮ್ಮಂತಹ ದೇಶದಲ್ಲಿ, ಅದರಲ್ಲೂ ಸ್ವಲ್ಪವೂ ವ್ಯವಧಾನವೇ ಇಲ್ಲದವರಂತೆ ನಿಮಿಷಕ್ಕೆ ನೂರು ಸಲ ಹಾಂಕ್ ಮಾಡುತ್ತಾ ಜನ ವಾಹನಗಳನ್ನು ಓಡಿ ಸುವ ಕೆಲವು ನಗರಗಳಲ್ಲಿ ಕೋಟಿಗಟ್ಟಲೆ ದುಡ್ಡು ಕೊಟ್ಟರೂ ಮೌನ ಸಿಗುವುದಿಲ್ಲ.

ಇದ್ಯಾವ ಸೀಮೆ ದೊಡ್ಡ ವಿಷಯ, ನಾವೆ ಈ ಸದ್ದುಗಳ ನಡುವೆ ಬದುಕುತ್ತಿಲ್ಲವಾ ಎನ್ನಬಹುದು. ಆದರೆ ಭೂಮಿಯಿರುವುದು ಕೇವಲ ಮನುಷ್ಯರಾದ ನಮ್ಮ ಅಗತ್ಯಗಳನ್ನು ಪೂರೈಸಲು ಅಲ್ಲ ಎಂಬುದನ್ನು ನಾವು ಮರೆತು ಬದುಕುತ್ತಿರುವಂತಿದೆ. ನಾವು ಉಂಟುಮಾಡುತ್ತಿರುವ ನಿರಂತರವಾದ ಸದ್ದು-ಗದ್ದಲಗಳು ಕೇವಲ ನಮಗೇ ಗೊತ್ತಿಲ್ಲದೇ ಕೇವಲ ನಮ್ಮ ಆರೋಗ್ಯದ ಮೇಲೆ ಮಾತ್ರವಲ್ಲ: ಪ್ರಕೃತಿಯಲ್ಲಿ ತಮ್ಮ ಸಂಗಾತಿಗಳನ್ನು ಹುಡುಕಿ ಕೊಳ್ಳುವುದಕ್ಕೆ, ಆಹಾರ ಹುಡುಕಿಕೊಳ್ಳುವುದಕ್ಕೆ, ಬೇಟೆಪ್ರಾಣಿ ಗಳಿಂದ ರಕ್ಷಣೆ ಪಡೆದುಕೊಳ್ಳುವುದಕ್ಕೆ ಅನೇಕ ಪ್ರಾಣಿ-ಪಕ್ಷಿಗಳು ಸೂಚನೆ, ಸಂಕೇತ ಅಥವಾ ದಿಕ್ಸೂಚಿಯಾಗಿ ಬಳಸುವುದು ನೈಸರ್ಗಿಕ ಸದ್ದುಗಳನ್ನು.

ಹೀಗೆ ನಾವು ಸೃಷ್ಟಿಸುತ್ತಿರುವ, ನಮ್ಮ ಕಿವಿಗಳಿಗೇ ಹಿಂಸೆ ಕೊಡುವ ಎ ಅನಗತ್ಯ ಗದ್ದಲ, ಅಬ್ಬರ ಶ್ರವಣಾವಲಂಬಿ ಪ್ರಾಣಿಪಕ್ಷಿಗಳ ಸಂದೇಶಗಳನ್ನು ಚದುರಿಸಿ ಬೆರೆಸಿಹಾಕುತ್ತಿವೆ, ಮತ್ತು ಅವುಗಳ ನೈಸರ್ಗಿಕ ಜೀವನಶೈಲಿಗೆ ಅಪಾಯವೊಡ್ಡಿ ಅವುಗಳ ಇರುವಿಕೆಗೇ ಇಂದು ದೊಡ್ಡ ಸವಾಲಾಗಿವೆ. ಇದಕ್ಕೆ ವೈಜ್ಞಾನಿಕ ಅಧ್ಯಯನಗಳ ಪುರಾವೆ ಇದೆ. ಪ್ರಪಂಚದಾದ್ಯಂತ ನಾವು ಉಂಟು ಮಾಡು ತ್ತಿರುವ ಸದ್ದುಗಳಿಂದ ಬೇರೆ ಬೇರೆ ರೀತಿಯ ಪರಿಸರ ವ್ಯವಸ್ಥೆಗಳ ಬೇರೆ ಬೇರೆ ಜೀವಸಂಕುಲಗಳು ತಮ್ಮಪಾಡಿಗೆ ತಾವು ಬದುಕಲೂ ಕಷ್ಟವಾಗುತ್ತಿದೆ ಎಂದು ಸಂಶೋಧನೆಗಳು ತೋರಿಸಿಕೊಡುತ್ತಿವೆ. ಕಾರ್ನೆಲ್ ವಿಶ್ವವಿದ್ಯಾಲಯದ ಹಿರಿಯ ವಿಜ್ಞಾನಿ ಕ್ರಿಸ್ಟಫರ್
ಡಬ್ಲ್ಯೂ. ಕ್ಲಾರ್ಕ್ ಹೇಳುತ್ತಾರೆ, ತಿಮಿಂಗಿಲಗಳು ಮತ್ತು ಹಂದಿಮೀನು (ಡಾಲಿನ್)ಗಳು ಒಟ್ಟಿಗೆ ಇರಲು, ಆಹಾರ ಹುಡುಕಿಕೊಳ್ಳಲು ತಮ್ಮ ಸದ್ದುಗಳ ಮೇಲೆ ಪೂರ್ತಿಯಾಗಿ ಅವಲಂಬಿತವಾಗಿವೆ.

