Thursday, 12th December 2024

ಕರೋನಾ ಕಾಲದಲ್ಲಿ ಆನ್‌ಲೈನ್‌ ಕಲಿಕೆಯ ಗೋಜಲುಗಳು !

ಅವಲೋಕನ

ಎಲ್‌.ಪಿ.ಕುಲಕರ್ಣಿ

ಇತ್ತೀಚೆಗೆ ಒಂದು ವಿಡಿಯೋ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. 57000 ವೀವ್ಸ್, 5 ಸಾವಿರಕ್ಕೂ ಹೆಚ್ಚು ಲೈಕ್‌ ಗಳು, ಸುಮಾರು 2 ಸಾವಿರಕ್ಕೂ ಹೆಚ್ಚು ಈ ವಿಡಿಯೋ ರೀಟ್ವೀಟ್ ಆಗಿದ್ದು ಕಂಡುಬಂದಿತು.

ಮೊದಲು ಈ ವಿಡಿಯೋವನ್ನು ಪತ್ರಕರ್ತ ಔರಂಗಜೇಬ್ ನಕ್ಶ್ ಬಂದಿ ತಮ್ಮ ಟ್ವಿಟರ್‌ ನಲ್ಲಿ ಹಂಚಿಕೊಂಡಿದ್ದರು 45 ಸೆಕೆಂಡು ಗಳ ಈ ವಿಡಿಯೋದಲ್ಲಿ ಪ್ರಧಾನಿ ಮೋದಿಯವರನ್ನು ಉದ್ದೇಶಿಸಿ ಶಿಕ್ಷಣದ ಕುರಿತು ಮಾತನಾಡಿರುವ ಕಾಶ್ಮೀರದ 6 ವರ್ಷದ ಆ ಪುಟ್ಟ ಬಾಲಕಿ, ‘ಸಲಾಮ್ ವಾಲಿಕೊ, ಮೋದಿ ಸಾಬ್. ನಾನು ಆರು ವರ್ಷದ ಬಾಲಕಿ. ನನಗೆ ಆನ್‌ಲೈನ್‌ನಲ್ಲಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

ಆದರೆ ಸಣ್ಣ ಮಕ್ಕಳಾದ ನಮಗೂ ಹೆಚ್ಚಿನ ಹೋಮ್ ವರ್ಕ್ ಕೊಡುತ್ತಿದ್ದಾರೆ. ಮುಂಜಾನೆ ಹತ್ತು ಗಂಟೆಗೆ ಶುರುವಾದ ಈ ಆನ್ ಲೈನ್ ಕ್ಲಾಸುಗಳು ಮಧ್ಯಾಹ್ನ 2 ಗಂಟೆಯವರೆಗೂ ಇರುತ್ತವೆ. ಮೊದಲು ಇಂಗ್ಲಿಷ್, ಗಣಿತ, ಉರ್ದು, ಇವಿಎಸ್ ನಂತರ
ಕಂಪ್ಯೂಟರ್ ಹೀಗೆ ಬಿಡುವಿಲ್ಲದೇ ತರಗತಿಗಳು ನಡೆಯುತ್ತವೆ. 7-8 ನೇ ತರಗತಿಯ ದೊಡ್ಡವರಿಗೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಭಾಷೆಗಳು ಹೀಗೆ ಎಷ್ಟೊಂದು ವಿಷಯಗಳು! ಆದರೆ, ಚಿಕ್ಕವರಾದ ನಮಗೇಕೆ ಇಷ್ಟೊಂದು ವಿಷಯಗಳು?! ಎಂದು
ಮುದ್ದು ಮುzಗಿ ಮಾತನಾಡಿದೆ.

