ವಿಶ್ಲೇಷಣೆ
ಎಂ.ವೆಂಕಯ್ಯ ನಾಯ್ಡು
ಮತ್ತೆ ಮತ್ತೆ ಸಾರ್ವತ್ರಿಕ ಚುನಾವಣೆ ನಡೆಸುವುದರಿಂದ ಆಗುವ ಹಣಕಾಸಿನ ಹೊರೆ ಅಗಾಧ. ರಾಜ್ಯವಿಧಾನಸಭೆ ಚುನಾವಣೆ, ಉಪಚುನಾವಣೆ, ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತಿ ಚುನಾವಣೆಗಳಿಗೆ ಆಗುವ ವೆಚ್ಚಗಳನ್ನೂ ಸೇರಿಸಿದರೆ ವಾರ್ಷಿಕ ಚುನಾವಣಾ ವೆಚ್ಚವು ಬ್ರಹ್ಮಾಂಡವಾಗುತ್ತದೆ. ಸರಕಾರಿ ಕೆಲಸ-ಕಾರ್ಯಗಳಿಗೆ ಅಡಚಣೆಯಾಗಿ ಅಭಿವೃದ್ಧಿ ಯೋಜನೆಗಳು ಕುಂಠಿತಗೊಳ್ಳುತ್ತವೆ.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎಂಬ ಪರಿಕಲ್ಪನೆಯು ಹಲವಾರು ವರ್ಷಗಳಿಂದ ತೀವ್ರ ಚರ್ಚೆಯ ವಿಷಯ ವಾಗಿದೆ. ಇತ್ತೀಚೆಗೆ ಕೇಂದ್ರ ಸರಕಾರವು ಈ ನಿಟ್ಟಿನಲ್ಲಿ ಒಂದಷ್ಟು ಯೋಜನೆ ಗಳನ್ನು ರೂಪಿಸುವುದರೊಂದಿಗೆ ಈ ವಿಷಯಕ್ಕೆ ಪ್ರಸ್ತುತತೆ ಒದಗಿದೆ ಎನ್ನಬೇಕು. ‘ಒಂದು ರಾಷ್ಟ್ರ, ಒಂದು ಚುನಾವಣೆ’ಯ ಪ್ರಸ್ತಾವವು, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕ ಕಾಲಿಕವಾಗಿ ಚುನಾವಣೆಗಳನ್ನು ನಡೆಸುವ ಮೂಲಕ ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಹೊಮ್ಮಬೇಕಿರುವ ಒಮ್ಮತದ ಅಗತ್ಯವನ್ನು ಒತ್ತಿ ಹೇಳುತ್ತದೆ. ಈ ವಿಷಯದಲ್ಲಿ ನಾವು ರಾಜಕೀಯ ದೃಷ್ಟಿಕೋನದ ಆಚೆಗೆ ಗಮನಹರಿಸಿ ಚರ್ಚಿಸಬೇಕಿದೆ; ವೆಚ್ಚದ ಉಳಿತಾಯದ ಅಂಶವನ್ನು ಚರ್ಚೆಗೆ ಪರಿಗಣಿಸುವುದರ ಜತೆಗೆ, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎಂಬ ಪರಿಕಲ್ಪನೆಯ ಐತಿಹಾಸಿಕ ಸಂದರ್ಭವನ್ನೂ ನಾವು ಪರಿಶೀಲಿಸ ಬೇಕಿದೆ.
