Saturday, 14th December 2024

Lokesh Kayarga Column: ವ್ಯವಸ್ಥೆ ಆಫ್‌’ಲೈನ್‌, ವಂಚನೆ ಆನ್’ಲೈನ್

ಲೋಕಮತ

ಲೋಕೇಶ್‌ ಕಾಯರ್ಗ

ಸಾವಿರಾರು ಕೋಟಿ ರು. ಹಣ, ನೂರಾರು ಜೀವಹರಣಗಳಿಗೆ ಕಾರಣವಾದ ಸೈಬರ್ ವಂಚನೆಯನ್ನು ದೇಶದ ವಿರುದ್ಧ ಸಾರಿದ ಸಮರವೆಂದೇ ಪರಿಗಣಿಸಬೇಕು.

ನಮ್ಮ ರಾಜ್ಯದ ಈ ವರ್ಷದ ಅತಿ ದೊಡ್ಡ ಹಗರಣ ಯಾವುದೆಂದು ಕೇಳಿದರೆ ಹಿಂದಿನ ಸರಕಾರದ್ದೇ, ಈಗಿನ ಸರಕಾರದ್ದೇ ಎಂದು ನೀವು ಮರು ಪ್ರಶ್ನಿಸಬಹುದು ! ನಾನು ಹೇಳುತ್ತಿರುವ ಈ ಹಗರಣದಲ್ಲಿ ಲೂಟಿಯಾಗಿರು ವುದು/ಆಗುತ್ತಿರುವುದು ಸರಕಾರದ ದುಡ್ಡಲ್ಲ.

ನಮ್ಮ ,ನಿಮ್ಮ ಖಾತೆಯಲ್ಲಿ ಕಷ್ಟ ಪಟ್ಟು ದುಡಿದು ಸಂಪಾದಿಸಿದ ಹಣ. ೨೦೨೪ರ ಜನವರಿಯಿಂದ ಏಪ್ರಿಲ್ ವರೆಗೆ ದೇಶದಗಿರುವ ಆನ್‌ಲೈನ್ ವಂಚನೆಗಳ ಬಗ್ಗೆ ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (ಐಸಿಸಿಸಿಸಿ) ವರದಿಯೊಂದನ್ನು ಬಿಡುಗಡೆ ಮಾಡಿದೆ. ಕಳೆದ ಹಣಕಾಸು ವರ್ಷ ದೇಶದಲ್ಲಿ 36075 ಸೈಬರ್
ವಂಚನೆ ಪ್ರಕರಣಗಳು ದಾಖಲಾಗಿವೆ. ಈ ವರ್ಷ ಏಪ್ರಿಲ್‌ವರೆಗಿನ ನಾಲ್ಕು ತಿಂಗಳಲ್ಲಿ ಭಾರತೀಯರು ಬರೋಬ್ಬರಿ 1774 ಕೋಟಿ ರುಪಾಯಿ ಹಣ ಕಳೆದುಕೊಂಡಿzರೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಮೊತ್ತವನ್ನು ಕಳೆದುಕೊಂಡಿರು ವುದು ಕನ್ನಡಿಗರು.

ಜನವರಿಯಿಂದ ಜೂನ್ ವರೆಗಿನ ಆರು ತಿಂಗಳ ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ 903 ಕೋಟಿ ರು. ಪ್ರಮಾಣದ 3079 ಆನ್‌ಲೈನ್ ವಂಚನೆ ಪ್ರಕರಣಗಳು ನಡೆದಿವೆ. ವರ್ಷಾಂತ್ಯಕ್ಕೆ ವಂಚನೆಯ ಮೊತ್ತ 1500 ಕೋಟಿ ರು. ದಾಟಬಹುದು. ಈಗ ಹೇಳಿ ಇದನ್ನು ಮೀರಿಸುವ ಹಗರಣ ಇನ್ನಾವುದುಂಟು ? ಆದರೆ ಮುಡಾ, ವಾಲ್ಮೀಕಿ,
ಕೋವಿಡ್ ಹಗರಣಗಳ ಹಿಂದೆ ಬಿದ್ದ ನಮ್ಮ ಜನಪ್ರತಿನಿಧಿಗಳು ಮತ್ತು ತನಿಖಾಧಿಕಾರಿಗಳಿಗೆ ಈ ನೇರಾನೇರ ವಂಚನೆಯ ಬಗ್ಗೆ ಯೋಚಿಸಲೂ ಸಮಯವಿಲ್ಲ.

