Sunday, 15th December 2024

ಆಪರೇಷನ್ ಜಿಗಿತ, ಎಲ್ಲಿಂದೆಲ್ಲಿಗೋ ನೆಗೆತ !

ವಿದ್ಯಮಾನ

ಜಿ.ಪ್ರತಾಪ್ ಕೊಡಂಚ

ಭವ್ಯ ಭಾರತದಾದ್ಯಂತ ಚುನಾವಣೆಯ ಸುಳಿಗಾಳಿ ಬೀಸಲಾರಂಭಿಸಿದೆ. ತತ್ವ-ಸಿದ್ಧಾಂತಗಳಿಗೆ ಮನ ಸೋತು, ದೇಶರಕ್ಷಣೆಗಾಗಿಯೋ, ಪ್ರಜಾಪ್ರಭುತ್ವದ ಉಳಿವಿಗಾಗಿಯೋ ಪಕ್ಷೋಲ್ಲಂಘನ ಮಾಡುವ ಸಿದ್ಧಾಂತಿಗಳಿಗಿದು ಸಕಾಲ. ಕೆಲವರದು ಮರಳಿ ಮನೆಗೆ ಬಂದ, ಇನ್ನು ಕೆಲವರದು ಉಸಿರುಗಟ್ಟಿಸುವ ಕಡೆಯಿಂದ ಬದುಕಿ ಬಂದು ನಿರ್ಮಲರಾದ ಸಂಭ್ರಮ! ಇವರಾರಿಗೂ ತೃಣಮಾತ್ರದ ಸ್ವಾರ್ಥ-ಆಕಾಂಕ್ಷೆ ಇಲ್ಲವೇ ಇಲ್ಲ!

ಜನಹಿತ, ಅಭಿವೃದ್ಧಿ, ಸಮಾಜದ ಹಿತಕ್ಕಾಗಿ ತಮ್ಮ ಸರ್ವಸ್ವವನ್ನೇ ಮುಡಿಪಾಗಿಟ್ಟ ಸೇವಕರಿವರು. ಸಮಾಜ (ಸ್ವಮಜ?)ದ ಉನ್ನತಿ ಇವರ ಏಕೈಕ ಗುರಿ! ಈಗ ಆರಂಭವಾಗಿರುವುದು ಮೊದಲ ಹಂತದ ಕಪ್ಪೆ ಜಿಗಿತ. ಅಲ್ಲಲ್ಲಿ, ಆಗಾಗ ಇದು ಕಾಣಿಸುತ್ತಿರುತ್ತದೆ. ಚುನಾವಣೆಯ ಘೋಷಣೆಯಾಗಿ, ಟಿಕೆಟುಗಳ ಹಂಚಿಕೆಯಾದ ಮೇಲೆ ಆರಂಭವಾಗುವುದು ಎರಡನೇ ಹಂತದ ಉದ್ದ ಜಿಗಿತ! ತಮಗೊಪ್ಪುವ ತತ್ವ ಸಿದ್ಧಾಂತವಿದಲ್ಲ, ತಾವಿದ್ದ ಕಡೆ ಉಸಿರಾಡಲೇ ಆಗುತ್ತಿಲ್ಲವೆಂಬ ಸಾಕ್ಷಾತ್ಕಾರ ಅವರಿಗಾಗುವುದೇ ಆಗ! ‘ನಾನ್ಯಾರವ? ನಾನ್ಯಾರವ?’ ಎಂಬ ಪ್ರಶ್ನೆ ಅವರಲ್ಲಿ ಹುಟ್ಟುತ್ತಲೇ, ಆ ತನಕ ‘ಇವನ್ಯಾರವ? ಇವನ್ಯಾರವ?’ ಎನ್ನುತ್ತಿದ್ದ ವಿರೋಧಿ ಪಾಳಯದವರೂ, ‘ಇವ ನಮ್ಮವ, ಇವ ನಮ್ಮವ’ ಎಂದು ಸೆಳೆದಪ್ಪಿಬಿಡುತ್ತಾರೆ. ಗೆಲುವು, ಎದುರಿನವರ ಸೋಲು ಎರಡೇ ಇಲ್ಲಿ ಮುಖ್ಯವೆನಿಸುವ ಮೌಲ್ಯ. ಆ ಮಟ್ಟಿಗೆ ಇವರೆಲ್ಲರದ್ದೂ ಮೌಲ್ಯಾಧಾರಿತ ರಾಜಕಾರಣ!

