Friday, 20th September 2024

U.B Venkatesh column: ಶೆಡ್‌ ಗಿರಾಕಿಗೆ ಹೀಗೊಂದು ಬಹಿರಂಗ ಪತ್ರ…

U B Venaktesh

ಟೈಂಬಾಂಬ್‌

ಯು.ಬಿ.ವೆಂಕಟೇಶ್

ರಾಹುಲ್ ಖರ್ಗೆ ಅವರಿಗೆ, ರಕ್ಷಣಾ ಪಡೆಗೆ ಮಂಜೂರಾಗಿರುವ ಜಮೀನಿನ ಪೈಕಿ ಕೆಲ ಭಾಗವನ್ನು ಕೊಡುವ ಮುನ್ನ ಸರಕಾರವು ಅಧಿಕಾರಿಗಳ ಮೂಲಕ ಸಾಕಷ್ಟು ಅಧ್ಯಯನ ಮಾಡಿಸಿದೆ ಎಂಬುದನ್ನು
ನಾರಾಯಣಸ್ವಾಮಿಯವರು ಆರೋಪಿಸುವುದಕ್ಕೆ ಮೊದಲು ಅರಿಯಬೇಕಿತ್ತು. ತಾವೇ ಅನುಮಾನದ ಸುಳಿಯಲ್ಲಿರುವಾಗ ಇನ್ನೊಬ್ಬರ ಮೇಲೆ ಸಲ್ಲದ ಅನುಮಾನಗಳನ್ನು ಪೋಣಿಸಿ ಹೇಳುವುದು ಸಲ್ಲ.

ಸರಕಾರದ ನೀತಿ-ನಿಲುವುಗಳಲ್ಲಿನ ಲೋಪದೋಷಗಳನ್ನು ಗುರುತಿಸಿ ಟೀಕೆ-ಟಿಪ್ಪಣಿ ಮಾಡುವ ಮೂಲಕ ಜನಾಭಿಪ್ರಾಯವನ್ನು ರೂಪಿಸುವುದು ಶಾಸನಸಭೆಯ ಪ್ರತಿಪಕ್ಷದ ನಾಯಕರ ಪ್ರಧಾನ ಜವಾಬ್ದಾರಿಯೂ ಹೌದು, ಕರ್ತವ್ಯವೂ ಹೌದು. ಇದೊಂದು ಪ್ರಶ್ನಾತೀತ ಪರಮಾಧಿಕಾರ ಎಂಬುದರ ಬಗ್ಗೆ ಎರಡು ಮಾತಿಲ್ಲ. ಆದರೆ ಇಂಥ ಪರಮಾಧಿಕಾರ ಚಲಾಯಿಸುವವರ ಕೈಗಳು ಮೊದಲು ಪರಿಶುದ್ಧವಾಗಿರಬೇಕು ಎಂಬುದು ಸಾರ್ವಜನಿಕರ ನಿರೀಕ್ಷೆ. ಆದರೆ ಇತ್ತೀಚಿನ ದಿನಮಾನಗಳಲ್ಲಿ ಪರಿಶುದ್ಧ ಕೈಗಳ ಬದಲಿಗೆ ಮಲಿನಗೊಂಡಿರುವ ಕೈಗಳ ಹೊತ್ತಿರುವ ಪ್ರತಿಪಕ್ಷದ ನಾಯಕರು ಸರಕಾರದ ನೀತಿ-ನಿಲುವುಗಳನ್ನು ಪ್ರಶ್ನಿಸುವ ಆತುರದಲ್ಲಿ ಹಲವಾರು ಸಂಘ-ಸಂಸ್ಥೆಗಳ ಮೇಲೆ ದೋಷಾರೋಪ ಹೊರಿಸುವ ಚಟ ರೂಢಿಸಿಕೊಳ್ಳುತ್ತಿರುವುದು ಪರಿಸ್ಥಿತಿಯ ಕ್ರೂರ ವಿಡಂಬನೆ.

ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿಯವರು ತಮ್ಮ ಸ್ಥಾನಬಲವನ್ನು ಚಲಾಯಿಸುವ ರೀತಿಯಲ್ಲಿ, ಸಾರ್ವಜನಿಕ ಉದ್ದೇಶ ಹೊತ್ತಿರುವ ಟ್ರಸ್ಟ್‌ಗಳು ಹಾಗೂ ಸಂಘ-ಸಂಸ್ಥೆಗಳಿಗೆ
ಸರಕಾರ ಜಮೀನು ಮಂಜೂರು ಮಾಡಿರುವ ವಿಚಾರವನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡದೇ ಪತ್ರಿಕಾಗೋಷ್ಠಿಯ ಮೂಲಕ ಬೀಸುಮಾತುಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿರುವುದು ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೆ ಗ್ರಾಸವಾಗಿದೆ. ಏಕೆಂದರೆ, ಸರಕಾರ ಜಮೀನು ಮಂಜೂರು ಮಾಡುವ ಮೊದಲು ನಿಯಮಾವಳಿಯ ಅನುಸಾರ ನಾನಾ ರೀತಿಯ ಪ್ರಕ್ರಿಯೆಗೆ ಜಮೀನು ಮಂಜೂರಾತಿ ಅರ್ಜಿಯನ್ನು ಒಳಪಡಿಸಿ ಅಂತಿಮ ವಾಗಿ ಸಂಪುಟದ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳುವ ವಿಧಿವಿಧಾನಗಳನ್ನು ಅವರು ಅರಿತು ಟೀಕೆ-ಟಿಪ್ಪಣಿ ಮಾಡಿದ್ದರೆ ಅದಕ್ಕೊಂದು ಮಾನ್ಯತೆ ಬರುತ್ತಿತ್ತು. ಬಹುಶಃ ನಾರಾಯಣಸ್ವಾಮಿಯವರಿಗೆ, ಸರಕಾರ ಮಂಜೂರು ಮಾಡಿರುವ ಜಮೀನಿನ ವಿಧಿ ವಿಧಾನಕ್ಕಿಂತಲೂ ರಾಹುಲ್ ಖರ್ಗೆ ನೇತೃತ್ವದ ಟ್ರಸ್ಟ್‌ಗೆ ಜಮೀನು ಒದಗಿಸಿರುವ ವಿಚಾರದ ಬಗ್ಗೆ ನಂಜಿರುವುದು ಇದಕ್ಕೆ ನೇರ ಪ್ರೇರಣೆ ಇರಬಹುದೇನೋ.