ತುರ್ತು ಸಾಲ, ಕ್ರೆಡಿಟ್ ಕಾರ್ಡ್, ಇನ್ಯುರೆನ್ಸ್, ಆನ್‌ಲೈನ್ ಉದ್ಯೋಗ, ವರ್ಕ್ ಫ್ರಮ್ ಹೋಮ್ ಸೌಲಭ್ಯ ಒದಗಿಸುವ ನೆಪದಲ್ಲಿ ಕಳುಹಿಸುವ ಎಸ್ಸೆಮ್ಮೆಸ್, ಆರ್‌ಬಿಐ, ಎಲ್ಲೈಸಿ, ಬ್ಯಾಂಕ್, ಆದಾಯಕರ ಇಲಾಖೆ ಹೆಸರಿನಲ್ಲಿ ಕಳುಹಿಸುವ ಅಡ್ರೆಸ್ ಅಪ್‌ಡೇಟ್ ಮತ್ತು ಆಧಾರ್ ಲಿಂಕ್ ಸಂದೇಶಗಳ ಹಿಂದೆ ಈ ವಂಚಕರೂ ಸೇರಿಕೊಂಡಿರಬಹುದು.
ಕೆಲವೊಮ್ಮೆ ಲಲನೆಯರು ನಿಮ್ಮ ವಾಟ್ಸ್ ಆಪ್ ಖಾತೆಗೆ ನೇರವಾಗಿ ಲಗ್ಗೆ ಇಟ್ಟು ಸ್ನೇಹ ಮತ್ತು ಆತ್ಮೀಯ ಸಂವಾದದ ಕೋರಿಕೆ ಮಂಡಿಸಿರಬಹುದು. ದೇವರು ನಾನಾ ರೂಪದಲ್ಲಿ ಅವತರಿಸುವಂತೆ ಸೈಬರ್ ಕಳ್ಳರು ಯಾವುದೇ ರೂಪದಲ್ಲಿ ನಿಮ್ಮ ಮುಂದೆ ಕಾಣಿಸಿಕೊಂಡು ವರ ನೀಡುವ ನೆಪದಲ್ಲಿ ದೋಚಬಹುದು.

ಒಟಿಪಿ ಕೇಳಿ ವಂಚಿಸುವವರು ಈಗ ಎಲ್‌ಕೆಜಿ ಸಾಲಿನ ವಂಚಕರು. ಇವರ ವಂಚನೆ ಮೊತ್ತ ಅಬ್ಬಬ್ಬಾ ಎಂದರೆ ಐದಂಕಿ ಒಳಗಿನ ಮೊತ್ತ. ಆದರೆ ಪಿಎಚ್‌ಡಿ ಸಾಲಿನಲ್ಲಿರುವ ವಂಚಕರು ಲಪಟಾಯಿಸುತ್ತಿರುವುದು ಲಕ್ಷ, ಕೋಟಿ ರು.ಗಳಲ್ಲಿ. ಇವರಿಗೆ ಬಲಿ ಬಿದ್ದವರು ಕೂಡ ಅಂತಿಂಥವರಲ್ಲ.