ಮೂರನೆಯ ಹಂತದ್ದು, ಗೆದ್ದ ನಂತರದ ಎತ್ತರೋತ್ತರ ಜಿಗಿತ! ತಮ್ಮ ಪಾಳಯಕ್ಕೆ ಅಧಿಕಾರ ಸಿಕ್ಕಿಲ್ಲವೆಂಬುದನ್ನು ದೃಢಪಡಿಸಿಕೊಂಡು, ಗೆದ್ದ ಸ್ಥಾನ ವನ್ನು ತ್ಯಜಿಸಿ, ಅಲ್ಲೇ ಇನ್ನೊಂದು ಚಿಹ್ನೆಯಡಿ ಸ್ಪರ್ಧಿಸಿ, ಪುನಃ ಗೆದ್ದು ಅಧಿಕಾರ ಹಿಡಿಯುವ ನೆಗೆತ! ಭಾರತದ ರಾಜಕಾರಣದಲ್ಲಿ ಇದಕ್ಕೀಗ ಚಾಲ್ತಿ ಯಲ್ಲಿರುವ ನಾಮಧೇಯ ‘ಆಪರೇಷನ್ ಕಮಲ/ಹಸ್ತ/ಪೊರಕೆ/ಸೈಕಲ್ಲು/ಆನೆ/ತೆನೆ ಹೊತ್ತ ಮಹಿಳೆ, ಸೂರ್ಯ’ ಇತ್ಯಾದಿ, ಇತ್ಯಾದಿ! ಈ ಆಪರೇಷನ್‌ ಗಳಲ್ಲಿ ವೈದ್ಯ-ರೋಗಿಗಳಿಬ್ಬರೂ ಎಂದೆಂದಿಗೂ ಸುರಕ್ಷಿತ. ಇದರಲ್ಲಿ ಹರಿದುಹೋಗುವ ರೊಕ್ಕ, ರಕ್ತ ಮಾತ್ರವೇ ಮತದಾರರು ಮತ್ತು ತೆರಿಗೆ ದಾರರದ್ದು.

ಕರ್ನಾಟಕದಲ್ಲಿ, ಸರಿಯಾಗಿ ೯ ತಿಂಗಳು ೯ ದಿನಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಪ್ರಯಾಸವಿಲ್ಲದ ಪ್ರಸವದ ಮೂಲಕ ಮನೆಗೆ ಮರಳಿದ್ದಾರೆ. ಅತ್ತ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ತಾವೇ ಸೃಷ್ಟಿಸಿದ್ದ ಮೈತ್ರಿಕೂಟ ತೊರೆದು, ಮತ್ತೊಮ್ಮೆ ಕಮಲ ಪಾಳಯ ಸೇರಿ, ಪುನಃ ಮುಖ್ಯಮಂತ್ರಿಯಾಗಿ ರಾರಾಜಿಸುತ್ತಿದ್ದಾರೆ. ಅವರು ಯಾವ ಮೈತ್ರಿಕೂಟದ ಸದಸ್ಯರೆಂಬುದು ಅವರಿಗೂ, ಅವರು ಸೇರಿಕೊಂಡ ಮೈತ್ರಿಕೂಟಗಳಿಗೂ ಖಚಿತವಾಗಿದೆಯೇ ಎಂಬುದು ಸಂದೇಹ! ಹೀಗಿದ್ದೂ ೯ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಮರುಪ್ರತಿಷ್ಠಾಪನೆಗೊಂಡಿದ್ದಾರೆ.