ಪ್ರತಿ ಬಾರಿಯ ಚುನಾವಣಾ ಆವರ್ತನದಲ್ಲೂ ಭಾರತೀಯ ಚುನಾವಣಾ ವ್ಯವಸ್ಥೆಯು ಎದುರಿಸುತ್ತಿರುವ ಅತ್ಯಂತ ಅನಿವಾರ್ಯದ ಮತ್ತು ಒತ್ತಡದಾಯಕ ಸಮಸ್ಯೆ ಯೆಂದರೆ ದಿಗ್ಭ್ರಮೆಗೊಳಿಸುವ ಪ್ರಮಾಣದಲ್ಲಿರುವ ಖರ್ಚು ವೆಚ್ಚಗಳದ್ದು. ಸರಕಾರದ ವಿವಿಧ ಹಂತಗಳಲ್ಲಿ ವರ್ಷವಿಡೀ ಒಂದಲ್ಲಾ ಒಂದು ಚುನಾವಣೆಗಳು ನಡೆಯುತ್ತಲೇ ಇರುತ್ತವೆ ಯಾದ್ದರಿಂದ, ಭಾರತದ ಚುನಾವಣಾ ವ್ಯವಸ್ಥೆಯು ನಿರಂತರವಾಗಿ ಸಕ್ರಿಯವಾಗಿರ ಬೇಕಾದ್ದು ಅನಿವಾರ್ಯವಾಗಿದೆ.
ಚುನಾವಣೆಗಳನ್ನು ನಡೆಸುವಿಕೆ, ಮತಗಟ್ಟೆಗಳಲ್ಲಿ ಸುರಕ್ಷತೆ ಯನ್ನು ಖಾತ್ರಿಪಡಿಸುವಿಕೆ, ಭದ್ರತಾ ಪಡೆಗಳನ್ನು ನಿಯೋಜಿಸುವಿಕೆ ಇವೆಲ್ಲದಕ್ಕೂ ಭಾರಿ ಪ್ರಮಾಣದಲ್ಲಿ ಹಣ ಖರ್ಚಾಗು ವುದನ್ನು ಬಿಡಿಸಿ ಹೇಳಬೇಕಿಲ್ಲ. ಭಾರಿ ಹಣದ ವೆಚ್ಚವನ್ನೂ ಮೀರಿದ ಮತ್ತೊಂದು ಸವಾಲಿದೆ. ಅದೆಂದರೆ, ಚುನಾವಣಾ ಸಿಬ್ಬಂದಿ/ಅಧಿಕಾರಿಗಳ ಮತ್ತು ಸರಕು-ಸಾಮಗ್ರಿಗಳ ಸಾಗಣಾ ಹೊಣೆಗಾರಿಕೆ. ಇದರಿಂದ ಮಾನವ ಸಂಪನ್ಮೂಲದ ಮೇಲಾಗುವ ಹೊರೆ ಅಂತಿಂಥದ್ದಲ್ಲ.
ಪದೇ ಪದೆ ಚುನಾವಣೆಗಳನ್ನು ನಡೆಸುವುದರಿಂದಾಗಿ ಪೊಲೀಸ್ ಸಿಬ್ಬಂದಿ, ವಿವಿಧ ಇಲಾಖೆಗಳ ಆಡಳಿತಾತ್ಮಕ ಸಿಬ್ಬಂದಿ ಮಾತ್ರ ವಲ್ಲದೆ, ಚುನಾವಣಾ ಕರ್ತವ್ಯಗಳಿಗೆಂದು ಹೆಚ್ಚಾಗಿ ನಿಯೋಜಿಸಲಾಗುವ ಶಿಕ್ಷಕರು ಮತ್ತು ಉಪನ್ಯಾಸಕರಂಥ ಮಾನವ ಸಂಪನ್ಮೂಲದ ಅಗಾಧ ಅಗತ್ಯ ವನ್ನು ಭರಿಸಬೇಕಾಗಿ ಬರುತ್ತದೆ. ಈ ಪರಿಪಾಠದಿಂದಾಗಿ ವಾಡಿಕೆಯ ಸರಕಾರಿ ಕೆಲಸ-ಕಾರ್ಯಗಳಿಗೆ ಅಡಚಣೆ ಒದಗುವುದರ ಜತೆಗೆ, ಅಭಿವೃದ್ಧಿ ಯೋಜನೆಗಳಿಗೂ ಅಡ್ಡಿಯಾಗುತ್ತದೆ.
