ಶ್ವೇತಪತ್ರ
shwethabc@gmail.com
ಭಾವನೆಗಳಿಗೆ ಮಾತಿನ ರೂಪ ಕೊಡುವುದಾದರೆ ಹೇಗಿರುತ್ತದೆ? ಪ್ರೀತಿಯ ಭಾವನೆ ಸಂತೋಷದ ವರ್ತನೆಯಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಆತಂಕದ ಭಾವನೆ ಭಯದ ವರ್ತನೆಯಲ್ಲಿ ಕಾಣಿಸಿಕೊಳ್ಳುತ್ತದೆ. ಎಷ್ಟೋ ಬಾರಿ ನಮ್ಮ ಆಂತರಿಕ ಅನುಭವಗಳನ್ನು ಪದಗಳಲ್ಲಿ ವ್ಯಕ್ತ ಪಡಿಸಲು ತಡಕಾಡುತ್ತೇವೆ. ಪ್ರೀತಿಪಾತ್ರರನ್ನು ತಬ್ಬಿಕೊಳ್ಳಬೇಕೆಂಬ ಅಭಿಲಾಷೆ ಮನದಲ್ಲಿ ಎಷ್ಟೇ ಕಾಡಿದರೂ ಅದನ್ನು ಪದಗಳಲ್ಲಿ ಹೇಳಲು ಸೋಲುತ್ತೇವೆ.
ತಿಳಿ ನವಿರಾದ ಹಾಸ್ಯದಿಂದ ಹಿಡಿದು ಸಂತೋಷದವರೆಗೂ, ಅತಿ ಉದ್ರಿಕ್ತ ಮಾತುಗಳಿಂದ ಹಿಡಿದು ಅನುವಾದಿಸಲಾಗದಂಥ ಅನೇಕ ಭಾವನೆಗಳವರೆಗೆ ನಾವು ಜಗತ್ತಿನ ಜತೆಗೆ ಹೇಗೆ ಹೊಂದಿಕೊಳ್ಳುತ್ತಾ ಜಗತ್ತನ್ನು ಅನುಭವಿಸುತ್ತಾ, ಅನುಭಾವಿಸುತ್ತಾ ಅರ್ಥೈಸುತ್ತೇವೆ ಎಂಬುದಕ್ಕೆ ನಾವೆಲ್ಲ ಭಾವನೆಗಳ
ಪ್ರಪಂಚದಲ್ಲಿ ಒಂದು ಸುತ್ತು ಹಾಕಲೇಬೇಕು. ಇವತ್ತಿನ ಸಂದರ್ಭದಲ್ಲಿ ಖುಷಿ ಎಂದರೆ ಅದೊಂಥರ ಬಣ್ಣದೋಕುಳಿ. ಆದರೆ ನನ್ನ ಬಾಲ್ಯದಲ್ಲಿ ಖುಷಿ ಅಥವಾ ಸಂತೋಷ ಎಂದಿಗೂ ಇಷ್ಟೊಂದು ಸದ್ದುಮಾಡಿರಲಿಲ್ಲ ಹೋಳಿ ಆಡುವುದಿರಲಿ, ಹುಟ್ಟುಹಬ್ಬಗಳಲ್ಲಾಗಲಿ.