ಪ್ರಸ್ತುತ, ಗೆಲುವು ಯಾರದೇ ಆದರೂ, ಮಾಜಿಯೇ ಆಗದ ಮುಖ್ಯಮಂತ್ರಿ ನಿತೀಶ್ ಕುಮಾರರು ಎನ್ನುವುದು ದಾಖಲೆ. ಪಕ್ಷಾತೀತವಾಗಿ, ಒಂದೆಡೆಯಿಂದ ಇನ್ನೊಂದೆಡೆಗೆ ಜಿಗಿದಾಗ, ತೊರೆದ ಪಕ್ಷಕ್ಕೆ ಯಾವುದೇ ಹಾನಿಮಾಡದೇ, ಸೇರಿದ ಪಕ್ಷಕ್ಕೆ ಆನೆಯ ಬಲ ತುಂಬಬಲ್ಲ ವಿಸ್ಮಯಕಾರಿ ಜೀವಿ ರಾಜಕಾರಣಿ! ಚಲನಶೀಲತೆ ಇವರ ಶಕ್ತಿಯ ಮೂಲಮಂತ್ರ! ತಮ್ಮ ಅರ್ಧದಷ್ಟಾದರೂ ಭಕ್ತಗಣದ ಸಹಿತ ದುಪ್ಪಟ್ಟು ವೇಗದಲ್ಲಿ ಜಿಗಿಯಬಲ್ಲವರಿಗೆ ಮಾತ್ರ ಇಲ್ಲಿ ಗಜಬಲ! ಆಕಾಂಕ್ಷೆ ನೆರವೇರಲಿಲ್ಲವೆಂದು ಇವರು ಜಿಗಿದರೂ, ಇನ್ನೊಂದೆಡೆ ಸೇರುವುದು ಯಾವುದೇ ಷರತ್ತು, ಆಸೆ- ಆಕಾಂಕ್ಷೆಗಳಿಲ್ಲದೆ! ಇವರದು ಅದೆಂಥ ವೈರಾಗ್ಯವೆನಿಸಿದರೂ, ತೊರೆದು ಬಂದೆಡೆ ಹೇಳುವುದು, ‘ಅವರಿಗೆ ನಾವು ಎಲ್ಲವನ್ನೂ ಕೊಟ್ಟು ಮರ್ಯಾದೆಯಿಂದ ನಡೆಸಿಕೊಂಡಿದ್ದೆವು; ಆದರೂ ನಮಗ ವರು ದ್ರೋಹ ಬಗೆದು ಮುನ್ನಡೆದರು’ ಎಂದು!

‘ಅಳುವ ಮಗುವಿಗೆ ಮಾತ್ರ ಕಾಲಕಾಲಕ್ಕೆ ಹಾಲು ಸಿಕ್ಕೀತು’ ಎಂಬ ಗಾದೆಮಾತನ್ನು ನೀವೆಲ್ಲ ಕೇಳಿರಲೇಬೇಕು. ಈ ಗಾದೆಯನ್ನೂ ಸುಳ್ಳಾಗಿಸಿ, ನಿರೀಕ್ಷೆಯೇ ಇಲ್ಲದವರಿಗೂ ನಿರೀಕ್ಷೆಗೂ ಮೀರಿದ ಸೌಕರ್ಯ ಕರುಣಿಸಬಲ್ಲ ಕಾಮಧೇನು ರಾಜಕಾರಣವೇ. ಜಿಗಿತ ಆರಂಭವಾಗುತ್ತಿದ್ದಂತೆ, ಜಿಗಿತಕಾರರನ್ನು ಅವರದೇ ಹಳೆಯ ಹೇಳಿಕೆಗಳನ್ನು, ವಿರೋಧಿ ಪಾಳಯಕ್ಕೆ ಅವರೆಸೆದ ಹೇಳಿಕೆಯ ಕಲ್ಲುಗಳನ್ನು ಅವರತ್ತ ತಿರುಗಿ ಎಸೆದು ಕಟ್ಟಿ ಹಾಕುವ, ಮೂದಲಿಸುವ ಕೆಲಸ ತಾರಕಕ್ಕೇರುತ್ತದೆ. ಕೆಲವೊಮ್ಮೆ ಇಂಥ ಎಸೆತಗಳು ಅಭಿಮಾನಿಗಳ ನಡುವೆ, ಮೂಲ ನಿವಾಸಿಗಳು ಮತ್ತು ವಲಸಿಗರ ನಡುವೆ ಸಂಘರ್ಷಕ್ಕೂ ನಾಂದಿ ಹಾಡುತ್ತವೆ. ಈಗಂತೂ ಸಾಮಾಜಿಕ ಮಾಧ್ಯಮಗಳ ಯುಗ!