ಅವುಗಳ ಸಂಪೂರ್ಣ ಸಾಮಾಜಿಕ ಜಾಲವೇ ಅವುಗಳು ಒಬ್ಬರಿಗೊಬ್ಬರು ಕೊಡುವ ಕರೆಗಳ ಮೇಲೆ ನಿಂತಿದೆ. ನಮ್ಮ ತೈಲ ಮತ್ತು ಅನಿಲ ಕೈಗಾರಿಕೆಗಳು ಸಮುದ್ರ ಪ್ರದೇಶಗಳ ಬಳಿ ನಡೆಸುವ ತೂತು ಕೊರೆಯುವ ಯಂತ್ರಗಳ ಅಪಾರ ಸದ್ದು, ಭೂಕಂಪನದ ಅಲೆಗಳ ಸಹಾಯದಿಂದ ತೈಲ ವನ್ನು ಹುಡುಕುವ ವಿಧಾನಗಳು ಈ ದೊಡ್ಡ ಮೀನುಗಳ ಮೇಲೆ ವಿನಾಶಕಾರಿ ಪರಿಣಾಮಗಳನ್ನು
ಬೀರುತ್ತಿವೆ. ತೀವ್ರ ಶಬ್ದಮಾಲಿನ್ಯದಿಂದ ಒಂದೇ ಸಾಲಕ್ಕೆ ನೂರಾರು ತಿಮಿಂಗಿಲಗಳು ಮತ್ತು ಹಂದಿಮೀನುಗಳು ಅಳಿಯುವುದು ವರದಿಯಾಗಿದೆ. ಭೂಮಿಯ ಮೇಲೆ ಇರಲಿ, ಸಮುದ್ರದ ಒಡಲನ್ನೂ ನಾವು ನಮ್ಮ ಶಬ್ದಗಳಿಂದ ತುಂಬುತ್ತಿದ್ದೇವೆ.

ದೊಡ್ಡ ಹಡಗುಗಳ ನಿರಂತರ ಸದ್ದಿನಿಂದ ನೀರಿನಲ್ಲಿ ವಾಸಿಸುವ ದೊಡ್ಡ ಸಸ್ತನಿಗಳಲ್ಲಿ ಸಂತಾನೋತ್ಪತ್ತಿಯ ಪ್ರಮಾಣ ಕಡಿಮೆ ಯಾಗಿದೆ. ನಾವು ಉಂಟುಮಾಡುತ್ತಿರುವ ಶಬ್ದ ಮಾಲಿನ್ಯದಿಂದ ಚಿಟ್ಟೆಹುಳುಗಳ ಹೃದಯಬಡಿತ ಹೆಚ್ಚಾಗುತ್ತದೆ, ಬ್ಲೂಬರ್ಡ್ಸ್ ಸಂತಾನೋತ್ಪತ್ತಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿ ಅವುಗಳು ಹಿಂದೆಂದಿಗಿಂತಲೂ ಕಡಿಮೆ ಮರಿಗಳನ್ನು ಹಾಕುತ್ತಿವೆ, ಮತ್ತು ಗ್ರೇಟ್ ಬ್ಯಾರಿಯರ್ ರೀಫ್‌ ನಲ್ಲಿರುವ ಡ್ಯಾಮ್ಸೆಲ್ ಫಿಶ್ ಬೇಟೆಪ್ರಾಣಿಗಳು ತಮ್ಮ ಹತ್ತಿರ ನುಸುಳುತ್ತಿರುವ ಸಂಕೇತವನ್ನು
ಓದುವುದು ನಿಧಾನವಾಗಿದೆ. ನಾವು ಉಂಟುಮಾಡುತ್ತಿರುವ ಶಬ್ದ ಮಾಲಿನ್ಯ ಗಿಡಮರಗಳ ಮೇಲೂ ನಕಾರಾತ್ಮಕ ಪರಿಣಾಮ ಗಳನ್ನು ಬೀರುತ್ತಿದೆ.