ಅಜ್ಜಿ ಮನೆಯಲ್ಲಿ ಬೆಳೆದವಳು ನಾನು. ಬೆಳಗಿನ ಜಾವ ೫ ಗಂಟೆಗೆ ಏಳುತ್ತಿದ್ದ ಅಜ್ಜಿಯು ಹಸು ಸಗಣಿ ಎತ್ತಿ, ಅಂಗಳ ಸಾರಿಸಿ, ರಂಗೋಲಿ ಬಿಡಿಸಿ, ರೊಟ್ಟಿ ಬಡಿದು ಸೋಮವಾರ ಶನಿವಾರ ವಾರ-ಒಪ್ಪತ್ತು ಮಾಡುತ್ತ ಕುಂಭಮ್ಮ, ಸಂಜೀವ ಮ್ಮರ ಜತೆ ಅಕ್ಕಿ ಕೇರುತ್ತಲೋ, ಹುಣಸೆಹಣ್ಣು ಕುಟ್ಟು ತ್ತಲೋ, ಪಾಚಾ ಬೂಬಮ್ಮನ ಜತೆ ಹರಟೆ ಹೊಡೆಯು ತ್ತಲೋ, ಇಲ್ಲವೇ ಹಿತ್ತಲಲ್ಲಿ ಹಪ್ಪಳ ಸಂಡಿಗೆ ಮಾಡುತ್ತಲೋ ತನ್ನ ಖುಷಿ ಕಾಣುತ್ತಿದ್ದಳು ಮತ್ತು ಅವಳ
ಸೆರಗು ಹಿಡಿದು ಓಡಾಡುವುದೇ ನನ್ನ ಖುಷಿಯಾಗಿತ್ತು.
ನಾನು ಬೆಳೆ ಯುತ್ತಾ ಹೋದಂತೆ ಖುಷಿಯೆಡೆಗಿನ ನನ್ನ ಅಜ್ಜಿಯ ನಡುಕ ನನಗೆ ಕಾಣಿಸಿತು. ಅಜ್ಜಿ ಖುಷಿಯನ್ನು ತನ್ನ ತೋಳು ಬಳಸಿ ಸ್ವಾಗತಿಸಿ ತನಗೆ ದೊರೆತ ಈ ಖುಷಿಯನ್ನು ಹರಿಸಿ ಅದರ ಮೇಲೆ ಬೇರೆಯವರ ಹೊಟ್ಟೆ ಕಿಚ್ಚಿನ ಕಣ್ಣು ಗಳು ಬಿದ್ದು ಅದರ ಹಿಂದೆಯೇ ದುಃಖ ಬಳುವಳಿಯಾಗಿ ಬಂದು ಬಿಡುವುದೇನೋ ಎಂದು ಬೆಚ್ಚಿ ಆದಷ್ಟು ಖುಷಿಗಳನ್ನು ಬಚ್ಚಿಡುತ್ತಿದ್ದಳು. ಅದೇ ಪಾಶ್ಚಿಮಾತ್ಯರ ಖುಷಿಯಲ್ಲಿ ಈ ರೀತಿಯ ದ್ವಂದ್ವಗಳನ್ನು ನಾವು ನೋಡುವುದು ಕಡಿಮೆ. ಖುಷಿ ಯನ್ನು ವ್ಯಕ್ತಪಡಿಸುವುದರಲ್ಲಿ ಅವರು ಹೆಚ್ಚು ಉತ್ಸಾಹಿಗಳು ಹಾಗೂ ನಿರಾತಂಕವಾದಿಗಳು ಹೌದೆನಿಸುತ್ತದೆ.
ಪಶ್ಚಿಮ ಯುರೋಪಿನ ಜನರಲ್ಲಿ ಅಲ್ಲಿನ ಅಕ್ಟೋಬರ್ ಫಸ್ಟ್ ಹಾಗೂ ಫುಟ್ಬಾಲ್ ಕ್ರೀಡೆಯ ಖುಷಿಗಳು ಸಮಚಿತ್ತ ವಾಗಿರುತ್ತಿದ್ದವು. ಇನ್ನು ಜಪಾನಿಯರ ಖುಷಿಯು, ಚೆರ್ರಿ ತೋಟ ದಲ್ಲಿ ಹಣ್ಣುಗಳು ಮಾಗಿ ಅದರಿಂದ ತಯಾರಿಸಿದ ಓನಿಗಿರಿ ಖಾದ್ಯಗಳ (ಜಪಾನಿನ ಸಾಂಪ್ರದಾಯಿಕ ಖಾದ್ಯಗಳ) ತಯಾರಿ ಯಲ್ಲಿ ಹಾಗೂ ಔತಣಗಳಲ್ಲಿ ಖುಷಿಯ ತುಣುಕುಗಳಾಗಿ ಇಣುಕುತ್ತವೆ. ಕೋವಿಡ್ ಸಾಂಕ್ರಾಮಿ ಕತೆಯ ನಂತರ ಇಡೀ ಪ್ರಪಂಚವೇ ಮಂಡಿಯೂರಿ ಬಿಟ್ಟಿದೆ.