ಕೆಐಎಡಿಬಿ ವ್ಯಾಪ್ತಿಯ ಜಮೀನನ್ನು ಅರ್ಹ ಸಂಘ-ಸಂಸ್ಥೆಗಳಿಗೆ ಮಂಜೂರು ಮಾಡಿರುವುದು ಇದೇನೂ ಮೊದಲಲ್ಲ ಕೊನೆಯೂ ಅಲ್ಲ. ಸಂಘ-ಸಂಸ್ಥೆಯ ಧ್ಯೇಯೋದ್ದೇಶವನ್ನು ಅಧ್ಯಯನ ಮಾಡಿದ ನಂತರ
ಸರಕಾರ ಜಮೀನು ಮಂಜೂರಾತಿ ನಿರ್ಧಾರಕ್ಕೆ ಬರುವುದು ಸಂಪ್ರದಾಯ. ರಾಹುಲ್ ಖರ್ಗೆ ನೇತೃತ್ವದ ಟ್ರಸ್ಟ್‌ಗೆ ಕೂಡಾ ಇದೇ ರೀತಿಯ ವಿಧಿ ವಿಧಾನಗಳನ್ನು ಅನುಸರಿಸಿ ಜಮೀನು ಮಂಜೂರು ಮಾಡಲಾಗಿದೆ. ಇದೊಂದು ಸಾರ್ವಜನಿಕ ಉದ್ದೇಶದ ಟ್ರಸ್ಟ್. ದೇಶದಲ್ಲಿ ಮರೆಯಾಗುತ್ತಿರುವ ಪ್ರಾಕೃತ ಹಾಗೂ ಪಾಲಿ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಧ್ಯಯನ ಮತ್ತು ಸಂಶೋಧನಾ‌ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಮಹಾತ್ಮ ಗೌತಮ ಬುದ್ಧನ ಕಾಲದ ಸಂಸ್ಕೃತಿಯನ್ನು ಮತ್ತೆ ಆಚರಣೆಗೆ ತರುವಂತೆ ಮಾಡುವ ಸದಾಶಯವನ್ನು ಗುರುತಿಸಿಯೇ ಸರಕಾರ ಈ ಜಮೀನು ಮಂಜೂರು ಮಾಡಿದೆ. ಆದರೆ ನಾರಾಯಣಸ್ವಾಮಿಯವರಿಗೆ ಅದೇಕೋ ಏನೋ ಈ ಟ್ರಸ್ಟ್‌ಗೆ ಭೂಮಿ ಮಂಜೂರು ಮಾಡಿರುವುದು ಇಷ್ಟವಾಗಿಲ್ಲ.

ಬಹುಶಃ ಇದಕ್ಕೆ ಕಾರಣ, ಬುದ್ಧನ ಮೇಲಿನ ಕೋಪವೋ ಅಥವಾ ಖರ್ಗೆ ಕುಟುಂಬದ ಮೇಲಿನ ಸಿಟ್ಟೋ ತಿಳಿಯುತ್ತಿಲ್ಲ. ಅಂದಹಾಗೆ, ನಾರಾಯಣಸ್ವಾಮಿಯವರು ಕೂಡಾ ೨೦೦೬ರಲ್ಲಿ ಕೆಐಎಡಿಬಿ ಮೂಲಕ ಮೈಸೂರಿನಲ್ಲಿ ಜಮೀನನ್ನು ಮಂಜೂರು ಮಾಡಿಸಿಕೊಂಡಿರುವುದು ಯಾವ ಘನಂದಾರಿ ಉದ್ದೇಶಕ್ಕೆ ಎಂಬುದು ನಿಗೂಢವೇ. ಇದರಲ್ಲಿ ಸಾರ್ವಜನಿಕ ಉದ್ದೇಶ ಏನೆಂಬುದು ತಿಳಿಯುತ್ತಿಲ್ಲ. ಏಕೆಂದರೆ ನಾರಾಯಣ ಸ್ವಾಮಿಯವರು ಸರಕಾರಕ್ಕೆ ಹೇಳಿದ್ದು ಸಾಫ್ಟ್‌ ವೇರ್ ಘಟಕ ಸ್ಥಾಪನೆ ಮಾಡುವ ಸಲುವಾಗಿ ಜಮೀನು ಬೇಕು ಎಂದು. ಆದರೆ ಈಗ ಸ್ಥಾಪನೆ ಮಾಡಿರುವುದು ಶೆಡ್ ಅಥವಾ ಒಂದು ಉಗ್ರಾಣ ಮಳಿಗೆ. ಇದರ ಅರ್ಥ, ಇಂಥ ಆರೋಪವನ್ನು ಹೊರಿಸುವವರ ಕೈ ಚೊಕ್ಕಟವಾಗಿರಬೇಕು ಎಂಬುದಷ್ಟೇ.