ಹೀಗಾಗೇ ಹೆಂಪ್ಟನ್ ಪದೇ ಪದೆ ಹೇಳುವುದು: ನಾವು ಮೌನವನ್ನು ರಕ್ಷಿಸಿದರೆ ಮಿಕ್ಕೆಲ್ಲವನ್ನೂ ರಕ್ಷಿಸಿದಂತೆ. ಕೋವಿಡ್ ಲಾಕ್‌ಡೌನ್ ಗಳಾದ ಹಿನ್ನೆಲೆಯಲ್ಲಿ, ಜನ ಸಂಚರಿಸುವುದು ಕಡಿಮೆಯಾದ್ದರಿಂದ ಅನೇಕ ದೇಶಗಳಲ್ಲಿ ಶಬ್ದಮಾಲಿನ್ಯ ಕಡಿಮೆ ಯಾಗಿತ್ತು, ಆಗಿದೆ. ಹೆಂಪ್ಟನ್ ಅವರ ಪ್ರಕಾರ, ಗದ್ದಲ ಕಡಿಮೆಯಾದ ಪ್ರಪಂಚ ಎಷ್ಟು ಶಾಂತವಾಗಿರುತ್ತದೆ ಎಂಬ ಅತ್ಯಮೂಲ್ಯ ಉದಾಹರಣೆ ಸಿಕ್ಕಿದೆ ಎನ್ನುತ್ತಾರೆ ಅವರು.

ಹೆಂಪ್ಟನ್ ಇತ್ತೀಚಿನ ದಿನಗಳಲ್ಲಿ ಪ್ರಖ್ಯಾತರಾಗುವುದಕ್ಕೆ ಬಹುಷಃ ದೊಡ್ಡ ಕಾರಣ ಅವರ “One Square Inch of Silence’ (ಒಂದು ಚದರ ಇಂಚಷ್ಟು ಮೌನ) ಯೋಜನೆ. ಹೆಂಪ್ಟನ್ ಪ್ರಕಾರ ಇಡೀ ಪ್ರಪಂಚದ ಅತ್ಯಂತ ಮೌನ ಪ್ರದೇಶಗಳಲ್ಲಿ ಒಂದಾದ
ವಾಷಿಂಗ್ಟನ್ -ನಲ್ಲಿರುವ ಒಲಿಂಪಿಕ್ ನ್ಯಾಷನ ಲ್ ಪಾರ್ಕ್‌ನ ಹೋಹ್ ಮಳೆಗಾಡಿನ ಮಧ್ಯದಲ್ಲಿ 2005ರ ‘ಭೂಮಿಯ ದಿನ’ದಂದು ಒಂದು ಮರದ ದಿಮ್ಮಿಯ ಮೇಲೆ ಅವರೇ ಒಂದು ಪುಟ್ಟ ಕಲ್ಲನ್ನಿಟ್ಟು, ಈ ಸುತ್ತಮುತ್ತಲ ಪ್ರದೇಶದ ಮೌನವನ್ನು ಶಬ್ದಮಾಲಿನ್ಯದಿಂದ ಕಾಪಾಡಿದರೆ, ಇದರ ಸುತ್ತಮುತ್ತ ಬಹುದೂರದವರೆಗೆ ಅದರ ಪರಿಣಾಮ ಉಂಟಾಗುತ್ತದೆ.