ಮಾತ್ರವಲ್ಲ, ಇದು ಶಾಲಾ-ಕಾಲೇಜುಗಳ ಶೈಕ್ಷಣಿಕ ಕಾರ್ಯಸೂಚಿಯನ್ನೂ ಕಡಿತಗೊಳಿಸುತ್ತದೆ. ಮತ್ತೆ ಮತ್ತೆ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವುದರಿಂದ ಆಗುವ ಹಣಕಾಸಿನ ಹೊರೆಯು ಅಗಾಧವಾಗೇ ಇರುತ್ತದೆ. ರಾಜ್ಯವಿಧಾನಸಭೆ ಚುನಾ ವಣೆಗಳು, ಉಪಚುನಾವಣೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತಿ ಚುನಾವಣೆಗಳಿಗೆ ಆಗುವ ವೆಚ್ಚಗಳನ್ನೂ ಇದಕ್ಕೆ ಸೇರಿಸಿದರೆ ಹೊಮ್ಮುವ ವಾರ್ಷಿಕ ಚುನಾವಣಾ ವೆಚ್ಚವು ಬ್ರಹ್ಮಾಂಡದ ರೂಪವನ್ನು ತಳೆಯುತ್ತದೆ ಎಂಬುದು ಕಹಿವಾಸ್ತವ.
ಪದೇ ಪದೇ ನಡೆಯುವ ಚುನಾವಣೆಗಳು ರಾಜಕೀಯ ಧ್ರುವೀಕರಣವನ್ನು ಹುಟ್ಟುಹಾಕುತ್ತವೆ ಎನ್ನಬೇಕು; ಏಕೆಂದರೆ ಇಂಥ ವೇಳೆ ನಿರಂತರವಾಗಿ ಚುನಾವಣಾ ಚಿತ್ತಸ್ಥಿತಿಯಲ್ಲೇ ತೇಲುವ ರಾಜಕಾರಣಿಗಳು, ದೀರ್ಘಕಾಲಿಕ ನೀತಿಗಳನ್ನು ಯೋಜಿಸುವುದಕ್ಕಿಂತ ಅಲ್ಪಕಾಲಿಕ ಪ್ರಯೋಜನಗಳ ಮೇಲೆಯೇ ಗಮನವನ್ನು ಕೇಂದ್ರೀಕರಿಸುತ್ತಾರೆ. ಇದರಿಂದಾಗಿ ಒಂದೊಂದೂ ರಾಜ್ಯದ ಸರಕಾರಿ ಕಾರ್ಯನೀತಿಗೆ ಪಾರ್ಶ್ವ ವಾಯು ಬಡಿದಂತಾಗಿ, ಆದ್ಯತೆ ನೀಡಬೇಕಿರುವ ಮತ್ತು ಕ್ಷಿಪ್ರ ಪರಿಹಾರದ ಅಗತ್ಯವಿರುವ ಸಮಸ್ಯೆಗಳ ಕಡೆಗೆ ಸರಕಾರಗಳು ಪರಿಣಾಮಕಾರಿಯಾಗಿ ಗಮನಹರಿಸದಂತಾಗುವುದನ್ನು ನಾವು ಅನೇಕ ಸಂದರ್ಭಗಳಲ್ಲಿ ಕಂಡಿದ್ದೇವೆ.