ಮೊದಲೇ ಕಾನ್ವೆಂಟ್ ಮಾದರಿಯ ಮಕ್ಕಳಿಗೆ ಶಾಲೆಯಲ್ಲಿ ನಿರಂತರ ಅಭ್ಯಾಸವಾದರೆ, ಮನೆಯಲ್ಲೂ ಸಹ ಹೋಮ್ ವರ್ಕ್ ನೆವದಲ್ಲಿ ಯಾವಾಗಲೂ ಓದು, ಬರೆಯುವುದು ಬೆಟ್ಟದಷ್ಟಿರುತ್ತದೆ. ನಂತರ ಕಂಪ್ಯೂಟರ್ ಕ್ಲಾಸ್, ಹೀಗಾದರೆ ಅವರು ಹೊರಗೆ ಹೋಗಿ ಸ್ವಚ್ಛಂದ ವಾತಾವರಣದಲ್ಲಿ ಆಡುವುದಾದರೂ ಯಾವಾಗ? ವೀಕೆಂಡಿಗೊಮ್ಮೆ ಅವರು ಸಮೀಪದ ಮೈದಾನದಲ್ಲಿ,
ಅದೂ ಪಾಲಕರ ಬಂದೋಬಸ್ತಿನಲ್ಲಿ ಆಡಿದ್ದ ನೆನಪು ಅಷ್ಟೆ. ಹೀಗಾಗಿ ಆ ಪಟ್ಟಣದ ಮಕ್ಕಳು ಬಾಲ್ಯದಿಂದ ವಂಚಿತರಾಗಿದ್ದರು. ಈಗ ಕರೋನಾ ಆ ಮಕ್ಕಳ ಬಾಲ್ಯವನ್ನು ಮತ್ತಷ್ಟು ಕಸಿದುಕೊಂಡು ಬಿಟ್ಟಿದೆ.

ಪ್ಯಾಟಿಯ ಮಕ್ಕಳನ್ನು ಹೋಲಿಸಿದರೆ ನಮ್ಮ ಹಳ್ಳಿಯ ಮಕ್ಕಳು ಬಾಲ್ಯದಿಂದ ವಂಚಿರಾಗಿಲ್ಲ ಅಂತಾನೇ ಹೇಳಬಹುದು. ಇವರಿಗೆ ಅಷ್ಟೊಂದು ಹೋಮ್ ವರ್ಕ್ ಇಲ್ಲ. ಶಾಲೆ ಬಿಟ್ಟೊಡನೆ ಅವರು ಸ್ವಚ್ಛಂದ ಪರಿಸರದಲ್ಲಿ ಆಡುವುದರಿಂದ ಅವರು ದೈಹಿಕವಾಗಿ
ಸದೃಢರು. ಆದರೆ ಈಗ ಹಳ್ಳಿ – ಹಳ್ಳಿಗೂ ಕರೋನಾ ಸೋಂಕು ಹಬ್ಬುತ್ತಿರುವುದರಿಂದ ಹಳ್ಳಿಯ ಮಕ್ಕಳ ಬಾಲ್ಯವನ್ನೂ ಸಹ ಈ ಕ್ರೂರಿ ಕಸಿದುಕೊಂಡು ಬಿಟ್ಟಿದೆ.

ಅಕ್ಟೋಬರ್ – ನವೆಂಬರ್‌ನಲ್ಲಿ ಬರುವ ಕರೋನಾದ ಮೂರನೆ ಅಲೆ ಮಕ್ಕಳನ್ನು ಬಲುಬೇಗನೆ ಬಲಿ ತೆಗೆದುಕೊಳ್ಳುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಏಕೆಂದರೆ, ಬಹುಪಾಲು ಕರೋನಾ ಮುಕ್ತವಾಗಿದ್ದ ಸ್ವಚ್ಛ ಹಾಗೂ ಸುಂದರ ನಗರ ಎಂದು ಹೆಸರಾಗಿದ್ದ ಸಿಂಗಾಪುರದಲ್ಲಿ ಈಗಾಗಲೇ ಶಾಲೆಗಳು ಪ್ರಾರಂಭವಾಗಿದ್ದವು. ದಿನವೂ ಶಾಲೆಗೆ ಹೋಗುತ್ತಾ, ಕಲಿಯುತ್ತ –
ನಲಿಯುತ್ತಲಿದ್ದ ಆ ಪುಟ್ಟ ಕಂದಮ್ಮಗಳಿಗೆ ಈಗ ಕರೋನಾದ ಎರಡನೇ ಮ್ಯೂಟಂಟ್ ಒಕ್ಕರಿಸಿಬಿಟ್ಟಿದೆ.

