Monday, 14th October 2024

ವರಿಷ್ಠರು ಆಪರೇಷನ್ ಬಿಎಸ್’ವೈ ಕಾರ್ಯಾಚರಣೆಗೆ ಕೈ ಹಾಕಿದ್ದೇಕೆ ?

ಮೂರ್ತಿ ಪೂಜೆ 

ಆರ್‌.ಟಿ.ವಿಠ್ಠಲಮೂರ್ತಿ

ರಾಜ್ಯದಲ್ಲಿ ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಮುನ್ನಡೆಸಲು ಆಪರೇಷನ್ ಯಡಿಯೂರಪ್ಪ ಎಂಬ ಕಾರ್ಯತಂತ್ರವನ್ನು ಬಿಜೆಪಿ ಹೈಕಮಾಂಡ್ ರೂಪಿಸಿದೆ.
ಕರ್ನಾಟಕದ ರಾಜಕಾರಣವನ್ನು ಬಲ್ಲವರಿಂದ ಮಾಹಿತಿ ಪಡೆದಿರುವ ಹೈಕಮಾಂಡ್ ವರಿಷ್ಠರಿಗೆ ಪಕ್ಷವನ್ನು ಮುನ್ನಡೆಸಲು ಕಾಣಿಸುತ್ತಿರುವ ಏಕೈಕ ಕಾರ್ಯತಂತ್ರ ಇದೇ ಎಂಬುದು ಕುತೂಹಲಕಾರಿ.

ಮುಂದಿನ ಚುನಾವಣೆಯ ಕಾಲಕ್ಕೆ ಯಡಿಯೂರಪ್ಪ ಪಕ್ಷ ತೊರೆಯದಂತೆ ನೋಡಿಕೊಂಡರೆ ಸಾಕು, ಪಕ್ಷ ಕರ್ನಾಟಕದಲ್ಲಿ ಗೆದ್ದು ಪುನಃ ಅಧಿಕಾರ ಹಿಡಿಯುತ್ತದೆ ಎಂಬುದು ಈ ಸೂತ್ರದ ತಿರುಳು. 2013ರ ಚುನಾವಣೆ ಯಲ್ಲಿ ಪಕ್ಷದ ಹೀನಾಯ ಸೋಲಿಗೆ ಕಾರಣವೇನು? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ರೂಪಿಸಿದ ಈ ಆಪರೇಷನ್‌ಗೆ ಯಡಿಯೂರಪ್ಪ ಅವರನ್ನು ನಿಯಂತ್ರಿಸುವುದೇ ಮುಖ್ಯ ಉದ್ದೇಶ. 2013ರ ವೇಳೆಗೆ ಯಡಿ ಯೂರಪ್ಪ ಅವರು ಪಕ್ಷದಿಂದ ಹೊರಹೋಗಿ ಕೆಜೆಪಿ ಕಟ್ಟಲು ಅವತ್ತು ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಪಾಲು ದೊಡ್ಡದು.

ಯಾಕೆಂದರೆ ಅಷ್ಟೊತ್ತಿಗಾಗಲೇ ಯಡಿಯೂರಪ್ಪ ಅವರ ವಿರುದ್ಧ ಕೇಳಿ ಬಂದ ಆರೋಪಗಳನ್ನು ಅಸ್ತ್ರವನ್ನಾಗಿಟ್ಟು ಕೊಂಡ ಕೇಂದ್ರದ ಯುಪಿಎ ಪ್ರಮುಖರು 2013 ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಅಗತ್ಯವಾದ ತಂತ್ರ ವನ್ನು ರೂಪಿಸಿದ್ದರು. ರಾಜ್ಯದ ಲಿಂಗಾಯತ ಮತದಾರರ ಮೇಲೆ ಪ್ರಬಲ ಹಿಡಿತ ಹೊಂದಿದ್ದ ಯಡಿಯೂರಪ್ಪ ಬಿಜೆಪಿಯಲ್ಲಿ ಉಳಿಯಬಾರದು ಎಂಬುದೇ ಈ ತಂತ್ರದ ಪ್ರಮುಖ ಭಾಗವಾಗಿತ್ತು. ಅವತ್ತು ದಿಲ್ಲಿ ಮೂಲಗಳ ಪ್ರಕಾರ, ಈ ಯೋಜನೆಯ ಅನುಸಾರ ಯುಪಿಎ ಸರಕಾರ ಮುಂದುವರಿಯಿತು ಮತ್ತು ಅಡಕತ್ತರಿಗೆ ಸಿಕ್ಕು ಬಿದ್ದ ಯಡಿಯೂರಪ್ಪ ಅವರು ಬಿಜೆಪಿ ತೊರೆಯಲು ಒಪ್ಪಿಕೊಂಡರು.