ಜಾಲತಾಣಗಳಾದ್ಯಂತ ಮೂದಲಿಕೆಗಳು, ಅಸಭ್ಯ ಪದಪ್ರಯೋಗಗಳು, ಪರ-ವಿರೋಧದ ದಂಗೆಯೇ ನಡೆದು ಬಿಡುತ್ತದೆ. ಆದರೂ ಅದು ಇವರಾರಿಗೂ ಇರಿಸು-ಮುರಿಸು ತರಿಸುವುದಿಲ್ಲ. ಕಾಲ ಕಳೆದಂತೆ ವ್ಯಕ್ತಿಯ ವ್ಯಕ್ತಿತ್ವ, ಚಿಂತನೆಯಲ್ಲಿ ಬದಲಾವಣೆಯಾಗುವುದು ನಿಜ. ವ್ಯಕ್ತಿಯೊಬ್ಬನ ಬದಲಾದ ನಿಲುವಿಗೆ ಸರಿಹೊಂದುವ ಪಾಳಯ ಆಗೊಮ್ಮೆ ಈಗೊಮ್ಮೆ ಸೇರುವುದು ಸಹಜ.

ಜಿಗಿಯುವ ನಾಯಕರನ್ನು ತೆಗಳುವ ಸಮಾಜವು, ಜಿಗಿತಕ್ಕೆ ಪ್ರೇರೇಪಿಸುವ ವ್ಯವಸ್ಥೆ, ಅಂಥವರನ್ನು ಎತ್ತಿ ಕೊಂಡಾಡುವ ಪಕ್ಷಗಳೆಂಬ ಜಗಲಿಗಳನ್ನು ಮಾತ್ರ ‘ಪರಮ ಪವಿತ್ರ ವ್ಯವಸ್ಥೆ’ ಎಂಬಂತೆ ನೋಡುತ್ತಿರುವುದು ಕಳವಳಕಾರಿ. ಜಿಗಿದವರಷ್ಟೇ ಪಾಲು ಅಥವಾ ಅದಕ್ಕಿಂತ ಒಂದು ಪಾಲು ಹೆಚ್ಚಿನ ತಪ್ಪು,
ಜಿಗಿದವರನ್ನು, ಮತ್ತೆ ಮತ್ತೆ ಜಿಗಿಯುತ್ತಿರುವವರನ್ನೂ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಪಕ್ಷಗಳದ್ದೂ ಆಗಬೇಕಲ್ಲವೇ? ಜಿಗಿಯುತ್ತಿರುವವರನ್ನು ಬಿಗಿದಪ್ಪುವ ವ್ಯವಸ್ಥೆಯೇ ಇಲ್ಲದಿದ್ದರೆ ಪಕ್ಷಾಂತರಿಗಳೂ ಯೋಚಿಸಬೇಕಾದೀತು. ಅವಕಾಶ ವಿಲ್ಲದಿದ್ದರೆ ಅವರೇಕೆ ಅವಸರಿಸುತ್ತಾರೆ ಹೇಳಿ? ಮನೆಗೆ
ಬಂದು ಬಾಗಿಲು ತಟ್ಟುವವರಿಗಿಂತ ಹೆಚ್ಚಿನ ಜಾಗ್ರತೆಯು, ಬಾಗಿಲು ತೆರೆದು ಬರಮಾಡಿಕೊಳ್ಳುವವರಿಗೆ ಇರಬೇಕು.