ಕೆಲವು ಮಕ್ಕಳಂತೂ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರಂತೆ. ಹೀಗಾಗಿ ಅಲ್ಲಿನ ಸರಕಾರ ಇದೇ ಮೇ ತಿಂಗಳ  ಕೊನೆಯ ವಾರದಿಂದ ಮತ್ತೆ ಶಾಲೆಗಳನ್ನು ಬಂದ್ ಮಾಡಿಬಿಟ್ಟಿದೆ. ‘ಜೂನ್ ತಿಂಗಳ ಕೊನೆಯಲ್ಲಿ ಕರೋನಾ ಎರಡನೇ ಅಲೆ ನಿಯಂತ್ರಣಕ್ಕೆ
ಬರಬಹುದು. ನಂತರ ಎರಡರಿಂದ ಮೂರು ತಿಂಗಳು ಸೋಂಕು ಕಾಣದೆ ಹೋಗಬಹುದು. ನಂತರ ಮೂರನೇ ಅಲೆ ಆರಂಭವಾಗ ಬಹುದು. ಅಷ್ಟೊತ್ತಿನ ಒಳಗಾಗಲೇ ಯಾರು ಲಸಿಕೆ ಪಡೆದಿರುವುದಿಲ್ಲವೋ ಅವರಲ್ಲಿ ಸೋಂಕಿನ ಲಕ್ಷಣ ಕಂಡುಬರುವುದು. ವಯಸ್ಕರನ್ನು ಒಳಗೊಂಡಂತೆ ಮಕ್ಕಳಲ್ಲೂ ಈ ಸೋಂಕು ಗಣನೀಯವಾಗಿ ಹರಡಬಹುದು.

ಎಂಬುದಾಗಿ ಸೋಂಕುಶಾಸ್ತ್ರಜ್ಞ ಡಾ.ವಿ.ರವಿ ಅವರು ಹೇಳಿದ್ದಾರೆ. ಸೆರೊ ಸಮೀಕ್ಷೆಯ ಪ್ರಕಾರ ದೇಶದಲ್ಲಿರುವ ಮಕ್ಕಳ ಪೈಕಿ ಶೇ. 25ರಷ್ಟು ಮಕ್ಕಳು ಕಳೆದ 17 ತಿಂಗಳಲ್ಲಿ ಸೋಂಕಿಗೆ ತೆರೆದುಕೊಂಡಿದ್ದಾರೆ. ಸುಮಾರು ಶೇ.60ರಷ್ಟು ಮಕ್ಕಳು ಸೋಂಕಿಗೆ ತುತ್ತಾ ಗುವ ಅಪಾಯವಿದೆ. ಸಂಖ್ಯೆಯಲ್ಲಿ ಹೇಳುವುದಾದರೆ ಇದು 18 ಕೋಟಿ. ಶೇ. 20 ರಷ್ಟು ಮಕ್ಕಳು ಸೋಂಕಿಗೆ ಒಳಗಾಗ ಬಹುದು ಎಂದಿಟ್ಟುಕೊಂಡರೂ ಆ ಸಂಖ್ಯೆಯು 3.6 ಕೋಟಿ ಹೆಚ್ಚಿನ ಮಕ್ಕಳಲ್ಲಿ ಲಕ್ಷಣಗಳು ಸೌಮ್ಯವಾಗಿಯೇ ಇರಬಹುದು. ಆದರೆ, ಶೇಕಡಾ ಒಂದರಷ್ಟು ಮಕ್ಕಳಲ್ಲಿ ಗಂಭೀರ ಸಮಸ್ಯೆ ಉಂಟಾದರೂ 3.6 ಲಕ್ಷ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸ ಬೇಕಾಗುತ್ತದೆ.