ಆದ್ದರಿಂದ, ‘ಒಂದು ರಾಷ್ಟ್ರ, ಒಂದು ಚುನಾವಣೆ’ಯ ಪರಿಕಲ್ಪನೆಯು ಈ ಎಲ್ಲ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರವನ್ನು ಒದಗಿಸುತ್ತದೆ ಎಂದರೆ ಅತಿಶಯೋಕ್ತಿ ಆಗಲಾರದು. ಈ ವ್ಯವಸ್ಥೆಯಡಿ, ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಚುನಾವಣೆಗಳೆರಡೂ ಏಕಕಾಲದಲ್ಲಿ ಘಟಿಸುತ್ತವೆ; ಮಾತ್ರವಲ್ಲ, ಪಂಚಾಯತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳೂ ಏಕಕಾಲಿಕವಾಗಿ ಜರುಗುತ್ತವೆ. ಇದರಿಂದಾಗಿ ಲೋಕಸಭಾ ಚುನಾವಣೆಗಳೊಂದಿಗೆ ಪ್ರತಿ ಐದು ವರ್ಷಕ್ಕೊಮ್ಮೆ ಮಾತ್ರವೇ ದೇಶವು ಮಿಕ್ಕ ಚುನಾವಣೆಗಳನ್ನೂ ನಡೆಸಲು ಅನುವಾದಂತಾಗುತ್ತದೆ. ಈ ಪರಿಪಾಠದ ಅನುಸರಣೆಯಿಂದ ಉಳಿಯುವ ಹಣವನ್ನು ಆರೋಗ್ಯ ರಕ್ಷಣೆ, ಶಿಕ್ಷಣ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಂಥ ನಿರ್ಣಾಯಕ ವಲಯಗಳಿಗೆ ಹಂಚಲು ಸಾಧ್ಯವಾಗುತ್ತದೆ.
ಚುನಾವಣೆಗಳ ಆವರ್ತನವು ಹೀಗೆ ಗಣನೀಯವಾಗಿ ತಗ್ಗಿದರೆ, ಸರಕಾರಿ ಕೆಲಸ-ಕಾರ್ಯಗಳಿಗೆ ಒದಗುವ ಅಡಚಣೆಯ ಪ್ರಮಾಣವೂ ಕಡಿಮೆಯಾಗುತ್ತದೆ; ತತಲವಾಗಿ, ಅಧಿಕಾರಿಶಾಹಿಗಳು ಮತ್ತು ಚುನಾಯಿತ ಸದಸ್ಯರು ಆಡಳಿತ ನಿರ್ವಹಣೆಯ ಮೇಲೆ ಗಮನವನ್ನು ಕೇಂದ್ರೀಕರಿಸಲು ಅನುವಾದಂತಾಗುತ್ತದೆ. ಈ ಪರಿಪಾಠವು ಅಮೂಲ್ಯವಾದ ಕಾರ್ಯಾವಧಿಯನ್ನು ಉಳಿಸುವುದರಿಂದ, ಉತ್ಪಾದಕತೆ ಹೆಚ್ಚುತ್ತದೆ ಹಾಗೂ ಸಂಪನ್ಮೂಲ ಹಂಚಿಕೆಯೂ, ಯೋಜನೆಯ ಅನುಷ್ಠಾನವೂ ಪರಿಣಾಮಕಾರಿಯಾಗಿ ಸಾಗುತ್ತವೆ.
ಎಲ್ಲ ಕಾರ್ಯಕ್ಷೇತ್ರಗಳಲ್ಲಿ ದಾಪುಗಾಲಿಟ್ಟು ಸಾಧಿಸುವ ಮತ್ತು ವಿಶ್ವದ ಅಗ್ರಗಣ್ಯ ನಾಯಕನಾಗಿ ಹೊರಹೊಮ್ಮಲು ಆಶಿಸುತ್ತಿರುವ ದೇಶವೊಂದಕ್ಕೆ ಇದೊಂದು ಬೃಹತ್ ಸಕಾರಾತ್ಮಕ ಅಂಶವಾಗಿ ಒದಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಏಕಕಾಲಿಕ ಚುನಾವಣೆಗಳನ್ನು ನಡೆಸುವುದರ ಪ್ರಮುಖ ಪ್ರಯೋಜನವೆಂದರೆ, ರಾಜಕೀಯ ಪಕ್ಷಗಳು ಒಟ್ಟಾಗಿ ಕಾರ್ಯನಿರ್ವಹಿಸಲು ಅದು ಉತ್ತೇಜಿಸುತ್ತದೆ. ಮತದಾರರು ರಾಜಕೀಯ ಪಕ್ಷಗಳ ಕಾರ್ಯಕ್ಷಮತೆಯನ್ನು ವ್ಯಾಪಕ ತಳಹದಿಯ ಮೇಲೆ ಮೌಲ್ಯಮಾಪನ ಮಾಡುವುದರಿಂದ, ನಿರ್ಣಾಯಕವೆನಿಸಿರುವ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಚರ್ಚಾವಿಷಯಗಳ/ಸಮಸ್ಯೆಗಳ ಕುರಿತಾಗಿ ಒಂದು ಸಾಮಾನ್ಯ ನಿಲುವು ಹಾಗೂ ಒಮ್ಮತವನ್ನು ಕಂಡುಕೊಳ್ಳುವುದು ಅವಕ್ಕೆ ಅನಿವಾರ್ಯವಾಗುತ್ತದೆ.