ಬಾಗಿಲು ತೆರೆದಿಟ್ಟು, ಕಳ್ಳಕಾಕರು ಬರುವಾಗ ಕಣ್ಣುಮುಚ್ಚಿ ಕುಳಿತುಕೊಳ್ಳುವ ರಾಜಕೀಯ ಪಕ್ಷಗಳು ಮತ್ತು ಅವುಗಳ ಪ್ರಮುಖರದ್ದೂ ಒಂದು ರೀತಿಯ ಕಳ್ಳಾಟವೇ. ಇವರೆಲ್ಲರದ್ದು ಕಣ್ಣು ಮುಚ್ಚಿ ಹಾಲು ಕುಡಿದ ಬೆಕ್ಕಿನ ಕಥೆ. ತತ್ವ, ಸಿದ್ಧಾಂತ, ಶಿಸ್ತು, ಸಂಯಮದ ರಾಯಭಾರಿಯಂತೆ ವರ್ತಿಸುತ್ತಿರುವ
ರಾಜಕೀಯ ವ್ಯವಸ್ಥೆಯೇ ಈ ಜಿಗಿತಗಳನ್ನು ಪ್ರೋತ್ಸಾಹಿಸಿ, ಜಿಗಿದವರನ್ನು ಮಾತ್ರ ಭ್ರಷ್ಟರೆಂದು ಬಿಂಬಿಸುತ್ತಿರುವುದು ವಿಪರ್ಯಾಸ. ಸಮಾಜ, ವ್ಯವಸ್ಥೆ ಸುಧಾರಿಸಬೇಕಾದರೆ ರಾಜಕೀಯ ಪಕ್ಷಗಳೂ ತಮ್ಮ ನಿಲುವಿಗೆ ಬದ್ಧವಾಗಿರಬೇಕಾದ್ದು ಅವಶ್ಯ.

ಹಾಗಾದಾಗ ಪ್ರಜಾಪ್ರಭುತ್ವದಲ್ಲಿ ಮತದಾರ ತನಗೊಪ್ಪುವ ಸಿದ್ಧಾಂತ ಮತ್ತು ರಾಜಕೀಯ ಪಕ್ಷ ಯಾವುದು? ತಾನು ಯಾವ ಪಕ್ಷವನ್ನು ಬೆಂಬಲಿಸಬೇಕು? ಎಂಬ ನಿಲುವು ತೆಗೆದುಕೊಳ್ಳಲು ಸಾಧ್ಯ. ಪಕ್ಷವನ್ನು ಸೇರಿಕೊಂಡಾಗ ‘ಆತ ಪರಿಶುದ್ಧ’, ಹೊರ ನಡೆದಾಗ ‘ಭ್ರಷ್ಟ-ನಿಷ್ಪ್ರಯೋಜಕ’ ಎಂದು ವೈಯಕ್ತಿಕ ನೆಲೆಯಲ್ಲಿ ಕೆಸರು ಚೆಲ್ಲಿ,‘ತಪ್ಪು ವ್ಯಕ್ತಿ ಯದು; ವ್ಯವಸ್ಥೆ ಪರಿಶುದ್ಧ ಗಂಗೆ’ ಎಂದು ಬಿಂಬಿಸುವುದೇ ಪ್ರಜಾ ಪ್ರಭುತ್ವಕ್ಕೆ ನಿಜವಾಗಿ ಮಾರಕ.