15 ವರ್ಷದ ಹಿಂದೆಯೇನೋ ಸುಮಾರು ಒಂದು ಘಂಟೆಯವರೆಗೂ ಮನುಷ್ಯರ ಯಾವುದೇ ಸದ್ದಿಲ್ಲದೇ ಹೆಂಪ್ಟನ್ ಅಲ್ಲಿ ಕೂರುತ್ತಿದ್ದರು. ಅಲ್ಲಿಯ ಮೌನ ಕಾಪಾಡುವುದಕ್ಕೆ ಅವರು ಅಮೆರಿಕನ್ ಏರ್ಲೈನ್ಸ್, ಹವಾಯನ್ ಏರ್ಲೈನ್ಸ್, ಮತ್ತು ಅಲಾಸ್ಕಾ ಏರ್ಲೈನ್ಸ್ ಜೊತೆ ಒಪ್ಪಂದ ಮಾಡಿಕೊಂಡು, ಆ ನ್ಯಾಷನಲ್ ಪಾರ್ಕ್ ಮೇಲೆ ಯಾವುದೇ ವಿಮಾನದ ಟೆಸ್ಟ್ ಅಥವಾ ನಿರ್ವಹಣೆ ಯ ಹಾರಾಟ ನಡೆಸಬಾರದೆಂದು ಮನವಿ ಮಾಡಿ ಒಪ್ಪಂದವನ್ನೂ ಮಾಡಿಕೊಂಡರು. ಆದರೆ 2012ರಷ್ಟರಲ್ಲಿ ಅಮೆರಿಕಾದ ನೌಕಾಪಡೆ ಆ ಪ್ರದೇಶದ ಬಳಿ ತನ್ನ ವಿಮಾನಗಳ ಹಾರಾಟವನ್ನು ದಿನಕ್ಕೆ ಸುಮಾರು ಆರು ಸಲವಾದರೂ ನಡೆಸಲು ಶುರು ಮಾಡಿ, ಅದರ ಸದ್ದು 70 ಡೆಸಿಬೆಲ್ ಮೀರುತ್ತಿತ್ತು.

ಮನುಷ್ಯರ ಗುರುತೇ ಇಲ್ಲದ ಒಂದು ಘಂಟೆಯ ಮೌನ 10 ನಿಮಿಷಕ್ಕೆ ಇಳಿಯಿತು. ಕೇವಲ ಒಂದು ಪುಟ್ಟ ಪ್ರದೇಶದ ಬಗ್ಗೆ ಕಾಳಜಿ ತೋರಿಸಿದರೆ ಸಾಲದು ಎಂದು ಹೆಂಪ್ಟನ್ 2018ರಲ್ಲಿ ಕ್ವಯೆಟ್ ಪಾರ್ಕ್ಸ್ ಇಂಟರ್ ನ್ಯಾಷನಲ್ (QPI) ಎಂಬ ಸಂಸ್ಥೆಯನ್ನು ಸಹ ಸಂಸ್ಥಾಪಿಸಿದರು. ಇದರ ಆದ್ಯತೆ ಮೌನವನ್ನು ಎ ಜೀವಿಗಳ ಹಿತಕ್ಕಾಗಿ ಸಂರಕ್ಷಿಸುವುದು. ಇಂದು QPI ಬೆಳೆದು, ಸದ್ದುಗಳ ಬಗ್ಗೆ ಸಂಶೋಧನೆ ನಡೆಸುವ ವಿಜ್ಞಾನಿಗಳನ್ನೂ ಹೊಂದಿದೆ. ಈ ಪ್ರತಿನಿಧಿಗಳು ಅಮೆರಿಕಾ ಮಾತ್ರವಲ್ಲದೇ ಆಫ್ರಿಕಾ, ಆಸ್ಟ್ರಿಯಾ, ಕ್ಯಾನಡಾ, ಕೊಲೊಮ್ಬಿಯಾ, ಡೆನ್ಮಾರ್ಕ್, ಭಾರತ, ಯುನೆಟೆಡ್ ಕಿಂಗ್ಡಮ್ ಮತ್ತು ಸೌತ್ ಅಮೆರಿಕಾದಿಂದಲೂ ಇದ್ದಾರೆ.

QPI ಅಧ್ಯಯನಗಳಿಗೆ ಎಡೆ ಹೆಚ್ಚು ಬೆಲೆ ಸಿಗುತ್ತದೆ ಎಂಬುದು ಹೆಂಪ್ಟನ್ ಅವರ ಬಲವಾದ ನಂಬಿಕೆ. ಎಲ್ಲವನ್ನೂ ಕೇವಲ ಮನುಷ್ಯರ ದೃಷ್ಟಿಕೋನದಿಂದ ನೋಡದೇ, ಎ ಜೀವಿಗಳ ಒಳಿತಿಗಾಗಿ ಮೌನದ ಮಹತ್ವವನ್ನು ಕಡೆಗಣಿಸದೇ ಸಂರಕ್ಷಿಸಬೇಕಿದೆ. ಅವರ ನಂಬಿಕೆಗೆ ಪೂರಕವಾಗಿನಾವೂ ನಮ್ಮ ಸುತ್ತಮುತ್ತ ನಮ್ಮಿಂದಾಗುವ ಶಬ್ದಮಾಲಿನ್ಯವನ್ನು ಕಡಿಮೆ ಮಾಡುವತ್ತ ಗಮನ ಹರಿಸಬಹುದಲ್ಲವೇ?

Leave a Reply

Your email address will not be published. Required fields are marked *