ಇದು ನೀತಿ ನಿರೂಪಣೆಯ ವಿಷಯದಲ್ಲಿ ಸಹಯೋಗಕ್ಕೆ ಒತ್ತುನೀಡಬೇಕಾದ ಅಗತ್ಯವನ್ನು ಹುಟ್ಟುಹಾಕಿ, ಚರ್ಚಾವಿಷಯ ಅಥವಾ ಸಮಸ್ಯೆಗಳನ್ನು ಉತ್ತಮವಾದ ರೀತಿಯಲ್ಲಿ ಹಾಗೂ ಸೌಹಾರ್ದಯುತವಾಗಿ ಅರಿಯಲು ಅನುವುಮಾಡಿಕೊಡುತ್ತದೆ.
ಏಕಕಾಲಿಕ ಚುನಾವಣೆಗಿರುವ ಮತ್ತೊಂದು ಮಗ್ಗುಲನ್ನೂ ನಾವು ಅವಲೋಕಿಸಬೇಕು. ಇಂಥ ಪರಿಪಾಠವು ಮತದಾರರ ದಣಿವು/ಆಯಾಸವನ್ನು ತಗ್ಗಿಸುವುದರ ಜತೆಗೆ, ಚುನಾವಣೆಯಲ್ಲಿ ಅವರು ಹೆಚ್ಚು ಸಕ್ರಿಯವಾಗಿ ಮತ್ತು ಉತ್ಸಾಹದಿಂದ ಪಾಲ್ಗೊಳ್ಳುವಂತೆ ಮಾಡುತ್ತದೆ.
ಒಂದೊಮ್ಮೆ ಮತದಾರರು ಒಂದೇ ವರ್ಷದಲ್ಲಿ ಹತ್ತು ಹಲವು ಚುನಾವಣೆಗಳಿಗೆ ಒಡ್ಡಿಕೊಳ್ಳಬೇಕಾಗಿ ಬಂದರೆ, ಮತದಾರರ ದಣಿವಿಗೆ, ಉದಾಸೀನತೆಗೆ ಮತ್ತು ಸಂಭಾವ್ಯ ನಿರ್ಲಿಪ್ತತೆಗೆ ಅದು ಕಾರಣವಾಗುತ್ತದೆ ಎಂಬುದು ಕಟ್ಟಿಟ್ಟಬುತ್ತಿ. ಆದ್ದರಿಂದ, ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಏಕಕಾಲಿಕ ಚುನಾವಣೆಯ ಚರ್ಚಾವಿಷಯಕ್ಕೆ ಒಮ್ಮತದ ಮುದ್ರೆ ಯನ್ನು ಒತ್ತಬೇಕಿರುವುದು ಈ ಕ್ಷಣದ ಅನಿವಾರ್ಯವಾಗಿದೆ.