ಬೆಂಗಳೂರಿನ ಪ್ರಕರಣವನ್ನೇ ತೆಗೆದುಕೊಳ್ಳುವುದಾದರೆ ಐಟಿ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ವೈಟ್‌ಫೀಲ್ಡನ ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ (ಸೆನ್) ಪೊಲೀಸ್ ಠಾಣೆಯೊಂದರ ಕಳೆದ ಆರು ತಿಂಗಳಲ್ಲಿ 530 ಆನ್
ಲೈನ್ ಟ್ರೇಡಿಂಗ್ ವಂಚನೆ ಪ್ರಕರಣಗಳು ದಾಖಲಾಗಿವೆ. ಇವರು ಸರಾಸರಿ 30 ಲಕ್ಷ ರು.ಗಳಂತೆ 178 ಕೋಟಿ ರು. ಕಳೆದುಕೊಂಡಿದ್ದಾರೆ. ವಂಚಿತರಲ್ಲಿ ಮುಕ್ಕಾಲು ಪಾಲು ನಮ್ಮ ಬುದ್ದಿವಂತ ಟೆಕ್ಕಿಗಳು. ಹಾಗೆಯೇ ವಿಜ್ಞಾನಿಗಳು, ಸೇನಾಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು, ಉದ್ಯಮಿಗಳು, ಶಿಕ್ಷಕರು.. ಹೀಗೆ ತಮ್ಮ ವೃತ್ತಿಯಲ್ಲಿ ನೈಪುಣ್ಯತೆ ಹೊಂದಿರುವ ನಾನಾ ಕ್ಷೇತ್ರದ ಜನರಿದ್ದಾರೆ. ಹೂಡಿಕೆ ವೇಳೆ ಇವರು ಕನಿಷ್ಠ ಕಾಮನ್‌ಸೆನ್ಸ್ ಬಳಸಿದ್ದರೂ ಈ ವಂಚನೆಯಿಂದ ಪಾರಾಗಬಹುದಿತ್ತು. ಚಲನಚಿತ್ರ ನಿರ್ದೇಶಕಿ ರೂಪಾ ಅಯ್ಯರ್ ಕೂಡ ಕೆಲ ತಿಂಗಳ ಹಿಂದೆ
‘ಮನಿಲ್ಯಾಂಡರಿಂಗ್’ ವಿಚಾರಣೆ ನೆಪದಲ್ಲಿ ಒಂದೂವರೆ ದಿನಗಳ ಕಾಲ ‘ಡಿಜಿಟಲ್ ಅರೆಸ್ಟ್’ ಆಗಿದ್ದರು ಎಂದರೆ ಈ ವಂಚಕರು ಎಷ್ಟು ಚಾಲಾಕಿಗಳು ಊಹಿಸಿ.

ನೀವು ಇನ್‌ಸ್ಟಾಗ್ರಾಮ್, ಫೇಬುಕ್, ಎಕ್ಸ್ ನಂತಹ ಯಾವುದೇ ಖಾತೆ ತೆರೆದು ನೋಡಿ. ಅಲ್ಲಿ ಹೂಡಿಕೆ ಕುರಿತ ಹತ್ತಾರು
ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ನೀವು ಈ ಬಗ್ಗೆ ಲಕ್ಷ್ಯ ವಹಿಸುವುದಿಲ್ಲ. ಆದರೆ ನಮ್ಮವರೇ ಆದ ಇನೋಸಿಸ್‌ನ
ಸುಧಾಮೂರ್ತಿ ಮತ್ತು ನಾರಾಯಣ ಮೂರ್ತಿ ಒಟ್ಟಿಗೇ ಕುಳಿತು,“ದೇಶದ ಬಡಜನತೆಗಾಗಿ ನಾವು ಹೂಡಿಕೆಯ
ಅವಕಾಶ ಕಲ್ಪಿಸುತ್ತಿದ್ದೇವೆ. ನೀವು ಕೇವಲ 15 ಸಾವಿರ ಹೂಡಿಕೆ ಮಾಡಿದರೆ ಸಾಕು” ಎಂದು ಕರೆ ಕೊಟ್ಟಾಗ ನಂಬದೇ ಇರಲು ಸಾಧ್ಯವೇ? ಕೆಲ ತಿಂಗಳ ಹಿಂದೆ ಬಿಬಿಸಿ ವೆಬ್‌ಸೈಟ್ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಕರಣ್ ಜೋಹರ್‌ನ ‘ಕಾಫಿ ವಿದ್ ಕರಣ್ ಶೋ’ದ ಆಕರ್ಷಕ ಶೀರ್ಷಿಕೆ ಇತ್ತು.