ಇದಕ್ಕೆ ಪೂರಕವಾಗಿ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರು ದೆಹಲಿಯ ನೋಯ್ಡಾದಲ್ಲಿ ರಹಸ್ಯ ಸಭೆ ನಡೆಸಿದಾಗ ಯಡಿಯೂರಪ್ಪ ಅವರ ಪರವಾಗಿ ಅದರಲ್ಲಿ ಭಾಗಿಯಾದವರು ಅವತ್ತು ಯಡಿಯೂರಪ್ಪ ಅವರ ಅಪ್ತ ಬಳಗದಲ್ಲಿದ್ದ ಶೋಭಾ ಕರಂದ್ಲಾಜೆ ಎಂಬುದು ಇದೇ
ಮೂಲಗಳ ವರ್ತಮಾನ. ಪರಿಣಾಮವಾಗಿ ಯಡಿಯೂರಪ್ಪ ಅವರು ಕಾಂಗ್ರೆಸ್ ನಾಯಕರ ಜಾಲಕ್ಕೆ ಸಿಲುಕಿ ಬಿಜೆಪಿಯಿಂದ ಹೊರಬಂದರು. ಅವರು ಹೊರ ಬಂದಿದ್ದೇ ತಡ, ರಾಜ್ಯದಲ್ಲಿ ಮೊದಲ ಬಾರಿ ಲಿಂಗಾಯತ ಮತಗಳು ಒಡೆದವು.

ರಾಜ್ಯ ರಾಜಕಾರಣದಲ್ಲಿ ಲಿಂಗಾಯತ ಸಮುದಾಯ ಹಲವು ಬಾರಿ ಬೇರೆ, ಬೇರೆ ಶಕ್ತಿಗಳ ಕಡೆ ವಲಸೆ ಹೋದರೂ ಒಡೆದು ದಿಕ್ಕಾಪಾಲಾದ ಇತಿಹಾಸವಿರಲಿಲ್ಲ. 1969ರ ವಲಸೆ ನಿಧಾನವಾಗಿ ನಡೆದಿತ್ತು ಎಂಬುದನ್ನು ಬಿಟ್ಟರೆ ಉಳಿದ ಯಾವ ಸಂದರ್ಭಗಳಲ್ಲೂ ಅದು ಇಬ್ಬಾಗವಾಗಿರಲಿಲ್ಲ. 1989ರಲ್ಲಿ ಜನತಾದಳದ ಒಡಕಿನ ಪರಿಣಾಮವಾಗಿ ಅದು ವಲಸೆ ಹೋದಾಗ ಅದರ ಲಾಭ ಪಡೆದಿದ್ದು ಕಾಂಗ್ರೆಸ್. ಅದು ಚೂರು ಪಾರು ಲಾಭವಲ್ಲ, ಬಂಪರ್ ಲಾಭ. 1994ರ ಸಂದರ್ಭ ದಲ್ಲಿ ಮರಳಿ ಅದು ಜನತಾ ಪರಿವಾರದ ಕಡೆ ಹೋದಾಗ ಯಥಾ ಪ್ರಕಾರ ಆ ಪಕ್ಷಕ್ಕದು ಬಂಪರ್ ಲಾಭವೇ ಆಗಿತ್ತು. 1999ರಲ್ಲಿ ಅದರ ವಲಸೆಯಿಂದ
ಬಿಜೆಪಿ-ಸಂಯುಕ್ತ ಜನತಾದಳ ಮೈತ್ರಿಕೂಟ ಅಧಿಕಾರಕ್ಕೆ ಬರಲಿಲ್ಲವಾದರೂ ಆ ಮೈತ್ರಿಕೂಟದ ಜತೆ ಅದು ಸಾಲಿಡ್ಡಾಗಿ ನಿಂತುಕೊಂಡಿತ್ತು.