ಬದುಕುಗಳು ನಮ್ಮವೇ ಆಗಲಿ ಪಾಶ್ಚಿಮಾತ್ಯರವೇ ಆಗಲಿ ಅದೇಕೋ ನಿಂತುಬಿಟ್ಟಿವೆ. ಈಗ ವಿಭಿನ್ನ ಸಾಂಸ್ಕೃತಿಕ ಭಾಗವಾಗಿ ಹೊರಹೊಮ್ಮಿರುವುದು ಬಣ್ಣದ ಸಣ್ಣ ಗಾಜಿನ ಅಥವಾ ಕಲ್ಲಿನ ಚೂರುಗಳನ್ನು ಜೋಡಿಸಿ ಮಾಡಿದ ಚಿತ್ರಕಲೆಯಂತಿರುವ ಭಾವಗಳು-ಭಾವನೆಗಳು. ಭಯ ಹುಟ್ಟಿಸುವ ಮಾಸ್ಕು ಗಳು, ಭಯಭೀತರಾಗಿರುವ ಆಸ್ಪತ್ರೆಯ ಸಿಬ್ಬಂದಿ, ಬ್ಯಾಗುಗಳ ತುಂಬಾ, ಬಾಲ್ಕನಿಗಳ ತುಂಬಾ ಅಡರುವ ಸ್ಯಾನಿಟೈಜರ್‌ಗಳು, ಇದರೊಟ್ಟಿಗೆ ಇಣುಕುವ ಆಘಾತಗಳು, ಕಳೆದುಕೊಂಡ ನೋವುಗಳು, ಅಶಿಸ್ತು, ಅನುಸರಣೆ, ಸಹಾನುಭೂತಿ ಇವೇ ಮುಂತಾದ ಭಾವನೆಗಳು.
ಹಾಗೆಂದು ಖುಷಿ ಎಲ್ಲೋ ಕಳೆದುಹೋಗಿಲ್ಲ, ಮತ್ತೆ ಮರಳುತ್ತದೆ ಎಂಬ ಭರವಸೆಯಲ್ಲೇ ಮುಂದೆ ಸಾಗಿದೆ ಜಗತ್ತು. ಮುಚ್ಚಿದ ಬಾಗಿಲುಗಳ ಹಿಂದೆಯೇ ನಾವೆಲ್ಲ ಒಬ್ಬರಿಗೊಬ್ಬರು ಆಸರೆಯಾಗಿದ್ದು ತೀರಾ ನೆನ್ನೆ ಮೊನ್ನೆಯಷ್ಟೇ ಏನೋ ಎಂಬಂತಿದೆ. ಮಾತ್ರವಲ್ಲ ಮನುಷ್ಯನ ಭಾವನೆಗಳು ಆತನ ಬದುಕಿನ ವ್ಯವಹಾರದ ಮುಖ್ಯವಾದ ಭಾಗ ವಾಗವೇ ಆಗಿದ್ದು ನಮ್ಮ ಅರಿವಿಗೆ ಬಂದದ್ದು ಇದೇ ಸಂದರ್ಭದಲ್ಲಿ.