ಅಲ್ಲದೇ ಈ ಮೂರನೇ ಅಲೆಯಲ್ಲಿ ಈ ಎರಡನೇ ಅಲೆಯಲ್ಲಿನ ಸೋಂಕಿತರ ಪ್ರಮಾಣಕ್ಕಿಂತಲೂ ಕೊಂಚ ಹೆಚ್ಚಲೂಬಹುದು. ಈ ಕುರಿತು ನಾವು ಈಗಿನಿಂದಲೇ ಎಚ್ಚರಿಕೆಯಿಂದಿರುವುದು ಒಳಿತು ಎಂದು ಡಾ.ವಿ.ರವಿ ಅವರು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.  ಮನೆಯಲ್ಲಿನ ಹಿರಿಯರು ಮೊದಲು, ಸರಿಯಾಗಿ ಮಾಸ್ಕ್ ಧರಿಸುವುದು, ಸಂದರ್ಭಕ್ಕೆ ತಕ್ಕಂತೆ ಹ್ಯಾಂಡ್
ಸ್ಯಾನಿಟೈಸರ್ ಬಳಸುವುದು, ವೈಯಕ್ತಿಕ ಶುಚಿತ್ವದ ಜತೆಗೆ ಸುತ್ತಲ ವಾತಾವರಣದ ಸ್ವಚ್ಛತೆಯ ಬಗ್ಗೆ ಎಚ್ಚರಿಕೆಯಿಂದಿದ್ದರೆ ಮಕ್ಕಳೂ ಸಹ ಅವರನ್ನು ಅನುಕರಿಸುವರು. ಇದರಿಂದ ಮಕ್ಕಳು ಸೋಂಕಿಗೆ ತುತ್ತಾಗುವುದನ್ನು ತಡೆಗಟ್ಟಬಹುದು.

ಸದ್ಯ, ಮನೆಯೇ ಮೊದಲ ಪಾಠ ಶಾಲೆ ಎನ್ನುವ ಹಾಗಾಗಿದೆ. ಆ ಕಾರಣದಿಂದ ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಈಗ ಸಂಪೂರ್ಣವಾಗಿ ಪಾಲಕರ ಕೈಯಲ್ಲಿದೆ. ಎಷ್ಟು ದಿನ ಎಂದು ಆ ಮಕ್ಕಳು ಮೊಬೈಲ್ ನೋಡುತ್ತಾ, ಟಿ.ವಿ. ವೀಕ್ಷಿಸುತ್ತಾ ಮನೆಯ ಕುಳಿತಿರಲು ಸಾಧ್ಯ? ಬೋರಾಗುತ್ತದೆ. ಹೊರಗೆ ಸುತ್ತಾಡಲು ಹೋದರೆ ಕರೋನಾದ ಕಾಟ. ಹೀಗಾಗಿ ಮಕ್ಕಳನ್ನು ಮುಂಜಾನೆ ಮತ್ತು ಸಾಯಂಕಾಲ ಮನೆಯ ಟೆರೇಸ್ ಮೇಲೆ ಕರೆದುಕೊಂಡು ಹೋಗಿ ಸಣ್ಣಪುಟ್ಟ ವ್ಯಾಯಾಮ, ಯೋಗ, ಧ್ಯಾನ ಮಾಡಿಸು ವುದು ಬಹಳ ಮುಖ್ಯ. ಇವುಗಳ ಜತೆಗೆ ಅವರ ತಲೆಯಿಂದ ಕರೋನಾ ಪ್ಯಾನಿಕನ್ನು ತೊಡೆದು ಹಾಕಲು ಪಾಲಕರು ಅರ್ಥಗರ್ಭಿತ ಕಥೆಗಳನ್ನು ಹೇಳುತ್ತಾ ಮತ್ತೊಂದು ಪರಿಸರಕ್ಕೆ ಅವರನ್ನು ಕರೆದೊಯ್ಯುವುದು ಈಗಿರುವ ಗುರುತರ ಜವಾಬ್ದಾರಿಗಳಂದು.

ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ, ಶಾಲೆ, ಶಿಕ್ಷಕರು ಹೆಚ್ಚೆಂದರೆ ಮಕ್ಕಳು ಇರುವ ಪಠ್ಯಪುಸ್ತಕಗಳನ್ನು ಒದಗಿಸಬಹುದು. ಜತೆಗೆ ಕೆಲವು ಕಲಿಕಾ ಸಾಮಗ್ರಿಗಳನ್ನು ಒದಗಿಸಬಹುದು. ಅಲ್ಲದೆ ಪಾಲಕರ ಮೊಬೈಲಿಗೆ ವಾಟ್ಸಾಪ್ ಮೂಲಕ ಕೆಲವು ಕಲಿಕಾ ವಿಡಿಯೋಗಳನ್ನು ಶೇರ್ ಮಾಡಬಹುದು. ಆಗಾಗ ಮಕ್ಕಳಿಗೆ ಕರೆಮಾಡಿ ಫೋನ್‌ನ ಅವರ ಕಲಿಕಾ ಪ್ರಗತಿಯನ್ನು ವಿಚಾರಿಸಿ, ಸೂಕ್ತ ಸಲಹೆಗಳನ್ನು ನೀಡಬಹುದು.

ಕೆಲವು ಬಡ ಮಕ್ಕಳ ಪಾಲಕರಲ್ಲಿ ಫೋನ್ ಇರುವುದಿಲ್ಲ. ಅಂಥವರಿಗೆ ಶಿಕ್ಷಕರು ಮನೆಭೇಟಿ ಮಾಡುತ್ತಾ, ಕೆಲವು ಕಲಿಕಾ ಸಾಮಗ್ರಿ ಗಳನ್ನು ಕೊಟ್ಟು, ಕೊಂಚ ವಿಷಯ ಹೇಳಿ ಬರಬಹುದು. ಆದರೆ ತರಗತಿ ಕಲಿಕಾ ವಾತಾವರಣ ಸೃಷ್ಟಿಯಾಗುವುದು ಸದ್ಯಕ್ಕಂತೂ ಅಸಾಧ್ಯದ ಮಾತಾಗಿದೆ. ಹತ್ತು ಮತ್ತು ಹನ್ನೆರಡನೇ ತರಗತಿ ಮಕ್ಕಳಿಗೆ ಸಂಪೂರ್ಣ ಪಠ್ಯವಿಷಯಗಳನ್ನು ಆನ್ ಲೈನ್ ಮೂಲಕ, ಇಲ್ಲವೆ ಕೊಂಚ ಸೋಂಕು ಕಡಿಮೆಯಾದರೆ ಸೂಕ್ತ ಸಾಮಾಜಿಕ ಅಂತರ ಕಾಪಾಡಿಕೊಂಡು ದಿನದ ಕೆಲವು ಗಂಟೆಗಳವರೆಗೆ ತರಗತಿ ನಡೆಸಬಹುದು. ಆದರೆ ಒಂದರಿಂದ ಒಂಭತ್ತನೆ ತರಗತಿ ಮಕ್ಕಳಿಗೆ ಈ ಪಾಠ ಪ್ರವಚನ ಮಾಡುವುದೇ ಈಗ ಶಿಕ್ಷಕರ ಮುಂದಿರುವ ದೊಡ್ಡ ಸವಾಲು.