2004 ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಶಕ್ತಿಯ ಸಾಲಿಡ್ಡು ಬೆಂಬಲದ ಜತೆಗೆ ಹಿಂದುಳಿದ ವರ್ಗದ ಬಂಗಾರಪ್ಪ, ದಲಿತರ ಪೈಕಿ ಎಡಗೈನ ಕೆ.ಬಿ.ಶಾಣಪ್ಪ, ರಮೇಶ್ ಜಿಗಜಿಣಗಿ ಅವರಂಥವರನ್ನು ಸೆಳೆದ ಬಿಜೆಪಿ ಮೊಟ್ಟ ಮೊದಲ ಬಾರಿ ಕರ್ನಾಟಕದ ಅತ್ಯಂತ ದೊಡ್ಡ ರಾಜಕೀಯ ಶಕ್ತಿಯಾಗಿ ಹೊರ ಹೊಮಿತ್ತು. ಒಂದು ವೇಳೆ 2013ರಲ್ಲಿ ಅದು ಒಡೆಯದೇ ಹೋಗಿದ್ದರೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟ ಮತ್ತೊಮ್ಮೆ ಸರಕಾರ ರಚಿಸುವ ಲಕ್ಷಣಗಳು ಸ್ಪಷ್ಟವಾಗಿದ್ದವು. ಇದನ್ನರಿತ ದಿಲ್ಲಿಯ ಕಾಂಗ್ರೆಸ್ ನಾಯಕರು ಯಡಿಯೂರಪ್ಪ ಅವರು ಕಮಲ ಪಾಳೆಯ ತೊರೆಯುವಂತೆ ಮಾಡಿದರು.

ಮತ್ತದರ ಭರ್ಜರಿ ಲಾಭವನ್ನೂ ಪಡೆದರು. 2013ರಲ್ಲಿ ಬಿಜೆಪಿ ಹೀನಾಯ ಸೋಲು ಕಂಡು ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದಿದ್ದಕ್ಕೆ ಇದೇ ಮುಖ್ಯ ಕಾರಣ. ಈಗ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಕಾರ್ಯ ಸಾಂಗೋಪಾಂಗವಾಗಿ ಮುಗಿದ ನಂತರ ದಿಲ್ಲಿಯ ಬಿಜೆಪಿ ನಾಯಕರ ಕಣ್ಣ ಮುಂದಿರುವುದು ಇದೇ ಅಂಶ. ಅರ್ಥಾತ್, ಯಾವ ಕಾರಣಕ್ಕೂ ಯಡಿಯೂರಪ್ಪ ಅವರು ಪಕ್ಷ ತೊರೆಯದಂತೆ ನೋಡಿಕೊಳ್ಳಬೇಕು ಎಂಬುದು ಅವರ ಒನ್ ಲೈನ್ ಅಜೆಂಡಾ.

ಆದರೆ ಏಕಕಾಲಕ್ಕೆ ಯಡಿಯೂರಪ್ಪ ಅವರು ಆಡಳಿತದ ಮೇಲೆ ಪ್ರಭಾವ ಬೀರದಂತೆಯೂ ನೋಡಿಕೊಳ್ಳಬೇಕು. ಪಕ್ಷ ತೊರೆಯದಂತೆಯೂ ನೋಡಿಕೊಳ್ಳಬೇಕು ಎಂಬುದು ಸರಳವಾದ ವಿಷಯವೇನಲ್ಲವಲ್ಲ? ಹೀಗಾಗಿಯೇ ಶುರುವಿನಿಂದಲೂ ಯಡಿಯೂರಪ್ಪ ಅವರ ಹೆಜ್ಜೆಗಳ ಮೇಲೆ ವರಿಷ್ಠರು ಹದ್ದುಗಣ್ಣಿರಿಸಿ ಕುಳಿತಿದ್ದಾರೆ.

ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿದ ಕೂಡಲೇ ಯಡಿಯೂರಪ್ಪ ಏನು ಹೇಳಿದರು? ಸದ್ಯದ ರಾಜ್ಯ ಪ್ರವಾಸ ನಡೆಸುವ ತಮ್ಮ ಉದ್ದೇಶವನ್ನು ಪ್ರಕಟಿಸಿದರು. ಅಧಿಕಾರದಲ್ಲಿರುವುದು ಬಿಜೆಪಿಯೇ ಆಗಿರುವಾಗ ರಾಜ್ಯ ಪ್ರವಾಸ ಮಾಡಿ ಜನರ ಸಮಸ್ಯೆಗಳನ್ನು ಕೇಳುವುದು ಎಂದರೆ ಏನರ್ಥ? ಇಂತಹ ಪ್ರವಾಸದ ಸಂದರ್ಭ ದಲ್ಲಿ ರಾಜ್ಯದ ಜನ ಏನು ಬಿಜೆಪಿಯ ಆಡಳಿತದ ಬಗ್ಗೆ ಪ್ರಶಂಸೆಯ ಸುರಿ ಮಳೆ ಗೈಯ್ಯುತ್ತಾರೆಯೇ? ಇಲ್ಲವಲ್ಲ? ಅಂದ ಮೇಲೆ ಇಂತಹ ಪ್ರವಾಸದಿಂದ ಅವರು ತಮ್ಮ ವರ್ಚಸ್ಸನ್ನು ಬೆಳೆಸಿಕೊಳ್ಳಬಹುದೇ ಹೊರತು ಪಕ್ಷಕ್ಕೆ ಶಕ್ತಿ ತುಂಬುವುದು ಅಸಾಧ್ಯ ಎಂಬುದು ವರಿಷ್ಠರ ಯೋಚನೆ.

ಹಾಗಂತ ಇಂತಹ ರಾಜ್ಯ ಪ್ರವಾಸದ ಅಗತ್ಯವಿಲ್ಲ ಎಂದು ಯಡಿಯೂರಪ್ಪ ಅವರಿಗೆ ಹೇಳಿದರೆ ಈಗಿನಿಂದಲೇ ಪಕ್ಷದಲ್ಲಿ ಮುಜುಗರದ ವಾತಾವರಣ ಸೃಷ್ಟಿಯಾಗು ತ್ತದೆ. ಇಂತಹ ಯೋಚನೆ ಬಂದಾಗ ಬಿಜೆಪಿ ವರಿಷ್ಠರು ಒಂದು ಸೂಚನೆ ನೀಡಿದರು.ಇತ್ತೀಚಿಗೆ ನಡೆದ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಈ ಸೂಚನೆಯ ಆಧಾರದ ಮೇಲೆ ಚರ್ಚೆ ನಡೆಯಿತು. ಅದರ ಪ್ರಕಾರ, ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಮಾಡಲು ಸಭೆ ಸಹಮತ ವ್ಯಕ್ತಪಡಿಸಿತು. ಆದರೆ ಅದೇ ಕಾಲಕ್ಕೆ ಅವರೊಬ್ಬರೇ ಏಕೆ ಪಕ್ಷ ಸಂಘಟನೆಗಾಗಿ ಶ್ರಮ ವಹಿಸಬೇಕು ಎಂಬ ಕಳಕಳಿ ತೋರಿಸಿ, ಯಡಿಯೂರಪ್ಪ ಅವರಂತೆಯೇ ಇನ್ನಿಬ್ಬರು ಮಾಜಿ ಮುಖ್ಯಮಂತ್ರಿಗಳಾದ
ಡಿ.ವಿ.ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಅವರ ನೇತೃತ್ವದ ತಂಡಗಳೂ ರಾಜ್ಯ ಪ್ರವಾಸ ಮಾಡಬೇಕು ಎಂಬ ತೀರ್ಮಾನ ಹೊರಬಂತು.

ಮೇಲ್ನೋಟಕ್ಕೆ ಇದು ಪಕ್ಷದ ಸಂಘಟನೆಯ ಕೆಲಸವನ್ನು ಯಡಿಯೂರಪ್ಪ ಅವರ ಜತೆ ಇನ್ನಿತರ ಹಿರಿಯ ನಾಯಕರಿಗೆ ಹಂಚಿಕೊಡಲಾಗಿದೆ. ಆದರೆ ವಸ್ತುಸ್ಥಿತಿ ಎಂದರೆ ಯಡಿಯೂರಪ್ಪ ಅವರ ರಾಜ್ಯ ಪ್ರವಾಸದ ವೇಗಕ್ಕೆ ಈ ಮೂಲಕ ಬ್ರೇಕ್ ಹಾಕಲಾಗಿದೆ. ಈಗ ಯಡಿಯೂರಪ್ಪ ಅವರಂತೆಯೇ ಸದಾನಂದಗೌಡ,
ಜಗದೀಶ್ ಶೆಟ್ಟರ್ ಅವರ ನೇತೃತ್ವದ ತಂಡಗಳೂ ರಾಜ್ಯ ಪ್ರವಾಸ ಮಾಡಿದರೆ ಯಡಿಯೂರಪ್ಪ ಅವರೊಬ್ಬರಿಗೆ ಸಿಗುವ ಆದ್ಯತೆ ಹಂಚಿಕೆಯಾಗುತ್ತದೆ. ಅಲ್ಲಿಗೆ ರಾಜ್ಯ ಪ್ರವಾಸ ನಡೆಸಿ ತಮ್ಮ ಇಮೇಜ್ ಹೆಚ್ಚಿಸಿಕೊಳ್ಳುವ ಯಡಿಯೂರಪ್ಪ ಅವರ ಪ್ರಯತ್ನದ ಶಕ್ತಿ ಕುಗ್ಗಲಿದೆ. ಹೀಗಾಗಿ ಕರ್ನಾಟಕದ ರಾಜಕಾರಣದಲ್ಲಿ ತಮ್ಮ ಇಮೇಜ್ ಹೆಚ್ಚಿಸಿಕೊಳ್ಳಲು ಯಡಿಯೂರಪ್ಪ ಬೇರೆ ದಾರಿ ಹುಡುಕಬೇಕಾದ ಅನಿವಾರ್ಯತೆ ಇದೆ.