ಏಕೆಂದರೆ, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎಂಬ ಪರಿಕಲ್ಪನೆಯು, ‘ಸಂಕುಚಿತ ರಾಜಕೀಯ ಪ್ರಯೋಜನಗಳಿಗಿಂತ ರಾಷ್ಟ್ರದ ಹಿತಾಸಕ್ತಿಗಳೇ ಮೇಲುಗೈ ಸಾಧಿಸಬೇಕು’ ಎಂಬ ಆಶಯಕ್ಕೆ ನೀರೆರೆಯುತ್ತದೆ. ಸಾರ್ವತ್ರಿಕ ಒಳಿತಿಗಾಗಿ ಹಾಗೂ ಹೆಚ್ಚು ಸುಸ್ಥಿರ, ದಕ್ಷ, ಪರಿಣಾಮಕಾರಿ ಮತ್ತು ಉತ್ತರದಾಯಿ ಪ್ರಜಾಪ್ರಭುತ್ವವನ್ನು ಕಟ್ಟಿಕೊಡುವ ಸಂಕಲ್ಪದ ನೆರವೇರಿಕೆಯೆಡೆಗೆ ಇದು ರಾಜಕೀಯ ಪಕ್ಷಗಳನ್ನು ಹಾಗೂ ಅವುಗಳ ನಾಯಕರನ್ನು ಪ್ರೋತ್ಸಾಹಿಸುತ್ತದೆ.
ಅಷ್ಟಕ್ಕೂ, ‘ಒಂದು ರಾಷ್ಟ್ರ, ಒಂದು ಚುನಾವಣೆ’ ವಿಷಯದಲ್ಲಿ ಏಕಿಷ್ಟು ಚರ್ಚೆಯಾಗಬೇಕು ಎಂಬುದೇ ನನಗರ್ಥವಾಗುತ್ತಿಲ್ಲ. ಹಾಗೆ ನೋಡಿದರೆ, ನಮ್ಮ ಮೊದಲ ಪ್ರಧಾನಿ ಜವಾಹರಲಾಲ್ ನೆಹರುರ ಅಧಿಕಾರಾವಧಿಯಲ್ಲಿ ೧೯೫೨, ೧೯೫೭ ಮತ್ತು ೧೯೬೨ರ ವರ್ಷಗಳಲ್ಲಿ ಹಾಗೂ ತರುವಾಯ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗಿನ ಅವಧಿಯಲ್ಲಿ ೧೯೬೭ರಲ್ಲಿ ಭಾರತದಲ್ಲಿ ಏಕಕಾಲಿಕ ಚುನಾವಣೆಗಳು ನಡೆದಿದ್ದಿದೆ. ಆದರೆ ೧೯೬೮ ಮತ್ತು ೧೯೬೯ರಲ್ಲಿ ರಾಜ್ಯ ವಿಧಾನ ಸಭೆಗಳನ್ನು ವಜಾಗೊಳಿಸಿದ್ದ ರಿಂದಾಗಿ ಹಾಗೂ ೧೯೭೧ರಲ್ಲಿ ಸಾರ್ವತ್ರಿಕ ಚುನಾವಣೆಯ ಮುಂಬರಿಕೆಯಿಂದಾಗಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ಯ ಈ ಸ್ಥಾಪಿತ ಆವರ್ತನಕ್ಕೆ ತಡೆಯೊದಗಿತು ಎನ್ನಬೇಕು.
ಚುನಾವಣಾ ಆವರ್ತನಕ್ಕೆ ಹೀಗೆ ಅಡ್ಡಿಯುಂಟುಮಾಡಿದ ರಾಜಕೀಯ ಆಯಾಮಗಳ ಗೊಡವೆಗೆ ಹೋಗದೆ ಭಾರತದ ಚುನಾವಣಾ ಆಯೋಗವು ೧೯೮೩ರಲ್ಲಿ ಇಂಥದೊಂದು ಏಕಕಾಲಿಕ ಚುನಾವಣಾ ಪರಿಪಾಠವನ್ನು ಹಮ್ಮಿಕೊಳ್ಳುವುದಕ್ಕೆ ಪ್ರಸ್ತಾಪಿಸಿತ್ತು ಎಂಬುದನ್ನು ನಾವು ಗಮನಿಸಬೇಕು. ಅಷ್ಟೇ ಅಲ್ಲ, ಎರಡು ದಶಕಗಳಿಗೂ ಹಿಂದೆ ೧೯೯೯ರಲ್ಲಿ, ಭಾರತದ
ಕಾನೂನು ಆಯೋಗವು ಈ ಚಿಂತನೆಯನ್ನು ಮತ್ತೊಮ್ಮೆ ಮಂಡಿಸಿದ್ದುಂಟು. ಅಷ್ಟೇಕೆ, ಬಿಜೆಪಿಯು ತನ್ನ ೨೦೦೨ರ ಚುನಾವಣಾ ಪ್ರಣಾಳಿಕೆಯಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಯನ್ನು ಪ್ರಸ್ತಾಪಿಸಿತ್ತು ಹಾಗೂ ಸಂಸದೀಯ ಸ್ಥಾಯಿ ಸಮಿತಿಯು ಇದನ್ನು ಎರಡು ಬಾರಿ (೨೦೧೫ ಮತ್ತು ೨೦೧೮ರಲ್ಲಿ) ಅನುಮೋದಿಸಿತ್ತು ಎಂಬುದನ್ನಿಲ್ಲಿ ಸ್ಮರಿಸಬೇಕು.