ಶಿಕ್ಷಣದ ಮೂಲ ಗುರಿ ಕೇವಲ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸುವಂತೆ ಮಾಡುವುದಲ್ಲ. ಬದಲಿಗೆ ಮಗುವಿನಲ್ಲಿ ಸ್ವತಂತ್ರ ಆಲೋಚನಾ ಸಾಮರ್ಥ್ಯವನ್ನು ಬೆಳೆಸುವುದು. ಅಲ್ಲದೇ ಈ 1 ರಿಂದ 9ನೇ ತರಗತಿ ಮಕ್ಕಳಿಗೆ ಈ ಕರೋನಾ ಸಂದಿಗ್ಧ ಪರಿಸ್ಥಿತಿ ಯಲ್ಲಿ ಎಲ್ಲ ಪಠ್ಯವಿಷಯಗಳನ್ನು ಬೋಧಿಸುವುದು ಅಸಾಧ್ಯದ ಮಾತು. ಹೀಗಾಗಿ ನಮ್ಮ ಶಿಕ್ಷಣದ ಮೂಲ ಆಶಯ ‘ಸ್ಪಷ್ಟ ಓದು, ಶುದ್ಧ ಬರಹ’. ಈ ಸಂದರ್ಭದಲ್ಲಿ ಇಷ್ಟನ್ನು ಕಾರ್ಯಗತಗೊಳಿಸಿದರೆ ಸಾಕು. ಮಕ್ಕಳಿಗೆ ದಿನಂಪ್ರತಿ ಕನ್ನಡ, ಇಂಗ್ಲಿಷ್, ಹಿಂದಿ ಭಾಷಾವಿಷಯಗಳ ಪಠ್ಯದ ಬದಲಾಗಿ ಸ್ಪಷ್ಟವಾಗಿ ಓದುವುದು ಮತ್ತು ಬರೆಯುವುದನ್ನು ರೂಢಿ ಮಾಡಿಸಿದರೆ ಸಾಕು.

ಇದರ ಜತೆಗೆ ಗಣಿತ ಜ್ಞಾನ ಬಹಳ ಮುಖ್ಯ. ಹೀಗಾಗಿ ಸಂಖ್ಯಾ ಜ್ಞಾನ, ಗಣಿತದ ಮೂಲ ಕ್ರಿಯೆಗಳು, ಕೆಲವು ದೈನಂದಿನ ಸರಳ ಸಮಸ್ಯೆಗಳನ್ನು ತಿಳಿಸಿಕೊಡುವುದು ಬಹಳ ಮುಖ್ಯ. ರೇಡಿಯೋ / ಟಿ.ವಿ ಪಾಠಗಳನ್ನು ಆಲಿಸುವಂತೆ ಮಕ್ಕಳಿಗೆ ಸಲಹೆ
ಕೊಡಬಹುದು. ಆದರೆ ಇವುಗಳಿಂದ ನೈಜ ತರಗತಿ ವಾತಾವರಣದ ಸೃಷ್ಟಿ ಸಾಧ್ಯವಿಲ್ಲ. ಬರುವ ಜೂನ್ ಹದಿನೈದರಿಂದ ವಾರದಲ್ಲಿ ಎರಡರಿಂದ ಮೂರು ದಿನ ಮಕ್ಕಳ ಮನೆಗೆ ಭೇಟಿ ಕೊಡುವ ಮೂಲಕ ಮಕ್ಕಳಿಗೆ ಪಾಠ ಮಾಡುತ್ತ, ಶಿಕ್ಷಕರು ಮುಂಬರುವ ಶೈಕ್ಷಣಿಕ ವರ್ಷವನ್ನು ಯಶಸ್ವಿಗೊಳಿಸಬಹುದು.

ಕರ್ನಾಟಕದಲ್ಲಿ ಸದ್ಯ 44 ಸಾವಿರಕ್ಕೂ ಹೆಚ್ಚು ಮತ್ತು 5 ಸಾವಿರಕ್ಕೂ ಹೆಚ್ಚು ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿವೆ. 2019-20ನೇ ಸಾಲಿನಲ್ಲಿ ಈ ಸರಕಾರಿ ಶಾಲೆಗಳಲ್ಲಿ ಏನಿಲ್ಲವೆಂದರೂ 43 ಲಕ್ಷ ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದರು ಎಂದು ಒಂದು ವರದಿ ಹೇಳುತ್ತದೆ. ಇದು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕೊಂಚ ಹೆಚ್ಚಾಗಿ 44 ಲಕ್ಷ ಅಂತಾ ಇಟ್ಟುಕೊಳ್ಳೋಣ. ಪ್ರೈವೇಟ್
ಸ್ಕೂಲುಗಳಲ್ಲಿ ಸೇರಿದ ಮಕ್ಕಳ ಪಾಲಕರು ಸ್ವಲ್ಪ ಹಣವಂತರೂ ಆಗಿರುತ್ತಾರೆ. ಮೇಲಾಗಿ ಕನಿಷ್ಠ ಒಂದು ಮೊಬೈಲ್ ಫೋನ್‌ ನ್ನಾದರೂ ಹೊಂದಿರುತ್ತಾರೆ.