ತಾವೇ ಫಲಾನುಭವಿಯಾಗಿ ಇನ್ನೊಬ್ಬ ಫಲಾನುಭವಿಯ ಎಲೆಯ ಮೇಲೆ ಕಾಣದಿರುವ ನೊಣವನ್ನು ಹೆಗ್ಗಣ ಎಂದು ಗುರುತಿಸುವುದು ಜಾಣ್ಮೆ ಎನ್ನುವುದು ಮೂರ್ಖತನವಷ್ಟೇ. ಇದು ಉದ್ಧಟತನದ ಪರಮಾವಧಿ.
ಇದಕ್ಕೆ ಸಮಾನಾಂತರವಾಗಿ ನಾರಾಯಣಸ್ವಾಮಿಯವರು ಈ ಹಿಂದೆ ಎಲ್ಲಾ ರಾಜಕೀಯ ಪಕ್ಷಗಳಲ್ಲಿಯೂ ಇದ್ದು ಬಂದವರು. ಅಂದರೆ ಸರ್ವಪಕ್ಷಗಳ ಓಟಗಾರ. ಅವಿಭಾಜ್ಯ ಜನತಾಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿ ಮಾಜಿ ಸಚಿವ ಡಾ. ಸುಬ್ರಮಣ್ಯಸ್ವಾಮಿಯವರ ಬಲಗೈ ಬಂಟನಾಗಿ, ದೇವೇಗೌಡರ ಅಂಗಳದಲ್ಲಿ ಹೋರಾಡುತ್ತಾ ೧೯೯೨-೯೩ರ ಯಲಹಂಕ ವಿಧಾನಸಭೆಯ ಉಪಚುನಾವಣೆಯ ನಂತರ ಕೈಗೆ ಬಂದಂಥ ಜನತಾಪಕ್ಷದ ಟಿಕೆಟ್ ಬಾಯಿಗೆ ಬಾರದಂತಾದಾಗ ಕಂಗೆಟ್ಟ ನಾರಾಯಣಸ್ವಾಮಿ ಯವರು ಬೇಸತ್ತು ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಅಂಗಳದಲ್ಲಿ ಟವೆಲ್ ಹಾಕಿದ ನಂತರ ಜರುಗಿದ ಬೆಳವಣಿಗೆಗಳ ನಡುವೆ ಮುಂದೆ ಒಳ್ಳೆಯ ಭವಿಷ್ಯ ಬರಬಹುದು ಎಂಬ ದೃಷ್ಟಿಯಿಂದ ಆಗ ಕರ್ನಾಟಕದಲ್ಲಿ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ವಿಶ್ವಾಸಯೋಗ್ಯ ಕಾರ್ಯಕರ್ತರಾಗಿ ರೂಪುಗೊಂಡು, ಅವರು ಕೇಂದ್ರ ಸಚಿವರಾದ ಮೇಲೆ ರೈಲ್ವೆ ನೇಮಕಾತಿ ಮಂಡಳಿಯಿಂದ ಹಿಡಿದು ನಾನಾ ಸರಕಾರಿ ಹುದ್ದೆಗಳಿಗೆ ನೇಮಕಗೊಂಡಿದ್ದನ್ನು ಯಾರೂ ಮರೆತಿಲ್ಲ.

ಇದಾದ ನಂತರ ಶಾಸನಸಭೆ ಪ್ರವೇಶಿಸುವ ಮಹದಾಸೆಗೆ ಅವಕಾಶಗಳು ದೊರೆಯದೇ ಹೋದಾಗ ಖರ್ಗೆ ಅವರ ಅಂಗಳದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪನವರ ನಿವಾಸದಲ್ಲಿ ಪ್ರತ್ಯಕ್ಷರಾಗಿ
ಬಿಜೆಪಿಯ ಕಾರ್ಯಕರ್ತರಾಗಿ ಕೇಸರಿ ಶಾಲು ಧರಿಸಿದ ಪರಿಣಾಮವೋ ಏನೋ ಶಾಸನಸಭೆ ಪ್ರವೇಶಿಸಲು ಮುಕ್ತ ಅವಕಾಶವಂತೂ ಒದಗಿತು. ಇದಾದ ನಂತರ ಪರಿಸ್ಥಿತಿಯ ಅನಿವಾರ್ಯತೆಯಲ್ಲಿ ಸಾಕಷ್ಟು ನುರಿತ ಅಭ್ಯರ್ಥಿಗಳು ಇದ್ದರೂ ಬಿಜೆಪಿ ಹಿರಿಯ ಮುಖಂಡರ ಸುತ್ತ ಪ್ರದಕ್ಷಿಣೆಯ ಮೇಲೆ ಪ್ರದಕ್ಷಿಣೆ ಹಾಕಿದ ಪರಿಣಾಮವಾಗಿ ಪ್ರತಿಪಕ್ಷದ ಸ್ಥಾನದ ಅವಕಾಶ. ಇದೆಲ್ಲದರ ಒಟ್ಟಾರೆ ಪರಿಣಾಮವೆಂದರೆ ಋಣಸಂದಾಯ ಮಾಡುವ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧ ನಿರಂತರವಾಗಿ ದೋಷಾರೋಪಗಳನ್ನು ಹೊರಿಸುವ ದುಸ್ಸಾಹಸ.