ತೆರೆದು ನೋಡಿದಾಗ ಸಂದರ್ಶನಕ್ಕೆ ಬಂದ ನಾಯಕಿ, “ನಾನು ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಮಾತ್ರ ನಟಿಸಿ
ದ್ದರೂ ಕೋಟಿಗಟ್ಟಲೆ ಸಂಪಾದನೆ ಮಾಡಿದ್ದೇನೆ” ಎಂದು ವಿವರಿಸಿದ್ದಳು. ಈಕೆಯನ್ನು ಉದ್ಧರಿಸಿದ ಹೂಡಿಕೆಯ ಲಿಂಕನ್ನು ಈ ಸಂದರ್ಶನದಲ್ಲಿ ನೀಡಲಾಗಿತ್ತು. ಕೃತಕ ಬುದ್ದಿಮತ್ತೆ ಬಳಸಿ ಹರಿ ಬಿಡಲಾದ ಈ ವರದಿಗಳನ್ನು ನೋಡಿದರೆ ನಮ್ಮ ಬುದ್ಧಿಗೆ ಲಕ್ವ ಹೊಡೆಯದಿರಲು ಸಾಧ್ಯವೇ ಇಲ್ಲ !.

ಇದು ಸ್ಯಾಂಪಲ್ ಅಷ್ಟೇ. ವಂಚಕರು ಮುಖೇಶ್ ಅಂಬಾನಿ, ಸುಂದರ್ ಪಿಚ್ಬೈ, ರಾಜ್ ದೀಪ್ ಸರ್ದೇಸಾಯಿ ಸೇರಿ ದಂತೆ ಯಾವ ಸೆಲೆಬ್ರಿಟಿಗಳನ್ನೂ ಬಿಡದೇ ಇಂತಹ ವರದಿಗಳನ್ನು ಹರಿಬಿಡುತ್ತಿದ್ದಾರೆ. “ಇವರೇ ಹೇಳಿದ ಮೇಲೆ
ಇನ್ನೇನು, ಹೋದರೆ ೧೫ ಸಾವಿರ ರುಪಾಯಿ” ಎನ್ನುವ ಲೆಕ್ಕದಲ್ಲಿಯೇ ಹೂಡಿಕೆ ಮಾಡಲು ಲಿಂಕ್ ಒತ್ತಿದರೆ ಮುಗಿಯಿತು. ನಿಮಗೊಂದು ನಕಲಿ ಟ್ರೇಡಿಂಗ್ ಅಕೌಂಟ್ ಕ್ರಿಯೇಟ್ ಮಾಡುತ್ತಾರೆ.

ಒಂದೇ ವಾರದಲ್ಲಿ ನಿಮ್ಮ ಹೂಡಿಕೆ ವರ್ಚುವಲ್ ರೂಪದಲ್ಲಿ ಲಕ್ಷ ರು. ದಾಟಿರುವುದನ್ನು ತೋರಿಸುತ್ತಾರೆ. ಸ್ವರ್ಗಕ್ಕೆ ಏಣಿ ಹಾಕುವ ಅವಸರದಲ್ಲಿ ಹೆಚ್ಚಿನವರು ತಮ್ಮಲ್ಲಿರುವ ಪೂರ್ತಿ ಹಣವನ್ನು ಇಲ್ಲಿ ತೊಡಗಿಸುತ್ತಾರೆ. ಯಾವುದೋ
ಸಂದರ್ಭದಲ್ಲಿ ಹಣ ಬೇಕೆಂದು ವಿದ್‌ಡ್ರಾ ಮಾಡಲು ಹೊರಟರೆ ಅಕೌಂಟ್ ತಕ್ಷಣ ಸೀಜ್ ಆಗುತ್ತದೆ. ನಿಮ್ಮ ನಂಬರ್ ಬ್ಲಾಕ್ ಮಾಡುತ್ತಾರೆ. ಒಂದು ವೇಳೆ ಇನ್ನೂ ಮುಂದುವರಿದು ಸಂಪರ್ಕಿಸಿದರೆ, “ ಆದಾಯ ತೆರಿಗೆ ಇಲಾಖೆ ನೋಟಿಸ್
ಕಾರಣಕ್ಕೆ ಖಾತೆ ಸ್ಥಗಿತಗೊಂಡಿದೆ. ಮುಂಗಡ ತೆರಿಗೆಯಾಗಿ ಇಷ್ಟು ಹಣ ಕಟ್ಟಿ” ಎಂದು ಹೊಸ ವರಸೆ ಶುರು ಮಾಡು ತ್ತಾರೆ. ಅನೇಕರು ನಕಲಿಗಳಿಗೆ ಐಟಿ ಕರವನ್ನೂ ಪಾವತಿಸಿದ್ದಾರೆ. ವಿಶೇಷ ಎಂದರೆ ತಮ್ಮ ಹೆಸರು ಬಳಸಿಕೊಂಡು ಜನರ ಹಣ ಲೂಟಿ ಹೊಡೆಯುವ ಪ್ರಯತ್ನ ಆಗಿದೆ ಎಂದು ಇದುವರೆಗೆ ಸಿನಿಮಾ ನಟಿಯೊಬ್ಬರು ಬಿಟ್ಟರೆ ಯಾವ ಉದ್ಯಮಿಯೂ ದೂರು ನೀಡಿಲ್ಲ !