ಹೀಗಿರುವಾಗ ಆ ಮಕ್ಕಳ ಆನ್ ಲೈನ್ ಕಲಿಕೆ ಸುಗಮವಾಗುತ್ತದೆ. ಆದರೆ ಬಹುಪಾಲು ಬಡ ಕೂಲಿ ಕಾರ್ಮಿಕರು, ನಿರ್ಗತಿಕರಿಂದ ಕೂಡಿರುವ ನಮ್ಮ ಸರಕಾರಿ ಶಾಲಾ ಮಕ್ಕಳ ಗತಿ ಏನು? ಅವರಿಗೆ ಒಂದು ಹೊತ್ತಿನ ಊಟಕ್ಕೆ ಗತಿ ಇರುವುದಿಲ್ಲ. ಅಂಥದ್ದರಲ್ಲಿ
ಮೊಬೈಲ್ ಫೋನು, ಅದಕ್ಕೆ ಕರೆನ್ಸಿ ಎಲ್ಲಿಂದ ಹಾಕಿಸಬೇಕು? ಇದನ್ನು ಮನಗಂಡು ಮಾನ್ಯ ಶಿಕ್ಷಣ ಸಚಿವರು ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಈ ಎಲ್ಲಾ ಬಡ ಮಕ್ಕಳಿಗೆ ಕಲಿಯಲು ಅನುಕೂಲವಾಗುವಂತೆ ಸ್ಮಾರ್ಟ್ ಫೋನ್, ಮೊಬೈಲ್ ಫೋನ್ ಗಳನ್ನು ಉಚಿತವಾಗಿ ನೀಡಲು ಆಲೋಚಿಸುತ್ತಿರುವುದು ಬಹಳ ಉತ್ತಮ ಕೆಲಸ.

ಒಂದು ಮೊಬೈಲ್ ಫೋನಿಗೆ ಏನಿಲ್ಲವೆಂದರೂ ಎಂಟರಿಂದ ಹತ್ತು ಸಾವಿರ ಖರ್ಚಾಗುತ್ತದೆ. ಕೇವಲ ಎಂಟೇ ಸಾವಿರ ರುಪಾಯಿ
ಎಂದು ತೆಗೆದುಕೊಂಡರೂ, ಆ 44 ಲಕ್ಷ ಮಕ್ಕಳಿಗೆ 35 ಬಿಲಿಯನ್ ರುಪಾಯಿ ಖರ್ಚಾಗುತ್ತದೆ! ಹೊಸ ಬೈಲ್ ಕೊಂಡರೆ ಇಷ್ಟು ಬೆಲೆಯಾಗುತ್ತದೆ ಇನ್ನು ಸೆಕೆಂಡ್ ಹ್ಯಾಂಡ್ ಫೋನ್ ಕೊಡಿಸುತ್ತಾರೆಂದರೆ, ಈ ಮೇಲಿನ ಬೆಲೆಯ ಅರ್ಧದಷ್ಟು ಅಂದರೆ 17
ಬಿಲಿಯನ್ ರು.ಗಳಾಗುತ್ತದೆ. ಕರೋನಾದಿಂದ ತತ್ತರಿಸಿ ಹೋಗಿ ತೀವ್ರತರದ ಆರ್ಥಿಕ ಸಂಕಷ್ಟದಲ್ಲಿರುವ ಸರಕಾರಕ್ಕೆ ಇದು ಹೊರೆಯಾಗಬಹುದು. ಒಂದು ವೇಳೆ ಇನೋಸಿಸ್, ವಿಪ್ರೋ, ಮೈಕ್ರೋಸಾಫ್ಟ್ ನಂಥ ದೈತ್ಯ ಐಟಿ ಕಂಪನಿಗಳು ಮಕ್ಕಳಿಗೆ ಉಚಿತವಾಗಿ ಮೊಬೈಲ್ ಕೊಡಿಸುತ್ತೇವೆ ಎಂದು ಮುಂದೆ ಬಂದರೆ ಶಿಕ್ಷಣ ಸಚಿವರ ಈ ಯೋಜನೆ ಕಾರ್ಯಸಾಧುವಾದರೂ ಆದೀತು.