ನಾರಾಯಣಸ್ವಾಮಿಯವರು ಅನುಭವಸ್ಥ ರಾಜಕೀಯ ಕಾರ್ಯಕರ್ತರು. ಮಾತಿನ ಗುರಿ ಮತ್ತು ಪರಿಣಾಮಗಳನ್ನು ಚೆನ್ನಾಗಿ ಬಲ್ಲವರು. ಮಾತಿನ ಸತ್ಯಕ್ಕಿಂತ ಅದು ಬೀರುವ ಪರಿಣಾಮ ಅವರಿಗೆ ಹೆಚ್ಚು ಪ್ರಿಯ. ಹೀಗಾಗಿಯೇ ಮಾತಿನ ನಡುವೆ ಗಡ್ಡ ಕೆರೆದುಕೊಳ್ಳುತ್ತಾ, ಕಣ್ಣು ಮಿಟುಕಿಸುತ್ತಾ ಬ್ರಹ್ಮ ಜ್ಞಾನವನ್ನು ಹಂಚಿಕೊಳ್ಳುವ ರೀತಿ ಯಲ್ಲಿ ಕಾಂಗ್ರೆಸ್ ವಿರುದ್ಧ ನಂಜು ಕಾರಿಕೊಳ್ಳುವ ಅವರ ನಿಷ್ಠೆಯ ಆಯುಷ್ಯ ಎಷ್ಟೆಂಬುದು ದೊಡ್ಡ ಒಗಟು. ಅಂದಹಾಗೆ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರರಾದ ರಾಹುಲ್ ಖರ್ಗೆ ಅವರು ವಿದ್ಯಾವಂತರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ(ಐಐಎಸ್ಸಿ) ಉನ್ನತ ಸಂಶೋಧನೆ ಮಾಡಿದ್ದಲ್ಲದೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಐಆರ್‌ಎಸ್ ಶ್ರೇಣಿಗೆ ಆಯ್ಕೆಯಾಗಿದ್ದವರು.