ವಂಚಕರಿಗೆ ಭಾರತವೇ ಸ್ವರ್ಗ
ಆಗ್ನೇಯ ಏಷ್ಯಾದ ಮ್ಯಾನ್ಮಾರ್, ಥಾಯ್ಲೆಂಡ್, ಲಾವೋಸ್, ಕಾಂಬೋಡಿಯಾ ಮತ್ತು ಆಫ್ರಿಕಾ ದೇಶಗಳ ಡಿಜಿಟಲ್ ವಂಚಕರಿಗೆ 150 ಕೋಟಿ ಜನಸಂಖ್ಯೆಯ ಭಾರತವೇ ಪ್ರಧಾನ ಲಕ್ಷ್ಯ. ವಿಶ್ವಮಟ್ಟದಲ್ಲೂ ಆನ್‌ಲೈನ್ ವಂಚನೆಗೆ ಒಳಗಾದ ದೇಶಗಳ ಪೈಕಿ 60 ಕೋಟಿಗೂ ಹೆಚ್ಚು ಸ್ಮಾರ್ಟ್ ಫೋನ್ ಬಳಕೆದಾರರಿರುವ ಭಾರತಕ್ಕೆ ಅಗ್ರಸ್ಥಾನ. ದೇಶದೊಳಗೂ ವೃತ್ತಿಪರ ಆನ್‌ಲೈನ್ ವಂಚಕರ ಸಂಖ್ಯೆ ಕಡಿಮೆ ಏನಿಲ್ಲ. ಬಿಹಾರ, ಉತ್ತರ ಪ್ರದೇಶ, ದೆಹಲಿ, ಜಾರ್ಖಂಡ್, ಪಂಜಾಬ್ ಸೇರಿದಂತೆ ಉತ್ತರ ಭಾರತದ ಯಾವುದೇ ಹಳ್ಳಿಯಲ್ಲಿ ಕುಳಿತು ಗಾಳ ಹಾಕುವವರಿಗೆ ಕನ್ನಡಿಗರೇ ಸುಲಭದ ಮಿಕಗಳು. ಇವರು ಯಾರದ್ದೇ ಅಮಾಯಕರ ಹೆಸರಲ್ಲಿ ನಕಲಿ ದಾಖಲೆ ಕೊಟ್ಟು, ಬ್ಯಾಂಕ್ ಖಾತೆ ಸೃಷ್ಟಿಸಿ, ಸಿಮ್ ಕಾರ್ಡ್ ಪಡೆದುಕೊಳ್ಳುತ್ತಾರೆ.