ಇದೇ ರೀತಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರದ ದಿನಗಳಲ್ಲಿ ಯಡಿಯೂರಪ್ಪ ಅವರ ಬೆಂಬಲಿಗರ ರೋಡ್ ಷೋ ಗಳಿಗೆಲ್ಲ ವರಿಷ್ಠರು ಬ್ರೇಕ್ ಹಾಕಿದ್ದಾರೆ. ಪ್ರತಿದಿನ ಯಡಿಯೂರಪ್ಪ ಅವರ ಮನೆಗೆ ಶಾಸಕರು ಹೋಗುವುದು. ಅವರಿಂದ ಏನೋ ಸೂಚನೆ ಪಡೆದವರಂತೆ ಕಾರ್ಯ ನಿರ್ವಹಿಸುವುದು ನಡೆದರೆ ಜನರಿಗೆ ಏನು ಸಂದೇಶ ಹೋಗುತ್ತದೆ? ಅಧಿಕಾರದಿಂದ ಕೆಳಗಿಳಿದರೂ ಯಡಿಯೂರಪ್ಪ ಅವರೇ ಬಿಜೆಪಿಯ ಪವರ್ ಫುಲ್ ನಾಯಕ ಅಂತ ತಾನೇ? ಹೀಗಾಗಿ ಯಡಿಯೂರಪ್ಪ ಅವರ ಬೆಂಬಲಿಗರು ಈ ಸಂದರ್ಭದಲ್ಲಿ ಮಾಡಬಹುದಾದ, ಅಥವಾ ತಮ್ಮ ಬೆಂಬಲಿಗರ ಮೂಲಕ ಯಡಿಯೂರಪ್ಪ ಅವರು ಮಾಡ ಬಹುದಾದ ರೋಡ್ ಶೋ ಗಳಿಗೆ ಬ್ರೇಕ್ ಹಾಕಲಾಗಿದೆ.

ಹೀಗಾಗಿ ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಷೋಗಳು ನಡೆಯುತ್ತಿವೆಯೇ ಹೊರತು ಯಡಿಯೂರಪ್ಪ ಅವರ ರೋಡ್ ಶೋಗಳು ನಡೆಯು ತ್ತಿಲ್ಲ. ಇದೆಲ್ಲದರ ನಡುವೆ ಇತ್ತೀಚೆಗೆ ನಡೆದ ಕೆಲ ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿತಲ್ಲ? ಇದರ ಕ್ರೆಡಿಟ್ ಅನ್ನು ಈಗ ಬೊಮ್ಮಾಯಿ ಅವರಿಗೆ ಕೊಡಲಾಗಿದೆ. ಯಡಿಯೂರಪ್ಪ ಅಧಿಕಾರದಲ್ಲಿಲ್ಲದಿದ್ದರೂ ಇಂತಹ ಯಶಸ್ಸು ಸಾಽತವಾಗಿದೆ ಎಂದರೆ ಅದು ಬಸವರಾಜ ಬೊಮ್ಮಾಯಿಯವರ ನಾಯಕತ್ವಕ್ಕೆ ಸಂದ ಜಯ ಎಂಬಂತೆ ಬಣ್ಣಿಸಲಾಗುತ್ತಿದೆ.