ಕೆಲಕಾಲ ಐಆರ್‌ಎಸ್ ಅಧಿಕಾರಿ ಯಾಗಿ ಕಾರ್ಯನಿರ್ವಹಿಸಿ ಮನಸ್ಸು ಒಪ್ಪದೆ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಐಟಿ ಉದ್ಯಮ ಕ್ಷೇತ್ರದಲ್ಲಿ ತಂತ್ರಜ್ಞರಾಗಿ ಹಲವಾರು ಸಂಸ್ಥೆಗಳ ಸಲಹೆಗಾರರಾಗಿ ಹಾಗೂ ಮಾರ್ಗ ದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಪತ್ನಿ ಅರುಂಧತಿ ಖರ್ಗೆ ಅವರು ಪ್ರತಿಷ್ಠಿತ ಬಿಎಂಎಸ್ ಕಾಲೇಜಿನ ಬಿಇ ಪದವೀಧರರು. ರಾಹುಲ್ ಖರ್ಗೆ ಅವರು ಸಿದ್ಧಾರ್ಥ ವಿಹಾರ ಎಜುಕೇಶನ್ ಟ್ರಸ್ಟ್ ಸಂಸ್ಥೆಯ ಅಧ್ಯಕ್ಷರು. ಹೈಟೆಕ್ ಡಿಫ್ ಮತ್ತು ಏರೋಸ್ಪೆಸ್ ಪಾರ್ಕ್ ಬಳಿ ಸಿಎ ನಿವೇಶನವನ್ನು, ಸರಕಾರ ನಿಗದಿಪಡಿಸಿದ ಹಣ ಪಾವತಿಸಿ ಕೆಐಎಡಿಬಿ ಮೂಲಕ ಪಡೆದುಕೊಂಡಿರುವ‌ ಮುಖ್ಯ ಉದ್ದೇಶ ಸಾರ್ವಜನಿಕ ಹಿತಾಸಕ್ತಿಯ ರಕ್ಷಣೆಗಾಗಿ. ಪುರಾತನ ಭಾಷೆಗಳು ಕಣ್ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಮೌರ್ಯರ ಕಾಲದಲ್ಲಿ ಉತ್ತುಂಗದಲ್ಲಿದ್ದ ಪ್ರಾಕೃತ ಹಾಗೂ ಪಾಲಿ ಭಾಷೆಗಳನ್ನು ಉಳಿಸುವುದು ಮುಖ್ಯ ಗುರಿಯಾಗಿದೆ.

ಕೆಐಎಡಿಬಿಯು ಖರ್ಗೆ ನೇತೃತ್ವದ ಟ್ರಸ್ಟ್‌ಗೆ ಮಾತ್ರವೇ ಮೊದಲ ಬಾರಿಗೆ ಜಮೀನು ಮಂಜೂರು ಮಾಡಿರುವುದಲ್ಲ. ಈ ಹಿಂದಿನ ಸರಕಾರದ ಅವಧಿಯಲ್ಲಿಯೇ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಬೃಹತ್ ಪ್ರಮಾಣದ
ವಿಶಾಲ ಜಮೀನನ್ನು ಮಂಜೂರು ಮಾಡಲಾಗಿತ್ತು. ಹಾಗೆಯೇ ಇನ್ನೂ ಅನೇಕ ಸಂಘ-ಸಂಸ್ಥೆಗಳ ಜನಹಿತ ಗುರಿಯನ್ನು ಗಮನಿಸಿ ಜಮೀನು ಮಂಜೂರಾತಿ ಸೌಲಭ್ಯವನ್ನು ಒದಗಿಸಲಾಗಿದೆ. ರಾಹುಲ್ ಖರ್ಗೆ ಅವರಿಗೆ ರಕ್ಷಣಾ ಪಡೆಗೆ ಮಂಜೂರಾಗಿರುವ ಜಮೀನಿನ ಪೈಕಿ ಕೆಲ ಭಾಗವನ್ನು ಕೊಡುವ ಮುನ್ನ ಸಾಕಷ್ಟು ಅಧ್ಯಯನವನ್ನು ಸರಕಾರವು ಅಧಿಕಾರಿಗಳ ಮೂಲಕ ಮಾಡಿಸಿದೆ ಎಂಬುದನ್ನು ನಾರಾಯಣಸ್ವಾಮಿಯವರು ರೋಪ ಮಾಡುವುದಕ್ಕೆ ಮೊದಲು ಅರಿತುಕೊಳ್ಳಬೇಕಿತ್ತು. ಪುರಾತನ ಪಾಲಿ ಹಾಗೂ ಪ್ರಾಕೃತ ಭಾಷೆಯನ್ನು ಉಳಿಸುವ ಸದಾಶಯವನ್ನು ಗುರುತಿಸಿದ್ದರೆ ಅದರಿಂದ ಸಾರ್ವಜನಿಕ ಹಿತಾಸಕ್ತಿ ರಕ್ಷಿಸಿದಂತೆ ಆಗುತ್ತಿತ್ತು.
ಸಾಫ್ಟ್‌ ವೇರ್ ಘಟಕ ನಿರ್ಮಾಣ ಮಾಡುವುದಾಗಿ ಹೇಳಿ ಮೈಸೂರಿನಲ್ಲಿ ಶೆಡ್ ಕಟ್ಟಲು ಬಳಸಿದಂತೆ ಕೆಐಎಡಿಬಿ ಜಮೀನನ್ನು ಉಪಯೋಗಿಸುವ ಬುದ್ಧಿ ಇದರಲ್ಲಿ ಇಲ್ಲ ಎಂಬುದನ್ನು ಅರಿಯಬೇಕಿತ್ತು.