ಸಂಶೋಧನೆಗಳು ನಮ್ಮೆಲ್ಲರ ಭಾವನಾ ಪ್ರಪಂಚದ ಮನಮುಟ್ಟುವ ವಿಚಾರಗಳನ್ನು ನಮ್ಮೆದುರಿಗೆ ತೆರೆದಿಡುತ್ತವೆ. ಕೆಲ ಸಂಶೋಧನೆಗಳ ಪ್ರಕಾರ ಭಾವನೆಗಳು ವಿಕಾಸದ ಹಾದಿಯುದ್ದಕ್ಕೂ ಮನುಷ್ಯನ ನರಜೀವಶಾಸ್ತ್ರದ ಮೇಲೆ ಗಾಢವಾದ ಪರಿಣಾಮವನ್ನು ಉಂಟು ಮಾಡಿದರೆ, ನಮ್ಮಯ ಭಾವನೆ ಗಳು ಸಾಂಸ್ಕೃತಿಕ ಹಾಗೂ ಸಾಮಾಜಿಕ ಒಡನಾಟದಲ್ಲಿ ರೂಪುಗೊಂಡಂಥವು ಎಂಬುದನ್ನು ಮತ್ತೊಂದಷ್ಟು ವಾದಗಳು ಸ್ಪಷ್ಟಪಡಿಸುತ್ತವೆ.
ಬೆಲ್ಜಿಯಮ್‌ನ ಲ್ಯೂವೆನ್ ವಿಶ್ವವಿದ್ಯಾಲಯದ ಸಾಂಸ್ಕೃತಿಕ ಮನೋವಿಜ್ಞಾನಿ ಬಟ್‌ಜ ಮೆನ್ ಕ್ವಿಟಾರ್ ಅವರ ಪ್ರಕಾರ ಭಾವನೆಗಳ ಬಗೆಗಿನ ಎಲ್ಲವೂ ಸಾಂಸ್ಕೃತಿಕವಾದವು. ಭಾವನೆಗಳ ಬಗೆಗಿನ ನಮ್ಮ ಯೋಚನೆ, ಅವುಗಳೊಂದಿಗಿನ ನಮ್ಮ ನಡವಳಿಕೆ, ಅವನ್ನು ನಾವು ನಿಯಂತ್ರಿಸುವ ಪರಿ ಎಲ್ಲವೂ. ಉದಾಹರಣೆಗೆ ಅವಮಾನ ಎಂಬ ಭಾವನೆ ಯನ್ನು ತೆಗೆದುಕೊಂಡರೆ ಅದು ನಮ್ಮ ಆತ್ಮವಿಶ್ವಾಸವನ್ನು, ಆತ್ಮಗೌರವವನ್ನೇ ನುಂಗಿ ಹಾಕಿಬಿಟ್ಟಿರುತ್ತದೆ. ನಮ್ಮದೇ ಬದುಕಿನ ಯಾವುದಾದರೂ ಒಂದು ಅವಮಾನವನ್ನು ಹಾಗೆ ಮರುಕಳಿಸಿಕೊಳ್ಳೋಣ ನಮ್ಮ ನೆನಪಿನಾಳದಿಂದ.