ತಮ್ಮ ಖಾತೆಗೆ ಹಣ ಬೀಳುತ್ತಿದ್ದಂತೆಯೇ ಕ್ಷಣ ಮಾತ್ರದಲ್ಲಿ ಬೇರೆ ಖಾತೆಗಳಿಗೆ ಹಣ ವರ್ಗಾಯಿಸಿಕೊಳ್ಳುತ್ತಾರೆ. ಮೈಸೂರಿನಂತಹ ಜಿಲ್ಲೆಯೊಂದರಲ್ಲಿಯೇ ಕಳೆದ ಆರು ತಿಂಗಳಲ್ಲಿ 32 ಕೋಟಿ ರೂ. ಆನ್‌ಲೈನ್ ವಂಚನೆ ಆಗಿದೆ. ಇಲ್ಲಿನ ಯುವ ಉದ್ಯಮಿ ಯೊಬ್ಬರು ಜೂನ್ ಎರಡನೇ ವಾರ ಆನ್‌ಲೈನ್ ಟ್ರೇಡಿಂಗ್‌ನಲ್ಲಿ 2.96 ಕೋಟಿ
ಕಳೆದುಕೊಂಡಿದ್ದರು. ಇದು ಕೇವಲ ಹಣಕಾಸು ವಂಚನೆಗಳಷ್ಟೇ ಅಲ್ಲ. ಜೀವನ ಪೂರ್ತಿ ದುಡಿದ ಹಣವನ್ನು ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ಕುಟುಂಬ ಗಳಿಗೆ ಲೆಕ್ಕವಿಲ್ಲ. ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದ ಕುಟುಂಬ ವೊಂದು ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಶರಣಾಗಿದೆ ಎಂದರೆ ಇಂತಹ ವಂಚನೆಯೊಂದಕ್ಕೆ ಬಲಿಯಾಗಿದೆ ಎಂದು ಸುಲಭವಾಗಿ ಊಹಿಸಬಹುದು.

ಜಾಗೃತಿಯೊಂದೇ ಮಾರ್ಗ
ನಮ್ಮನ್ನಾಳುವ ಸರಕಾರಕ್ಕೆ ಇದೆಲ್ಲ ಗೊತ್ತಿಲ್ಲ ಎಂದಲ್ಲ. ಸುಳ್ಳು ಸುದ್ದಿಗಳನ್ನು ಪತ್ತೆ ಮಾಡಲು ವಿಶೇಷ ತಂಡ ರಚಿಸುವ ಸರಕಾರಕ್ಕೆ ಅಮಾಯಕ ಜನರನ್ನು ವಂಚಿಸಿ ನೂರಾರು ಕೋಟಿ ರು. ಲೂಟಿ ಮಾಡುವ ಸೈಬರ್ ವಂಚಕರ ಜಾಡು ಪತ್ತೆಗೆ ತಜ್ಞರ ತಂಡ ರಚಿಸುವುದು ಕಷ್ಟವೇನಲ್ಲ. ಆದರೆ ಸೈಬರ್ ಖದೀಮರನ್ನು ಪತ್ತೆ ಮಾಡಬೇಕಾದರೆ, ರಾಜ್ಯ ಮತ್ತು ಕೇಂದ್ರದ ತನಿಖಾ ಸಂಸ್ಥೆಗಳು, ಆರ್‌ಬಿಐ, ಸೆಬಿಯಂತಹ ನಿಯಂತ್ರಕ ಸಂಸ್ಥೆಗಳು, ಬ್ಯಾಂಕಿಂಗ್ ವಲಯ ಎಲ್ಲರೂ ಒಂದಾಗಿ ಸಮನ್ವಯದಿಂದ ಕಾರ‍್ಯಾಚರಣೆ ಮಾಡಲೇಬೇಕು.

ಅಂತಾರಾಷ್ಟ್ರೀಯ ಮಟ್ಟದ ಮಾದಕ ದ್ರವ್ಯ ಮಾಫಿಯಾ, ಹೈಟೆಕ್ ಜೂಜುಕೋರರೂ ಸೈಬರ್ ವಂಚನೆಯ ಪಾಲುದಾರರು. ದೇಶವಿದ್ರೋಹಿ ಶಕ್ತಿಗಳಿಗೂ ಸೈಬರ್ ವಂಚನೆ ರಾಜಮಾರ್ಗ. ಇತ್ತೀಚೆಗೆ ಗೃಹ ಸಚಿವಾಲಯದ ಅಡಿಯಲ್ಲಿ ರಚಿಸಲಾದ ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಸೈಬರ್ ಅಪರಾಧ ಗಳನ್ನು ತಡೆಗಟ್ಟಲು ೫೦೦೦ ಸೈಬರ್ ಯೋಧರ ಪಡೆ ರಚಿಸುವ ಕೇಂದ್ರ ಸಚಿವರ ಹೇಳಿಕೆಯೂ ಉಲ್ಲೇಖಾರ್ಹ.