ಸಾರ್ವಜನಿಕ ಮುಖಂಡರು, ಸೀಜರನ ಹೆಂಡತಿಯು ದೋಷಮುಕ್ತವಾಗಿರಬೇಕು ಎಂಬ ಅನುಭವದ ಪಾಠವನ್ನು ಜಗತ್ತಿಗೆ ಹೇಳುತ್ತಿರುವುದನ್ನು ನಾರಾಯಣಸ್ವಾಮಿಯವರು ಅರಿತು ನಡೆಯಬೇಕಾಗಿತ್ತು. ತಾವೇ ಅನುಮಾನದ ಸುಳಿಯಲ್ಲಿರುವಾಗ ಇನ್ನೊಬ್ಬರ ಮೇಲೆ ಸಲ್ಲದ ಅನುಮಾನಗಳನ್ನು ಪೋಣಿಸಿ ಹೇಳುವ ಕ್ರಮ ನಿಜಕ್ಕೂ ಸಾಧುವಾಗಲಾರದು. ಇದನ್ನೇ ಬೃಹತ್ ಕೈಗಾರಿಕಾ ಮಂತ್ರಿ ಎಂ.ಬಿ.ಪಾಟೀಲ್ ಅವರು ‘ಶೆಡ್ ಗಿರಾಕಿ’ ಎಂದು ಗುರುತಿಸಲು ಕಾರಣವಿರಬೇಕು. ಕಡೆಯದಾಗಿ ಹರಿಯುವ ನೀರಿಗೆ ಕಾಲು ಚಾಚುವುದು ಪ್ರತಿಪಕ್ಷದ ನಾಯಕರಾದವರ ಧೋರಣೆಯಾಗಬಾರದು ಎಂಬುದರಲ್ಲಿ ಅರ್ಥವಿದೆ. ಹೀಗೆ ಹರಿಯುವ ನೀರಿನ ಕೆಳಗಿನ ನೆಲ ಹಾಗೂ ನೀರು ಹೋಗುವ ಜಾಗವನ್ನು ತಿಳಿದು ಪ್ರತಿಕ್ರಿಯೆ ಕೊಡುವುದು ರಚನಾತ್ಮಕ ಹಾಗೂ ಜನಹಿತ ರಕ್ಷಣೆಯ ಒಂದು ರಾಜಮಾರ್ಗ ಎಂಬುದು ಜನತಂತ್ರದ ಮೂಲಪಾಠಗಳನ್ನು ಜಗತ್ತಿಗೆ ಸಾರಿರುವ ಗ್ರೀಕ್ ಪಂಡಿತರ ಅನುಭವದ ಮಾತುಗಳು ಎಂಬುದನ್ನು ತಾವು ಪರಾಂಬರಿಸುವುದು ಪ್ರತಿಪಕ್ಷದ ನಾಯಕತ್ವಕ್ಕೆ ಭೂಷಣಪ್ರಾಯವಾಗಬಹುದು.

(ಲೇಖಕರು ವಿಧಾನ ಪರಿಷತ್ ಸದಸ್ಯರು)