ಅವಮಾನ ಹೊರಬರುವಾಗಲೂ ಅದು ನಮ್ಮನ್ನು ಅಲುಗಾಡಿಸುತ್ತದೆ, ತಲೆತಗ್ಗಿಸುವಂತೆ ಮಾಡುತ್ತದೆ, ಆ ಯೋಚನೆಯಿಂದ ಓಡಿಹೋಗುವಂತೆ ಮಾಡುತ್ತದೆ. ಪ್ರಪಂಚದ ಅನೇಕ ಸಂಸ್ಕೃತಿಗಳಲ್ಲಿ ಅವಮಾನವೆಂಬುದು ಋಣಾತ್ಮಕವಾದ ಚಿತ್ರಣವನ್ನೇ ಹೊಂದಿದೆ. ಕೆಲವು ಭಾಗದಲ್ಲಿ ಮಕ್ಕಳನ್ನು ಉತ್ತೇಜಿಸಲು, ಪ್ರೇರೇಪಿಸಲು ಇನ್ನೊಬ್ಬರಿಗೆ ಹೋಲಿಸಿ ಅವಮಾನಿಸ ಲಾಗುತ್ತದೆ. ತಮ್ಮ ಮಕ್ಕಳು ವರ್ತನೆಯನ್ನು ಸರಿಮಾಡಿಕೊಳ್ಳಲಿ ಎಂಬ ಕಾರಣ ಕ್ಕಾಗಿ ಇತರರ ಎದುರಿಗೆ ಅವಮಾನಿಸುತ್ತಾರೆ ತಂದೆ- ತಾಯಂದಿರು (ಇದು ಬೇರೆಯದೇ ವ್ಯತಿರಿಕ್ತವಾದ ಪರಿಣಾಮವನ್ನು ಬೀರಿಬಿಡಬಹುದಾದ ಅಪಾಯವೇ ಹೆಚ್ಚು). ಅವಮಾನವೆಂಬ ಭಾವವನ್ನು ಸಂದರ್ಭಗಳು, ಸಂಸ್ಕೃತಿಗಳು ಅರ್ಥೈಸುವ ನೋಡುವ ರೀತಿಯಲ್ಲಿ ವ್ಯತ್ಯಾಸವಿರುತ್ತದೆ.
ಕೆಲವರಿಗೆ ಮುರಿದ ಸಂಬಂಧಗಳನ್ನು ರಿಪೇರಿ ಮಾಡುವ ಸಾಧ್ಯತೆ ಯಾದರೆ ಇನ್ನು ಹಲವರಿಗೆ ಅದು ಇರುವ ಸಂಬಂಧ ವನ್ನು ಕಡಿತಗೊಳಿಸುವಂತಾಗಿ ಬಿಡುತ್ತದೆ. ನಿಮ್ಮ ಆದರ್ಶಪ್ರಾಯವಾದ ಭಾವನೆಗಳಾವುವು? ಈ ಪ್ರಶ್ನೆಗೆ ಉತ್ತರ ನಮ್ಮ ಸಂಸ್ಕೃತಿಯ ಭಾಗವಾಗಿ ಅನುಮೋದಿಸಲಾದ ಭಾವನೆಗಳನ್ನು ನಾವು ಮೌಲ್ಯಯುತ ವಾಗಿ ಕಾಣತೊಡಗುತ್ತೇವೆ. ನಾವೆಲ್ಲರೂ ನಮ್ಮ ದೈನಂದಿನ ಬದುಕುಗಳಲ್ಲಿ ಒಳ್ಳೆಯದನ್ನೇ ಕಾಣಲು ತವಕಿಸುತ್ತೇವೆ ಅಲ್ಲವೇ? ಕೆಲವರಿಗೆ ಉಲ್ಲಾಸ ಉತ್ಸಾಹದ ಭಾವಗಳು ಮನಸ್ಸಿಗೆ ಹತ್ತಿರವಾದರೆ ಇನ್ನೂ ಹಲವರಿಗೆ ಆದರ್ಶಮಯ ಭಾವಗಳಾದ ನೆಮ್ಮದಿ ಹಾಗೂ ಶಾಂತಿ ಮನಸ್ಸಿಗೆ ಹೆಚ್ಚು ಆಪ್ತವೆನಿಸುತ್ತವೆ. ಇವು ನಮ್ಮ ಆಯ್ಕೆಯ ಮೇಲೆ ಪ್ರಭಾವ ಬೀರುವುದರಲ್ಲಿ ನಮ್ಮ ಸಾಂಸ್ಕೃತಿಕ ಅಂಶಗಳು ಮುಖ್ಯ ಪಾತ್ರ ವಹಿಸುತ್ತವೆ.