ಖಾಸಗಿ ರಂಗದಲ್ಲಿ ಉದ್ಯೋಗಿಯೊಬ್ಬ ತಾನು ಕೆಲಸ ಮಾಡುತ್ತಿರುವ ಕಂಪನಿಯ ಪ್ರತಿಸ್ಪರ್ಧಿ ಕಂಪನಿ ಗಳನ್ನು ಸೇರಿ ಕೊಳ್ಳಬೇಕಾದರೆ, ಕೂಡಲೇ ಸೇರಿಕೊಳ್ಳ ಬಾರದೆಂಬ ನಿಯಮ ವಿಧಿಸಲಾಗುತ್ತದೆ. ಅಂಥದೇ ನಿಯಮಗಳನ್ನು ಸಾಂವಿಧಾನಿಕವಾಗಿ ಅಲ್ಲದಿದ್ದರೂ, ತಮ್ಮ ನಿಲುವುಗಳ ಬದ್ಧತೆಯ ದೃಷ್ಟಿ ಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಇಂದು ತೆಗೆದು ಕೊಳ್ಳಬೇಕಾಗಿದೆ. ರಾಜಕೀಯ ನೇತಾರ ಪಕ್ಷ-ಪಲ್ಲಟ ಮಾಡಿ ದರೆ, ಕನಿಷ್ಠ ೬ ತಿಂಗಳು ಅಥವಾ ಒಂದು ವರ್ಷದ ಮಟ್ಟಿ ಗಾದರೂ ಯಾವುದೇ ಸರಕಾರಿ ಅಥವಾ ಪಕ್ಷದ ಜವಾಬ್ದಾರಿ ಗಳಿಲ್ಲದೆ, ಸೇರಿಕೊಂಡ ಪಕ್ಷದ ಸಾಮಾನ್ಯ ಕಾರ್ಯಕರ್ತ ನಾಗಿ ದುಡಿಯಲೇಬೇಕೆಂಬ ನೈತಿಕ ನಿಯಮವನ್ನು ರೂಪಿಸಿ ಜಾರಿಗೊಳಿಸುವುದು ಪ್ರಜಾ ಪ್ರಭುತ್ವದ ಉಳಿವಿಗಾಗಿ ಅಗತ್ಯ ವೆನಿಸುತ್ತದೆ.

ಹಾಗಿಲ್ಲದಿದ್ದರೆ, ೨೦-೨೦ ಕ್ರಿಕೆಟ್ ತಂಡಗಳಂತೆ ಪ್ರತಿ ಚುನಾವಣೆಯ ಮುಂಚೆ ರಾಜಕೀಯ ಪಕ್ಷಗಳು ತಮ್ಮ ಧ್ಯೇಯವೇನು ಎಂಬುದನ್ನು ಪ್ರಕಟಿಸಿ, ತಂತಮ್ಮ ಅಭ್ಯರ್ಥಿ ಗಳನ್ನು ಪಾರದರ್ಶಕವಾಗಿ ಸಾರ್ವಜನಿಕ ಹರಾಜಿನಲ್ಲೇ ಖರೀ ದಿಸಿ ಚುನಾವಣೆಗಳನ್ನು ಎದುರಿಸಲಿ. ಯಾರು ಯಾರನ್ನು ಖರೀದಿಸು ತ್ತಿದ್ದಾರೆ? ಅವರ ಸಾಮರ್ಥ್ಯ, ಆಕಾಂಕ್ಷೆ ಏನಿರ ಬಹುದು? ಎಂಬುದರ ಸುಳಿವಾ ದರೂ ಆಗ ಮತದಾರರಿಗೆ ತಕ್ಕಮಟ್ಟಿಗೆ ಸಿಗಬಹುದು. ಇಲ್ಲದಿ ದ್ದರೆ ತಾವು ಆರಿಸುವಾಗ ಅಂದುಕೊಂಡಿದ್ದೇ ಒಂದು ತಾವೇ ಆರಿಸಿದವರು, ಆಯ್ಕೆ ಯಾಗದವರನ್ನೂ ಸೇರಿಸಿಕೊಂಡು ಮಾಡಿದ್ದು ಇನ್ನೊಂದು ಎನ್ನುವ ಸ್ಥಿತಿ ಯಾದರೂ ಬದಲಾದೀತು.

(ಲೇಖಕರು ಹವ್ಯಾಸಿ ಬರಹಗಾರರು)