ಇದು ಕೂಡಾ ಯಡಿಯೂರಪ್ಪ ಅವರ ವರ್ಚಸ್ಸಿಗೆ ಬ್ರೇಕ್ ಹಾಕುವ ಯತ್ನವೆಂಬುದು ನಿಸ್ಸಂಶಯ. ಅಂದ ಹಾಗೆ ಯಡಿಯೂರಪ್ಪ ಅವರನ್ನು ಅಧಿಕಾರದಿಂದ
ಕೆಳಗಿಳಿಸುವಾಗ ಅವರಿಗೆ ಯಾವುದಾದರೂ ರಾಜ್ಯದ ರಾಜ್ಯಪಾಲರಾಗುವಂತೆ ಬಿಜೆಪಿ ವರಿಷ್ಠರು ಆಹ್ವಾನ ನೀಡಿದ್ದರು. ಆದರೆ ರಾಜ್ಯ ರಾಜಕಾರಣದಲ್ಲಿ ಪುತ್ರ
ವಿಜಯೇಂದ್ರ ಅವರನ್ನು ನೆಲೆಗೊಳಿಸಬೇಕು ಎಂದರೆ ತಾವು ಸಕ್ರಿಯ ರಾಜಕಾರಣದ ಇರಬೇಕು. ಒಂದು ವೇಳೆ ರಾಜ್ಯಪಾಲ ಹುzಗೇರಿದರೆ ಅಂತಹ ಚಟು ವಟಿಕೆಗೆ ಸಂಪೂರ್ಣ ನಿಯಂತ್ರಣ ಬೀಳುತ್ತದೆ ಎಂಬುದು ಯಡಿಯೂರಪ್ಪ ಅವರ ಲೆಕ್ಕಾಚಾರ. ಆದರೆ ಈ ಲೆಕ್ಕಾಚಾರವನ್ನು ಎಲ್ಲಿಯ ತನಕ ಜೀವಂತವಾಗಿಟ್ಟು ಕೊಳ್ಳಬಹುದು? ತಾವು ಬಯಸಿದಂತೆ ನಡೆಯದೇ ಹೋದರೆ ಪಕ್ಷ ತೊರೆಯಲು ಅವರು ಬಯಸಬಹುದು.

ಆದರೆ ಸಮಸ್ಯೆ ಎಂದರೆ 2013 ರಲ್ಲಿ ಕೇಂದ್ರದ ಅಧಿಕಾರ ಸೂತ್ರ ಯುಪಿಎ ಸರಕಾರದ ಹಿಡಿತದಲ್ಲಿದ್ದಂತೆ, ಈಗ ಬಿಜೆಪಿಯ ಕೈಲಿದೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ತಿರುಗಿ ಬಿದ್ದು ಅಂತಹ ಸಾಹಸ ಮಾಡುವುದು ಯಡಿಯೂರಪ್ಪ ಅವರಿಗೆ ಈಗ ಸುಲಭದ ಕೆಲಸವಲ್ಲ. ಹೀಗಾಗಿ ಅವರು ಇವತ್ತಲ್ಲ, ನಾಳೆ ರಾಜ್ಯಪಾಲ ಹುದ್ದೆಯನ್ನು ಒಪ್ಪಿಕೊಂಡು ಸಕ್ರಿಯ ರಾಜಕಾರಣದಿಂದ ದೂರವಾಗಬೇಕು. ಇಲ್ಲವೇ ಮುಂದಿನ ಚುನಾವಣೆಯ ವೇಳೆಗೆ ತಟಸ್ಥವಾಗಬೇಕು.

ಈ ಎರಡರಲ್ಲಿ ಅವರು ಏನನ್ನೇ ಮಾಡಿದರೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ತೊಂದರೆಯಿಲ್ಲ. ಹೆಚ್ಚು ಎಂದರೆ ಜೆಡಿಎಸ್ ಜತೆ ಕೈಗೂಡಿಸಿ ಮೈತ್ರಿ ಸರಕಾರ ರಚಿಸಬಹುದು ಎಂಬುದು ವರಿಷ್ಠರ ಸದ್ಯದ ಲೆಕ್ಕಾಚಾರ. ಹೀಗಾಗಿ ಅವರು ಯಡಿಯೂರಪ್ಪ ಅವರನ್ನು ನಿರಂತರವಾಗಿ ನಿಯಂತ್ರಿಸುತ್ತಲೇ ಹೋಗುತ್ತಾರೆ.