ನೀವು ಅಂದು ಕೊಳ್ಳುವ ಸಂವೇದನೆ ಗಳು ನಿಮ್ಮದೇ ಬದುಕಿನ ಅನೇಕ ಅಂಶಗಳ ಮೇಲೆ ಪ್ರಭಾವ ಬೀರುತ್ತವೆ. ಉದಾಹರಣೆಗೆ ಹೇಳುವುದಾದರೆ, ನೀವು ನಿಯಂತ್ರಿಸಬಯಸುವ ಭಾವನೆಗಳ ಮೇಲೆ ಮೊದಲು ನೀವು ಗಮನಹರಿಸಬೇಕು. ಈಗ ನೀವು ಮುಖಕ್ಕೆ ಹಚ್ಚುವ ಯಾವುದೋ ಕ್ರೀಮ್ ಅನ್ನು ಬಳಸುತ್ತಿ ದ್ದೀರಿ ಎಂದಿಟ್ಟುಕೊಳ್ಳೋಣ. ಆ ಕ್ರೀಮ್‌ನ ಬಗೆಗೆ ನಿಮ್ಮಗಮನವಿರಬೇಕು. ಏಕೆಂದರೆ ಆ ಕ್ರೀಮ್‌ನ ಬಗೆಗಿನ ನಿಮ್ಮ ದೃಷ್ಟಿಕೋನವು ನಿಮ್ಮ ಭಾವನೆಗಳ ಜತೆಯಲ್ಲೇ ನಿಮ್ಮ ಮುಖದ ಕಾಂತಿಯ ಮೇಲೂ ಪರಿಣಾಮವನ್ನು ಬೀರುವು ದರಲ್ಲಿ ಅನುಮಾನವೇ ಇಲ್ಲ.
‘ಎಮೋಷನ್’ ಎಂಬ ನಿಯತ ಕಾಲಿಕೆಯಲ್ಲಿ ಪ್ರಕಟವಾದ ಒಂದು ಸಂಶೋಧನಾ ವರದಿಯು ಅಚ್ಚರಿಯನ್ನು ಮೂಡಿಸುವ ಒಂದು ಅಂಶವನ್ನು ಪ್ರಕಟಿ ಸುತ್ತದೆ. ಅದರ ಅನುಸಾರ, ನಾವು ವೈದ್ಯರನ್ನು ಆಯ್ಕೆ ಮಾಡುವಾಗ ನಮ್ಮ ಮನಸ್ಸಿನೊಳಗಿನ ಆದರ್ಶ ಭಾವಗಳ ನಡುವೆ ಅವಿತಿರುವ ವೈದ್ಯರ ಮುಖಕ್ಕೆ ಹೊಂದಾಣಿಕೆಯಾಗು ವಂಥ ವೈದ್ಯರನ್ನೇ ನಾವು ಭೇಟಿ ಮಾಡಲು ಇಷ್ಟಪಡುತ್ತೇವಂತೆ (ಈಗ ನಿಮ್ಮ ಭಾವನೆಗಳ ನಡುವಿನ ಮತ್ತು ನಿಮ್ಮ
ವೈದ್ಯರ ಮುಖದ ಹೋಲಿಕೆ ಯನ್ನು ಮಾಡಲು ಶುರು ಮಾಡಿದ್ದರೆ ನೆನಪಿರಲಿ, ನಿಮಗೆ ಮುಖದ ಭಾವನೆಗಳನ್ನು ಅರ್ಥೈಸುವ ಕಲೆ ಮೊದಲು ಗೊತ್ತಿರ ಬೇಕು). ಭಾವನೆಗಳಿಗೆ ಮಾತಿನ ರೂಪ ಕೊಡುವುದಾದರೆ ಹೇಗಿ ರುತ್ತದೆ? ಪ್ರೀತಿಯ ಭಾವನೆ ಸಂತೋಷದ ವರ್ತನೆಯಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಆತಂಕದ ಭಾವನೆ ಭಯದ ವರ್ತನೆಯಲ್ಲಿ ಕಾಣಿಸಿಕೊಳ್ಳುತ್ತದೆ.