ರಾಜ್ಯದಲ್ಲಿ 41ಕ್ಕೂ ಹೆಚ್ಚು ರೇಡಿಯೋ ಕೇಂದ್ರಗಳಿವೆ. ಇಲ್ಲಿ, ಪ್ರತಿ ದಿನದ ನಾಲ್ಕೈದು ಗಂಟೆ ಕೇವಲ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಕಾರ್ಯಕ್ರಮ ಗಳನ್ನು ಬಿತ್ತರಿಸುವ ಯೋಜನೆಯನ್ನು ಹಾಕಿಕೊಳ್ಳ ಬಹುದು. ಒಂದು ರೇಡಿಯೋಗೆ ಏನಿಲ್ಲವೆಂದರೂ 300 ರುಪಾಯಿ ಬೆಲೆ ಎಂದು ತೆಗೆದುಕೊಂಡರೆ, 44 ಲಕ್ಷ ಮಕ್ಕಳಿಗೆ ತಲಾ ಒಂದು ರೇಡಿಯೋ ಅಂದರೆ ಸುಮಾರು 1 ಬಿಲಿಯನ್ ರು.ವೆಚ್ಚವಾಗುತ್ತದೆ.

ಹೀಗೆ ರೇಡಿಯೋ ಮೂಲಕವೂ ಈ ಮಕ್ಕಳಿಗೆ ಕರೋನಾದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪಾಠಪ್ರವಚನಗಳನ್ನು ಮಾಡಬಹುದು! ಇನ್ನು ದೂರದರ್ಶನದ ಮೂಲಕ ಅಂದರೆ, 49ಕ್ಕೂ ಹೆಚ್ಚು ಕನ್ನಡ ದೂರದರ್ಶನ ಚಾನಲ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ ಕಡ್ಡಾಯವಾಗಿ ದಿನದ ನಾಲ್ಕೈದು ಗಂಟೆಗಳನ್ನು ಕೇವಲ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಿಡುವಂತೆ ಸರಕಾರ ಆದೇಶ ಮಾಡಿ ಕರೋನಾ ಕಾಲದಲ್ಲಿ ಮಕ್ಕಳ ಕಲಿಕೆಗೆ ಮತ್ತೊಂದು ಪ್ಲಾಟ್ ಫಾರ್ಮ್‌ನ್ನು ಒದಗಿಸಿಕೊಡಬಹುದು.

ಇದು ಕೇವಲ ನನ್ನ ವೈಯಕ್ತಿಕ ಅಭಿಪ್ರಾಯವಷ್ಟೆ. ಶಿಕ್ಷಣ ಇಲಾಖೆಯಲ್ಲಿರುವ ಕೆಲವು ನುರಿತ ತಜ್ಞರು, ಹಿರಿಯ ಶಿಕ್ಷಣ ಪ್ರೇಮಿ ಗಳು, ಅಧಿಕಾರಿ ಗಳನ್ನೊಳಗೊಂಡ ಒಂದು ಸುಸಜ್ಜಿತ ಮಾರ್ಗದರ್ಶಿ ತಂಡವು ಈಗಾಗಲೇ ರಾಜ್ಯದಲ್ಲಿ ಬಹಳ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ಅವರ ನಿರ್ಧಾರವೇ ಅಂತಿಮ.