೨೦೧೮ರಲ್ಲಿ ನೀತಿ ಆಯೋಗವೂ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ್ದುಂಟು. ಪ್ರಧಾನಿ ನರೇಂದ್ರ ಮೋದಿಯವರು ಈ ಪರಿಕಲ್ಪನೆಯನ್ನು ಒಂದಕ್ಕಿಂತ ಹೆಚ್ಚುಬಾರಿ ಪ್ರಸ್ತಾಪಿಸಿದ್ದಿದೆ. ಈಗ ಈ ಪ್ರಸ್ತಾವದ ಅಧ್ಯಯನಕ್ಕಾಗಿ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದರ ನೇತೃತ್ವದಲ್ಲಿ ಕೇಂದ್ರವು ಸಮಿತಿಯೊಂದನ್ನು ಹುಟ್ಟುಹಾಕಿದೆ. ಐತಿಹಾಸಿಕ ಹಿನ್ನೆಲೆಯತ್ತ ಒಮ್ಮೆ ಸಿಂಹಾವಲೋಕನ ಮಾಡಿದರೆ, ಈ ಪರಿಕಲ್ಪನೆಯು ಇತ್ತೀಚಿನದು ಎಂದೋ ಅಥವಾ ಇದು ಹಿಂದೆಂದೂ ಪ್ರಯತ್ನಿಸದ ಒಂದು ಚುನಾವಣಾ ಪ್ರಯೋಗ ಎಂದೋ ಭಾವಿಸುವುದು ತಪ್ಪು ಎಂಬುದರ ಅರಿವಾಗುತ್ತದೆ. ಆದ್ದರಿಂದ ದೇಶದ ವಿವಿಧ ರಾಜಕೀಯ ಪಕ್ಷಗಳ ನೀತಿ-ನಿರೂಪಕರು ಈ ಪ್ರಸ್ತಾವವನ್ನು ಗಂಭೀರವಾಗಿ ಪರಿಗಣಿಸುವುದರ ಅಗತ್ಯವಿದೆ; ಏಕೆಂದರೆ,
ಇದು ಅತ್ಯಂತ ದಕ್ಷ, ಪರಿಣಾಮಕಾರಿ ಮತ್ತು ಸುಸಂಘಟಿತ ಪ್ರಜಾಪ್ರಭುತ್ವದೆಡೆಗಿನ ಒಂದು ಪ್ರಮುಖ ಹೆಜ್ಜೆಯಾಗಿದೆ.
ಇಂಥ ನಿರ್ಣಾಯಕ ಹೆಜ್ಜೆಗಳನ್ನು ಇರಿಸುವಾಗ, ರಾಜಕೀಯ ಭಿನ್ನಾಭಿಪ್ರಾಯಗಳಿಗಿಂತ ರಾಷ್ಟ್ರೀಯ ಹಿತಾಸಕ್ತಿಯೇ ಮುಖ್ಯವಾಗಬೇಕು.
(ಲೇಖಕರು ಭಾರತದ ಮಾಜಿ ಉಪರಾಷ್ಟ್ರಪತಿ)