ಎಷ್ಟೋ ಬಾರಿ ನಮ್ಮ ಆಂತರಿಕ ಅನುಭವಗಳನ್ನು ಪದಗಳಲ್ಲಿ ವ್ಯಕ್ತಪಡಿಸಲು ತಡಕಾಡುತ್ತೇವೆ. ನಮ್ಮ ಪ್ರೀತಿಪಾತ್ರರನ್ನು ತಬ್ಬಿಕೊಳ್ಳ ಬೇಕೆಂಬ ಅಭಿಲಾಷೆ ಮನದಲ್ಲಿ ಎಷ್ಟೇ ಕಾಡಿದರೂ ಅದನ್ನು ಪದಗಳಲ್ಲಿ ಹೇಳಲು ಸೋಲುತ್ತೇವೆ. ತೆಲುಗು ಮಾತೃ ಭಾಷೆಯ, ಆದರೆ ಕನ್ನಡದ ನಂಬರ್ ಒನ್ ನಿರೂಪಕ ರಾಗಿರುವ ಒಬ್ಬರನ್ನು ಇತ್ತೀಚೆಗೆ ಮಾತನಾಡಿಸುತ್ತಾ ಕೇಳಿದೆ- ‘ನಿಮ್ಮ ಮನೆಯ ಭಾಷೆ ತೆಲುಗು, ಆದರೂ ಕನ್ನಡವನ್ನು ನಿಮ್ಮ ಭಾಷೆಯ
ಭಾವದಲ್ಲಿ ಅಷ್ಟು ಚಂದಗಾಣಿಸುತ್ತೀರಿ, ಇದು ಹೇಗೆ?’ ಎಂದು.
ಅದಕ್ಕೆ ಅವರು ಉತ್ತರಿಸುತ್ತಾ ‘೯೦ರ ದಶಕದಲ್ಲಿ ನಮ್ಮ ಕುಟುಂಬ ಬೆಂಗಳೂರಿಗೆ ಬಂದು ನೆಲೆಸಿತು. ಅಲ್ಲಿಂದ ನಾನು ಹೊಸ ದಿನಚರಿಯನ್ನು ರೂಢಿಸಿ ಕೊಳ್ಳುತ್ತಾ ಬಂದೆ. ಟಿವಿ ಇರಲಿ, ಪತ್ರಿಕೆ ಇರಲಿ, ಬೀದಿಯಲ್ಲಿ ಹಾಕಿರುತ್ತಿದ್ದ ಬ್ಯಾನರ್‌ಗಳೇ ಇರಲಿ ಕನ್ನಡವನ್ನು ನನ್ನ ಅವಲೋಕನದ ಮೂಲಕ ಹೀರಿ ಕೊಳ್ಳುತ್ತಾ ಬಂದೆ. ಇಲ್ಲಿ ಪ್ರತಿ ಕನ್ನಡ ಪದಗಳನ್ನು ನನ್ನವಾಗಿಸಿಕೊಳ್ಳುವಾಗ, ಅದರೊಳಗಿನ ಭಾವನೆಯು ನನ್ನದಾಗಿರುತ್ತಿತ್ತು. ಹಾಗಾಗಿ ಕನ್ನಡ ನನ್ನದಾಗುತ್ತಾ ಹೋಯಿತು…’. ಅವರು ಮಾತನಾಡುತ್ತಲೇ ಇದ್ದರು. ಆಗ ನನಗನಿಸಿದ್ದು- ಭಾವನೆಗಳು ಮಾನವ ಜನಾಂಗವನ್ನು ವ್ಯಾಖ್ಯಾನಿಸುವ ಲಕ್ಷಣವೇ ಆಗಿವೆ ಅಂತ. ಏನಂತೀರಿ..!