ರಾಜ್ಯದಲ್ಲೂ ಇದರ ತನಿಖೆಗೆ ವಿಶೇಷ ಠಾಣೆಗಳಿವೆ. ಆದರೆ ಸೈಬರ್ ವಂಚನೆ ಹೃದಯಾಘಾತ ಇದ್ದಂತೆ. ತಕ್ಷಣ ದೂರು ದಾಖಲಿಸದಿದ್ದರೆ ಹಣ ವಾಪಸ್ ಬರುವುದು ಕಷ್ಟ. ಈ ಸಂಬಂಧ ದೂರು ನೀಡಲೆಂದೇ ಸರಕಾರ ಟೋಲ್ ಫ್ರೀ (1930) ನಂಬರ್ ನೀಡಿದೆ. ಆದರೆ ವಂಚಿತರು ಎಚ್ಚೆತ್ತು ಕೊಳ್ಳುವಷ್ಟರಲ್ಲಿ ನಾಲ್ಕೈದು ಖಾತೆಗಳಿಗೆ ಹಣ ವರ್ಗಾವಣೆ ಯಾಗಿರುತ್ತದೆ. ಅದರಲ್ಲೂ ಕ್ರಿಪ್ಟೋ ಕರೆನ್ಸಿಯಲ್ಲಿ ವ್ಯವಹಾರ ನಡೆದಿದ್ದರೆ ನಮ್ಮ ಅಧಿಕಾರಿಗಳು ಅಸಹಾಯಕರು.

ರಾಜ್ಯದ ಕ್ರಿಪ್ಟೋ ಕರೆನ್ಸಿ ಹಗರಣದಲ್ಲಿ ಶ್ರೀಕಿಯನ್ನು ಎರಡೆರಡು ಸಲ ಬಂಧಿಸಿದ ಬಳಿಕವೂ ಪೊಲೀಸರಿಗೆ ಸಾಕ್ಷ್ಯ ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಇಂತಹ ಪ್ರಕರಣ ತಡೆಯಬೇಕಾದರೆ ಒಂದಷ್ಟು ಸಾಮಾನ್ಯ ಕಾರ‍್ಯಾಚರಣೆ ವಿಧಾನಗಳು (ಎಸ್‌ಒಪಿ) ಅಗತ್ಯ. ಎಲ್ಲಕ್ಕಿಂತ ಮುಖ್ಯವಾಗಿ ಸೈಬರ್ ವಂಚನೆಯನ್ನು ದೇಶದ್ರೋಹಕ್ಕೆ ಸಮಾನ ಅಪರಾಧ ಎಂದು ಪರಿಗಣಿಸಬೇಕು. ಸದ್ಯ ನೂರಾರು ಕೋಟಿ ವಂಚಿಸಿದ ಸೈಬರ್ ಖದೀಮನೊಬ್ಬ ಸಿಕ್ಕಿ ಬಿದ್ದರೂ
ಕಾನೂನು ಪ್ರಕಾರ 3 ವರ್ಷ ಕಾಲ ಶಿಕ್ಷೆ ವಿಧಿಸಬಹುದು. ಇಷ್ಟೂ ದುಡ್ಡನ್ನು ಇನ್ನೊಂದು ಬೇನಾಮಿ ಖಾತೆಗೆ ಹಾಕಿ, ಜೈಲಿಗೆ ಹೋಗಿ ಬರುವುದು ಏನು ಮಹಾ ಎಂದು ಯೋಚಿಸುವವರೇ ಹೆಚ್ಚು

ಇದನ್ನೂ ಓದಿ: Lokesh Kayarga Column: ಸುದ್ದಿಮನೆಯ ನಿತ್ಯವಸಂತ